ಬೆಂಗಳೂರು; ಹಜ್ ಭವನ ನಿರ್ಮಾಣಕ್ಕಾಗಿ ಬಿಡುಗಡೆಯಾಗಿರುವ 10 ಕೋಟಿ ರುಪಾಯಿಗಳನ್ನು ಬಳಕೆ ಮಾಡಿಕೊಳ್ಳಲು ಇದೀಗ ಜಟಾಪಟಿ ಶುರುವಾಗಿದೆ. 2024-25ನೇ ಸಾಲಿನ ಆಯವ್ಯಯದಲ್ಲಿ ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕೆ ಮಂಜೂರಾಗಿದ್ದ 10 ಕೋಟಿ ರುಪಾಯಿಗಳನ್ನು ಕಲ್ಬುರ್ಗಿಯಲ್ಲಿ ಹಜ್ ಭವನ ನಿರ್ಮಾಣಕ್ಕೆ ಬಳಸಲು ಸರ್ಕಾರವು ಮುಂದಾಗಿದೆ.
ಮಂಗಳೂರು ಹಜ್ ಭವನ ನಿರ್ಮಾಣಕ್ಕಾಗಿ ಬಿಡುಗಡೆಯಾಗಿರುವ ಅನುದಾನವನ್ನು ಕಲ್ಬುರ್ಗಿ ಹಜ್ ಭವನಕ್ಕೆ ಬಳಸಿಕೊಳ್ಳಲು ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿತ್ತು. ಆದರೂ ಅದನ್ನು ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯು ಬದಿಗೊತ್ತಿದೆ. ಹಣ ಬಿಡುಗಡೆ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಇಲಾಖೆಯು 2025ರ ಸೆ.19ರಂದು ಪತ್ರ ಬರೆದಿದೆ.
ಈ ಪತ್ರದ ಪ್ರತಿ ಮತ್ತು ಹಜ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಡತದ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಪ್ರಕರಣದ ವಿವರ
2024-25ನೇ ಸಾಲಿನ ಆಯವ್ಯಯದಲ್ಲಿ ಮಂಗಳೂರು ಹಜ್ ಭವನ ನಿರ್ಮಾಣಕ್ಕಾಗಿ 10 ಕೋಟಿ ರು ಅನುದಾನವನ್ನು ಬಿಡುಗಡೆ (ಸರ್ಕಾರದ ಆದೇಶ ಸಂಖ್ಯೆ; MWD-WHJ/09/2024, 24.07.2024) ಮಾಡಲಾಗಿತ್ತು.

ಆದರೆ 2014-15ನೇ ಸಾಲಿನಲ್ಲಿ ಕಲ್ಬುರ್ಗಿ ನಗರದಲ್ಲಿಯೂ ಹಜ್ ಭವನ ನಿರ್ಮಾಣ ಮಾಡಲು ಜಿಲ್ಲಾಧಿಕಾರಿಗಳು 5 ಎಕರೆ ಜಾಗ ಮಂಜೂರು ಮಾಡಿದ್ದರು. ಈ ಜಾಗವನ್ನು ಸಮತಟ್ಟು ಮಾಡಿದ್ದ ಅಧಿಕಾರಿಗಳು, ಕಾಂಪೌಂಡ್ ಕೂಡ ಹಾಕಿದ್ದರು. ಈ ಜಾಗದಲ್ಲಿ ಹಜ್ ಭವನ ನಿರ್ಮಾಣ ಮಾಡಬೇಕು ಎಂದು ಶಾಸಕರಾದ ಕನಿಸ್ ಫಾತಿಮಾ ಅವರು ಸರ್ಕಾರವನ್ನು ಕೋರಿದ್ದರು ಎಂಬುದು ಟಿಪ್ಪಣಿ ಹಾಳೆಗಳಿಂದ ತಿಳಿದು ಬಂದಿದೆ.
ಕಣ್ತಪ್ಪಿನಿಂದ 10 ಕೋಟಿ ಬಿಡುಗಡೆ
ಆದರೆ 2024-25ನೇ ಸಾಲಿನ ಆಯವ್ಯಯದಲ್ಲಿ ಕಲ್ಬುರ್ಗಿ ನಗರದಲ್ಲಿ ಹಜ್ ಭವನ ನಿರ್ಮಾಣ ಮಾಡಲು ಬಿಡುಗಡೆ ಆಗಬೇಕಿದ್ದ ಅನುದಾನವು ಮಂಗಳೂರು ಹಜ್ ಭವನಕ್ಕೆ ಬಿಡುಗಡೆಯಾಗಿತ್ತು. ಈ ಹಣವು ಕಣ್ತಪ್ಪಿನಿಂದ ಬಿಡುಗಡೆ ಮಾಡಲಾಗಿತ್ತು. ಹೀಗಾಗಿ ಮಂಗಳೂರು ಹಜ್ ಭವನ ನಿರ್ಮಾಣಕ್ಕಾಗಿ ಬಿಡುಗಡೆ ಆಗಿರುವ 10 ಕೋಟಿಯನ್ನು ಕಲ್ಬುರ್ಗಿಗೆ ಬಿಡುಗಡೆ ಮಾಡಬೇಕು ಎಂದು ಕನೀಸ್ ಫಾತಿಮಾ ಅವರು ಕೋರಿಕೆ ಸಲ್ಲಿಸಿದ್ದರು ಎಂಬುದು ಟಿಪ್ಪಣಿ ಹಾಳೆಗಳಿಂದ ಗೊತ್ತಾಗಿದೆ.

