ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಸಂಖ್ಯೆಯ ದನಗಳ ಮರಣಪೂರ್ವ, ಮರಣೋತ್ತರ ಪರೀಕ್ಷೆ; ಉಲ್ಲಂಘನೆ

ಬೆಂಗಳೂರು; ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಕಾಯ್ದೆಯನ್ನು ಉಲ್ಲಂಘಿಸಿ ಜಾನುವಾರುಗಳನ್ನು ಕೊಲ್ಲಲು ಮತ್ತು ಕೊಂದ ಜಾನುವಾರುಗಳ ಮರಣೋತ್ತರ ಪರೀಕ್ಷೆಗೆ ಅನರ್ಹ ಪಶು ವೈದ್ಯರನ್ನು ನೇಮಕ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.

 

ಅಲ್ಲದೇ ಹಲಾಲ್, ಮಾಂಸ ಮತ್ತು ಇತರ ಆಹಾರ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರಾಟ ಮಾಡುತ್ತಿರುವ ಪ್ರತಿಷ್ಠಿತ ಕಂಪನಿಗಳಲ್ಲೊಂದಾದ ಫೇರ್‍‌ ಎಕ್ಸ್‌ಪೋರ್ಟ್‌ ಪ್ರೈವೈಟ್‌ ಲಿಮಿಟೆಡ್‌ಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಈ ಪ್ರಮಾಣ ಪತ್ರಗಳನ್ನು ನೀಡುವ ಉದ್ದೇಶದಿಂದ ಅನರ್ಹ ಪಶು ವೈದ್ಯಾಧಿಕಾರಿಗಳನ್ನೇ ಮರು ನಾಮನಿರ್ದೇಶನಗೊಳಿಸಿ ನೇಮಿಸಿ, ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ.

 

ಹಾಗೆಯೇ ಒಂದೇ ದಿನದಲ್ಲಿ ನೂರಾರು ಹೆಚ್ಚು ಸಂಖ್ಯೆಯ ದನಗಳ ಮರಣಪೂರ್ವ ಮತ್ತು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಅದೇ ರೀತಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ವಧೆ) ನಿಯಮಗಳು 2001ರ 4(2)ನ್ನು ನಿರಂತರವಾಗಿ ಉಲ್ಲಂಘಿಸಲಾಗುತ್ತಿದೆ. ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಕೋರಿಕೆಗೂ ಮುನ್ನವೇ ಪಶು ವೈದ್ಯರನ್ನು ನಾಮನಿರ್ದೇಶನ ಮಾಡಲಾಗುತ್ತಿದೆ ಎಂಬ ಗುರುತರವಾದ ಆರೋಪಗಳು ಕೇಳಿ ಬಂದಿವೆ.

 

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಆಯುಕ್ತರು, ಪಶು ವೈದ್ಯಾಧಿಕಾರಿಗಳ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಸ್ತಾವನೆಗಳಿಗೂ ಸರ್ಕಾರವು ನಿಗದಿತ ಕಾಲಮಿತಿಯೊಳಗೆ ಅನುಮತಿ ನೀಡುತ್ತಿಲ್ಲ. ಹೀಗಾಗಿ ದೂರುದಾರ ಹುಣಚಿರಾಯ ಮೊಟಗಿ ಎಂಬುವರು ರಾಜ್ಯಪಾಲರ ಕಚೇರಿ ಮೆಟ್ಟಿಲು ಹತ್ತಿದ್ದಾರೆ.

 

ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನ ಪ್ರತಿ

 

 

ಆಪಾದಿತ ಅಧಿಕಾರಿಗಳ ವಿರುದ್ಧ ವಿಚಾರಣೆಗೆ ಪೂರ್ವಾನುಮತಿ ನೀಡಬೇಕು ಎಂದು  ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ದಾಖಲೆಗಳ ಸಹಿತ ಮನವಿ ಸಲ್ಲಿಸಿರುವುದು ಗೊತ್ತಾಗಿದೆ.

 

ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ಮನವಿ ಪ್ರತಿ

 

ಅಲ್ಲದೇ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೂ ದೂರು ಸಲ್ಲಿಸಿದ್ದಾರೆ.

 

 

ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಿರುವ ದೂರಿನ ಪ್ರತಿ

 

ಕಲ್ಬುರ್ಗಿಯಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿಯಮಾಗಳಿಗಳು, ಕಾಯ್ದೆ ಮತ್ತು ಅಧಿನಿಯಮಗಳ ಉಲ್ಲಂಘನೆ ಮಾಡಿರುವ ಆರೋಪದಡಿಯಲ್ಲಿ ಆಯುಕ್ತರು ಮತ್ತು ಪಶು ವೈದ್ಯಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸುವ ಸಂಬಂಧ ಸಲ್ಲಿಕೆಯಾಗಿರುವ ಮನವಿಯೂ ಸೇರಿದಂತೆ ಸಮಗ್ರ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ದೂರಿನಲ್ಲೇನಿದೆ?

 

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಕಾಯ್ದೆಯನ್ನು ಉಲ್ಲಂಘಿಸಿರುವ ಪಶು ವೈದ್ಯಾಧಿಕಾರಿಗಳು ಮತ್ತು ಇಲಾಖೆಯ ಆಯುಕ್ತರ ವಿರುದ್ಧ ನಂದಿ ಪ್ರಾಣಿ ಕಲ್ಯಾಣ ಸೊಸೈಟಿಯ ಹುಣಚಿರಾಯ ಮೊಟಗಿ ಎಂಬುವರು 2025ರ ಫೆ.17ರಂದು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು.

 

 

ಕರ್ನಾಟಕ ಗೋಹತ್ಯೆ ತಡೆಗಟ್ಟುವಿಕೆ ಮತ್ತು ಗೋ ಸಂರಕ್ಷಣೆ ಕಾಯ್ದೆ  2020 ಕಾಯ್ದೆಯಂತೆ ಅಧೀನ ಕಾಯ್ದೆ 18(1)ಡಿ) ಪ್ರಕಾರ ಪಶು ವೈದ್ಯರು ಸಕ್ಷಮ ಪ್ರಾಧಿಕಾರ ಎಂದು ನೇಮಕ ಮಾಡಿರುವುದಿಲ್ಲ ಎಂದು ಸರ್ಕಾರವೇ ಅಧಿಕೃತವಾಗಿ ಉತ್ತರ ನೀಡಿತ್ತು.

 

 

 

ಅಧೀನ ಕಾಯ್ದೆ (3)ರಂತೆ ರಾಜ್ಯದಲ್ಲಿ ಪಶು ವೈದ್ಯರು ಅರ್ಹತೆ ಪಡೆದಿಲ್ಲ. ಆದರೂ ನಿಯಮಗಳನ್ನು ಉಲ್ಲಂಘಿಸಿ, ಪಶು ವೈದ್ಯರನ್ನು ಅಕ್ರಮವಾಗಿ ನೇಮಕ ಮಾಡಲಾಗುತ್ತಿದೆ. ಸರ್ಕಾರದ ಅನುಮತಿ ಪಡೆಯದೇ ಏಕಪಕ್ಷೀಯವಾಗಿ ಜಾನುವಾರುಗಳನ್ನು ಕೊಲ್ಲಲು ಮತ್ತು ಕೊಂದ ಜಾನುವಾರುಗಳ ಮರಣೋತ್ತರ ಪರೀಕ್ಷೆಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಆಯುಕ್ತರಾದ ರೂಪಾ ಐಎಎಸ್‌ ಆದೇಶ ಮಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

 

 

ಕಸಾಯಿ ಖಾನೆ ಸ್ಥಾಪಿಸಲು ಮತ್ತು ಪ್ರಸ್ತುತ ಇರುವ ಕಸಾಯಿ ಖಾನೆಗಳನ್ನು ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರ ಅಧೀನದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸರ್ವೋಚ್ಛ ನ್ಯಾಯಾಲಯವು (ರಿಟ್‌ ಪಿಟಿಷನ್ 309/2003 ಮತ್ತು 330/2001) ನೀಡಿರುವ ಆದೇಶದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ರಾಜ್ಯದಲ್ಲಿರುವ ಕಸಾಯ ಖಾನೆಗಳನ್ನು ಪರಿಸೀಲಿಸಬೇಕು. ಉಚ್ಛ ನ್ಯಾಯಾಲಯಗಳಿಗೆ ವರದಿ ನೀಡಬೆಕು. ಮತ್ತು ರಾಜ್ಯದಲ್ಲಿ ಈ ಸಂಬಂಧಿತ ಮೇಲ್ವಿಚಾರಣೆ ಸಮಿತಿಗಳನ್ನು ರಚನೆ ಮಾಡಬೇಕು. ಈ ಸಮಿತಿ ಮೂಲಕ ವರದಿ ಸಲ್ಲಿಸಲು ಆದೇಶವಿದೆ.

