ಬೆಂಗಳೂರು; ಅನಿಲ ಸರಬರಾಜು ಸಂಸ್ಥೆಗಳ ಜೊತೆ ಸಂಚು ರೂಪಿಸಿ ಭ್ರಷ್ಟಾಚಾರ ಎಸಗಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆ ಸಲ್ಲಿಸಬೇಕು ಎಂದು ರೇರಾದ ಹಾಲಿ ಅಧ್ಯಕ್ಷ ರಾಕೇಶ್ ಸಿಂಗ್, ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಆಪ್ತ ಕಾರ್ಯದರ್ಶಿ ತುಕಾರಾಮ ಕಲ್ಯಾಣಕರ ಸೇರಿದಂತೆ ಇನ್ನಿತರೆ ಅಧಿಕಾರಿಗಳಿಗೆ ಲೋಕಾಯುಕ್ತರು ನಿರ್ದೇಶಿಸಿದ್ದಾರೆ.
ರಾಜ್ಯ ಅನಿಲ ಸರಬರಾಜು ನೀತಿ ಜಾರಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹಲವು ವಾಸ್ತವ ಸಂಗತಿಗಳನ್ನು ಮರೆಮಾಚಿದ್ದಾರೆ ಮತ್ತು ದುರುದ್ದೇಶದಿಂದ ಬೊಕ್ಕಸಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿಯು ಲೋಕಾಯುಕ್ತರಿಗೆ ದಾಖಲೆ ಸಹಿತ 2025ರ ಏಪ್ರಿಲ್‌ನಲ್ಲಿ ದೂರು ದಾಖಲಿಸಿತ್ತು.
ಈ ದೂರಿನ ಕುರಿತು ವಿಚಾರಣೆಗೆ ಕೈಗೆತ್ತಿಕೊಂಡಿರುವ ಲೋಕಾಯುಕ್ತರು 5 ತಿಂಗಳ ನಂತರ ಆಪಾದಿತ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿದ್ದಾರೆ. ಲೋಕಾಯುಕ್ತರು ಕಳಿಸಿರುವ ನೋಟೀಸ್‌ನ ಪ್ರತಿ ಮತ್ತು ಕರ್ನಾಟಕ ರಾಷ್ಟ್ರ ಸಮಿತಿಯ ಸಲ್ಲಿಸಿದ್ದ ದೂರಿನ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ದೂರುದಾರರು ಸಲ್ಲಿಸಿರುವ ದೂರು ಮತ್ತು ದಾಖಲಾತಿ ಪ್ರತಿಗಳನ್ನು ಈ ಪತ್ರದೊಂದಿಗೆ ಲಗತ್ತಿಸಿ ಕಳಿಸಲಾಗಿದೆ. ಈ ಕುರಿತು ನಿಮ್ಮ ಆಕ್ಷೇಪಣೆ/ಉತ್ತರವನ್ನು ಸೂಕ್ತ ದಾಖಲಾತಿಗಳೊಂದಿಗೆ ತ್ವರಿತವಾಗಿ ದ್ವಿಪತ್ರಿಯಲ್ಲಿ 2025ರ ಅಕ್ಟೋಬರ್ 6ರೊಳಗೆ ನಮ್ಮ ಕಚೇರಿಗೆ ತಪ್ಪದೇ ಸಲ್ಲಿಸಬೇಕು ಎಂದು ರಾಕೇಶ್ ಸಿಂಗ್, ತುಕಾರಾಮ ಕಲ್ಯಾಣಕರ್, ಲಕ್ಷ್ಮಿಸಾಗರ್, ಚನ್ನಕೇಶವ, ಹೇಮಂತ್ ಲೋಕಾಯುಕ್ತರು ನಿರ್ದೇಶಿಸಿರುವುದು ಗೊತ್ತಾಗಿದೆ.

ಆಪಾದಿತ ಅಧಿಕಾರಿಗಳ ಪೈಕಿ ರಾಕೇಶ್ ಸಿಂಗ್ ಅವರು ನಿವೃತ್ತರಾಗಿದ್ದಾರೆ ಮತ್ತು ರೇರಾದ ಹಾಲಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿಯಾಗಿದ್ದ ತುಕಾರಾಮ ಕಲ್ಯಾಣಕರ ಅವರು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರ ಆಪ್ತ ಕಾರ್ಯದರ್ಶಿಯಾಗೆ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಿಸಾಗರ್ ಅವರು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ, ಚನ್ನಕೇಶವ ಅವರು ಶಾಖಾಧಿಕಾರಿ ಮತ್ತು ಹೇಮಂತ್ ಎಂಬುವರು ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ.
