ಬೆಂಗಳೂರು: ರಾಜ್ಯದ ನಗರ, ಪಟ್ಟಣಗಳಲ್ಲಿ ಉತ್ಪತ್ತಿಯಾಗುತ್ತಿರುವ ಘನ ತ್ಯಾಜ್ಯದಲ್ಲಿ (Solid Waste) ಶೇ. 45ರಷ್ಟು ತ್ಯಾಜ್ಯವನ್ನು ಮಾತ್ರ ಸಂಸ್ಕರಿಸಿ ವಿಲೇವಾರಿ ಮಾಡಲಾಗುತ್ತಿದೆ. ಉಳಿದ ಶೇ.55ರಷ್ಟು ತ್ಯಾಜ್ಯವನ್ನು ತೆರೆದ ಪ್ರದೇಶಗಳಲ್ಲಿ, ಡಂಪ್‌ಸೈಟ್‌ಗಳಲ್ಲಿ ಅಥವಾ ಈಗಾಗಲೇ ಕಸ ಹಾಕುತ್ತಿರುವ ಜಾಗಗಳಲ್ಲಿ ಸುಮ್ಮನೆ ಸುರಿಯಲಾಗುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ರಾಜ್ಯದ ಹತ್ತು ಜಿಲ್ಲೆಗಳಲ್ಲಿರುವ 121 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ. 35.5 ರಷ್ಟು ಅಂದರೆ 43 ನಗರಗಳ ಆಡಳಿತವು ಇನ್ನೂ ತ್ಯಾಜ್ಯ ಸಂಸ್ಕರಣೆ ಮಾಡಲು ಜಾಗವನ್ನೇ ಗುರುತಿಸಿಲ್ಲ. ಇದರರ್ಥ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಸುರಿಯುತ್ತಿವೆ. ಕಸವಿಲೇವಾರಿ ಮೇಲೆ ನಿಗಾ ಇಡಬೇಕಾಗಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಏನೂ ಹೇಳುತ್ತಲೂ ಇಲ್ಲ, ಕೇಳುತ್ತಲೂ ಇಲ್ಲ.
ಮಹಾಲೇಖಪಾಲರು (ಸಿಎಜಿ) ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಲೆಕ್ಕ ಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಸಿಎಜಿಯ ಈ ವರದಿಯನ್ನು 2025ರ ಆಗಸ್ಟ್‌ನಲ್ಲಿ ನಡೆದ ವಿಧಾನ ಸಭೆಯ ಅಧಿವೇಶನದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.
2018 ರಿಂದ 2023ರ ವರೆಗೆ ಒಟ್ಟು ಉತ್ಪತ್ತಿಯಾದ 12,024 ಟಿಪಿಡಿ (ಟನ್ಸ್ ಪರ್ ಡೇ) ತ್ಯಾಜ್ಯದಲ್ಲಿ ಕೇವಲ ಶೇ. 45 ರಷ್ಟು ತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡಲಾಗಿದೆ. ಉಳಿದ ಶೇ. 55 ರಷ್ಟು (ವಾರ್ಷಿಕ 6,623 ಟಿಪಿಡಿ) ಸಂಸ್ಕರಿಸದ ತ್ಯಾಜ್ಯವನ್ನು ತೆರೆದ ಪ್ರದೇಶಗಳು, ಡಂಪ್‌ಸೈಟ್‌ಗಳು ಅಥವಾ ಈಗಲೇ ಖಾಲಿಯಾದ ಪಾರಂಪರಿಕ ತ್ಯಾಜ್ಯ ತಾಣಗಳಲ್ಲಿ ಸುರಿಯಲಾಗುತ್ತಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
2014ರ ಫೆಬ್ರವರಿ ತಿಂಗಳಿನಲ್ಲಿ 12,140 ಟಿಪಿಡಿ ಘನತ್ಯಾಜ್ಯ ಉತ್ಪತ್ತಿಯಾಗಿತ್ತು. ಇದರಲ್ಲಿ 6,639 ಟಿಪಿಡಿ ತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡಲಾಗಿದೆ. 5,501 ಟಿಪಿಡಿ ತ್ಯಾಜ್ಯವನ್ನು ಹಾಗೆಯೇ ವಿಲೇವಾರಿ ಮಾಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ʻಘನತ್ಯಾಜ್ಯ ನಿರ್ವಹಣೆ ನಿಯಮಗಳು-2016ʼ ಸ್ಥಳೀಯ ಸಂಸ್ಥೆಗಳು ಹೇಗೆ ಘನತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂಬ ಕುರಿತು ಸ್ಪಷ್ಟವಾಗಿ ತಿಳಿಸಿದೆ. ಈ ನಿಯಮಗಳನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ನೀಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮಂಡಳಿಯಿಂದ ತ್ಯಾಜ್ಯ ಸಂಸ್ಕರಣೆ, ವಿಲೇವಾರಿ ಸೌಲಭ್ಯಗಳನ್ನು ಸ್ಥಾಪಿಸಲು ಮಂಡಳಿಯಿಂದ ಅನುಮತಿ ಪಡೆದುಕೊಳ್ಳಬೇಕೆಂದೂ ಈ ನಿಯಮಾವಳಿಯಲ್ಲಿ ಸೂಚಿಸಲಾಗಿದೆ. ಸರಿಯಾದ ರೀತಿಯಲ್ಲಿ ಸಂಸ್ಕರಣೆ ಮಾಡದಿದ್ದಲ್ಲಿ, ಅನುಮತಿಯನ್ನು ಅಮಾನತುಗೊಳಿಸುವ ಅಥವಾ ರದ್ದುಗೊಳಿಸುವ ಅಧಿಕಾರವೂ ಮಂಡಳಿಗೆ ಇರುತ್ತದೆ.