 

ಇದರ ಪ್ರಕಾರ ರಾಜ್ಯದಲ್ಲಿಯೂ 2012ರಲ್ಲಿ ಸಮಿತಿ (ಯುಡಿಸಿ 321 ಜಿಇಎಲ್ 2012 10/09/2012) ರಂದು ಸಮಿತಿ ರಚಿಸಲಾಗಿದೆ. ಈ ಸಂಬಂಧ ಸರ್ವೋಚ್ಛ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದೆ. 2012ರ ಸೆ.10ರಿಂದ ಈ ಸಮಿತಿ ಸದಸ್ಯರುಗಳು ಬದಲಾಗಿಲ್ಲ ಮತ್ತು ಸಮಿತಿಯ ಕಾರ್ಯಚಟುವಟಿಕೆಗಳನ್ನೂ ನಡೆಸಿಲ್ಲ. ಕೇವಲ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಕೆಗೆ ಮಾತ್ರ ಸೀಮಿತವಾಗಿದೆ. ಈ ಮೂಲಕ ಸರ್ವೋಚ್ಛ ನ್ಯಾಯಾಲಯಕ್ಕೆ ಆದೇಶ ಉಲ್ಲಂಘನೆ ಆಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಕೇಂದ್ರ ಸರ್ಕಾರದ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾಲಕಾಲಕ್ಕೆ ಕಸಾಯಿಖಾನೆಗಳ ಮಾಲಿನ್ಯ ಕುರಿತು ಕೇಂದ್ರ ಸರ್ಕಾರ/ಸರ್ವೋಚ್ಛ ನ್ಯಾಯಾಲಯಗಳ ಆದೇಶ, ಸುತ್ತೋಲೆಗಳನ್ನು ಪಾಲಿಸಬೇಕು. ಪ್ರಸ್ತುತ ಚಾಲ್ತಿಯಲ್ಲಿರುವ ಕಸಾಯಿಖಾನೆಗಳು ಮತ್ತು ಕಸಾಯಿಖಾನೆಗಳನ್ನು ಪ್ರಾರಂಭಿಸುತ್ತಿರುವ ಸಂದರ್ಭದಲ್ಲಿ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಪಾಲನೆ ಅಗುತ್ತಿಲ್ಲ.

 

ರಾಜ್ಯ ಸರ್ಕಾರದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೂ ಭ್ರಷ್ಟಾಚಾದರದಲ್ಲಿ ತೊಡಗಿಕೊಂಡಿದೆ. ಯಾವುದೇ ಸ್ಥಳದಲ್ಲಾದರೂ ಯಾವ ನಿಯಮಗಳನ್ನೂ ಪರಿಶೀಲಿಸದೇ ಮನ ಬಂದಂತೆ ಸಿಎಫ್‌ಇ ಮತ್ತು ಸಿಎಫ್‌ಒ ನೀಡುತ್ತಿದೆ. ಈ ಮೂಲಕ ಅಕ್ರಮವಾಗಿ ಕಸಾಯಿಖಾನೆಗಳ ಸ್ಥಾಪನೆಗೆ ದಾರಿಮಾಡಿಕೊಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ,

 

ಅದೇ ರೀತಿ ಡಿಜಿಸಿಎ ಕೇಂದ್ರ ನಾಗರಿಕ ವಿಮಾನಯಾನ ವಿಭಾಗದ ಮುಖ್ಯಸ್ಥರು ಸಹ, ಕೇಂದ್ರ ನಾಗರಿಕ ವಿಮಾನಯಾನ ನಿಯಮಗಳು ಮತ್ತು ಕಾಯ್ದೆಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ದೂರಿರುವ ಮೊಟಗಿ ಅವರು ಕಲ್ಬುರ್ಗಿಯ ತಾಜ್‌ ಕೋಲ್ಡ್‌ ಸ್ಟೋರೇಜ್‌ ಘಟಕ ಸ್ಥಾಪನೆಯಾಗಿರುವ ಪ್ರಕರಣವನ್ನು ನಿದರ್ಶನವನ್ನಾಗಿ ಒದಗಿಸಿದ್ದಾರೆ.

 

ತಾಜ್‌ ಕೋಲ್ಡ್‌ ಸ್ಟೋರೆಜ್‌ ಎಂಬ ಖಾಸಗಿ ಸಂಸ್ಥೆಗೆ ಏರ್‍‌ಪೋರ್ಟ್ ಅಥಾರಿಟಿ ಆಫ್‌ ಇಂಡಿಯಾವು 2022 ನವೆಂಬರ್‍‌ 28ರಿಂದ 2030ರ ನವೆಂಬರ್‍‌ 28ರವರೆಗೆ ಎನ್‌ ಒ ಸಿ ನೀಡಿದೆ. ಈ ನಿರಾಕ್ಷೇಪಣಾ ಪತ್ರ ನೀಡುವಾಗ ತಾಜ್‌ ಕೋಲ್ಡ್‌ ಸ್ಟೋರೇಜ್‌, ಏರ್‍‌‌ಪೋರ್ಟ್‌ನಿಂದ 7.8 ಕಿ ಮೀ ದೂರದಲ್ಲಿದೆ ಎಂದು ನಕಾಶೆಯೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ಸಲ್ಲಿಸಿದ್ದಾರೆ.

 

ಆದರೆ ವಾಸ್ತವದಲ್ಲಿ ವಿಮಾನ ನಿಲ್ದಾಣದ ಏರ್‍‌ ಟವರ್‍‌ ರೇಡಿಯೇಷನ್ 10 ಕಿ ಮೀ ವ್ಯಾಪ್ತಿಯಲ್ಲಿ ಯಾವುದೇ ತರಹದ ಮಾಂಸದ ಅಂಗಡಿ ಸಹ ಇರಬಾರದು ಎಂಬ ನಿಯಮವಿದೆ. ಈ ನಿಯಮ ಇದ್ದರೂ ಸಹ ಇದನ್ನು ಕೆಂದ್ರ ವಿಮಾನಯಾನ ಪ್ರಾಧಿಕಾರದ ಯಾವೊಬ್ಬ ಅಧಿಕಾರಿಗಳೂ ಗಮನಿಸಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿ ದೊಡ್ಡ ಪ್ರಮಾಣದದಲ್ಲಿ ಕಸಾಯಿ ಖಾನೆ ಸ್ಥಾಪಿಸಲಾಗಿದೆ. ಆದರೂ ಯಾವುದೇ ಕ್ರಮ ವಹಿಸಿಲ್ಲ. ಏರ್‍‌ ಕ್ರಾಫ್ಟ್‌ ನಿಯಮಗಳ 1937ನ್ನು ಉಲ್ಲಂಘನೆ ಆಗಿದೆ. ಅದರೂ ಸಹ ಡಿಜಿಸಿಎ ಈ ಕಾಯ್ದೆ ಅಡಿಯಲ್ಲಿ ಯಾವುದೇ ಪರವಾನಿಗೆ ಇಲ್ಲದಿದ್ದರೂ ಸಹ ಈ ಕಸಾಯಿಖಾನೆ ಚಟುವಟಿಕೆ ನಡೆಸುತ್ತಿದೆ ಎಂದು ದೂರುದಾರ ಆಪಾದಿಸಿರುವುದು ಗೊತ್ತಾಗಿದೆ.

 

