ಬೆಂಗಳೂರು; ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್ ಸಂಸ್ಥೆ, ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ವಿಧಾನಪರಿಷತ್ ಸಚಿವಾಲಯ ಮುಕ್ತ ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ದುಪ್ಪಟ್ಟು ದರ ತೆತ್ತು ಕೆಎನ್ 95 ಮಾಸ್ಕ್‌ಗಳನ್ನು ಖರೀದಿ ಮಾಡಿದೆ ಎಂದು ತಿಳಿದುಬಂದಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಸಂಸ್ಥೆಯೊಂದರಿಂದಲೇ ಅಂದಾಜು 5 ಕೋಟಿ ರು.ನಷ್ಟವುಂಟಾಗಿದೆ.
ಕರ್ನಾಟಕ ವಿಧಾನಪರಿಷತ್ ಸಚಿವಾಲಯವೂ ಕೆ ಎನ್ 95 ಮಾಸ್ಕ್‌ಗಳನ್ನು ದುಪ್ಪಟ್ಟು ದರದಲ್ಲಿ ಮಂಗಳೂರಿನ ಅನಂತ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಿಂದ ಖರೀದಿ ಮಾಡಿರುವುದು ದಾಖಲೆಯಿಂದ ಗೊತ್ತಾಗಿದೆ.
ಎನ್-95 ಮಾಸ್ಕ್‌ಗಳಿಗೆ ಬದಲಾಗಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಡ್ರಗ್ ಅಂಡ್ ಲಾಜಿಸ್ಟಿಕ್ ಸಂಸ್ಥೆ ಅಧಿಕಾರಿಗಳು ಚೀನಾ ತಯಾರಿಸಿರುವ ಕೆಎನ್ 95 ಮಾಸ್ಕ್‌ಗಳನ್ನು ದುಪ್ಪಟ್ಟು ದರದಲ್ಲಿ ಖರೀದಿಸಿರುವುದರ ಹಿಂದೆ ಕಮಿಷನ್ ವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಮಾರುಕಟ್ಟೆಯಲ್ಲಿ ಹಾಲಿ 40-45 ರು. ಮತ್ತು ಸಗಟು ರೂಪದಲ್ಲಿ 20-25 ರು.ಗೆ ದೊರೆಯುತ್ತಿರುವ ಕೆಎನ್ 95 ಮಾಸ್ಕ್‌ನ್ನು ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಸಂಸ್ಥೆ 147 ರು. ದರದಲ್ಲಿ 4,00,000 ಯುನಿಟ್‌ಗಳಿಗೆ ಒಟ್ಟು 5.88 ಕೋಟಿ ರು. ಪಾವತಿಸಿದೆ. ವೈದ್ಯಕೀಯ ಶಿಕ್ಷಣ ಇಲಾಖೆ 280 ರು. ದರದಲ್ಲಿ 1,00,000 ಯುನಿಟ್‌ಗಳಿಗೆ ಒಟ್ಟು 2.80 ಕೋಟಿ ರು. ಪಾವತಿಸಿದೆ. ಎರಡೂ ಇಲಾಖೆಗಳು 5 ಲಕ್ಷ ಯುನಿಟ್‌ಗಳಿಗೆ ಒಟ್ಟು 7.00 ಕೋಟಿ ರು. ನೀಡಿದೆ ಎಂದು ಗೊತ್ತಾಗಿದೆ.
ಕರ್ನಾಟಕ ವಿಧಾನಪರಿಷತ್ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎ,ಬಿ, ಸಿ ಮತ್ತು ಡಿ ಗುಂಪಿನ ಅಧಿಕಾರಿ, ನೌಕರ ವರ್ಗದವರಿಗೆ ಮಂಗಳೂರಿನ ಅನಂತ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್‌ನಿಂದ ಮಾಸ್ಕ್ ಖರೀದಿಸಿದೆ. ಮಾಸ್ಕ್‌ವೊಂದಕ್ಕೆ ಅಂದಾಜು 200 ರು. ದರದಲ್ಲಿ ಒಟ್ಟು 500 ಮಾಸ್ಕ್‌ಗಳಿಗೆ 1,05,000 ರು.ಗಳನ್ನು ಪಾವತಿಸಲು 2020ರ ಮೇ 13ರಂದು ಆಡಳಿತಾತ್ಮಕ ಮಂಜೂರಾತಿ ನೀಡಿರುವುದು ದಾಖಲೆಯಿಂದ ಗೊತ್ತಾಗಿದೆ. ಇದಕ್ಕೆ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಅವರು ಅನುಮೋದಿಸಿದ್ದಾರೆ.
ಮಾರುಕಟ್ಟೆಯಲ್ಲಿ 40 ರು.ನಿಂದ 120 ರು.ವರೆಗೆ ಕೆಎನ್ 95 ಮಾಸ್ಕ್‌ಗಳು ದೊರೆಯುತ್ತವೆ. ಇದೇ ಮಾಸ್ಕ್‌ಗೆ ಇಂಡಿಯಾ ಮಾರ್ಟ್‌ನಲ್ಲಿ 100 ರು., ಟ್ರೇಡ್ ಇಂಡಿಯಾದಲ್ಲಿ 120 ರು. ದರವಿದೆ. ಸಗಟು ರೂಪದಲ್ಲಿ ಒಂದು ಕೆಎನ್ 95 ಮಾಸ್ಕ್‌ಗೆ 20-25 ರು. ದರದಲ್ಲಿ ಖರೀದಿಸಲು ಸಾಧ್ಯವಿತ್ತು.
ಕನಿಷ್ಠ 40 ರು. ದರದಲ್ಲಿ ಖರೀದಿಸಿದ್ದರೆ 1.60 ಕೋಟಿ ರು., 45 ರು. ದರದಲ್ಲಿ 1.80 ಕೋಟಿ ರು., ಗರಿಷ್ಠ 120 ರು ದರದಲ್ಲಿ ಖರೀದಿಸಿದ್ದರೆ 4.80 ಕೋಟಿ ರು. ಗಳಾಗುತ್ತಿತ್ತು. ಸಗಟು ಮಾರುಕಟ್ಟೆಯಲ್ಲಿ 25 ರು.ನಂತೆ ಖರೀದಿಸಿದ್ದರೆ 1 ಕೋಟಿ ರು. ಅಗುತ್ತಿತ್ತು. ಆದರೆ ಅಧಿಕಾರಿಗಳು ಇದಾವುದನ್ನೂ ಪರಿಗಣಿಸದೆಯೇ ದುಪ್ಪಟ್ಟು ದರದಲ್ಲಿ ಖರೀದಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಖರೀದಿ ಮಾಡಿರುವ ಮಾಸ್ಕ್‌ಗಳು ಸದ್ಯ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಮಿಮ್ಸ್)ಯಲ್ಲಿ ದಾಸ್ತಾನು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಾರುಕಟ್ಟೆಯಲ್ಲಿ ರಿಯಾಯಿತಿ ದರವಿದ್ದರೂ ಖರೀದಿಸದ ಡ್ರಗ್ ಅಂಡ್ ಲಾಜಿಸ್ಟಿಕ್ ಸಂಸ್ಥೆ, ವೈದ್ಯಕೀಯ ಶಿಕ್ಷಣ ಮತ್ತು ಕರ್ನಾಟಕ ವಿಧಾನಪರಿಷತ್ ಸಚಿವಾಲಯ ಅಧಿಕಾರಿಗಳು 147, 280 ಮತ್ತು 200 ರು.ದರದಲ್ಲಿ ಖರೀದಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಚೀನಾವು ದೇಣಿಗೆ ರೂಪದಲ್ಲಿ ಮಿಲಿಯನ್ ಪ್ರಮಾಣದಲ್ಲಿ ನೀಡಿದ್ದ ಕೆಎನ್ 95 ಮಾಸ್ಕ್‌ಗಳನ್ನು ಅಮೇರಿಕದ ಆಹಾರ ಮತ್ತು ಔಷಧ ಆಡಳಿತ ವಿಭಾಗ ನಿಷೇಧಿಸಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ಮೇ 13ರಂದು ವರದಿ ಮಾಡಿತ್ತು. ಹಾಗೆಯೇ ಕೆಎನ್ 95 ಮಾಸ್ಕ್‌ಗಳು ಪ್ರಯೋಗಾಲಯದಲ್ಲಿ ನಿಗದಿಪಡಿಸಿದ್ದ ಮಾನದಂಡಗಳ ಪ್ರಕಾರ ಇರಲಿಲ್ಲ. ಅಲ್ಲಿನ ದಂತ ವೈದ್ಯರು ಕೂಡ ಈ ಮಾಸ್ಕ್‌ಗಳನ್ನು ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದರು ಎಂಬುದು ನ್ಯೂಯಾರ್ಕ್ ಟೈಮ್ಸ್ ವರದಿಯಿಂದ ತಿಳಿದು ಬಂದಿದೆ.