ಬೆಂಗಳೂರು: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ, ಭ್ರಷ್ಟಾಚಾರ ಆರೋಪ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಗಳು, ನೌಕರರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಕರ್ನಾಟಕ ಲೋಕಾಯುಕ್ತವು ಈ ವರ್ಷ 108 ಪ್ರಸ್ತಾವಗಳನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಸಲ್ಲಿಸಿದೆ.
ಲೋಕಾಯುಕ್ತದಿಂದ ಇದುವರೆಗೆ ಸಲ್ಲಿಕೆಯಾಗಿರುವ 214 ಪ್ರಕರಣಗಳು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ (ಸಕ್ಷಮ ಪ್ರಾಧಿಕಾರಗಳಲ್ಲಿ) ಇನ್ನೂ ಬಾಕಿ ಇದ್ದು, ಇದರಲ್ಲಿ ಈ ವರ್ಷ ಸಲ್ಲಿಕೆಯಾಗಿರುವ 108 ಪ್ರಕರಣಗಳೂ ಸೇರಿವೆ. ಈ ವರ್ಷ ಆಗಸ್ಟ್ ಅಂತ್ಯದವರೆಗೆ ಒಂದು ಪ್ರಕರಣದ ಪ್ರಸ್ತಾವನೆಯನ್ನು ಮಾತ್ರ ತಿರಸ್ಕರಿಸಲಾಗಿದೆ.
ಕರ್ನಾಟಕ ಲೋಕಾಯುಕ್ತವು ಆಗಸ್ಟ್ 31ರ ವರೆಗೆ, ಪ್ರಾಸಿಕ್ಯೂಷನ್‌ಗೆ ಅನುಮತಿ ಆದೇಶಕ್ಕಾಗಿ ಕಾಯಲಾಗುತ್ತಿರುವ ಪ್ರಕರಣಗಳ ಮಾಹಿತಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಒದಗಿಸಿದ್ದು, ಇದರಿಂದ ಈ ವಿಷಯ ಬೆಳಕಿಗೆ ಬಂದಿದೆ.
ಸರ್ಕಾರಿ ಅಧಿಕಾರಿ, ನೌಕರರ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಕಲಂ 19ರಡಿ ಪ್ರಾಸಿಕ್ಯೂಷನ್‌ಗೆ ಮಂಜೂರಾತಿ ನೀಡುವಂತೆ ವಿವಿಧ ಇಲಾಖೆಗಳಿಗೆ ಅಂದರೆ ಸಕ್ಷಮ ಪ್ರಾಧಿಕಾರಗಳಿಗೆ ಲೋಕಾಯುಕ್ತವು ಪ್ರಸ್ತಾವ ಸಲ್ಲಿಸುತ್ತದೆ. ಆದರೆ ಈ ಪ್ರಸ್ತಾವಗಳನ್ನು ಪರಿಶೀಲಿಸಿ, ಮಂಜುರಾತಿ ನೀಡುವ ಅಥವಾ ತಿರಸ್ಕರಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲು ಸಕ್ಷಮ ಪ್ರಾಧಿಕಾರಗಳು ವಿಳಂಬ ಮಾಡುತ್ತಿವೆ.
2024ರಲ್ಲಿ ಸಲ್ಲಿಕೆಯಾಗಿದ್ದ ಒಟ್ಟು 63 ಪ್ರಸ್ತಾವಗಳ ಬಗ್ಗೆಯೂ ಇನ್ನೂ ಯಾವುದೇ ನಿರ್ಧಾರವಾಗಿಲ್ಲ. ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಳಂಬವಾಗುತ್ತಿರುವ ಕುರಿತು 2024ರ ಸೆಪ್ಟೆಂಬರ್ 21ರಂದು ಲೋಕಾಯುಕ್ತವು ಸರ್ಕಾರಕ್ಕೆ ಪತ್ರ ಬರೆದಿತ್ತು. ಆಗ 525 ಪ್ರಕರಣಗಳು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಇದ್ದವು. 2023ರಲ್ಲಿ ಸಲ್ಲಿಕೆಯಾಗಿರುವ 23 ಹಾಗೂ 2022ರಲ್ಲಿ ಸಲ್ಲಿಕೆಯಾಗಿರುವ 9 ಪ್ರಸ್ತಾಪಗಳು ಇನ್ನೂ ಬಾಕಿ ಉಳಿದಿವೆ.
ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ಪ್ರಕರಣಗಳಲ್ಲಿ ಮೂರು ತಿಂಗಳ ಒಳಗೆ ಸಂಬಂಧಿಸಿದ ಇಲಾಖೆಗಳು ಪ್ರಾಸಿಕ್ಯೂಷನ್‌ಗೆ ಮಂಜೂರಾತಿ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಕಾಲಮಿತಿ ನಿಗದಿಪಡಿಸಿದೆ. (Subramanian Swamy vs. Dr. Manmohan Singh & Anr. Civil Appeal No. 1193 of 2012 dated January 31, 2012 : All proposals for sanction placed before any Sanctioning Authority, empowered to grant sanction for the prosecution of a public servant under section 19 of the P.C. Act must be decided within a period of three months of the receipt of the proposal by the concerned authority). ಆದರೆ ರಾಜ್ಯದಲ್ಲಿ ಇದು ಜಾರಿಗೆ ಬಂದಿಲ್ಲ. ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದಲೇ ಈ ರೀತಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬ ಮಾತುಗಳು ಇವೆ.
ಪ್ರಸ್ತುತ ನ್ಯಾ. ಬಿ.ಎಸ್. ಪಾಟೀಲ ಅವರು ಲೋಕಾಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಉಪ ಲೋಕಾಯುಕ್ತರಾಗಿ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆಯಲ್ಲಿಯೇ, ಭ್ರಷ್ಟ ಅಧಿಕಾರಿಗಳನ್ನು ಬೆದರಿಸಿ, ಹಣ ವಸೂಲಿ ಮಾಡಿದ ಪ್ರಕರಣ ಕೂಡ ಬೆಳಕಿಗೆ ಬಂದಿದೆ. ಈ ಕುರಿತು ʻದಿ ಫೈಲ್ʼ ಸರಣಿ ವರದಿ ಪ್ರಕಟಿಸಿತ್ತು.
ಏಳು ವರ್ಷಗಳಾದರೂ ತೀರ್ಮಾನವಿಲ್ಲ!
ಏಳು ವರ್ಷಗಳ ಹಿಂದೆ ಅಂದರೆ 2018ರಲ್ಲಿ ಸಲ್ಲಿಕೆಯಾಗಿರುವ ಮೂರು ಪ್ರಕರಣಗಳ ಪ್ರಸ್ತಾವದ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗದೇ ಇರುವುದು ಲೋಕಾಯುಕ್ತ ಸಂಸ್ಥೆಯು ನೀಡಿರುವ ಈ ಮಾಹಿತಿಯಿಂದ ಬಹಿರಂಗಗೊಂಡಿದೆ. ಅದೇ ರೀತಿ 2021 ರಲ್ಲಿ ಸಲ್ಲಿಕೆಯಾಗಿರುವ ಆರು ಪ್ರಸ್ತಾವಗಳ ಕುರಿತೂ ಇನ್ನೂ ಯಾವುದೇ ತೀರ್ಮಾನವಾಗಿಲ್ಲ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ)ನ ಸಹಾಯಕ ಇಂಜಿನಿಯರ್ ಎಚ್.ಎಸ್. ಮಂಜುನಾಥ್ ವಿರುದ್ಧ 2010ರಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಲೋಕಾಯುಕ್ತವು 2018ರ ಫೆಬ್ರವರಿ 9 ರಂದು ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಕ್ಷಮ ಪ್ರಾಧಿಕಾರವಾದ ಕೆಪಿಟಿಸಿಲ್‌ನ ಅಧ್ಯಕ್ಷೀಯ ಮಂಡಳಿಗೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಇದುವರೆಗೂ ಈ ಪ್ರಕರಣದ ಕುರಿತು ಯಾವುದೇ ತೀರ್ಮಾನವಾಗಿಲ್ಲ ಎಂಬುದು ಲೋಕಾಯುಕ್ತ ಬಹಿರಂಗಪಡಿಸಿರುವ ಈ ದಾಖಲೆಯಿಂದ ಗೊತ್ತಾಗಿದೆ.
ಇದೇ ರೀತಿ ಬೆಸ್ಕಾಂನ ಜೂನಿಯರ್ ಇಂಜಿನಿಯರ್ ಜಯರಾಮ್ ವಿರುದ್ಧ 2014ರಲ್ಲಿ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಜಯ ಕುಮಾರ್ ವಿರುದ್ಧ 2015ರಲ್ಲಿ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತವು ತನಿಖೆ ನಡೆಸಿ ಈ ಪ್ರಕರಣಗಳಿಗೆ ಸಂಬಂಧಿಸಿದಂತೆಯೂ 2018ರ ಫೆಬ್ರವರಿ 9 ರಂದೇ ಕೆಪಿಟಿಸಿಎಲ್‌ಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿದೆ. ಆದರೆ ಇದುವರೆಗೂ ತೀರ್ಮಾನವಾಗಿಲ್ಲ.
ಆಶ್ಚರ್ಯವೆಂದರೆ ಲೋಕಾಯುಕ್ತ ಕೂಡ ಏಳು ವರ್ಷಗಳ ಹಿಂದೆ ಸಲ್ಲಿಕೆಯಾಗಿರುವ ಈ ಪ್ರಸ್ತಾವಗಳ ಕುರಿತು ಕೆಪಿಟಿಸಿಎಲ್‌ಗೆ ಒಮ್ಮೆಯೂ ನೆನಪಿನ ಪತ್ರ ಕಳಿಸಿಲ್ಲ ಎಂಬುದು ಲೋಕಾಯುಕ್ತ ಒದಗಿಸಿರುವ ಈ ದಾಖಲೆಯಿಂದ ತಿಳಿದು ಬಂದಿದೆ.
2019ರಲ್ಲಿ ದಾಳಿ; ತೀರ್ಮಾನ ಇನ್ನೂ ಬಾಕಿ
2019ರಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆಗಿನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಬೆಂಗಳೂರಿನಲ್ಲಿ ಕಾನೂನು ಮತ್ತು ಮಾಪನಶಾಸ್ತ್ರ ಇಲಾಖೆಯ ಮಿನರ್ವ ವೃತ್ತ ಮತ್ತು ಬಸವೇಶ್ವರ ನಗರದ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು (32/2019). ಈ ವೇಳೆ 10 ಲಕ್ಷ ರು. ನಗದು ವಶಪಡಿಸಿಕೊಂಡು, 22 ಆರೋಪಿಗಳನ್ನು ಬಂಧಿಸಿದ್ದರು.
ಈ ದಾಳಿ ವೇಳೆ ಸರ್ಕಾರಿ ಅಧಿಕಾರಿಗಳ ಕೈಯಲ್ಲಿಇರಬೇಕಾದ ಗೌಪ್ಯ, ಮಹತ್ವದ ದಾಖಲೆಗಗಳನ್ನು ಖಾಸಗಿ ವ್ಯಕ್ತಿಗಳು ನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿತ್ತು ಎಂದು ಎಸಿಬಿ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು.
ಮಿನರ್ವ ವೃತ್ತದ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು, ಮಧ್ಯವರ್ತಿಗಳ ಬಳಿ 7.12 ಲಕ್ಷ ರು. ನಗದು ಪತ್ತೆಯಾಗಿದ್ದರೆ, ಮೋದಿ ರಸ್ತೆಯ ಕಚೇರಿಯಲ್ಲಿ ಖಾಸಗಿಯವರಿಂದ 2.73 ಲಕ್ಷ ರು. ವಶಪಡಿಸಿಕೊಳ್ಳಲಾಗಿತ್ತು. ಈ ಸಂಬಂಧ ಸಿದ್ದಪ್ಪ (ಮಧ್ಯವರ್ತಿ), ಎನ್ ಚಂದ್ರಶೇಖರ್, ಎಸ್.ಪಿ. ಯಲ್ಲಪ್ಪ, ಎಸ್.ಎ. ನವೀದ್, ಕೆ.ಎನ್. ಪ್ರಕಾಶ್, ಎಸ್. ವಿ. ಶಶಿಕುಮಾರ್ (Licenced repairer), ಅಕ್ಕಾಳಪ್ಪ (Licenced repairer),ಎಸ್.ಎ. ವದೂದ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಲೋಕಾಯುಕ್ತವು, 2023ರ ಏಪ್ರಿಲ್ 29ರಂದು ಸಕ್ಷಮ ಪ್ರಾಧಿಕಾರಕ್ಕೆ ಅಂದರೆ, ಕಾನೂನು ಮತ್ತು ಮಾಪನಶಾಸ್ತ್ರ ಇಲಾಖೆಯ ಮುಖ್ಯಸ್ಥರಾದ ಕಾನೂನು ಮತ್ತು ಮಾಪನಶಾಸ್ತ್ರ ನಿಯಂತ್ರಕರಿಗೆ ಪ್ರಾಸಿಕ್ಯೂಷನ್‌ಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕಳೆದ ಆಗಸ್ಟ್ 31ರ ವರೆಗೂ ಈ ಬಗ್ಗೆ ಇಲಾಖೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಲೋಕಾಯುಕ್ತವು ಪ್ರಕಟಿಸಿದೆ.
ಅನುಮತಿ ನೀಡಿ, ನಾಲ್ಕೇ ದಿನದಲ್ಲಿ ತಡೆ ಹಿಡಿದ ಜಿಪಂ ಸಿಇಒ
2014ರಲ್ಲಿ ಗದಗ ಜಿಲ್ಲೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾಗಿದ್ದ (ಪಿಡಿಒ) ಎಸ್.ಎಫ್. ಗೊಯ್ಲರ್, ವಿ.ಬಿ ಪೂಜಾರ್, ಎಸ್.ಎಸ್. ಉಪ್ಪಾರ್, ಆರ್.ಎಸ್. ಮುದಿಗೌಡರ, ಕೆ.ಎಲ್. ಪೂಜಾರ್, ಎಸ್.ಕೆ. ಕಿಲ್ಲೆದಾರ್ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾಗಿದ್ದ ಬಿ.ಬಿ. ತಳ್ವಾರ್, ಬಿ.ಕೆ. ಸಜ್ಜನ್‌ಗೌಡರ್, ಎಸ್.ಡಿ. ಹಿರೇಮನಿ ವಿರುದ್ಧ ಲೋಕಾಯುಕ್ತವು ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.
ಇವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಎಂಟು ವರ್ಷಗಳ ನಂತರ ಅಂದರೆ 2022ರಲ್ಲಿ ಲೋಕಾಯುಕ್ತವು ಸಕ್ಷಮ ಪ್ರಾಧಿಕಾರವಾದ ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ (ಸಿಇಒ) ಪ್ರಸ್ತಾವನೆ ಸಲ್ಲಿಸಿತ್ತು. 2022ರ ಮಾರ್ಚ್ 18ರಂದು ಸಲ್ಲಿಕೆಯಾಗಿದ್ದ ಈ ಪ್ರಸ್ತಾವಕ್ಕೆ 2022ರ ಮೇ 16ರಂದು ಸಿಇಒ ಒಪ್ಪಿಗೆ ಕೂಡ ನೀಡಿದ್ದರು. ಆದರೆ ಕೇವಲ ನಾಲ್ಕ ದಿನಗಳಲ್ಲಿ ಅಂದರೆ ಮೇ 20ರಂದು ತಮ್ಮ ಆದೇಶಕ್ಕೆ ಸಿಇಒ ತಡೆ ನೀಡಿದ್ದರು.
ಇದನ್ನು ತೆರವುಗೊಳಿಸುವಂತೆ ಲೋಕಾಯುಕ್ತವು 2022ರ ಜುಲೈನಲ್ಲಿಯೇ ಸಿಇಒಗೆ ಪತ್ರ ಬರೆದಿದೆ. ಆದರೆ ಇದುವರೆಗೂ ಈ ಪ್ರಾಸಿಕ್ಯೂಷನ್‌ಗೆ ಅನುಮತಿ ದೊರೆತಿಲ್ಲ ಎಂದು ಲೋಕಾಯುಕ್ತವು ಮಾಹಿತಿ ನೀಡಿದೆ.
ಭ್ರಷ್ಟಾಚಾರ ನಿಯಂತ್ರಣ: ಲೋಕಾಯುಕ್ತ ವರದಿ ಕೊಟ್ಟರೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಸರ್ಕಾರ
ಕರ್ನಾಟಕ ಲೋಕಾಯುಕ್ತವು ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆ, ವಿಚಾರಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವುದು ಮತ್ತು ಸರ್ಕಾರವು ಸಲ್ಲಿಕೆಯಾಗಿರುವ ಎಲ್ಲ ವರದಿಗಳ ಮೇಲೂ ಕ್ರಮ ತೆಗೆದುಕೊಳ್ಳದೇ ಇರುವ ವಿಷಯವನ್ನು ಈ ಹಿಂದೆ ʻದಿ ಫೈಲ್ʼ ಬಹಿರಂಗಪಡಿಸಿತ್ತು.
ಲೋಕಾಯುಕ್ತದಲ್ಲಿ 22,699 ದೂರುಗಳ ವಿಚಾರಣೆ ಬಾಕಿ; 2009 ರಿಂದಲೂ ಪೆಂಡಿಂಗ್‌ನಲ್ಲಿವೆ ಕೇಸುಗಳು!
ಭ್ರಷ್ಟಾಚಾರ ನಿರ್ಮೂಲನೆಯ ವಿಷಯದಲ್ಲಿ ಸಕ್ರಿಯವಾಗಿರಬೇಕಾಗಿದ್ದ ʻಕರ್ನಾಟಕ ಲೋಕಾಯುಕ್ತʼ ಈಗ ಕುಂಟುತ್ತಾ ಸಾಗಿದೆ. ಇದರಿಂದಾಗಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಜುಲೈ ಅಂತ್ಯದ ವೇಳೆಗೆ ಬಾಕಿ ಇರುವ ದೂರು ಪ್ರಕರಣಗಳ ಸಂಖ್ಯೆ 22,699 ಕ್ಕೆ ಏರಿದೆ ಎಂಬುದರ ಕುರಿತೂ ʻದಿ ಫೈಲ್ʼ ವರದಿ ಮಾಡಿತ್ತು.