ಕಲಬುರಗಿ ಜಿಲ್ಲಾಧಿಕಾರಿಗಳು ಸಹ ಕಸಾಯಿಖಾನೆ ನಿಯಮದಂತೆ ಚೆಕ್‌ ಲಿಸ್ಟ್ ನಂತೆ ಆಡಿಟ್ ಮಾಡಿಲ್ಲ ಮತ್ತು ಕಸಾಯಿಖಾನೆ ಮೇಲುಸ್ತುವಾರಿ ಸಮಿತಿಗೆ ವರದಿ ನೀಡಿಲ್ಲ. ಜಾನುವಾರು ಕಟಾವಣೆ ಪರವಾನಿಗೆಯನ್ನು ಯಾವುದೇ ಪ್ರಾಧಿಕಾರದಿಂದ ಪಡೆದಿಲ್ಲ. ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಪಶು ವೈದ್ಯರನ್ನು ನೇಮಕ ಮಾಡಿರುತ್ತಾರೆ. ಇದರಿಂದ ಸರ್ಕಾರದ ಆದೇಶ / ಕಾನೂನಿಗೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಆಗಿದೆ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ನಿಯಮ ಉಲ್ಲಂಘಿಸಿ  ತಾಜ್‌ ಕೋಲ್ಡ್‌ ಸ್ಟೋರೇಜ್‌ ಮತ್ತು ಫೇರ್‍‌ ಎಕ್ಸ್‌ಪೋರ್ಟ್ಸ್‌ ಪ್ರೈ ಲಿಗೆ  2024ರ ಅಕ್ಟೋಬರ್‍‌ 16ರಂದೇ  ಪ್ರಮಾಣ ಪತ್ರ ವಿತರಿಸಲಾಗಿತ್ತು.

 

ಪ್ರಮಾಣ ಪತ್ರ ನೀಡಿದ ಪ್ರತಿ

 

ತಾಜ್‌ ಕೋಲ್ಡ್‌ ಸ್ಟೋರೇಜ್‌ ಘಟಕ ಪರಿಶೀಲಿಸಲು ಡಾ ವೈಜನಾಥ್‌ ಮಾಮನಿ ಅವರನ್ನು 2024ರ ನವೆಂಬರ್‍‌ 11ರಂದು ನಾಮನಿರ್ದೇಶನಗೊಳಿಸಲಾಗಿತ್ತು.

 

ನಾಮ ನಿರ್ದೇಶನ ಮಾಡಿರುವ ಪ್ರತಿ

 

 

ಈ ನಾಮನಿರ್ದೇಶನ ಪ್ರಕ್ರಿಯೆ ಆದ ನಂತರ ತಾಜ್‌ ಕೋಲ್ಡ್‌ ಸ್ಟೋರೇಜ್‌ಗೆ ಡಾ ವೈಜನಾಥ್ ಅವರು ಪ್ರಮಾಣ ಪತ್ರ ನೀಡಿದ್ದರು.

 

ತಾಜ್‌ ಕೋಲ್ಡ್‌ ಸ್ಟೋರೇಜ್‌ ಗೆ ನೀಡಿರುವ ಪ್ರಮಾಣ ಪತ್ರದ ಪ್ರತಿ

 

 

ಕಲ್ಬುರ್ಗಿಯ ಪ್ರಕರಣದಲ್ಲಿನ ಈ ದೂರಿಗೆ ಸಂಬಂಧಿಸಿದಂತೆ ಅಧಿಕಾರಿಗಳ ವಿರುದ್ಧ ಅಭಿಯೋಜನೆ ಮಂಜೂರಾತಿಗೆ ದೂರುದಾರ ಕೋರಿದ್ದರು. ಈ ದೂರಿಗೆ ಸಂಬಂಧಿಸಿದಂತೆ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೇಯು ವಸ್ತು ನಿಷ್ಠ ವರದಿಯನ್ನೂ ಸರ್ಕಾರಕ್ಕೆ ನೀಡಿದೆ. ಈ ವರದಿಯತ್ತಲೂ ಸಚಿವ ಕೆ ವೆಂಕಟೇಶ್‌ ಅವರು ಕಣ್ಣಾಡಿಸಿಲ್ಲ ಎಂದು ಗೊತ್ತಾಗಿದೆ.

 

ಈ ಮಧ್ಯೆ ವಸ್ತು ನಿಷ್ಠ  ವರದಿಯನ್ನಾಧರಿಸಿ ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2025ರ ಸೆ.29ರಂದು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ವಿಜ್ಞಾನ, ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ.

 

ಟಿಪ್ಪಣಿಯಲ್ಲೇನಿದೆ?

 

ಈ ಪ್ರಕರಣದಲ್ಲಿ ಪಶು ವೈದ್ಯರನ್ನು ನಾಮನಿರ್ದೇಶನಗೊಳಿಸಲು ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರವು 2025ರ ಜನವರಿ 30ರಂದು ಕೋರಿಕೆ ಸಲ್ಲಿಸಿತ್ತು. ಆದರೆ ಇದಕ್ಕೂ ಮೊದಲೇ ಅಂದರೆ 2024ರ ನವೆಂಬರ್‍‌11ರಂದೇ ಯಾವ ಕಾರಣಕ್ಕಾಗಿ ಪಶು ವೈದ್ಯರನ್ನು ನಾಮನಿರ್ದೇಶನಗೊಳಿಸಲಾಗಿದೆ ಎಂದು ಸ್ಪಷ್ಟ ಅಭಿಪ್ರಾಯ ನೀಡಬೇಕು.

 

 

ಪಶುಸಂಗೋಪನಾ ಇಲಾಖೆ, ಕೃಷಿ ಸಚಿವಾಲಯ, ರಾಜ್ಯ ಪಶುಸಂಗೋಪನಾ ಇಲಾಖೆ, ರಫ್ತು ಪರಿಶೀಲನಾ ಮಂಡಳಿ, ಇನಿಡಾದ ಪಶುವೈದ್ಯಕೀಯ ಮಂಡಳಿ ಮತ್ತು ಇತರ ವಿಷಯ ತಜ್ಞರ ಪ್ರತಿನಿಧಿಗಳನ್ನು ಒಳಗೊಂಡ ಅಂತರ-ಸಚಿವಾಲಯ ಸಮಿತಿಯು ಮಾಂಸ ಸಂಸ್ಕರಣಾ ಘಟಕಗಳ ವಿವರವಾದ ತಪಾಸಣೆಯನ್ನು ನಡೆಸಿದ ನಂತರ ಘಟಕಕ್ಕೆ ನೋಂದಣಿ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅದರಂತೆ ಕಸಾಯಿಖಾನೆಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದಿದ್ದಾರೆಯೇ ಅಥವಾ ಒಂದು ವೇಳೆ ಅನುಮತಿ ಪಡೆಯದಿದ್ದಲ್ಲಿ ಕಸಾಯಿಖಾನೆ ವಿರುದ್ಧ ಯಾವ ಕ್ರಮವಹಿಸಲಾಗಿದೆ ಎಂಬ ಅಭಿಪ್ರಾಯ ನೀಡಬೇಕು ಎಂದು ಸೂಚಿಸಿರುವುದು ಗೊತ್ತಾಗಿದೆ.

 

 

ಪಶು ವೈದ್ಯರು ಒಂದೇ ದಿನದಲ್ಲಿ  100ಕ್ಕೂ ಹೆಚ್ಚು ಸಂಖ್ಯೆಯ ದನಗಳ ಮರಣ ಪೂರ್ವ ಮತ್ತು ಮರಣೋತ್ತರ ಪರೀಕ್ಷೆ ನಡೆಸಿರುವುದು ಕಂಡು ಬರುತ್ತದೆ.

 

 

 

ಪಶು ವೈದ್ಯರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (ವಧೆ) ನಿಯಮಗಳು 2001ರ 4(2)ನ್ನು ನಿರಂತರವಾಗಿ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ನಿಯಮಗಳನ್ನು ಉಲ್ಲಂಘಿಸಿರುವ ಈ ಪಶು ವೈದ್ಯರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ನಿರ್ದೇಶಿಸಿದೆ.

 

ಅದೇ ರೀತಿ ಏರ್‍‌ ಕ್ರಾಫ್ಟ್‌ ನಿಯಮಗಳು 1937ರ ಅಡಿ ಕಸಾಯಿಖಾನೆಗಳನ್ನು ಅನುಮತಿ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸ್ಪಷ್ಟ ಅಭಿಪ್ರಾಯ ನೀಡಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನಿರ್ದೇಶಿಸಿರುವುದು ಗೊತ್ತಾಗಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹಿರಿಯ ಅಧಿಕಾರಿಗಳು ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಈ ಅನಧಿಕೃತ ಟಿಪ್ಪಣಿ ಹೊರಡಿಸುವ ಮುನ್ನವೇ ಆಪಾದಿತ ಪಶು ವೈದ್ಯಾಧಿಕಾರಿಗಳಿಗೆ ಕಾರಣ ಕೇಳಿ ನೋಟೀಸ್‌ ಕೂಡ ಜಾರಿಯಾಗಿತ್ತು.

