ತ್ರೀ ಸ್ಟಾರ್‍‌ ಹೋಟೆಲ್‌ ನಿರ್ಮಾಣ; ನಿಯಮ ಉಲ್ಲಂಘಿಸಿ 83.97 ಕೋಟಿ ವೆಚ್ಚ, ಲೋಪ ಪತ್ತೆ ಹಚ್ಚಿದ ಸಿಎಜಿ

ಬೆಂಗಳೂರು; ವಿಶ್ವಪರಂಪರೆಯ ಹಂಪಿ, ವಿಜಯಪುರ, ಬದಾಮಿ ಬೇಲೂರು ಮತ್ತು ಇದಕ್ಕೆ ಹೊಂದಿಕೊಂಡಿರುವ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಸಕಲ ಸೌಕರ್ಯವುಳ್ಳ ತ್ರಿಸ್ಟಾರ್ ಹೋಟಲ್ ನಿರ್ಮಾಣ ಯೋಜನೆಯ ಡಿಪಿಆರ್‍ ತಯಾರಿಕೆಗೆ ಆಡಳಿತಾತ್ಮಕ ಅನುಮೋದನೆಯನ್ನೇ ಪಡೆದಿಲ್ಲ.

 

ಅಲ್ಲದೇ ಸ್ಥಳದಲ್ಲಿ ಕಾಮಗಾರಿ ಆರಂಭಿಸುವ ಮುನ್ನ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ, ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದಿಂದಲೂ ಎನ್‌ಒಸಿಯನ್ನೇ ಪಡೆದಿಲ್ಲ. ಅನುಮತಿ ದೊರಕದಿದ್ದರೂ ಸಹ ಕಾಮಗಾರಿ ಆರಂಭಿಸಿರುವ ಪರಿಣಾಮ, ಸರ್ಕಾರದ ಬೊಕ್ಕಸಕ್ಕೆ 83.97 ಕೋಟಿಯಷ್ಟು ನಷ್ಟ ಸಂಭವಿಸಿದೆ!

 

ಎಚ್‌ ಡಿ ಕುಮಾರಸ್ವಾಮಿ ನೇತೃತ್ವದಲ್ಲಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಘೋಷಣೆಯಾಗಿದ್ದ ಈ ಯೋಜನೆಗಳನ್ನು ನಂತರ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರವು ಅನುಷ್ಟಾನಗೊಳಿಸಿತ್ತು. ಈ ಯೋಜನೆ  ಅನುಷ್ಠಾನಲ್ಲಿನ ಹಲವು ಲೋಪಗಳನ್ನು ಪತ್ತೆ ಹಚ್ಚಿರುವ  ಪ್ರಧಾನ ಮಹಾಲೇಖಪಾಲರು ಮತ್ತು ಮಹಾಲೆಕ್ಕಪರಿಶೋಧಕರು ನಿಯಮಬಾಹಿರವಾಗಿ ಕೋಟ್ಯಂತರ ರುಪಾಯಿ ವೆಚ್ಚವಾಗಿರುವುದನ್ನು  ಬಹಿರಂಗಗೊಳಿಸಿದ್ದಾರೆ.

 

ವಿಶೇಷವೆಂದರೇ ಕಾಂಗ್ರೆಸ್‌ ಜೆಡಿಎಸ್‌ ಸಮ್ಮಿಶ್ರ ಸರ್ಕಾರ, ನಂತರ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರ್ಕಾರದಲ್ಲಿ ಹಲವು ಲೋಪಗಳು ನಡೆದಿವೆ. ಆದರೆ  ಹಾಲಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು  ಯೋಜನೆ ಕಾಮಗಾರಿಗಳಿಗೆ ನಿಯಮ ಮೀರಿ ವೆಚ್ಚ ಮಾಡುತ್ತಿದೆ.

 

ಈ ಮೂರೂ ಸ್ಥಳಗಳಲ್ಲಿ ತ್ರಿ ಸ್ಟಾರ್‍‌ ಹೋಟೆಲ್‌ಗಳನ್ನು ನಿರ್ಮಾಣಕ್ಕೆ 83.97 ಕೋಟಿ ರು. ವೆಚ್ಚಕ್ಕೆ ಪ್ರಧಾನ ಮಹಾಲೇಖಪಾಲರು ಮತ್ತು ಮಹಾಲೆಕ್ಕಪರಿಶೋಧಕರು ಆಕ್ಷೇಪ ಎತ್ತಿದ್ದಾರೆ. ಈ ಸಂಬಂಧ ಸ್ಪಷ್ಟೀಕರಣ ನೀಡಬೇಕು ಎಂದು ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ನಿರ್ದೇಶಕರಿಗೆ 2025ರ ನವೆಂಬರ್‍‌ 17ರಂದು ಪತ್ರ ಬರೆದಿದ್ದಾರೆ.

 

ಈ ಪತ್ರದಲ್ಲಿ ವ್ಯಕ್ತಪಡಿಸಿರುವ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು  ಸಚಿವ ಹೆಚ್‌ ಕೆ ಪಾಟೀಲ್ ಅವರ ಗಮನಕ್ಕೆ ತಂದಿಲ್ಲ. ಅಲ್ಲದೇ ಈ ವಿಚಾರದಲ್ಲಿ ಸಚಿವರನ್ನೂ ಕತ್ತಲಲ್ಲಿಟ್ಟಿದ್ದಾರೆ  ಎಂದು ತಿಳಿದು ಬಂದಿದೆ.

 

ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಿಎಜಿ ಆಕ್ಷೇಪಣೆಗಳ ವಿವರ

 

2018-19ರಲ್ಲಿ ಎಚ್‌ ಡಿ ಕುಮಾರಸ್ವಾಮಿ ನೇತೃತ್ವದಲ್ಲಿದ್ದ ಸಮ್ಮಿಶ್ರ ಸರ್ಕಾರವು  ಬದಾಮಿ, ವಿಜಯಪುರ ಮತ್ತು ಬೇಲೂರಿನಲ್ಲಿ 80 ಕೋಟಿ ರು ವೆಚ್ಚದಲ್ಲಿ ತ್ರಿಸ್ಟಾರ್‍‌ ಹೋಟೆಲ್‌ಗಳನ್ನು ನಿರ್ಮಾಣ ಮಾಡಲು ಬಜೆಟ್‌ನಲ್ಲಿ ಘೋಷಿಸಿತ್ತು. ಈ ಸಂಬಂಧ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿರ್ದೇಶಕರು ಒಟ್ಟಾರೆ 131 ಕೋಟಿ ರು ವೆಚ್ಚದ ಪ್ರಸ್ತಾವನೆಯನ್ನು 2018ರ ಆಗಸ್ಟ್‌ 30ರಂದು ಸಲ್ಲಿಸಿದ್ದರು.

 

 

 

ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಹಿಂದಿನ ಸಮ್ಮಿಶ್ರ ಸರ್ಕಾರವು 83.97 ಕೋಟಿ ರು ವೆಚ್ಚಕ್ಕೆ ಮಾತ್ರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಇದರ ಪ್ರಕಾರ ಹಾಸನ ಜಿಲ್ಲೆಯ ಬೇಲೂರಿನಲ್ಲಿ 75 ಕೊಠಡಿಗಳುಳ್ಳ ತ್ರಿ ಸ್ಟಾರ್‍‌ ಹೋಟೆಲ್‌ಗೆ 20.71ಕೋಟಿ ರು, ಬದಾಮಿಯಲ್ಲಿ 75 ಕೊಠಡಿಗಳುಳ್ಳ ತ್ರಿ ಸ್ಟಾರ್ ಹೋಟೆಲ್‌ಗೆ 18.32 ಕೋಟಿ ರು., ವಿಜಯಪುರದಲ್ಲಿಯೂ 75 ಕೊಠಡಿಗಳುಳ್ಳ ತ್ರಿ ಸ್ಟಾರ್‍‌ ಹೋಟೆಲ್‌ಗೆ 16.74 ಕೋಟಿ, ಹಂಪಿಯಲ್ಲಿಯೂ 75 ಕೊಠಡಿಗಳುಳ್ಳ ತ್ರಿ ಸ್ಟಾರ್ ಹೋಟೆಲ್‌ಗೆ 28.20 ಕೋಟಿ ರು ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿತ್ತು.

