ಐಟಿಐಗಳಲ್ಲಿ ಭರ್ತಿಯಾಗದ ಹುದ್ದೆಗಳು; ವಿದ್ಯಾರ್ಥಿಗಳ ಪ್ರಗತಿಗೆ ತೊಡಕು, ಕಳಪೆ ಸಾಧನೆ ಬಹಿರಂಗ

ಬೆಂಗಳೂರು; ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಖಾಲಿ ಇರುವ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ವಿದ್ಯಾರ್ಥಿಗಳ ಪ್ರಗತಿಗೆ ಪ್ರಮುಖ ತೊಡಕಾಗಿದೆ ಎಂದು ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರವು ನಡೆಸಿರುವ ಅಧ್ಯಯನವು ಬಹಿರಂಗಗೊಳಿಸಿದೆ.

 

ಐಟಿಐಗಳಿಗೆ ಮಂಜೂರಾದ ತರಬೇತುದಾರರ ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಭರ್ತಿ ಮಾಡದಿರುವುದು ಗುಣಮಟ್ಟದ ಐಟಿಐ ತರಬೇತಿಯನ್ನು ಪಡೆಯುವ ಅವಕಾಶದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ. ಇದು, ವಿದ್ಯಾರ್ಥಿಗಳನ್ನು ಭವಿಷ್ಯದ ಉದ್ಯೋಗಗಳಿಗೆ ಸನ್ನದ್ಧಗೊಳಿಸುವ ಸಾಧ್ಯತೆಗಳನ್ನು ಮಸುಕುಗೊಳಿಸುತ್ತಿದೆ ಎಂದು ಹೇಳಿರುವ ಮೌಲ್ಯಮಾಪನ ವರದಿಯು ಐಟಿಐಗಳ ಕಾರ್ಯಕ್ಷಮತೆ ಮೇಲೆ ಬೆಳಕು ಚೆಲ್ಲಿದೆ.

 

ಕರ್ನಾಟಕದಲ್ಲಿ ಐಟಿಐ ಪದವೀಧರರಿಗೆ ನೀಡಿದ ವೃತ್ತಿಪರ ತಾಂತ್ರಿಕ ಶಿಕ್ಷಣ ಮತ್ತು ತರಬೇತಿಯು ಉದ್ಯೋಗದ ಮೇಲೆ ಬೀರಿದ ಪರಿಣಾಮಗಳ ಕುರಿತಾದ ಟ್ರೇಸರ್‍‌ ಅಧ್ಯಯನ ವರದಿಯನ್ನು ಮೌಲ್ಯಮಾಪನ ಪ್ರಾಧಿಕಾರವು 2025ರ ಜುಲೈನಲ್ಲಿ ವರದಿ ಸಲ್ಲಿಸಿದೆ. ಈ ವರದಿ ಕುರಿತು ಕೌಶಲ್ಯಾಭಿವೃದ್ಧಿ ಸಚಿವ ಡಾ ಶರಣ ಪ್ರಕಾಶ್‌ ಪಾಟೀಲ್‌ ಅವರೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಈ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಉದ್ಯಮ ವಲಯದ ಬೇಡಿಕೆಗೆ ಅನುಗುಣವಾಗಿ ಮಾನವ ಸಂಪನ್ಮೂಲ ಸಜ್ಜುಗೊಳಿಸಬೇಕಾದ ಐಟಿಐ ಕಾಲೇಜುಗಳಲ್ಲಿ ವೃತ್ತಿಪರ ತಾಂತ್ರಿಕ ಶಿಕ್ಷಣ ಮತ್ತು ತರಬೇತಿ (ಟಿವಿಇಟಿ) ಪಡೆದ ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣವು ರಾಜ್ಯದಲ್ಲಿ ಕಳಪೆಯಾಗಿದೆ. ಅನುತ್ತೀರ್ಣತೆಯು ಶೇಕಡಾ 40ರಷ್ಟಿದೆ. ಇದೇ ವೇಳೆ, ಐಟಿಐ ಕಾಲೇಜುಗಳ ಬಲವರ್ಧನೆಯ ದಿಸೆಯಲ್ಲಿ ತುರ್ತು ಗಮನಹರಿಸಬೇಕಾದ ಇನ್ನಿತರ ಸಮಸ್ಯೆಗಳೂ ಇವೆ ಎಂಬುದು “ಟಿ.ವಿ.ಇ.ಟಿ. ಉದ್ಯೋಗದ ಮೇಲೆ ಬೀರಿದ ಪರಿಣಾಮಗಳ ಕುರಿತ ಟ್ರೇಸರ್ ಅಧ್ಯಯನ”ದಿಂದ ಕಂಡುಬಂದಿದೆ.

 

ಕೈಗಾರಿಕಾ ತರಬೇತಿ ಸಂಸ್ಥೆಗಳು ಭಾರತದ ವೃತ್ತಿಪರ ಶಿಕ್ಷಣದ ಪ್ರಮುಖ ಘಟಕಗಳಾಗಿವೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯವು ಕೈಗಾರಿಕಾ ಮೌಲ್ಯವರ್ಧನೆಗಾಗಿ ಕೌಶಲಗಳನ್ನು ಬಲಪಡಿಸಲು ‘ಸ್ಟ್ರೈವ್’ ಎಂಬ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಜೊತೆಗೆ, ವಿಶ್ವಬ್ಯಾಂಕ್ ಕೂಡ ಐಟಿಐ ಮತ್ತು ವೃತ್ತಿಪರ ತರಬೇತಿಗಳನ್ನು ಬಲಪಡಿಸಲು ಭಾರತ ಸರ್ಕಾರಕ್ಕೆ ಸಹಾಯ ನೀಡುತ್ತಿದೆ.

 

ಇಷ್ಟಾದರೂ ಐಟಿಐ ಗಳು ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾಗಿ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸುವಲ್ಲಿ ಹಿಂದೆಬಿದ್ದಿದೆ. ಈ ಬಗ್ಗೆ ಜರೂರಾಗಿ ಸುಧಾರಣೆಗೆ ಕ್ರಮವಹಿಸಬೇಕಾದ ಅಗತ್ಯದ ಬಗ್ಗೆ ಮೈಸೂರಿನ ಗ್ರ್ಯಾಸ್ ರೂಟ್ ರೀಸರ್ಚ್ ಅಂಡ್ ಅಡ್ವೊಕೆಸಿ ಮೂವ್ ಮೆಂಟ್ (ಜಿ.ಆರ್.ಎ.ಎ.ಎಂ) ಮೂಲಕ ನಡೆಸಲಾದ ಮೌಲ್ಯಮಾಪನ ಅಧ್ಯಯನವು ಗಮನಸೆಳೆದಿದೆ.

 

 

ಶೇ 50ಕ್ಕೂ ಕಡಿಮೆ ವಿದ್ಯಾರ್ಥಿ ಪ್ರವೇಶಾತಿ

 

ಐಟಿಐಗಳು ವಿದ್ಯಾರ್ಥಿಗಳನ್ನು ಸೆಳೆಯಲು ಸರ್ಕಾರದ ನೀತಿಗಳು ನಿರೀಕ್ಷಿತ ಫಲ ನೀಡುತ್ತಿಲ್ಲ. ರಾಜ್ಯದ ನಾಲ್ಕು ವಿಭಾಗಗಳಲ್ಲಿ, 2020-21ನೇ ಸಾಲಿಗೆ ಅನುಮತಿಸಿದ್ದ 5,075 ಸೀಟುಗಳಿಗೆ, ಬೆಂಗಳೂರು ಮತ್ತು ಮೈಸೂರು ವಿಭಾಗಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಶೇಕಡಾ 50ಕ್ಕಿಂತ ಕಡಿಮೆ ಇತ್ತು. ಹುಬ್ಬಳ್ಳಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಈ ಶೇಕಡಾವಾರು ಪ್ರಮಾಣವು ಕ್ರಮವಾಗಿ ಶೇಕಡಾ 79.05 ಹಾಗೂ ಶೇಕಡಾ 66.54ರಷ್ಟಿದೆ. ರಾಜ್ಯದ ಒಟ್ಟಾರೆ ಸನ್ನಿವೇಶ ಸಾಕಷ್ಟು ಸುಧಾರಣೆಯಾಗಬೇಕು ಎಂಬುದು ಕಂಡುಬಂದಿದೆ.

 

 

 

ಐಟಿಐ ವ್ಯಾಸಂಗ ಮಾಡುವವರಿಗೆ ಅಪ್ರೆಂಟಿಸ್ ಶಿಪ್ ಮೂಲಕ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕು ಎಂಬುದು ಶಿಕ್ಷಣ ನೀತಿಯ ಪ್ರಮುಖ ಆಶಯವಾಗಿದೆ. ಆದರೆ, ವಾಸ್ತವ ಪರಿಸ್ಥಿತಿಯು ಇದಕ್ಕೆ ವ್ಯತಿರಿಕ್ತವಾಗಿದೆ. ಐಟಿಐಗೆ ಸೇರಿದ ಶೇಕಡಾ 20ರಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಅಪ್ರೆಂಟಿಸ್ ಶಿಪ್ ಅವಕಾಶಗಳ ಕುರಿತ ಮಾಹಿತಿ ಇದೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅರಿವಿಲ್ಲದಿರುವುದು ಸ್ಪಷ್ಟವಾಗಿ ಕಣ್ಣಿಗೆ ರಾಚುತ್ತದೆ ಎಂಬುದನ್ನು ಅಧ್ಯಯನ ದೃಢಪಡಿಸಿದೆ.

 

ಇನ್ನು, ಪ್ರಸ್ತುತ ಸಂದರ್ಭದಲ್ಲಿ ಉದ್ಯೋಗ ಸನ್ನದ್ಧತೆಗೆ ಪೂರಕವಾಗಿ ವಿದ್ಯಾರ್ಥಿಗಳು ಐಟಿ (ಮಾಹಿತಿ ತಂತ್ರಜ್ಞಾನ) ಕೌಶಲಗಳನ್ನು ಹೊಂದಿರುವುದು ಅವಶ್ಯಕ. ಆದರೆ, ಹೆಚ್ಚಿನ ವಿದ್ಯಾರ್ಥಿಗಳು ಐಟಿ ಕೌಶಲಗಳನ್ನು ಹೊಂದಿರುವುದಿಲ್ಲ ಎಂಬುದೂ ಕಂಡುಬಂದಿದೆ.

 

ಸಿ.ವಿ. ಸಿದ್ಧಪಡಿಸುವಿಕೆ, ಎಕ್ಸೆಲ್ ಇತ್ಯಾದಿಗಳ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದಿರುವುದಿಲ್ಲ ಎಂಬ ಬಗ್ಗೆ ತಜ್ಞರು ಗಮನ ಸೆಳೆದಿದ್ದಾರೆ.

 

ಭರ್ತಿಯಾಗದ ಖಾಲಿ ಹುದ್ದೆಗಳು

 

ಸರ್ಕಾರದ ಹಲವು ಇಲಾಖೆಗಳಲ್ಲಿ ಕಂಡುಬರುವಂತೆ ಐಟಿಐ ನಲ್ಲೂ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಭರ್ತಿಯಾಗದೇ ಇರುವುದು ವಿದ್ಯಾರ್ಥಿಗಳ ಪ್ರಗತಿಗೆ ಪ್ರಮುಖ ತೊಡಕಾಗಿದೆ. ಐಟಿಐಗಳಿಗೆ ಮಂಜೂರಾದ ತರಬೇತುದಾರರ ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಭರ್ತಿ ಮಾಡದಿರುವುದು ಗುಣಮಟ್ಟದ ಐಟಿಐ ತರಬೇತಿಯನ್ನು ಪಡೆಯುವ ಅವಕಾಶದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತಿದೆ . ಇದು, ವಿದ್ಯಾರ್ಥಿಗಳನ್ನು ಭವಿಷ್ಯದ ಉದ್ಯೋಗಗಳಿಗೆ ಸನ್ನದ್ಧಗೊಳಿಸುವ ಸಾಧ್ಯತೆಗಳನ್ನು ಮಸುಕುಗೊಳಿಸುತ್ತಿದೆ.

 

ರಾಜ್ಯದ ಐಟಿಐಗಳಲ್ಲಿ 2024ರ ಜನವರಿ 31ರ  ಪ್ರಕಾರ  ಖಾಲಿ ಇರುವ ಮಂಜೂರಾತಿ ಹುದ್ದೆಗಳ ಪ್ರಮಾಣವು ಶೇಕಡಾ 46.26ರಷ್ಟಿದೆ. ‘ವೃಂದ-ಎ’ದಲ್ಲಿ ಶೇಕಡಾ 52.73ರಷ್ಟು ಉಪ ನಿರ್ದೇಶಕರು (ತರಬೇತಿ) ಪ್ರಿನ್ಸಿಪಲ್ ಗ್ರೇಡ್-1 ಸ್ಥಾನದ ಹುದ್ದೆಗಳು ಖಾಲಿ ಇವೆ.

 

 

‘ವೃಂದ-ಬಿ’ಯಲ್ಲಿ ಪ್ರಿನ್ಸಿಪಲ್ ಗ್ರೇಡ್-2/ವೈಸ್ ಪ್ರಿನ್ಸಿಪಲ್/ ಸಹಾಯಕ ನಿರ್ದೇಶಕ (ತರಬೇತಿ)/ಸಹಾಯಕ ಅಪ್ರೆಂಟಿಸ್ ಶಿಪ್ ಸಲಹೆಗಾರರ ಹುದ್ದೆಗಳಲ್ಲಿ ಶೇಕಡಾ 48.48ರಷ್ಟು ಖಾಲಿ ಇವೆ. ‘ವೃಂದ-ಸಿ’ ದಲ್ಲಿ ಶೇಕಡಾ 45.83ರಷ್ಟು ಹಾಗೂ ಟೈಪಿಸ್ಟ್ ಹುದ್ದೆಗಳಲ್ಲಿ ಶೇಕಡಾ 90.30ರಷ್ಟು ಖಾಲಿ ಉಳಿದಿವೆ. ‘ವೃಂದ-ಡಿ’ ದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದರಿಂದ ಕಾರ್ಯಾಗಾರದ ಅಟೆಂಡರ್, ಜಮೇದಾರ್/ ಸಹಾಯಕ ಸಿಬ್ಬಂದಿಯಲ್ಲಿ ತೀವ್ರ ಕೊರತೆ ಇದೆ ಎಂಬುದು ಅಂಕಿಅಂಶಗಳಿಂದ ತಿಳಿಯುತ್ತದೆ.

 

 

ಇನ್ನು, ತರಬೇತಿಯ ಭಾಗವಾಗಿ ಶಿಷ್ಯವೃತ್ತಿ ಸೌಲಭ್ಯ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯೂ ತೃಪ್ತಿಕರ ಮಟ್ಟದಲ್ಲಿಲ್ಲ. ಎಲ್ಲಾ ನಾಲ್ಕು ವಿಭಾಗಗಳಲ್ಲಿ (ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ) ಧನಸಹಾಯ ಪಡೆವ ಐಟಿಐ ಹಾಗೂ ಧನಸಹಾಯ ಪಡೆಯದ ಐಟಿಐ (ಪ್ರಾಜೆಕ್ಟ್ ಐಟಿಐ, ನಾನ್-ಪ್ರಾಜೆಕ್ಟ್ ಐಟಿಐ) ಇವೆರಡನ್ನೂ ಗಣನೆಗೆ ತೆಗೆದುಕೊಂಡರೆ ಶಿಷ್ಯ ವೃತ್ತಿ ಮಾನ್ಯತೆ ಪ್ರಮಾಣವು ಶೇಕಡಾ 20ಕ್ಕಿಂತ ಕಡಿಮೆ ಇದೆ.

 

ಬಹುಪಾಲು ವಿದ್ಯಾರ್ಥಿಗಳಿಗೆ, ಅಂದರೆ, ಶೇಕಡಾ 45ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಶಿಷ್ಯವೃತ್ತಿ ಕಾರ್ಯಕ್ರಮದ ಬಗ್ಗೆ ಮಾಹಿತಿಯೇ ಇರಲಿಲ್ಲ. ಉತ್ತೀರ್ಣರಾದ ನಂತರ ಶಿಷ್ಯವೃತ್ತಿ ತರಬೇತಿ ಯೋಜನೆ ಮುಂದುವರಿಸುವ ಅವಕಾಶ ಶೇಕಡಾ 1ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಾಗಿದೆ. ಶಿಷ್ಯವೃತ್ತಿ ಪಡೆದವರಲ್ಲಿ ಗ್ರಾಮೀಣ ಭಾಗದ ಶೇಕಡಾ 39ರಷ್ಟು ಹಾಗೂ ನಗರ ಐಟಿಐ ಕಾಲೇಜುಗಳ ಶೇಕಡಾ 50ರಷ್ಟು ವಿದ್ಯಾರ್ಥಿಗಳು ತರಬೇತಿಯಿಂದಾಗಿ ತಮಗೆ ಶಾಶ್ವತ/ತಾತ್ಕಾಲಿಕ ಉದ್ಯೋಗ ಪಡೆಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರೂ ಗ್ರಂಥಾಲಯ ಸೌಲಭ್ಯ ಇನ್ನೂ ಉತ್ತಮಗೊಳ್ಳಬೇಕು ಎಂದಿದ್ದಾರೆ.

 

 

ಐಟಿಐ ಕಾಲೇಜುಗಳು ಉದ್ದೇಶಿತ ಗುರಿ ಸಾಧಿಸುವಲ್ಲಿ ಉದ್ಯೋಗಕೋಶ (ಪ್ಲೇಸ್ ಮೆಂಟ್) ಗಳ ಪಾತ್ರ ಮಹತ್ವದ್ದು. ಆದರೆ, ಅಧ್ಯಯನದ ವೇಳೆ ಪ್ರತಿಕ್ರಿಯಿಸಿದವರ ಪೈಕಿ ಶೇಕಡಾ 35ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಮಾತ್ರ ತಾವು ಓದಿದ ಐಟಿಐ ಕಾಲೇಜಿನಲ್ಲಿ ಉದ್ಯೋಗಕೋಶ ಇತ್ತು ಎಂದಿದ್ದಾರೆ.

 

 

ಬೆಂಗಳೂರು, ಮೈಸೂರು ವಿಭಾಗಗಳಿಗೆ ಹೋಲಿಸಿದರೆ ಹುಬ್ಬಳ್ಳಿ, ಕಲಬುರಗಿ ವಿಭಾಗಗಳಲ್ಲಿ ಉದ್ಯೋಗ ಕೋಶಗಳ ಸಂಖ್ಯೆ ಕಡಿಮೆ ಇದೆ. ಸ್ವಉದ್ಯೋಗ ಮಾರ್ಗದರ್ಶನ ನೀಡುವಲ್ಲಿಯೂ ಇವುಗಳಿಂದ ಹೆಚ್ಚಿನ ಪ್ರಯೋಜನವಾಗಿಲ್ಲ ಎಂಬುದು 2020-21ನೇ ಸಾಲಿನಲ್ಲಿ ಪ್ರವೇಶ ಪಡೆದ ಅಭ್ಯರ್ಥಿಗಳ ಪ್ರತಿಕ್ರಿಯೆಗಳಿಂದ ತಿಳಿದುಬಂದಿದೆ.

 

 

ಅದೇ 2020-21ರ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶ ಪಡೆದು ಐಟಿಐ ಪೂರೈಸಿದವರ ಪೈಕಿ ಶೇಕಡಾ 18ರಷ್ಟು ಪುರುಷ ಅಭ್ಯರ್ಥಿಗಳು ಹಾಗೂ ಶೇಕಡಾ 38ರಷ್ಟು ಮಹಿಳೆಯರು ನಿರುದ್ಯೋಗಿಗಳಾಗಿರುವುದು ಕಂಡುಬಂದಿದೆ.

 

ಉದ್ಯೋಗರಹಿತರಲ್ಲಿ ಉಡುಪು ತಯಾರಿಕೆ, ಸಿವಿಲ್ ಡ್ರ್ಯಾಫ್ಟ್ಸ್ ಮ್ಯಾನ್ ಹಾಗೂ ಮರಗೆಲಸದ ಕೋರ್ಸ್ ಗಳ ತರಬೇತಿ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಐಟಿಐ ವ್ಯಾಸಂಗವು ಉದ್ಯೋಗ ಪಡೆಯಲು ಸಹಾಯಕವಾಗಿದ್ದರೂ, ಅಧ್ಯಯನ ನಡೆಸಿದ ಕ್ಷೇತ್ರದಲ್ಲಿ ಉದ್ಯೋಗ ಲಭ್ಯತೆ ಕಷ್ಟಕರವೆಂಬ ಬಗ್ಗೆ ಅಧ್ಯಯನವು ಬೆರಳು ಮಾಡುತ್ತದೆ.

 

ಐಟಿಐ ಪದವೀಧರರು, ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಸೇರಿದವರು ವೃತ್ತಿ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲೂ ಹಿಂದೆ ಬಿದ್ದಿದ್ದಾರೆ. ಧನಸಹಾಯ ಹೊಂದಿದ ಐಟಿಐಗಳಲ್ಲಿ ಶೇಕಡಾ 24ರಷ್ಟು ಹಾಗೂ ಧನಸಹಾಯ ಹೊಂದಿರದ ಐಟಿಐಗಳಲ್ಲಿ ಶೇಕಡಾ 22ರಷ್ಟು ವಿದ್ಯಾರ್ಥಿಗಳು ಮಾತ್ರ ಉದ್ಯೋಗಾವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸೀಮಿತ ಉದ್ಯೋಗ ಲಭ್ಯತೆ (29%), ಕ್ಷೇತ್ರ-ಸಂಬಂಧಿತ ಉದ್ಯೋಗಗಳ ಕೊರತೆ (25%) ಮತ್ತು ಕೌಟುಂಬಿಕ ಜವಾಬ್ದಾರಿಗಳು (20%) ನಿರುದ್ಯೋಗಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯ ದಾಖಲಿಸಿದ್ದಾರೆ.

 

ಐಟಿಐಗಳನ್ನು ಸೃದೃಢಗೊಳಿಸುವಲ್ಲಿ ಉದ್ದಿಮೆಗಳೊಂದಿಗೆ ಅವು ಹೊಂದಿರುವ ಸಂಪರ್ಕವು ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ, ರಾಜ್ಯದಲ್ಲಿ ವಿವಿಧ ಉದ್ಯಮಗಳ ಬಹುಪಾಲು ಪ್ರತಿನಿಧಿಗಳು ಅಭ್ಯರ್ಥಿಗಳನ್ನು ನೇಮಿಸಿಕೊಳ್ಳುವ ಏಕೈಕ ಉದ್ದೇಶದಿಂದ ಐಟಿಐ ಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಬೆಂಗಳೂರು ವಿಭಾಗ ಹೊರತುಪಡಿಸಿ ಬೇರೆಡೆಗಳಲ್ಲಿ ವಿದ್ಯಾರ್ಥಿಗಳ ತರಬೇತಿ, ಬೋಧನೆ ಅಥವಾ ಸಮಾಲೋಚನೆಯಲ್ಲಿ ತೊಡಗಿಸಿಕೊಳ್ಳಲು ಉದ್ಯಮ ಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ ಎಂಬುದು ವ್ಯಕ್ತವಾಗಿದೆ.

 

ಅಲ್ಲದೆ, ಕಂಪನಿಗಳು ಉದ್ಯೋಗ ಪ್ರಕ್ರಿಯೆಗಳಿಗಾಗಿ ಜಿಲ್ಲಾಮಟ್ಟದ ಹಾಗೂ ಹೆಸರಾದ ಐಟಿಐಗಳಿಗೆ ಮಾತ್ರ ಆದ್ಯತೆ ನೀಡುವ ಪ್ರವೃತ್ತಿಯೂ ಕಂಡುಬಂದಿದೆ. ಬಹಳಷ್ಟು ಐಟಿಐಗಳ ಸಮೀಪದಲ್ಲಿ ಕೈಗಾರಿಕಾ ನೆಲೆ ಇಲ್ಲದಿರುವುದು ಉದ್ಯೋಗಗಳಿಗೆ ನಿರೀಕ್ಷಿತ ಬೇಡಿಕೆ ಇಲ್ಲದಿರಲು ಕಾರಣವಾಗಿದೆ. ಕಡಿಮೆ ಸಂಖ್ಯೆಯ ಟ್ರೇಡ್/ ಕೋರ್ಸುಗಳನ್ನು ಹೊಂದಿರುವ ಸಣ್ಣ ಐಟಿಐಗಳು ಉದ್ಯೋಗ ನಿಯೋಜನೆಗಾಗಿ ಕಂಪನಿಗಳನ್ನು ಆಕರ್ಷಿಸಲು ಹೆಣಗಾಡುತ್ತಿವೆ. ಸಿಬ್ಬಂದಿ ಕೊರತೆಯಿಂದಾಗಿ ಹಲವು ಐಟಿಐಗಳಲ್ಲಿ ಉದ್ಯೋಗ ನಿಯೋಜನಾ ಕೋಶವೇ ಇಲ್ಲದಿರುವುದು ಸಮಸ್ಯೆಯನ್ನು ತೀವ್ರಗೊಳಿಸಿದೆ ಎಂಬ ಅಂಶವನ್ನು ಅಧ್ಯಯನ ವರದಿಯಲ್ಲಿ ವಿವರಿಸಲಾಗಿದೆ.

 

ಕಡಿಮೆ ವೇತನ

 

ಉದ್ಯೋಗ ಪಡೆದವರಲ್ಲಿ, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ತಮ್ಮ ಮೊದಲ ಉದ್ಯೋಗದಲ್ಲಿ ಪಡೆದ ಸರಾಸರಿ ಮಾಸಿಕ ವೇತನ ರೂ 13,974 ರೂಪಾಯಿ ಆಗಿದ್ದರೆ, ಪ್ರಸ್ತುತ ಅದು ರೂ 16,693 ಇದೆ. ನಗರ ಪ್ರದೇಶದ ಐಟಿಐ ವಿದ್ಯಾರ್ಥಿಗಳ ವೇತನವೂ ಸರಿಸುಮಾರು ಇಷ್ಟೇ ಇದ್ದು, ಕ್ರಮವಾಗಿ ರೂ 13,315 ಹಾಗೂ ರೂ 15,018 ಆಗಿದೆ. ಇದು ಕುಶಲ ಕಾರ್ಮಿಕರಿಗೆ ನೀಡಬಹುದಾದ ವೇತನದ ಕನಿಷ್ಠ ಮಾನದಂಡಗಳಿಗಿಂತ ಕಡಿಮೆ ಇದೆ ಎಂಬುದು ಕಂಡುಬಂದಿದೆ.

 

ನೇಮಕವಾಗದ ಉದ್ಯೋಗ ಮಾರ್ಗದರ್ಶಕರು

 

ಐಟಿಐ ಸಂಸ್ಥೆಗಳ ಸುಧಾರಣೆಗಾಗಿ ಉದ್ಯೋಗ ನಿಯೋಜನೆ ಕೇಂದ್ರಗಳಿಗೆ ಉದ್ಯೋಗ ಮಾರ್ಗದರ್ಶಕರನ್ನು ನೇಮಿಸಬೇಕು ಎಂದು ವರದಿ ಹೇಳಿದೆ. ಅವುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಪ್ರವೃತ್ತವಾಗುವುದನ್ನು ಖಾತರಿಪಡಿಸಿಕೊಳ್ಳಬೇಕು; ವಿದ್ಯಾರ್ಥಿಗಳಿಗೆ ಸತತ ಹಾಗೂ ವಿಶ್ವಾಸಾರ್ಹವಾದ ಉದ್ಯೋಗ ನಿಯೋಜನೆ ಬೆಂಬಲ ಒದಗಿಸಬೇಕು; ಸ್ಥಳೀಯ ಉದ್ದಿಮೆಗಳೊಂದಿಗೆ ಐಟಿಐಗಳ ಪಾಲುದಾರಿಕೆಯನ್ನು ಇನ್ನಷ್ಟು ಸರಳ ಹಾಗೂ ವಿಧ್ಯುಕ್ತಗೊಳಿಸಿ ಐಟಿಐ ಹಾಗೂ ಉದ್ಯಮದ ಸಂಪರ್ಕಗಳನ್ನು ಬಲಪಡಿಸಬೇಕು ಎಂದು ಅಭಿಪ್ರಾಯಪಡಲಾಗಿದೆ.

 

ಗುಣಮಟ್ಟದ ತರಬೇತಿಗಾಗಿ ಜೆಒಟಿಯಂತಹ ಹುದ್ದೆಗಳು ನಿರ್ಣಾಯಕ. ಆದ್ಯತೆಯ ಮೇರೆಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು ಮುಖ್ಯ. ಹುದ್ದೆಗಳನ್ನು ಶಾಶ್ವತವಾಗಿ ಭರ್ತಿ ಮಾಡುವವರೆಗೆ ತರಬೇತಿ ಫೆಲೋಶಿಪ್ ನಂತಹ ಪರ್ಯಾಯ ವಿಧಾನಗಳನ್ನು ಪ್ರೋತ್ಸಾಹಕ ಕ್ರಮಗಳೊಂದಿಗೆ ಪರಿಚಯಿಸುವ ಬಗ್ಗೆ ಪರಿಶೀಲಿಸಬೇಕು.

 

ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಎರಡು ವರ್ಷಗಳ ಅವಧಿಗೆ ಫೆಲೊಗಳಾಗಿ ತೆಗೆದುಕೊಳ್ಳುವ ಬಗ್ಗೆ ಸಮಾಲೋಚನೆ ನಡೆಸಬೇಕು. ಇದು ಸಂಸ್ಥೆಗಳಿಗೆ ನವೀಕರಿಸಿದ ಕೌಶಲಗಳು ಹಾಗೂ ಆಲೋಚನೆಗಳನ್ನು ತರುವ ಸಾಧ್ಯತೆ ಇದೆ. ಎನ್ ಸಿ ಸಿ/ ಎನ್ ಎಸ್ ಎಸ್ ಸ್ವಯಂಸೇವಕರಿಗೆ ನೀಡುವ ರೀತಿಯಲ್ಲೇ ಫೆಲೊಗಳಿಗೂ ಕ್ರೆಡಿಟ್ ಗಳು/ಕೋಟಾಗಳೊಂದಿಗೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಡುವ ಬಗ್ಗೆ ಚರ್ಚಿಸಬೇಕು ಎಂಬ ಸಲಹೆಗಳನ್ನು ತಜ್ಞರು ಪ್ರಸ್ತಾಪಿಸಿದ್ದಾರೆ.

Your generous support will help us remain independent and work without fear.

Latest News

Related Posts