ಆದರೆ ಈ ಜವಾಬ್ದಾರಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬುದು ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಸಿಎಜಿಯ ಗಮನಕ್ಕೆ ಬಂದಿದೆ. ಸಂಸ್ಕರಣಾ ಸೌಲಭ್ಯ ಹೊಂದಿರುವ 78 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೇವಲ ಏಳು ನಗರ ಸ್ಥಳೀಯ ಸಂಸ್ಥೆಗಳು ಮಾತ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದಿವೆ. ಉಳಿದವು ಅನುಮತಿಯನ್ನೂ ಪಡೆದಿಲ್ಲ, ಮಂಡಳಿಯೂ ಇವುಗಳ ಮೇಲ್ವಿಚಾರಣೆ ನಡೆಸುತ್ತಿಲ್ಲ.
ಈ ಬಗ್ಗೆ ಸಿಎಜಿಯು ಗಮನ ಸೆಳೆದ ಮೇಲೆ ಮಾಲಿನ್ಯ ನಿಯಂತ್ರಣ ಮಂಡಳಿಯು, ಈ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಿಗೆ ನೋಟಿಸ್ ನೀಡುವುದಾಗಿ ತಿಳಿಸಿದೆ.
ಕಳೆದ ಫೆಬ್ರವರಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ನೇಮಕಗೊಂಡಿದ್ದಾರೆ. ಮಂಡಳಿಯಲ್ಲಿ ಕರ್ತವ್ಯಲೋಪ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಂಡಳಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಸ ಸುರಿಯಲು ನಿರ್ದಿಷ್ಟ ಜಾವೇ ಇಲ್ಲ
ರಾಜ್ಯದ ಹತ್ತು ಜಿಲ್ಲೆಗಳಲ್ಲಿರುವ 121 ನಗರ ಸ್ಥಳೀಯ ಸಂಸ್ಥೆಗಳಲ್ಲಿ 43 ನಗರಗಳ ಆಡಳಿತವು ಇನ್ನೂ ತ್ಯಾಜ್ಯ ಸಂಸ್ಕರಣೆ ಮಾಡಲು ಜಾಗವನ್ನೇ ಗುರುತಿಸಿಲ್ಲ. ಬೆಳಗಾವಿ ಜಿಲ್ಲೆಯ 19 ನಗರಗಳಲ್ಲಿ ಕಸವಿಲೇವಾರಿಗೆ ನಿರ್ದಿಷ್ಟ ಪ್ರದೇಶವನ್ನು ಗುರುತಿಸಲಾಗಿಲ್ಲ. ವಿಜಯಪುರ ಜಿಲ್ಲೆಯ 9, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ತಲಾ ನಾಲ್ಕು ನಗರಗಳಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಈ ಹಿಂದಿನಿಂದಲೂ ಕಸ ಸುರಿಯುತ್ತಿರುವ ಜಾಗದಲ್ಲಿನ (ಪಾರಂಪರಿಕ ತ್ಯಾಜ್ಯ ತಾಣಗಳಲ್ಲಿ) ಕಸವನ್ನು ಕೂಡ ವಿಲೇವಾರಿ ಮಾಡಲಾಗುತ್ತಿಲ್ಲ. ಇದರಿಂದ ಈ ಜಾಗಗಳಲ್ಲಿ ಅಪಾಯಕಾರಿಯಾದ ಕಪ್ಪು ನೀರು (ಲೀಚೇಟ್) ಸೋರಿಕೆಯಾಗುತ್ತಿದ್ದು, ಇದು ಜಲಮೂಲ, ಅಂತರ್ಜಲ ಹಾಗೂ ಸಸ್ಯ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಿಎಜಿ ವರದಿಯು ಗಮನ ಸೆಳೆದಿದೆ.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರವೇ ರಾಜ್ಯದಲ್ಲಿ ಒಟ್ಟು 196 ಈ ರೀತಿ ಈ ಹಿಂದಿನಿಂದಲೂ ಕಸ ಸುರಿಯುತ್ತಿರುವ ಜಾಗವನ್ನು ಗುರುತಿಸಲಾಗಿದೆ. ಈ ಜಾಗದಲ್ಲಿರುವ 178.59 ಲಕ್ಷ ಮೆಟ್ರಿಕ್ ಟನ್ ತ್ಯಾಜ್ಯವನ್ನು ನಿವಾರಿಸಬೇಕಾಗಿದೆ. ಇದಲ್ಲದೆ, ಈಗ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನೂ ಇಲ್ಲಿಯೇ ಸುರಿಯಲಾಗುತ್ತಿದೆ.
ಈ ಜಾಗಗಳಲ್ಲಿ ರಾಶಿ ಬಿದ್ದಿರುವ ಕಸವನ್ನು ನಿವಾರಿಸಲು ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ)ನ ಅಡಿಯಲ್ಲಿ ಕೇಂದ್ರವು, 2023ರ ಮಾರ್ಚ್ 31ಕ್ಕೆ ಗಡುವು ನೀಡಿತ್ತು. ಅಲ್ಲದೆ, 2024ರ ಮಾರ್ಚ್ 31ರ ವೇಳೆಗೆ ಎಲ್ಲ ಕಸ ಸುರಿಯವ ಜಾಗಗಳನ್ನು ಸರಿಯಾಗಿಟ್ಟುಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು. ಆದರೆ ಇದ್ಯಾವುದೂ ಜಾರಿಗೆ ಬಂದಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ʻಘನತ್ಯಾಜ್ಯ ನಿರ್ವಹಣೆ ನಿಯಮಗಳು-2016ʼರ ಪ್ರಕಾರ ಕಸ ಸುರಿಯುವ ಜಾಗದಲ್ಲಿ ಉತ್ಪತ್ತಿಯಾಗುವ ಅಪಾಯಕಾರಿಯಾದ ಕಪ್ಪು ಬಣ್ಣದ ನೀರನ್ನು (ಲೀಚೇಟ್) ತೆರೆದ ಪರಿಸರಕ್ಕೆ ಬಿಡುಗಡೆ ಮಾಡಲೇಬಾರದು. ಆದರೆ ಮಾಲಿನ್ಯ ನಿಯಂತ್ರಣ ಮಂಡಳಿಯ ದಾಖಲೆಯನ್ನು ಪರಿಶೀಸಿದ ಸಂದರ್ಭದಲ್ಲಿ, ರಾಜ್ಯದ 210 ನಗರಗಳಲ್ಲಿನ 213 ಕಸ ಸುರಿಯುವ ಪ್ರದೇಶಗಳ ಪೈಕಿ 137 ಸ್ಥಳಗಳಲ್ಲಿ ಲೀಚೇಟ್ ಸಂಸ್ಕರಣ ಘಟಕವೇ ಇಲ್ಲ ಎಂಬುದು ಸಿಎಜಿಯ ಗಮನಕ್ಕೆ ಬಂದಿದೆ.
ಲೀಚೇಟ್ ಸಂಸ್ಕರಣಾ ಸೌಲಭ್ಯ ಇಲ್ಲದೇ ಇರುವುದು ಸುತ್ತಮುತ್ತಲಿನ ಪ್ರದೇಶವನ್ನು ಕೊಚ್ಚೆಗುಂಡಿಯನ್ನಾಗಿ ರೂಪಿಸುತ್ತದೆ. ಅಲ್ಲದೆ, ಲೀಚೇಟ್ ನೆಲದಾಳಕ್ಕೆ ಇಳಿಯಲು ಕಾರಣವಾಗುತ್ತದೆ. ಇದರಿಂದ ಮೇಲ್ಮೈನೀರು ಮತ್ತು ಅಂತರ್ಜಲ ಮೂಲಗಳೆರಡೂ ಕಲುಷಿತಗೊಳ್ಳುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿನ ಎರಡು ಮತ್ತು ವಿಜಯಪುರ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಂದರಂತೆ ಕಸ ತುಂಬುವ ಸ್ಥಳಗಳ ಬಳಿ ಮಂಡಳಿಯು ನಡೆಸಿದ ಪರೀಕ್ಷೆಯಲ್ಲಿ ಅಂತರ್ಜಲವು ಹೆಚ್ಚು ಕಲುಷಿತಗೊಂಡಿರುವುದು ಬೆಳಕಿಗೆ ಬಂದಿತ್ತು ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಒಳಚರಂಡಿ ನೀರಿನ ಸಂಸ್ಕರಣೆಯೂ ಇಲ್ಲ
ರಾಜ್ಯದಲ್ಲಿ ಒಳಚರಂಡಿ ನೀರಿನ ಸಂಸ್ಕರಣೆಯೂ ಸರಿಯಾಗಿ ನಡೆಯುತ್ತಿಲ್ಲ ಎಂದು ಸಿಎಜಿಯು ಈ ವರದಿಯಲ್ಲಿ ದಾಖಲೆ ಸಹಿತ ವಿವರಿಸಿದೆ. 2021ರ ಜನಸಂಖ್ಯೆಯ ಅಂದಾಜಿನ ಆಧಾರದ ಮೇಲೆ ನಮ್ಮ ರಾಜ್ಯದಲ್ಲಿ 4,458 ಎಂಎಲ್‌ಡಿ (ಮಿಲಿಯನ್ಸ್ ಲೀಟರ್ ಪರ್ ಡೇ) ಒಳಚರಂಡಿ ನೀರು ಉತ್ಪಾದನೆಯಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಸಂಸ್ಕರಿಸಲು ಹೊಂದಿರುವ ಕೊಳಚೆ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಒಟ್ಟು ಸಾಮರ್ಥ್ಯ ಕೇವಲ 2,787.47 ಎಂಎಲ್‌ಡಿ. ಅಂದರೆ ಶೇ.63 ರಷ್ಟು ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯದ ಘಟಕಗಳು ಮಾತ್ರ ಇವೆ. ಆದರೂ ಕೇವಲ 1,958.58 ಎಂಎಲ್‌ಡಿ, ಅಂದರೆ ಶೇ.44 ರಷ್ಟು ಕೊಳಚೆ ನೀರನ್ನು ಮಾತ್ರ ಸಂಸ್ಕರಿಸಲಾಗುತ್ತಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಉಳಿದ 2,499.42 ಎಂಎಲ್‌ಡಿ (ಶೇ.56) ರಷ್ಟು ಕೊಳಚೆ ನೀರನ್ನು ಸಂಸ್ಕರಿಸದೇ ಬಿಡಲಾಗುತ್ತಿದೆ. ಇರುವ ಕೊಳಚೆ ಸಂಶಸ್ಕರಣಾ ಘಕಟಗಳನ್ನೂ (ಎಸ್‌ಟಿಪಿ) ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ, ಸೌಕರ್ಯಗಳಿದ್ದರೂ 828.88 ಎಂಎಲ್‌ಡಿ ಅಂದರೆ ಶೇ.29.73 ಕೊಳಚೆ ನೀರನ್ನ ಸಂಸ್ಕರಿಸದೇ ಹೊರಗೆ ಬಿಡಲಾಗುತ್ತಿದೆ ಎಂದು ಸಿಎಜಿ ವರದಿಯು ವಿವರಿಸಿದೆ.
ಸಂಸ್ಕರಿಸದ ಅಥವಾ ಭಾಗಶಃ ಸಂಸ್ಕರಿಸಿದ ಕೊಳಚೆ ನೀರನ್ನು ಜಲಮೂಲಗಳಿಗೆ ಬಿಡಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರವೇ ಇದರಿಂದ 45 ಜಲಮೂಲಗಳು ಕಲುಷಿತಗೊಂಡಿವೆ. ಈಗಾಗಲೇ ಈ ವಿಷಯ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಗಮನವನ್ನೂ ಸೆಳೆದಿದ್ದು, ನ್ಯಾಯಮಂಡಳಿಯು ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಮೇಲೆ ಪರಿಸರ ಪರಿಹಾರ (ಇಸಿ) ವಿಧಿಸಿದೆ.
ಕೊಳಚೆ ನೀರನ್ನು ಸರಿಯಾಗಿ ನಿರ್ವಹಿಸದ 86 ಸ್ಥಳೀಯ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ ಎಂದು ಸಿಎಜಿ ವರದಿಯು ಬೊಟ್ಟು ಮಾಡಿದೆ.
ಮೈಸೂರು ಹೆಬ್ಬಾಳ ಕೆರೆಯ ದುರಾವಸ್ಥೆ!
ಮೈಸೂರಿನ ಪ್ರಸಿದ್ಧ ಕೆರೆಗಳಲ್ಲಿ ಒಂದಾದ ಹೆಬ್ಬಾಳ ಕೆರೆಯನ್ನು ಇನ್ಫೋಸಿಸ್ ಫೌಂಡೇಶನ್ ಸಿಎಸ್‌ಆರ್ ಚಟುವಟಿಕೆಯಡಿ ಒಟ್ಟು 105 ಕೋಟಿ ರು. ವೆಚ್ಚದಲ್ಲಿ ಪುನಶ್ಚೇತನಗೊಳಿಸಿದೆ. ಈ ಯೋಜನೆಯಡಿ ಎಂಟು ಎಂಎಲ್‌ಡಿ ಸಾಮರ್ಥ್ಯದ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ) ನಿರ್ಮಿಸಲಾಗಿದೆ. ಸಿಎಜಿಯು 2023ರಲ್ಲಿ ಈ ಕೆರೆಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಎಸ್‌ಟಿಪಿಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವುದನ್ನು ಗಮನಿಸಲಾಗಿತ್ತು.
ಆದರೂ ಈ ಕೆರೆಯ ನೀರಿನ ಗುಣಮಟ್ಟವು ʻಡಿʼ ಎಂದು ವರ್ಗೀಕರಿಸಲಾಗಿತ್ತು. ಇದಕ್ಕೆ ಕಾರಣವನ್ನೂ ಸಿಎಜಿಯು ಪತ್ತೆ ಹಚ್ಚಿದ್ದು, ಎರಡು ಕಡೆ ಸಂಸ್ಕರಿಸದ ಕೊಳಚೆ ನೀರು ನಿರಂತರವಾಗಿ ಹರಿದು ಬಂದು ಈ ಕೆರೆಗೆ ಸೇರುತ್ತಿತ್ತು. ಈ ಬಗ್ಗೆ ಸಿಎಜಿಯು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನ ಸೆಳೆದಾಗ ಈ ಎರಡು ಚರಂಡಿಗಳ ನೀರು ಸೇರದಂತೆ ತೇಲುವ ತಡೆಗೋಡೆಗಳನ್ನು ನಿರ್ಮಿಸಲಾಗುವುದು, ಈ ಸಂಬಂಧ ಮೈಸೂರು ನಗರ ಪಾಲಿಕೆಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಮಂಡಳಿಯು ತಿಳಿಸಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಇರುವ ಸೌಕರ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಲು ಮತ್ತು ತ್ಯಾಜ್ಯ ಉತ್ಪಾದನೆ ಮತ್ತು ಸಂಸ್ಕರಣೆ ನಡುವಿನ ಅಂತರವನ್ನು ಕಡಿಮೆ ಮಾಡಬೇಕು ಎಂದು ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಬೇಕು. ಒಳಚರಂಡಿ ನೀರಿನ ಸಂಸ್ಕರಣೆ ಮತ್ತು ಘನತ್ಯಾಜ್ಯ ನಿರ್ವಹಣೆಗೆ ಸಮಯ ಬದ್ಧವಾದ ಕ್ರಿಯಾ ಯೋಜನೆಯನ್ನು ತಯಾರಿಸಲು ಸರ್ಕಾರವು ಮಂಡಳಿಗೆ ನಿರ್ದೇಶಿಸಬೇಕು ಎಂದು ಸಿಎಜಿಯು ವರದಿಯಲ್ಲಿ ಶಿಫಾರಸು ಮಾಡಿದೆ.
ಪರಿಸರ ಮಾಲಿನ್ಯದ ಪ್ರಮಾಣ ಅಳೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಬಳಿ ಸೂಕ್ತ ಪ್ರಯೋಗಾಲಯವೇ ಇಲ್ಲ!
ಪರಿಸರ ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಸ್ಥಾಪನೆಗೊಂಡಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಿ ಸುಸಜ್ಜಿತವಾದ ಪ್ರಯೋಗಾಲಯಗಳು, ಸೂಕ್ತ ತಜ್ಞ ಸಿಬ್ಬಂದಿಯೇ ಇಲ್ಲ ಎಂಬುದು ಸಿಎಜಿಯ ವರದಿಯಿಂದ ಬೆಳಕಿಗೆ ಬಂದಿತ್ತು. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.