 

 

ಆದರೆ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು 2019ರ ಡಿಸೆಂಬರ್‍‌ 20ರಂದು ಪರಿಷ್ಕೃತ ಪ್ರಸ್ತಾವ ಸಲ್ಲಿಸಿತ್ತು. 83.97 ಕೋಟಿ ರು ವೆಚ್ಚವನ್ನು 79.98 ಕೋಟಿ ರು.ಗೆ ಪರಿಷ್ಕೃತಗೊಳಿಸಿತ್ತು. ಇದಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು. 26,66,22,665 ರು ಮೊತ್ತದ ಮೊದಲ ಕಂತನ್ನು ಬಿಡುಗಡೆ ಮಾಡಲು 2020ರ ಮಾರ್ಚ್‌ 6ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿತ್ತು. ಬಿಡುಗಡೆಯಾಗಿದ್ದ ಮೊದಲ ಕಂತಿನಲ್ಲಿಯೇ ವಿಸ್ತೃತ ಕಾರ್ಯ ಯೋಜನೆ ವರದಿ (ಡಿಪಿಆರ್)ತಯಾರಿಸಲು ಸ್ಪೇಸ್‌ ಏಸ್‌ ಕಂಪನಿಗೆ 49,88,468 ರು ಮತ್ತು ಇದರ ತಾಂತ್ರಿಕ ಪರಿಶೀಲನೆಗೆ ಕ್ರಿಡಿಲ್‌ಗೆ 48,31,180 ರು ಸೇರಿ ಒಟ್ಟಾರೆ 97.80 ಲಕ್ಷ ರು ವೆಚ್ಚ ಮಾಡಿತ್ತು.

 

ಒಟ್ಟಾರೆ 97. 80 ಲಕ್ಷ ರು ಗಳನ್ನು ವಿಸ್ತೃತ ಕಾರ್ಯ ಯೋಜನೆ ತಯಾರಿಸಲು ವೆಚ್ಚ ಮಾಡಿದ್ದ ಸರ್ಕಾರವು, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತು ದೊಡ್ಡ ಪ್ರಮಾಣದ ಮೂಲ ಸೌಕರ್ಯಗಳನ್ನು ಒದಗಿಸುವ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸೂಕ್ತ ತಾಂತ್ರಿಕ ಸಿಬ್ಬಂದಿ ಕೊರತೆ ಇದೆ ಎಂಬ ಕಾರಣವನ್ನು ಮುಂದೊಡ್ಡಿದ್ದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು, ಇದನ್ನು ರೈಟ್ಸ್‌ (Rail India Technical and Economic Services ) ಗೆ 2020ರ ನವೆಂಬರ್‍‌ 2ರಂದೇ ವಹಿಸಿತ್ತು.

 

 

ರೈಟ್ಸ್‌ ಸಂಸ್ಥೆಯು ಈ ಯೋಜನೆ ಅನುಷ್ಠಾನದ ಹೊಣೆ ಹೊರುತ್ತಿದ್ದಂತೆ ಈ ಯೋಜನೆಯ ಅಂದಾಜು ವೆಚ್ಚವು ಹೆಚ್ಚಾಯಿತು. 79.98 ಕೋಟಿ ರು.ಗಳಿಂದ 83.97 ಕೋಟಿ ರು ಗಳಿಗೆ ಹೆಚ್ಚಿಸಿತು. ಅಂದರೆ ಯೋಜನೆ ವೆಚ್ಚದಲ್ಲಿ ಒಟ್ಟು 4 ಕೋಟಿ ಹೆಚ್ಚಳಕ್ಕೆ ದಾರಿಮಾಡಿಕೊಟ್ಟಿತ್ತು. ಈ ಯೋಜನೆ ವೆಚ್ಚದ ಹೆಚ್ಚಳಕ್ಕೆ ಯಾವುದೇ ಸಮರ್ಥನೆಯೂ ದಾಖಲೆಗಳಲ್ಲಿ ಕಂಡು ಬಂದಿಲ್ಲ. ಮತ್ತು ಇಲ್ಲಿಯವರೆಗೆ ಇದಕ್ಕೆ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಯನ್ನೇ ಪಡೆದಿಲ್ಲ ಎಂದು ಪ್ರಧಾನ ಮಹಾಲೇಖಪಾಲರು ಮತ್ತು ಮಹಾಲೆಕ್ಕ ಪರಿಶೋಧಕರು ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಈ ಮಧ್ಯೆ ರೈಟ್ಸ್‌ ಸಂಸ್ಥೆಯೂ ಸಹ ಪ್ರತ್ಯೇಕವಾಗಿ ಡಿಪಿಆರ್‍‌ ಮತ್ತು ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿತ್ತು. ಅದನ್ನು ರೈಟ್ಸ್‌ನ ಆಂತರಿಕ ಪ್ರಾಧಿಕಾರದ ಪ್ರಧಾನ ವ್ಯವಸ್ಥಾಪಕರು ಅನುಮೋದಿಸಿದ್ದರು. ಆದರೆ ಈ ಯೋಜನೆಯನ್ನು ಲೋಕೋಪಯೋಗಿ ಇಲಾಖೆಯಿಂದ ತಾಂತ್ರಿಕ ಪರಿಶೀಲನೆಯನ್ನು ಮಾಡಿಸಬೇಕಿತ್ತು. ಅಲ್ಲದೇ ಇದನ್ನು ಕಾರ್ಯಗತಗೊಳೀಸಲು ಸಮರ್ಥ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆಯಬೇಕಿತ್ತು. ಈ ಸಂಬಂಧ 2018ರ ಸೆ. 14ರಂದೇ ಸರ್ಕಾರವು ಹೊರಡಿಸಿದ್ದ ಆದೇಶದಲ್ಲಿಯೇ ಷರತ್ತನ್ನು ವಿಧಿಸಿತ್ತು.

 

ಆದರೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು, ಇದನ್ನು ರೈಟ್ಸ್‌ ಸಂಸ್ಥೆಯ ಮೂಲಕ ಕಾರ್ಯಗತಗೊಳಿಸಿರುವುದು ಮತ್ತು ತಾಂತ್ರಿಕ ಪರಿಶೀಲನೆ ಮಾಡಿಸಿರುವುದು 2018ರ ಆದೇಶದಲ್ಲಿನ ಷರತ್ತುನ್ನು ಉಲ್ಲಂಘಿಸಿದೆ ಎಂದು ಸಿಎಜಿ ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಹಾಗೆಯೇ ಸ್ಪೇಸ್‌ ಏಸ್‌ ಅವರು ಹೆಚ್ಚುವರಿಯಾಗಿ ಸಿದ್ಧಪಡಿಸಿದ್ದ ಡಿಪಿಆರ್‍ ಮತ್ತು ಕ್ರಿಡಿಲ್‌ ಪರಿಶೀಲಿಸಿದ್ದ ಮೂಲ ಡಿಪಿಆರ್‍‌, ಅಂದಾಜುಗಳನ್ನು ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಬಳಸಿರಲಿಲ್ಲ. ಆದರೂ ಈ ಸಂಸ್ಥೆಗಳಿಗೆ 97.80 ಲಕ್ಷ ರುಗ.ಳನ್ನು ಪಾವತಿಸಿತ್ತು. ಈ ಪಾವತಿಯನ್ನು ಸಿಎಜಿಯು ಆಕ್ಷೇಪಿಸಿರುವುದು ಗೊತ್ತಾಗಿದೆ.

