ಬೆಂಗಳೂರು; ಕೆ ಸಿ ವ್ಯಾಲಿ ನೀರು ರಾಸಾಯನಿಕ ಮಿಶ್ರಿತವಾಗಿದೆ. ಈ ನೀರಿನ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಕೆ ಸಿ ವ್ಯಾಲಿಯಲ್ಲಿ ಶೇ.100ರಷ್ಟು ಕಲುಷಿತ ನೀರು ತುಂಬಿದೆ. ಈ ನೀರು, ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಸುತ್ತಲಿನ ಜನರು ಆತಂಕಕ್ಕೊಳಗಾಗಿದ್ದಾರೇ ಇತ್ತ ಈ ನೀರಿನಿಂದ ಯಾವುದೇ ತೊಂದರೆಗಳಾಗಿಲ್ಲ ಎಂದು ಇಲಾಖೆಗಳು ನೀಡಿದ್ದ ವರದಿಯನ್ನೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಒಪ್ಪಿಕೊಂಡಿದೆ.
ಇಲಾಖೆಗಳ ಅಧಿಕಾರಿಗಳು ಕೊಟ್ಟ ವರದಿ, ಮಾಹಿತಿಯನ್ನಾಧರಿಸಿ ಕೆ ಸಿ ವ್ಯಾಲಿಯ ನೀರು, ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ಯಾವುದೇ ತೊಂದರೆ ಬೀರಿಲ್ಲ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಪ್ರಕರಣವನ್ನೇ ಮುಕ್ತಾಯಗೊಳಿಸಿರುವುದು ಇದೀಗ ಬಹಿರಂಗವಾಗಿದೆ.
ಕೆ ಸಿ ವ್ಯಾಲಿ ನೀರಿನಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ, ಇಲ್ಲಿನ ನೀರು ಶೇ. 100ರಷ್ಟು ಕಲುಷಿತವಾಗಿದೆ, ಬೆಳೆಗಳಿಗೆ ಹಾನಿಯುಂಟಾಗುತ್ತಿದೆ, ಮೀನುಗಳು ಸಾಯುತ್ತಿವೆ. ಈ ಕುರಿತು ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ತುರುವೇಕೆರೆ ಮೂಲದ ಸಿದ್ದಲಿಂಗೇಗೌಡ ಎಂಬುವರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ದೂರನ್ನು ಸ್ವೀಕರಿಸಿದ್ದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಇಡೀ ಪ್ರಕರಣವನ್ನು ಕುಂತಲ್ಲಿಯೇ ಮುಕ್ತಾಯಗೊಳಿಸಿದೆ. ಈ ಕುರಿತು ಆಯೋಗದ ವಿಲೇಖನಾಧಿಕಾರಿಗಳು 2025ರ ಸೆ. 23ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರತಿಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಸಲ್ಲಿಸಿದೆ.
ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಿದ್ದಲಿಂಗೇಗೌಡ ಎಂಬುವರು ಸಲ್ಲಿಸಿದ್ದ ದೂರನ್ನಾಧರಿಸಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಸಣ್ಣ ನೀರಾವರಿ ಇಲಾಖೆ, ಅಂತರ್ಜಲ ಅಭಿವೃದ್ದಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಿಂದ ವರದಿ ನೀಡಲು ನಿರ್ದೇಶಿಸಿತ್ತು. ಕೆ ಸಿ ವ್ಯಾಲಿಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಈ ಮೂರೂ ಇಲಾಖೆಗಳು ಆಯೋಗಕ್ಕೆ ವರದಿ ನೀಡಿದ್ದವು. ಕೆ ಸಿ ವ್ಯಾಲಿಯಲ್ಲಿ ಯಾವುದೇ ಸಮಸ್ಯೆಯಿಲ್ಲ, ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಕಂಡು ಬಂದಿಲ್ಲ ಎಂದು ವರದಿಯಲ್ಲಿ ವಿವರಿಸಿದ್ದವು.
ಈ ಮೂರೂ ಇಲಾಖೆಗಳು ನೀಡಿದ್ದ ವರದಿಯನ್ನಾಧರಿಸಿ ಆಯೋಗವು ಈ ಪ್ರಕರಣವನ್ನು ಮುಕ್ತಾಯಗೊಳಿಸಿ ಆದೇಶ ಹೊರಡಿಸಿದೆ.
ಸಣ್ಣ ನೀರಾವರಿ, ಅಂತರ್ಜಲ ಇಲಾಖೆ ವರದಿಯಲ್ಲೇನಿದೆ?
ಸಂಸ್ಕರಿಸಿದ ತ್ಯಾಜ್ಯ ನೀರನ್ನು ಅಂರ್ತಜಲ ವೃದ್ಧಿಸಲು, ಕೆರೆಗಳಲ್ಲಿ ತುಂಬಿಸುತ್ತಿರುವ ನೀರನ್ನು, ಕೃಷಿ ಚಟುವಟಿಕೆಗಳಿಗೆ ಬಳಸಲು ಯೋಗ್ಯವಾಗಿದೆ. ಹಾಗೂ ಈ ಆ ನೀರಿನ ಬಳಕೆಯಿಂದ ಕೃಷಿ ಉತ್ಪನ್ನಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತಿಉ ಭಾರತೀಯ ವಿಜ್ಞಾನ ಸಂಸ್ಥೆ ಸಮಿತಿ ರಚಿಸಿದೆ. ಈ ಸಮಿತಿಯೂ ಮಧ್ಯಂತರ ವರದಿ ನೀಡಿದೆ.

ಈ ಮಧ್ಯಂತರ ವರದಿ ಪ್ರಕಾರ ಶೇ. 100ರಷ್ಟು ಕಲುಷಿತ ನೀರು ತುಂಬಿ, ಸೊಳ್ಳೆ ಹಾಗೂ ಇತರೆ ಕ್ರಿಮಿಕೀಟಗಳಿಂದ ಆ ಕೆರೆಯ ಸುತ್ತಮುತ್ತಲಿನ ನಿವಾಸಿಗಳಿಗೆ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮಗಳು ಉಂಟಾಗಿರುವುದಿಲ್ಲ ಎಂಬ ವಿವರಣೆಯನ್ನು ಮಾನವ ಹಕ್ಕುಗಳ ಆಯೋಗ ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಟೊಮೊಟೋ ಬೆಳೆಗೂ ಕೆಸಿ ವ್ಯಾಲಿ ನೀರಿಗೂ ಸಂಬಂಧವಿಲ್ಲವೆಂದ ಆರ್‍ಡಿಪಿಆರ್
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯೂ ಸಹ ಕೆ ಸಿ ವ್ಯಾಲಿ ನೀರಿನ ಕುರಿತು ಅಧ್ಯಯನ ಮಾಡಿದೆ. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿದ್ದರು. ಈ ವರದಿ ಪ್ರಕಾರ ಕೆರೆಯಲ್ಲಿ ಶೇ.100ರಷ್ಟು ಕಲುಷಿತ ನೀರು ತುಂಬಿ, ಸೊಳ್ಳೆಗಳು ಉಂಟಾಗಿ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ. ಭಾರತೀಯ ವಿಜ್ಞಾನ ಸಂಸ್ಥೇಯು ನಡೆಸುತ್ತಿರುವ ಪರಿಸರ ಆಘಾಧೀಕರಣ ಸಂಶೋಧನೆ ವರದಿ ಆಧರಿಸಿ ಈ ವರದಿ ನೀಡಿತ್ತು.
ಟೊಮೊಟೋ ಬೆಳೆಗೆ ಉಂಟಾಗಿರುವ ರೋಗಕ್ಕೂ ಕೆ ಸಿ ವ್ಯಾಲಿಯಲ್ಲಿ ಹರಿಯುತ್ತಿರುವ ನೀರಿಗೂ ಯಾವುದೇ ಸಂಬಂಧವಿಲ್ಲ. ಕೆ ಸಿ ವ್ಯಾಲಿಯಲ್ಲಿ ಹರಿಯುತ್ತಿರುವ ನೀರನ್ನು ತಮಿಳುನಾಡು ಭಾಗದಲ್ಲಿಯೂ ವ್ಯವಸಾಯಕ್ಕೆ ಬಳಸಲಾಗುತ್ತಿದೆ. ಅಲ್ಲಿಯೂ ಸಹ ಯಾವುದೇ ಸಮಸ್ಯೆ ಉಂಟಾಗಿಲ್ಲ. ಮೀನುಗಾರಿಕೆ ಮೇಲೂ ಸಹ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ವರದಿ ಮಾಡಿರುವುದನ್ನು ಆಯೋಗದ ಆದೇಶದಲ್ಲಿ ಉಲ್ಲೇಖವಾಗಿದೆ.

ಅಲ್ಲದೇ ಕೊಳವೆ ನೀರಿನ ಗುಣಮಟ್ಟವನ್ನೂ ಪರಿಶೀಲನೆ ಮಾಡಲಾಗಿದೆ. ಆ ಸಂದರ್ಭದಲ್ಲೂ ನೀರಿನಲ್ಲಿ ಯಾವುದೇ ಹಾನಿಕಾರಕ ಅಂಶವಿಲ್ಲವೆಂದು ತಜ್ಞರು ವರದಿ ಮಾಡಿರುವುದನ್ನೂ ಆಯೋಗದ ಆದೇಶದಲ್ಲಿ ವಿವರಿಸಲಾಗಿದೆ.
ಈ ಮೂರೂ ಇಲಾಖೆಗಳು ಸಲ್ಲಿಸಿದ್ದ ವರದಿಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಒಪ್ಪಿಕೊಂಡಿದೆ.
‘ಕೆ ಸಿ ವ್ಯಾಲಿಯಲ್ಲಿ ಹರಿಯುತ್ತಿರುವ ನೀರಿನಿಂದ ಆ ಕೆರೆಯ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯದ ಮೇಲೆ ಯಾವುದೇ ತೊಂದರೆಯಾಗಿರುವುದಿಒಲ್ಲವೆಂದು ಇಲಾಖೆಗಳು ತಿಳಿಸಿದ್ದರಿಂದ ಈ ಪ್ರಕರಣದಲ್ಲಿ ಸಲ್ಲಿಸಿರುವ ವಿಚಾರಣೆ ವರದಿಗಳನ್ನು ಅಂಗೀಕರಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ,’ ಎಂದು ಆಯೋಗದ ವಿಲೇಖನಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಈ ಆದೇಶದ ಕುರಿತು ಆಯೋಗದ ಅಧ್ಯಕ್ಷ ಶಾಮ್ ಭಟ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೋರಮಂಗಲ ಚಲ್ಲಘಟ್ಟ (ಕೆಸಿ) ವ್ಯಾಲಿ ಯೋಜನೆಯನ್ನು ಕರ್ನಾಟಕ ಸರ್ಕಾರ 2018 ರಲ್ಲಿ ಪ್ರಾರಂಭಿಸಿತ್ತು. ಬರಪೀಡಿತ ಪ್ರದೇಶಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಅಂತರ್ಜಲವನ್ನು ಮರುಪೂರಣ ಮಾಡಲು ಬೆಂಗಳೂರಿನ ಐದು ಎಸ್‌ಟಿಪಿಗಳಿಂದ ಪ್ರತಿದಿನ 440 ಮಿಲಿಯನ್ ಲೀಟರ್ ಕೊಳಚೆ ನೀರನ್ನು ಸಂಸ್ಕರಿಸುವ ಉದ್ದೇಶವನ್ನು ಹೊಂದಿತ್ತು. ಈ ಯೋಜನೆಯ ಅನುಷ್ಠಾನಕ್ಕೆ 1,342 ಕೋಟಿ ರೂ. ವೆಚ್ಚವಾಗಿದೆ.

ಆರಂಭದಲ್ಲಿ ಕುಡಿಯುವ ನೀರಿನ ಮೇಲೆ ಪರಿಣಾಮ ಬೀರದೆ ಸಂಸ್ಕರಿಸಿದ ಬೆಂಗಳೂರಿನ ತ್ಯಾಜ್ಯ ನೀರನ್ನು ನೀರಾವರಿಗಾಗಿ ಮರುಬಳಕೆ ಮಾಡುವ ಉದ್ದೇಶವನ್ನು ಹೊಂದಿದ್ದರೂ ಸಹ ಕೆ ಸಿ ವ್ಯಾಲಿ ಯೋಜನೆಯು ಅಂತಿಮವಾಗಿ ಪ್ರಾಥಮಿಕವಾಗಿ ಅಂತರ್ಜಲ ಮರುಪೂರಣ ಉಪಕ್ರಮವಾಗಿ ಕಾರ್ಯನಿರ್ವಹಿಸಿತು. ಈ ವಿಧಾನವು ನೀರಾವರಿ ಸೌಲಭ್ಯಗಳಿಗೆ ನೀರನ್ನು ಬಳಸುವುದನ್ನು ಒಳಗೊಂಡಿದೆ. ಜೊತೆಗೆ ಈ ಪ್ರದೇಶದಲ್ಲಿ ಕುಡಿಯುವ ನೀರಿನ ಗುಣಮಟ್ಟ ಮತ್ತು ಲಭ್ಯತೆಯ ಮೇಲೂ ಪರಿಣಾಮ ಬೀರುತ್ತದೆ ಎಂದೂ ಹೇಳಲಾಗಿತ್ತು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಆರಂಭಿಕ ಹಂತಗಳಲ್ಲಿ ಯೋಜನೆಯ ಕುರಿತು ಕೆಲವು ಮೌಲ್ಯಮಾಪನ ಅಧ್ಯಯನಗಳನ್ನು ನಡೆಸಿತ್ತು. ಈ ಯೋಜನೆಗೆ ನಿರಂತರ ಮೇಲ್ವಿಚಾರಣೆ ಅತ್ಯಗತ್ಯವಾಗಿದೆ. ಇದನ್ನು ಐಐಎಸ್‌ಸಿ ಮೇಲ್ವಿಚಾರಣೆ ನೋಡಿಕೊಳ್ಳಲಿದೆ ಎಂದು ಹೇಳಲಾಗಿತ್ತು.

ಆದರೆ ಐಐಎಸ್‌ಸಿ ಅಥವಾ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಸಂಸ್ಕರಿಸಿದ ನೀರಿನ ಗುಣಮಟ್ಟದ ಬಗ್ಗೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಿದೆಯೇ ಎಂಬ ಬಗ್ಗೆ ಯಾವುದೇ ದಾಖಲೆಗಳು ಸಾರ್ವಜನಿಕವಾಗಿ ಲಭ್ಯವಿಲ್ಲ. ಅಲ್ಲದೇ ಐಐಎಸ್ಸಿ ಮತ್ತು ಕೆಎಸ್‌ಪಿಸಿಬಿಯೂ ಸಹ ಒಂದೇ ಒಂದು ವರದಿ ಅಥವಾ ದತ್ತಾಂಶವನ್ನು ಬಿಡುಗಡೆ ಮಾಡಿಲ್ಲ ಎನ್ನುತ್ತಾರೆ ಪಾನಿ.ಅರ್ಥ್‌ನ ಸಹ-ಸಂಸ್ಥಾಪಕಿ ನಿರ್ಮಲಾ ಗೌಡ.

ಭೌತ-ರಾಸಾಯನಿಕ ಮತ್ತು ಬ್ಯಾಕ್ಟೀರಿಯಾದ ನಿಯತಾಂಕಗಳ ಜೊತೆಗೆ, ಜೈವಿಕ ಸೂಚ್ಯಂಕಗಳು ಮತ್ತು ಟ್ರೋಫಿಕ್ ಸ್ಥಿತಿ ಸೇರಿದಂತೆ ಜೈವಿಕ ನಿಯತಾಂಕಗಳ ಮೌಲ್ಯಮಾಪನ ಮಾಡಲಾಗಿದೆ. ಇದು ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪಡೆಯುವ ಜಲಮೂಲಗಳ ಹೆಚ್ಚು ಸಮಗ್ರ ಸ್ಥಿತಿಯನ್ನು ಒದಗಿಸುತ್ತದೆ. ಈ ಎಲ್ಲಾ ಡೇಟಾವನ್ನು ಸಂಗ್ರಹಿಸಲಾಗಿದೆ. ಮತ್ತು ನೀರಿನ ಗುಣಮಟ್ಟದ ಗುರಿಗಳೊಂದಿಗೆಈ ದತ್ತಾಂಶವನ್ನು ಹೋಲಿಸಲಾಗುತ್ತದೆ. ಈ ಹೋಲಿಕೆಯು ನೀರಿನ ಗುಣಮಟ್ಟದಲ್ಲಿನ ಅಂತರವನ್ನು ಗುರುತಿಸಲು ಕಾರಣವಾಗುತ್ತದೆ. ಮತ್ತು ಅಗತ್ಯವಿರುವ ಮಾಲಿನ್ಯ ನಿಯಂತ್ರಣದ ಸ್ವರೂಪ ಮತ್ತು ಪ್ರಮಾಣವನ್ನು ಗುರುತಿಸಲು ಸಹಾಯ ಮಾಡುತ್ತದೆ.
ಆದರೆ ಈ ಯಾವುದನ್ನೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಅನುಸರಿಸುತ್ತಿಲ್ಲ ಎನ್ನುತ್ತದೆ ಪಾನಿ.ಅರ್ಥ್ ಸಂಸ್ಥೆ. ಈ ಯೋಜನೆಯ ಭಾಗವಾಗಿರುವ 122 ಕೆರೆಗಳಲ್ಲಿ ಕೇವಲ ನರಸಾಪುರ, ಮುಳಬಾಗಿಲು ಮತ್ತು ಹುಲ್ದೇನಹಳ್ಳಿಯ ಈ ಮೂರು ಕೆರೆಗಳನ್ನು ಮಾತ್ರ ಕೆಎಸ್‌ಪಿಸಿಬಿಯು ಮೇಲ್ವಿಚಾರಣೆ ಮಾಡುತ್ತಿದೆ. ವಿಶೇಷವೆಂದರೇ ಈ ಯೋಜನೆಗೂ ಮೊದಲೂ ಈ ಮೂರು ಕೆರೆಗಳನ್ನು ಮೇಲ್ವಿಚಾರಣೆ ಮಾಡುತ್ತಿತ್ತು ಎಂದು ಗೊತ್ತಾಗಿದೆ.

ಕೆ ಸಿ ವ್ಯಾಲಿ ಮತ್ತು ಎಚ್ ಎನ್ ವ್ಯಾಲಿ ಯೋಜನೆಯು ಅವೈಜ್ಞಾನಿಕವಾಗಿದೆ. ಇದರಿಂದ ಸಾಕಷ್ಟು ಜನರು ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ. ಇದು ಜನರ ಶುದ್ದ ಕುಡಿಯುವ ನೀರಿನ ಹಕ್ಕಿಗೆ ಕಂಟಕ ಪ್ರಾಯವಾಗಲಿದೆ ಎಂದು ಆಕ್ಷೇಪಿಸಿ ಆರ್ ಆಂಜನೇಯ ರೆಡ್ಡಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತ್ತು.
ಕೋರಮಂಗಲ ಮತ್ತು ಚಲ್ಲಘಟ್ಟ ವ್ಯಾಲಿ (ಕೆ ಸಿ ವ್ಯಾಲಿ) ಮತ್ತು ಹೆಬ್ಬಾಳ ಮತ್ತು ನಾಗವಾರ ವ್ಯಾಲಿಗೆ (ಎಚ್ ಎನ್ ವ್ಯಾಲಿ) ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಿದ್ಧಪಡಿಸಿರುವ ಪರಿಸರ ಪರಿಣಾಮ ಪರಿಶೀಲನಾ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಕೂಡ ಆದೇಶಿಸಿತ್ತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸರ್ಕಾರಿ ವಕೀಲೆ ಎಚ್ ವಾಣಿ ಅವರು “ನ್ಯಾಯಾಲಯದ ನಿರ್ದೇಶನದಂತೆ ಐಐಎಸ್‌ಸಿ ರೂ. 2.37 ಕೋಟಿ ಬಿಡುಗಡೆ ಮಾಡಲಾಗಿದೆ. ಅವರು ಬೃಹತ್ ವರದಿಯನ್ನು ನೀಡಿದ್ದಾರೆ. ಸದರಿ ವರದಿಯನ್ನು ಒಂದು ವಾರದಲ್ಲಿ ನ್ಯಾಯಾಲಯದ ಮುಂದೆ ಮಂಡಿಸಲಾಗುವುದು ಬಳಿಕ ಪ್ರಕರಣವನ್ನು ವಿಲೇವಾರಿ ಮಾಡಬಹುದು” ಎಂದಿದ್ದರು.
ಈ ವೇಳೆ ಮಧ್ಯಪ್ರವೇಶ ಕೋರಿ ಮನವಿ ಸಲ್ಲಿಸಿದ್ದ ಹಿರಿಯ ವಕೀಲ ಎಕ್ಸ್ ಎಂ ಜೋಸೆಫ್ “ಯಾವುದೇ ತೆರನಾದ ಪರಿಶೀಲನಾ ವರದಿಯನ್ನು ಪಡೆಯದೇ ರಾಜ್ಯ ಸರ್ಕಾರವು ಟೆಂಡರ್ ಕರೆದಿದೆ. ಇದನ್ನು ಮುಂದುವರಿಸಲು ಅವಕಾಶ ನೀಡಬಾರದು” ಎಂದು ಕೋರಿದ್ದರು.
ಕೆ.ಸಿ. ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಹರಿಯುವ ನೀರು ಕಲುಷಿತವಾಗುತ್ತಿದೆ. ಇದರಿಂದ ಸ್ಥಳೀಯ ಕೆರೆಗಳು, ಅಂತರ್ಜಲ ಹಾಗೂ ಕೊಳವೆಬಾವಿ ನೀರು ಸಹ ಕಲುಷಿತಗೊಂಡಿದೆ. ತ್ಯಾಜ್ಯ ನೀರು ಶುದ್ಧೀಕರಣ ಘಟಕದ (STP) ನಿಷ್ಕ್ರಿಯ ಸ್ಥಿತಿ ಮತ್ತು ಹಾಳಾದ ಮ್ಯಾನ್‌ಹೋಲ್‌ಗಳಿಂದಾಗಿ ನಗರದ ತ್ಯಾಜ್ಯ ನೀರು ನೇರವಾಗಿ ಕೆರೆಗಳಿಗೆ ಹರಿಯುತ್ತಿರುವುದೇ ಇದಕ್ಕೆ ಮೂಲ ಕಾರಣ. ಈ ಕಲುಷಿತ ನೀರು ಚರ್ಮದ ಕಾಯಿಲೆಗಳು, ಕ್ಯಾನ್ಸರ್ ಅಂಶಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರುಪೀಠವು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ, ಜಿಲ್ಲಾಡಳಿತವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅನೇಕ ದೂರುಗಳಿದ್ದವು.
ಎಸ್‌ಟಿಪಿ ಘಟಕಗಳ ವೈಫಲ್ಯ
ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳು (STP) ಸರಿಯಾಗಿ ಕಾರ್ಯನಿರ್ವಹಿಸದೇ ನಿಷ್ಕ್ರಿಯ ಸ್ಥಿತಿಯಲ್ಲಿವೆ ಅಥವಾ ಸರಿಯಾಗಿ ಮೇಲ್ದರ್ಜೇಗೇರಿಸಿಲ್ಲ ಎಂದು ಆರೋಪಿಸಲಾಗಿತ್ತು. ನಗರಸಭೆ ನಿರ್ಮಿಸಿದ ಮ್ಯಾನ್‌ಹೋಲ್‌ಗಳು ಹಾಳಾಗಿರುವುದರಿಂದ ಕಲುಷಿತ ನೀರು ನೇರವಾಗಿ ಕೆರೆಗಳಿಗೆ ಹರಿಯುತ್ತಿದೆ. ಕಲುಷಿತ ಕೆರೆಗಳ ನೀರನ್ನು ಬಳಸುವುದು ಚರ್ಮದ ಸಮಸ್ಯೆಗಳು ಮತ್ತು ಅಂತರ್ಜಲದಲ್ಲಿ ಕ್ಯಾನ್ಸರ್ ಅಂಶಗಳನ್ನು ಹೆಚ್ಚಿಸಲು ಕಾರಣವಾಗುತ್ತಿದೆ. ಕೆರೆಗಳಿಗೆ ಹರಿಯುವ ಕಲುಷಿತ ನೀರು ಅಂತರ್ಜಲವನ್ನೂ ಕಲುಷಿತಗೊಳಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಲಾಗಿತ್ತು.

ಎಸ್‌ಟಿಪಿ ಘಟಕಗಳನ್ನು ಮೇಲ್ದರ್ಜೇಗೇರಿಸಬೇಕು. ಕಲುಷಿತ ನೀರನ್ನು ಸರಿಯಾಗಿ ಶುದ್ಧೀಕರಿಸಲು ಇರುವ ಎಸ್‌ಟಿಪಿ ಘಟಕಗಳನ್ನು ಮೇಲ್ದರ್ಜೇಗೇರಿಸುವ ಮತ್ತು ಹೊಸ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ. ಈ ಸಮಸ್ಯೆಯ ಗಂಭೀರತೆಯನ್ನು ಅರಿತು ನ್ಯಾಯಾಂಗವು ಈ ಹಿಂದೆ ಕ್ರಮ ಕೈಗೊಳ್ಳಲು ಸೂಚಿಸಿತ್ತು, ಆದರೆ ಜಿಲ್ಲಾಡಳಿತವು ಅದರ ಆದೇಶಗಳನ್ನು ಪಾಲಿಸಿರಲಿಲ್ಲ.
ಕೆ ಸಿ ವ್ಯಾಲಿ ನೀರಿನ ಮೂರನೇ ಹಂತದ ಶುದ್ಧೀಕರಣ ನಡೆಯಲೇಬೇಕು. ಪ್ರತಿ ಸರ್ಕಾರದಲ್ಲಿ ಹೋರಾಟಗಾರರು ಈ ವಿಚಾರವನ್ನು ಮಂಡಿಸುತ್ತಲೇ ಬಂದಿದ್ದಾರೆ. ವರ್ಷಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಎರಡು ಹಂತಗಳಲ್ಲಿ ಮಾತ್ರ ಶುದ್ಧೀಕರಿಸಿ ಕಲುಷಿತ ನೀರು ಹರಿಸುತ್ತಿದ್ದಾರೆ. ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ ಎಂದು ಹೇಳಲಾಗಿತ್ತು.
ಜಿಲ್ಲೆಯ ಜನರು, ಜಾನುವಾರುಗಳ ಆರೋಗ್ಯ, ಕೃಷಿ ಮೇಲೆ ಪರಿಣಾಮ ಉಂಟಾಗುತ್ತಲೇ ಇದೆ.

ಏಷ್ಯಾದಲ್ಲಿ ಟೊಮೋಟೋ ಬೆಳೆಯಲ್ಲಿ ಕೋಲಾರ ಮುಂಚೂಣಿಯಲ್ಲಿದೆ. ಟೊಮೊಟೋ ಬೆಳೆಗೆ ದೊಡ್ಡ ಹೊಡೆತ ಬಿದ್ದಿದೆ. ವಿವಿಧ ರೋಗಗಳು ಬರುತ್ತಿವೆ. ಗೆಡ್ಡೆ ಗೆಣಸು ರೀತಿಯ ಬೆಳೆಗಳ ಮೇಲೂ ತೊಂದರೆ ಆಗುತ್ತಿದೆ. ಕೆ ಸಿ ವ್ಯಾಲಿ ನೀರು ರಾಸಾಯನಿಕ ಮಿಶ್ರಿತವಾಗಿರುವುದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದು ಸುತ್ತಲಿನ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದರು.
ಅಂತರ್ಜಲ ವೃದ್ಧಿಯಾಗಿರುವುದು ನಿಜ. ಆದರೆ ಅಂತರ್ಜಲವೇ ಕಲುಷಿತವಾಗಿದೆ. ಅಮ್ಮೇರಹಳ್ಳಿ ಕೆರೆಯೊಂದರಲ್ಲೇ 60 ಕೊಳವೆ ಬಾವಿಗಳಿವೆ. ಅವು ಈಗ ಬಳಕೆ ಆಗುತ್ತಿಲ್ಲ. ಆದರೆ ತೆರೆದ ಕೊಳವೆ ಬಾವಿಯಿಂದ ನೀರು ಹೋಗಿ ಮತ್ತೊಂದು ಕೊಳವೆ ಬಾವಿ ಸೇರಿಕೊಳ್ಳುತ್ತಿದೆ. ಕೊಳಚೆ ನೀರಿನ ಸಂಸ್ಕರಣಾ ಘಟಕದಿಂದ ಬಿಡುಗಡೆಯಾದ ನೀರು ಭಾರ ಲೋಹಗಳು ಮತತು ರಾಸಾಯನಿಕಗಳಿಂದ ಕಲುಷಿತವಾಗಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಾದ ಟಿ ವಿ ರಾಮಚಂದ್ರ ಅವರು ವರದಿ ನೀಡಿದ್ದನ್ನು ಸ್ಮರಿಸಬಹುದು.





