ಗ್ರಂಥಾಲಯ ಇಲಾಖೆಗೆ ಬಂದಿಲ್ಲ 733.96 ಕೋಟಿ ತೆರಿಗೆ ಹಣ; ವಸೂಲಿಗೆ ಕ್ರಮವಿಲ್ಲ, ಪುಸ್ತಕ ಖರೀದಿಗೆ ಹಣವಿಲ್ಲ!

public library pending library cess payments from urban local bodies

ಬೆಂಗಳೂರು: ರಾಜ್ಯದಲ್ಲಿನ ಗ್ರಂಥಾಲಯಗಳಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಮತ್ತು ಪುಸ್ತಕ ಖರೀದಿಯ ವಿಷಯದಲ್ಲಿ ಕುಂಟುತ್ತಾ ಸಾಗಿರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸ್ಥಳೀಯ ಸಂಸ್ಥೆಗಳಿಂದ 733.96 ಕೋಟಿ ರು. ತೆರಿಗೆ ಮೊತ್ತ ಬರಬೇಕಿದ್ದರೂ, ಇದರ ವಸೂಲಿಗೆ ಪರಿಣಾಮಕಾರಿಯಾದ ಕ್ರಮ ತೆಗೆದುಕೊಳ್ಳದೇ ಇರುವುದು ಬೆಳಕಿಗೆ ಬಂದಿದೆ.

 

ಇಲಾಖೆಯು 90 ಕೋಟಿ  ಉಪಕರ (ಸೆಸ್‌) ಮೊತ್ತವನ್ನು ಹೊಂದಿದ್ದು, 2021-22ನೇ ಸಾಲಿನಲ್ಲಿ 119.53, 2922-23ನೇ ಸಾಲಿನಲ್ಲಿ 155.31 ಹಾಗೂ 2023-34ನೇ ಸಾಲಿನಲ್ಲಿ 202.56 ಕೋಟಿ ಉಪಕರ ಇಲಾಖೆಗೆ ಸಂದಾಯವಾಗಿದೆ. ಆದರೂ 2023-24ನೇ ಆರ್ಥಿಕ ಸಾಲಿನ ಅಂತ್ಯದ ವೇಳೆಗೆ 733.96 ಕೋಟಿ ಉಪಕರ ಮೊತ್ತ ಇಲಾಖೆಗೆ ಸಂದಾಯವಾಗಿರಬೇಕಿತ್ತು.

 

ಮಹಾಲೇಖಪಾಲರು (ಸಿಎಜಿ)  ಶಿಕ್ಷಣ ಇಲಾಖೆಯ ಲೆಕ್ಕಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಈ ಸಿಎಜಿ ವರದಿಯನ್ನು ಆಗಸ್ಟ್‌ನಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.

 

public library pending library cess payments from urban local bodies

 

 

ಇಲಾಖೆಯು ಸೆಸ್‌ ಮೊತ್ತವನ್ನು ಕ್ರೋಢೀಕರಿಸಿದ್ದರೆ, ಪುಸ್ತಕಗಳ ಖರೀದಿ ಬೇಡಿಕೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬಹುದಿತ್ತು. ಆಯವ್ಯಯದ ಮೂಲಗಳ ಜೊತೆಗೆ ಲಭ್ಯವಿರುವ ನಿಧಿಯ ಮೂಲಗಳ ಸಂವಹನವು ಪರಿಣಾಮಕಾರಿ ಆಯವ್ಯಯ ಮತ್ತು ಸೆಸ್‌ ನಿಧಿಯ ಬಳಕೆಯನ್ನು ಸುಗಮಗೊಳಿಸುತ್ತದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳ ಕಾಯಿದೆ 1965ರ ಅನುಚ್ಛೇದ 30ರ ಅನ್ವಯ, ಗ್ರಂಥಾಲಯ ಉಪಕರವನ್ನು 1994ರಿಂದ ಸಂಗ್ರಹಿಸಲಾಗುತ್ತಿದೆ. ಜಮೀನು ಮತ್ತು ಕಟ್ಟಡಗಳ ಮೇಲಿನ ತೆರಿಗೆ, ಸ್ಥಳೀಯ ಪ್ರದೇಶಕ್ಕೆ ಸರಕುಗಳನ್ನು ತರಲು, ಬಳಸಲು ಅಥವಾ ಮಾರಾಟಕ್ಕಾಗಿ ಪ್ರವೇಶದ ಮೇಲಿನ ತೆರಿಗೆ, ವಾಹನಗಳ ಮೇಲಿನ ತೆರಿಗೆ ಮತ್ತು ವೃತ್ತಿಗಳು, ವ್ಯಾಪಾರಗಳು, ಕರೆಗಳು ಮತ್ತು ಉದ್ಯೋಗಗಳ ಮೇಲೆ ಪ್ರತಿ ರುಪಾಯಿಗೆ ಆರು ಪೈಸೆಯಂತೆ  ಉಪಕರ ವಿಧಿಸಲಾಗುತ್ತದೆ.

 

ಸ್ಥಳೀಯ ಸಂಸ್ಥೆಗಳು ಈ ಗ್ರಂಥಾಲಯ ಸೆಸ್‌ (ಉಪಕರ) ಅನ್ನು ಸಂಗ್ರಹಿಸುತ್ತವೆ ಮತ್ತು ಸಂಗ್ರಹಿಸಿದ ಸೆಸ್‌ನ ಶೇ. 10 ರಷ್ಟನ್ನು ಉಳಿಸಿಕೊಂಡು ನಂತರ, ಬಾಕಿಯನ್ನು ಸಂಗ್ರಹಣೆ ಶುಲ್ಕವಾಗಿ, ಸಂಬಂಧಪಟ್ಟ ಗ್ರಂಥಾಲಯ ಅಧಿಕಾರಿಗಳಿಗೆ ರವಾನಿಸಬೇಕಿರುತ್ತದೆ. ಜಿಲ್ಲಾ ಕೇಂದ್ರ/ ನಗರ ಗ್ರಂಥಾಲಯದ ಅಧಿಕಾರಿಗಳಿಗೆ ಈ ಹಣ ಸಂದಾಯವಾಗಲಿದೆ.

 

ಗ್ರಂಥಾಲಯ ಸೇವೆಗಳ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಈ ಹಣವನ್ನು ಬಳಕೆ ಮಾಡಬಹುದಾಗಿರುತ್ತದೆ. ಆದರೆ ಸಂಗ್ರಹಿಸಿದ ಸೆಸ್‌ ಅನ್ನು ಸ್ಥಳೀಯ ಸಂಸ್ಥೆಗಳು ಇಲಾಖೆಗೆ ಸಲ್ಲಿಸುತ್ತಲೇ ಇಲ್ಲ ಎಂಬುದನ್ನು ಸಿಎಜಿಯು ವರದಿಯಲ್ಲಿ ಎತ್ತಿ ತೋರಿಸಿದೆ.

 

ಸಿಎಜಿ ವರದಿ ಪ್ರಕಾರ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯೊಂದೇ 2021-22ನೇ ಸಾಲಿನ ಅಂತ್ಯದ ವೇಳೆಗೆ 256.36 ಕೋಟಿ ರು. ಗ್ರಂಥಾಲಯ ಸೆಸ್‌ ಅನ್ನು ಗ್ರಂಥಾಲಯ ಇಲಾಖೆಗೆ ಸಂದಾಯ ಮಾಡದೇ ಬಾಕಿ ಉಳಿಸಿಕೊಂಡಿತ್ತು. ಇನ್ನುಳಿದ ನಗರ ಸ್ಥಳೀಯ ಸಂಸ್ಥೆಗಗಳು 54 ಕೋಟಿ ರು. ಸೆಸ್‌ ಅನ್ನು ಗ್ರಂಥಾಲಯ ಇಲಾಖೆಗೆ  ಸಂದಾಯ ಮಾಡಿಲ್ಲ.  2024ರಲ್ಲಿ ಸದನ ಸಮಿತಿಯು ಬಿಬಿಎಂಪಿಯು 397.37 ಕೋಟಿ ರು.  ಗ್ರಂಥಾಲಯ ಸೆಸ್‌ ಸಂದಾಯ ಮಾಡಿಲ್ಲ. ಇದಕ್ಕೆ ಕಾರಣರಾದ ಎಲ್ಲ ಮುಖ್ಯ ಆಯುಕ್ತರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿತ್ತು.

 

public library pending library cess payments from urban local bodies

 

ಕರ್ನಾಟಕವು ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು ಜಾರಿಗೊಳಿಸಿದ ದೇಶದ ಮೂರನೇ ರಾಜ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಪುಸ್ತಕ ಸಂಸ್ಕೃತಿ, ಓದುವ ಸಂಸ್ಕೃತಿಯನ್ನು ಉತ್ತೇಜಿಸುವ ಜವಾಬ್ದಾರಿ ಈ ಇಲಾಖೆಯದ್ದಾಗಿದೆ. ರಾಜ್ಯದಲ್ಲಿ ಒಟ್ಟ 6,890 ಗ್ರಂಥಾಲಯಗಳು ಈ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 5,766 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಾಗಿವೆ.

 

ಗ್ರಂಥಾಲಯ ಸೆಸ್‌ ಮೂಲಕ ನೂರಾರು ಕೋಟಿ ಸಂಗ್ರಹವಾಗುತ್ತಿದ್ದರೂ, ಗ್ರಂಥಾಲಯ ಇಲಾಖೆಗೆ ಈ ಹಣ ಕನ್ನಡಿಯೊಳಗಿನ ಗಂಟಿನಂತಾಗಿದೆ. ಹೀಗಾಗಿ ಗ್ರಂಥಾಲಯಗಳಿಗೆ ಮೂಲ ಸೌಕರ್ಯ ಒದಗಿಸುವುದು, ಆಧುನೀಕರಣಗೊಳಿಸುವುದು ಬೇಡ, ಪ್ರತಿ ವರ್ಷ ಸರಿಯಾಗಿ ಪುಸ್ತಕ ಖರೀದಿಸಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ.

 

public library pending library cess payments from urban local bodies

 

ರಾಜ್ಯದ ಸಾಹಿತಿಗಳು ಮತ್ತು ಪ್ರಕಾಶಕರ ಬೇಡಿಕೆಗಳಿಗೆ ಸ್ಪಂದಿಸಿ, 2023-24ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ಖರೀದಿಸಲು 10 ಕೋಟಿ ರು. ನೀಡಲಾಗುವುದು ಎಂದು ಪ್ರಕಟಿಸಿದ್ದರು. ಸಾರ್ವಜನಿಕ ಗ್ರಂಥಾಲಯಗಳ ಇತರ ವೆಚ್ಚಗಳ ಅಡಿಯಲ್ಲಿ ಈ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಮಂಜೂರಾದ 10 ಕೋಟಿ ರು.ಗಳಲ್ಲಿ 8.55 ಕೋಟಿ ರು.ಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿತ್ತು. ಈ ಹಣವನ್ನು ಸಂಪೂರ್ಣವಾಗಿ ಪುಸ್ತಕ ಖರೀದಿಗೆ ವೆಚ್ಚ ಮಾಡಲಾಗಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ತಿಳಿಸಿದೆ.

 

ಸಂಗ್ರಹವಾಗಿರುವ ಸೆಸ್‌ ಹಣವನ್ನು ಇಲಾಖೆಯು ಕ್ರೋಢೀಕರಿಸಿಕೊಂಡಿದ್ದರೆ ಈ ರೀತಿ ಬಜೆಟ್‌ನಲ್ಲಿ ಪುಸ್ತಕ ಖರೀದಿಗೆ ಹಣ ನೀಡುವ ಅವಶ್ಯಕತೆಯೇ ಇರುತ್ತಿರಲಿಲ್ಲ ಎಂಬುದನ್ನು ಸಿಎಜಿ ವರದಿಯು ಸ್ಪಷ್ಟವಾಗಿ ಹೇಳಿದೆ.

 

ಗ್ರಂಥಾಲಯ ಕರವನ್ನು ವಸೂಲಿ ಮಾಡಿದ ಮೂವತ್ತು ದಿನದೊಳಗೆ ಗ್ರಂಥಾಲಯ ಇಲಾಖೆಗೆ ಪಾವತಿಸುವಲ್ಲಿ ವಿಫಲವಾಗುವ ಸ್ಥಳೀಯ ಪ್ರಾಧಿಕಾರಗಳ ರಾಜ್ಯ ಹಣಕಾಸು ನಿಧಿ (ಎಸ್‌ಎಫ್‌ಸಿ)ಯಿಂದಲೇ ನೇರವಾಗಿ ಕಡಿತಗೊಳಿಸುವ ಪ್ರಸ್ತಾವಕ್ಕೆ ಈ ಹಿಂದೆ  ಆರ್ಥಿಕ ಇಲಾಖೆಯು ಒಪ್ಪಿಗೆ ನೀಡಿರಲಿಲ್ಲ. ಈ ಕುರಿತು ʻದಿ ಫೈಲ್‌ʼ 2022ರ ಡಿಸೆಂಬರ್‌ನಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

 

ಗ್ರಂಥಾಲಯ ಕರ;ಹಣಕಾಸು ನಿಧಿಯಿಂದಲೇ ಕಡಿತಕ್ಕೆ ಸಿಗದ ಒಪ್ಪಿಗೆ,ವಿಧೇಯಕ ಮಂಡನೆ?

 

ಕರ್ನಾಟಕದಲ್ಲಿ ಪುಸ್ತಕ ಪ್ರಕಟಣೆ ಮತ್ತು ಮಾರಾಟ ಉದ್ಯಮದ ಸ್ವರೂಪ ಪಡೆದುಕೊಳ್ಳಲಾರದು ಎಂಬುದನ್ನು ಮೊದಲೇ ಮನಗಂಡ ನಮ್ಮ ಹಿರಿಯರು ಗ್ರಂಥಾಲಯ ಸೆಸ್‌ ಸಂಗ್ರಹಿಸುವ ಪದ್ಧತಿ ಪರಿಚಯಿಸಿ, ಕಾಯ್ದೆ ಕೂಡ ರೂಪಿಸಿದ್ದರು. ಈ ಕಾಯ್ದೆಯಡಿಯಲ್ಲಿ ಸೆಸ್‌ ಸಂಗ್ರಹವಾಗುತ್ತಿದೆ. ಆದರೆ ಇಲಾಖೆಗೆ ಲಭ್ಯವಾಗುತ್ತಿಲ್ಲ. ಈ ಸೆಸ್‌ ಹಣ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ವರ್ಗಾವಣೆಯಾದರೆ ಗ್ರಂಥಾಲಯಗಳು ಸ್ವಾವಲಂಬಿ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ ಎನ್ನುತ್ತಾರೆ ಹಿರಿಯ ಪತ್ರಕರ್ತ ಡಾ. ರಾಜಶೇಖರ ಹತಗುಂದಿ.

 

ಈ ಕುರಿತು ʻದಿ ಫೈಲ್‌ʼ ನೊಂದಿಗೆ ಮಾತನಾಡಿದ ಅವರು, ಹಣಕಾಸು ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ  ಗ್ರಂಥಾಲಯ ಸೆಸ್‌ ಅನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಕಲ್ಪಿಸಿದರೆ ಪುಸ್ತಕ ಖರೀದಿಗೂ ಸೇರಿದಂತೆ ಗ್ರಂಥಾಲಯಗಳಿಗೆ ವಿಶೇಷ ಅನುದಾನದ ಅಗತ್ಯವೇ ಬೀಳುವುದಿಲ್ಲ ಎಂದಿದ್ದಾರೆ. ಬೇರೇನು ಬೇಡ ಇಲಾಖೆಗೆ ಬರಬೇಕಾಗಿರುವ 733 ಕೋಟಿ ರು.ಗಳನ್ನು ವಸೂಲಿ ಮಾಡಿ, ಠೇವಣಿ ಇರಿಸಿದರೂ ಇದರ ಬಡ್ಡಿ ದುಡ್ಡಿನಲ್ಲಿ ಇಲಾಖೆ ಪ್ರತಿ ವರ್ಷ ಸಾಕಷ್ಟು ಪುಸ್ತಕ ಖರೀದಿಸಬಹುದು ಎಂದು ಅವರು ಹೇಳಿದ್ದಾರೆ.

 

ಸೆಸ್‌ ಸಂಗ್ರಹವಾದರೂ ಈ ಹಣ ಗ್ರಂಥಾಲಯ ಇಲಾಖೆಯ ಬಳಕೆಗೆ ಸಿಗದಂತೆ ಮಾಡಲಾಗಿದೆ. ಸರ್ಕಾರಕ್ಕೆ ಇದು ಗೊತ್ತಿದ್ದರೂ ಸುಮ್ಮನಿದೆ.  ಕನ್ನಡ ಭಾಷೆ, ಪುಸ್ತಕ ಸಂಸ್ಕೃತಿಯ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಮುಖ್ಯಮಂತ್ರಿಗಳು, ಇಲಾಖೆಯ ಸಚಿವರು ಈ ಬಗ್ಗೆ ತಲೆಯೇ ಕೆಡಿಸಿಕೊಳ್ಳುತ್ತಿಲ್ಲ. ಇವರ ಉದ್ದೇಶ ಏನು ಎಂಬುದೇ ಅರ್ಥವಾಗುತ್ತಿಲ್ಲ  ಎನ್ನುತ್ತಾರೆ ಕರ್ನಾಟಕ ಲೇಖಕರ ಮತ್ತು ಪ್ರಕಾಶಕರ ಒಕ್ಕೂಟದ ಕಾರ್ಯದರ್ಶಿ ಸೃಷ್ಟಿ ನಾಗೇಶ್‌.

 

ʻದಿ ಫೈಲ್‌ʼ ನೊಂದಿಗೆ ಮಾತನಾಡಿದ ಅವರು, ಬೇರೆಲ್ಲಾ ಸೆಸ್‌ಗಳಂತೆ ಈ ಸೆಸ್‌ನ ಹಣ ಕೂಡ ಇಲಾಖೆಯ ಅಕೌಂಟಿಗೆ ನೇರವಾಗಿ ಸಂದಾಯವಾಗುವಂತೆ ಮಾಡಬೇಕು. ಇದರಿಂದ ಇಲಾಖೆಯು ಸರ್ಕಾರದ ಬಜೆಟ್‌ಗೆ ಕಾಯದೆ, ಗ್ರಂಥಾಲಯಗಳ ಅಭಿವೃದ್ಧಿ, ಪುಸ್ತಕ ಖರೀದಿ ಮತ್ತಿತರ ಚಟುವಟಿಕೆಗಳನ್ನು ಸ್ವತಂತ್ರವಾಗಿ ನಡೆಸಬಹುದಾಗಿದೆ. ಆದರೆ  ಬೇಕಾದಷ್ಟು ಹಣ ಕಣ್ಣ ಮುಂದೇ ಇದ್ದರೂ, ಪ್ರಕಾಶಕರು, ಲೇಖಕರು ʻಪುಸ್ತಕ ಖರೀದಿ ಮಾಡಿʼ ಎಂದು ತಮ್ಮ ಮುಂದೆ ಅಂಗಲಾಚಬೇಕು ಎಂಬ ಧೋರಣೆಯನ್ನು ಸರ್ಕಾರ ಹೊಂದಿದೆ. ಇದು ಸಾರಸ್ವತ ಲೋಕಕ್ಕೆ ಮಾಡುತ್ತಿರುವ ಅವಮಾನ ಎಂದು ಸೃಷ್ಟಿ ನಾಗೇಶ್‌ ಹೇಳಿದ್ದಾರೆ.

 

ಗ್ರಂಥಾಲಯ ಇಲಾಖೆಯು ಪ್ರತಿ ವರ್ಷ ನಿಗದಿತವಾಗಿ ಪುಸ್ತಕಗಳನ್ನು ಖರೀದಿಸುತ್ತಿಲ್ಲ. ಇದರಿಂದ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೂ 2022ನೇ ಸಾಲಿನಲ್ಲಿ ಪ್ರಕಟವಾಗಿರುವ ಪುಸ್ತಕಗಳನ್ನೇ ಆಯ್ಕೆ ಸಮಿತಿಯು ಖರೀದಿಗೆ ಅಂತಿಮಗೊಳಿಸಿಲ್ಲ. ಹೀಗಾಗಿ ಪುಸ್ತಕ ಪ್ರಕಟವಾಗಿ ಮೂರ್ನಾಲ್ಕು ವರ್ಷಗಳಾದರೂ ಗ್ರಂಥಾಲ ಇಲಾಖೆಯ ಖರೀದಿ ಭಾಗ್ಯವಿಲ್ಲದಂತಾಗಿದೆ.

 

public library pending library cess payments from urban local bodies

 

ಇಲಾಖೆಯು ಈ ಹಿಂದೆ ನಿಲ್ಲಿಸಿದ್ದ ಏಕ ಗವಾಕ್ಷಿಯ ಸಗಟು ಖರೀದಿಯನ್ನು ಮತ್ತೆ ಆರಂಭಿಸಿದೆ. ಇದಕ್ಕಾಗಿ ಶಿಕ್ಷಣ ಇಲಾಖೆಯು ಪ್ರತ್ಯೇಕವಾಗಿ ಹೆಡ್‌ ಆಫ್‌ ಅಕೌಂಟ್‌ ರಚಿಸಿದೆ. ಆದರೆ ಬಜೆಟ್‌ನಲ್ಲಿ ಇಲಾಖೆಗೆ ನೀಡಿದ ಅನುದಾನವನ್ನು ಕೂಡ ಸಮರ್ಥವಾಗಿ ಇಲಾಖೆ  ಬಳಸಿಕೊಳ್ಳುತ್ತಿಲ್ಲ.

 

2023-24ನೇ ಸಾಲಿನಲ್ಲಿ ಆಯವ್ಯದಲ್ಲಿ ಇಲಾಖೆಗೆ 79.34 ಕೋಟಿ ರು. ಹಂಚಿಕೆ ಮಾಡಲಾಗಿತ್ತು. ಇದರಲ್ಲಿ 77.06 ಕೋಟಿ ರು.ಗಳನ್ನು ಮಾತ್ರ ಇಲಾಖೆ ಖರ್ಚುಮಾಡಿತ್ತು. 4.79 ಕೋಟಿ ರು. ಬಾಕಿ ಇತ್ತು ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಗ್ರಂಥಾಲಯ ಇಲಾಖೆ ಅಕ್ರಮ; ತನಿಖೆಗೆ ಬರೆದ ಪತ್ರವನ್ನೇ ಹಿಂಪಡೆದುಕೊಂಡ ಪರಿಷತ್‌ ಸದಸ್ಯ ವಿಶ್ವನಾಥ್‌

 

ಗ್ರಂಥಾಲಯ ಇಲಾಖೆಯಲ್ಲಿ ಈ ಹಿಂದೆ  ನಡೆದಿದ್ದ ಅಕ್ರಮ, ಲೈಂಗಿಕ ದೌರ್ಜನ್ಯದ ಆರೋಪಗಳ ಕುರಿತು ʻದಿ ಫೈಲ್‌ʼ ಸರಣಿ ವರದಿಗಳನ್ನು ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts