ಬೆಂಗಳೂರು; ನೀರಾವರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಕೇವಲ ನಾಲ್ಕು ದಿನದಲ್ಲಿ ಹೆಚ್‌ಡಿಪಿಇ ಪೈಪ್‌ಗಳನ್ನು ಒಮ್ಮೆಗೆ ರವಾನಿಸಲಾಗಿತ್ತು ಎಂದು ಸಿಎಜಿ ಮಾಡಿದ್ದ ಆಕ್ಷೇಪಣೆಯನ್ನು ಕರ್ನಾಟಕ ನೀರಾವರಿ ನಿಗಮವು ತಳ್ಳಿ ಹಾಕಿದೆ. ಅಲ್ಲದೇ ನಕಲಿ ಇನ್‌ವಾಯ್ಸ್‌ಗಳ ಅಧಾರದ ಮೇಲೆ ಅನಿಯಮಿತವಾಗಿ ಮುಂಗಡವಾಗಿ 40.16ಕೋಟಿ ಪಾವತಿ ಮಾಡಿದ್ದರಿಂದ 4.53 ಕೋಟಿ ನಷ್ಟವಾಗಿಲ್ಲ ಎಂದೂ ಸಮರ್ಥಿಸಿಕೊಂಡಿದೆ.
ಅಲ್ಲದೇ ಗುತ್ತಿಗೆದಾರರು ಮತ್ತು ಅವರ ಪೂರೈಕೆದಾರರ ಮಧ್ಯೆ ನಡೆಯುವ ಯಾವುದೇ ಹಣಕಾಸು, ಲಾಜಿಸ್ಟಿಕ್ ಸಂಬಂಧಿತ ವಹಿವಾಟುಗಳನ್ನು ಜಲಸಂಪನ್ಮೂಲ ಇಲಾಖೆಯು ಸಾಮಾನ್ಯವಾಗಿ ಪರಿಗಣಿಸಿಲ್ಲ. ಹಾಗೆಯೇ ಜಿಎಸ್‌ಟಿ ಮತ್ತಿತರೆ ದಾಖಲೆಗಳ ನೈಜತೆ ಪರಿಶೀಲಿಸಲು ಕರ್ನಾಟಕ ನೀರಾವರಿ ನಿಗಮದಲ್ಲಿ ಯಾವುದೇ ತಂತ್ರಾಂಶಗಳು ಲಭ್ಯವಿಲ್ಲ ಎಂದು ಹೇಳಿದೆ.
ಗುತ್ತಿಗೆದಾರರು ತಯಾರಕರಿಂದ ಹೆಚ್‌ಡಿಪಿಇ ಪೈಪ್‌ಗಳನ್ನು ಖರೀದಿಸಿದ್ದರು. ಅದನ್ನು ವಿಭಾಗದ ಅಧಿಕಾರಿಗಳು 2018ರ ಜುಲೈ 12ರಂದು ಜಂಟಿ ತಪಾಸಣೆ ನಡೆಸಿದ್ದರು. 2018ರ ಜುಲೈ 16ರಂದು ಗುತ್ತಿಗೆದಾರರು ಎಲ್ಲಾ ಹೆಚ್‌ಡಿಪಿಇ ಪೈಪ್‌ಗಳನ್ನು ಪೂರೈಸಿದ್ದರು. ಅಲ್ಲದೆ ಕೆಲಸದ ಸ್ಥಳದ ಸ್ಟಾಕ್ ಯಾರ್ಡ್‌ನಲ್ಲಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದರು. ಕೇವಲ ನಾಲ್ಕು ದಿನಗಳಲ್ಲಿ ಅಷ್ಟೂ ಪೈಪ್‌ಗಳನ್ನು ರವಾನಿಸಿದ್ದರು. ಇದನ್ನು ಪ್ರಧಾನ ಮಹಾಲೇಖಪಾಲರು ಮತ್ತು ಪ್ರಧಾನ ಲೆಕ್ಕ ಪರಿಶೋಧಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಕುರಿತು ಸಾರ್ವಜನಿಕ ಉದ್ಯಮಗಳ ಸಮಿತಿಯು ಚರ್ಚೆಗೆ ಕೈಗೆತ್ತಿಕೊಂಡಿತ್ತು. 2025ರ ಜೂನ್ 25ರಂದು ನಡೆದಿದ್ದ ಸಭೆಯಲ್ಲಿ ಕರ್ನಾಟಕ ನೀರಾವರಿ ನಿಗಮವು, ಈ ಎಲ್ಲಾ ಆಕ್ಷೇಪಣೆಗಳನ್ನು ತಳ್ಳಿ ಹಾಕಿತ್ತು. ಇದಕ್ಕೆ ಸಂಬಂಧಿಸಿದಂತೆ ನಿಗಮವು ಅನುಪಾಲನಾ ವರದಿಯನ್ನು ಸಲ್ಲಿಸಿದೆ. ಈ ವರದಿಗೆ ಜಲಸಂಪನ್ಮೂಲ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅನುಮೋದಿಸಿರುವುದು ತಿಳಿದು ಬಂದಿದೆ.
ನಿಗಮವು ಸಲ್ಲಿಸಿರುವ ಅನುಪಾಲನಾ ವರದಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಿಎಜಿ ಆಕ್ಷೇಪಣೆಗೆ ನಿಗಮ ನೀಡಿದ ಉತ್ತರದಲ್ಲೇನಿದೆ?
ಗುಜರಾತ್‌ನ ರಾಜ್‌ಕೋಟ್‌ನ ಕೆಲ್ವಿನ್ ಪ್ಲಾಸ್ಟಿಕ್ ಪ್ರೈವೈಟ್ ಲಿಮಿಟೆಡ್‌ನಲ್ಲಿ ಹೆಚ್‌ಡಿಪಿಇ ಪೈಪ್‌ಗಳ ಮಾದರಿ ಪರಿಮಾಣಗಳ ಜಂಟಿ ತಪಾಸಣೆಯು 20218ರ ಜುಲೈ 10ರಿಂದ 2018ರ ಜುಲೈ 12ರವರೆಗೆ ತಪಾಸಣೆ ನಡೆದಿತ್ತು. ಕಾಮಗಾರಿಗೆ ಸಂಬಂಧಿಸಿದಂತೆ ವಿವಿಧ ವ್ಯಾಸಗಳ ಹೆಚ್‌ಡಿಪಿ ಪೈಪ್‌ಗಳನ್ನು ಸ್ಟಾಕ್ ಯಾರ್ಡ್‌ನಲ್ಲಿ ಸಂಗ್ರಹಿಸಲಾಗಿತ್ತು. ಗುತ್ತಿಗೆದಾರರ ಮನವಿ ಮೇರೆಗೆ ಪೈಪ್ ತಯಾರಿಕೆ ಘಟಕದ ಮಟ್ಟದಲ್ಲಿ ಜಂಟಿ ಪರಿವೀಕ್ಷಣೆ ಕೈಗೊಳ್ಳಲಾಗಿತ್ತು.
ಆದರೆ ಇದಕ್ಕೂ ಮುನ್ನವೇ ಗುತ್ತಿಗೆದಾರರ ಸ್ಟಾಕ್ ಯಾರ್ಡ್‌ಗೆ ಪೈಪ್‌ಗಳನ್ನು ತಲುಪಿಸಿರುವ ಸಾಧ್ಯತೆ ಇರುತ್ತದೆ. ಈ ವಿಧಾನವು ದೊಡ್ಡ ಪ್ರಮಾಣದ ಪೂರೈಕೆ ಒಪ್ಪಂದಗಳಿಗೆ ಅನುಸರಿಸಲಾಗುತ್ತಿದೆ. ಗುಣ ಮಟ್ಟದ ಭರವಸೆಯ ಸಿಂಧುತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಾವತಿಯನ್ನು ಪ್ರಕ್ರಿಯೆಗೊಳಿಸುವ ಪೂರ್ವದಲ್ಲಿ ಪೈಪ್‌ಗಳನ್ನು ಮತ್ತೊಮ್ಮೆ ಇಲಾಖೆಯಿಂದ ಭೌತಿಕವಾಗಿ ಪರಿವೀಕ್ಷಣೆ ನಡೆಸಿ ಅಳತೆ ಪುಸ್ತಕದಲ್ಲಿ ದಾಖಲಿಸಲಾಗುತ್ತದೆ ಎಂದು ಸಮಜಾಯಿಷಿ ನೀಡಿದೆ.

ಅಲ್ಲದೇ ಕಾಮಗಾರಿ ಒಪ್ಪಂದದ ಪ್ರಕಾರ ಕಂಡಿಕೆ (24.3 ಮತ್ತು ಉಪ ಕಂಡಿಕೆ 5)ಗಳಲ್ಲಿರುವಂತೆ ಸಾಮಗ್ರಿಗಳ ಸಂಗ್ರಹಣೆ, ಪೂರೈಕೆ ಲಾಜಿಸ್ಟಿಕ್ಸ್ ಅಳವಡಿಕೆ ಮತ್ತು ಕಾರ್ಯಕ್ಷಮತೆಯ ಫಲಿತಾಂಶಗಳಿಗೆ ಸಂಬಂಧಿಸಿದ ಜವಾಬ್ದಾರಿಯು ಗುತ್ತಿಗೆದಾರರ ಮೇಲಿರುತ್ತದೆ ಎಂದು ವಿವರಿಸಿರುವುದು ಗೊತ್ತಾಗಿದೆ.
12 ಮೀಟರ್ ಉದ್ದದ ಹೆಚ್‌ಡಿಪಿಇ ಪೈಪ್‌ಗಳನ್ನು ದ್ವಿಚಕ್ರ/ತ್ರಿಚಕ್ರ ವಾಹನಗಳಲ್ಲಿ ಸಾಗಿಸಲಾಗಿತ್ತು ಎಂದು ಸಿಎಜಿ ಆಕ್ಷೇಪಿಸಿತ್ತು. ನೀರಾವರಿ ನಿಗಮವು ಇದಕ್ಕೆ ತಾನು ಜವಾಬ್ದಾರನಲ್ಲ ಎಂದು ಜಾರಿಕೊಂಡಿದೆ. ಪೈಪ್‌ಗಳ ಸಾಗಾಣಿಕೆಯ ವಿಧಾನವು ಸಂಪೂರ್ಣವಾಗಿ ಗುತ್ತಿಗೆದಾರರ ಹಾಗೂ ಪೈಪ್ ಪೂರೈಕೆದಾರರ ಜವಾಬ್ದಾರಿಯಾಗಿದೆ. ಬಿಲ್‌ಗಳನ್ನು ಪಾವತಿಸಲು ಇದನ್ನು ಆಧಾರವಾಗಿ ಪರಿಗಣಿಸಿಲ್ಲ ಎಂದು ಸಮಜಾಯಿಷಿ ನೀಡಿದೆ.
ಸ್ಟಾಕ್ ಯಾರ್ಡ್ ಮತ್ತು ಕಾಮಗಾರಿ ಸ್ಥಳದಲ್ಲಿನ ಹೆಚ್‌ಡಿಪಿಇ ಪೈಪ್‌ಗಳ ಭೌತಿಕ ಪೂರೈಕೆ, ಪರಿಮಾಣ, ಗುಣಮಟ್ಟ ಮತ್ತು ತಾಂತ್ರಿಕವಾಗಿ ಸ್ವೀಕಾರ ಯೋಗ್ಯವಿರುವುದನ್ನು ಪ್ರಮಾಣಿಕರಿಸಲು ನೀರಾವರಿ ನಿಗಮದ ಪಾತ್ರವು ಸೀಮಿತವಾಗಿದೆ. ಇದನ್ನು ನಿಗಮದಿಂದ ಕಟ್ಟುನಿಟ್ಟಾಗಿ ಪಾಲಿಸಿ ನಿರ್ವಹಿಸಲಾಗಿದೆ ಎಂದು ಮಾಹಿತಿ ಒದಗಿಸಿದೆ.

ತಂತ್ರಾಂಶಗಳೇ ಲಭ್ಯವಿಲ್ಲ
ಹೆಚ್‌ಡಿಪಿಇ ಪೈಪ್‌ಗಳ ಪೂರೈಕೆದಾರರು ಇನ್‌ವಾಯ್ಸ್‌ನಲ್ಲಿ ನಮೂದಿಸಿರುವಂತೆ 12 ಮೀಟರ್ ಉದ್ದದ ಹೆಚ್‌ಡಿಪಿಇ ಪೈಪ್ಗಳನ್ನು ಸಾಗಿಸಲು ಬಳಸಲಾದ ವಾಹನಗಳ ವಿಧಗಳನ್ನು ಪರಿಶೀಲಿಸಲು ನಿಗಮದ ಹಂತದಲ್ಲಿ ಯಾವುದೇ ತಂತ್ರಾಂಶಗಳು ಲಭ್ಯವಿಲ್ಲ ಎಂದು ಹೇಳಿದೆ. ಆದ್ದರಿಂದ ಬಿಲ್ ಪಾವತಿಸುವ ಸಂದರ್ಭದಲ್ಲಿ ಇನ್‌ವಾಯ್ಸ್‌ನಲ್ಲಿ ನಮೂದಿಸಿರುವ ವಾಹನಗಳ ಸಂಖ್ಯೆಯನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿರುವುದು ತಿಳಿದು ಬಂದಿದೆ.
‘ಆದರೂ ಈ ರೀತಿಯ ವಾಹನ ನೋಂದಾಯಿಸಿ ಇನ್‌ವಾಯ್ಸ್ ನೀಡಿದಾಗ ಗುತ್ತಿಗೆದಾರರಿಗೆ ಎಚ್ಚರಿಕೆ ಪತ್ರ ನೀಡಬಹುದು. ಸಂಬಂಧಿಸಿದ ಕಚೇರಿ ಸಿಬ್ಬಂದಿಗಳಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಇಲಾಖೆ ವಿಚಾರಣೆ ಮಾಡಬಹುದು. ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ನಿಗಮದಲ್ಲಿ ಎಚ್ಚರಿಕೆ ವಹಿಸಲಾಗುವುದು ಎಂದು ಹೇಳಿದೆ.

40.16 ಮುಂಗಡ ಪಾವತಿ, ಹೊಂದಿಕೆಯಾಗದ ಜಿಎಸ್‌ಟಿ ದಾಖಲೆ
ಕೆಲಸದ ಸ್ಥಳದಲ್ಲಿ ಪೈಪ್‌ಗಳ ಪೂರೈಕೆಯನ್ನು ಬೆಂಬಲಿಸಲು ಗುತ್ತಿಗೆದಾರರು ಇನ್‌ವಾಯ್ಸ್‌ಗಳನ್ನು ಸಲ್ಲಿಸಿದ್ದರು. ಆದರೆ ಗುತ್ತಿಗೆದಾರರು ಸಲ್ಲಿಸಿದ್ದ ಇನ್‌ವಾಯ್ಸ್‌ಗಳು ಮತ್ತು ಖರೀದಿದಾರರ ಜಿಎಸ್‌ಟಿ ದಾಖಲೆಗಳೊಂದಿಗೆ ಹೊಂದಿಕೆಯಾಗಿರಲಿಲ್ಲ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸಾಮಗ್ರಿಗಳ ಪೂರೈಕೆಯನ್ನು ಪರಿಶೀಲಿಸದೆಯೇ 40.16 ಕೋಟಿ ಮುಂಗಡವಾಗಿ ಪಾವತಿಸಿದ್ದರು. ಈ ರೀತಿ ಅನಿಯಮಿತವಾಗಿ ಮುಂಗಡ ಪಾವತಿಯಿಂದಾಗಿ 4.53 ಕೋಟಿ ರು ನಷ್ಟವಾಗಿದೆ ಎಂದು ಸಿಎಜಿ ಆಕ್ಷೇಪಿಸಿತ್ತು.

ಆದರೆ ಕರ್ನಾಟಕ ನೀರಾವರಿ ನಿಗಮವು ಇದನ್ನು ತಳ್ಳಿ ಹಾಕಿದೆ.
ನಿಗಮದ ಸಮಜಾಯಿಷಿ ಏನು?
ಟೆಂಡರ್ ದಾಖಲೆಯ ಸೆಕ್ಷನ್ 5 ಕ್ಲಾಸ್ 24.3 ಅಡಿಯಲ್ಲಿ 40.16 ಕೋಟಿ ರು.ಗಳ ಬಿಲ್ ಪಾವತಿಯನ್ನು ಗುತ್ತಿಗೆದಾರರು ಪೈಪ್‌ಗಳನ್ನು ಪೂರೈಸಿದ ಆಧಾರದ ಮೇಲೆ ಮಾಡಲಾಗಿದೆ. ಪೈಪ್ ಸಂಗ್ರಹಣಾ ಸ್ಥಳದಲ್ಲಿ ಸಂಬಂಧಿಸಿದ ಇಂಜನಿಯರ್‍ಗಳು ಪರಿಶೀಲಿಸಿದ್ದಾರೆ. ಇದನ್ನು ಅಳತೆ ಪುಸ್ತಕದಲ್ಲಿ ನಮೂದಿಸಿದ್ದಾರೆ. ಈ ಪ್ರಕ್ರಿಯೆ ನಡೆದ ನಂತರ ಮುಂಗಡವಾಗಿ ಪಾವತಿಸಲಾಗಿದೆ ಎಂದು ಸಮಜಾಯಿಷಿಯಲ್ಲಿ ವಿವರಿಸಿದೆ.
ಹೀಗಾಗಿ ಪಾವತಿಸಿರುವ ಮೊತ್ತವನ್ನು ಒಪ್ಪಂದದ ಸಾಮಾನ್ಯ ಷರತ್ತುಗಳ ಕಂಡಿಕೆ (42.1) ಪ್ರಕಾರ ಮೊಬಲೈಸೇಷನ್ ಮುಂಗಡ ಎಂದು ಪರಿಗಣಿಸಿಲ್ಲ. ಟೆಂಡರ್ ದಾಖಲೆ ಸೆಕ್ಷನ್ 5, ಕ್ಲಾಸ್ 24.3 ರ ಅಡಿಯ್ಲಿ ಎಂಎಸ್, ಹೆಚ್‌ಡಿಪಿಇ ಪೈಪಗಳು ಮತ್ತು ವಿಶೇಷ ಸಾಮಗ್ರಿಗಳ ಪೂರೈಕೆಗೆ ಸಂಬಂಧಿಸಿದಂತೆ ನಿಯಮ ಪಾಲಿಸಲಾಗಿದೆ.
ತಯಾರಿಕೆ ಘಟಕದಲ್ಲಿ ಕೈಗೊಳ್ಳಲಾಗಿರುವ ಪರೀಕ್ಷೆ, ಗುತ್ತಿಗೆದಾರರ ಸ್ಟಾಕ್ ಯಾರ್ಡ್‌ನಲ್ಲಿ ಪೈಪ್‌ಗಳನ್ನು ಸಂಗ್ರಹಿಸಿರುವುದು ಮತ್ತು ಕೆಲಸದ ಸ್ಥಳಕ್ಕೆ ಪೈಪ್‌ಗಳನ್ನು ಸಾಗಿಸುವುದೂ ಸಹ ಸೇರಿದೆ. ಈ ಷರತ್ತಿನ ಪ್ರಕಾರ ಪೈಪ್‌ಗಳು ಮತ್ತು ಸಂಬಂಧಿತ ಸಾಮಗ್ರಿಗಳ ಪೂರೈಕೆಗೆ ನಮೂದಿಸಿದ ದರದ ಶೇ. 70ರಷ್ಟು ಪಾವತಿಸಲು ಅವಕಾಶವಿದೆ ಎಂದು ನಿಗಮವು ಸಮರ್ಥಿಸಿಕೊಂಡಿರುವುದು ಗೊತ್ತಾಗಿದೆ.
ಮುಂಗಡದ ಮೊತ್ತಕ್ಕೆ ಸಮಾನವಾದ ಬೇಷರತ್ತಾದ ಬ್ಯಾಂಕ್ ಗ್ಯಾರಂಟಿ ಸಲ್ಲಿಲಸಿದ ನಂತರ ಕೆಲಸದ ಕಾರ್ಯಗತಗೊಳಿಸುವಿಕೆಗೆ ನೇರವಾಗಿ ಸಂಬಂಧಿಸಿದ ಯಂತ್ರೋಪಕರಣಗಳು, ಸ್ಥಾವರ, ಸಾಮಗ್ರಿ, ಸಲಕರಣೆಗಳು ಮತ್ತು ಅವುಗಳನ್ನು ಸಜ್ಜುಗೊಳಿಸುವ ವೆಚ್ಚಗಳ ಖರೀದಿಗಾಗಿ ಗುತ್ತಿಗೆದಾರರಿಗೆ ಮುಂಗಡವಾಗಿ ಪಾವತಿಸಲಾಗಿದೆ. ‘ಒಪ್ಪಂದದ ಅಡಿಯಲ್ಲಿ ಇಂಜಿನಿಯರ್ ಪ್ರಮಾಣೀಕರಿಸಿದ ಮಧ್ಯಂತರ ಬಿಲ್‌ಗಳ ಪಾವತಿಗಳಿಂದ ಶೇಕಡವಾರು ಕಡಿತಗಳ ಮೂಲಕ ಮುಂಗಡ ಹಣವನ್ನು ವಾರ್ಷಿಕ ಶೇ.13.5ರಷ್ಟು ಬಡ್ಡಿಯೊಂದಿಗೆ ಮರುಪಾವತಿಸುವ ಷರತ್ತಿಗೆ ಒಳಪಟ್ಟಿದೆ,’ ಎಂದು ವಿವರಿಸಿರುವುದು ತಿಳಿದು ಬಂದಿದೆ.
ಹಾಗೆಯೇ ಎಂ ಎಸ್ ಪೈಪ್‌ಗಳು, ಹೆಚ್‌ಡಿಪಿಇ ಪೈಪ್‌ಗಳ ಪೂರೈಕೆಗೆ ಪಾವತಿ ನಿಯಮಗಳು, ಕೆಲಸದ ಸ್ಥಳಕ್ಕೆ ಪೂರೈಕೆ, ಪರೀಕ್ಷೆ, ಸಂಗ್ರಹಿಸುವಿಕೆ ಮತ್ತು ಸಾಗಣೆ ಮೇಲೆ ನಮೂದಿಸಿದ ದರಗಳಲ್ಲಿ ಶೇ. 70ರಷ್ಟನ್ನು ಪಾವತಿಸಲು ಅವಕಾಶವಿದೆ. ಈ ಪಾವತಿಯನ್ನು ಕೆಲಸದ ಘಟಕಗಳ ನಿಜವಾದ ವಿತರಣೆ, ಕಾರ್ಯಗತಗೊಳಿಸುವಿಕೆ ಆಧಾರದ ಮೇಲೆ ಮಾಡಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಬೇಷರತ್ತಾದ ಬ್ಯಾಂಕ್ ಗ್ಯಾರಂಟಿ ಸಲ್ಲಿಸುವುದರ ಮೇಲೆ ಅಥವಾ ವಾರ್ಷಿಕ ಶೇ. 13.5 ಬಡ್ಡಿಯೊಂದಿಗೆ ಮರು ಪಾವತಿಗೆ ಒಳಪಟ್ಟಿಲ್ಲ ಎಂದೂ ಹೇಳಿದೆ.
ಪೂರೈಕೆ ಮಾಡಿದ ಸಾಮಗ್ರಿಗಳಿಗೆಬಿಲ್ ಪಾವತಿ ನಿಯಮಗಳು ವಿಭಿನ್ನವಾಗಿವೆ. ಪ್ರತಿಯೊಂದು ಪ್ರತ್ಯೇಕವಾಗಿ ನಿಬಂಧನೆಗಳಿಂದ ನಿಯಂತ್ರಣಕ್ಕೆ ಒಳಪಟ್ಟಿವೆ. ಹೀಗಾಗಿ ಇವುಗಳನ್ನು ಪರಸ್ಪರ ಹೋಲಿಕೆ ಮಾಡಲಾಗದು. ಈ ಕಾರಣಗಳ ಮೇಲೆ ಗುತ್ತಿಗೆದಾರರಿಗೆ 40.16 ಕೋಟಿ ಸಂದಾಯ ಮಾಡಿರುವ ಹಣವನ್ನು ಮುಂಗಡ ಪಾವತಿ ಎಂದು ಪರಿಗಣಿಸುವುದು ಸೂಕ್ತವಲ್ಲ ಎಂದು ವಿವರಿಸಿದೆ. ಅಲ್ಲದೇ ಪೈಪ್‌ಗಳ ಪೂರೈಕೆಯ ಹಣ ಪಾವತಿಯು, ನಿಯಮಗಳನುಸಾರ ಕಾಲ್ಪನಿಕ ಬಡ್ಡಿ ನಷ್ಟದ ಲೆಕ್ಕಾಚಾರ ಸರಿಯಲ್ಲ. ಮತ್ತು ಇದು ಅನ್ವಯಿಸುವುದೂ ಇಲ್ಲ ಎಂಬ ಮಾಹಿತಿಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಮಿತಿಗೆ ಒದಗಿಸಿದ್ದಾರೆ.

‘ಸದ್ಯ ಈ ಕಾಮಗಾರಿಯು ಪೂರ್ಣ ಪ್ರಮಾಣದಲ್ಲಿ ಮುಕ್ತಾಯಗೊಂಡಿದೆ. 3 ವರ್ಷಗಳಿಂದ 48 ಕೆರೆಗಳಿಗೆ ಸಂಪೂರ್ಣವಾಗಿ ನೀರು ಹರಿಸಲಾಗುತ್ತಿದೆ. ಆಡಿಟ್‌ನಲ್ಲಿ ಆಕ್ಷೇಪಣೆಗಳಂತೆ ಈ ಪ್ರಕರಣದಲ್ಲಿ ಇನ್‌ವಾಯ್ಸ್‌ಗಳನ್ನು ಸಲ್ಲಿಸುವಲ್ಲಿ ಹಾಗೂ ಕಚೇರಿ ಪರಿಶೀಲನೆಯಲ್ಲಿ ಆಗಿರುವ ಕಾರ್ಯವಿಧಾನ ಲೋಪಗಳಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗಿಲ್ಲ. ಹೀಗಾಗಿ ಈ ಕಂಡಿಕೆಯನ್ನು ಮುಕ್ತಾಯಗೊಳಿಸಬೇಕು. ಇನ್ನು ಮುಂದೆ ಇಂತಹ ಯಾವುದೇ ಕಾರ್ಯವಿಧಾನ ಲೋಪಗಳು ಆಗದಂತೆ ಎಲ್ಲಾ ವಿಭಾಗಗಳಿಗೆ ತಿಳಿವಳಿಕೆ ನೀಡಿ ಎಚ್ಚರಿಕೆ ವಹಿಸಲಾಗುವುದು,’ ಎಂದು ಸಮಿತಿ ಮುಂದೆ ಕೋರಿರುವುದು ತಿಳಿದು ಬಂದಿದೆ.









