ಬೆಂಗಳೂರು; ಕೊರೊನಾ ವೈರಾಣು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ 8 ವಾರಗಳಿಗಿಂತಲೂ ಜಾರಿಯಲ್ಲಿದ್ದ ಲಾಕ್‌ಡೌನ್‌ನಿಂದಾಗಿ ಆದಾಯ ತೀವ್ರತರದಲ್ಲಿ ಕುಸಿತಕ್ಕೊಳಗಾಗಿದೆ. ಇದೇ ಅವಧಿಯಲ್ಲಿ ನಿರುದ್ಯೋಗವೂ 3 ಪಟ್ಟು ಹೆಚ್ಚಾಗಿದೆ. ಲಾಕ್‌ಡೌನ್‌ನಿಂದಾಗಿ ನಿರುದ್ಯೋಗ ದರ ಶೇ.23ರಷ್ಟಿದೆ. ಇದು ಕಳೆದ 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ ಎಂದು ಹೇಳಲಾಗಿದೆ.
ಆದಾಯ ಕುಸಿತ, ನಿರುದ್ಯೋಗ ಹೆಚ್ಚುತ್ತಿರುವ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯ ವಲಸಿಗರು ಹಳ್ಳಿಗಳು ಮತ್ತು ಪಟ್ಟಣಗಳಿಗೆ ತೆರಳಿದ್ದಾರೆ. ಹಳ್ಳಿಗಳಲ್ಲಿ ಪುನರಾರಂಭಗೊಂಡಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಡಿಯ ಕೂಲಿ ಕೆಲಸಗಳಿಗೆ ಎಂ ಕಾಂ ಪದವೀಧರರೂ ಇಳಿದಿದ್ದಾರೆ. ಸಣ್ಣ, ಅತಿ ಸಣ್ಣ, ಮಧ್ಯಮ ಶ್ರೇಣಿಯ ಉದ್ಯಮಗಳಿಂದ ಹೊರಬಿದ್ದಿರುವ ಇವರಿಗೆಲ್ಲಾ ಉದ್ಯೋಗದ ಅವಶ್ಯಕತೆಗಳನ್ನು ಪೂರೈಸುವುದು ಅಷ್ಟು ಸುಲಭವಲ್ಲ.
ಭಾರತದ ಶೇ. 90 ಕ್ಕಿಂತ ಹೆಚ್ಚು ಉದ್ಯೋಗಗಳು ಅನೌಪಚಾರಿಕ ವಲಯದಲ್ಲಿವೆ. 2008 ಮತ್ತು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೇ ಹೋದರೆ ಅನೌಪಚಾರಿಕ ವಲಯದ ಉದ್ಯೋಗಗಳ ಸದ್ಯದ ವಸ್ತು ಸ್ಥಿತಿ ಅರ್ಥವಾಗದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
2003-04ರಿಂದ 2008ರವರೆಗಿನ ಬೆಳವಣಿಗೆ ದರ ಶೇ.8 ರಿಂದ 9 ರವರೆಗಿತ್ತು. ಹೂಡಿಕೆಯ ಜಿಡಿಪಿಯು ಶೆ.38ರಷ್ಟಿತ್ತು. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಹಣದ ಹರಿವಿಗೆ ಸಾಕಷ್ಟು ಸ್ಥಳಾವಕಾಶವಿತ್ತು. 2008ರಲ್ಲಿ ಜಿಡಿಪಿಯ ಶೇ.4ರಷ್ಟು ಹಣಕಾಸು ಲಭ್ಯವಿದ್ದರಿಂದಾಗಿ ತೆರಿಗೆಗಳನ್ನು ಕಡಿತಗೊಳಿಸಲಾಗಿತ್ತಲ್ಲದೆ ವೆಚ್ಚವನ್ನೂ ಹೆಚ್ಚಿಸಲಾಗಿತ್ತು.
ಕೋವಿಡ್ 19ರಿಂದಾಗಿರುವ ಆರ್ಥಿಕ ಕುಸಿತವು 2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟಿಗಿಂತ ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. 2008 ರಲ್ಲಿ, ಆರ್ಥಿಕ ಪ್ಯಾಕೇಜ್ ಅನ್ನು ಒಟ್ಟುಗೂಡಿಸಲಾಗಿತ್ತು. ಅಲ್ಲದೆ ಕೆಲವೇ ವಾರಗಳಲ್ಲಿ ಜಾರಿಗೊಳಿಸಲಾಗಿತ್ತು. ಆದರೆ ಪ್ರಸ್ತುತ ಬಿಕ್ಕಟ್ಟು ಫೆಬ್ರುವರಿಯಲ್ಲಿ ಭುಗಿಲೆದ್ದಿದ್ದರೂ ಪ್ಯಾಕೇಜ್ ಘೋಷಣೆ ಆಗಿರಲಿಲ್ಲ.
2008ರವರೆಗೆ ಭಾರತದಲ್ಲಿ ಉದ್ಯೋಗಗಳು ಬೆಳೆಯುತ್ತಿದ್ದ ಕಾರಣ ಆದಾಯದಲ್ಲಿ ಎಲ್ಲಿಯೂ ಕುಸಿತ ಕಂಡು ಬಂದಿರಲಿಲ್ಲ. 2004-05 ರಿಂದ 2011-12 ರವರೆಗೆ ಪ್ರತಿವರ್ಷ 7.5 ಮಿಲಿಯನ್ ಹೊಸ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸಲಾಗಿತ್ತು. ಆದರೆ 2012 ಮತ್ತು 2018 ರ ನಡುವೆ 2.9 ದಶಲಕ್ಷಕ್ಕೆ ಇಳಿದಿತ್ತಲ್ಲದೆ ಮನೆಯ ಸರಾಸರಿ ಆದಾಯವು ಏರಿಕೆಯಾಗುವುದನ್ನು ನಿಲ್ಲಿಸಿತ್ತು.
2003 ರಿಂದ 2013 ರ ಅವಧಿಯಲ್ಲಿ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹೊರತಾಗಿಯೂ ಆರ್ಥಿಕತೆಯು ಶೇ. 8ರಷ್ಟು ಬೆಳೆದಿತ್ತು. 2008-09ರಲ್ಲಿ ಹಣಕಾಸಿನ ಪ್ಯಾಕೇಜ್‌ನಿಂದಾಗಿ ಬೆಳವಣಿಗೆಯ ದರ ಕೇವಲ ಎರಡು ತ್ರೈಮಾಸಿಕಗಳಲ್ಲಿ ಶೇ. 7ಕ್ಕೇರಿತ್ತು.
2008 ರ ಆರ್ಥಿಕ ಬಿಕ್ಕಟ್ಟಿನ ನಂತರ ಸರ್ಕಾರವು ವಿಶೇಷವಾಗಿ ಅಬಕಾರಿ ಮುಂತಾದ ಪರೋಕ್ಷ ತೆರಿಗೆಗಳೂ ಸೇರಿದಂತೆ ಸಾರ್ವಜನಿಕ ಖರ್ಚುಗಳನ್ನು ಹೆಚ್ಚಿಸಿತು ಮತ್ತು ತೆರಿಗೆಗಳನ್ನು ಕಡಿತಗೊಳಿಸಿತ್ತು. 2003-04 ರಿಂದ 2013-14ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯ ದರವು ವಾರ್ಷಿಕ ಸರಾಸರಿ ಶೇ.8 ರಷ್ಟಿತ್ತು. ಪ್ರಸ್ತುತ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದೆ. 2020-21ರಲ್ಲಿ ಜಿಡಿಪಿ ಬಹುಶಃ ಸಂಕುಚಿತಗೊಳ್ಳಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.
2013-14ರವರೆಗೆ ರಫ್ತಿನ ಪ್ರಮಾಣ ಸ್ಥಿರವಾಗಿ ಬೆಳೆದ ನಂತರ 5,315 ಬಿಲಿಯನ್ (23.9 ಲಕ್ಷ ಕೋಟಿ ರೂ.)ಗೆ ತಲುಪಿತ್ತು. ಇದಾದ ನಂತರ ಋಣಾತ್ಮಕ ಬೆಳವಣಿಗೆ ಕಂಡುಬಂದಿತ್ತು. 2018-19ರಲ್ಲಿ ರಫ್ತಿನ ಪ್ರಮಾಣ ಮತ್ತೆ ಏರಿಕೆಯಾಗಿತ್ತು. 2013-14ರಲ್ಲಿ ಜಿಡಿಪಿಗೆ ಶೇ. 25ರಷ್ಟು ಕೊಡುಗೆ ನೀಡಿದ್ದ ರಫ್ತು, 2018-19ರಲ್ಲಿ ಶೇ. 17ಕ್ಕೆ ಇಳಿಕೆಯಾಗಿತ್ತು.
2002-03 ಮತ್ತು 2007-08ರ ನಡುವೆ ಜಿಡಿಪಿಯ ಶೇ. 24 ರಿಂದ ಶೇ. 38ಕ್ಕೆ ಏರಿತ್ತು. 2013-14ರ ಅಂತ್ಯದ ವೇಳೆಗೆ ಶೇ. 31ರಷ್ಟಿದ್ದಿದ್ದು 2019-20ರಲ್ಲಿ ಶೇ. 28ಕ್ಕೆ ಇಳಿದಿತ್ತು. 2019-20ರ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಅಂದರೆ ಲಾಕ್‌ಡೌನ್‌ನಿಂದಾಗಿ ಬೆಳವಣಿಗೆಯ ದರವು ಶೇ. 4ರಷ್ಟು ಮಾತ್ರ ಇತ್ತು.
ಬಳಕೆಯ ವೆಚ್ಚವು ಶೇ. 60 ರಷ್ಟಿತ್ತಾದರೂ ಎನ್‌ಡಿಎ ಅವಧಿಯ 5 ವರ್ಷಗಳಲ್ಲಿ ಅದು ಕುಸಿದಿತ್ತು. ಗ್ರಾಹಕರ ಬೇಡಿಕೆಯನ್ನು ನಿರ್ಬಂಧಿಸಿದ್ದು ಮತ್ತು ಆದಾಯ ಹೆಚ್ಚಾಗದೇ ಇದ್ದದ್ದು ಇದಕ್ಕೆ ಮೂಲ ಕಾರಣ ಎನ್ನುತ್ತಾರೆ ಆರ್ಥಿಕ ತಜ್ಞರು. ಹೂಡಿಕೆ 2011-12ರಲ್ಲಿ ಶೇ. 24ರಷ್ಟಿದ್ದ ಹೂಡಿಕೆ ಎನ್‌ಡಿಎ ಕೊನೆಯ ವರ್ಷ ಅಂದರೆ 2018-19ರಲ್ಲಿ ಶೇ. 17ಕ್ಕೆ ಇಳಿದಿತ್ತು.
ಕಳೆದ ವರ್ಷದ ಆರಂಭದಿಂದಲೂ ಹಣಕಾಸಿನ ಬಿಕ್ಕಟ್ಟಿದೆ. ಜಿಡಿಪಿಯ ಶೇ. 3.4ರಲ್ಲಿ ಹಣಕಾಸಿನ ಕೊರತೆ ಇದೆ ಎಂದು ಸರ್ಕಾರ ಹೇಳಿಕೊಂಡಿದ್ದರೆ, ಜಿಡಿಪಿಯ ಶೇ. 5.8ರಷ್ಟು ಹಣಕಾಸಿನ ಕೊರತೆ ಇದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಮೊದಲೇ ಬಹಿರಂಗಪಡಿಸಿದ್ದರು. ಇನ್ನು, ಕಾರ್ಪೊರೇಟ್ ತೆರಿಗೆಗಳನ್ನು ಸಹ 2019 ರ ಮಧ್ಯದಲ್ಲಿ ಕಡಿತಗೊಳಿಸಲಾಗಿತ್ತು. ಚುನಾವಣಾ ಕಾರಣಗಳಿಗಾಗಿ, 5 ವರ್ಷಗಳಲ್ಲಿ ವೈಯಕ್ತಿಕ ಆದಾಯ ತೆರಿಗೆಯನ್ನು ಪ್ರತಿ ವರ್ಷ 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಪಾವತಿಸುವ ಮಿತಿಯನ್ನು ಸರ್ಕಾರ ಹೆಚ್ಚಿಸುತ್ತಲೇ ಇತ್ತು. ಆದ್ದರಿಂದ ವೈಯಕ್ತಿಕ ಆದಾಯ ತೆರಿಗೆ ಮೌಲ್ಯಮಾಪಕರ ಸಂಖ್ಯೆ 60 ರಿಂದ 15 ದಶಲಕ್ಷಕ್ಕೆ ಇಳಿಕೆಗೆ ಕಾರಣವಾಗಿತ್ತು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಜಿಡಿಪಿಯನ್ನು ನಿರ್ಧರಿಸಿರುವ ಎಲ್ಲಾ ವಲಯಗಳು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿದ್ದವು. ಆದ್ದರಿಂದ ಜಿಡಿಪಿ ಬೆಳವಣಿಗೆ 2014 ರ ನಂತರ ನಿಧಾನವಾಗಿತ್ತು. ಹೀಗಾಗಿ ಉದ್ಯೋಗ ಬೆಳವಣಿಗೆ ಕುಸಿಯಿತು ಮತ್ತು ನಿರುದ್ಯೋಗವು 2018 ರಲ್ಲಿ 45 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿತು ಎಂದು ವಿವರಿಸುತ್ತಾರೆ ಆರ್ಥಿಕ ತಜ್ಞರು.