ಖರ್ಚು ಮಾಡದ 14.11 ಕೋಟಿ ಸರ್ಕಾರಕ್ಕೆ ಜಮೆಯಾಗಿಲ್ಲ, ಬಡ್ಡಿ ಹಣದ ಮಾಹಿತಿಯೂ ಇಲ್ಲ; ಮಾರ್ಗಸೂಚಿ ಉಲ್ಲಂಘನೆ

ಬೆಂಗಳೂರು;  2023-24ನೇ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗೆ ಬಿಡುಗಡೆ ಮಾಡಿದ್ದ ಒಟ್ಟು ಅನುದಾನದ ಪೈಕಿ 14.11 ಕೋಟಿ ರು. ಖರ್ಚಾಗಿಲ್ಲ. ಹೀಗೆ ಖರ್ಚಾಗದೇ ಇದ್ದ 14.11 ಕೋಟಿ ರು.ಗಳು ಸರ್ಕಾರಕ್ಕೂ  ಜಮೆಯಾಗಿಲ್ಲ.  ಅಲ್ಲದೇ ಈ ಹಣದ ಬಡ್ಡಿ ಹಣದ ಮಾಹಿತಿಯನ್ನೂ ಸರ್ಕಾರಕ್ಕೆ ನೀಡಿಲ್ಲ  ಎಂಬ ಸಂಗತಿಯು ಇದೀಗ ಬಹಿರಂಗವಾಗಿದೆ.

 

ವಿವಿಧ ಇಲಾಖೆಗಳು ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವು  ಬಿಡುಗಡೆ ಮಾಡಿರುವ ಅನುದಾನವನ್ನು ಆಯಾ ಆರ್ಥಿಕ ವರ್ಷದಲ್ಲಿ ಖರ್ಚು ಮಾಡಬೇಕು. ಒಂದೊಮ್ಮೆ ಖರ್ಚು ಮಾಡದೇ ಇದ್ದ ಪಕ್ಷದಲ್ಲಿ ಆ ಹಣವನ್ನು ಸರ್ಕಾರಕ್ಕೆ ಜಮೆ ಮಾಡಬೇಕು. ಆದರೆ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯು 14.11 ಕೋಟಿ ರು.ಗಳನ್ನು ಖರ್ಚು ಮಾಡದೇ ಇದ್ದರೂ ಸಹ ಸರ್ಕಾರಕ್ಕೆ ಜಮೆ ಮಾಡಿಲ್ಲ. ಇದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

 

ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಸಚಿವಾಲಯವು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರನ್ನು ಪ್ರಶ್ನಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ‘ದಿ ಫೈಲ್‌’ಗೆ ಕೆಲವು ಟಿಪ್ಪಣಿ  (ಕಡತ ಸಂಖ್ಯೆ; STWD/TSP/TSP1/46/2025)  ಹಾಳೆಗಳು ಲಭ್ಯವಾಗಿವೆ.

 

ಪರಿಶಿಷ್ಟ ವರ್ಗದ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿಗಳ ಲೆಕ್ಕ ಶೀರ್ಷಿಕೆಯಡಿ 2025-26ನೇ ಸಾಲಿನಲ್ಲಿ ಒಟ್ಟು 157.32 ಕೋಟಿ ರು. ಇತ್ತು. ಅಲ್ಲದೇ ಇದೇ 2025-26ನೇ ಸಾಲಿನ ಆಯವ್ಯಯದಲ್ಲಿ 220.00 ಕೋಟಿ ರು ನಿಗದಿಪಡಿಸಿತ್ತು. ಒಟ್ಟಾರೆ ಈ ಲೆಕ್ಕ ಶೀರ್ಷಿಕೆಯಲ್ಲಿ 377.32 ಕೋಟಿ ರು. ಅನುದಾನ ಲಭ್ಯವಿತ್ತು.

 

ಈ ಅನುದಾನವನ್ನು ಬಳಸಿಕೊಂಡಿದ್ದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು 18 ಕಾಮಗಾರಿಗಳನ್ನು ನಿರ್ವಹಿಸಿತ್ತು. ಇದಕ್ಕಾಗಿ 21.66 ಕೋಟಿ ರು ಮತ್ತು ಪ್ರಗತಿಯಲ್ಲಿರುವ 5 ಕಾಮಗಾರಿಗಳಿಗಾಗಿ 37.81 ಕೋಟಿ, 09 ಹೊಸ ಕಾಮಗಾರಿಗಳಿಗೆ 198.50 ಕೋಟಿ ರು, 01 ಕ್ರೀಡಾ ಕಾಮಗಾರಿಗೆ 2.50 ಕೋಟಿ ರು., 31 ಆವರಣ ಗೋಡೆ ಮತ್ತು ರಿಪೇರಿ ಕಾಮಗಾರಿಗಳಿಗೆ 7.30 ಕೋಟಿ, ಟೆಂಡರ್ ಹಂತದ 07 ಕಾಮಗಾರಿಗಳಿಗೆ 103.02 ಕೋಟಿ ರು ಮತ್ತು ಅಸ್ತಿತ್ವದಲ್ಲಿರುವ 15 ವಸತಿ ಶಾಲಾ ಕಟ್ಟಡಗಳ ರಿಪೇರಿಗಾಗಿ 6.53 ಕೋಟಿ ರು.ಗಳನ್ನು ಅವಕಾಶ ಮಾಡಿಕೊಂಡಿತ್ತು.

 

2025-26ನೇ ಸಾಲಿನ ಆರಂಭಿಕ ಶಿಲ್ಕಿನ ರೂಪದಲ್ಲಿ 157.32 ಕೋಟಿ ರು. ಇತ್ತು. ಇದರಲ್ಲಿ 110.00 ಕೋಟಿ ರು., 2024-25ನೇ ಸಾಲಿನಲ್ಲಿಯೇ ಬಿಡುಗಡೆಯಾಗಿತ್ತು. ಉಳಿದ 47.32 ಕೋಟಿ ರು, 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿತ್ತು. ಈ ಮೊತ್ತದಲ್ಲಿ ಪ್ರಸಕ್ತ ಸಾಲಿನಲ್ಲಿ 2025ರ ನವೆಂಬರ್‍‌ 7ರವರೆಗೂ 33.221 ಕೋಟಿ ರು ವೆಚ್ಚವಾಗಿತ್ತು. ಇನ್ನೂ 14.11 ಕೋಟಿ ರು ವೆಚ್ಚ ಮಾಡಬೇಕಾಗಿತ್ತು.

 

ಆದರೆ ಈ 14.11 ಕೋಟಿ ರು.ಗಳನ್ನು ವೆಚ್ಚ ಮಾಡಿರಲಿಲ್ಲ ಮತ್ತು ವೆಚ್ಚವಾಗದೇ ಇದ್ದ ಈ ಮೊತ್ತವನ್ನು ಸರ್ಕಾರಕ್ಕೆ ಜಮೆಯನ್ನೂ ಮಾಡಿರಲಿಲ್ಲ.

 

 

ಈ ಮಧ್ಯೆ 2025ರ ಜುಲೈ 19ರಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಪತ್ರ  (ಟಿಪ್ಪಣಿ ಪತ್ರ ಸಂಖ್ಯೆ; ಪವಕಇ/ಆಶಾ/ಸಿಆರ್-04/2025-26)  ಬರೆದಿದ್ದರು. ಈ ಪತ್ರದ ಪ್ರಕಾರ 2024-25ನೇ ಸಾಲಿನ ಹಿಂದಿನ ಆರ್ಥಿಕ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಇಲಾಖೆಗೆ ಬಿಡುಗಡೆಯಾದ ಅನುದಾನವನ್ನು ಆಯಾ ಆರ್ಥಿಕ ವರ್ಷಗಳಲ್ಲಿಯೇ ವಿನಿಯೋಗಿಸಬೇಕು. ಯಾವುದೇ ಅನುದಾನ ಕ್ರೈಸ್‌ ಖಾತೆಯಲ್ಲಿ ವೆಚ್ಚವಾಗದೇ ಇದ್ದಲ್ಲಿ ಕೂಡಲೇ ಆರ್ಥಿಕ ಇಲಾಖೆಯ ಮಾರ್ಗಸೂಚಿಗಳಂತೆ ವೆಚ್ಚ ಭರಿಸಲು ಆಥವಾ ಸರ್ಕಾರಕ್ಕೆ ಜಮೆ ಮಾಡಲು ಕ್ರಮವಹಿಸಬೇಕು ಎಂದು ಸೂಚಿಸಿತ್ತು ಎಂಬ ಅಂಶವನ್ನು ಪತ್ರದಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

2024-25ನೇ ಸಾಲಿನ ಹಿಂದಿನ ಆರ್ಥಿಕ ವರ್ಷಗಳಲ್ಲಿ ಬಿಡುಗಡೆಯಾಗಿರುವ ಮೊತ್ತದ ಪೈಕಿ 2023-24ನೇ ಸಾಲಿನಲ್ಲಿ ಬಿಡುಗಡೆಯಾಗಿ, ಪ್ರಸ್ತುತ ವೆಚ್ಚವಾಗದೇ 14.11 ಕೋಟಿ ರು ಉಳಿದಿದೆ. ಮುಂದಿನ ದಿನಗಳಲ್ಲಿ ಈ ಮೊತ್ತವನ್ನು ಪೂರ್ಣವಾಗಿ ವೆಚ್ಚ ಮಾಡಲು ಕ್ರಮವಹಿಸಲಾಗುವುದು ಎಂಬ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು.

 

ಅಲ್ಲದೇ  15 ವಸತಿ ಶಾಲೆಗಳಲ್ಲಿ ತುರ್ತಾಗಿ ದುರಸ್ತಿ ಕೈಗೊಳ್ಳಬೇಕಿರುವುದರಿಂದ 6.53 ಕೋಟಿ ರು.ಗಳನ್ನು ಅನುದಾನ ಬಿಡುಗಡೆ ಮಾಡಬೇಕು ಎಂದು ಕೋರಿದ್ದರು. ಹಾಗೂ ಈ ನಿರ್ವಹಣೆ ಕೆಲಸಕ್ಕಾಗಿ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಕೋರಿದ್ದರು.  ಈ ಮಾಹಿತಿಯನ್ನು ಸಮಾಜ ಕಲ್ಯಾಣ ಇಲಾಖೆಯ ನಡವಳಿಗಳಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

ವಿಶೇಷವೆಂದರೇ ಈ ಪ್ರಸ್ತಾವವನ್ನು ಪರಿಶಿಷ್ಟ ವರ್ಗದ ಕಲ್ಯಾಣ ನಿರ್ದೇಶನಾಲಯವು  ಸಲ್ಲಿಸಿರಲಿಲ್ಲ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ನೇರವಾಗಿ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಪ್ರಸ್ತಾವವನ್ನು ಕೂಲಂಕುಷವಾಗಿ ಪರಿಶೀಲಿಸಿದ್ದ ಇಲಾಖೆಯು ಹಲವು ಪ್ರಶ್ನೆಗಳನ್ನು ಎತ್ತಿತ್ತು.

 

2023-24ನೇ ಸಾಲಿನಲ್ಲಿ 47.32 ಕೋಟಿ ರು ಬಿಡುಗಡೆಯಾಗಿತ್ತು.   2024-25ನೇ ಸಾಲಿನಲ್ಲಿ 110.00 ಕೋಟಿ ರು. ಬಿಡುಗಡೆಯಾಗಿತ್ತು. ಈ ಮೊತ್ತವು 2025-26ನೇ ಸಾಲಿನಲ್ಲಿಯೂ ಸೇರ್ಪಡೆಯಾಗಿತ್ತು. ಒಟ್ಟಾರೆ 2025-26ನೇ ಸಾಲಿನ ಆರಂಭಿಕ ಶಿಲ್ಕಿನಲ್ಲಿ 157.32 ಕೋಟಿ ರು. ಇತ್ತು. 2025ರ ನವೆಂಬರ್‍‌ 10ರವರೆಗೆ 33.21 ಕೋಟಿ ರು ವೆಚ್ಚವಾಗಿತ್ತು. ಉಳಿದ 14.11 ಕೋಟಿ ರು. ವೆಚ್ಚ ಮಾಡಬೇಕಿತ್ತು. ಆದರೆ ಈ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡದಿರಲು ಕಾರಣಗಳು ಕಂಡು ಬರುತ್ತಿಲ್ಲ ಎಂದು ಇಲಾಖೆಯು ಆಕ್ಷೇಪಿಸಿತ್ತು.

 

ಬಡ್ಡಿ ಹಣದ ಮಾಹಿತಿಯನ್ನೇಕೆ ನೀಡಿಲ್ಲ?

 

ಆರ್ಥಿಕ ಇಲಾಖೆಯ ಆದೇಶ, ಸುತ್ತೋಲೆಗಳ ಪ್ರಕಾರ ವರ್ಷದ ಆರಂಭದಲ್ಲಿ ಒದಗಿಸಲಾಗುವ ಅನುದಾನವನ್ನು ಖರ್ಚು ಮಾಡಬೇಕು. ಒಂದು ವೇಳೆ ಖರ್ಚು ಮಾಡದೇ  ಇದ್ದಲ್ಲಿ ಅನುದಾನವನ್ನು ಸರ್ಕಾರಕ್ಕೆ ಕಡ್ಡಾಯವಾಗಿ  ಹಿಂತಿರುಗಿಸಬೇಕು. ಆದರೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ 2023-24 ಮತ್ತು 2024-25ನೇ ಸಾಲಿನಲ್ಲಿ ಬಿಡುಗಡೆಯಾಗಿ ಉಳಿಕೆಯಾದ ಅನುದಾನವನ್ನು ಸರ್ಕಾರಕ್ಕೆ ವಾಪಸ್‌ ಮಾಡದಿರುವುದು ಕಂಡು ಬರುತ್ತದೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

‘ಸರ್ಕಾರಕ್ಕೆ 2023-24 ಮತ್ತು 2024-25ನೇ ಸಾಲಿನಲ್ಲಿ ವ್ಯಯವಾಗದೇ ಉಳಿಕೆಯಾಗಿರುವ ಅನುದಾನವನ್ನು ಯಾವ ಕಾರಣಕ್ಕೆ ಜಮೆ ಮಾಡಿಲ್ಲ. ಹಾಗೂ ಈ ಅನುದಾನದಿಂದ ಬಂದಿರುವ ಬಡ್ಡಿ ಹಣದ ಮಾಹಿತಿಯನ್ನು ಜರೂರಾಗಿ ಒದಗಿಸಬೇಕು,’ ಎಂದು ಇಲಾಖೆ ಅಧಿಕಾರಿಗಳು ನಿರ್ದೇಶಿಸಿರುವುದು ಗೊತ್ತಾಗಿದೆ.

 

ಕಳೆದ 2 ವರ್ಷಗಳಲ್ಲಿ ಖರ್ಚು ಮಾಡದೇ 14.11 ಕೋಟಿ ರು  ಉಳಿಕೆಯಾಗಿದ್ದರೂ ಸರ್ಕಾರಕ್ಕೆ ಜಮೆ ಮಾಡದೇ ಇರುವ ಬಗ್ಗೆ ಇಲಾಖೆಯ ಕಾರ್ಯದರ್ಶಿ ರಂದೀಪ್ ಅವರು ಸಚಿವ ಎಚ್‌ ಸಿ ಮಹದೇವಪ್ಪ ಅವರೊಂದಿಗೆ ಚರ್ಚಿಸಿದ್ದಾರೆ. ಆದರೆ ಬಹುಕೋಟಿಯಷ್ಟು ಮೊತ್ತವನ್ನು ಸರ್ಕಾರಕ್ಕೆ ಹಿಂದಿರುಗಿಸದೇ ಇರುವ ಅಧಿಕಾರಿಗಳ ವಿರುದ್ಧ  ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ.

Your generous support will help us remain independent and work without fear.

Latest News

Related Posts