 

ನೋಟೀಸ್‌ನಲ್ಲೇನಿತ್ತು?

 

ಫೇರ್‍‌ ಎಕ್ಸ್‌ಪೋರ್ಟ್ಸ್‌ ಪ್ರೈವೈಟ್‌ ಲಿಮಿಟೆಡ್‌ ಮತ್ತು ತಾಜ್‌ ಕೋಲ್ಡ್‌ ಸ್ಟೋರೇಜ್‌ ಗೆ ಪ್ರಮಾಣ ಪತ್ರ ನೀಡಲು (Ante-Mortem and Post-Mortem) ಮುಖ್ಯ ಪಶು ವೈದ್ಯಾಧಿಕಾರಿ, ಪಶು ವೈದ್ಯಾಧಿಕಾರಿಗಳನ್ನು ಮರು ನಾಮನಿರ್ದೇಶನಗೊಳಿಸಿ ನೇಮಿಸಿ ನಿಯಮಗಳನ್ನು ಉಲ್ಲಂಘನೆ ಮಾಡಿರುತ್ತೀರಿ ಎಂದು ಆಪಾದಿಸಿತ್ತು.

 

ಆಪಾದಿತ ಅಧಿಕಾರಿಗಳಿಗೆ ಕಾರಣ ಕೇಳಿ ಜಾರಿಯಾಗಿರುವ ನೋಟೀಸ್‌ ಪ್ರತಿ

 

 

ತಾಜ್‌ ಕೋಲ್ಡ್‌ ಸ್ಟೋರೇಜ್‌ ಸಂಸ್ಥೆಯಲ್ಲಿ (Ante-Mortem and Post-Mortem) ಮಾಡಿ ಪ್ರಮಾಣ ಪತ್ರ ನೀಡಲು ಕಲ್ಬುರ್ಗಿಯ ಮುಖ್ಯ ಪಶು ವೈದ್ಯಾಧಿಕಾರಿ ಡಾ ವೈಜನಾಥ್‌ ಎಸ್‌ ಮಮ್ಮನಿ ಮತ್ತೊಬ್ಬ ಫೇರ್ ಎಕ್ಸ್‌ಪೋರ್ಟ್‌ ಸಂಸ್ಥೆಗೆ ಮರಣೋತ್ತರ ಮತ್ತು ಮರಣ ಪೂರ್ವ  ಪ್ರಮಾಣ ಪತ್ರವನ್ನು ನೀಡಲು ನಿಮ್ಮ ಹಂತದಲ್ಲಿಯೇ ಪಶು ವೈದ್ಯಾಧಿಕಾರಿ ಡಾ ಬದ್ರುದ್ದೀನ್‌ ಅವರನ್ನು ಮರು ನಾಮನಿರ್ದೇಶನಗೊಳಿಸಿ ನಿಯಮಗಳನ್ನು ಉಲ್ಲಂಘಿಸಿರುತ್ತೀರಿ ಎಂದು ನೋಟೀಸ್‌ನಲ್ಲಿ ತಿಳಿಸಲಾಗಿತ್ತು.

 

 

ಈ ಸಂಬಂಧ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಯಾವುದೇ ಆದೇಶ, ಸೂಚನೆ, ಅನುಮತಿ ಇಲ್ಲ. ಹೀಗಾಗಿ ಸಿಸಿಎ ನಿಯಮ 1957ರ ಅನ್ವಯ ನಿಮ್ಮ ಮೇಲೆ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂಬುದಕ್ಕೆ 3 ದಿನಗಳೊಂದಿಗೆ ಸೂಕ್ತ ಕಾರಣಗಳೊಂದಿಗೆ ಸಮಜಾಯಿಷಿ ನೀಡಬೇಕು ಎಂದು 2025ರ ಜನವರಿ 24ರಂದೇ ಕಲ್ಬುರ್ಗಿ ಜಿಲ್ಲೆಯ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶಿಸಲಾಗಿತ್ತು.

 

ಈ ಕುರಿತು ಪಶು ಸಂಗೋಪನೆ, ಪಶು ವೈದ್ಯಕೀಯ ವಿಜ್ಞಾನ, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಸಚಿವ ಕೆ ವೆಂಕಟೇಶ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts