ಬೆಂಗಳೂರು; ಯಾರದ್ದೋ ಕಟ್ಟಡ, ಯಾರದ್ದೋ ಪರವಾನಿಗೆ, ಇನ್ಯಾರದ್ದೋ ಬ್ಲೂ ಪ್ರಿಂಟ್, ಮತ್ಯಾರದ್ದೋ ಹೆಸರು, ಬೋಗಸ್ ದಾಖಲೆಗಳನ್ನು ಬಳಸಿ ಸಿಎಲ್ 7 ಸನ್ನದುಗಳನ್ನು ಮಂಜೂರು ಮಾಡುತ್ತಿರುವ ಪ್ರಕರಣಗಳು, ಅಬಕಾರಿ ಇಲಾಖೆಯ ಭ್ರಷ್ಟಾಚಾರದ ಹತ್ತಾರು ಮುಖಗಳು ಮತ್ತೊಮ್ಮೆ ಅನಾವರಣಗೊಂಡಿವೆ.
ಅಬಕಾರಿ ಇಲಾಖೆಯಲ್ಲಿ ಸಿಎಲ್ 7 ಸನ್ನದುಗಳ ಮಂಜೂರಾತಿಯಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಹಲವು ಬಾರಿ ಚರ್ಚೆಯಾಗಿವೆ. ವಿಧಾನಮಂಡಲದ ಉಭಯ ಸದನಗಳ ಸದಸ್ಯರು, ಅಬಕಾರಿ ಸಚಿವರ ಗಮನಸೆಳೆದರೂ ಸಹ ಭ್ರಷ್ಟಾಚಾರ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ.
ಅಬಕಾರಿ ಇನ್ಸ್‌ಪೆಕ್ಟರ್‍ಗಳು, ಆಯುಕ್ತರು, ಉಪ ಆಯುಕ್ತರ ಹಂತದಲ್ಲಿಯೇ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ಲೋಕಾಯುಕ್ತಕ್ಕೂ ಹತ್ತಾರು ದೂರುಗಳು ಸಲ್ಲಿಕೆಯಾಗಿವೆ. ಆದರೂ ಅಬಕಾರಿ ಇಲಾಖೆ ಸಚಿವ ಆರ್ ಬಿ ತಿಮ್ಮಾಪುರ ಅವರು ಎಚ್ಚೆತ್ತುಕೊಂಡಿಲ್ಲ. ಯಾರೊಬ್ಬರ ಮೇಲೂ ಕಠಿಣ ಕ್ರಮಗಳನ್ನೂ ತೆಗೆದುಕೊಂಡಿಲ್ಲ. ಹೀಗಾಗಿ ಸಿಎಲ್ 7 ಮಂಜೂರಾತಿಯಲ್ಲಿ ಭ್ರಷ್ಟಾಚಾರಗಳು ನಡೆಯುತ್ತಲೇ ಇವೆ.
2024-25ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ಸಿಎಲ್ 7 ಸನ್ನದು ಮಂಜೂರು ಮಾಡಿರುವ ಹಲವು ಪ್ರಕರಣಗಳಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿದೆ, ಸ್ಥಳ ಪರಿಶೀಲನೆ ನಡೆಸದೆಯೇ ಸನ್ನದು ಮಂಜೂರು ಮಾಡಲಾಗಿದೆ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಹರಿಪ್ರಸಾದ್ ಮತ್ತಿತರರು ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ದಾಖಲಿಸಿದ್ದಾರೆ.
ಪೂರ್ಣಿಮಾ

ಹರಿಪ್ರಸಾದ್,

ದಿವಾಕರ್

ಸಿದ್ದಪ್ಪ

ಮತ್ತಿತರರು ಲೋಕಾಯುಕ್ತಕ್ಕೆ ಸಲ್ಲಿಸಿರುವ ದೂರು ಮತ್ತು ದಾಖಲೆಗಳ ಪ್ರತಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ವಲಯಗಳ ಪೈಕಿ ಕೆ ಆರ್ ಪುರಂ ವ್ಯಾಪ್ತಿಯ ಹಲವು ಹೋಬಳಿಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಸಿಎಲ್ 7 ಸನ್ನದುಗಳನ್ನು ಮಂಜೂರು ಮಾಡಲಾಗಿದೆ ಎಂದು ಆಪಾದಿಸಲಾಗಿದೆ.
ಅಬಕಾರಿ ನಿರೀಕ್ಷಕ ಭರತ್, ಉಪ ಅಧೀಕ್ಷಕ ತುಕಾರಾಂ ನಾಯಕ್, ಉಪ ಆಯುಕ್ತ ಅಜಿತ್ ಕುಮಾರ್ ಮತ್ತು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಸೇರಿದಂತೆ ಹಲವು ಅಧಿಕಾರಿಗಳನ್ನು ದೂರಿನಲ್ಲಿ ಪ್ರತಿವಾದಿಯನ್ನಾಗಿಸಲಾಗಿದೆ.
ಬೋಗಸ್ ದಾಖಲೆಗಳಿಗೆ ಮಣೆ
ಬೆಂಗಳೂರು ನಗರ ಜಿಲ್ಲೆ (2 ಮತ್ತು 9ನೇ ವಲಯ) ಕೆ ಆರ್ ಪುರಂ ಅಬಕಾರಿ ವಲಯದ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿಯೂ ಸಿಎಲ್ 7 ಸನ್ನದನ್ನು ಮಂಜೂರು ಮಾಡಲಾಗಿದೆ. ಸಿ ಆರ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ನ ಪಾಲುದಾರರಾದ ಕಿರಣ್ ಸಿ ಕೆ, ಬಿ ಕೆ ಶೇಖರ್, ನಿತಿನ್ ಕೆ, ಋತ್ವಿಕ್ ಹೆಸರಿನಲ್ಲಿ ನಿಯಮಬಾಹಿರವಾಗಿ ಹೊಸದಾಗಿ ಸಿಎಲ್ 7 ಸನ್ನದನ್ನು ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.
ಮೇಡಹಳ್ಳಿ ಗ್ರಾಮದ ಸರ್ವೆ ನಂಬರ್ 59ರಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸಿ ಆರ್ ಬೋರ್ಡಿಂಗ್ ಮತ್ತು ಲಾಡ್ಜಿಂಗ್ ಹೆಸರಿನಲ್ಲಿ ಸಿಎಲ್ 7 ಸನ್ನದು ಮಂಜೂರಾಗಿದೆ. ಇಲಾಖೆಯ ಅಧಿಕಾರಿಗಳು ಲಂಚವನ್ನು ಪಡೆದು ಬೋಗಸ್ ದಾಖಲೆ ಸೃಷ್ಟಿಸಿ ಸಿಎಲ್ 7 ಸನ್ನದು ಮಂಜೂರು ಮಾಡಿದ್ದಾರೆ. ಇದರಲ್ಲಿ ಅಬಕಾರಿ ನಿರೀಕ್ಷಕರಾದ ಭರತ್, ಉಪ ಅಧೀಕ್ಷಕ ತುಕಾರಾಂ ನಾಯಕ್, ಉಪ ಆಯುಕ್ತ ಅಜಿತ್ ಕುಮಾರ್, ಜಿಲ್ಲಾಧಿಕಾರಿ ಜಗದೀಶ್ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿರುವುದು ತಿಳಿದು ಬಂದಿದೆ.

ಈ ಕಟ್ಟಡದಲ್ಲಿ ಸಿಎಲ್ 7 ಸನ್ನದನ್ನು ಮಂಜೂರು ಮಾಡಿಸಿಕೊಳ್ಳುವ ಸಲುವಾಗಿ ಬೇರೆ ಬೇರೆ ಕಟ್ಟಡದ ಕಿಚನ್, ರೂಂಗಳು, ಡೈನಿಂಗ್ ಹಾಲ್, ರೆಸ್ಟೋರೆಂಟ್ ಸೇರಿದಂತೆ ಇತರೆ ಭಾಗಗಳ ಫೋಟೋಗಳನ್ನು ಬಳಸಲಾಗಿದೆ. ಈ ಮೂಲಕ ಅಕ್ರಮವಾಗಿ ಮತ್ತು ನಿಯಮಬಾಹಿರವಾಗಿ ಸನ್ನದನ್ನು ಮಂಜೂರು ಮಾಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.
ಅಲ್ಲದೇ ನೆಲಮಹಡಿ ಮತ್ತು ಮೊದಲನೇ ಮಹಡಿಗೆ ಮಾತ್ರ ಅನ್ವಯವಾಗುವಂತೆ ಸಿಎಲ್ 7 ಸನ್ನದನ್ನು ಮಂಜೂರು ಮಾಡಿಸಲಾಗಿದೆ. ಮೊದಲನೇ ಮಹಡಿಯಲ್ಲಿ 16 ರೂಮ್‌ಗಳಿವೆ ಎಂಬುದಾಗಿ ಸುಳ್ಳು ಬ್ಲೂ ಪ್ರಿಂಟ್‌ನ್ನು ಅಬಕಾರಿ ಆಯುಕ್ತರ ಕಚೇರಿಗೆ ಸಲ್ಲಿಸಲಾಗಿದೆ. ಬ್ಲೂ ಪ್ರಿಂಟ್‌ಗಳ ನೈಜತೆಯನ್ನು ಪರಿಶೀಲಿಸದೆಯೇ ಸಿಎಲ್ 7 ಸನ್ನದನ್ನು ಮಂಜೂರು ಮಾಡಲಾಗಿದೆ. ವಾಸ್ತವವಾಗಿ ಮೊದಲನೇ ಮಹಡಿಯಲ್ಲಿ ಕೇವಲ 8 ರೂಂಗಳು ಮಾತ್ರ ಇವೆ. ಈ ಎಲ್ಲಾ ಅಂಶಗಳನ್ನು ಮರೆಮಾಚಿ ಅರ್ಜಿದಾರರಿಂದ ಲಂಚವನ್ನು ಪಡೆದು ಕಾನೂನುಬಾಹಿರವಾಗಿ ಸಿಎಲ್ 7 ಸನ್ನದನ್ನು ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಸುಳ್ಳು ವರದಿ!
ಸಿಎಲ್ 7 ಸನ್ನದು ಮಂಜೂರು ಮಾಡಲು ಅಬಕಾರಿ ಆಯುಕ್ತರು ಪೂರ್ವಾನುಮತಿಯನ್ನು ನೀಡುವ ಸಮಯದಲ್ಲಿ ಎಲ್ಎಲಾ ದಾಖಲೆಗಳನ್ನು ದೃಢೀಕರಿಸಿಕೊಳ್ಳಬೇಕು. ಆ ನಂತರವೇ ಸನ್ನದನ್ನು ಮಂಜೂರು ಮಾಡಲು ಷರತ್ತು ವಿಧಿಸಲಾಗಿದೆ. ಅದರೆ ಆ ಎಲ್ಲಾ ಷರತ್ತುಗಳನ್ನು ಅರ್ಜಿದಾರರು ಪೂರೈಸಿದ್ದಾರೆ ಎಂದು ಆ ವ್ಯಾಪ್ತಿಯ ಅಬಕಾರಿ ಡಿಸಿಯಾದ ಅಜಿತ್ ಕುಮಾರ್ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಸುಳ್ಳು ವರದಿಯನ್ನು ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಯನ್ನೂ ದಾರಿತಪ್ಪಿಸಿ ಅವರಿಂದಲೇ ನಿಯಮಬಾಹಿರವಾಗಿ ಸನ್ನದನ್ನು ಮಂಜೂರಾತಿ ಆದೇಶ ಹೊರಡಿಸಲಾಗಿದೆ ಎಂದು ದೂರುದಾರರು ಆಪಾದಿಸಿರುವುದು ಗೊತ್ತಾಗಿದೆ.
‘ಈ ಕುರಿತು ದೂರರ್ಜಿಗಳನ್ನು ಸಲ್ಲಿಸಿದ್ದರೂ ಸಹ ಇದುವರೆಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮಗಳನ್ನೂ ಜರುಗಿಸಿಲ್ಲ. ಹಾಗೂ ಸ್ಥಳ ಪರಿಶೀಲನೆ ಕೈಗೊಂಡಿಲ್ಲ. ಅದಕ್ಕೆ ಬದಲಾಗಿ ಸಿಎಲ್ 7 ಸನ್ನದು ಮಂಜೂರಾಗಿರು ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಬಕಾರಿ ಇಲಾಖೆಯ ಮೇಲಾಧಿಕಾರಿಗಳು ಲಂಚವನ್ನು ಪಡೆದು ಸಹಕರಿಸಿರುತ್ತಾರೆ,’ ಎಂದು ದೂರುದಾರರು ಆರೋಪಿಸಿರುವುದು ತಿಳಿದು ಬಂದಿದೆ.
ಹೀಗಾಗಿ ದೂರುದಾರ ಹರಿಪ್ರಸಾದ್ ಅವರು ಲೋಕಾಯುಕ್ತ ಮೆಟ್ಟಿಲೇರಿದ್ದಾರೆ. ಈ ಸಂಬಂಧ 2025ರ ಜೂನ್ 16ರಂದು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ. ಈ ದೂರು ದಾಖಲಾದ ನಂತರ ತಪ್ಪಿತಸ್ಥ ಅಧಿಕಾರಿಗಳೆಂದು ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಗಳೇ ತಮ್ಮ ಅಧೀನ ಅಧಿಕಾರಿಗಳಿಂದ ಸುಳ್ಳು ವರದಿಗಳನ್ನು ತಯಾರಿಸಿದ್ದಾರೆ. ನಿಯಮಬಾಹಿರವಾಗಿ ದೂರುದಾರರಿಗೆ ಹಿಂಬರಹ ನೀಡುವ ಮೂಲಕ ಪ್ರಕರಣವನ್ನು ತಮ್ಮ ಹಂತದಲ್ಲೇ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಬ್ಲೂ ಪ್ರಿಂಟ್‌ಗಳೂ ನಕಲು
ಅದೇ ರೀತಿ ಬೆಂಗಳೂರು ನಗರ ಜಿಲ್ಲೆಯ ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿಯ ಮಾರಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 52/3ರಲ್ಲಿ 2024-25ನೇ ಸಾಲಿನಲ್ಲಿಯೂ ವಿ ಶ್ರೀನಿವಾಸ ಎಂಬ ವ್ಯಕ್ತಿ ಹೆಸರಿನಲ್ಲಿದ್ದ ಸಿಎಲ್ 2 ಸನ್ನದು ಬಳಸಿ ಸಿಎಲ್ 7 ಸನ್ನದು ಮಂಜೂರು ಮಾಡಿಸಿಕೊಳ್ಳಲಾಗಿದೆ. ಕೆ ಎಂ ಸುಬ್ರಮಣ್ಯ ಎಂಬ ವ್ಯಕ್ತಿಯ ಹೆಸರಿನಲ್ಲಿ ಕಾನೂನುಬಾಹಿರವಾಗಿ ಸಿಎಲ್ 7 ಸನ್ನದು ಮಂಜೂರಾಗಿದೆ ಎಂದು ದೂರಿನಲ್ಲಿ ದಾಖಲೆ ಸಹಿತ ವಿವರಿಸಿರುವುದು ತಿಳಿದು ಬಂದಿದೆ.

ವಿ ಶ್ರೀನಿವಾಸ ಅವರ ಹೆಸರಿನಲ್ಲಿ ನವೀಕರಣಗೊಂಡು ಅಸ್ತಿತ್ವದಲ್ಲಿದ್ದ ಸಿಎಲ್ 2 ಸನ್ನದನ್ನು ನೆಲಮಹಡಿಯ ಕಟ್ಟಡ ಹಾಗೂ ಅದರ ಬ್ಲೂಪ್ರಿಂಟ್ ನ್ನು ನಕಲು ಮಾಡಲಾಗಿದೆ. ಆ ಕಟ್ಟಡದ ನೆಲಮಹಡಿಯಲ್ಲಿ ಮಳಿಗೆ 1, ಮಳಿಗೆ 2 ಎಂದು ಬ್ಲೂ ಪ್ರಿಂಟ್ ಸೃಷ್ಟಿಸಲಾಗಿದೆ. ಅದೇ ಬ್ಲೂ ಪ್ರಿಂಟ್‌ನ್ನು ಅಬಕಾರಿ ಆಯುಕ್ತರ ಕಚೇರಿಗೆ ಸಲ್ಲಿಸಿ ಸಿಎಲ್ 7 ಸನ್ನದನ್ನು ಮಂಜೂರು ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ.

ವಾಸ್ತವವಾಗಿ ನೆಲಮಹಡಿಯಲ್ಲಿ ಸಂಪೂರ್ಣವಾಗಿ ಸಿಎಲ್ 2 ಸನ್ನದು ಅಸ್ತಿತ್ವದಲ್ಲಿರುತ್ತದೆ. ಅದನ್ನು ರುಜುವಾತುಪಡಿಸುವ ಸಿಎಲ್ 2 ಸನ್ನದಿನ ಲೈಸೆನ್ಸ್ ಪ್ರತಿ ಮತ್ತು ಬ್ಲೂ ಪ್ರಿಂಟ್ ನ್ನು ಅರ್ಜಿಯಲ್ಲಿ ಲಗತ್ತಿಸಿದೆ. ಸಿಎಲ್ 2 ಸನ್ನದು ಅಸ್ತಿತ್ವದಲ್ಲಿದ್ದ ನೆಲಹಮಹಡಿ ಬಗ್ಗೆ ತಮ್ಮ ವರದಿಗಳಲ್ಲಿ ಮರೆಮಾಚಲಾಗಿದೆ. ಅದೇ ನೆಲಮಹಡಿಯ ಜಾಗವನ್ನು ಸೇರಿಸಿಕೊಂಡು ಬ್ಲೂ ಪ್ರಿಂಟ್‌ನ್ನು ತಯಾರಿಸಲಾಗಿದೆ. ಆ ಮೂಲಕ ಕೆ ಎಂ ಸುಬ್ರಮಣ್ಯ ಎಂಬ ವ್ಯಕ್ತಿಯ ಹೆಸರಿನಲ್ಲಿ ಕಾನೂನುಬಾಹಿರವಾಗಿ ಸಿಎಲ್ 7 ಸನ್ನದು ಮಂಜೂರಾಗಿದೆ ಎಂದು ದೂರಿನಲ್ಲಿ ದಾಖಲೆ ಸಹಿತ ವಿವರಿಸಿರುವುದು ತಿಳಿದು ಬಂದಿದೆ.
ಅಲ್ಲದೇ ಒಂದೇ ವಿಳಾಸ ಮತ್ತು ಕಟ್ಟಡದಲ್ಲಿ ಸಿಎಲ್ 7 ಸನ್ನದು ಮಂಜೂರಾದ ನಂತರವೂ ಸುಮಾರು 3ರಿಂದ 4 ತಿಂಗಳುಗಳ ಕಾಲ ಸಿಎಲ್ 2 ಸನ್ನದು ಕಾರ್ಯನಿರ್ವಹಿಸಿ ನಂತರ ಬೇರೆ ಅಬಕಾರಿ ವಲಯಕ್ಕೆ ಸ್ಥಳಾಂತರಗೊಂಡಿದೆ. ಸಿಎಲ್ 2 ಸನ್ನದು ಅಸ್ತಿತ್ವದಲ್ಲಿದ್ದ ನೆಲಮಹಡಿಯನ್ನೂ ಸಹಾ ಸಿಎಲ್ 7 ಸನ್ನದು ಮಂಜೂರಾತಿಗಾಗಿ ಬ್ಲೂ ಪ್ರಿಂಟ್ ಸೇರಿಸಿಕೊಂಡು ತಯಾರಿಸಲಾಗಿದೆ. ಆ ಮೂಲಕ ಬ್ಲೂ ಪ್ರಿಂಟ್‌ನ್ನು ಓವರ್ ಲ್ಯಾಪ್ ಮಾಡಿ ಸಿ ಎಲ್ 7 ಸನ್ನದು ಮಂಜೂರು ಮಾಡಿಸಲಾಗಿದೆ. ಹಾಗೂ ಸಿಎಲ್ 2 ಸನ್ನದು ಅಸ್ತಿತ್ವದಲ್ಲಿದ್ದರೂ ಸಹ ಅದನ್ನು ಮರೆಮಾಚಿ ಸಿಎಲ್ 7 ಸನ್ನದು ಮಂಜೂರು ಮಾಡಲಾಗಿದೆ ಎಂದು ಆಪಾದಿಸಿರುವುದು ಗೊತ್ತಾಗಿದೆ.
ಸುಳ್ಳು ದಾಖಲೆ ಸೃಷ್ಟಿ
ಹಾಗೆಯೇ ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ ಕಿತ್ತಗನೂರಿನಲ್ಲಿಯೂ ಅಕ್ರಮ ನಡೆದಿದೆ.

ಕಿತ್ತಗನೂರಿನ ಮುಖ್ಯ ರಸ್ತೆ ಹಳೇ ಹಳ್ಳಿ ಗ್ರಾಮದ ಸೈಟ್ ನಂಬರ್ 1 (ಹೊಸ ಖಾತೆ ನಂ 622/40/1- ಹಳೇ ಖಾತೆ ಸಂಖ್ಯೆ 40 (ಪಿಐಡಿ ಸಂಖ್ಯೆ 150200400501100776 ) ಪ್ರಾಪರ್ಟಿ ನಂ 11ರಲ್ಲಿ ಟಿ ಎನ್ ತಿಮ್ಮೇಗೌಡ ಎಂಬುವರ ಹೆಸರಿನಲ್ಲಿ ಸಿ ಎಲ್ 7 ಸನ್ನದು ಮಂಜೂರು ಮಾಡಿಸಲು ಬೇರೆ ಕಟ್ಟಡದ ಛಾಯಾಚಿತ್ರಗಳನ್ನು ಇಲಾಖೆಗೆ ಸಲ್ಲಿಸಲಾಗಿದೆ. ಮತ್ತು ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಈ ಮೂಲಕ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಅರ್ಜಿದಾರರಿಂದ ಲಂಚ ಪಡೆಯಲಾಗಿದೆ ಎಂದು ಆರೋಪಿಸಿರುವುದು ತಿಳಿದು ಬಂದಿದೆ.

ಮಸೀದಿಯಿದ್ದರೂ ಪರಿಗಣಿಸದ ಅಧಿಕಾರಿ
ಸಿಎಲ್ 2 ಸನ್ನದು ಮಂಜೂರಾಗಿರುವ ಕಟ್ಟಡದ 100 ಮೀಟರ್ ಅಂತರದೊಳಗೆ ಮಸೀದಿ ಇದೆ. ಆದರೂ ಸಹ ಅದನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಬದಲಿಗೆ ಸಿಎಲ್ 2 ಸನ್ನದು ಮಂಜೂರಾಗಿರುವ ಕಟ್ಟಡವು ಮಸೀದಿಯಿಂದ 106 ಮೀಟರ್ ದೂರದಲ್ಲಿದೆ ಎಂದು ಸುಳ್ಳು ವರದಿ ಸಲ್ಲಿಸಲಾಗಿದೆ.

ಅಬಕಾರಿ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಆ ಮೂಲಕ ಕಾನೂನುಬಾಹಿರವಾಗಿ ಟಿ ಎನ್ ತಿಮ್ಮೇಗೌಡ ಎಂಬ ವ್ಯಕ್ತಿಯ ಹೆಸರಿನಲ್ಲಿ ಕಾನೂನುಬಾಹಿರವಾಗಿ ಸಿಎಲ್ 7 ಸನ್ನದು ಮಂಜೂರಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಪರಿಶೀಲನೆಯಾಗದ ಛಾಯಾಚಿತ್ರಗಳ ನೈಜತೆ
ಕೆಆರ್ ಪುರಂ ನ ಕೌದೇನಹಳ್ಳಿ ಸೈಟ್ ನಂಬರ್ 29 (ಹಳೇ ಪಿಐಡಿ ನಂಬರ್ 362/2/7 ) 363/1/7) ರ ವಿಳಾಸದಲ್ಲಿ 2024-25ನೇ ಸಾಲಿನಲ್ಲಿ ಬೃಂದಾವನ್ ಎಂಟರ್ ಪ್ರೈಸೆಸ್ ಹೆಸರಿನಲ್ಲಿ ಸಿಎಲ್ 9 ಬಾರ್ ಅಂಡ್ ರೆಸ್ಟೋರೆಂಟ್ ಅಸ್ತಿತ್ವದಲ್ಲಿದೆ.

ಈ ಜಾಗದಲ್ಲಿರುವ ಕಟ್ಟಡದ ಮುಂಭಾಗದಲ್ಲಿ ಛಾಯಾಚಿತ್ರಗಳನ್ನು ತೆಗೆಸಿಕೊಂಡು ಇಲಾಖೆಗೆ ಮತ್ತು ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ಮೂಲಕ ಬಾರ್ ಅಂಡ್ ರೆಸ್ಟೋರೆಂಟ್ ಚಾಲ್ತಿಯಲ್ಲಿರುವ ಕಟ್ಟಡ ಮತ್ತು ಅದೇ ವಿಳಾಸದಲ್ಲಿ ಕೆ ಎನ್ ಲಕ್ಷ್ಮಿ ಎಂಬುವರ ಹೆಸರಿನಲ್ಲಿ ಬೃಂದಾವನ್ ಕಂಫರ್ಟ್ ಹೋಟೆಲ್ ಮತ್ತು ರೆಸ್ಟೋರೆಂಟ್ ಹೆಸರಿನ ಸಿಎಲ್ 7 ಸನ್ನದಿನ ಮಂಜೂರಾತಿಗಾಗಿ ಸುಳ್ಳು ಶಿಫಾರಸ್ಸು ವರದಿ ಸಲ್ಲಿಕೆಯಾಗಿದೆ ಎಂದು ದೂರಲಾಗಿದೆ.
ಬ್ಲೂ ಪ್ರಿಂಟ್ ಇಲ್ಲದ ಜಾಗಕ್ಕೂ ಸಿಎಲ್ 7 ಮಂಜೂರು
ಕೊಲೆಪ್ಪ ಕಾನ್ಸ್‌ಪ್ಟ್ ಪ್ರೈವೈಟ್ ಲಿಮಿಟೆಡ್ ಹೆಸರಿನಲ್ಲಿ ಟರೇಸ್ ಫ್ಲೋರ್‍ನಲ್ಲಿ ಬಾರ್ ಕೌಂಟರ್ ಮತ್ತು ಸ್ಟಾಕ್ ರೂಂ ಹಾಗೂ ಮೈಕ್ರೋ ಬ್ರೂವೆರಿಯ ಕಿಚನ್ ಇದೆ. ಆದರೆ ಈ ಜಾಗಕ್ಕೆ ಬ್ಲೂ ಪ್ರಿಂಟ್ ಇರಲಿಲ್ಲ. ಆದರೂ ಹೊಸದಾಗಿ ಸಿಎಲ್ 7 ಸನ್ನದು ಮಂಜೂರಾಗಿದೆ.

ಮಂಜೂರಾಗದ ಬ್ಲೂ ಪ್ರಿಂಟ್
ಬೆಂಗಳೂರು ಪೂರ್ವ ತಾಲೂಕು ಬಿದರಹಳ್ಳಿ ಹೋಬಳಿ ಕನ್ನಮಂಗಲ ಗ್ರಾಮದಲ್ಲಿ ಬ್ಲೂ ಪ್ರಿಂಟ್‌ಗಳಿಗೆ ಮಂಜೂರಾತಿ ಸಿಗದಿದ್ದರೂ ಸಹ ಸಿಎಲ್ 7 ಸನ್ನದು ಮಂಜೂರಾಗಿವೆ. ಈ ಪೈಕಿ ಸ್ವತ್ತಿನ ಸಂಖ್ಯೆ ಸರ್ವೆ ನಂಬರ್ 206 ವಿ ಪಿ ಖಾತೆ ಸಂಖ್ಯೆ 5/206 ಸಂಖ್ಯೆಯಲ್ಲಿರುವ ಎಸ್ ಬಿ ಆರ್ ಸೆಂಟ್ರಲ್ 2ನೇ ಮಹಡಿಯಲ್ಲಿ ಸಿಎಲ್ 7 ಮಂಜೂರು ಮಾಡಲಾಗಿದೆ. ಅಬಕಾರಿ ನಿಯಮಗಳನ್ನು ಗಾಳಿಗೆ ತೂರಿ 2024-25ನೇ ಸಾಲಿನಲ್ಲಿ ಹೊಸದಾಗಿ ಸಿಎಲ್ 7 ಸನ್ನದು ಮಂಜೂರಾಗಿದೆ ಎಂದು ಆರೋಪಿಸಲಾಗಿದೆ.

ಆದರೆ ವಾಸ್ತವವಾಗಿ ಆ ಸಿಎಲ್ 7 ಸನ್ನದು ಕಟ್ಟಡದಲ್ಲಿ ರೂಮ್‌ಗಳನ್ನು ಹೊರತುಪಡಿಸಿ ಸಿಎಲ್ 7 ಸನ್ನದಿಗೆ ನಿಗದಿಪಡಿಸಿರುವ ಇತರೆ ಎಲ್ಲಾ ಸೌಲಭ್ಯಗಳಾದ ಬಾರ್ ಕೌಂಟರ್ , ಸ್ಟಾಕ್ ರೂಂ, ಡೈನಿಂಗ್ ರೂಂಗಳೆಲ್ಲ ಟೆರೇಸ್ ಪ್ಲೋರ್ ನಲ್ಲಿರುತ್ತದೆ. ಆದರೆ ಆ ಫ್ಲೋರ್‍ಗೆ ಇಲಾಖೆಯಿಂದ ಬ್ಲೂ ಪ್ರಿಂಟ್ ಮಂಜೂರಾಗಿಲ್ಲ.

ಅಲ್ಲದೇ ಅದೇ ಕಟ್ಟಡದಲ್ಲಿರುವ ಮೈಕ್ರೋ ಬ್ರೂವೆರಿಯಲ್ಲಿ ಕಿಚನ್ ನ್ನೇ ಸಿಎಲ್ 7 ಸನ್ನದಿನ ಕಿಚನ್ ಎಂಬುದಾಗಿ ತೋರಿಸಲಾಗಿದೆ ಅದೇ ಫೋಟೋಗಳನನ್ನು ಇಲಾಖೆಗೆ ಸಲ್ಲಿಸಿ ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿದೆ ಎಂದು ಆಪಾದಿಸಲಾಗಿದೆ.
ಕಟ್ಟಡವೇ ಇಲ್ಲದ ಜಾಗಕ್ಕೂ ಸಿಎಲ್ 7
ಬಿದರಹಳ್ಳಿ ಹೋಬಳಿಯ ರಾಂಪುರ ಗ್ರಾಮದ ಸರ್ವೆ ನಂಬರ್ 21/1ಎ ರಲ್ಲಿ 2024-245ನೇ ಸಾಲಿನಲ್ಲಿ ಪುಟ್ಟಲಿಂಗಯ್ಯ ಎಂಬ ವ್ಯಕ್ತಿಯ ಹೆಸರಿನಲ್ಲಿ ಅಭಿಲಾಷಾ ಬಾರ್ ಅಂಡ್ ರೆಸ್ಟೋರೆಂಟ್ ಇದೆ. ಇದು ನವೀಕರಣಗೊಂಡಿದೆ.

ಅಸ್ತಿತ್ವದಲ್ಲಿರುವ ಸಿಎಲ್ 9 ಸನ್ನದಿನ ಕಟ್ಟಡ ಹಾಗೂ ಅದರ ವಿಳಾಸವನ್ನೇ ತೋರಿಸಿ ಬೋಗಸ್ ದಾಖಲೆಗಳನ್ನು ಕಚೇರಿಯಲ್ಲಿ ಸೃಷ್ಟಿಸಲಾಗಿದೆ. ಆ ಮೂಲಕ ಕಟ್ಟಡವೇ ಇಲ್ಲದ ಜಾಗಕ್ಕೆ ಇ ಸಿ ಪ್ರಕಾಶ್ ಎಂಬ ವ್ಯಕ್ತಿಯ ಹೆಸರಿನಲ್ಲಿ ದೀಪಾ ಕಂಫರ್ಟ್ ಹೋಟೆಲ್ ಮತ್ತು ರೆಸ್ಟೋರೆಂಟ್ ಎಂಬ ಹೆಸರಿನ ಸಿಎಲ್ 7 ಸನ್ನದನ್ನು ಮಂಜೂರು ಮಾಡಿಸಲಾಗಿದೆ ಎಂದು ಆರೋಪಿಸಿರುವುದು ಗೊತ್ತಾಗಿದೆ.

ಸಿಎಲ್ 9 ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯ ಸೇವನೆಗೆ ಇರುವ ಕಂಪಾರ್ಟ್ಮೆಟ್‌ಗಳನ್ನೇ ಸಿಎಲ್ 7 ನ್ನು ರೂಂ ಗಳೆಂದು ನೀಲಿ ನಕಾಶೆ ತೋರಿಸಲಾಗಿದೆ. ಅದರ ಅಧಾರದಲ್ಲಿ ಸಿಎಲ್ 7 ಸನ್ನದು ಮಂಜೂರಾತಿಗೆ ಬೇರೆ ಕಟ್ಟಡದ ಛಾಯಾಚಿತ್ರಗಳನ್ನು ಭೌತಿಕವಾಗಿ ಸಲ್ಲಿಸಲಾಗಿದೆ. ಈ ಮೂಲಕ ಅಬಕಾರಿ ಆಯುಕ್ತರ ಕಚೇರಿಗೆ ಮಣ್ಣೆರೆಚಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ನೀಲಿ ನಕಾಶೆಗೂ ವಾಸ್ತವಕ್ಕೂ ಹೊಂದಾಣಿಕೆಯೇ ಇಲ್ಲ
ನೀಲಿ ನಕಾಶೆಯಲ್ಲಿ ನಮೂದಿಸಿರುವ ಸಿಎಲ್ 7 ರೂಂಗಳ , ಅಡುಗೆ ಮನೆ, ರೆಸ್ಟೋರೆಂಟ್ ಡೈನಿಂಗ್ ಹಾಲ್ ಅಳತೆಗೂ ಭೌತಿಕವಾಗಿ ಒಂದಕ್ಕೊಂದು ಹೊಂದಾಣಿಕೆಯೇ ಇರದಿದ್ದರೂ ಸಹ ಸಿಎಲ್ 7 ಮಂಜೂರಾಗಿವೆ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾದ ನಂತರ ತರಾತುರಿಯಲ್ಲಿ ಪುಟ್ಟಲಿಂಗಯ್ಯ ಎಂಬ ವ್ಯಕ್ತಿಯ ಹೆಸರಿನಲ್ಲಿದ್ದ ಅಭಿಲಾಷಾ ಬಾರ್ ರೆಸ್ಟೋರೆಂಟ್ ಸಿಎಲ್ 9 ಸನ್ನದನ್ನು 2025ರ ಜೂನ್ 20ರಂದು ಜಕ್ಕೂರು ವಲಯ ವ್ಯಾಪ್ತಿಯ ಬೈಯಪ್ಪನಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಿ ಆದೇಶಿಸಲಾಗಿತ್ತು.

ಹಳೆಯ ದಿನಾಂಕಕ್ಕೆ ಅಂದರೇ 2025ರ ಮಾರ್ಚ್ 11ಕ್ಕೆ ಭೌತಿಕವಾಗಿ ಕಡತ ತಯಾರಿಸಲಾಗಿತ್ತು. ಸಿಎಲ್ 9 ಸನ್ನದು ಕಟ್ಟಡ ನವೀಕರಣಕ್ಕೆ ಅನುಮತಿಯನ್ನು ನೀಡುವ ಆದೇಶವನ್ನು ಸೃಷ್ಟಿಸಿ, ಆ ಮೂಲಕ ಸಿಎಲ್ 9 ಸನ್ನದು ಕಟ್ಟಡ ಹಾಗೂ ಸಿಎಲ್ 7 ಸನ್ನದು ಮಂಜೂರಾತಿರುವ ಕಟ್ಟಡ ಎರಡೂ ಬೇರೆ ಬೇರೆ ಎಂಬುದಾಗಿ ನಂಬಿಸಲು ದಾಖಲೆ ಸೃಷ್ಟಿಸಲಾಗಿದೆ. ಅಲ್ಲದೇ ಸಿಎಲ್ 7 ಸನ್ನದು ಮಂಜೂರಾಗಿರುವ ಕಟ್ಟಡದ ನೀಲಿನಕಾಶೆ ಮತ್ತು ಸಿಎಲ್ 9 ಸನ್ನದು ಅಸ್ತಿತ್ವದಲ್ಲಿರುವ ಕಟ್ಟಡದ ನೀಲಿ ನಕಾಶೆಗಳು ಒಂದೇ ಆಗಿವೆ ಎಂದು ಆರೋಪಿಸಲಾಗಿದೆ.









