ಬೆಂಗಳೂರು; ಹೆಬ್ಭಾಳ ಜಂಕ್ಷನ್‌ನಿಂದ ಪಶು ವೈದ್ಯಕೀಯ ಕಾಲೇಜುವರೆಗೂ ಸ್ಥಳಿಯ ವಾಹನ ದಟ್ಟಣೆಯನ್ನು ಹಾಗೂ ಎಲ್ಲಾ ವಾಹನಗಳಿಗೆ ಅನುವಾಗುವಂತೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೂರು ಪಥದ ಅವಳಿ ಕೆಳ ಮಾರ್ಗವನ್ನು ಕಟ್ ಅಂಡ್ ಕವರ್ ಮಾದರಿಯಲ್ಲಿ ನಿರ್ಮಿಸುವ ಪ್ರಸ್ತಾವನೆಯನ್ನು ಮುಂದೂಡಬೇಕು ಎಂದು ಆರ್ಥಿಕ ಇಲಾಖೆಯು ಸಲಹೆ ನೀಡಿದ್ದರ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ಬಿ ಸ್ಮೈಲ್ ಕಂಪನಿ ಮತ್ತು ಬಿಡಿಎ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಹೆಬ್ಭಾಳ ಜಂಕ್ಷನ್‌ನಿಂದ ಮೇಕ್ರಿ ವೃತ್ತದವರೆಗೂ ಸ್ಥಳೀಯ ವಾಹನ ದಟ್ಟಣೆಯನ್ನು ನಿರ್ವಹಿಸಲು 2,215.00 ಕೋಟಿ ರು ಅಂದಾಜು ಮೊತ್ತದ ಮೂರು ಪಥದ ಅವಳಿ ಸುರಂಗ ಮಾರ್ಗ ನಿರ್ಮಾಣ ಯೋಜನೆಯಿಂದಾಗಿ ಬಿಡಿಎ ಮೇಲೆ ಹಠಾತ್ ಆರ್ಥಿಕ ಹೊರೆ ಸೃಷ್ಟಿಯಾಗಲಿದೆ ಎಂದು ಆರ್ಥಿಕ ಇಲಾಖೆಯು ಎಚ್ಚರಿಸಿತ್ತು. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಇಲಾಖೆಯು ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ನೀಡಿರುವ ನಿರ್ದೇಶನವು ಮುನ್ನೆಲೆಗೆ ಬಂದಿದೆ.
2,215.00 ಕೋಟಿ ರು ಅಂದಾಜು ಮೊತ್ತದ ಮೂರು ಪಥದ ಅವಳಿ ಸುರಂಗ ಮಾರ್ಗ ನಿರ್ಮಾಣ ಮತ್ತು ಹೆಚ್ಚುವರಿ ಎಲಿವೇಟೆಡ್ ರಸ್ತೆ ಕಾಮಗಾರಿ ಯೋಜನೆ ಕುರಿತು ಬಿಡಿಎ ಸಲ್ಲಿಸಿದ್ದ ಪ್ರಸ್ತಾವದ ಕುರಿತು ಆರ್ಥಿಕ ಇಲಾಖೆಯು ಹಲವು ಅಂಶಗಳ ಕುರಿತು ಅವಲೋಕಿಸಿತ್ತು. ಇಡೀ ಪ್ರಸ್ತಾವನೆಯನ್ನು ಅಮೂಲಾಗ್ರವಾಗಿ ಒರೆಗೆ ಹಚ್ಚಿದ್ದ ಆರ್ಥಿಕ ಇಲಾಖೆಯು ಈ ಯೋಜನೆಯನ್ನು ಆರ್ಥಿಕ ಇಲಾಖೆಯು ಸಮರ್ಥಿಸಿರಲಿಲ್ಲ. ಬದಲಿಗೆ ಈ ಯೋಜನೆಯನ್ನು ಮುಂದೂಡಲು 2025ರ ನವೆಂಬರ್ 12ರಂದು ಸಲಹೆ ನೀಡಿತ್ತು.
ಸಲಹೆ ನೀಡಿದ 12 ದಿನಗಳ ನಂತರ ನಗರಾಭಿವೃದ್ಧಿ ಇಲಾಖೆಯು ಇದೀಗ ಮತ್ತೊಮ್ಮೆ ಅಭಿಪ್ರಾಯ ಪಡೆಯಲು ಮುಂದಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, 2025ರ ನವೆಂಬರ್ 26ರಂದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರು ಮತ್ತು ಬಿ ಸ್ಮೈಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ (ಕಡತ ಸಂಖ್ಯೆ; ನಅಇ 336 ಎಂಎನ್‌ವೈ 2025 (ಇ) ಬರೆದಿದ್ದಾರೆ.
ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಈ ಪತ್ರದಲ್ಲೇನಿದೆ?
ಹೆಬ್ಭಾಳ ಜಂಕ್ಷನ್‌ನಿಂದ ಪಶು ವೈದ್ಯಕೀಯ ಕಾಲೇಜುವರೆಗೂ ಸ್ಥಳಿಯ ವಾಹನ ದಟ್ಟಣೆಯನ್ನು ಹಾಗೂ ಎಲ್ಲಾ ವಾಹನಗಳಿಗೆ ಅನುವಾಗುವಂತೆ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೂರು ಪಥದ ಅವಳಿ ಕೆಳ ಮಾರ್ಗವನ್ನು ಕಟ್ ಅಂಡ್ ಕವರ್ ಮಾದರಿಯಲ್ಲಿ ನಿರ್ಮಿಸುವ ಪ್ರಸ್ತಾವನೆ ಕುರಿತು ಹಲವು ಅವಲೋಕನಗಳನ್ನು ಮಾಡಲಾಗಿದೆ. ಈ ಕುರಿತು ಸ್ಪಷ್ಟ ಅಭಿಪ್ರಾಯ, ಮಾಹಿತಿ ಮತ್ತು ಪೂರಕ ದಾಖಲೆಗಳೊಂದಿಗೆ ನೀಡಬೇಕು ಎಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ನಿರ್ದೇಶಿಸಿರುವುದು ತಿಳಿದು ಬಂದಿದೆ.

ಪ್ರಸ್ತಾಪಿತ ರಸ್ತೆಯನ್ನು ಭೂ ಮಟ್ಟದಲ್ಲಿ ಅಥವಾ ಎತ್ತರಿಸಿದ ರಸ್ತೆಯಾಗಿ ನಿರ್ಮಿಸುವ ಕುರಿತು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಅನುಮತಿಯನ್ನು ನಿರಾಕರಿಸಿದೆ. ಇದು ಒಟ್ಟು ಯೋಜನೆಯ ಹತ್ತನೇ ಒಂದು ಭಾಗದಷ್ಟು ವೆಚ್ಚವಾಗಲಿದೆ. ಈ ಯೋಜನೆಗೆ ವಿಶ್ವವಿದ್ಯಾಲಯವು ನಿರ್ಬಂಧ ವ್ಯಕ್ತಪಡಿಸಿರುವುದರಿಂದ ಇದು ಸಮರ್ಥನೀಯವಾಗಿಲ್ಲ ಎಂದು ಹೇಳಿತ್ತು.

ಆರ್ಥಿಕ ಇಲಾಖೆಯು ನೀಡಿದ್ದ ಈ ಅವಲೋಕನದ ಕುರಿತು ನಗರಾಭಿವೃದ್ಧಿ ಇಲಾಖೆಯು ಪೂರಕ ದಾಖಲೆಗಳೊಂದಿಗೆ ಮಾಹಿತಿ, ಸ್ಪಷ್ಟ ಅಭಿಪ್ರಾಯ ಬಯಸಿರುವುದು ಪತ್ರದಿಂದ ತಿಳಿದು ಬಂದಿದೆ.
2,215 ಕೋಟಿ ರೂಪಾಯಿ ಮೊತ್ತದ ಈ ಯೋಜನೆಗೆ, ಬಿಡಿಎಯು ತನ್ನ ಅಂತರಿಕ ನಿಧಿಯನ್ನೇ ಬದಲಾವಣೆ ಮಾಡಿಕೊಳ್ಳಬೇಕಿದೆ. ಹೀಗಾಗಿ ಇದು ಬಿಡಿಎ ಮೇಲೆ ಹಠಾತ್, ಬೃಹತ್ ಆರ್ಥಿಕ ಹೊರೆಯನ್ನು ಸೃಷ್ಟಿಸುತ್ತದೆ. ನಿವೇಶನಗಳ ಹರಾಜು, ಖಾಲಿ ನಿವೇಶನಗಳ ಹಂಚಿಕೆಗಾಗಿ ಸಂಗ್ರಹಿಸುವ ಠೇವಣಿ, ಫ್ಲಾಟ್, ವಿಲ್ಲಾಗಳಂತಹ ದೊಡ್ಡ ಪ್ರಮಾಣದ ಆಸ್ತಿಗಳ ಮಾರಾಟದಿಂದ ಬರಬಹುದಾದ ಆದಾಯದ ಮೇಲೆಯೇ ಅವಲಂಬಿತವಾಗಿದೆ.
ಮಾರುಕಟ್ಟೆಯ ಏರಿಳಿತಗಳು ಮತ್ತು ಕಾನೂನು ಪ್ರಕ್ರಿಯೆಗಳಲ್ಲಿನ ವಿಳಂಬದ ಪರಿಣಾಮವು, ಆದಾಯ ಕ್ರೋಢೀಕರಣದ ಮೇಲೆ ಬೀರಲಿವೆ. ಹೀಗಾಗಿ ಈ ಯೋಜನೆಯ ನಿಧಿಯು ದುರ್ಬಲವಾಗಿರಲಿದೆ ಎಂದು ಅಭಿಪ್ರಾಯಿಸಿತ್ತು.

ಅಲ್ಲದೇ ಇದೊಂದು ಹೆಚ್ಚಿನ ಸ್ಥಳಾವಕಾಶ ಅಗತ್ಯವಿರುವ ಯೋಜನೆಯಾಗಿದೆ. ಇದು ಪ್ರೇರಿತ ಬೇಡಿಕೆಯ ಮೂಲಕ ರಸ್ತೆ ದಟ್ಟಣೆಯನ್ನು ವೇಗಗೊಳಿಸುತ್ತದೆ. ಮತ್ತು ಸುಸ್ಥಿರತೆ ಮತ್ತು ಸಮಾನ ಚಲನಶೀಲತೆಯ ತತ್ವಗಳನ್ನು ಸಕ್ರಿಯವಾಗಿ ದುರ್ಬಲಗೊಳಿಸುತ್ತದೆ. ಆದ್ದರಿಂದ, ಪ್ರಸ್ತಾವನೆಯನ್ನು ಮುಂದೂಡಬಹುದು ಎಂದು ಸಲಹೆ ನೀಡಿದೆ.
ಆರ್ಥಿಕ ಇಲಾಖೆಯು ನೀಡಿದ್ದ ಈ ಸಲಹೆ ಕುರಿತು ಸ್ಪಷ್ಟ ಅಭಿಪ್ರಾಯ ಬಯಸಿದೆ.
10,000 ಕೋಟಿ ಆದಾಯ ಕ್ರೋಢೀಕರಣದ ಮಾಹಿತಿ ಒದಗಿಸಿ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಮೂರು ಪಥದ ಅವಳಿ ಸುರಂಗ ಮಾರ್ಗ ಹಾಗೂ ಇದಕ್ಕೆ ಪೂರಕವಾಗಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಬೇಕಾಗುವ ಹಣಕಾಸಿನ ಮೂಲಗಳ ಕುರಿತು ಆರ್ಥಿಕ ಇಲಾಖೆಗೆ ವಿವರಗಳನ್ನು ನೀಡಿತ್ತು. ಬಿಡಿಎ ವ್ಯಾಪ್ತಿಯಲ್ಲಿರುವ ಜಮೀನು, ವಾಸ ಯೋಗ್ಯ ನಿವೇಶನಗಳು ಮತ್ತು ಮೂಲೆ ನಿವೇಶನಗಳನ್ನು ಇ-ಹರಾಜು ಹಾಕಬಹುದು. ಇದು ಸಾಧ್ಯವಾದಲ್ಲಿ 2026ರ ಮಾರ್ಚ್ ಅಂತ್ಯಕ್ಕೆ 4,500 ಕೋಟಿ ರು ಆದಾಯ ಕ್ರೋಢೀಕರಿಸಬಹುದು ಎಂದು ಲೆಕ್ಕಾಚಾರ ಮಾಡಿತ್ತು.

ಡಾ ಶಿವರಾಮ ಕಾರಂತ ಬಡಾವಣೆಯಲ್ಲಿನ ನಿವೇಶನಗಳಿಗಾಗಿ ಅರ್ಜಿ ಆಹ್ವಾನಿಸಿದಲ್ಲಿ ಆಂತರಿಕ ಠೇವಣಿ ಮೂಲಕ 1,500 ಕೋಟಿ ರು., ಫ್ಲಾಟ್, ವಿಲ್ಲಾ ಮತ್ತು ನಾಗರಿಕ ಸೌಲಭ್ಯಗಳ ನಿವೇಶನಗಳ ಮಾರಾಟದಿಂದ 1,000 ಕೋಟಿ ರು, 38 (ಡಿ) ಅನುಷ್ಟಾನದಿಂದ 3,000 ಕೋಟಿ ಸೇರಿದಂತೆ ಒಟ್ಟಾರೆ 10,000 ಕೋಟಿ ರು ಆದಾಯ ಕ್ರೋಢೀಕರಣ ಮಾಡಬಹುದು ಎಂದು ಅಂದಾಜಿಸಿತ್ತು. ಈ ಕುರಿತೂ ಸ್ಪಷ್ಟ ಮಾಹಿತಿ ಒದಗಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆಯು ನಿರ್ದೇಶಿಸಿರುವುದು ಗೊತ್ತಾಗಿದೆ.
ಸುರಂಗ ಮತ್ತು ಎತ್ತರಿಸಿದ ರಸ್ತೆ ಯೋಜನೆಗಳು, ಸಾರ್ವಜನಿಕ ಸಾರಿಗೆ ಹೂಡಿಕೆ ಇಲ್ಲದೆ, ಬೇಡಿಕೆಯನ್ನು ಹೆಚ್ಚಿಸುತ್ತವೆ. ಅವು ತಾತ್ಕಾಲಿಕವಾಗಿ ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ಆದರೆ ಸುಧಾರಿತ ವೇಗವು, ಹೆಚ್ಚಿನ ಚಾಲಕರು ಮಾರ್ಗವನ್ನು ಬಳಸಲು ಪ್ರೋತ್ಸಾಹಿಸುತ್ತದೆ, ಇದರಿಂದಾಗಿ ಅಡಚಣೆಯು ಮತ್ತೆ ರೂಪುಗೊಳ್ಳುತ್ತದೆ. ಮತ್ತು ಕೆಲವು ವರ್ಷಗಳಲ್ಲಿ ದಟ್ಟಣೆ ಮತ್ತೆ ಮರುಕಳಿಸುತ್ತದೆ ಎಂದು ವಿವರಿಸಿದೆ.

ಟ್ರಾಫಿಕ್ ಸಿಗ್ನಲ್, ಹೆಬ್ಬಾಳದಲ್ಲಿ ಸುಧಾರಿತ ಫ್ಲೈಓವರ್ ಜಿಯೋ ಜ್ಯಾಮಿಟ್ರಿ ವ್ಯವಸ್ಥೆಗಳು ಅಥವಾ ಮೇಲ್ಮೈಯಲ್ಲಿ ಮೀಸಲಾದ ಹೈ-ಫ್ರೀಕ್ವೆನ್ಸಿ ಬಸ್‌ಗಳ ಕ್ಷಿಪ್ರ ಸಾರಿಗೆ ಲೇನ್‌ಗಳಂತಹ ಉನ್ನತ, ಕಡಿಮೆ-ವೆಚ್ಚದ ಮತ್ತು ಹೆಚ್ಚು ಸುಸ್ಥಿರ ಪರ್ಯಾಯಗಳ ಬಗ್ಗೆ ಯಾವುದೇ ದಾಖಲಿತ ವಿಶ್ಲೇಷಣೆ ಇಲ್ಲವೆಂದು ಹೇಳಿತ್ತು.
ಇದು ದುಬಾರಿ ಮತ್ತು ಸ್ಥಳಾವಕಾಶ ಅಗತ್ಯವಿರುವ ಯೋಜನೆಯಾಗಿದೆ. ಇದು ಪ್ರೇರಿತ ಬೇಡಿಕೆಯ ಮೂಲಕ ರಸ್ತೆ ದಟ್ಟಣೆಯನ್ನು ವೇಗಗೊಳಿಸುತ್ತದೆ. ಮತ್ತು ಸುಸ್ಥಿರತೆ ಮತ್ತು ಸಮಾನ ಚಲನಶೀಲತೆಯ ತತ್ವಗಳನ್ನು ಸಕ್ರಿಯವಾಗಿ ದುರ್ಬಲಗೊಳಿಸುತ್ತದೆ ಎಂದು ಅವಲೋಕಿಸಿತ್ತು.

ಈ ಬಗ್ಗೆಯೂ ನಗರಾಭಿವೃದ್ಧಿ ಇಲಾಖೆಯು ಹೆಚ್ಚಿನ ಮಾಹಿತಿಯನ್ನು ಬಯಸಿದೆ.
ಸುರಂಗ ಮಾರ್ಗ; ಯೋಜನೆಯೇ ದುಬಾರಿ, ಹಠಾತ್ ಬೃಹತ್ ಹೊರೆ, ಆರ್ಥಿಕ ಇಲಾಖೆ ಅಭಿಪ್ರಾಯ ಬದಿಗೊತ್ತಿದ್ದ ಸರ್ಕಾರ
ಆರ್ಥಿಕ ಇಲಾಖೆಯು ಮಾಡಿದ್ದ ಅವಲೋಕನಗಳ ಕುರಿತು ‘ದಿ ಫೈಲ್’, ದಾಖಲೆ ಸಹಿತ ವರದಿ ಪ್ರಕಟಿಸಿತ್ತು.









