ಬೆಂಗಳೂರು; ವಿಧಾನಸೌಧ, ವಿಕಾಸ ಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕು, ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಕಚೇರಿಗಳಿಗೆ ಸರ್ಕಾರಿ ನೌಕರರು, ಅಧಿಕಾರಿಗಳು ನಿಗದಿತ ಸಮಯದೊಳಗೇ ಹಾಜರಾಗುತ್ತಿಲ್ಲ. ಅಲ್ಲದೇ ಬೆಳಿಗ್ಗೆ 10 ಗಂಟೆಗೆ ಹಾಜರಾಗಬೇಕಿರುವ ಸರ್ಕಾರಿ ನೌಕರರು 11 ಗಂಟೆಯಾದರೂ ಕಚೇರಿಗೆ ಬರುತ್ತಿಲ್ಲ.
ಸರ್ಕಾರಿ ಕಚೇರಿಗಳಿಗೆ ನಿಗದಿತ ಅವಧಿಯೊಳಗೇ ಹಾಜರಾಗದ ಅಧಿಕಾರಿ, ನೌಕರರ ಕಳ್ಳಾಟ ಈಗಲೂ ಮುಂದುವರೆದಿದೆ. ಹಾಗೆಯೇ ಕರ್ನಾಟಕ ಸರ್ಕಾರಿ ನೌಕರರ ಹಾಜರಾತಿ ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಕರ್ನಾಟಕ ಹಾಜರಾತಿ ನಿರ್ವಹಣಾ ವ್ಯವಸ್ಥೆಗೆ ಕೇವಲ 19 ಇಲಾಖೆಗಳಷ್ಟೇ ಒಪ್ಪಿಗೆ ನೀಡಿವೆ. ಉಳಿದ ಇಲಾಖೆಗಳು ಈ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಮೀನಮೇಷ ಮಾಡುತ್ತಿವೆ.
ಹಾಗೆಯೇ 5 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಸರ್ಕಾರಿ ನೌಕರರು, ಅಧಿಕಾರಿಗಳ ಪೈಕಿ 2025ರ ಸೆ.24ರ ಹೊತ್ತಿಗೆ 3,15,907 ಸಂಖ್ಯೆಯಲ್ಲಿನ ಅಧಿಕಾರಿ, ನೌಕರರು, ಸಿಬ್ಬಂದಿಗಳಷ್ಠೇ ಈ ವ್ಯವಸ್ಥೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನುಳಿದ 2 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಅಧಿಕಾರಿ, ನೌಕರರು, ಸಿಬ್ಬಂದಿಗಳು ನೋಂದಣಿಯೇ ಅಗಿಲ್ಲ.
ಹೀಗಾಗಿ ಕಚೇರಿಗಳಿಗೆ ಅನಧಿಕೃತವಾಗಿ ಗೈರು ಹಾಜರಾಗುವ ಅಧಿಕಾರಿ, ಸಿಬ್ಬಂದಿಗಳನ್ನು ಕಂಡು ಹಿಡಿಯಲು ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿಲ್ಲ. ಅಲ್ಲದೇ ಈ ವ್ಯವಸ್ಥೆಯನ್ನು ಇನ್ನೂ ಒಪ್ಪಿಕೊಳ್ಳದ ಇಲಾಖೆಗಳಲ್ಲಿ ಅಧಿಕಾರಿ, ಸಿಬ್ಬಂದಿಗಳು ಅನಧಿಕೃತವಾಗಿ ಗೈರು ಹಾಜರಾಗುವ ಓಟಕ್ಕೆ ಕಡಿವಾಣವೂ ಬಿದ್ದಿಲ್ಲ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2025ರ ಸೆ.10ರಂದು ನಡೆದಿದ್ದ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಈ ಸಂಗತಿಯು ಬಯಲಾಗಿದೆ.
ಈ ಸಭೆಯ ನಡವಳಿಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಕರ್ನಾಟಕ ಸರ್ಕಾರಿ ನೌಕರರ ಹಾಜರಾತಿ ನಿರ್ವಹಣೆ ವ್ಯವಸ್ಥೆ (KAAMS) ಕಾರ್ಯವೈಖರಿ ಕುರಿತು ಸಭೆಯಲ್ಲಿ ಚರ್ಚೆಯಾಗಿದೆ. ಸರ್ಕಾರಿ ಕಚೇರಿಗಳಲ್ಲಿನ ಹಿಂದಿನ ಹಾಜರಾತಿ ವ್ಯವಸ್ಥೆ ಹಾಗೂ ಹಾಲಿ ಕರ್ನಾಟಕ ಸರ್ಕಾರಿ ನೌಕರರ ಹಾಜರಾತಿ ನಿರ್ವಹಣೆ ವ್ಯವಸ್ಥೆಯಲ್ಲಿ ಹಲವು ವ್ಯತ್ಯಾಸಗಳು ಇರುವುದು ಸಹ ನಡವಳಿಯಿಂದ ತಿಳಿದು ಬಂದಿದೆ.
ಬಜೆಟ್‌ನಲ್ಲಿ ಘೋಷಣೆ
ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAAMS) ಕಾರ್ಯವೈಖರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಘೋಷಣೆಯಲ್ಲಿಯೇ ಪರಿಚಯಿಸಲಾಗಿತ್ತು. ಅನಧಿಕೃತವಾಗಿ ಗೈರು ಹಾಜರಾಗುವ ಅಧಿಕಾರಿ, ನೌಕರರು, ಸಿಬ್ಬಂದಿಗಳನ್ನು ಕಂಡು ಹಿಡಿಯಲು ಈ ವ್ಯವಸ್ಥೆಯಿಂದ ಅನುಕೂಲವಾಗುತ್ತದೆ ಎಂದು ಬಜೆಟ್ ಘೋಷಣೆಯಲ್ಲಿ ಹೇಳಲಾಗಿತ್ತು. ಆದರೂ 19 ಇಲಾಖೆಗಳು ಹೊರತುಪಡಿಸಿ ಉಳಿದ ಇಲಾಖೆಗಳ ಅಧಿಕಾರಿ, ನೌಕರರು, ಸಿಬ್ಬಂದಿಗಳು ಈ ವ್ಯವಸ್ಥೆಯಡಿಯಲ್ಲಿ ಬರಲು ಹಿಂದೇಟು ಹಾಕಿರುವುದು ನಡವಳಿಯಿಂದ ಕಂಡು ಬಂದಿದೆ.
ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ (KAAMS)ಯು ಹೇಗೆ ಕಾರ್ಯನಿರ್ವಹಿಸುತ್ತಿದೆ, ಎಷ್ಟು ಸಂಖ್ಯೆಯ ಅಧಿಕಾರಿ, ನೌಕರರು, ಸಿಬ್ಬಂದಿಗಳು ನೋಂದಾಯಿಸಿಕೊಂಡಿದ್ದಾರೆ, ಎಷ್ಟು ಸಂಖ್ಯೆಯ ಅಧಿಕಾರಿ, ನೌಕರರು, ಸಿಬ್ಬಂದಿಗಳು ಎಷ್ಟು ಗಂಟೆಗೆ ಕಚೇರಿಗೆ ಹಾಜರಾಗುತ್ತಿದ್ದಾರೆ ಎಂಬ ಕುರಿತು ‘ದಿ ಫೈಲ್,’ ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ ಜಾಲತಾಣದಲ್ಲಿನ ಅಂಕಿ ಅಂಶಗಳ ಮೇಲೆ 2025ರ ಸೆ. 24ರಂದು ಕಣ್ಣಾಡಿಸಿತು.
ಸೆ.24ರಂದು ಹಾಜರಾತಿ ವಿವರ ಹೇಗಿತ್ತು?
2205ರ ಸೆ.24 ಹೊತ್ತಿಗೆ ರಾಜ್ಯ ಸರ್ಕಾರಿ ಇಲಾಖೆಗಳ ಒಟ್ಟಾರೆ 3,51,907 ನೌಕರರು ಈ ವ್ಯವಸ್ಥೆಗೆ ನೋಂದಾಯಿಸಿಕೊಂಡಿದ್ದರು. ಸೆಪ್ಟಂಬರ್ 24ರಂದು ಒಟ್ಟಾರೆ 44,164 ನೌಕರರು ಕಚೇರಿಗಳಿಗೆ ಹಾಜರಾಗಿದ್ದರು ಎಂಬುದು ಕೆಎಎಎಂಎಸ್‌ನ ಜಾಲತಾಣದಿಂದ ಕಂಡು ಬಂದಿತು.
ಬೆಳಗ್ಗೆ 9 ಗಂಟೆಯೊಳಗೆ ಶೇ. 29.6ರಷ್ಟು
ಬೆಳಗ್ಗೆ 9-30ರಿಂದ 10 ಗಂಟೆಯೊಳಗೆ ಶೇ.17.3ರಷ್ಟು,
ಬೆಳಗ್ಗೆ 10 ಗಂಟೆಯಿಂದ 11 ಗಂಟೆಯೊಳಗೆ ಶೇ.20.4,
11 ಗಂಟೆ ನಂತರ ಶೇ. 14.3ರಷ್ಟು ನೌಕರರು, ಅಧಿಕಾರಿಗಳು, ಸಿಬ್ಬಂದಿಗಳು ಕಚೇರಿಗಳಿಗೆ ಹಾಜರಾಗಿದ್ದರು ಎಂಬುದು ಜಾಲತಾಣದಿಂದ ತಿಳಿದು ಬಂದಿದೆ.
ಕೆಎಎಎಂಎಸ್ ಹೇಗೆ ಕಾರ್ಯ ನಿರ್ವಹಿಸಲಿದೆ?
ರಾಜ್ಯ ಸರ್ಕಾರವು ಪರಿಚಯಿಸಿರುವ ಈ ವ್ಯವಸ್ಥೆಗೆ ನೌಕರರ ಆಧಾರ್‌ಗೆ ಲಿಂಕ್ ಮಾಡಲಾದ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅವರ ಹಾಜರಾತಿಯನ್ನು ಪರಿಶೀಲಿಸುತ್ತದೆ. ನೌಕರರು ತಮ್ಮ ಕೆಲಸದ ಸ್ಥಳದಲ್ಲಿರುವಾಗ ಕಚೇರಿಯ 100-200 ಮೀಟರ್ ವ್ಯಾಪ್ತಿಯಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕು. ಈ ಅಪ್ಲಿಕೇಶನ್ ಮೂಲಕ ತಡವಾದ ಪ್ರವೇಶ ಅಥವಾ ಬೇಗನೆ ನಿರ್ಗಮನದಂತಹ ಉಲ್ಲಂಘನೆಗಳ ಬಗ್ಗೆ ಇಲಾಖೆ ಮುಖ್ಯಸ್ಥರಿಗೆ ಎಚ್ಚರಿಕೆ ನೀಡುತ್ತದೆ.
ನೌಕರರು, ಅಧಿಕಾರಿಗಳು, ಸಿಬ್ಬಂದಿಗಳು ತೆಗೆದುಕೊಳ್ಳುವ ಸೆಲ್ಫಿಯನ್ನು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಆಧಾರ್‌ನಲ್ಲಿರುವ ಮೂಲ ಫೋಟೋ ಮತ್ತು ನೋಂದಣಿಯ ಸಮಯದಲ್ಲಿ ತೆಗೆದ ಸೆಲ್ಫಿಯೊಂದಿಗೆ ಹೋಲಿಸುತ್ತದೆ.
ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ತಮ್ಮ ಬುದ್ದಿವಂತಿಕೆಯಿಂದ ಬದಲಾಯಿಸಿ ನಿರ್ವಹಿಸಲು ಸಾಧ್ಯವಿದೆ. ಅಲ್ಲದೇ ಸಿಬ್ಬಂದಿ ತಮ್ಮ ಅನಿಯಮಿತ ಹಾಜರಾತಿಯನ್ನು ಮರೆಮಾಚಲು ಉಪಕರಣಗಳನ್ನು ಹಾನಿಗೊಳಿಸಬಹುದು ಅಥವಾ ಬೇರೆ ಯಾವುದಾದರೂ ತಂತ್ರವನ್ನು ಆಶ್ರಯಿಸಬಹುದು ಎಂದು ಹೇಳಲಾಗಿತ್ತು.
ಆದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಇ-ಆಡಳಿತ ಕೇಂದ್ರವು ಅಭಿವೃದ್ಧಿಪಡಿಸಿರು ಕೆಎಎಎಂಎಸ್‌ನ್ನು ಜಿಯೋಫೆನ್ಸ್ ನಿಂದ ವಿನ್ಯಾಸಗೊಳಿಸಿದೆ. ಹೀಗಾಗಿ ಅದನ್ನು ಹಾಳು ಮಾಡುವುದು ಅಸಾಧ್ಯವಾಗಿದೆ.
ಎಚ್‌ಆರ್‍ಎಂಎಸ್‌ನಲ್ಲಿನ ದತ್ತಾಂಶವು ಕೆಲಸದ ಸ್ಥಳದ ವಿವರಗಳನ್ನು ನೀಡಲಿದೆ. ಪ್ರತಿದಿನ, ಉದ್ಯೋಗಿ ತನ್ನ ಕೆಲಸದ ಸ್ಥಳಕ್ಕೆ ಬಂದಾಗ, ಅವನು/ಅವಳು ಸೆಲ್ಫಿ ತೆಗೆದುಕೊಳ್ಳಬೇಕು. ಈ ಫೋಟೋವನ್ನು ಅಪ್ಲಿಕೇಶನ್‌ನಲ್ಲಿ ನೋಂದಣಿ ಸಮಯದಲ್ಲಿ ತೆಗೆದ ಸೆಲ್ಫಿಯೊಂದಿಗೆ ಹೋಲಿಸಲಾಗುತ್ತದೆ. ಅವರ ಹಾಜರಾತಿಯನ್ನು ಗುರುತಿಸಲು ಯಾವುದೇ ಉಪಕರಣಗಳು ಅಥವಾ ಗ್ಯಾಜೆಟ್‌ಗಳು ಇರುವುದಿಲ್ಲ. ಮತ್ತು ಅವರ ಸೆಲ್ ಫೋನ್ ಅನ್ನು ಮಾತ್ರ ಬಳಸಲಾಗುತ್ತದೆ.