ವಿಶೇಷವೆಂದರೇ ಕಲ್ಬುರ್ಗಿಯಲ್ಲಿನ ಹಜ್ ಭವನ ನಿರ್ಮಾಣಕ್ಕಾಗಿ 1 ಕೋಟಿ ರು ಅನುದಾನ ನೀಡಲು 2014-15ನೇ ಸಾಲಿನ ಆಯವ್ಯಯದಲ್ಲಿ ಘೋಷಣೆ ಮಾಡಲಾಗಿತ್ತು. ಅದರಂತೆ 2013ರ ಡಿಸೆಂಬರ್ 13ರಂದೇ ಕಲ್ಬುರ್ಗಿ ಜಿಲ್ಲಾಧಿಕಾರಿಗಳು, ಕಲ್ಬುರ್ಗಿ ತಾಲೂಕಿನ ಹಾಗರಗಾ ಗ್ರಾಮದ ಸರ್ವೆ ನಂಬರ್ 315ರಲ್ಲಿ 3.10 ಎಕರೆ ಜಮೀನನ್ನು ಈದ್ಗಾ ಮೈದಾನಕ್ಕಾಗಿ ಕಾಯ್ದಿರಿಸಿ ಆದೇಶ ಹೊರಡಿಸಿತ್ತು.
ಈ ಮಧ್ಯೆ 2024-25ನೇ ಸಾಲಿನ ಆಯವ್ಯಯದಲ್ಲಿ ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣ ಘೋಷಣೆ ಮಾಡಲಾಗಿತ್ತು. ಅಲ್ಲದೇ 2024ರ ಜುಲೈ 24ರಂದು ಆದೇಶ ಹೊರಡಿಸಿತ್ತು. ಮಂಗಳೂರಿನಲ್ಲಿ ಹಜ್ ಭವನ ನಿರ್ಮಾಣಕ್ಕಾಗಿ ಜಮೀನು, ನಿವೇಶನವನ್ನು ಪಡೆದುಕೊಳ್ಳುವ ಷರತ್ತಿಗೊಳಪಟ್ಟು ನಿರ್ಮಾಣ ಕಾಮಗಾರಿಗೆ 10 ಕೊಟಿ ರು ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

ಈ ಬೆಳವಣಿಗೆಗಳ ಮುನ್ನ ಅಂದರೇ 2025ರ ಏಪ್ರಿಲ್ 29ರಂದೇ ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಯು ಸರ್ಕಾರಕ್ಕೆ ಪತ್ರ ಬರೆದಿದ್ದರು. ಮಂಗಳೂರು ಹಜ್ ಭವನ ನಿರ್ಮಾಣ ಮಾಡಲು ವ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಣೆಯಾಗಿರುವಂತೆ ಬಿಡುಗಡೆಯಾಗಿರುವ 10 ಕೋಟಿ ರು.ಗಳನ್ನು ಕಲ್ಬುರ್ಗಿ ಹಜ್ ಭವನ ನಿರ್ಮಾಣಕ್ಕೆ ಉಪಯೋಗಿಸಿಕೊಳ್ಳಲು ಅನುಮೋದನೆ ನೀಡಲು ಕೋರಿದ್ದರು.
ಈ ಕೋರಿಕೆ ಕುರಿತು ಸಹಮತಿಗಾಗಿ ಇಲಾಖೆಯು ಆರ್ಥಿಕ ಇಲಾಖೆಯ ಅಭಿಪ್ರಾಯ ಕೋರಿತ್ತು. ಆರ್ಥಿಕ ಇಲಾಖೆಯು ಈ ಸಂಬಂಧ ಹಲವು ಅಂಶಗಳಿಗೆ ಸ್ಪಷ್ಟನೆ ಕೋರಿತ್ತು.
ಆರ್ಥಿಕ ಇಲಾಖೆ ಕೋರಿದ್ದರಲ್ಲೇನಿತ್ತು?
ಮಂಗಳೂರಿನ ಹಜ್ ಭವನಕ್ಕೆ ಒದಗಿಸಲಾದ ಅನುದಾನವು ಪೂರ್ಣವಾಗಿ ಬಿಡುಗಡೆಯಾಗಿದೆಯೇ, ಬಿಡುಗಡೆಯಾಗಿದ್ದಲ್ಲಿ ಎಷ್ಟು ಮೊತ್ತವನ್ನು ವೆಚ್ಚ ಮಾಡಲಾಗಿದೆ, ಮಾಡದಿದ್ದಲ್ಲಿ ಈ ಮೊತ್ತವನ್ನು ಎಲ್ಲಿ ಠೇವಣಿ ಮಾಡಲಾಗಿದೆ, ಮಂಗಳೂರಿನ ಹಜ್ ಭವನ ನಿರ್ಮಾಣ ಕಾಮಗಾರಿ ಯಾವ ಹಂತದಲ್ಲಿದೆ, ಒಂದು ವೇಳೆ ಮಂಗಳೂರಿನ ಹಜ್ ಭವನಕ್ಕೆ ಒದಗಿಸಲಾದ ಅನುದಾನವನ್ನು ಕಲ್ಬುರ್ಗಿ ಹಜ್ ಭವನ ನಿರ್ಮಾಣಕ್ಕೆ ಒದಗಿಸಿದಲ್ಲಿ ಅನುದಾನ ಕೊರತೆಯಾಗುವುದಿಲ್ಲವೇ ಎಂದು ಆರ್ಥಿಕ ಇಲಾಖೆಯು ಸ್ಪಷ್ಟನೆ ಕೋರಿತ್ತು.

ಹಜ್ ಸಮಿತಿ ನೀಡಿದ್ದ ಮಾಹಿತಿಯಲ್ಲೇನಿದೆ?
ಆರ್ಥಿಕ ಇಲಾಖೆಯು ಕೋರಿದ್ದ ಹಲವು ಅಂಶಗಳಿಗೆ ಹಜ್ ಸಮಿತಿಯು ಮಾಹಿತಿ ನೀಡಿತ್ತು. ಈ ಮಾಹಿತಿ ಪ್ರಕಾರ 2017-18ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಗೆ ಮಂಗಳೂರಿನ ಹಜ್ ಭವನ ನಿರ್ಮಾಣಕ್ಕಾಗಿ 10 ಕೋಟಿ ರು.ಗಳನ್ನು ಮಂಜೂರು ಮಾಡಿ ಬಿಡುಗಡೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ತಾಲೂಕಿನ ಕೆಂಚಾರು ಗ್ರಾಮದ 1.98 ಎಕರೆ ವಿಸ್ತೀರ್ಣದ ನಿವೇಶನವು ಜಿಲ್ಲಾಧಿಕಾರಿಗಳಿಂದ ಹಂಚಿಕೆಯಾಗಿತ್ತು. ಈ ಜಮೀನಿನ ಮೇಲೆ ಕೆಲವು ವ್ಯಕ್ತಿಗಳು ರಿಟ್ ಅರ್ಜಿ ದಾಖಲಿಸಿದ್ದರು. ಹೀಗಾಗಿ ಈ ಮೊತ್ತವನ್ನು ವ್ಯಯ ಮಾಡಲು ಸಾಧ್ಯವಾಗಿಲ್ಲ ಎಂದು ಮಾಹಿತಿಯಲ್ಲಿ ವಿವರಿಸಿತ್ತು.

ಅಲ್ಲದೇ ಈ ಅನುದಾನದ ಮೊತ್ತವನ್ನು ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಹಜ್ ಸಮಿತಿ ಹೊಂದಿರುವ ಖಾತೆಯಲ್ಲಿ ಈ ಹಣವನ್ನು ಠೇವಣಿ ಇಡಲಾಗಿದೆ. ಇದರಿಂದ ಬರುತ್ತಿರುವ ಬಡ್ಡಿ ಮೊತ್ತವೂ ಸಹ ಅದೇ ಖಾತೆಯಲ್ಲಿ ಜಮೆ ಮಾಡಲಾಗುತ್ತಿದೆ.
ಅನುದಾನ ಕೊರತೆಯಾಗದು
ಮಂಗಳೂರಿನ ಇನಾಯತ್ ಅಲಿ ಎಂಬುವರು 1.56 ಎಕರೆ ವಿಸ್ತೀರ್ಣದಲ್ಲಿರುವ ತಮ್ಮ ಸ್ವಂತ ಜಮೀನನ್ನು ಹಜ್ ಭವನ ನಿರ್ಮಾಣಕ್ಕೆ ದಾನದ ರೂಪದಲ್ಲಿ ಬಿಟ್ಟುಕೊಟ್ಟಿದ್ದಾರೆ. ಸದ್ಯದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. 2017-18ನೇ ಸಾಲಿನಲ್ಲಿ ಮಂಜೂರಾಗಿರುವ 10 ಕೋಟಿ ಅನುದಾನವನ್ನು ಹಜ್ ಭವನದ ಮೊದಲನೇ ಹಂತದ ನಿರ್ಮಾಣಕ್ಕೆ ಉಪಯೋಗಿಸಲಾಗುವುದು. ಈ ಅನುದಾನವನ್ನೇ ಕಲ್ಬುರ್ಗಿ ಹಜ್ ಭವನ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡರೂ ಸಹ ಅನುದಾನ ಕೊರತೆ ಉಂಟಾಗುವುದಿಲ್ಲ ಎಂದು ಇಲಾಖೆಯು 2025ರ ಮೇ 30ರಂದೇ ಹೇಳಿತ್ತು.

ಇದನ್ನಾಧರಿಸಿ ಆರ್ಥಿಕ ಇಲಾಖೆಗೆ ಸಹಮತಿ ಕೋರಿತ್ತು. ಆದರೆ ಆರ್ಥಿಕ ಇಲಾಖೆಯು ಸಹಮತಿ ನೀಡಿರಲಿಲ್ಲ.
ಆರ್ಥಿಕ ಇಲಾಖೆಯ ಅಭಿಪ್ರಾಯವೇನು?
ಹಜ್ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಆರ್ಥಿಕ ಇಲಾಖೆಯು ಮಂಗಳೂರು ಹಜ್ ಭವನ ನಿರ್ಮಾಣಕ್ಕಾಗಿ ಬಿಡುಗಡೆ ಮಾಡಿರುವ ಅನುದಾವನ್ನು ಕಲ್ಬುರ್ಗಿ ಹಜ್ ಭವನ ನಿರ್ಮಾಣಕ್ಕಾಗಿ ಉಪಯೋಗಿಸಿಕೊಳ್ಳಲು ಸಹಮತಿ ನೀಡಿರಲಿಲ್ಲ. ಹೀಗಾಗಿ ಕಲ್ಬುರ್ಗಿಯಲ್ಲಿ embarking point ಆಗುವವರೆಗೂ ಕಲ್ಬುರ್ಗಿ ಹಜ್ ಭನ ನಿರ್ಮಾಣ ಪ್ರಸ್ತಾವನೆಯನ್ನು ಮುಂದೂಡಬೇಕು ಎಂದು ಆರ್ಥಿಕ ಇಲಾಖೆಯು 2025ರ ಜುಲೈ 14ರಂದು (FD/421/EXP3/2024) ಸೂಚಿಸಿತ್ತು.

ಅಧಿಕಾರಿಗಳು ಈ ಸಂಬಂಧ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರೊಂದಿಗೆ ಚರ್ಚಿಸಿದ್ದರು. ಇದಾದ ನಂತರ ಸಚಿವ ರಹೀಂ ಖಾನ್ ಅವರು ಆರ್ಥಿಕ ಇಲಾಖೆಗೆ ಪತ್ರವನ್ನು ಬರೆದಿದ್ದರು.
ಸಚಿವರ ಪತ್ರದಲ್ಲೇನಿದೆ?
ಕಲ್ಬುರ್ಗಿಯಲ್ಲಿ ಹಜ್ ಭವನ ನಿರ್ಮಾಣ ಮಾಡಲು ಕಲ್ಬುರ್ಗಿಯ ಆಜಾದ್ ಪುರ ಗ್ರಾಮದ ಸರ್ವೆ ನಂಬರ್ 41/9ರಲ್ಲಿ 5 ಎಕರೆ ಜಮೀನನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮಂಜೂರು ಮಾಡಲಾಗಿದೆ. 2014-15ನೇ ಸಾಲಿನಲ್ಲಿಯೇ 1 ಕೋಟಿ ರು ಮಂಜೂರಾಗಿದೆ. ಈ ಹಣವೂ ಜಿಲ್ಲಾಧಿಕಾರಿಗೆ ಬಿಡುಗಡೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಹಜ್ ಯಾತ್ರಾರ್ಥಿಗಳು ಈಗಾಗಲೇ ಹೈದರಾಬಾದ್ embarking point ನಿಂದ ಪ್ರಯಾಣ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿರುವುದು ಗೊತ್ತಾಗಿದೆ.

ಇದಕ್ಕೂ ಮುನ್ನ ಹಜ್ ಯಾತ್ರಾರ್ಥಿಗಳಿಗೆ ಪ್ರಯಾಣವು ಸುಲಭವಾಗಲು ಹಜ್ ಕ್ಯಾಂಪ್‌ನ್ನೂ ಕಲ್ಬುರ್ಗಿ ಹಜ್ ಭವನದಲ್ಲೇ ನಡೆಸಲಾಗುವುದು. ಈ ಭಾಗದಲ್ಲಿನ ಯಾತ್ರಾರ್ಥಿಗಳು ಹಿರಿಯ ವಯಸ್ಸಿನವರಾಗಿದ್ದಾರೆ. ಅಲ್ಲದೇ ಅನಕ್ಷರಸ್ಥರೂ ಆಗಿದ್ದಾರೆ. ಇವರುಗಳಲ್ಲಿ ಹೆಚ್ಚಿನ ಸಂಖ್ಯೆಯವರು ಮೊದಲನೇ ಬಾರಿ ಯಾತ್ರಾರ್ಥಿಗಳಾಗಿದ್ದಾರೆ. ಉದ್ಧೇಶಿತ ಹಜ್ ಭವನದಲ್ಲಿ ವಿಚಾರ ಸಂಕೀರ್ಣ, ಉಪನ್ಯಾಸ, ವಿವಿದೋದ್ದೇಶ ಕಾರ್ಯಕ್ರಮ ನಡೆಸಲಾಗುವುದು. ಸಚಿವ ಪ್ರಿಯಾಂಕ್ ಖರ್ಗೇ ಅವರೂ ಸಹ ಇದಕ್ಕೆ ಒತ್ತಾಸೆಯಾಗಿದ್ದಾರೆ. ಹೀಗಾಗಿ ಕಲ್ಬುರ್ಗಿಯಲ್ಲಿನ ಹಜ್ ಭವನ ನಿರ್ಮಾಣಕ್ಕೆ ಅಗತ್ಯ ಒಪ್ಪಿಗೆ ನೀಡಬೇಕು ಎಂದು ರಹೀಂ ಖಾನ್ ಅವರು ಅರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಕೋರಿದ್ದರು.

ಈ ಮಧ್ಯೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅವರು ಹಜ್ ಸಮಿಯ ಕಾರ್ಯನಿರ್ವಾಹಕ ಅಧಿಕಾರಿಗೆ 2025ರ ಸೆ.15ರಂದು ಪತ್ರ ಬರೆದಿದ್ದರು.

‘ಕಲ್ಬುರ್ಗಿ ಹಜ್ ಭವನ ನಿರ್ಮಾಣಕ್ಕೆ ಅಗತ್ಯವಿರುವ ಅನುದಾವನ್ನು ಪಡೆಯುವ ಮುನ್ನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಪೂರ್ಣ ಅಥವಾ ಭಾಗಶಃ ಅನುದಾನ ಬಿಡುಗಡೆ ಮಾಡುವ ಬಗ್ಗೆ ಒಪ್ಪಿಗೆ ಪಡೆಯಬೇಕು. ನಂತರ ಸಂಪೂರ್ಣ ಮಾಹಿತಿಯೊಂದಿಗೆ ಸರ್ಕಾರಕ್ಕೆ ಮರು ಪ್ರಸ್ತಾವನೆ ಸಲ್ಲಿಸಬೇಕು,’ ಎಂದು ನಿರ್ದೇಶಿಸಿರುವುದು ತಿಳಿದು ಬಂದಿದೆ.





