ಬೆಂಗಳೂರು; ಕೋಟ್ಯಂತರ ರುಪಾಯಿ ಬೆಲೆಬಾಳುವ ವೈದ್ಯಕೀಯ ಉಪಕರಣಗಳನ್ನು ಖರೀದಿಸಿ ನಂತರ ಖಾಸಗಿ ಆರೋಗ್ಯ ಉದ್ಯಮಗಳಿಗೆ ಕನಿಷ್ಠ ದರದಲ್ಲಿ ಮಾರಾಟ ಮಾಡುವ ರಾಜ್ಯ ಸರ್ಕಾರ, ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ದಾಖಲಾಗುತ್ತಿರುವ ಹುಬ್ಬಳ್ಳಿಯ ಕಿಮ್ಸ್‌ಗೆ ವೈದ್ಯಕೀಯ ಉಪಕರಣಗಳ ಖರೀದಿಗೆ ಅನುದಾನ ಒದಗಿಸುತ್ತಿಲ್ಲ.
ಭಂಡ ನಿರ್ಲಕ್ಷ್ಯದ ಪರಮಾವಧಿಯನ್ನು ಪ್ರದರ್ಶಿಸುತ್ತಿರುವ ರಾಜ್ಯ ಸರ್ಕಾರ, ಅನುದಾನದ ಪ್ರಮಾಣವನ್ನು ಹೆಚ್ಚಿಸದೇ ಉತ್ತರ ಕರ್ನಾಟಕದ ಪಾಲಿಗೆ ಸಂಜೀವಿನಿಯಂತಿರುವ ಕಿಮ್ಸ್ ನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದೆ. ಕಿಮ್ಸ್‌ನ ನಿರ್ದೇಶಕರು ಆರೋಗ್ಯ ಮತ್ತು ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2020ರ ಫೆ.20ರಂದು ಬರೆದಿರುವ ಪತ್ರ, ಹಲವು ವಿಷಯಗಳನ್ನು ಹೊರಗೆಡವಿದೆ.
ಹಾವೇರಿ, ಗದಗ್, ಬೆಳಗಾವಿ, ಕಾರವಾರ, ಬಾಗಲಕೋಟೆ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯಿಂದ ಕಿಮ್ಸ್‌ಗೆ ಪ್ರತಿ ದಿನ 1,500 ಸಂಖ್ಯೆಯಲ್ಲಿ ಒಳರೋಗಿಗಳು, 2,500 ಹೊರರೋಗಿಗಳು ದಾಖಲಾಗುತ್ತಿದ್ದರೂ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಸೂಕ್ತ ಅನುದಾನವನ್ನೂ ನೀಡದ ಕಾರಣ ರೋಗಿಗಳಿಗೆ ಹಾಸಿಗೆ, ಹೊದಿಕೆ, ಆಹಾರ ಸಾಮಗ್ರಿಗಳು ರೋಗಿಗಳಿಗೆ ಸಕಾಲದಲ್ಲಿ ತಲುಪುತ್ತಿಲ್ಲ.
ಶಸ್ತ್ರಚಿಕಿತ್ಸಾ ಘಟಕಗಳ ನವೀಕರಣ, ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ, ಹೈಟೆಕ್ ತುರ್ತು ಚಿಕಿತ್ಸಾ ವಾಹನ ಖರೀದಿ, ಅಪಘಾತ, ತುರ್ತುಸೇವೆ ವಿಭಾಗದ ನವೀಕರಣ, ಎಂಆರ್‌ಐ ಯಂತ್ರ ಖರೀದಿ, ಕ್ಷ-ಕಿರಣ ವಿಭಾಗದ ಉನ್ನತೀಕರಣ, ಹೃದಯ ವಿಭಾಗಕ್ಕೆ ಸಿವ್ಹಿಟಿಎಸ್ ಹೊಸ ಉಪಕರಣ ಖರೀದಿ ಸೇರಿದಂತೆ ಇನ್ನಿತರೆ ಯೋಜನೆಗಳಿಗೆ 217.10 ಕೋಟಿ ರು. ಅನುದಾನ ಒದಗಿಸಿ ಎಂದು ಕಿಮ್ಸ್ ನಿರ್ದೇಶಕರು ಬರೆದಿದ್ದ ಪತ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ ಶ್ರೀರಾಮುಲು ಈವರೆವಿಗೂ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ.
60 ವರ್ಷ ಇತಿಹಾಸ ಹೊಂದಿರುವ ಕಿಮ್ಸ್ ಪ್ರತಿ ವರ್ಷ ಆಯವ್ಯಯ ಸಲ್ಲಿಸುತ್ತಿದ್ದರೂ ಸರ್ಕಾರ ಮಾತ್ರ ಪ್ರಸ್ತಾಪಿಸಲಾಗಿರುವ ಅನುದಾನಕ್ಕಿಂತ ಕಡಿಮೆ ಅನುದಾನ ಬಿಡುಗಡೆ ಮಾಡುತ್ತಿದೆ. ಕಳೆದ 3 ವರ್ಷಗಳಲ್ಲಿ ಒಟ್ಟು 62,310.38 ಲಕ್ಷ ರು.ಮೊತ್ತ ಅನುದಾನ ಕೋರಿದ್ದ ಕಿಮ್ಸ್‌ಗೆ ಸರ್ಕಾರ, 38,153.00 ಲಕ್ಷ ರು.ಗಳನ್ನು ಮಂಜೂರು ಮಾಡುತ್ತಿದೆ. ಅಂದರೆ ಕಿಮ್ಸ್ ಕೋರಿದ್ದ ಅನುದಾನದ ಪೈಕಿ ಅರ್ಧದಷ್ಟನ್ನು ಮಾತ್ರ ಮಂಜೂರು ಮಾಡುತ್ತಿರುವುದು ಕಿಮ್ಸ್ ನಿರ್ದೇಶಕರು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.
ಅನುದಾನ ಕೊಡುವುದಲ್ಲಿ ಜಿಪುಣತನ ತೋರಿರುವ ಸರ್ಕಾರ, 2019-20ನೇ ಸಾಲಿನಲ್ಲಿ ಔಷಧ ರಾಸಾಯನಿಕಗಳಿಗೆ 1094.86 ಲಕ್ಷ ರು. ವೆಚ್ಚದ ಪೈಕಿ ಇನ್ನೂ 900.00 ಲಕ್ಷದ ಬಿಲ್‌ಗಳನ್ನೂ ಬಾಕಿ ಇರಿಸಿಕೊಂಡಿದೆ. ಹೀಗಾಗಿ ಕಿಮ್ಸ್ ಆಸ್ಪತ್ರೆಯ ದೈನಂದಿನ ಚಟುವಟಿಕೆಗಳಿಗೂ ಹಿನ್ನಡೆಯಾಗಿದೆ ಎಂಬ ವಿಚಾರ ಗೊತ್ತಾಗಿದೆ.
2017-18ರಲ್ಲಿ ಕಿಮ್ಸ್ 18305.57 ಲಕ್ಷ ರು.ಗಳನ್ನು ಕೇಳಿದ್ದರೆ ಸರ್ಕಾರ 1129.00 ಲಕ್ಷ ರು.ಗಳನ್ನಷ್ಟೇ (7086.57 ಲಕ್ಷ ರು. ವ್ಯತ್ಯಾಸ) ಮಂಜೂರು ಮಾಡಿತ್ತು. ಅದೇ ರೀತಿ 2018-19ರಲ್ಲಿ 19910.30 ಲಕ್ಷ ರು.ಗಳ ಪೈಕಿ 12380.00 ಲಕ್ಷ ರು.(7530.30 ಲಕ್ಷ ರು. ವ್ಯತ್ಯಾಸ) 2019-20ರಲ್ಲಿ 24094.57 ಲಕ್ಷ ರು. (9540.57 ಲಕ್ಷ ರು. ವ್ಯತ್ಯಾಸ) ಅನುದಾನ ಪೈಕಿ ಸರ್ಕಾರ 14554.00 ಲಕ್ಷ ರು.ಗಳನ್ನು ಮಂಜೂರು ಮಾಡಿರುವುದು ನಿರ್ದೇಶಕರ ಪತ್ರದಿಂದ ತಿಳಿದು ಬಂದಿದೆ.
1,800 ಹಾಸಿಗೆಗಳನ್ನು ಹೊಂದಿರುವ ಕಿಮ್ಸ್‌ಗೆ ಒಳರೋಗಿಗಳ ದಾಖಲಾತಿ ಪ್ರವೇಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಔಷಧ ರಾಸಾಯನಿಕಗಳು, ಪೀಠೋಪಕರಣ, ಹಾಸಿಗೆ ಹೊದಿಕೆ, ಹೊಸ ತಂತ್ರಜ್ಞಾನವಿರುವ ಯಂತ್ರೋಪಕರಣಗಳ ಖರೀದಿ, ಅತ್ಯಾಧುನಿಕ ಅಡುಗೆ ಮನೆ, ಯಾಂತ್ರಿಕೃತ ಲಾಂಡ್ರಿ ಅಳವಡಿಕೆ ಸೇರಿದಂತೆ ಇನ್ನಿತರೆ ಅತ್ಯಗತ್ಯ ವೆಚ್ಚಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಸಾಲದಾಗುತ್ತಿದೆ ಎಂದು ಪತ್ರದಲ್ಲಿ ನಿರ್ದೇಶಕರು ಪತ್ರದಲ್ಲಿ ವಿವರಿಸಿದ್ದಾರೆ.
‘ಕಿಮ್ಸ್‌ಗೆ ಮೊದಲು ಯೋಜನೆಗಳಡಿಯಲ್ಲಿ ಕಟ್ಟಡ ಹಾಗೂ ಆವರಣ ನಿರ್ವಹಣೆ, ಪುಸ್ತಕ ಖರೀದಿ ಸೇರಿದಂತೆ ಇನ್ನಿತರೆ ವೆಚ್ಚಗಳಿಗೆ ಪ್ರತ್ಯೇಕ ಅನುದಾನ ಬಿಡುಗಡೆ ಮಾಡುತ್ತಿತ್ತು. ಆದರೀಗ ಕೇವಲ ಯೋಜನೇತರದಡಿಯಲ್ಲಿ ಮಾತ್ರ ಅನುದಾನ ಬಿಡುಗಡೆ ಮಾಡುತ್ತಿದೆ. ಕಿಮ್ಸ್ ಕಾಲೇಜು ಹಾಗೂ ಆಸ್ಪತ್ರೆಯ ಕಟ್ಟಡಗಳು 60 ವರ್ಷ ಹಳೆಯ ಕಟ್ಟಡಗಳಾಗಿವೆಯಲ್ಲದೆ ಪ್ರತಿ ವರ್ಷವೂ ಇದರ ನಿರ್ವಹಣೆ ವೆಚ್ಚ ಗಣನೀಯವಾಗಿ ಹೆಚ್ಚಳವಾಗುತ್ತಿದೆ,’ ಎಂದು ಕಿಮ್ಸ್ ನಿರ್ದೇಶಕರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ದುರಸ್ತಿ ಮತ್ತು ನಿರ್ವಹಣೆಗೆ ಸುಮಾರು 175.00 ಲಕ್ಷ ರು. ವೆಚ್ಚ ಭರಿಸಿದ್ದರೂ ಈ ಪೈಕಿ ಸುಮಾರು 50.00 ಲಕ್ಷ ರು. ಮೊತ್ತದ ಬಿಲ್‌ಗಳು ಬಾಕಿ ಇರಿಸಿಕೊಂಡಿದೆ. ಅದೇ ರೀತಿ ಕಿಮ್ಸ್‌ನ ಆವರಣದಲ್ಲಿರುವ ಒಳ ರಸ್ತೆಗಳ ಡಾಂಬರೀಕರಣ ಮಾಡಿರುವ ಸಂಬಂಧ 140.00 ಲಕ್ಷ ರು. ಬಿಲ್‌ಗಳು ಪಾವತಿಗೆ ಬಾಕಿ ಇರುವುದು ಪತ್ರದಿಂದ ತಿಳಿದು ಬಂದಿದೆ.
ಇದಷ್ಟೇ ಅಲ್ಲ, ಕಿಮ್ಸ್‌ನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳ ಸಂಖ್ಯೆ 150-200ಕ್ಕೆ ಹೆಚ್ಚಳವಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಖ್ಯೆಯೂ 170ಕ್ಕೆ ಹೆಚ್ಚಳವಾಗಿದೆಯಲ್ಲದೆ, ಸಿಬ್ಬಂದಿ ನೇಮಕಾತಿ ಮತ್ತು ಉಪಕರಣಗಳ ಖರೀದಿಗೂ ಸೂಕ್ತ ಅನುದಾನವಿಲ್ಲದೆ ಬಳಲುತ್ತಿರುವ ಸಂಗತಿ ಪತ್ರದಿಂದ ಗೊತ್ತಾಗಿದೆ.
2019-20ನೇ ಸಾಲಿಗೆ ಅಧಿಕಾರಿಗಳ ಹಾಗೂ ಸಿಬ್ಬಂದಿ ವೇತನಕ್ಕಾಗಿ 10184.00 ಲಕ್ಷ ರು. ಅನುದಾನಲ ಹಂಚಿಕೆಯಾಗಿದ್ದರೂ ಜನವರಿ ಅಂತ್ಯಕ್ಕೆ 7638.00 ಲಕ್ಷ ರು. ಮಾತ್ರ ಬಿಡುಗಡೆಯಾಗಿತ್ತು. ಇನ್ನೂ 2546.00 ಲಕ್ಷ ರು. 4ನೇ ಕಂತಿನ ಅನುದಾನ ಬಿಡುಗಡೆ ಆಗಬೇಕಿದೆ. ಸಿಬ್ಬಂದಿಗಳ ಭವಿಷ್ಯ ನಿಧಿ ವಂತಿಕೆಯಲ್ಲಿಯೂ ಬಾಕಿ ಉಳಿಸಿಕೊಂಡಿರುವ ಕಿಮ್ಸ್, 600.00 ಲಕ್ಷ ರು.ಗಳನ್ನು ಕಾರ್ಮಿಕ ಇಲಾಖೆಗೆ ಈವರೆವಿಗೂ ಪಾವತಿಸಿಲ್ಲ.