ವೀರಪ್ಪನ್ ಹತ್ಯೆ ಕಾರ್ಯಾಚರಣೆ; ಎಸ್‌ಟಿಎಫ್‌ನ ಹಲವು ಸಿಬ್ಬಂದಿಗಳಿಗೆ ನಿವೇಶನ ಲಭ್ಯವಿಲ್ಲವೆಂದ ಪ್ರಾಧಿಕಾರ

ಬೆಂಗಳೂರು; ನರಹಂತಕ ವೀರಪ್ಪನ್‌ ವಿಶೇಷ ಕಾರ್ಯಾಚರಣೆಯ ಭಾಗವಾಗಿ ಎಸ್‌ಟಿಎಫ್‌ನಲ್ಲಿ  ಕಾರ್ಯನಿರ್ವಹಿಸಿದ್ದ ಹಲವು ಪೊಲೀಸ್‌ ಅಧಿಕಾರಿಗಳಿಗೆ ಇನ್ನೂ ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ನಿವೇಶನಗಳನ್ನೇ ನೀಡಿಲ್ಲ.

 

ವೀರಪ್ಪನ್  ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅಧಿಕಾರಿ, ಸಿಬ್ಬಂದಿಗಳು ಬಹುಮಾನಕ್ಕೆ ಅರ್ಹರಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಖಚಿತಪಡಿಸಿಕೊಂಡು ಪರಿಶೀಲನಾ ವರದಿಯನ್ನು ಸಲ್ಲಿಸಬೇಕು ಎಂದು ಅರಣ್ಯ,ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ಈಚೆಗಷ್ಟೇ  ಅಧಿಕಾರಿಗಳಿಗೆ ಸೂಚಿಸಿತ್ತು. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಪ್ರಾಧಿಕಾರಗಳೂ ನಿವೇಶನಗಳನ್ನು ನೀಡದೇ ಇರುವುದು ಮುನ್ನೆಲೆಗೆ ಬಂದಿದೆ.

 

ಈ ಸಂಬಂಧ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರವು ಪೌರಾಡಳಿತ ಇಲಾಖೆಗೆ ಮಾಹಿತಿ ಸಲ್ಲಿಸಿದೆ. ಈ ಮಾಹಿತಿ ವಿವರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ವಿಜಯಪುರ ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ಪೊಲೀಸ್‌ ಸಿಬ್ಬಂದಿಗಳ ಪೈಕಿ  12 ಮಂದಿ ಪೊಲೀಸ್‌ ಸಿಬ್ಬಂದಿಗಳಿಗೆ ಈಗಲೂ ನಿವೇಶನ ದೊರೆತಿಲ್ಲ. ಅರ್ಜಿ ಸಲ್ಲಿಸಿದವರ ಪೈಕಿ 5 ಮಂದಿ ಪೊಲೀಸ್‌ ಸಿಬ್ಬಂದಿಗಳಿಗೆ ನಿವೇಶನ ಲಭ್ಯವಿಲ್ಲ ಎಂದು ಹಿಂಬರಹ ನೀಡಿದೆ. ಇನ್ನುಳಿದ 7 ಮಂದಿ ಪೊಲೀಸ್‌ ಸಿಬ್ಬಂದಿಗೆ ನಿವೇಶನ ನೀಡಿಲ್ಲ.

 

 

ಸಿ ವಾಯ್‌ ಹಿಟ್ಟಿನಹಳ್ಳಿ, ಪಿ ಕೆ ಗೊಡೇಕರ, ಬಿ ಎ ಬುಯೇಟಿ, ಎಸ್‌ ಕೆ ಅಸಂಗಿ,  ಸಿ ಎಸ್ ಸಿಂಪಿ  ಅವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಎಲ್ಲಾ ಸಿಬ್ಬಂದಿಗಳಿಗೆ ನಿವೇಶನ ನೀಡಬೇಕಿದ್ದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರವು, ತನ್ನ ವ್ಯಾಪ್ತಿಯಲ್ಲಿ ನಿವೇಶನ ಲಭ್ಯವಿಲ್ಲ ಎಂದು ಹಿಂಬರಹ ನೀಡಿರುವುದು ತಿಳಿದು ಬಂದಿದೆ.

 

ಅದೇ ರೀತಿ ಎಂ ಎಸ್ ಹಡಪದ, ಹೆಚ್‌ ಬಿ ಮಾನೆ, ಎಮ್ ಕೆ ಮುಜಾವರ, ಪಿ ಜೆ ರಜಪೂತ, ಡಿ ವಾಯ್ ಅಲ್ಲಾಪುರ, ಎಸ್‌ ಹೆಚ್‌ ಯಾದವಾಡ ಅವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪರಿಶೀಲಿಸಿದ್ದ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನಗಳನ್ನೇ ನೀಡಿಲ್ಲ.

 

 

 

 

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲು ನಿವೇಶನವೇ ಲಭ್ಯವಿಲ್ಲ ಎಂಬ ಮಾಹಿತಿಯನ್ನು  ನಗರಾಭಿವೃದ್ದಿ ಇಲಾಖೆ ಈಗಾಗಲೇ ತಲುಪಿದೆ. ಈ ಕುರಿತು ಸಚಿವ ಬೈರತಿ ಸುರೇಶ್‌ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದರು.

 

ಅದೇ ರೀತಿ  ಎಂ ರಾಜೇಂದ್ರ ಮತ್ತು ಎ ಟಿ ವೆಂಕಟೇಗೌಡ ಮತ್ತಿತರರು ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ರಿಟ್‌ ಅರ್ಜಿ (10982/2018, c/w 50155-167 dated 14.08.2024) ಗೆ ಸಂಬಂಧಿಸಿದಂತೆ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ವರದಿ ಸಲ್ಲಿಸಲು ನಿರ್ದೇಶಿಸಿತ್ತು.

 

 

 

‘ನರಹಂತಕ ವೀರಪ್ಪನ್‌ನ್ನು 2004ರ ಅಕ್ಟೋಬರ್‍‌ 18ರಂದು ಸಂಹಾರ ಮಾಡಿದ ದಿನದಂದು ಎಸ್‌ಟಿಎಫ್‌ನಲ್ಲಿ ಕೆಲಸ ನಿರ್ವಹಿಸಿದಂತಹ ಅಧಿಕಾರಿ ಸಿಬ್ಬಂದಿಗಳ ಪೈಕಿ ನ್ಯಾಯಾಲಯದ ಆದೇಶದಲ್ಲಿನ ಒಟ್ಟು 24 ಅಧಿಕಾರಿ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಲಾಗಿದೆಯೇ, ಸರ್ಕಾರವು 2005ರ ಜುಲೈ 8ರಂದು ಹೊರಡಿಸಿದ್ದ ಆದೇಶದಂತೆ ಬಹುಮಾನಕ್ಕೆ ಅರ್ಹರಿರುವ ಬಗ್ಗೆ ಪರಿಶೀಲಿಸಿ ಖಚಿತಪಡಿಸಿಕೊಂಡು ಎರಡು ದಿನದೊಳಗಾಗಿ ಆರ್ಥಿಕ ಇಲಾಖೆಯು ಕೋರಿರುವ ಮಾಹಿತಿ ಅನುಸಾರ ಮಾಹಿತಿ ಒದಗಿಸಬೇಕು,’ ಎಂದು ಚಾಮರಾಜನಗರದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಬ್ಬಂದಿ ಮತ್ತು ನೇಮಕಾತಿ ವಿಭಾಗದ ಎಪಿಸಿಸಿಎಫ್ ಅವರಿಗೆ ಸೂಚಿಸಿದ್ದರು.

 

 

 

ಈ ಬಹುಮಾನಕ್ಕೆ ಅರ್ಹರಿರುವ ಅಧಿಕಾರಿ ಸಿಬ್ಬಂದಿಗಳು ಮತ್ತು ಇದಕ್ಕೆ ಎಷ್ಟು ವೆಚ್ಚವಾಗಲಿದೆ ಎಂಬ ಸಂಪೂರ್ಣ ಮಾಹಿತಿ ಒದಗಿಸಬೇಕು ಎಂದೂ ನಿರ್ದೇಶಿಸಲಾಗಿದೆ. ಮತ್ತು 2004ರ ಅಕ್ಟೋಬರ್‍‌ 18ರಂದು ಕೆಲಸ ನಿರ್ವಹಿಸಿರುವ ಬಗ್ಗೆ ಹಾಜರಾತಿ ಪುಸ್ತಕ ಅಥವಾ ಟಾಸ್ಕ್‌ ಪೋರ್ಸ್‌ ಗೆ ನಿಯುಕ್ತಿಗೊಳಿಸಿದ ಆದೇಶದ ಅನ್ವಯ ಖಚಿತಪಡಿಸಿಕೊಳ್ಳಬೇಕು ಎಂದೂ ಸಹ ನಿರ್ದೇಶಿಸಿತ್ತು.

 

ಅದೇ ರೀತಿ 2005ರ ಜುಲೈ 8ರಂದು ಒಳಾಡಳಿತ ಇಲಾಖೆಯು ಹೊರಡಿಸಿದ್ದ ಆದೇಶ (ಹೆಚ್‌ಡಿ 33 ಪಿಒಪಿ 2005) ಅನ್ವಯ ಒಟ್ಟು 754 ಅಧಿಕಾರಿ ಸಿಬ್ಬಂದಿಗಳ ಪೈಕಿ ಎಲ್ಲಾ ಅಧಿಕಾರಿಗಳಿಗೆ ನಿವೇಶನ ಹಂಚಲಾಗಿದೆಯೇ, ಹಂಚಿದ್ದಲ್ಲಿ ಯಾವ ಮಾನದಂಡಗಳನ್ನು ಅನ್ವಯಿಸಲಾಗಿದೆ, ನಿವೇಶನ ಹಂಚದಿದ್ದಲ್ಲಿ ಯಾವ ರೀತಿ ಕ್ರಮವಹಿಸಲಾಗಿದೆ ಮತ್ತು ಈ ಸಂಬಂಧ ಯಾವುದಾದರೂ ನ್ಯಾಯಾಲಯ ಪ್ರಕರಣ ಬಾಕಿ ಇದೆಯೇ, ಇದ್ದಲ್ಲಿ ಪ್ರಸ್ತುತ ಹಂತದ ಮಾಹಿತಿಯನ್ನು ಒದಗಿಸಬೇಕು ಎಂದು ಒಳಾಡಳಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.

 

 

ವೀರಪ್ಪನ್‌ ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಒಟ್ಟು 299 ನೌಕರರಲ್ಲಿ ಎಂ ರಾಜೇಂದ್ರ ಮತ್ತು ಎ ಟಿ ವೆಂಕಟೇಗೌಡ ಮತ್ತಿತರರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ (10982/2018, c/w 50155-167 dated 14.08.2024) ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಒಟ್ಟು 14 ಅರ್ಜಿದಾರರು ಹಾಗೂ ಕಾಳೇಗೌಡ ಮತ್ತು ಇತರರು ಹೈಕೋರ್ಟ್‌ನಲ್ಲಿ (ರಿಟ್‌ ಅರ್ಜಿ 31605/2024) ಪ್ರಕರಣದಲ್ಲಿ 10 ಅರ್ಜಿದಾರರು ಸೇರಿ ಒಟ್ಟಾರೆ 24 ಅಧಿಕಾರಿ ನೌಕರರ ಮಾಹಿತಿಯನ್ನು ಒದಗಿಸಿತ್ತು.

 

ಅರ್ಜಿದಾರರುಗಳಿಗೆ ಪ್ರೋತ್ಸಾಹ ಧನ 35.00 ಲಕ್ಷ ರು. ಹಾಗೂ 2010ರ ಸರ್ಕಾರದ ಆದೇಶದ ಅನ್ವಯ ನಿವೇಶನದ ಮಂಜೂರಾತಿಗಾಗಿ ಪ್ರತಿ ಚದರ ಅಡಿಗೆ 210 ರು ರ ನಂತೆ 63.00 ಲಕ್ಷ ಮತ್ತು ವಾರ್ಷಿಕ ವೇತನ ಬಡ್ತಿಗಾಗಿ 5.06 ಲಕ್ಷ ರು ಸೇರಿ ಒಟ್ಟಾರೆ 103.60 ಲಕ್ಷ ರು.ಗಳ ಅವಶ್ಯಕತೆ ಇದೆ ಎಂದು ಅಂದಾಜಿಸಿತ್ತು.

 

 

‘ವೀರಪ್ಪನ್‌ ವಿಶೇಷ ಕಾರ್ಯಾಚರಣೆಯಲ್ಲಿ ಸತತವಾಗಿ 15 ವರ್ಷಗಳಿಂದ ಭಾಗವಹಿಸಿದ್ದ ಹಾಗೂ ಎಸ್‌ಟಿಎಫ್‌ನಲ್ಲಿ ಎಲ್ಲಾ ಅಧಿಕಾರಿ ಸಿಬ್ಬಂದಿ ಸೇರಿ ಒಟ್ಟಾರೆ 299 ಮಂದಿ ಭಾಗವಹಿಸಿದ್ದಾರೆ. ಇವರೆಲ್ಲರಿಗೂ ಬಹುಮಾನ ನೀಡಲು 1993ರ ಸರ್ಕಾರ ಆದೇಶದ ಅನ್ವಯ ಅಂದಾಜಿಸಲಾಗುತ್ತಿದೆ,’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಭೆಗೆ ಮಾಹಿತಿ ಒದಗಿಸಿತ್ತು.

 

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ‘ಸತತ 15 ವರ್ಷಗಳಿಂದ ಕಾರ್ಯಾಚರಣೆಯಲ್ಲಿ ತೊಡಗಿದವರಿಗೆ ಬಹುಮಾನ ನೀಡಲು ಅವಕಾಶ ನೀಡಿರುವ ಬಗ್ಗೆ ಆದೇಶದಲ್ಲಿ ನಮೂದಿಸಿಲ್ಲ,’ ಎಂದು ಸಭೆಯ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts