ಹಾಸ್ಟೆಲ್‌ಗಳ ನಿರ್ವಹಣೆಗೆ ಕಡಿಮೆ ಅನುದಾನ, ಕಂಪ್ಯೂಟರ್‍‌ ಲ್ಯಾಬ್‌ಗೆ 2 ಕೋಟಿಗೂ ದುಡ್ಡಿಲ್ಲ; ಸಚಿವರ ಪ್ರಸ್ತಾವ ತಿರಸ್ಕೃತ

ಬೆಂಗಳೂರು; ಶಾಲಾ ಶಿಕ್ಷಣ ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಅವರ ಸ್ವಕ್ಷೇತ್ರ ಸೊರಬ ತಾಲೂಕಿನ ವಿದ್ಯಾರ್ಥಿ ನಿಲಯಗಳಲ್ಲಿ ಕಂಪ್ಯೂಟರ್‍‌ ಲ್ಯಾಬ್‌ ಮತ್ತು ಡಿಜಿಟಲ್‌ ಲೈಬ್ರೇರಿ ಸ್ಥಾಪಿಸಲು ಸರ್ಕಾರದ ಬಳಿ ಹಣವಿಲ್ಲ.

 

ಅಷ್ಟೇ ಅಲ್ಲ ಹಿಂದುಳಿದ ವರ್ಗಗಳ  ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೂ ಕಡಿಮೆ ಅನುದಾನವನ್ನು ಒದಗಿಸಲಾಗುತ್ತಿದೆ.

 

ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಹಣಕಾಸು ಹೊಂದಿಸಲು ಏದುಸಿರು ಬಿಡುತ್ತಿರುವ ಸರ್ಕಾರವು ಇದೀಗ ಗ್ರಾಮೀಣ ತಾಲೂಕುಗಳಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿ ಕಂಪ್ಯೂಟರ್‍‌ ಲ್ಯಾಬ್‌ ಮತ್ತು ಡಿಜಿಟಲ್‌ ಲೈಬ್ರೇರಿ ಸ್ಥಾಪನೆಗೂ ಹಣವಿಲ್ಲ ಎಂದು ಕೈ ಚೆಲ್ಲುತ್ತಿದೆ.

 

ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸ್ವಕ್ಷೇತ್ರ ಸೊರಬ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯು ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಕಂಪ್ಯೂಟರ್‍‌ ಲ್ಯಾಬ್‌ ಮತ್ತು ಡಿಜಿಟಲ್‌ ಲೈಬ್ರೇರಿ ಸ್ಥಾಪಿಸಲು ಮುಂದಾಗಿದ್ದರು. ಇದಕ್ಕಾಗಿ 2 ಕೋಟಿ ರು ವೆಚ್ಚದ ಪ್ರಸ್ತಾವವನ್ನು ಸಲ್ಲಿಸಿದ್ದರು. ಆದರೆ ಈ ಪ್ರಸ್ತಾವವನ್ನು ಪರಿಶೀಲಿಸಿರುವ ಆರ್ಥಿಕ ಇಲಾಖೆಯು ಒಪ್ಪಿಕೊಂಡಿಲ್ಲ.

 

ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಗೆ ಉಭಯ ಇಲಾಖೆಗಳ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.

 

ಸಚಿವರ ಪ್ರಸ್ತಾವದಲ್ಲೇನಿದೆ?

 

ಸೊರಬ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಡಿಯಲ್ಲಿನ 4 ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲು ಹಾಗೂ 6 ಮೆಟ್ರಿಕ್‌ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಕಂಪ್ಯೂಟರ್‍‌ ಲ್ಯಾಬ್‌ ಮತ್ತು ಡಿಜಿಟಲ್‌ ಲೈಬ್ರೇರಿ ಸ್ಥಾಪನೆ ಮಾಡಲು ಸಚಿವ ಮಧು ಬಂಗಾರಪ್ಪ ಅವರು ಕೋರಿದ್ದರು. ಪ್ರತಿ ವಿದ್ಯಾರ್ಥಿ ನಿಲಯಕ್ಕೆ 20 ಲಕ್ಷದಂತೆ ಒಟ್ಟು 10 ವಿದ್ಯಾರ್ಥಿ ನಿಲಯಗಳಿಗೆ 2 ಕೋಟಿ ರು ರು ಅನುದಾನ ಮಂಜೂರು ಮಾಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು  ಕೋರಿದ್ದರು.

 

 

ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಕಡಿಮೆ ಅನುದಾನ

 

ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಜಿಲ್ಲಾ ವಲಯ (ಲೆಕ್ಕ ಶೀರ್ಷಿಕೆ; 2225-00-103-0-26) ದಡಿಯಲ್ಲಿ ಅನುದಾನ ಒದಗಿಸಲಾಗುತ್ತಿದೆ. ಪ್ರತಿ ಆರ್ಥಿಕ ವರ್ಷದಲ್ಲಿ ಸ್ಕೇಲ್‌ ಬೇಸ್ಡ್‌ ಬಜೆಟ್‌ನಲ್ಲಿ ಅನುದಾನ ನೀಡಲಾಗುತ್ತಿದೆ. ಆದರೆ ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಕಡಿಮೆ ಅನುದಾನ ಒದಗಿಸಿದೆ. ಹೀಗಾಗಿ ಸೊರಬ ತಾಲೂಕಿನ ವಿದ್ಯಾರ್ಥಿ ನಿಲಯಗಳಿಗೆ ಕಂಪ್ಯೂಟರ್‍‌ ಲ್ಯಾಬ್‌ ಮತ್ತು ಡಿಜಿಟಲ್‌ ಲೈಬ್ರೇರಿ ಸ್ಥಾಪನೆಗೆ 2 ಕೋಟಿ ರು ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸಬೇಕು ಎಂದು ಇಲಾಖೆಯು ಚರ್ಚಿಸಿತ್ತು.

 

ಹಣಕಾಸಿನ ಮೂಲ ಎಲ್ಲಿದೆ?

 

ಈ ಪ್ರಸ್ತಾವನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಆರ್ಥಿಕ ಇಲಾಖೆಗೆ  ಕಳಿಸಿತ್ತು.  ಆದರೆ ಹಣಕಾಸಿನ ಮೂಲವನ್ನು ಸ್ಪಷ್ಟವಾಗಿ ತಿಳಿಸಿರಲಿಲ್ಲ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

ಪ್ರಸ್ತಾವ ಒಪ್ಪದ ಆರ್ಥಿಕ ಇಲಾಖೆ

 

ಸೊರಬ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಕಂಪ್ಯೂಟರ್‍‌ ಲ್ಯಾಬ್‌ ಮತ್ತು ಡಿಜಿಟಲ್‌ ಲೈಬ್ರೇರಿ ಸ್ಥಾಪಿಸಲು 2 ಕೋಟಿ ರು ಹೆಚ್ಚುವರಿಯಾಗಿ ಒದಗಿಸಬೇಕು ಎಂದು ಕೋರಿದ್ದ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು.

 

‘ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್‌ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಕಂಪ್ಯೂಟರ್‍‌ ಲ್ಯಾಬ್‌ ಮತ್ತು ಡಿಜಿಟಲ್‌ ಲೈಬ್ರೇರಿ ಸ್ಥಾಪಿಸುವ ಸಂಬಂಧ ಯಾವುದೇ ಅನುದಾನವನ್ನು ಪ್ರಸ್ತಕ ಸಾಲಿನಲ್ಲಿ ಆಯವ್ಯಯದಲ್ಲಿ ನಿಗದಿಪಡಿಸಿರುವುದಿಲ್ಲ. ಹೀಗಾಗಿ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಿಲ್ಲ,’ ಎಂದು ಹೇಳಿದೆ.

 

 

ಅಲ್ಲದೇ ‘ ಈ ರೀತಿಯ ಪ್ರಸ್ತಾವನೆಗಳನ್ನು ಆರ್ಥಿಕ ಇಲಾಖೆಗೆ ಸಲ್ಲಿಸುವಾಗ ಅವುಗಳಿಗೆ ಸಂಬಂಧಿಸಿದ ಹಣಕಾಸಿನ ಮೂಲವನ್ನು ಸ್ಪಷ್ಟವಾಗಿ ಸೂಚಿಸಬೇಕು ಎಂದು ತಿಳಿಸಿದೆ. ಪ್ರಸ್ತುತ ಹೆಚ್ಚುವರಿ ಅನುದಾನಗಳು ಲಭ್ಯವಿಲ್ಲ. ಇಂತಹ ಹೊಸ ಪ್ರಸ್ತಾವನೆಗಳನ್ನು ಮುಂದಿನ ಸಾಲಿನ ಆಯವ್ಯಯದವರೆಗೆ ಮುಂದೂಡಬೇಕು,’ ಎಂದು ಆರ್ಥಿಕ ಇಲಾಖೆಯು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2025ರ ಸೆ.5ರಂದೇ ತಿಳಿಸಿರುವುದು ಗೊತ್ತಾಗಿದೆ.

 

ಆರ್ಥಿಕ ಇಲಾಖೆಯು ನೀಡಿರುವ ಈ ಅಭಿಪ್ರಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಅಭಿಪ್ರಾಯವು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಸ್ವೀಕೃತವಾದ ನಂತರ ಸಚಿವ ಮಧು ಬಂಗಾರಪ್ಪ ಅವರು ಸಚಿವ ಶಿವರಾಜ್ ತಂಗಡಗಿ ಅವರೊಂದಿಗೂ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

 

2024-25ನೇ ಸಾಲಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ಸಂಬಂಧಿಸಿದ ಆಯವ್ಯಯದಲ್ಲಿ TALP ಮಾದರಿಯ ಕಂಪ್ಯೂಟರ್‍‌ ಲ್ಯಾಬ್‌ನ್ನು ಅನುಷ್ಠಾನಗೊಳಿಸಿದೆ. ಈ ಕಾರ್ಯುಕ್ರಮಕ್ಕಾಗಿ ಆಯವ್ಯಯದಲ್ಲಿ ಎರಡು ವರ್ಷಗಳ ಪ್ಯಾಕೇಜ್‌ಗಾಗಿ 50 ಕೋಟಿ ರು.ಗಳನ್ನು ಮೀಸಲಿರಿಸಿದೆ. ಈ ಮೊತ್ತದಲ್ಲಿ 2024-25ನೇ ಸಾಲಿಗೆ 25 ಕೋಟಿ ರು ಅನುದಾನವನ್ನು ಒದಗಿಸಿಕೊಂಡಿತ್ತು.

 

ಈ ಅನುದಾನವು ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಿಗೆ ಮೂಲಭೂತ ಸೌಕರ್ಯ, ಯಂತ್ರೋಪಕರಣಗಳು ಸಾಧನ ಸಾಮಗ್ರಿಗಳ ಅಡಿಯಲ್ಲಿ 30 ಜಿಲ್ಲೆಗಳಲ್ಲಿನ 172 ಸರ್ಕಾರಿ ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಆಧರಿತ ಕಲಿಕೆ ಕಾರ್ಯಕ್ರಮ ಜಾರಿಗೊಳಿಸಿತ್ತು. ಇದರಲ್ಲಿ ಕಂಪ್ಯೂಟರ್ ಲ್ಯಾಬ್‌ ಮತ್ತು ಇಂಟರ್‍‌ನೆಟ್‌ ಸೌಲಭ್ಯ, ಪೂರಕ ಸಾಮಗ್ರಿಗಳಿಗಾಗಿ 13.62 ಕೋಟಿ ರು ಮೊತ್ತದಲ್ಲಿ ಸ್ಥಾಪಿಸಲು ಆದೇಶ ಹೊರಡಿಸಿತ್ತು.

 

 

ಅದೇ ರೀತಿ 3 ಜಿಲ್ಲೆಗಳ 17 ಸರ್ಕಾರಿ ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಆಧರಿತ ಕಲಿಕೆ ಕಾರ್ಯಕ್ರಮ ದಡಿಯಲ್ಲಿ 1.34 ಕೋಟಿ ರು ನೀಡಿತ್ತು.

 

ಆಯಾ ಜಿಲ್ಲೆಗಳ ಸರ್ಕಾರಿ ಪ್ರೌಢಶಾಲೆಗಳಿಗೆ ಕಂಪ್ಯೂಟರ್‍‌ ಲ್ಯಾಬ್‌ಗಳನ್ನು ಒದಗಿಸದ ಮತ್ತು ಹೆಚ್ಚಿನ ದಾಖಲಾತಿ ಹೊಂದಿರುವ ಶಾಲೆಗಳನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು. ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲು ಆಯ್ಕೆ ಮಾಡಿದ ಶಾಲೆಗಳಲ್ಲಿ ಒಂದು ಕೋಣೆಯನ್ನು 1.20 ಲಕ್ಷ ರು ಅನುದಾನವನ್ನು ಶಾಲೆಗೆ ಬಿಡುಗಡೆ ಮಾಡಲು ಆದೇಶ ಹೊರಡಿಸಿತ್ತು.

 

 

ಆಯ್ಕೆಯಾದ ಸರ್ಕಾರಿ ಪ್ರೌಢಶಾಲೆಗಳಿಗೆ ಕಂಪ್ಯೂಟರ್ ಲ್ಯಾಬ್‌ ಸ್ಥಾಪಿಸಲು ಅಗತ್ಯವಿರುವ ಎಐಒ ಕಂಪ್ಯೂಟರ್‍‌ಗಳು, ಪ್ರಿಂಟರ್‍‌ ಸ್ಕ್ಯಾನರ್‍‌, ಯುಪಿಎಸ್‌ಗಳನ್ನು ಖರೀದಿಸಬೇಕುಕ. ಪ್ರತಿ ಶಾಲೆಗೆ 6 ಕಂಪ್ಯೂಟರ್‍‌ಗಳು, 2 ಕೆ ವಿ ಸಾಮರ್ಥ್ಯದ ಒಂದು ಯುಪಿಎಸ್‌ ಖರೀದಿಸಬೇಕು ಎಂದು ಸೂಚಿಸಲಾಗಿತ್ತು.

 

 

ಕಂಪ್ಯೂಟರ್ ಲ್ಯಾಬ್‌ ಒದಗಿಸುವ ಯೋಜನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗುಡ್ಡೇಕೊಪ್ಪ, ಹೊಸನಗರದ ಸರ್ಕಾರಿ ಪ್ರೌಢಶಾಲೆ, ಭದ್ರಾವತಿಯ ನ್ಯೂಟೌನ್‌ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಉಂಬ್ಳೇಬೈಲಿನ ಸರ್ಕಾರಿ ಪ್ರೌಢಶಾಲೆ, ಶಿಕಾರಿಪುರದ ಕಿತ್ತದಹಳ್ಳಿಯ ಸರ್ಕಾರಿ ಪ್ರೌಢಶಾಲೆಯನ್ನು ಆಯ್ಕೆ ಮಾಡಲಾಗಿತ್ತು.

 

ಸಮಾವೇಶಗಳಿಗೆ ಕೋಟಿ ಕೋಟಿ ಖರ್ಚು, ಹೊಸ ಹಾಸ್ಟೆಲ್‌ಗಳ ಆರಂಭಕ್ಕಿಲ್ಲ ದುಡ್ಡು; ಪ್ರಸ್ತಾವಗಳು ತಿರಸ್ಕೃತ

 

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಗಳಲ್ಲಿ ಹೊಸದಾಗಿ ವಿದ್ಯಾರ್ಥಿ ನಿಲಯಗಳ ಆರಂಭಿಸಬೇಕು ಎಂಬ ಪ್ರಸ್ತಾವನೆಗಳನ್ನೂ ಆರ್ಥಿಕ ಇಲಾಖೆಯು ಒಪ್ಪಿಕೊಳ್ಳುತ್ತಿಲ್ಲ. ಈ ಕುರಿತು ‘ದಿ ಫೈಲ್‌’ ವರದಿಗಳನ್ನು ಪ್ರಕಟಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts