ಬೆಂಗಳೂರು, ಹುಬ್ಬಳ್ಳಿ ಗಲಭೆ; ಗಡುವು ಮೀರಿದರೂ ಸ್ಥಾಪನೆಯಾಗದ ವಿಶೇಷ ನ್ಯಾಯಾಲಯ, ನಿರಾಸಕ್ತಿ?

ಬೆಂಗಳೂರು; ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದ್ದ ಫೇಸ್‌ಬುಕ್ ಪೋಸ್ಟ್‌ನಿಂದಾಗಿ ಕಳೆದ 5 ವರ್ಷಗಳ ಹಿಂದೆ ಬೆಂಗಳೂರು, ಹುಬ್ಬಳ್ಳಿಯಲ್ಲಿ ನಡೆದಿದ್ದ ಗಲಭೆಗಳಿಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ, 1967ರ ಅಡಿಯಲ್ಲಿ ಮೊಕದ್ದಮೆ ಹೂಡಿರುವ ಪ್ರಕರಣಗಳಲ್ಲಿ ರಾಜ್ಯ ಸರ್ಕಾರವು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಲ್ಲಿ ವಿಳಂಬ ಧೋರಣೆಯನ್ನು ಮುಂದುವರೆಸಿದೆ.

 

ಸರ್ಕಾರದ ಈ ವಿಳಂಬ ಧೋರಣೆಯು, ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಗಳೂ ಹೆಚ್ಚಾಗಿವೆ.
ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇದು ಭಾರತದ ಒಕ್ಕೂಟ ಮತ್ತು ಪ್ರತಿವಾದಿ ರಾಜ್ಯಕ್ಕೆ ಕೊನೆಯ ಅವಕಾಶವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿ ಎಚ್ಚರಿಕೆ ನೀಡಿತ್ತು. ಆದರೂ ಸಹ ಕೇಂದ್ರ ಮತ್ತು ರಾಜ್ಯ ಸರ್ಕಾರವು ಗಮನವನ್ನೇ ಹರಿಸಿಲ್ಲ.

 

ಕ್ರಿಮಿನಲ್ ಮೇಲ್ಮನವಿ ಸಂಖ್ಯೆ 183/2023 ಮತ್ತು 72/2023 ಕ್ಕೆ ಸಂಬಂಧಿಸಿದಂತೆ 2023ರ ಏಪ್ರಿಲ್‌ 20ರಂದು ಹೊರಡಿಸಿದ್ದ ಆದೇಶದ ಪ್ರಕಾರ, ಮೈಸೂರು, ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಮೂರು ಪ್ರತ್ಯೇಕ ನ್ಯಾಯಾಲಯಗಳನ್ನು 6 ತಿಂಗಳ ಒಳಗಾಗಿ ಸ್ಥಾಪಿಸಬೇಕಿತ್ತು. ಅಲ್ಲದೇ ತೀರ್ಪಿನಲ್ಲಿಯೂ ಸಹ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೂ ಸಹ ಈ ಶಿಫಾರಸ್ಸನ್ನು ರಾಜ್ಯ ಸರ್ಕಾರವು ಪಾಲಿಸಿಲ್ಲ. ಇದನ್ನು ಸುಪ್ರಿಂ ಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ.

 

ಹೀಗಾಗಿ ಸುಪ್ರಿಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗುವ ಮುನ್ನ ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯ ಕಾನೂನು ಅಭಿಪ್ರಾಯದ ಶಾಖೆಯು ಈ ಪ್ರಕರಣಗಳಲ್ಲಿ ಸರ್ಕಾರದ ಪರವಾಗಿ ವಕೀಲರು ಮತ್ತು ವ್ಯಾಜ್ಯ ನಿರ್ವಹಣಾಧಿಕಾರಿಯನ್ನು ನೇಮಿಸಲು ಮುಂದಾಗಿದೆ. ಈ ಸಂಬಂಧ ಇಲಾಖೆಯಲ್ಲಿ ಅಧಿಕಾರಿಗಳ ಮಧ್ಯೆ ಚರ್ಚೆಗಳು ಆರಂಭವಾಗಿವೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಸಚಿವ ಎಚ್‌ ಕೆ ಪಾಟೀಲ್‌ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಈ ಸಂಬಂಧ ಒಂದು ಸುತ್ತಿನ ಸಭೆಯನ್ನು ನಡೆಸಿರುವುದು ತಿಳಿದು ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಕಡತದ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

ಸುಪ್ರೀಂ ಕೋರ್ಟ್‌ ತೀರ್ಪಿನಲ್ಲೇನಿತ್ತು?

 

ಶಬ್ಬರ್ ಖಾನ್‌ ವಿರುದ್ಧದ ಕ್ರಿಮಿನಲ್ ಮೇಲ್ಮನವಿ ಅರ್ಜಿ (183/2023) (CRL NO 17214/2024)

 

 

 

ಮತ್ತು ಇನ್ನೊಂದು ಪ್ರಕರಣದಲ್ಲಿನ ಕ್ರಿಮಿನಲ್ ಮೇಲ್ಮನವಿ (72/2023) ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಅಂಗೀಕರಿಸಿತ್ತು.

 

 

ಈ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಮೈಸೂರು, ಬೆಳಗಾವಿ ಮತ್ತು ಕಲಬುರ್ಗಿಯಲ್ಲಿ ಮೂರು ಪ್ರತ್ಯೇಕ ನ್ಯಾಯಾಲಯಗಳನ್ನು ಸ್ಥಾಪಿಸಲು ಸೂಚಿಸಿತ್ತು.

 

 

ಅರ್ಜಿದಾರರ ಪರ ಹಿರಿಯ ವಕೀಲರು ಮಂಡಿಸಿದ ಹಿಂದಿನ ಸಲ್ಲಿಕೆಗಳನ್ನು ಸುಪ್ರಿಂ ಕೋರ್ಟ್‌ ಪರಿಗಣಿಸಿತ್ತು. ಈ ಪ್ರಕರಣವನ್ನು ವಿಲೇವಾರಿ ಮಾಡುವಲ್ಲಿ ಅತಿಯಾಗಿ ವಿಳಂಬ ಮಾಡಲಾಗುತ್ತಿದೆ ಎಂದು ಹಿರಿಯ ವಕೀಲರು ಸುಪ್ರೀಂ ಕೋರ್ಟ್‌ನ ಗಮನ ಸೆಳೆದಿದ್ದರು. ಹಿರಿಯ ವಕೀಲರ ಲಿಖಿತ ಹೇಳಿಕೆಯನ್ನು ಗಮನಿಸಿದ್ದ ಸುಪ್ರೀಂ ಕೋರ್ಟ್‌, ಕ್ರಿಮಿನಲ್ ಮೇಲ್ಮನವಿ (ಸಂಖ್ಯೆ 183/2023) ಅರ್ಜಿಯೊಂದಿಗೆ ಸಂಬಂಧಿಸಿದ ಕ್ರಿಮಿನಲ್ ಮೇಲ್ಮನವಿ (ಸಂಖ್ಯೆ 72/2023) ಅರ್ಜಿಯಲ್ಲಿ ರಲ್ಲಿ ಹೈಕೋರ್ಟ್ ಹೊರಡಿಸಿದ ನಿರ್ದೇಶನವನ್ನು ಸಾಧ್ಯವಾದಷ್ಟು ಬೇಗ ಪಾಲಿಸಬೇಕು ಎಂದು ಹೇಳಿತ್ತು.

 

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಬೇಕು. ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಂದ ಆದೇಶಗಳನ್ನು ಪಡೆದ ನಂತರ, ರಾಜ್ಯ ಸರ್ಕಾರ ಅಥವಾ ಎನ್‌ಐಎ ತನಿಖೆ ನಡೆಸುತ್ತಿರುವ ಯುಎಪಿಎ ಅಪರಾಧಗಳಿಗೆ ಪ್ರತ್ಯೇಕವಾಗಿ ಹೆಚ್ಚುವರಿ ಎನ್‌ಐಎ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಸಮನ್ವಯ ಸಾಧಿಸುತ್ತಾರೆ ಎಂಬುದನ್ನು ಗಮನಿಸುವುದು ಅನಿವಾರ್ಯವಲ್ಲ. ಇಂದಿನಿಂದ ಮೂರು ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಆದೇಶದಲ್ಲಿ ನಿರ್ದೇಶಿಸಿತ್ತು.

 

ಯುಎಪಿಎ, ಭಾರತೀಯ ಸ್ಫೋಟಕ ಕಾಯ್ದೆ ಮತ್ತು ವಿವಿಧ ರಾಜ್ಯಗಳಲ್ಲಿ ಇತರ ರೀತಿಯ ಕಾನೂನುಗಳ ಅಡಿಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ನೂರಾರು ವಿಚಾರಣೆಗಳು ಇವೆ. ಹೀಗಾಗಿ ಈ ಪ್ರಕರಣವೂ ಇದಕ್ಕೆ ಹೊರತಾಗಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಲಾಗಿರುವ ಪ್ರಕರಣಗಳು ಪ್ರಾಥಮಿಕವಾಗಿ ಭಾರತಾದ್ಯಂತ ವ್ಯಾಪಕ ಪರಿಣಾಮಗಳನ್ನು ಬೀರುವ ಘೋರ ಅಪರಾಧಗಳಿಗೆ ಸಂಬಂಧಿಸಿವೆ ಎಂದು ಪ್ರಕರಣದ ಗಂಭೀರತೆಯನ್ನು ಎತ್ತಿ ಹಿಡಿದಿತ್ತು.

 

 

ಪ್ರತಿಯೊಂದು ಪ್ರಕರಣವು ವಿಚಾರಣೆಗೆ ಒಳಪಡುವ ನೂರಾರು ಸಾಕ್ಷಿಗಳ ಪಟ್ಟಿಯನ್ನು ಹೊಂದಿರುವುದು ಸಾಮಾನ್ಯವಾಗಿ ಬಹಿರಂಗವಾಗಿ ಕಂಡುಬರುತ್ತದೆ. ಆದಾಗ್ಯೂ, ವಿಚಾರಣೆಗಳು ನಿಯಮಿತವಾಗಿ ನಡೆಯುತ್ತಿಲ್ಲ. ಏಕೆಂದರೆ ಅಧಿಕಾರಿಗಳು ಹಲವಾರು ಇತರ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳಲ್ಲಿ ನಿರತರಾಗಿರುತ್ತಾರೆ. ಹೊಸ ಕಾನೂನು ಜಾರಿಗೆ ಬಂದಾಗ ಅಥವಾ ಶೀಘ್ರದಲ್ಲೇ ಉದ್ಭವಿಸುವ ವಿಷಯಗಳ ನ್ಯಾಯಾಂಗ ಲೆಕ್ಕಪರಿಶೋಧನೆಯ ಅನುಪಸ್ಥಿತಿಯಲ್ಲಿ, ಘೋರ ಅಪರಾಧಗಳಿಗೆ ಸಂಬಂಧಿಸಿದ ವಿಚಾರಣೆಗಳು ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಮೇಲೆ ಅಗಾಧವಾದ ಹೊರೆಯನ್ನು ತಂದಿವೆ ಎಂದು ಹೇಳಿತ್ತು.

 

ವಿಚಾರಣಾಧೀನ ಕೈದಿಗಳು ಒಂದೆಡೆ ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯುತ್ತಿದ್ದರೆ, ಮತ್ತೊಂದೆಡೆ ವಿಚಾರಣೆ ಇನ್ನೂ ಆರಂಭವಾಗದೇ ಇರುವ ಪರಿಸ್ಥಿತಿಯಲ್ಲಿ, ನ್ಯಾಯಾಲಯಗಳ ಮುಂದೆ ಒಂದು ಸಂದಿಗ್ಧತೆ ಇದೆ. ಬಿಡುಗಡೆ ಅಥವಾ ಜಾಮೀನು ನಿರಾಕರಣೆಯು ಪರೋಕ್ಷವಾಗಿ ಸಂವಿಧಾನದ 21 ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಿವರಿಸಿತ್ತು.

 

2014ರಲ್ಲಿ ದಾಖಲಾಗಿದ್ದ ಒಂದು ಪ್ರಕರಣವು ಕಳೆದ 9 ವರ್ಷಗಳಿಂದಲೂ ಇತ್ಯರ್ಥಕ್ಕೆ ಬಾಕಿ ಇದೆ. ಅದೇ ರೀತಿ 2015ರಲ್ಲಿ 2 ಪ್ರಕರಣಗಳು 8 ವರ್ಷಗಳಿಂದ, 2016ರಲ್ಲಿ 2 ಪ್ರಕರಣಗಳು 7 ವರ್ಷಗಳಿಂದ, 2017ರಲ್ಲಿ 3 ಪ್ರಕರಣಗಳು 6 ವರ್ಷಗಳಿಂದ, 2018ರಲ್ಲಿ 3 ಪ್ರಕರಣಗಳು 5 ವರ್ಷಗಳಿಂದ , 2020ರಲ್ಲಿ 3 ಪ್ರಕರಣಗಳು 5 ವರ್ಷಗಳಿಂದ, 2021ರಲ್ಲಿ 8 ಪ್ರಕರಣಗಳು 2 ವರ್ಷಗಳಿಂದ, 2023ರಲ್ಲಿ 4 ಪ್ರಕರಣಗಳು 1 ವರ್ಷದಿಂದ ಇತ್ಯರ್ಥಕ್ಕೆ ಬಾಕಿ ಇದೆ ಎಂದು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತ್ತು.

 

 

 

‘ಅತ್ಯಂತ ಪರಿಣಾಮಕಾರಿ ಸಂಪನ್ಮೂಲವೆಂದರೆ ವಿಶೇಷ ಕಾನೂನುಗಳ ಅಡಿಯಲ್ಲಿ ವಿಚಾರಣೆಗಳನ್ನು ಇತರ ಸಿವಿಲ್ ಅಥವಾ ಕ್ರಿಮಿನಲ್ ಪ್ರಕರಣಗಳನ್ನು ನೀಡದೆಯೇ ವಹಿಸಬಹುದಾದ ಮೀಸಲಾದ ನ್ಯಾಯಾಲಯಗಳ ಸ್ಥಾಪನೆಯಾಗಿರಬಹುದು, ಆದರ್ಶಪ್ರಾಯವಾಗಿ ವಿಚಾರಣೆಯು ದಿನನಿತ್ಯದ ಆಧಾರದ ಮೇಲೆ ನಡೆಯಬೇಕು,’ ಎಂದು ಸೂಚಿಸಿತ್ತು.

 

ಅಗತ್ಯ ಮೂಲಸೌಕರ್ಯಗಳ ಜೊತೆಗೆ ಹೆಚ್ಚುವರಿ ನ್ಯಾಯಾಲಯಗಳ ರಚನೆಯು ಕಾರ್ಯಾಂಗದ ಕಾರ್ಯಕ್ಷೇತ್ರವಾಗಿದೆ. ಇದು ಅವರ ನೀತಿ ನಿರ್ಧಾರದ ಒಂದು ಭಾಗವಾಗಿದೆ. ರಾಜ್ಯದಲ್ಲಿ ವಿಚಾರಣೆಗಳು ಬಾಕಿ ಇರುವ ಬಗ್ಗೆ ಸಂಪೂರ್ಣ ದತ್ತಾಂಶಗಳನ್ನು ಪಡೆದುಕೊಂಡ ನಂತರ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಹೇಳಿತ್ತು.

 

‘ಆದ್ದರಿಂದ ಪ್ರತಿವಾದಿ-ಅಧಿಕಾರಿಗಳ ಪರವಾಗಿ ತೆಗೆದುಕೊಳ್ಳಲಾದ ಅಂತಹ ಮನವಿಯನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಅಸ್ತಿತ್ವದಲ್ಲಿರುವ ನ್ಯಾಯಾಲಯವನ್ನು ನೇಮಿಸುವುದು ಮತ್ತು/ಅಥವಾ ಎನ್‌ಐಎ ಕಾಯ್ದೆಯಡಿಯಲ್ಲಿ ವಿಶೇಷ ವಿಚಾರಣೆಗಳನ್ನು ಅಂತಹ ನಿಯೋಜಿತ ನ್ಯಾಯಾಲಯಗಳಿಗೆ ವಹಿಸುವುದು ನಿರ್ವಿವಾದವಾಗಿದೆ. ಜೈಲಿನಲ್ಲಿ ಕೊಳೆಯುತ್ತಿರುವ ನೂರಾರು ವಿಚಾರಣಾಧೀನ ಕೈದಿಗಳು, ಹಿರಿಯ ನಾಗರಿಕರು, ಅಂಚಿನಲ್ಲಿರುವ ವ್ಯಕ್ತಿಗಳು ಸೇರಿದಂತೆ ಇತರ ನ್ಯಾಯಾಲಯದ ಪ್ರಕರಣಗಳ ವೆಚ್ಚಕ್ಕೆ ದಾರಿಮಾಡಿಕೊಡುತ್ತದೆ,’ ಎಂದು ವಿವರಿಸಿತ್ತು.

 

 

ಎನ್‌ಐಎ ಕಾಯ್ದೆಯಡಿಯಲ್ಲಿ ಸಮಯಕ್ಕೆ ಅನುಗುಣವಾಗಿ ಅಥವಾ ತ್ವರಿತ ವಿಚಾರಣೆಗಳನ್ನು ನಡೆಸುವ ಉದ್ದೇಶಕ್ಕಾಗಿ ಪೂರ್ವಾಪೇಕ್ಷಿತ ಮೂಲಸೌಕರ್ಯದೊಂದಿಗೆ ವಿಶೇಷ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಈ ಸಂಬಂಧ ಪ್ರತಿವಾದಿ-ಅಧಿಕಾರಿಗಳು ವಿಫಲವಾದರೆ, ನ್ಯಾಯಾಲಯಗಳು ವಿಚಾರಣಾಧೀನದಲ್ಲಿರುವವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದನ್ನು ಬಿಟ್ಟು ಬೇರೆ ಪರ್ಯಾಯವನ್ನು ಹೊಂದಿರುವುದಿಲ್ಲ ಎಂದೂ ಎಚ್ಚರಿಕೆ ನೀಡಿತ್ತು.

 

‘ಅವರ ವಿಚಾರಣೆಗಳನ್ನು ಸಕಾಲಿಕವಾಗಿ ಮುಕ್ತಾಯಗೊಳಿಸಲು ಯಾವುದೇ ಪರಿಣಾಮಕಾರಿ ಕಾರ್ಯವಿಧಾನವಿಲ್ಲದಿದ್ದಾಗ, ಅಂತಹ ವ್ಯಕ್ತಿಗಳನ್ನು ಎಷ್ಟು ಸಮಯದವರೆಗೆ ಅನಿರ್ದಿಷ್ಟ ಬಂಧನದಲ್ಲಿಡಬಹುದು,’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತ್ತು.

 

ಪ್ರಕರಣಕ್ಕೆ ಸಂಬಂಧಿಸಿದಂತೆ 2025ರ ಮಾರ್ಚ್‌ 17ರಂದು ಹೊರಡಿಸಿದ್ದ ಆದೇಶದ ಕಂಡಿಕೆ 2ನ್ನು ಮಾರ್ಪಡಿಸುವುದು ಸೂಕ್ತವಾಗಿದೆ ಎಂದು ಸುಪ್ರಿಂ ಕೋರ್ಟ್‌ ಪರಿಗಣಿಸಿತ್ತು. ‘ಭಾರತ ಒಕ್ಕೂಟ ಮತ್ತು ಪ್ರತಿವಾದಿ-ರಾಜ್ಯವು ತಕ್ಷಣವೇ ವಿಶೇಷ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ವಿಫಲವಾದರೆ, ಅರ್ಜಿದಾರರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕೆಂಬ ಮನವಿಯನ್ನು ಮುಂದಿನ ವಿಚಾರಣೆಯ ದಿನಾಂಕದಂದು ಅರ್ಹತೆಯ ಆಧಾರದ ಮೇಲೆ ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸುತ್ತೇವೆ,’ ಎಂದೂ ಹೇಳಿತ್ತು.

 

ಈ ಎಲ್ಲಾ ಅವಲೋಕನಗಳ ಆಧಾರದ ಮೇಲೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಇದು ಭಾರತದ ಒಕ್ಕೂಟ ಮತ್ತು ಪ್ರತಿವಾದಿ ರಾಜ್ಯಕ್ಕೆ ಕೊನೆಯ ಅವಕಾಶವಾಗಿರುತ್ತದೆ ಎಂದು ಸ್ಪಷ್ಟಪಡಿಸಿತ್ತು.

 

ಈ ಸಂದರ್ಭದಲ್ಲಿ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ಐಶ್ವರ್ಯ ಭಾಟಿ ಮತ್ತು ದೆಹಲಿಯ ಎನ್ಸಿಟಿಯನ್ನು ಕ್ರಮವಾಗಿ ಪ್ರತಿನಿಧಿಸುತ್ತಿರುವ ಎಸ್ ಡಿ ಸಂಜಯ್ ನ್ಯಾಯಾಲಯದಲ್ಲಿ ಹಾಜರಿದ್ದರು. ಈ ವಿಷಯಗಳಲ್ಲಿ ಅಥವಾ 2025ರ ಅಕ್ಟೋಬರ್‍‌ 14ರಂದು ವಿಚಾರಣೆಗೆ ಬರಲಿರುವ ಇತರ ಸಂಬಂಧಿತ ವಿಷಯಗಳಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಬ್ಬರೂ ಜಂಟಿ ಸಭೆ ನಡೆಸಲಾಗುವುದು ಎಂದು ಹೇಳಲಾಗಿತ್ತು. ಮತ್ತು ವಿಶೇಷ ಕಾಯ್ದೆಗಳ ಅಡಿಯಲ್ಲಿ ತ್ವರಿತ ವಿಚಾರಣೆಗಳನ್ನು ನಡೆಸಲು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಸ್ತಾಪವನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದರು.

 

 

ಅಂತಹ ಸಭೆಯನ್ನು ಭಾರತ ಸರ್ಕಾರದ ಸಂಬಂಧಪಟ್ಟ ಕಾರ್ಯದರ್ಶಿ ಮಟ್ಟದಲ್ಲಿ ನಡೆಸಲಾಗುವುದು. ಮತ್ತು ದೆಹಲಿ ಪೊಲೀಸ್ ಆಯುಕ್ತರು ಸೇರಿದಂತೆ ವಿಶೇಷ ಪಡೆಗಳ ಮುಖ್ಯಸ್ಥರು ಭಾಗವಹಿಸುತ್ತಾರೆ. ಈ ಸಭೆಗೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್‌ಗಳಿಬ್ಬರನ್ನೂ ಆಹ್ವಾನಿಸಲಾಗುವುದು ಎಂದು ಹೇಳಿದ್ದರು.

 

 

ಏನಿದು ಪ್ರಕರಣ?

 

ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಲಾಗಿದೆ ಎಂದು ಹೇಳಲಾದ ಫೇಸ್‌ಬುಕ್ ಪೋಸ್ಟ್‌ನಿಂದಾಗಿ ಗಲಭೆ ನಡೆದಿತ್ತು. ವ್ಯಕ್ತಿಯೊಬ್ಬರು ಇಸ್ಲಾಂ ಧರ್ಮಕ್ಕೆ ಅವಮಾನವಾಗುವಂತಹ ಹೇಳಿಕೆಯೊಂದನ್ನು ತನ್ನ ಮೊಬೈಲ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ತಕ್ಷಣ ಅವರನ್ನು ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸುಮಾರು 100ಕ್ಕೂ ಹೆಚ್ಚು ಮಂದಿ ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆಯ ಎದುರು ಜಮಾಯಿಸಿದ್ದರು.

 

ಈ ಘಟನೆ ಸಂಬಂಧ ಪ್ರಕರಣ ದಾಖಲಾಗಿತ್ತು. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಮನವೊಲಿಸಿದ್ದರೂ ಹಿಂಜರಿಯದೇ ದಾಂಧಲೆ ನಡೆಸಿದ್ದರು. ಅಲ್ಲದೆ, ಪೊಲೀಸರ ಕರ್ತವಕ್ಕೆ ಅಡ್ಡಿ ಪಡಿಸಿದ್ದರು.ಚಪ್ಪಲಿ ಹಾಗೂ ಕಲ್ಲುಗಳಿಂದ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯ ಮೇಲೆ ಎಸೆದಿದ್ದರು.

 

ಬೆಂಗಳೂರಿನಲ್ಲಿ 2020ರಲ್ಲಿ ನಡೆದಿದ್ದ ಗಲಭೆ ಚಿತ್ರ

 

ಸರ್ಕಾರಿ ವಾಹನಗಳನ್ನು ಕಲ್ಲು ಹಾಗೂ ದೊಣ್ಣೆಗಳಿಂದ ಜಖಂಗೊಳಿಸಿದ್ದರು. ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಆರೋಪ ಸಂಬಂಧ ಸುಮಾರು 140ಕ್ಕೂ ಹೆಚ್ಚು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ವಹಿಸಿದ್ದರು.

 

 

 

ಆರೋಪಿಗಳು ಸಲ್ಲಿಸಿದ್ದ ಜಾಮೀನನ್ನು ಅರ್ಜಿಯನ್ನು ಎನ್‌ಐಎ ನ್ಯಾಯಾಲಯ ವಜಾಗೊಳಿಸಿತ್ತು, ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

 

2020ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಪ್ರಕರಣದಲ್ಲಿ ಆರೋಪಿಗಳಾಗಿದ್ದ ಶಬ್ಬಾರ್ ಖಾನ್ ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಜಾಮೀನು ನೀಡಲು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆಯ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು.

 

ಅದೇ ರೀತಿ ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದ ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶೋಹಿಬ್ ಸೇರಿದಂತೆ ಇತರೆ 40 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಟಿ.ವೆಂಕಟೇಶ್ ನಾಯಕ್ ಅವರಿದ್ದ ಪೀಠವು , ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದ ಎನ್‌ಐಎ ನ್ಯಾಯಾಲಯದ ಆದೇಶ ಊರ್ಜಿತಗೊಳಿಸಿತ್ತು.

 

ರಾಷ್ಟ್ರೀಯ ತನಿಖಾ ದಳದ ಹಲವು ಪ್ರಕರಣಗಳ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು ಹೈಕೋರ್ಟ್ ಮುಂದಾಗಿತ್ತು. ಹೊಸದಾಗಿ ವಿಶೇಷ ನ್ಯಾಯಾಲಯಗಳ ರಚನೆ ಮಾಡದಿದ್ದಲ್ಲಿ ಬೆಂಗಳೂರಿನ ವಿಶೇಷ ನ್ಯಾಯಾಲಯದ ಮೇಲೆ ಹೊರೆ ಹೆಚ್ಚಾಗಲಿದೆ. ಇದು ಸಂವಿಧಾನದ ಪರಿಚ್ಚೇದ 14( ಸಮಾನತೆ) ಮತ್ತು 21(ತ್ವರಿತ ವಿಚಾರಣೆ) ಹಕ್ಕುಗಳಿಗೆ ವಿರುದ್ಧವಾಗಲಿದೆ. ಆದ್ದರಿಂದ ಶೀಘ್ರದಲ್ಲಿ ಇತರೆ ವಿಶೇಷ ನ್ಯಾಯಾಲಯ ರಚನೆ ಮಾಡಬೇಕು ಎಂದು ನ್ಯಾಯಪೀಠ ಶಿಫಾರಸ್ಸು ಮಾಡಿತ್ತು.

 

ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆಯಡಿ ರಾಜ್ಯ ಸರ್ಕಾರ ಇಡೀ ರಾಜ್ಯಕ್ಕೆ ಬೆಂಗಳೂರು ನಗರದಲ್ಲಿ ಮಾತ್ರ ಒಂದು ವಿಶೇಷ ನ್ಯಾಯಾಲಯ ರಚನೆ ಮಾಡಿದೆ. ಎನ್‌ಐಎ ಪ್ರಕರಣಗಳನ್ನು ಪರಿಶೀಲಿಸಿದಾಗ ಸುಮಾರು 8 ರಿಂದ 9 ವರ್ಷಗಳ ಹಳೆಯ ಪ್ರಕರಣಗಳು ಬಾಕಿ ಉಳಿದಿವೆ.

 

ನ್ಯಾಯಾಂಗ ಪ್ರಸ್ತುತ ಸಾರ್ವಜನಿಕರ ನಂಬಿಕೆಯ ಅಂತಿಮ ಹಾಗೂ ಕೊನೆಯ ಕೇಂದ್ರ ಬಿಂದುವಾಗಿದೆ ಎಂದು ನ್ಯಾಯಪೀಠ ಹೇಳಿತ್ತು. ನ್ಯಾಯಾಂಗದ ಮೊರೆ ಹೋಗುವವರಿಗೆ ಸಕಾಲಕ್ಕೆ ನ್ಯಾಯವನ್ನು ಒದಗಿಸುವುದು ನ್ಯಾಯಾಲಯದ ಕರ್ತವ್ಯವಾಗಿದೆ. ಹಾಗಾಗಿ ಜನತೆಗೆ ಶೀಘ್ರ ಮತ್ತು ತ್ವರಿತ ನ್ಯಾಯಾಧಾನ ಮಾಡುವುದಕ್ಕೆ ರಾಜ್ಯದ ಇತರೆ ಕಂದಾಯ ವಿಭಾಗಗಳಾದ ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಶೇಷ ನ್ಯಾಯಾಲಯಗಳನ್ನು ರಚನೆ ಮಾಡುವುದಕ್ಕೆ ಇದು ಸೂಕ್ತ ಸಮಯವಾಗಿದೆ ಎಂದು ಪೀಠ ತಿಳಿಸಿತ್ತು.

 

ಹೊಸದಾಗಿ ಪ್ರಸ್ತಾಪಿಸಿರುವ ವಿಶೇಷ ನ್ಯಾಯಾಲಯಗಳಿಗೆ ಎನ್‌ಐಎ ಪ್ರಕರಣಗಳು ಕಡಿಮೆ ಇದ್ದಲ್ಲಿ ಇತರೆ ಪ್ರಕರಣಗಳನ್ನು ನಿಯೋಜಿಸಬಹುದಾಗಿದೆ. ಅಲ್ಲದೆ, ಬೆಂಗಳೂರಿನಲ್ಲಿರುವ ವಿಶೇಷ ನ್ಯಾಯಾಲಯ ಎನ್‌ಐಎ ಜತೆಗೆ ಇತರೆ ಪ್ರಕರಣಗಳನ್ನು ವಿಚಾರಣೆ ನಡೆಸಲು ನಿಯೋಜಿಸಲಾಗಿದೆ, ಇದರಿಂದ ಎನ್‌ಐಎ ಪ್ರಕರಣಗಳ ವಿಚಾರಣೆ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಹೇಳಿತ್ತು.

Your generous support will help us remain independent and work without fear.

Latest News

Related Posts