ಆರ್‍‌ಎಸ್‌ಎಸ್‌ ಪಥ ಸಂಚಲನ; 2.22 ಲಕ್ಷ ಮಂದಿ ಭಾಗಿ, ಗಲಾಟೆ, ದೊಂಬಿ, ಕೋಮು ಗಲಭೆ ನಡೆದಿಲ್ಲವೆಂದ ಸರ್ಕಾರ

ಬೆಂಗಳೂರು; ‘ 2025ರಲ್ಲಿ ರಾಜ್ಯದ ಕಲ್ಬುರ್ಗಿ ನಗರ ಸೇರಿದಂತೆ ಒಟ್ಟು 518 ಸ್ಥಳಗಳಲ್ಲಿ ನಡೆದಿರುವ ರಾಷ್ಟ್ರೀಯ ಸ್ವಯಂ ಸೇವಕದ ಪಥ ಸಂಚಲನದ ಸಂದರ್ಭದಲ್ಲಿ ಯಾವುದೇ ಗಲಾಟೆ, ದೊಂಬಿ, ಕೋಮು ಗಲಭೆಗಳು ನಡೆದಿರುವುದಿಲ್ಲ,’

 

ಹೀಗೆಂದು ರಾಜ್ಯ ಕಾಂಗ್ರೆಸ್‌ ಸರ್ಕಾರವು ಅಧಿಕೃತವಾಗಿ ಉತ್ತರ ನೀಡಿದೆ.

 

ಬೆಳಗಾವಿಯಲ್ಲಿ ನಡೆದಿರುವ ವಿಧಾನಸಭೆ ಅಧಿವೇಶನದಲ್ಲಿ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಅವರು ಕೇಳಿದ್ದ ಪ್ರಶ್ನೆಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಅಧಿಕೃತವಾಗಿ ಉತ್ತರ ನೀಡಿದ್ದಾರೆ.

 

ಕಲ್ಬುರ್ಗಿಯ ಚಿತ್ತಾಪುರದಲ್ಲಿ ಆರ್‍‌ಎಸ್‌ಎಸ್‌ ಪಥ ಸಂಚಲನ ನಡೆಸಲು ಅನುಮತಿ ನೀಡುವ ವಿಚಾರವು ವಿವಾದಕ್ಕೆ ದಾರಿಮಾಡಿಕೊಟ್ಟಿತ್ತು. ಕಡೆಗೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಆರ್‍‌ಎಸ್‌ಎಸ್‌ ಪಥ ಸಂಚಲನ ನಡೆಸಲು ಹೈಕೋರ್ಟ್‌ ಅನುಮತಿ ನೀಡಿತ್ತು. ಈ ಬೆಳವಣಿಗೆಗಳ ನಡುವೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವು ಒದಗಿಸಿರುವ ಆರ್‍‌ಎಸ್‌ಎಸ್‌ ಪಥ ಸಂಚಲನ ನಡೆದಿರುವ ಸ್ಥಳ ಮತ್ತು ಭಾಗವಹಿಸಿದ್ದ ಸ್ವಯಂ ಸೇವಕರ ಸಂಖ್ಯೆಯು ಮುನ್ನೆಲೆಗೆ ಬಂದಿದೆ.

 

ಬೆಂಗಳೂರು, ಕಲ್ಬುರ್ಗಿ, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ 518 ಸ್ಥಳಗಳಲ್ಲಿ ನಡೆದಿದ್ದ ಆರ್‍‌ಎಸ್‌ಎಸ್‌ ಪಥ ಸಂಚಲನದಲ್ಲಿ ಕನಿಷ್ಠ 2,22,082 ಸಂಖ್ಯೆಯಲ್ಲಿ ಸ್ವಯಂ ಸೇವಕರು ಭಾಗವಹಿಸಿದ್ದರು ಎಂದು ಸರ್ಕಾರವು ಉತ್ತರ ಒದಗಿಸಿದೆ.

 

2025ರಲ್ಲಿ ರಾಜ್ಯದ ಕಲ್ಬುರ್ಗಿ ನಗರ ಸೇರಿದಂತೆ ಒಟ್ಟು 518 ಸ್ಥಳಗಳಲ್ಲಿ ನಡೆದಿರುವ ರಾಷ್ಟ್ರೀಯ ಸ್ವಯಂ ಸೇವಕದ ಪಥ ಸಂಚಲನದ ಸಂದರ್ಭದಲ್ಲಿ ಯಾವುದೇ ಗಲಾಟೆ, ದೊಂಬಿ, ಕೋಮು ಗಲಭೆಗಳು ನಡೆದಿರುವುದಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಸದನಕ್ಕೆ ಮಾಹಿತಿ ಒದಗಿಸಿದ್ದಾರೆ.

 

 

ಪಥ ಸಂಚಲನ ನಡೆದ ಸ್ಥಳ-ಸ್ವಯಂ ಸೇವಕರ ಸಂಖ್ಯೆ

 

ಬೆಂಗಳೂರು ನಗರದಲ್ಲಿ 97 ಕಡೆಗಳಲ್ಲಿ ಆರ್‍‌ ಎಸ್‌ ಎಸ್‌ ಪಥ ಸಂಚಲನ ನಡೆದಿತ್ತು. ಇದರಲ್ಲಿ 27,338 ರಿಂದ 30,233 ಮಂದಿ ಸ್ವಯಂ ಸೇವಕರು ಭಾಗಿಯಾಗಿದ್ದರು. ಮೈಸೂರು ನಗರದಲ್ಲಿ 4 ಕಡಗೆಳಲ್ಲಿ 800, ಹುಬ್ಬಳ್ಳಿ ಧಾರವಾಡ ನಗರದಲ್ಲಿ 2 ಕಡೆಗಳ್ಲಲಿ 14,600ರಿಂದ 15,000, ಮಂಗಳುರು ನಗರದ 6 ಕಡೆಗಳಲ್ಲಿ 4,150ರಿಂದ 5,000, ಬೆಳಗಾವಿ ನಗರದ 3 ಕಡೆಗಳಲ್ಲಿ 5,000ದಿಂದ 5,400, ಕಲ್ಬುರ್ಗಿ ನಗರದಲ್ಲಿ 04 ಕಡೆಗಳಲ್ಲಿ 2,500 ರಿಂದ 3,160, ಬೆಂಗಳೂರು ಜಿಲ್ಲೆಯಲ್ಲಿ 13 ಕಡೆಗಳ್ಲಿ 3,213ರಿಂದ 3,313, ತುಮಕೂರಿನ 11 ಕಡೆಗಳಲ್ಲಿ 5,792ರಿಂದ 5,900 ಮಂದಿ ಆರ್‍‌ಎಸ್‌ಎಸ್‌ ಸ್ವಯಂ ಸೇವಕರು ಭಾಗವಹಿಸಿದ್ದರು.

 

ಕೋಲಾರದ 5 ಕಡೆಗಳಲ್ಲಿ 6,730, ಕೆಜಿಎಫ್‌ನಲ್ಲಿ 02 ಕಡೆಗಳಲ್ಲಿ 430, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 9 ಕಡೆಗಳಲ್ಲಿ 2,480ರಿಂದ 3,050, ಚಿಕ್ಕಬಳ್ಳಾಪುರದ 5 ಕಡೆಗಳಲ್ಲಿ 1,370, ಮೈಸೂರು ಜಿಲ್ಲೆಯಲ್ಲಿ 4 ಕಡೆಗಳಲ್ಲಿ 1,080, ಚಾಮರಾಜನಗರ ಜಿಲ್ಲೆಯಲ್ಲಿ 3 ಕಡೆಗಳಲ್ಲಿ 720ರಿಂದ 800, ಹಾಸನ ಜಿಲ್ಲೆಯಲ್ಲಿ 8 ಕಡೆಗಳಲ್ಲಿ 2,900ರಿಂದ 3,550, ಕೊಡಗು ಜಿಲ್ಲೆಯಲ್ಲಿ 2 ಕಡೆಗಳಲ್ಲಿ 1,650ರಿಂದ 1,700, ಮಂಡ್ಯ ಜಿಲ್ಲೆಯಲ್ಲಿ 8 ಕಡೆಗಳಲ್ಲಿ 1,860ರಿಂದ 2,160, ದಾವಣಗೆರೆ ಜಿಲ್ಲೆಯಲ್ಲಿ 07 ಕಡೆಗಳಲ್ಲಿ 4,080ರಿಂದ 4,460,

 

 

ಶಿವಮೊಗ್ಗ ಜಿಲ್ಲೆಯಲ್ಲಿ 19 ಕಡೆಗಳಲ್ಲಿ 13,043ರಿಂದ 14,283, ಚಿತ್ರದುರ್ಗ ಜಿಲ್ಲೆಯಲ್ಲಿ 11 ಕಡೆಗಳಲ್ಲಿ 3,435ರಿಂದ 3,910, ಹಾವೇರಿ ಜಿಲ್ಲೆಯಲ್ಲಿ 5 ಕಡೆಗಳಲ್ಲಿ 2,650, ಡಿ ಕೆ ಮಂಗಳೂರು ಜಿಲ್ಲೆಯಲ್ಲಿ 10 ಕಡೆಗಳಲ್ಲಿ 8,410, ಯು ಕೆ ಕಾರವಾರ ಜಿಲ್ಲೆಯಲ್ಲಿ 45 ಕಡೆಗಳಲ್ಲಿ 12,815ರಿಂದ 13,615, ಉಡುಪಿ ಜಿಲ್ಲೆಯಲ್ಲಿ 10 ಕಡೆಗಳಲ್ಲಿ 3,625, ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ಕಡೆಗಳಲ್ಲಿ 3,664,

 

ಬೆಳಗಾವಿ ಜಿಲ್ಲೆಯಲ್ಲಿ 17 ಕಡಗೆಳಲ್ಲಿ 11,680ರಿಂದ 12,540, ಗದಗ್‌ ಜಿಲ್ಲೆಯಲ್ಲಿ 7 ಕಡೆಗಳಲ್ಲಿ 3,220ರಿಂದ 3,660, ಧಾರವಾಡ ಜಿಲ್ಲೆಯಲ್ಲಿ 9 ಕಡೆಗಳಲ್ಲಿ 4,956, ವಿಜಯಪುರ ಜಿಲ್ಲೆಯಲ್ಲಿ 18 ಕಡೆಗಳಲ್ಲಿ 12,250, ಬಾಗಲಕೋಟೆ ಜಿಲ್ಲೆಯಲ್ಲಿ 33 ಕಡೆಗಳಲ್ಲಿ 20,132, ಕಲ್ಬುರ್ಗಿ ಜಿಲ್ಲೆಯ 51 ಕಡೆಗಳಲ್ಲಿ 4,340ರಿಂದ 7,235, ಬೀದರ್‍‌ ಜಿಲ್ಲೆಯ 41 ಕಡೆಗಳಲ್ಲಿ 7,840ರಿಂದ 9,355, ಯಾದಗಿರಿ ಜಿಲ್ಲೆಯಲ್ಲಿ 12 ಕಡೆಗಳಲ್ಲಿ 3,070ರಿಂದ 3,410,

 

 

ಬಳ್ಳಾರಿ ಜಿಲ್ಲೆಯಲ್ಲಿ 05 ಕಡೆಗಳಲ್ಲಿ 4,100ರಿಂದ 4,800, ರಾಯಚೂರು ಜಿಲ್ಲೆಯಲ್ಲಿ 10 ಕಡೆಗಳಲ್ಲಿ ,5,541ರಿಂದ 5,681, ಕೊಪ್ಪಳ ಜಿಲ್ಲೆಯಲ್ಲಿ 5 ಕಡೆಗಳಲ್ಲಿ 5,760ರಿಂದ 6,120, ವಿಜಯನಗರ ಜಿಲ್ಲೆಯಲ್ಲಿ 2,875ರಿಂದ 3,075 ಮಂದಿ ಆರ್‍‌ಎಸ್‌ಎಸ್‌ ಸ್ವಯಂ ಸೇವಕರು ಭಾಗವಹಿಸಿದ್ದರು ಎಂದು ಮಾಹಿತಿ ಒದಗಿಸಿದೆ.

 

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ನಡೆಸಲು ಅನುಮತಿ ಕೋರಿ ಆರ್‍‌ಎಸ್‌ಎಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಆರ್ ಎಸ್ಎಸ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ಜಿ. ಶುಕುರೆ ಕಮಲ್ ಅವರು, ನವೆಂಬರ್ 16 ರಂದು 300 ಜನರು ಮತ್ತು 50 ಸದಸ್ಯರ ಬ್ಯಾಂಡ್‌ನೊಂದಿಗೆ ರೂಟ್ ಮಾರ್ಚ್ ನಡೆಸಲು ಅನುಮತಿ ನೀಡಿದ್ದರು.

 

ನವೆಂಬರ್ 16 ರಂದು ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ನಿರ್ದಿಷ್ಟ ಷರತ್ತುಗಳಿಗೆ ಒಳಪಟ್ಟು ಚಿತ್ತಾಪುರದ ತಹಶೀಲ್ದಾರ್ ಈಗಾಗಲೇ ಅನುಮತಿ ನೀಡಿದ್ದಾರೆ ಎಂದು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರು ತಿಳಿಸಿದ್ದರು.

 

ನವೆಂಬರ್ 16ರ ಮಧ್ಯಾಹ್ನ 3.30ರಿಂದ ಸೂರ್ಯಾಸ್ತದವರೆಗೆ ಪಥ ಸಂಚಲನಕ್ಕೆ ಅವಕಾಶ ನೀಡಿತ್ತು. ಪಥಸಂಚಲನದಲ್ಲಿ 300 ಕಾರ್ಯಕರ್ತರು ಹಾಗೂ 50 ಬ್ಯಾಂಡ್ ವಾದಕರಿಗೆ ಅವಕಾಶ ನೀಡಲಾಗಿದ್ದು, ಒಟ್ಟು 350 ಜನ ಮಾತ್ರ ಭಾಗಿಯಾಗಬೇಕು ಎಂದು ತಿಳಿಸಿತ್ತು.

 

ಸಂಘದ ಶತಮಾನೋತ್ಸವ ಆಚರಣೆ ಮತ್ತು ಈ ಸಂದರ್ಭಕ್ಕೆ ಸಂಬಂಧಿಸಿದ ಸಾರ್ವಜನಿಕ ಭಾವನೆಗಳನ್ನು ಉಲ್ಲೇಖಿಸಿ, ಭಾಗವಹಿಸುವವರ ಮಿತಿಯನ್ನು 300 ರಿಂದ 600ಕ್ಕೆ ಮತ್ತು ಬ್ಯಾಂಡ್ ಸದಸ್ಯರ ಸಂಖ್ಯೆಯನ್ನು 25 ರಿಂದ 50 ಕ್ಕೆ ಹೆಚ್ಚಿಸಬೇಕೆಂದು ಅವರು ಕೋರಿದ್ದರು.

 

ಈಗಲೇ ಯಾಕೆ ಪಥ ಸಂಚಲನ ಮಾಡಬೇಕು, ಸಂವಿಧಾನ, ಕಾನೂನಿಗಿಂತ ನೀವು ದೊಡ್ಡವರೇ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಸ್ಮರಿಸಬಹುದು.

 

ಚಿತ್ತಾಪುರ ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಥಸಂಚಲನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಗವಾಧ್ವಜ, ಬ್ಯಾನರ್‌ಗಳು ಹಾಗೂ ಕಟೌಟ್‌ಗಳನ್ನು ಅಳವಡಿಸಿದ್ದರು. ಇವುಗಳನ್ನು  ಅಧಿಕಾರಿಗಳು ತಡರಾತ್ರಿ ತೆರವುಗೊಳಿಸಿದ್ದರು. ಹೀಗಾಗಿ ಈ ಪಟ್ಟಣದಲ್ಲಿ  ಉದ್ವಿಗ್ನತೆ ಸೃಷ್ಟಿಸಿತ್ತು.

 

ಚಿತ್ತಾಪುರದಲ್ಲಿ ನಡೆದಿದ್ದ ಆರ್‍‌ಎಸ್‌ಎಸ್‌ ಪಥ ಸಂಚಲನದ ಚಿತ್ರ

 

ರಾಷ್ಟ್ರೀಯ ಸ್ವಯಂಸೇವಕ ಸಂಘ ನಿಷೇಧಿಸಿ, ಪ್ರಜಾಪ್ರಭುತ್ವ ಉಳಿಸಿ’ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ಜಿಲ್ಲಾ ಘಟಕದ ನೇತೃತ್ವದಲ್ಲಿ ಕಲಬುರಗಿ ನಗರದಲ್ಲಿ  ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತ್ತು.

 

ಜಗತ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ವರೆಗೆ ಸಾಗಿತು. ಜಿಲ್ಲಾಧಿಕಾರಿ ಕಚೇರಿ ಎದುರು ರಸ್ತೆ ತಡೆದು ಮಾನವ ಸರಪಳಿ ನಿರ್ಮಿಸಿದ್ದ  ಪ್ರತಿಭಟನಾಕಾರರು ‘ಆರ್‌ಎಸ್‌ಎಸ್ ಬಂದ್ ಮಾಡಿ-ಬ್ಯಾನ್ ಮಾಡಿ”, ‘ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ನಾವಿದ್ದೇವೆ” ಎಂಬ ಘೋಷಣೆಗಳನ್ನು ಕೂಗಿದ್ದರು.

 

‘ಜಗತ್ತಿನ ಅತ್ಯಂತ ಅಪಾಯಕಾರಿ ವೈರಸ್ ರಾಷ್ಟ್ರೀಯ ಸ್ವಯಂಸೇವಕ ಸಂಘ’ ಎಂಬ ಬ್ಯಾನರ್‌ನ್ನು ದಹಿಸುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.  ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದ್ದನ್ನು ಸ್ಮರಿಬಹುದು.

Your generous support will help us remain independent and work without fear.

Latest News

Related Posts