 

ರೈಟ್ಸ್‌ ಸಂಸ್ಥೆಗೆ ಮೊದಲ ಕಂತಿನ ರೂಪದಲ್ಲಿ 26.66 ಕೋಟಿ ರು.ಗಳನ್ನು ಪಾವತಿಸಲು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 2020ರ ಡಿಸೆಂಬರ್‍‌ 5ರಂದು ನಿರ್ದೇಶಿಸಿತ್ತು. ಆದರೆ ದಾಖಲೆಗಳ ಪ್ರಕಾರ 2021ರ ಫೆ.11ರಂದು 39,99,340 ರು., 2021ರ ಫೆ.24ರಂದು 8,00,00,000 ರು, 2023ರ ಮಾರ್ಚ್‌ 3ರಂದು 5,00,00,000, 2024ರ ಫೆ.9ರಂದು 3,46,00,000 ರು., 2024ರ ಜುಲೈ 1ರಂದು 8,82,03,677 ರು. ಸೇರಿ ಒಟ್ಟಾರೆ 25,68,03, 017 ಕೋಟಿ ರು ಗಳನ್ನು ಐದು ಕಂತುಗಳಲ್ಲಿ ಬಿಡುಗಡೆ ಮಾಡಿತ್ತು.

 

 

ಈ ಐದು ವರ್ಷಗಳ ಅವಧಿಯಲ್ಲಿ 25,68,03, 017 ಕೋಟಿ ರು.ಗಳನ್ನು ಬಿಡುಗಡೆ ಮಾಡುವಲ್ಲಿಯೂ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ವಿಳಂಬ ಮಾಡಿತ್ತು. ಆದರೆ ಈ ಹಣವನ್ನು ಮೂಲ ಉದ್ದೇಶಗಳಿಗೆ ಬಳಸಲಾಗಿದೆಯೇ ಅಥವಾ ಬೇರೆ ಉದ್ದೇಶಗಳಿಗಾಗಿ ಬಳಕೆ ಆಗಿದೆಯೇ , ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಬಳಕೆಯಾಗದ ನಿಧಿ ಮೇಲೆ ಗಳಿಸಿರುವ ಬಡ್ಡಿ ಇದ್ದರೇ ಅದನ್ನು ಲೆಕ್ಕ ಹಾಕಿ ಸರ್ಕಾರಿ ಖಾತೆಗೆ ಜಮೆ ಮಾಡಬೇಕಿತ್ತು.

 

ಇದರ ಬಗ್ಗೆಯೂ ಪ್ರಧಾನ ಮಹಾಲೇಖಪಾಲರು ಮತ್ತು ಪ್ರಧಾನ ಲೆಕ್ಕ ಪರಿಶೋಧಕರು ಹಲವು ಅವಲೋಕನಗಳನ್ನು ಮಾಡಿರುವುದು ಪತ್ರದಿಂದ ಗೊತ್ತಾಗಿದೆ.

 

ಬದಾಮಿಯಲ್ಲಿ ತ್ರಿ ಸ್ಟಾರ್ ಹೋಟೆಲ್‌ ನಿರ್ಮಾಣಕ್ಕೆ ಆರಂಭದಲ್ಲಿ 12 ಕೋಟಿ ರು ಮೊತ್ತದ ಅಂದಾಜು ವೆಚ್ಚ ಸಿದ್ದಪಡಿಸಿತ್ತು. ಇದನ್ನು ರೈಟ್ಸ್‌ ಸಂಸ್ಥೆಯು ತಾಂತ್ರಿಕವಾಗಿ ಪರಿಶೀಲಿಸಿತ್ತು. ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಆಡಳಿತಾತ್ಮಕ ಅನುಮೋದನೆಗಾಗಿ 2020ರ ನವೆಂಬರ್‍‌ 7ರಂದು ಕಳಿಸಿತ್ತು. ಆದರೆ ಈ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಯೇ ದೊರೆತಿರಲಿಲ್ಲ ಎಂಬುದನ್ನು ಸಿಎಜಿಯು ಗಮನಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

 

ಈ ಮಧ್ಯೆಯೇ ರೈಟ್ಸ್‌ ಸಂಸ್ಥೆಯು ಇ-ಟೆಂಡರ್ ಆಹ್ವಾನಿಸಿತ್ತು. ಇದರಲ್ಲಿ 13.19 ಕೋಟಿ ಅಂದಾಜು ವೆಚ್ಚವೆಂದು ಹೇಳಿತ್ತು. ಟೆಂಡರ್ ಷರತ್ತುಗಳ ಪ್ರಕಾರ ಕೆಲಸದ ಪ್ರಾರಂಭದ ದಿನಾಂಕವನ್ನು ಕೆಲಸವನ್ನು ಮುಂದುವರಿಸಲು ಸೂಚನೆ ನೀಡಿದ ದಿನಾಂಕ ಅಥವಾ ಸೈಟ್ ಹಸ್ತಾಂತರಿಸಿದ ದಿನಾಂಕ, ಇವುಗಳಲ್ಲಿ ಯಾವುದು ನಂತರವೋ ಅದು ಎಂದು ವ್ಯಾಖ್ಯಾನಿಸಿತ್ತು. 20 ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಷರತ್ತು ವಿಧಿಸಿತ್ತು.

 

 

ಟೆಂಡರ್‍‌ನಲ್ಲಿ ಬಿಡ್‌ ಮಾಡಿದ್ದ ಮಾನ್ವಿಯ ಕ್ಲಾಸ್‌ 1 ಗುತ್ತಿಗೆದಾರರಾದ ಎಂ ಈರಣ್ಣ ಅವರಿಗೆ 2021ರ ಏಪ್ರಿಲ್‌ 16ರಂದು Letter of Acceptence ನೀಡಲಾಗಿತ್ತು. ಈ ಮೂಲಕ 14,18,47,965 ರು ಗುತ್ತಿಗೆ ಮೌಲ್ಯ ನಿಗದಿಪಡಿಸಿತ್ತು. 2021ರ ಜೂನ್‌ 18ರಂದು ಗುತ್ತಿಗೆ ಒಪ್ಪಂದವನ್ನು ಕಾರ್ಯಗತಗೊಳಿಸಿತ್ತು. ಅಲ್ಲದೇ 2021ರ ನವೆಂಬರ್‍‌ 12ರಂದು ಈ ಕಾಮಗಾರಿ ಸ್ಥಳವನ್ನೂ ಹಸ್ತಾಂತರಿಸಿತ್ತು. ಇದರ ಪ್ರಕಾರ ಈ ಕಾಮಗಾರಿಯನ್ನು 20 ತಿಂಗಳಲ್ಲಿ ಅಂದರೇ 2023ರ ಜುಲೈ 11ಕ್ಕೆ ಪೂರ್ಣಗೊಳಿಸಬೇಕಿತ್ತು.

 

ದಾಖಲೆಗಳ ಪ್ರಕಾರ 2024ರ ಡಿಸೆಂಬರ್‍‌ ಅಂತ್ಯಕ್ಕೆ ಒಟ್ಟು 12.28 ಕೋಟಿ ರು ಬಿಡುಗಡೆಯಾಗಿತ್ತು. ಒಟ್ಟಾರೆ 18.32 ಕೋಟಿ ರು ಮೌಲ್ಯದ ಈ ಕಾಮಗಾರಿಯು ಭೌತಿಕವಾಗಿ ಶೇ. 65ರಷ್ಟು ಮಾತ್ರ ಪ್ರಗತಿ ಸಾಧಿಸಿತ್ತು. ಆದರೆ ಬಳಕೆ ಪ್ರಮಾಣ ಪತ್ರದಲ್ಲಿ ಶೇ. 100ರಷ್ಟು ಎಂದು ತೋರಿಸಲಾಗಿತ್ತು.

 

ಇದರ ಬಗ್ಗೆ ಲೆಕ್ಕ ಪರಿಶೋಧಕರು ನಡೆಸಿದ್ದ ಅವಲೋಕನದಿಂದಾಗಿ ಹಲವು ಲೋಪಗಳು ಕಂಡು ಬಂದಿದ್ದವು.

 

ಆಡಳಿತಾತ್ಮಕ ಅನುಮೋದನೆಯ ಕೊರತೆ

 

ಟೆಂಡರ್ ಪ್ರಕ್ರಿಯೆ ನಡೆಸಲು ಮತ್ತು ಕೆಲಸ ಪ್ರಾರಂಭಿಸಲು ಬೇಕಿದ್ದ ₹18.32 ಕೋಟಿಯ ಪರಿಷ್ಕೃತ ಅಂದಾಜನ್ನು ಲಭ್ಯವಿರುವ ದಾಖಲೆಗಳ ಪ್ರಕಾರ ಆಡಳಿತಾತ್ಮಕವಾಗಿ ಮಂಜೂರು ಮಾಡಿರಲಿಲ್ಲ.

 

ಅಸಮರ್ಪಕ ತಾಂತ್ರಿಕ ಪರಿಶೀಲನೆ

 

ಅಲ್ಲದೇ ತಾಂತ್ರಿಕ ಪರಿಶೀಲನೆಯೂ ಅಸಮರ್ಪಕವಾಗಿತ್ತು. ಈ ಅಂದಾಜನ್ನು ರೈಟ್ಸ್‌ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರು ಪರಿಶೀಲಿಸಿ ಅನುಮೋದಿಸಿದ್ದರು. ಸರ್ಕಾರದ ಆದೇಶದ ಪ್ರಕಾರ ಲೋಕೋಪಯೋಗಿ ಇಲಾಖೆಯಿಂದಲೇ ಕಡ್ಡಾಯವಾಗಿ ತಾಂತ್ರಿಕ ಪರಿಶೀಲನೆ ಮಾಡಿಸಬೇಕಿತ್ತು. ಆದರೆ ರೈಟ್ಸ್‌ ಸಂಸ್ಥೆಯ ಮೂಲಕ ತಾಂತ್ರಿಕ ಪರಿಶೀಲನೆ ನಡೆಸಿದ್ದು ಕಾರ್ಯವಿಧಾನದ ಉಲ್ಲಂಘನೆಯಾಗಿತ್ತು ಎಂದು ಸಿಎಜಿಯು ತನ್ನ ಅವಲೋಕನದಲ್ಲಿ ವಿವರಿಸಿದೆ.

 

 

 

ಕಟ್ಟಡ ಯೋಜನೆಗೆ ಪಡೆಯದ ಅನುಮೋದನೆ

 

ಈ ಕಟ್ಟಡ ನಿರ್ಮಾಣ ಪ್ರಾರಂಭಿಸುವ ಮೊದಲು ಸ್ಥಳೀಯ ಪ್ರಾಧಿಕಾರದಿಂದ ಕಡ್ಡಾಯವಾಗಿ ಮತ್ತು ಶಾಸನಬದ್ಧವಾಗಿ ಅನುಮೋದನೆ ಪಡೆಯಬೇಕಿತ್ತು. ಆದರೆ ಈ ಕಟ್ಟಡ ಯೋಜನೆಗೆ ಸ್ಥಳೀಯ ಪ್ರಾಧಿಕಾರದಿಂದ ಅನುಮೋದನೆ ಪಡೆದಿದೆಯೇ ಇಲ್ಲವೇ ಎಂಬ ಬಗ್ಗೆ ಲೆಕ್ಕ ಪರಿಶೋಧನೆಗೆ ಯಾವುದೇ ದಾಖಲೆಗಳು, ಪುರಾವೆಗಳನ್ನೇ ಒದಗಿಸಿರಲಿಲ್ಲ.

 

ಭೂ ಮಾಲೀಕತ್ವದ ದಾಖಲೆಗಳು ಲಭ್ಯವಿಲ್ಲ

 

ಪ್ರವಾಸೋದ್ಯಮ ಇಲಾಖೆಯು ನಿರ್ಮಾಣ ನಡೆಯುತ್ತಿರುವ ಸ್ಥಳಕ್ಕೆ ಸಂಬಂಧಿಸಿದ ಭೂ ದಾಖಲೆಗಳು ಅಥವಾ ಶೀರ್ಷಿಕೆ ದಾಖಲೆಗಳನ್ನೇ ಹೊಂದಿಲ್ಲ. ಇದು ಯೋಜನಾ ಭೂಮಿಯ ಕಾನೂನುಬದ್ಧತೆ ಮತ್ತು ಭದ್ರತೆಗೆ ಸಂಬಂಧಿಸಿದಂತೆ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದು ಸಿಎಜಿಯು ತನ್ನ ಅವಲೋಕನದಲ್ಲಿ ವಿವರಿಸಿದೆ.

 

ತಪ್ಪಾದ ಬಳಕೆ ಪ್ರಮಾಣಪತ್ರ

 

ಬಿಡುಗಡೆ ಮಾಡಿದ ₹12.28 ಕೋಟಿಯಲ್ಲಿ, ಡಿಸೆಂಬರ್ 2024 ರಂತೆ ಕೇವಲ ₹6.24 ಕೋಟಿ ನಿಜವಾದ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ವರದಿಯಾಗಿದೆ. ಆದರೂ ಪೂರ್ಣ ಮೊತ್ತಕ್ಕೆ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ. ಇದರಿಂದಾಗಿ ಹಣಕಾಸಿನ ಪ್ರಗತಿಯನ್ನೇ ತಪ್ಪಾಗಿ ನಿರೂಪಿಸಲಾಗಿದೆ ಮತ್ತು ಹಣಕಾಸಿನ ಯೋಗ್ಯತೆಯ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ. ಅಲ್ಲದೆ, ಹೆಚ್ಚಿನ ನಿಧಿಗಳ ಬಿಡುಗಡೆ ಮತ್ತು ಅವುಗಳ ಬಳಕೆಯ ವಿವರಗಳನ್ನು ಲೆಕ್ಕಪರಿಶೋಧನೆಗೆ ಒದಗಿಸಿಲ್ಲ ಎಂಬುದು ಲೆಕ್ಕ ಪರಿಶೋಧನೆ ವರದಿಯಿಂದ ಗೊತ್ತಾಗಿದೆ.

 

ಅನುಮೋದನೆ ಇಲ್ಲದೆ ವ್ಯಾಪ್ತಿಯಲ್ಲಿ ಬದಲಾವಣೆ

 

ಮೂಲತಃ ಅನುಮೋದಿಸಲಾದ ಯೋಜನೆಯ ಪ್ರಕಾರ 18.32 ಕೋಟಿ ರುವ ವೆಚ್ಚದಲ್ಲಿ , 4756 ಚದರ ಮೀಟರ್ ವಿಸ್ತೀರ್ಣದಲ್ಲಿ ಹೋಟೆಲ್ ನಿರ್ಮಾಣ ಆಗಬೇಕು. ಈ ಹೋಟೆಲ್‌ನಲ್ಲಿ 75 ಕೊಠಡಿಗಳು, G+3 ಮಹಡಿಗಳು ಇರಬೇಕು. ಆದರೆ ಜಂಟಿ ಭೌತಿಕ ತಪಾಸಣೆಯ ಸಮಯದಲ್ಲಿ, 4756 ಚದರ ಮೀಟರ್ ವಿಸ್ತೀರ್ಣದ್ಲಿ 60 ಕೊಠಡಿಗಳು, ನೆಲ ಮಹಡಿ G+3 ಮಹಡಿಗಳು ಇದ್ದವು.

 

ಇದಕ್ಕಾಗಿಯೇ ವೆಚ್ಚವನ್ನು 18.32 ಕೋಟಿಗೆ ಪರಿಷ್ಕರಿಸಲಾಗಿತ್ತು. ಅಂತಹ ಬದಲಾವಣೆಗಳಿಗೆ ಸೂಕ್ತ ಕಾರಣಗಳು ಕಡತಗಳಲ್ಲಿ ಲಭ್ಯವಿರಲಿಲ್ಲ. ಇದಲ್ಲದೆ, ಈ ಮಾರ್ಪಾಡುಗಳಿಗೆ ಸಮರ್ಥ ಪ್ರಾಧಿಕಾರದಿಂದ ಯಾವುದೇ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಯನ್ನೂ ಪಡೆದಿರಲಿಲ್ಲ.

 

ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದಿಂದ ಎನ್‌ಒಸಿಯನ್ನೇ ಪಡೆದಿಲ್ಲ

 

ನವದೆಹಲಿಯಲ್ಲಿರುವ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದಿಂದ ಒಟ್ಟು ಕಟ್ಟಡದ ಎತ್ತರವನ್ನು 10 ಮೀಟರ್‌ಗಳಿಗೆ ನಿರ್ಬಂಧಿಸುವ ಪರಿಷ್ಕೃತ ಕಟ್ಟಡ ಯೋಜನೆಯನ್ನು (4 ಸೆಟ್‌ಗಳು) ವಿನಂತಿಸಿತ್ತು, ಆದರೆ ಅದನ್ನು ಸಲ್ಲಿಸಲಾಗಿಲ್ಲ. ಅಂದರೇ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದಿಂದ ಎನ್‌ಒಸಿಯನ್ನೇ ಪಡೆದಿಲ್ಲ ಎಂದು ಸಿಎಜಿ ಅವಲೋಕನದಿಂದ ಗೊತ್ತಾಗಿದೆ.

 

ಪೂರ್ಣಗೊಳಿಸುವಿಕೆಯಲ್ಲಿ 30 ತಿಂಗಳ ವಿಳಂಬ

 

ಈ ಯೋಜನೆಯು 2023ರ ಜುಲೈ 11ರೊಳಗೇ ಪೂರ್ಣಗೊಳಿಸಬೇಕಿತ್ತು. ಆದರೂ ಡಿಸೆಂಬರ್ 2024 ರ ಹೊತ್ತಿಗೆ ಕೇವಲ ಶೇ. 65ರಷ್ಟು ಪ್ರಗತಿ ಸಾಧಿಸಲಾಗಿದೆ. ಆದ್ದರಿಂದ ಯೋಜನೆಯು ಮೂಲ ಮೈಲಿಗಲ್ಲು ಆಧಾರಿತ ವೇಳಾಪಟ್ಟಿಯಿಂದ 30 ತಿಂಗಳಿಗಿಂತ ಹೆಚ್ಚು ವಿಳಂಬವಾಗಿತ್ತು. ಇದರಿಂದಾಗಿ 39.60 ಲಕ್ಷ ರು ನಿಷ್ಪಲ ವೆಚ್ಚವಾಗಿತ್ತು.

 

 

ಜಂಟಿ ಭೌತಿಕ ತಪಾಸಣೆಯಲ್ಲಿ ಕಂಡುಬಂದಿದ್ದೇನು?

 

ಹೋಟೆಲ್ ನಿರ್ಮಾಣ ಸ್ಥಳದ ಜಂಟಿ ಭೌತಿಕ ತಪಾಸಣೆಯ ಸಮಯದಲ್ಲಿ, ಕೆಲಸ ಪ್ರಾರಂಭವಾದ ನಂತರ ಗಣನೀಯ ಸಮಯ ಕಳೆದಿರುವುದು ಗೊತ್ತಾಗಿದೆ. ಒಟ್ಟಾರೆ ಭೌತಿಕ ಪ್ರಗತಿಯು ಕಡಿಮೆಯಾಗಿದೆ ಎಂದು ಸಿಎಜಿಯು ಗಮನಿಸಿತ್ತು. ಸಂಪೂರ್ಣ ಕಟ್ಟಡಕ್ಕೆ ವಿದ್ಯುತ್ ಮೀಟರ್ ಸಂಪರ್ಕ ಮತ್ತು ಆಂತರಿಕ ವಿದ್ಯುತ್ ವೈರಿಂಗ್ ಕೆಲಸ ಪೂರ್ಣಗೊಂಡಿರಲಿಲ್ಲ.

 

 

ಕಟ್ಟಡದ ಎರಡು ಬದಿಗಳ ಬಾಹ್ಯ ಪ್ಲಾಸ್ಟರಿಂಗ್, ಎರಡು ಗೊತ್ತುಪಡಿಸಿದ ಸ್ಥಳಗಳಲ್ಲಿ ನಾಲ್ಕು ಲಿಫ್ಟ್‌ಗಳ ಸ್ಥಾಪನೆ, ಫಿನಿಶಿಂಗ್ ಮತ್ತು ರೇಲಿಂಗ್ ಸ್ಥಾಪನೆ ಸೇರಿದಂತೆ ಮೆಟ್ಟಿಲುಗಳ ಪೂರ್ಣಗೊಳಿಸುವಿಕೆ, ಸಂಪೂರ್ಣ ಕಟ್ಟಡಕ್ಕೆ ಆಂತರಿಕ ಮತ್ತು ಬಾಹ್ಯ ಚಿತ್ರಕಲೆಯೂ ಪೂರ್ಣಗೊಂಡಿರಲಿಲ್ಲ ಎಂದು ಜಂಟಿ ಭೌತಿಕ ತಪಾಸಣೆ ವೇಳೆಯಲ್ಲಿ ಕಂಡು ಬಂದಿದೆ ಎಂದು ಸಿಎಜಿಯು ತನ್ನ ಅವಲೋಕನದಲ್ಲಿ ತಿಳಿಸಿದೆ.

 

ಇದಲ್ಲದೆ, ಸರ್ಕಾರವು 75 ಕೊಠಡಿಗಳೊಂದಿಗೆ 3-ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದರೂ ಸಹ ಜಂಟಿ ತಪಾಸಣೆಯಲ್ಲಿ ಕಟ್ಟಡವನ್ನು ಕೇವಲ 60 ಕೊಠಡಿಗಳೊಂದಿಗೆ ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ. ಇದು ಅನುಮೋದಿತ ಕೆಲಸದ ವ್ಯಾಪ್ತಿಯಿಂದ ಹೊರಗಿಟ್ಟಂತಾಗಿದೆ. ಅಲ್ಲದೇ ಕೊಠಡಿಗಳ ಸಂಖ್ಯೆಯನ್ನು ಕಡಿತಗೊಳಿಸಲು ಸರ್ಕಾರ ಅಥವಾ ಸಮರ್ಥ ಪ್ರಾಧಿಕಾರದಿಂದ ಯಾವುದೇ ಅನುಮೋದನೆಯನ್ನು ಪಡೆದಿಲ್ಲ ಎಂದು ಅವಲೋಕನದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ವಿಜಯಪುರ ಜಿಲ್ಲೆಯ ಭೂತನಾಳ ಗ್ರಾಮದಲ್ಲಿ ರೂ 16.74 ಕೋಟಿ ವೆಚ್ಚದಲ್ಲಿ 3-ಸ್ಟಾರ್ ಹೋಟೆಲ್ ನಿರ್ಮಾಣದಲ್ಲೂ ಹಲವು ಲೋಪಗಳನ್ನು ಸಿಎಜಿಯು ಪತ್ತೆ ಹಚ್ಚಿದೆ.

 

ವಿಜಯಪುರ ಜಿಲ್ಲೆಯ ಭೂತನಾಳ ಗ್ರಾಮದಲ್ಲಿ 3-ಸ್ಟಾರ್ ಹೋಟೆಲ್ ನಿರ್ಮಾಣದ ಅಂದಾಜನ್ನು ಆರಂಭದಲ್ಲಿ ರೂ 16.74 ಕೋಟಿ ಅಂದಾಜು ವೆಚ್ಚದಲ್ಲಿ ಸಿದ್ಧಪಡಿಸಿತ್ತು. ನಂತರ ಈ ಅಂದಾಜನ್ನು ಜನರಲ್ ಮ್ಯಾನೇಜರ್ (ಸಿವಿಲ್), RITES, ತಾಂತ್ರಿಕವಾಗಿ ಪರಿಶೀಲಿಸಿದ್ದರು. ಮತ್ತು 2020ರ ರಂದು ಆಡಳಿತಾತ್ಮಕ ಅನುಮೋದನೆ ಪಡೆಯಲು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಅಂದಾಜು ಪಟ್ಟಿಯನ್ನು ಸಲ್ಲಿಸಿದ್ದರು.

 

 

ಆದರೆ ಇಲ್ಲಿಯವರೆಗೂ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಈ ಪಟ್ಟಿಗೆ ಆಡಳಿತಾತ್ಮಕ ಅನುಮೋದನೆಯನ್ನೇ ನೀಡಿಲ್ಲ. ಆದರೂ ಸಹ ಗುತ್ತಿಗೆದಾರರು ಕೆಲಸವನ್ನು ಪ್ರಾರಂಭಿಸಿದ್ದಾರೆ. ಅದಿನ್ನೂ ಪ್ರಗತಿ ಹಂತದಲ್ಲಿದೆ ಎಂದು ಸಿಎಜಿಯು ತನ್ನ ಅವಲೋಕನದಲ್ಲಿ ವಿವರಿಸಿದೆ.

 

 

ರೈಟ್ಸ್‌ ಸಂಸ್ಥೆಯು 16.74 ಕೋಟಿ ರು ಮೊತ್ತಕ್ಕೆ ಟೆಂಡರ್‌ ಆಹ್ವಾನಸಿತ್ತು. ಟೆಂಡರ್‍‌ನಲ್ಲಿ ಬಿಡ್‌ ಪಡೆದಿದ್ದ ಗುತ್ತಿಗೆದಾರ ಮಾನ್ವಿಯ ಈರಣ್ಣ ಅವರಿಗೆ 15,42,18,953.69 ಕ್ಕೆ 2021ರ ಜುಲೈ 2ರಂದು Letter of Accepetence ನೀಡಲಾಗಿತ್ತು. 2021ರ ನವೆಂಬರ್‍‌ 12ರಂದು ಕಾಮಗಾರಿ ಸ್ಥಳವನ್ನೂ ಹಸ್ತಾಂತರಿಸಲಾಗಿತ್ತು. ಈ ಕಾಮಗಾರಿಯನ್ನು 2023ರ ಜುಲೈ11ರೊಳಗೇ ಪೂರ್ಣಗೊಳಿಸಬೇಕಿತ್ತು. ಆದರೆ Letter of Accepetence ಮತ್ತು ಸ್ಥಳವನ್ನು ಹಸ್ತಾಂತರಿಸುವ ಮಧ್ಯೆ ಸಾಕಷ್ಟು ವಿಳಂಬವಾಗಿತ್ತು.

 

ವಿಳಂಬಕ್ಕೆ ಕಾರಣಗಳೇನು?

 

ಈ ಕಾಮಗಾರಿ ಮೊತ್ತವನ್ನು 20.90 ಕೋಟಿ ರು ಗೆ ಪರಿಷ್ಕೃತಗೊಳಿಸಲಾಗಿತ್ತು. ಆದರೆ ಈ ಪರಿಷ್ಕೃತ ಮೊತ್ತಕ್ಕೆ ಇಲ್ಲಿಯವರೆಗೂ ಸರ್ಕಾರದಿಂದ ಯಾವುದೇ ಆಡಳಿತಾತ್ಮಕ ಅನುಮೋದನೆಯನ್ನು ಪಡೆದಿಲ್ಲ.

 

 

ಕಟ್ಟಡ ಯೋಜನೆಗಿಲ್ಲದ ಅನುಮೋದನೆ

 

ಶಾಸನಬದ್ಧ ಮಾನದಂಡಗಳ ಪ್ರಕಾರ ಅಗತ್ಯವಿರುವಂತೆ ಕಟ್ಟಡ ಯೋಜನೆಯನ್ನು ಸ್ಥಳೀಯ ಮುನ್ಸಿಪಲ್ ಪ್ರಾಧಿಕಾರದಿಂದ ಅನುಮೋದನೆ ಪಡೆದಿಲ್ಲ. ಹಾಗೆಯೇ ತಾಂತ್ರಿಕ ಪರಿಶೀಲನೆಯೂ ಸಹ ಅನುಚಿತವಾಗಿತ್ತು. ಪಿಡಬ್ಲ್ಯೂಡಿ ಬದಲಾಗಿ ರೈಟ್ಸ್‌ ಸಂಸ್ಥೆಯಿಂದ ನಡೆಸಲಾಗಿತ್ತು. ಈ ಸಂಬಂಧ ಯಾವುದೇ ದಾಖಲೆಗಳನ್ನು ಲೆಕ್ಕ ಪರಿಶೋಧನೆಗೆ ಒದಗಿಸಿಲ್ಲ. ಹಾಗೆಯೇ ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಲಭ್ಯವಿರಲಿಲ್ಲ.

 

 

ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಜಿಎಸ್‌ಟಿ ಪಾವತಿಯಾಗಿತ್ತು. 2022ರ ಜೂನ್‌ 17ರಂದು ಸಲ್ಲಿಸಿದ್ದ ಆರ್‍‌ ಎ ಬಿಲ್‌ ಗಾಗಿ ಶೇ. 12ರ ಬದಲಿಗೆ ಇಲಾಖೆಯು ಶೇ. 18ರ ಮೊತ್ತದಲ್ಲಿ 1,95,71,972 ರು.ಗಳನ್ನು ಜಿಎಸ್‌ಟಿ ಪಾವತಿಸಿತ್ತು. ಇದರಿಂದಾಗಿ 11,74,318 ರು. ಗಳನ್ನು ಹೆಚ್ಚುವರಿಯಾಗಿ ಪಾವತಿಸಿತ್ತು.

 

ತಪ್ಪಾದ ಬಳಕೆ ಪ್ರಮಾಣೀಕರಣ

 

ಈ ಯೋಜನೆಗೆ ಕೇವಲ ರೂ 14.46 ಕೋಟಿಗಳನ್ನು ಬಳಸಲಾಗಿತ್ತು. ಆದರೆ 22.85 ಕೋಟಿ ರುಗಳನ್ನು ಬಳಸಲಾಗಿದೆ ಎಂದು 2023ರ ಜುಲೈ 6ರಂದು ಬಳಕೆ ಪ್ರಮಾಣ ಪತ್ರ ಸಲ್ಲಿಸಿತ್ತು.

 

ಕಾಮಗಾರಿಯಲ್ಲಿ ವಿಳಂಬ

 

ಈ ಯೋಜನೆಯನ್ನು ಜುಲೈ 2023 ರೊಳಗೆ (20 ತಿಂಗಳುಗಳು) ಪೂರ್ಣಗೊಳಿಸಲು ನಿರ್ಧರಿಸಿತ್ತು. ಆದರೆ 30 ತಿಂಗಳ ವಿಳಂಬದೊಂದಿಗೆ ಪ್ರಗತಿ ಸಾಧಿಸಿತ್ತು. ಸಾಧಿಸಲಾಗಿದೆ. ಆದರೂ ಗುತ್ತಿಗೆದಾರನಿಗೆ ಯಾವುದೇ ದಂಡವನ್ನೂ ವಿಧಿಸಿಲ್ಲ.

 

ನಡೆಯದ 3ನೇ ವ್ಯಕ್ತಿ ತಪಾಸಣೆ

 

ಈ ಯೋಜನೆ ಕಾಮಗಾರಿಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯಿಂದ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕಿತ್ತು. ಆದರೆ ಇಂತಹ ಯಾವುದೇ ಮೂರನೇ ವ್ಯಕ್ತಿಯ ತಪಾಸಣೆ ವರದಿಗಳನ್ನು ಲೆಕ್ಕ ಪರಿಶೋಧಕರಿಗೆ ಒದಗಿಸಿಲ್ಲ

 

ಅನುಮೋದನೆ ಇಲ್ಲದೆ ಸ್ಥಳದಲ್ಲಿ ಬದಲಾವಣೆ

 

ತ್ರಿ ಸ್ಟಾರ್‍‌ ಹೋಟೆಲ್‌ ನಿರ್ಮಾಣ ಕಾಮಗಾರಿಗೆ ಮೂಲತಃ ಅನುಮೋದಿಸಲಾದ ಸ್ಥಳವು ಸರ್ವೆ ನಂ. 30A1 (2.5 ಎಕರೆ) ಹೋಟೆಲ್ ಮಯೂರ (ಕೆಡವಬೇಕಾಗಿರುವ) ಬಳಿ ಇತ್ತು. ಆದರೆ ಕಾಮಗಾರಿಗೆ ಸ್ಥಳವನ್ನೇ ಬದಲಿಸಿತ್ತು. ಪ್ರಸ್ತುತ ಭೂತನಾಳ ಕೆರೆಯ ಬಳಿಯ ಸರ್ವೆ ನಂ. 130/A (5 ಎಕರೆ)ಯಲ್ಲಿ ಕಾಮಗಾರಿ ನಡೆದಿತ್ತು. ಈ ಸ್ಥಳ ಬದಲಾವಣೆಗೆ ಕಾರಣ ಮತ್ತು ಸಮರ್ಥ ಪ್ರಾಧಿಕಾರದಿಂದ ಅನುಮೋದನೆ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳು ಲಭ್ಯವಿಲ್ಲ.

 

ಅನುಮೋದನೆ ಇಲ್ಲದೆ ವ್ಯಾಪ್ತಿಯಲ್ಲಿಯೂ ಬದಲಾವಣೆ

 

ಮೂಲತಃ ಅನುಮೋದಿಸಲಾದ ಯೋಜನೆಯ ಪ್ರಕಾರ 16.74 ಕೋಟಿ ವೆಚ್ಚದಲ್ಲಿ 75 ಕೊಠಡಿಗಳು, G+4 ಮಹಡಿಗಳು, 4001.29 ಚದರ ಮೀಟರ್ ಅಂತಸ್ತು ಪ್ರದೇಶದಲ್ಲಿ ಹೋಟೆಲ್ ನಿರ್ಮಾಣ ಆಗಬೇಕಿತ್ತು. ಆದರೆ ನಂತರದಲ್ಲಿ ಇದನ್ನು 40 ಕೊಠಡಿಗಳು, ಲೋವರ್ ಗ್ರೌಂಡ್ ಫ್ಲೋರ್ + G+3 ಮಹಡಿಗಳು, 4704.07 ಚದರ ಮೀಟರ್‍‌ಗೆ ಪರಿಷ್ಕರಿಸಿತ್ತು. ಇದರ ವೆಚ್ಚವನ್ನು 20.90 ಕೋಟಿಗೆ ಪರಿಷ್ಕರಿಸಿತ್ತು.

 

ಹೀಗಾಗಿ, ಸಾಮರ್ಥ್ಯದಲ್ಲಿ ಕಡಿತ ಮತ್ತು ವೆಚ್ಚದಲ್ಲಿ ರೂ. 4.16 ಕೋಟಿ (24.88%) ಹೆಚ್ಚಳವಾಗಿದೆ. ಇಂತಹ ಬದಲಾವಣೆ ಮಾಡಲು ಸೂಕ್ತ ಕಾರಣಗಳನ್ನು ಒದಗಿಸಿರಲಿಲ್ಲ. ಇದಲ್ಲದೆ, ಈ ಮಾರ್ಪಾಡುಗಳಿಗೆ ಸಮರ್ಥ ಪ್ರಾಧಿಕಾರದಿಂದ ಯಾವುದೇ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಯನ್ನು ಪಡೆದಿಲ್ಲ.

 

ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ಎನ್‌ಒಸಿ ಇಲ್ಲ

 

ಈ ಹೋಟೆಲ್‌ ನಿರ್ಮಾಣಕ್ಕೆ ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ಎನ್‌ಒಸಿಯನ್ನೇ ಪಡೆದಿಲ್ಲ ಎಂದು ಸಿಎಜಿಯು ತನ್ನ ಅವಲೋಕನದಲ್ಲಿ ಹೇಳಿದೆ. ಹಾಗೆಯೇ 2024ರ ಡಿಸೆಂಬರ್‍‌ ಹೊತ್ತಿಗೆ ಶೇ. 98ರಷ್ಟು ಪ್ರಗತಿ ಸಾಧಿಸಿದೆ. ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಈ ವಿಳಂಬಕ್ಕೆ ಕಾರಣರಾದ ಗುತ್ತಿಗೆದಾರರಿಗೆ ಯಾವುದೇ ದಂಡವನ್ನೂ ವಿಧಿಸಿಲ್ಲ.

 

ಹಾಸನ ಜಿಲ್ಲೆಯ ಬೇಲೂರಿನಲ್ಲಿಯೂ 3-ಸ್ಟಾರ್ ಹೋಟೆಲ್ ನಿರ್ಮಾಣದಲ್ಲೂ ಹಲವು ಲೋಪಗಳನ್ನು ಸಿಎಜಿಯು ಪತ್ತೆ ಹಚ್ಚಿದೆ. ಹೋಟೆಲ್‌ ನಿರ್ಮಾಣಕ್ಕೆ 20.89 ಕೋಟಿ ರು ವೆಚ್ಚದಲ್ಲಿ ರೈಟ್ಸ್‌ ಸಂಸ್ಥೆಯು ಡಿಪಿಆರ್‍‌ ತಯಾರಿಸಿತ್ತು. ಇದೇ ಸಂಸ್ಥೆಯು ಇದನ್ನು ತಾಂತ್ರಿಕವಾಗಿ ಪರಿಶೀಲನೆ ಮಾಡಿದೆ ಮತ್ತು ಮಂಜೂರಾತಿ ನೀಡಿದೆ. ಆದರೆ ಇದಕ್ಕೂ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರು ಆಡಳಿತಾತ್ಮಕ ಅನುಮೋದನೆಯನ್ನು ನೀಡಿಲ್ಲ. ಆದರೂ ಕಾಮಗಾರಿಯು ಶುರುವಾಗಿದೆ ಎಂದು ಸಿಎಜಿಯು ತನ್ನ ಅವಲೋಕನದಲ್ಲಿ ವಿವರಿಸಿದೆ.

 

 

ಬೇಲೂರಿನಲ್ಲಿ 13.87 ಕೋಟಿ ರು ವೆಚ್ಚದಲ್ಲಿ 3 ತ್ರಿ ಸ್ಟಾರ್‍‌ ಹೋಟೆಲ್‌ ನಿರ್ಮಾಣ ಮಾಡಲು ರೈಟ್ಸ್‌ ಸಂಸ್ಥೆಯು ಟೆಂಡರ್ ಆಹ್ವಾನಿಸಿತ್ತು.

 

 

ಇದರಲ್ಲಿಯೂ ಮಾನ್ವಿಯ ಕ್ಲಾಸ್‌ 1 ಗುತ್ತಿಗೆದಾರ ಈರಣ್ಣ ಅವರಿಗೆ 2021ರ ಜೂನ್‌ ಮೇ 19ರಂದು ಲೆಟರ್ ಆಫ್‌ ಅಕ್ಸೆಪ್ಟೆನ್ಸಿ ನೀಡಲಾಗಿತ್ತು. 2021ರ ಆಗಸ್ಟ್‌ 21ರಂದು ಒಪ್ಪಂದವನ್ನು ಕಾರ್ಯಗತಗೊಳಿಸಿತ್ತು. 2022ರ ಆಗಸ್ಟ್‌ 12ರಂದು ಕಾಮಗಾರಿ ಸ್ಥಳವನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಿತ್ತು. ಈ ಕಾಮಗಾರಿಯನ್ನೂ ಸಹ 20 ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಷರತ್ತನ್ನು ವಿಧಿಸಿತ್ತು.

 

ಆಡಳಿತಾತ್ಮಕ ಅನುಮೋದನೆ ಪಡೆದಿಲ್ಲ

 

ರೈಟ್ಸ್‌ ಸಂಸ್ಥೆಯು 22.89 ಕೋಟಿ ರು ವೆಚ್ಚಲ್ಲಿ ತಯಾರಿಸಿದ್ದ ಅಂದಾಜಿಗೆ ಪ್ರವಾಸೋದ್ಯಮ ಇಲಾಖೆಯು ಆಡಳಿತಾತ್ಮಕ ಅನುಮೋದನೆಯನ್ನೇ ನೀಡಿರಲಿಲ್ಲ. ಹೀಗಾಗಿ ಇದು ಸ್ಥಾಪಿತ ಕಾರ್ಯವಿಧಾನಗಳನ್ನು ನೇರವಾಗಿ ಉಲ್ಲಂಘನೆ ಮಾಡಿದಂತಾಗಿದೆ ಎಂದು ಸಿಎಜಿಯು ಹೇಳಿತ್ತು.

 

ಕಟ್ಟಡ ಯೋಜನೆ ಅನುಮೋದನೆ ಪಡೆದಿಲ್ಲ

 

ಸಕ್ಷಮ ಸ್ಥಳೀಯ ಪ್ರಾಧಿಕಾರದಿಂದ ಕಟ್ಟಡ ಯೋಜನೆಯ ಸಿವಿಲ್ ಕೆಲಸಗಳಿಗೆ ಕಡ್ಡಾಯ ಅನುಮೋದನೆ ಅವಶ್ಯಕವಾಗಿತ್ತು. ಆದರೆ ಕಟ್ಟಡ ಯೋಜನೆಗೆ ಅನುಮೋದನೆಯನ್ನೇ ಪಡೆದಿಲ್ಲ ಮತ್ತು ಈ ಸಂಬಂಧಿತ ದಾಖಲೆಗಳೂ ಕಡತದಲ್ಲಿ ಕಂಡು ಬಂದಿಲ್ಲ.

 

ವೆಚ್ಚದ ಅಪೂರ್ಣ ದಾಖಲಾತಿ

 

₹19.38 ಕೋಟಿ ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆದರೂ 2025ರ ಜೂನ್‌ 25ಕ್ಕೆ 6.24 ಕೋಟಿ ರು ಮೊತ್ತಕ್ಕೆ ಹೊಂದುವಂತೆ ಚಾಲ್ತಿ ಖಾತೆಯಲ್ಲಿ ಬಿಲ್‌ಗಳಿದ್ದವು. ಆರ್ಥಿಕ ಮತ್ತು ಭೌತಿಕ ಪ್ರಗತಿಯನ್ನು ಬೆಂಬಲಿಸುವ ಮೂರನೇ ವ್ಯಕ್ತಿಯ ತಪಾಸಣೆ ವರದಿಗಳು ಲೆಕ್ಕಪರಿಶೋಧನೆಗೆ ಲಭ್ಯವಿರಲಿಲ್ಲ. ಆದ್ದರಿಂದ ವಾಸ್ತವಿಕ ವೆಚ್ಚ ಮತ್ತು ಕೆಲಸದ ಗುಣಮಟ್ಟವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ ಎಂದು ಸಿಎಜಿಯು ತನ್ನ ಅವಲೋಕನದಲ್ಲಿ ಹೇಳಿದೆ.

 

 

ಸ್ಥಳ ಹಸ್ತಾಂತರದಲ್ಲಿ ವಿಳಂಬ

 

ಲೆಟರ್ ಅಫ್‌ ಅಕ್ಸೆಪ್ಟೆನ್ಸಿಯನ್ನು 2021ರ ಆಗಸ್ಟ್‌ 9ರಂದು ನೀಡಿದ್ದರೂ 2022ರ 12ರಂದು ಸ್ಥಳವನ್ನು ಹಸ್ತಾಂತರಿಸಿತ್ತು. ಇದು ಒಂದು ವರ್ಷಕ್ಕೂ ಹೆಚ್ಚು ವಿಳಂಬವಾಗಿತ್ತು. ಇಂತಹ ವಿಳಂಬಕ್ಕೆ ಕಾರಣಗಳು ದಾಖಲೆಗಳಲ್ಲಿ ಲಭ್ಯವಿರಲಿಲ್ಲ.

 

ಇದರಿಂದಾಗಿ ಆರಂಭದಲ್ಲೇ ಕಾಮಗಾರಿ ತಡವಾಗಲು ಕಾರಣವಾಯಿತು.

 

ನಿಗದಿತ ಗುರಿ ಪ್ರಕಾರ ಈ ಯೋಜನೆಯನ್ನು 2024ರ ಏಪ್ರಿಲ್‌ 11ರೊಳಗೇ ಪೂರ್ಣಗೊಳಿಸಬೇಕಿತ್ತು. ಆದರೂ ಕಾಮಗಾರಿ ಆರಂಭವಾಗಿ 12 ತಿಂಗಳಾದರೂ ಕೇವಲ ಶೇ. 45ರಷ್ಟು ಮಾತ್ರ ಪೂರ್ಣಗೊಂಡಿತ್ತು. ಆದರೂ ಗುತ್ತಿಗೆದಾರರಿಗೆ ದಂಡ ವಿಧಿಸಿಲ್ಲ.

Your generous support will help us remain independent and work without fear.

Latest News

Related Posts