ಬೆಂಗಳೂರು; ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ವಿಧಾನ ಪರಿತ್ ಸದಸ್ಯರನ್ನು ಕಾನೂನಾತ್ಮಕವಾಗಿ ನೇಮಕ ಮಾಡಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಇದೀಗ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧಿನಿಯಮ 1991ಕ್ಕೆ ತಿದ್ದುಪಡಿ ತರಲು ಹೊರಟಿದೆ.
ಈ ಸಂಬಂಧ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯು ಸಚಿವ ಸಂಪುಟಕ್ಕೆ ಕಡತ (ಪಿಡಿಎಸ್ 15 ಮಪ್ರಮಂ 2019) ಮಂಡಿಸಿದೆ. ಇದೇ ತಿಂಗಳಾಂತ್ಯಕ್ಕೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ರಹಸ್ಯ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಕಾನೂನು ರೀತಿಯಲ್ಲಿ ವಿಧಾನ ಪರಿಷತ್ ಸದಸ್ಯರನ್ನು ನೇಮಕ ಮಾಡಲು ಮಂಡಳಿಯ ಅಧಿನಿಯಮ 1991ರಲ್ಲಿ ಅವಕಾಶವಿರಲಿಲ್ಲ. ಈ ಕುರಿತು ವಿಧಾನ ಪರಿಷತ್ ಸದಸ್ಯರು ಅಧಿನಿಯಮ ತಿದ್ದುಪಡಿಗೆ ಒತ್ತಾಯಿಸಿದ್ದರು. ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಹರೀಶ್ ಕುಮಾರ್ ಅವರು ವಿಧಾನಪರಿಷತ್ ಅಧಿವೇಶನದಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದರು.
ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕಾನೂನು ರೀತಿಯಲ್ಲಿ ಮಂಡಳಿಗೆ ವಿಧಾನ ಪರಿಷತ್ ಸದಸ್ಯರನ್ನು ನೇಮಕ ಮಾಡಲು ಅವಕಾಶವಿರುವುದಿಲ್ಲ ಎಂದು ಉತ್ತರಿಸಿದ್ದರು.
ಇದೀಗ ಕಾಂಗ್ರೆಸ್ ಸರ್ಕಾರವು ಮಂಡಳಿಯ ಈ ಅಧಿನಿಯಮಕ್ಕೆ ತಿದ್ದುಪಡಿ ತರಲು ಹೊರಟಿದೆ.
ಸಚಿವ ಸಂಪುಟ ಪ್ರಸ್ತಾವದಲ್ಲೇನಿದೆ?
ವಿಧಾನಸಭೆ ಸದಸ್ಯರಿಂದ ಚುನಾಯಿತರಾದ ವಿಧಾನ ಪರಿಷತ್ ಸದಸ್ಯರಿಗೆ ಚುನಾವಣೆ ಕ್ಷೇತ್ರವಿರುವುದಿಲ್ಲ. ವಿಧಾನ ಪರಿಷತ್ ಸದಸ್ಯರು ಮಂಡಳಿಯ ಅಧಿಕಾರ ವ್ಯಾಪ್ತಿಯೊಳಗಿನ ಜಿಲ್ಲೆಯನ್ನು ನೋಡಲ್ ಜಿಲ್ಲೆಯೆಂದು ಆಯ್ಕೆ ಮಾಡಿಕೊಂಡರೆ ಅಂತಹವರನ್ನು ಮಂಡಳಿಯ ಸದಸ್ಯರಂದು ಪರಿಗಣಿಸಿ ಅವರಿಗೂ ಇತರೆ ಸದಸ್ಯರಿಗೆ ದೊರೆಯುವ ಸ್ಥಾನಮಾನ, ಸೌಲಭ್ಯಗಳು, ಅನುದಾನ ಮತ್ತು ಮಾನ್ಯತೆ ದೊರೆಯುವಂತೆ ಮಾಡಬೇಕಿದೆ. ಹೀಗಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧಿನಿಯಮ 1991ಕ್ಕೆ ತಿದ್ದುಪಡಿ ತರಬೇಕು ಎಂದು ಯೋಜನೆ ಇಲಾಖೆಯು ಪ್ರಸ್ತಾವಿಸಿರುವುದು ಸಚಿವ ಸಂಪುಟದ ರಹಸ್ಯ ಹಾಳೆಯಿಂದ ತಿಳಿದು ಬಂದಿದೆ.
ಆರ್ಥಿಕ ಪರಿಣಾಮಗಳೇನು?
ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನವನ್ನು ಮಂಡಳಿ ವ್ಯಾಪ್ತಿಯ ಎಲ್ಲಾ ಸದಸ್ಯರುಗಳಿಗೆ ಹಂಚಿಕೆ ಮಾಡಲಾಗುವುದು. ಸಭೆಯಲ್ಲಿ ಭಾಗವಹಿಸುವ ಹೆಚ್ಚುವರಿ ಸದಸ್ಯರುಗಳಿಗೆ ಪ್ರತಿ ಸಭೆಗೆ ಆಸೀನ ಭತ್ಯೆ, ಪ್ರಯಾಣ ಭತ್ಯೆ ಮತ್ತು ಇತರೆ ವೆಚ್ಚಗಳು ಸೇರಿದಂತೆ ಒಟ್ಟು 2,00,000 ರು.ಗಳನ್ನು ಮಂಡಳಿಯ ಆಡಳಿತಾತ್ಮಕ ನಿಧಿಯಿಂದ ಭರಿಸಬೇಕಿದೆ.
ಆರ್ಥಿಕ ಇಲಾಖೆ ಅಭಿಪ್ರಾಯವೇನು?
ಆಡಳಿತ ಇಲಾಖೆಯು ನೀಡಿದ್ದ ಪ್ರಸ್ತಾವವನ್ನು ಆರ್ಥಿಕ ಇಲಾಖೆಯು ಪರಿಶೀಲಿಸಿದೆ. ಕರ್ನಾಟಕ ವಿಧಾನಸಭೆಯಿಂದ ಆಯ್ಕೆಗೊಂಡ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ ಹೊಸದಾಗಿ ಸೇರ್ಪಡೆಯಾಗಬಹುದಾದ ವಿಧಾನ ಪರಿಷತ್‌ನ 5 ಸದಸ್ಯರುಗಳಿಗೆ ಸಭೆಯಗಳ ಅಸೀನತೆ ಶುಲ್ಕ ಮತ್ತು ಪ್ರಯಾಣ ಭತ್ಯೆಗೆ ಆಗುವ 2.00 ಲಕ್ಷ ರು ಗಳ ಆಡಳಿತಾತ್ಮಕ ವೆಚ್ಚವನ್ನು ಮಾತ್ರ ಭರಿಸುವ ಷರತ್ತಿಗೊಳಪಟ್ಟು ಆರ್ಥಿಕ ಇಲಾಖೆಯು ಈ ಪ್ರಸ್ತಾವನೆಗೆ ಸಹಮತಿಸಿರುವುದು ಗೊತ್ತಾಗಿದೆ.
ಮಲೆನಾಡು ಪ್ರದೇಶಶಾಭಿವೃದ್ಧಿ ಮಂಡಳಿಯ ಅಧಿನಿಯಮಕ್ಕೆ ತರಲು ಹೊರಟಿರುವ ತಿದ್ದುಪಡಿ ಕುರಿತು 2023ರ ಜೂನ್ 221 ಮತ್ತು 2025ರ ಸೆ.17ರಂದು ಪರಿಶೀಲನಾ ಸಮಿತಿಯಲ್ಲಿ ಚರ್ಚೆಯಾಗಿದೆ. ಈ ತಿದ್ದುಪಡಿ ವಿಧೇಯಕವು ಭಾರತ ಸಂವಿಧಾನದ 7ನೇ ಅನುಸೂಚಿಯ 2ನೇ ಪಟ್ಟಿಯ 5ನೇ ಮತ್ತು 32ನೇ ನಮೂನೆ ಅಡಿಯಲ್ಲಿ ಬರಲಿದೆ.
ಹೀಗಾಗಿ ಈ ವಿಧೇಯಕವನ್ನು ಮಂಡಿಸಲು ರಾಜ್ಯ ವಿಧಾನ ಮಂಡಲಕ್ಕೆ ಅಧಿಕಾರವಿದೆ. ಇದು ಕಾನೂನಿನ ವಿಧೇಯಕದ ಉಪಬಂಧಗಳಿಗೆ ವ್ಯತಿರಿಕ್ತವಾಗುವುದು ಕಂಡು ಬಂದಿಲ್ಲ. ಇದನ್ನು ರಾಷ್ಟ್ರಪತಿಗಳ ಪರ್ಯಾಲೋಚನೆಗಾಗಿ ಕಾಯ್ದಿರಿಸುವ ಅಗತ್ಯತೆ ಕಂಡು ಬಂದಿಲ್ಲ ಎಂದು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯು ಅಭಿಪ್ರಾಯ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಈ ಪ್ರಸ್ತಾವವನ್ನು ಯೋಜನೆ, ಕಾರ್ಯಕ್ರಮ, ಸಾಂಖ್ಯಿಕ ಸಚಿವ ಡಿ ಸುಧಾಕರ್ ಅವರೂ ಸಹ ಅನುಮೋದನೆ ನೀಡಿರುವುದು ಗೊತ್ತಾಗಿದೆ.
ಮಂಡಳಿಯಲ್ಲಿ ನಾಮನಿರ್ದೇಶನಕ್ಕೆ ಮಾನದಂಡಗಳೇನು?
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ಅಧಿನಿಯಮ 1991ರ ಪ್ರಕಾರ ನಾಮ ನಿರ್ದೇಶನಕ್ಕೆ ಹಲವು ಮಾನದಂಡಗಳನ್ನು ರೂಪಿಸಿದೆ. ಇದರ ಪ್ರಕಾರ ರಾಜ್ಯ ಸರ್ಕಾರದಿಂದ ನಾಮನಿರ್ದೇಶಿತರಾದ ಹತ್ತು ಮಂದಿಯನ್ನು ಮೀರದ ಸದಸ್ಯರು, ಅವರ ಪೈಕಿ ಇಬ್ಬರು ಅನುಸೂಚಿತ ಜಾತಿಗಳು ಮತ್ತು ಒಬ್ಬರು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ವ್ಯಕ್ತಿಗಳು ಸದಸ್ಯರಾಗಿರಬೇಕು ಎಂದು ಹೇಳಿದೆ.
ಮಂಡಳಿಯ ಅಧಿನಿಯಮ ಅಧ್ಯಾಯ 2, ಸೆಕ್ಷನ್ 5ರ ಪ್ರಕಾರ ಹುದ್ದೆಯ ಸದಸ್ಯತ್ವಕಕೆ ಅನರ್ಹತೆ ಬಗ್ಗೆಯೂ ವಿವರಿಸಿದೆ. 2020ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಹರೀಶ್ ಕುಮಾರ್, ರುದ್ರೇಗೌಡರು, ಎಸ್ ಎಲ್ ಧರ್ಮೇಗೌಡರು ಅವರು ಮಂಡಳಿಗೆ ನೇಮಕವಾಗಿರಲಿಲ್ಲ.