ದೂರಿನಲ್ಲೇನಿದೆ?
ರಾಜ್ಯ ನಗರ ಅನಿಲ ಸರಬರಾಜು ನೀತಿ ಜಾರಿಗೆ ಬಂದಲ್ಲಿ ಬಿಬಿಎಂಪಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಲಿತ್ತು. ಆದರೆ ಈ ಆರ್ಥಿಕ ನಷ್ಟವನ್ನು ಮುನ್ನೆಲೆಗೆ ತರದೇ ಮರೆಮಾಚುವ ದುರುದ್ದೇಶದಿಂದಲೇ ಅನಿಲ ಸರಬರಾಜು ಸಂಸ್ಥೆಗಳ ಜೊತೆ ಈ ಅಧಿಕಾರಿಗಳು ಸಂಚು ರೂಪಿಸಿದ್ದರು. ಈ ಮೂಲಕ ಭ್ರಷ್ಟಾಚಾರ ಎಸಗಿರುವ ಈ ಅಧಿಕಾರಿಗಳು ಬಿಬಿಎಂಪಿಯ ಅಭಿಪ್ರಾಯ ಮತ್ತು ಮತ್ತು ಆಂತರಿಕ ಆರ್ಥಿಕ ಸಲಹೆಗಾರರ ಅಭಿಪ್ರಾಯ ಪಡೆದಿಲ್ಲ. ಬದಲಿಗೆ ಕಡತವನ್ನು ನೇರವಾಗಿ ಜಂಟಿ ನಿರ್ದೇಶಕರ ಅಭಿಪ್ರಾಯಕ್ಕಾಗಿ ಕಳಿಸಲಾಗಿತ್ತು ಎಂದು ದೂರಿನಲ್ಲಿ ಮಂಜುನಾಥ್ ಅವರು ಆಪಾದಿಸಿದ್ದರು.
ರಾಜ್ಯ ನಗರ ಅನಿಲ ವಿತರಣೆ ನೀತಿ ಜಾರಿಗೆ ಬಂದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆಗುವ ನಷ್ಟದ ಬಗ್ಗೆ ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ ನಿಖರ ಮಾಹಿತಿ ನೀಡದೇ ನೀತಿ ಜಾರಿಗೆ ಬರುವುದಕ್ಕೆ ಅಧಿಕಾರಿ ನೌಕರರು ಕಾರಣರಾಗಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

ರಾಜ್ಯ ನಗರ ಅನಿಲ ವಿತರಣೆ ನೀತಿಯು ಇಷ್ಟೊಂದು ಅಗಾಧ ಪ್ರಮಾಣದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಲಿದೆ. ಆದರೂ ನಗರಾಭಿವೃದ್ಧಿ ಇಲಾಖೆಯು ತನ್ನ ಅಭಿಪ್ರಾಯ ದಾಖಲಿಸಿಲ್ಲ. ಹೀಗಾಗಿ ರಾಜ್ಯ ನಗರ ಅನಿಲ ವಿತರಣೆ ನೀತಿ ಜಾರಿಗೆ ತರುವುದರಿಂದ ಯಾವುದೇ ಆರ್ಥಿಕ ಹೊರೆ ಉಂಟಾಗುವುದಿಲ್ಲ ಎಂದು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯೂ ಸಚಿವ ಸಂಪುಟವನ್ನು ದಿಕ್ಕು ತಪ್ಪಿಸಿದೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.
ನಗರಾಭಿವೃದ್ದಿ ಇಲಾಖೆಗೆ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಈ ಕುರಿತು ದೂರು ನೀಡಿದಾಗ ಪತ್ರ ವ್ಯವಹರಿಸಿದಾಗ ಆಂತರಿಕವಾಗಿ ಕಡತ (UDD 258 MNU 2024- Computer Number 1437316) ಚಲಿಸಿದೆ.
ಈ ಕಡತದಲ್ಲೇನಿತ್ತು?
ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯದ ಎಲ್ಲಾ ಗ್ಯಾಸ್ ಪೈಪ್‌ಲೈನ್ ಯೋಜನೆಗಳು ಮತ್ತು ಎಲ್ಲಾ ನಗರ ಅನಿಲ ವಿತರಣಾ ಯೋಜನೆಗಳಿಗೆ ನೋಡೆಲ್ ಇಲಾಖೆಯಾಗಿದೆ. ಭಾರತ ಸರ್ಕಾರದ ಪತ್ರವನ್ನು ಆಧರಿಸಿ ರಾಜ್ಯದ ಎಲ್ಲಾ ಜಿಲ್ಲೆಗಳ ಭೌಗೋಳಿಕ ಪ್ರದೇಶಗಳಿಗೆ ಅಧಿಕೃತವಾಗಿ ನೇಮಕಗೊಂಡಿರುವ ಘಟಕಗಳಿಗೆ ಸಂಸ್ಥೆಗಳಿಗೆ ಬೆಂಬಲಿಸುವ ಸಲುವಾಗಿ ನಗರ ಅನಿಲ ವಿತರಣೆ ನೀತಿ ತಯಾರಿಸಿದೆ. ಈ ನೀತಿಯ ಬಗ್ಗೆ ನಗರಾಭಿವೃದ್ದಿ ಇಲಾಖೆಯ ಅಭಿಪ್ರಾಯ, ಸಹಮತಿಯನ್ನು 10 ದಿನದೊಳಗೆ ನೀಡಬೇಕು ಎಂದು ಮೂಲ ಸೌಕರ್ಯ ಅಭಿವೃದ್ದಿ ಇಲಾಖೆಯು ಈ ಏಕ ಕಡತದಲ್ಲಿ (ಐಡಿಸಿ/ ಐಟಿಎಸ್/ 67 /2022) ಕೋರಿತ್ತು.
ಈ ಕಡತವು 2022ರ ಅಕ್ಟೋಬರ್ 20ರಂದುನಗರಾಭಿವೃದ್ಧಿ ಇಲಾಖೆ ಶಾಖೆಯಲ್ಲಿ ಸ್ವೀಕೃತವಾಗಿತ್ತು.
ಈ ಕಡತದಲ್ಲಿ ಪ್ರಸ್ತಾಪಿಸಿರುವ ಅಂಶಗಳ ಬಗ್ಗೆ ಪರಿಶೀಲಿಸಿ ಅಭಿಪ್ರಾಯ ನೀಡಬೇಕು ಎಂದು ಕೋರಿದ್ದ ಈ ಕಡತವನ್ನು 2022ರ ಅಕ್ಟೋಬರ್ 20ರಂದು ಕಡತವನ್ನು ನಗರ ಯೋಜನೆ (ತಾಂತ್ರಿಕ ಕೋಶ) ನಗರಾಭಿವೃದ್ಧಿ ಇಲಾಖೆಗೆ ಕಳಿಸಿತ್ತು. 2022ರ ಅಕ್ಟೋಬರ್ 28ರಂದು ಪ್ರಸ್ತಾವಿತ ಪಾಲಿಸಿ ಕುರಿತಂತೆ ಜಂಟಿ ನಿರ್ದೇಶಕರು ಅಭಿಪ್ರಾಯ ನೀಡಿದ್ದರು.
ಅಭಿಪ್ರಾಯದಲ್ಲೇನಿತ್ತು?
ನಗರಾಭಿವೃದ್ದಿ/ ಯೋಜನೆ ಪ್ರಾಧಿಕಾರಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು ಕಾಲಮಿತಿಯೊಳಗೆ ಅಂದರೆ 15 ದಿನಗಳ ಬದಲಾಗಿ 60 ದಿನದೊಳಗಾಗಿ ಚಾಲ್ತಿಯಲ್ಲಿರುವ ನಿಯಮಾವಳಿಗಳ ಅನುಸಾರ ನೀಡುವ ಬಗ್ಗೆ ಮಾರ್ಪಾಡು ಮಾಡಿಕೊಂಡು ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳು , ಮಹಾನಗರಪಾಲಿಕೆಗಳನ್ನು ಒಳಗೊಂಡಂತೆ ನಾಗರಿಕ ಸೌಲಭ್ಯ ನಿವೇಶನಗಳನ್ನು ನೀಡಲು ನಿರ್ದಿಷ್ಟ ಪಡಿಸಿರುವುದನ್ನು ತೆಗೆದುಹಾಕಿ ನಗರ ಪಟ್ಟಣ ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆ ಭೂಮಿಗೆ ಪಡೆಯಲು ಅನುಸರಿಸಲಾಗುವ ಪ್ರಕ್ರಿಯೆ ವಿಧಾನವನ್ನು ಅಳವಡಿಸಿಕೊಂಡು ಆದೇಶ ಹೊರಡಿಸಲು ನಗರಾಭಿವೃದ್ಧಿ ಇಲಾಖೆಯ ಸಹಮತಿಗೆ ನೀಡಬಹುದಾಗಿದೆ ಎಂದು ಅಭಿಪ್ರಾಯ ನೀಡಿದ್ದರು.
ಜಂಟಿ ನಿರ್ದೇಶಕರು ಈ ಅಭಿಪ್ರಾಯವನ್ನು ಮೂಲ ಸೌಕರ್ಯ ಅಭಿವೃದ್ದಿ ಇಲಾಖೆಗೆ ಕಳಿಸಲು 2022ರ ಅಕ್ಟೋಬಬರ್ 29ರಂದು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಸಲ್ಲಿಕೆಯಾಗಿತ್ತು. ಇದಾದ ನಂತರ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನು ಮೂಲ ಸೌಕರ್ಯಅಭಿವೃದ್ದಿ ಇಲಾಖೆಗೆ ಕಳಿಸಲು ಈ ಕಡತವನ್ನು ಅನುಮೋದನೆಗಾಗಿ 2023ರ ಜನವರಿ 7ರಂದು ಮುಖ್ಯಮಂತ್ರಿಗೆ ಕಳಿಸಲಾಗಿತ್ತು. ಆದರೆ ಮುಖ್ಯಮಂತ್ರಿಯವರು ‘ಚರ್ಚಿಸಿ’ ಎಂದು ಷರಾ ನಮೂದಿಸಿ ಕಡತವನ್ನು 2023ರ ಜನವರಿ 7ರಂದು ಹಿಂದಿರುಗಿಸಿದ್ದರು.
ನಂತರ ನಗರ ಯೋಜನೆ ಯ ಜಂಟಿ ನಿರ್ದೇಶಕರು ಈ ಕಡತವನ್ನು ಭೌತಿಕ ಕಡತದಲ್ಲಿ ತೆರೆದಿದ್ದರು. ಇದನ್ನು ಉಪ ಮುಖ್ಯಮಂತ್ರಿಯವರ ಅನುಮೋದನೆ ಕೋರಿ 2024ರ ಮಾರ್ಚ್ 24 ರಂದು ಸಲ್ಲಿಸಿದ್ದರು. ‘ಅವಗಾಹನೆ’ ಮತ್ತು ‘ಮುಂದಿನ ಆದೇಶಕ್ಕಾಗಿ’ ಎಂದು ಕೋರಿತ್ತು. ಇದನ್ನು ಈ ಎಲ್ಲಾ ಆಪಾದಿತ ಅಧಿಕಾರಿಗಳು ಒಪ್ಪಿದ್ದರು ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ವಿಶೇಷವೆಂದರೇ ಆಪಾದಿತ ಅಧಿಕಾರಿಗಳೇ ಉತ್ತರಿಸಿ ಅವರೇ ಒಪ್ಪಿಕೊಂಡು ದೂರು ಅಂತಿಮಗೊಳಿಸಿರುವ ಮೊದಲ ಪ್ರಕರಣ ಇದಾಗಿದೆ. ಇದಲ್ಲದೆ ಇದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯನ್ನು ನಿರ್ವಹಿಸದೇ ಇರುವ ಕಾರಣಕ್ಕಾಗೆ ಎದುರಿಸಿದ್ದ ಆಪಾದನೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಶುದ್ಧ ಸುಳ್ಳು ಮತ್ತು ತಪ್ಪು ಮಾಹಿತಿ ನೀಡಿದ್ದರು. ಅಲ್ಲದೇ ಈ ಹೇಳಿಕೆಯೂ ತಪ್ಪುದಾರಿಗೆಳೆದಿದೆ,’ ಎಂದು ದೂರುದಾರ ಮಂಜುನಾಥ್ ಅವರು ದೂರಿನಲ್ಲಿ ವಿವರಿಸಿದ್ದರು.
ಇನ್ನು, ಕಡತದಲ್ಲಿ ಪ್ರಸ್ಥಾಪಿಸಿರುವ ಅಂಶಗಳ ಬಗ್ಗೆ ಅಭಿಪ್ರಾಯವನ್ನು ನೀಡಬೇಕು ಎಂದು ಆರ್ಥಿಕ ನಷ್ಟ ಅನುಭವಿಸುವ ಬೃಹತ್ ಬೆಂಗಳೂರು ಮಾಹನಗರ ಪಾಲಿಕೆಗೆ ಕಳಿಸಬೇಕಿತ್ತು. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಅಭಿಪ್ರಾಯ ಪಡೆದಿರುವುದಿಲ್ಲ. ಅಲ್ಲದೇ ಸಚಿವಾಲಯ ಮ್ಯಾನ್ಯುಯಲ್ ಪರಿಚ್ಛೇಧ 33ರಂತೆ ಕ್ಷಿಪ್ರ, ತುರ್ತು ಮತ್ತು ದೀರ್ಘ ಕಾಲದ ಆರ್ಥಿಕ ಪರಿಣಾಮ ಹೊಂದಿರುವ ಪ್ರಸ್ತಾವನೆಗಳ ಬಗ್ಗೆ ಅಭಿಪ್ರಾಯ ನೀಡಲೆಂದೇ ಆತಿ ಆಂತರಿಕ ಆರ್ಥಿಕ ಸಲಹೆಗಾರರನ್ನು (ಸುತ್ತೋಲೆ ಸಂಖ್ಯೆ; ಡಿಪಿಎಆರ್ 16ಬಿಯುಡಿ 2003) ಆದರೂ ಸ್ಥಳೀಯ ಸಂಸ್ಥೆಗೆ ನಷ್ಟವಾಗುವ ನೀತಿಯ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪ್ರತ್ಯೇಕ ಆಂತರಿಕ ಆರ್ಥಿಕ ಸಲಹೆಗಾರರು ಲಭ್ಯ ಇದ್ದರೂ ಅವರ ಅಭಿಪ್ರಾಯ ಪಡೆದಿಲ್ಲ ಎಂದು ಆಪಾದಿಸಲಾಗಿದೆ.
ಅನಿಲ ಕಂಪನಿಗಳೊಂದಿಗಿನ ಸಂಚು!
‘ಅನಿಲ ಸರಬರಾಜು ನೀತಿ ಜಾರಿಗೆ ಬಂದಲ್ಲಿ ಬಿಬಿಎಂಪಿಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಮುನ್ನಲೆಗೆ ತರದೇ ಮರೆಮಾಚುವ ದುರುದ್ದೇಶದಿಂದಲೇ ಅನಿಲ ಸರಬರಾಜು ಸಂಸ್ಥೆಗಳ ಜೊತೆ ಸಂಚು ರೂಪಿಸಿ ಭ್ರಷ್ಟಾಚಾರ ಎಸಗಲಾಗಿದೆ. ಬಿಬಿಎಂಪಿಯ ಅಭಿಪ್ರಾಯ ಮತ್ತು ಆಂತರಿಕ ಆರ್ಥಿಕ ಸಲಹೆಗಾರರ ಅಭಿಪ್ರಾಯ ಪಡೆಯದೇ ಜಂಟಿ ನಿರ್ದೇಶಕರಿಗೆ ಮಾತ್ರ ಕಡತವನ್ನು ಅಭಿಪ್ರಾಯಕ್ಕಾಗಿ ಕಳಿಸಲಾಗಿತ್ತು. ಚಾಲ್ತಿಯಲ್ಲಿರುವ ನಿಯಮಾವಳಿಗೆ ಅನುಸಾರ ನೀಡುವ ಬದಲು ಮಾರ್ಪಾಡು ಮಾಡುವುದು ಎಂದಾದಲ್ಲಿ ಪ್ರಸ್ತಾವನೆಯಲ್ಲಿ 1 ರು ಪ್ರತಿ ಮೀಟರ್ ಗೆ ಶುಲ್ಕವನ್ನು1,957 ಪ್ರತಿ ಮೀಟರಿಗೆ ಮಾರ್ಪಡಿಸಬೇಕಿದ್ದರಿಂದ ಚಾಲ್ತಿ ಶುಲ್ಕ ಮುಂದುವರೆಸಲೇಬೇಕಾದ ಇಕ್ಕಟ್ಟಿನಲ್ಲಿ ಆಪಾದಿತ ಅಧಿಕಾರಿಗಳು ಸಿಕ್ಕಿಕೊಂಡಿರುತ್ತಾರೆ,’ ಎಂದು ದೂರುದಾರರು ಆರೋಪಿಸಿರುವುದು ತಿಳಿದು ಬಂದಿದೆ.
ಹೀಗಾಗಿ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನೇ ವಿಳಂಬಿಸಲಾಗಿದೆ. ಮತ್ತು ಇದನ್ನು ಮುಂದಕ್ಕೆ ಕಳಿಸದಿರುವ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೆ ಅಂದಿನ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾಯದರ್ಶಿ ಮತ್ತು ಸಚಿವಾಲಯದ ಆರೋಪಿತ ಅಧಿಕಾರಿಗಳು ಕಾರಣ. ನಗರಾಭಿವೃದ್ಧಿ ಇಲಾಖೆಯು ಅಭಿಪ್ರಾಯ ಸಹಮತಿಯನ್ನು ನೀಡಬೇಕು ಎಂದು ನಿಗದಿತ ಕಾಲಮಿತಿ ಕೋರಿದ್ದರೂ ಸಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಈ ಕಡತವನ್ನು ತನ್ನಲ್ಲಿಯೇ (ದಿನಾಂಕ 29/10/2022ರಿಂದ 2024ರ ಜನವರಿ 7ರವರಗೆ ) 70 ದಿನಗಳ ಕಾಲ ಇಟ್ಟುಕೊಂಡಿದ್ದರು.
ಇದಲ್ಲದೇ ಯಾವುದೇ ನೀತಿಯೊಂದಕ್ಕೆ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ, ಸಹಮತಿಯನ್ನು ಇಲಾಖೆ ಸಚಿವರ ಅನುಮತಿ ಪಡೆದು ಕಳಿಸುವ ಅಗತ್ಯ ನಿಯಮಾವಳಿಗಳು ಇಲ್ಲ. ಆದರೂ ಇನ್ನು ವಿಳಂಬಿಸುವ ಕಾರಣದಿಂದಲೇ ಅನಗತ್ಯವಾಗಿ ಪ್ರಸ್ತಾವನೆಯನ್ನು ಮುಖ್ಯಮಂತ್ರಿಯವರಿಗೆ ಕಳಿಸಲಾಯಿತು ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮುಖ್ಯಮಂತ್ರಿಯವರು ಕಡತ ಸ್ವೀಕೃತವಾಗಿದ್ದ 2023ರ ಜನವರಿ 7ರಂದೇ ಚರ್ಚಿಸಿ ಎಂದು ಷರಾ ನಮುದಿಸಿ ಇ-ಕಡತ ಹಿಂದಿರುಗಿಸಿದ್ದರು. ಆದರೆ ಅಂದಿನ ನಗರಾಬಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿರುವುದಿಲ್ಲ. ತಮ್ಮ ಅಧೀನ ಅಧಿಕಾರಿಗಳಿಗೆ ಪ್ರಚಲಿಸಿರುತ್ತಾರೆ. ಮತ್ತು ಆನಂತರದಲ್ಲಿ ಅಧೀನ ಅಧಿಕಾರಿಗಳ ಹಂತದಲ್ಲಿ 2023ರ ಜನವರಿ 7ರಿಂದ ಇ-ಕಡತವನ್ನು ಯಾವುದೇ ಕ್ರಮ ಕೈಗೊಳ್ಳದೇ ವಿಲೇ ಇಟ್ಟಿದ್ದರು. ನಗರಾಭಿವೃದ್ಧಿ ಇಲಾಖೆಯಲ್ಲಿ ಇ-ಕಡತ ಹೀಗೆ ವಿಲೇ ಇಡುವಾಗ ಅಭಿಪ್ರಾಯ ತಡೆಹಿಡಿದಿರುವ ಬಗ್ಗೆ ಮೂಲಸೌಕರ್ಯ ಅಭಿವೃದ್ದಿ ಇಲಾಖೆಗೆ ಮಾಹಿತಿ ನೀಡಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಅಲ್ಲದೇ ಇದೇ ವಿಷಯವನ್ನು 2023ರ ಮಾರ್ಚ್ 8ರಂದು ಮತ್ತು 2023ರ ಮಾರ್ಚ್ 2ರಂದು ಸಚಿವ ಸಂಪುಟದ ಮುಂದೆ ಮಂಡಿಸಲಾಗಿದೆ. ಈ ಬಗ್ಗೆ ಲಿಖಿತ ಮಾಹಿತಿ ಅಂದಿನ ನಗರಾಬಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಇತ್ತು. ಅಲ್ಲದೇ ಸಚಿವ ಸಂಪುಟ ಸಭೆಯಲ್ಲಿ ಇತರೆ ವಿಷಯಗಳಿಗೆ ವಿವರಣೆ ನೀಡುವ ಸಲುವಾಗಿ ಹಾಜರಿದ್ದರು. ಬಾಕಿ ಇರುವ ಅಭಿಪ್ರಾಯ ನೀಡಲು ಯಾವುದೇ ಕ್ರಮಕೈಗೊಂಡಿಲ್ಲ.
ಡಿಸಿಎಂ ಮೇಲೆ ತಪ್ಪು ಹೊರಿಸಿದರೇ?
ಸಿಜಿಡಿ ನೀತಿಯನ್ನು 2023ರ ಅಕ್ಟೋಬರ್ 19ರಂದು ಸಚಿವ ಸಂಪುಟದ ಮುಂದಿಟ್ಟು ಅನುಮೋದನೆ ಪಡೆಯಲಾಯಿತು. 2023ರ ನವೆಂಬರ್ 7ರಂದು ಗೆಜೆಟ್ ಅಧಿಸೂಚನೆ ಹೊರಟ ನಾಲ್ಕು ತಿಂಗಳ ನಂತರ 2024ರ ಮಾರ್ಚ್ 4ರಂದು ಉಪ ಮುಖ್ಯಮಮತ್ರಿಗೆ ಅನುಮೋದನೆ ಕೋರಿ ಸಲ್ಲಿಸಲಾಗಿದೆ ಎಂದು ವಿಳಂಬದ ತಪ್ಪನ್ನು ಉಪ ಮುಖ್ಯಮಂತ್ರಿ ಮೇಲೆ ಹೊರಿಸುವ ಮೂಲಕ ದಾರಿ ತಪ್ಪಿಸುವ ಮಾಹಿತಿ ನೀಡಲಾಗಿದೆ ಎಂದು ಆಪಾದಿಸಲಾಗಿದೆ.
ಅಲ್ಲದೇ ನಗರಾಭಿವೃದ್ಧಿ ಇಲಾಖೆಯಲ್ಲಿ ಇ-ಕಡತ ಲಭ್ಯ ಇರುವಾಗ ಈ ಕಡತವನ್ನು 2024ರ ಮಾರ್ಚ್ 24ರಂದು ಭೌತಿಕ ಕಡತದಲ್ಲಿ ತೆರೆದು ಪ್ರಚಲಿಸುವ ಅಗತ್ಯ ಇರವುದಿಲ್ಲ. ವಾಸ್ತವವಾಗಿ 2024ರ ಮಾಚ್ 4ರಂದು ಉಪ ಮುಖ್ಯಮಂತ್ರಿಗಳಿಗೆ ಸಲ್ಲಿಸಲ್ಪಟ್ಟ ಕಡತದಲ್ಲಿ ಅನಿಲ ನೀತಿಯ ಬಗ್ಗೆ ನಗರಾಭಿವೃದ್ದಿ ಇಲಾಖೆಯ ಅಭಿಪ್ರಾಯ ನೀಡುವ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಹೀಗಾಗಿ ಆಪಾದಿತ ಅಧಿಕಾರಿಗಳು ಆಪಾದನೆಯಿಂದ ತಪ್ಪಿಸಲಿಕೊಳ್ಳಲು ಕಡತದಲ್ಲಿ ಶುದ್ಧ ಸುಳ್ಳು ಮತ್ತು ತಪ್ಪು ದಾರಿಗೆಳೆಯುವ ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಗಾಧ ಆರ್ಥಿಕ ಪರಿಣಾಮ ಹೊಂದಿದ್ದ ಕಾರಣಕ್ಕಾಗಿ 10 ದಿನದೊಳಗೆ ಉತ್ತರಿಸಬೇಕಿದ್ದ ಅತೀ ತುರ್ತು ಕಡತವನ್ನು ರಾಕೇಶ್ ಸಿಂಗ್ ಅವರು ತಮ್ಮ ಲಾಗಿನ್‌ನಲ್ಲಿ 2022ರಿಂದ ಅಕ್ಟೋಬರ್ 29ರಿಂದ 2023ರ ಜನವರಿ ಜನವರಿ 7ರವರೆಗೆ ಟ್ಟು 70 ದಿನಗಳ ಕಾಲ ಇಟ್ಟುಕೊಂಡಿದ್ದರು. ಈ ಅತೀ ತುರ್ತು ಕಡತವನ್ನು 2023ರ ಜನವರಿ 7ರಂದು ಮುಖ್ಯಮಂತ್ರಿಗಳಿಂದ ಚರ್ಚಿಸಿ ಎಂಬ ಹಿಂಬರಹದೊಂದಿಗೆ ಮರಳಿ ಬಂದಾಗಲೂ ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಳಹಂತದ ನೌಕರರ ಲಾಗಿನ್‌ಲ್ಲಿ ಅಂದಿನ ಉಪ ಕಾರ್ಯದರ್ಶಿ ತುಕಾರಾಮ ಕಲ್ಯಾಣಕರ, ಲಕ್ಷ್ಮಿಸಾರ್, ಚನ್ನಕೇಶವ, ಹೇಮಂತ್ ಜಿ ಆರ್ ಅವರು ಸ್ಥಗಿತ ಸ್ಥಿತಿಯಲ್ಲಿ ಇಟ್ಟಿದ್ದರು ಎಂದು ವಿವರಿಸಿದೆ.
ಕರ್ನಾಟಕ ವಿಧಾನ ಪರಿಷತ್ತಿನ 155ನೇ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಸಂಖ್ಯೆ 44ಕ್ಕೆ ಕರ್ನಾಟಕ ಸರ್ಕಾರ ಉತ್ತರಿಸಿರುವಂತೆ ರಾಜ್ಯ ಅನಿಲ ಸರಬರಾಜು ನೀತಿ ಜಾರಿಗೆ ಬರುವ ಪೂರ್ವದಲ್ಲಿ ಗೇಲ್ ಗ್ಯಾಸ್ ಸಂಸ್ಥೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಿಂದ 8 ವರ್ಷಗಳಲ್ಲಿ 190 ಕೋಟಿ 73 ಲಕ್ಷ ಶುಲ್ಕ ಪಾವತಿಸಿ 2,189.09 ಕಿ ಮೀ ಅಳವಡಿಕೆ ಅನುಮತಿ ಪಡೆದಿತ್ತು.
ರಾಜ್ಯ ಅನಿಲ ಸರಬರಾಜು ನೀತಿ ಜಾರಿಗೆ ಬಂದ 2023 ರಿಂದ ನವೆಂಬರ್ 7ರಿಂದ 2024ರ ಜನವರಿ 31ರವರೆಗೆ 80.64ಕಿ ಮೀ ಅನಿಲ ಕೊಳವೆ ಅಳವಡಿಕೆಗೆ ಅನುಮತಿ ಪಡೆದು ಕೇವಲ 82,282.00 ಶುಲ್ಕ ಪಾವತಿಸಲಾಗಿತ್ತು. ಹೀಗಾಗಿ ಈ ಹಿಂದಿನ ದರಕ್ಕೆ ಹೋಲಿಸಿದರೆ 7,01,27,356 ಆದಾಯ ಖೋತಾ ಆಗಿದೆ. ಇದನ್ನು ರಾಕೇಶ್ ಸಿಂಗ್, ತುಕಾರಮ ಕಲ್ಯಾಣಕರ, ಲಕ್ಷ್ಮಿಸಾಗರ್, ಚೆನ್ನಕೇಶವ, ಹೇಮಂತ್ ಅವರಿಂದ ವಸೂಲಾತಿ ಆಗಬೇಕಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.