ಬೆಂಗಳೂರು; ವಿಜಯಪುರದಲ್ಲಿ ಇದೇ ಡಿಸೆಂಬರ್ ನಲ್ಲಿ ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಳ್ಳಲು ಪಿಯುಸಿ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ 500 ರು ಶುಲ್ಕ ಸಂಗ್ರಹಿಸಿ ಸರ್ಕಾರೇತರ ಸಂಸ್ಥೆಯಾಗಿರುವ ವೃಕ್ಷೋತ್ಥಾನ ಹೆರಿಟೇಜ್ ಪ್ರತಿಷ್ಠಾನಕ್ಕೆ ಜಮೆ ಮಾಡಲು ಪದವಿಪೂರ್ವ ಶಿಕ್ಷಣ ಇಲಾಖೆಯು ನಿರ್ದೇಶಿಸಿರುವುದು ಇದೀಗ ಬಹಿರಂಗವಾಗಿದೆ.
ವಿಶೇಷವೆಂದರೇ ಈ ಸರ್ಕಾರೇತರ ಸಂಸ್ಥೆಯಾಗಿರುವ ವೃಕ್ಷೋತ್ಥಾನ ಹೆರಿಟೇಜ್ ಪ್ರತಿಷ್ಠಾನವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಮುನ್ನಡೆಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ವೃಕ್ಷೋಥಾನ್ ಹೆರಿಟೇಜ್ ಪ್ರತಿಷ್ಠಾನವು ವಿಜಯಪುರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಮ್ಯಾರಥಾನ್ ಓಟ ನಡೆಸುತ್ತಿದೆ. ಈ ಪ್ರತಿಷ್ಠಾನಕ್ಕೆ ಹಲವಾರು ಸಂಘ ಸಂಸ್ಥೆಗಳು, ಚುನಾಯಿತ ಜನಪ್ರತಿನಿಧಿಗಳು ದೇಣಿಗೆ ನೀಡುತ್ತಿದ್ದರು.
ಆದರೀಗ ವಿಜಯಪುರ, ಬಬಲೇಶ್ವರ, ಸಿಂಧಗಿ, ನಾಗರಬೆಟ್ಟ, ಬಸವನಬಾಗೇವಾಡಿ, ಸಿಂಧಗಿಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ತಲಾ 500 ರು ಗಳನ್ನು ಪ್ರವೇಶ ಶುಲ್ಕ ಸಂಗ್ರಹಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಮಂಡಳಿ ಸೂಚಿಸಿರುವುದು ಪ್ರಾಂಶುಪಾಲರು, ಆಡಳಿತ ಮಂಡಳಿ, ವಿದ್ಯಾರ್ಥಿಗಳಿಂದಲೇ ಆಕ್ಷೇಪ ವ್ಯಕ್ತವಾಗಿದೆ.
ಆಕ್ಷೇಪಗಳ ನಡುವೆಯೇ ಎಂ ಬಿ ಪಾಟೀಲ್ ಅವರು ವೃಕ್ಷಥಾನ್ ಗೆ ಅಭಿಯಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸಾಮಾಜಿಕ ಸಂಘಟನೆಗಳೊಂದಿಗೆ ಸಭೆಯನ್ನೂ ನಡೆಸಿದ್ದಾರೆ.

ಪಿಯು ವಿದ್ಯಾರ್ಥಿಗಳಿಂದ 500 ರು ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಪಿಯು ಮಂಡಳಿಯ ವಿಜಯಪುರ ಜಿಲ್ಲಾ ಉಪ ನಿರ್ದೇಶಕರು, ಮಂಡಳಿಯ ನಿರ್ದೇಶಕರೊಂದಿಗೆ ಚರ್ಚಿಸಿದ್ದರು. ಮತ್ತು ಮಂಡಳಿಯ ನಿರ್ದೇಶಕರೂ ಸಹ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಮಾಲೋಚಿಸಿದ್ದರು ಎಂದು ಗೊತ್ತಾಗಿದೆ. ಇದಾದ ನಂತರ ವಿಜಯಪುರ ಜಿಲ್ಲಾ ಉಪ ನಿರ್ದೇಶಕರು 40 ಕಾಲೇಜುಗಳ ಪ್ರಾಂಶುಪಾಲರಿಗೆ ಹಣ ಸಂಗ್ರಹಿಸಲು ಜ್ಞಾಪನ ಪತ್ರ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಜ್ಞಾಪನ ಪತ್ರವು ‘ದಿ ಫೈಲ್’ಗೆ ಲಭ್ಯವಾಗಿದೆ.
57.70 ಲಕ್ಷ ಸಂಗ್ರಹವಾಗಲಿದೆಯೇ?
ಒಟ್ಟು 40 ಕಾಲೇಜುಗಳನ್ನು ಪಟ್ಟಿ ಮಾಡಿರುವ ಜಿಲ್ಲಾ ಉಪ ನಿರ್ದೇಶಕರು ವಿದ್ಯಾರ್ಥಿಗಳಿಂದ ತಲಾ 500 ರು ಶುಲ್ಕ ಸಂಗ್ರಹಿಸಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾರೆ. ಪಟ್ಟಿ ಮಾಡಿರುವ ಈ 40 ಕಾಲೇಜುಗಳಲ್ಲಿ ಅಂದಾಜು 11,541 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ತಲಾ 500 ರು ನಂತೆ ಲೆಕ್ಕ ಹಾಕಿದರೇ 57.70 ಲಕ್ಷ ಸಂಗ್ರಹವಾಗಲಿದೆ.
ಉಪ ನಿರ್ದೇಶಕರು ಮಾಡಿರುವ ಕಟ್ಟಪ್ಪಣೆಯಿಂದಾಗಿ ಆಡಳಿತ ಮಂಡಳಿ ಮತ್ತು ಕಾಲೇಜು ಬೋಧಕರು ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅಲ್ಲದೇ ಆದರೆ ಈ ಪಟ್ಟಿಯಲ್ಲಿರುವ ಬಹುತೇಕ ಕಾಲೇಜುಗಳು, ತಮ್ಮ ಶಿಕ್ಷಕರಿಗೆ ಸಂಬಳ ಕೊಡಲೂ ಪರದಾಡುತ್ತಿವೆ. ಅಲ್ಲದೇ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳಿವೆ. ಅಲ್ಲದೇ ಈ ಶಿಕ್ಷಣ ಸಂಸ್ಥೆಗಳಿಗೆ ಬಡ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಂದ 500 ರು ಸಂಗ್ರಹ ಮಾಡುವುದು ಹೇಗೆ ಎಂದು ಬೋಧಕರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.
ಹಾಗೆಯೇ ಇಂತಹ ವಿದ್ಯಾರ್ಥಿಗಳಿಂದ ಕಾಲೇಜು ಶುಲ್ಕವನ್ನು ಸಂಗ್ರಹಿಸುವುದು ಕಷ್ಟಕರವಾಗಿದೆ. 500 ರು ನೀಡಲು ಪೋಷಕರು ಸಹ ಸಹಮತಿ ವ್ಯಕ್ತಪಡಿಸಿಲ್ಲ. ಹೀಗಿದ್ದರೂ 500 ರು ಶುಲ್ಕ ಸಂಗ್ರಹಿಸಿ ವೃಕ್ಷೋತ್ಥಾನ ಹೆರಿಟೇಜ್ ಮ್ಯಾರಥಾನ್ ಗೆ ಪ್ರತಿಷ್ಠಾನಕ್ಕೆ ಜಮೆ ಮಾಡಬೇಕು ಎಂದು ಹೊರಡಿಸಿರುವ ಸೂಚನೆಯು ಆಡಳಿತ ಮಂಡಳಿಗಳ ಕುತ್ತಿಗೆ ಮೇಲೆ ಕುಳಿತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಪ್ರಥಮ ಹಾಗೂ ದ್ವಿತೀಯ ಪಿಯುಸಿ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ವಿದ್ಯಾರ್ಥಿಗಳಿಂದ ವೃಕ್ಷೋತ್ಥಾನ ಹೆರಿಟೇಜ್ ರನ್ ಗೆ ನೋಂದಣಿ ಮಾಡಲು 500 ರು ಸಂಗ್ರಹಿಸಲು ವಿಜಯಪುರ ಜಿಲ್ಲಾಧಿಕಾರಿಗಳು 2025ರ ಮಾರ್ಚ್ 17ರಂದೇ ನಿರ್ದೇಶನ ನೀಡಿದ್ದರು.
ಸಂಗ್ರಹವಾಗಿರುವ ಪ್ರವೇಶ ಶುಲ್ಕವನ್ನು ವೃಕ್ಷ ಅಭಿಯಾನ ಪ್ರತಿಷ್ಠಾನ ಹೊಂದಿರುವ ಬ್ಯಾಂಕ್ ಖಾತೆಗೆ ( ಸಂಖ್ಯೆ; ಎಸ್‌ಬಿಐ; 3650634652) ಜಮೆ ಮಾಡಲು ಸೂಚಿಸಿತ್ತು. ಈ ಕುರಿತು 2025ರ ಸೆ.24ರಂದು ಸಭೆ ನಡೆಯಲಿದೆ. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು ಎಂದೂ ಪದವಿಪೂರ್ವ ಶಿಕ್ಷಣ ಇಲಾಖೆಯ ವಿಜಯಪುರ ಜಿಲ್ಲಾ ಉಪನಿರ್ದೇಶಕರು 2025ರ ಸೆ.18ರಂದೇ ಜ್ಞಾಪನ ಪತ್ರ ಹೊರಡಿಸಿದ್ದಾರೆ.
ಸರ್ಕಾರಿ ಪಿಯು ವಿದ್ಯಾರ್ಥಿಗಳು ₹ 500 ಪ್ರವೇಶ ಶುಲ್ಕ ಪಾವತಿಸುವ ಮೂಲಕ ಮ್ಯಾರಥಾನ್‌ಗೆ ನೋಂದಾಯಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿದ್ದಾರೆ. ನೋಂದಣಿ ಅವಧಿಯನ್ನು ವಿಸ್ತರಿಸಬಾರದು ಮತ್ತು ಪ್ರಕ್ರಿಯೆಯನ್ನು ನಿಗದಿತ ಸಮಯದೊಳಗೆ ಕಟ್ಟುನಿಟ್ಟಾಗಿ ಪೂರ್ಣಗೊಳಿಸಬೇಕು ಎಂದು ಕಾಲೇಜುಗಳಿಗೆ ಸೂಚನೆ ನೀಡಿರುವುದು ಗೊತ್ತಾಗಿದೆ.
ಕಾಲೇಜುಗಳ ಪಟ್ಟಿ
ವಿಜಯಪುರ ಬಾಲಕರ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು, ಎಸ್ ಎಸ್ ಪದವಿ ಪೂರ್ವ ಕಾಲೇಜು, ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಪದವಿ ಪೂರ್ವ, ವಿ ಭ ದರಬಾರ , ಸಿಕ್ಯಾಬ, ಪಿಡಿಜೆ, ಸಿಕ್ಯಾಭ ಮಹಿಳಾ ಪದವಿ ಪೂರ್ವ, ಅಂಜುಮನ್ ಬಾಲಕರ, ಬಅಂಜುಮನ್ ಬಾಲಕಿಯರ ಪದವಿಪೂರ್ವ, ಎಸ್ ಜೆ ಬಿ ಪದವಿಪೂರ್ವ ಕಾಲೇಜು ಈ ಪಟ್ಟಿಯಲ್ಲಿದೆ.

ಕಾಳಿದಾಸ ಪದವಿಪೂರ್ವ, ಬಸವೇರ್ಶರ ಪದವಿಪೂವ್, ಬಂಜಾರಾ ಪದವಿಪೂರ್ವ, ಬಿಡಿಈ ಪದವಿಪೂರ್ವ, ವಿದ್ಯಾ ನಿಕತೇತನ ಶಾಂತಿ ನಿಕೇತನ, ಚೇತನಾ, ತುಂಗಳ, ಎಕ್ಸಲೆಂಟ್, ಸೇಂಟ್ ಜೋಸೆಫ್, ಲೋಯೋಲಾ, ಶಾಂತಿನಿಕೇತನ, ಬಿ ಎಂ ಪಾಟೀಲ, ಗ್ಲೋಬಲ್ ವಿಜ್ಞಾನ ಪದವಿ ಪೂರ್ವ, ರೂಪಾದೇವಿ, ಆರ್‍ಕೆಎಂ, ಶಾಹೀನ, ಚೈತನ್ಯ ಪದವಿಪೂವ್, ಎ ಬಿ ಜತ್ತಿ, ಎಸ್ ಎಸ್ ಪದವಿಪೂರ್ವ, ಆಕ್ಸ್‌ಫರ್ಡ್ ವಿಜ್ಞಾನ ಪದವಿ ಪೂರ್ವ
ಎಕ್ಸ್‌ಪರ್ಟ್ ಪದವಿಪೂರ್ವ, ಅಭ್ಯುದಯ ವಿಜ್ಞಾನ ಪದವಿಪೂರ್ವ, ಎಲೈಟ್ ಪದವಿಇಪೂರ್ವ, ಗುರುಕುಲ ಪದವಿ ಪೂರ್ವ, ಬಸವೇಶ್ವರ ಸರ್ಕಾರಿ ಪದವಿಪೂರ್ವ ರೇಡಿ ರೇಡಿಯಂಟ್ ಪದವಿಪೂರ್ವ, ಬೆನಕಟ್ಟಿ ಪದವಿಪೂರ್ವ ಕಾಲೇಜು ಈ ಪಟ್ಟಿಯಲ್ಲಿದೆ.
500 ರು ಶುಲ್ಕ ಸಂಗ್ರಹ ಮಾಡಲು ಹೊರಡಿಸಿರುವ ಸೂಚನೆಯ ಕುರಿತು ‘ದಿ ಫೈಲ್’, 40 ಕಾಲೇಜುಗಳ ಪೈಕಿ ಬಹುತೇಕ ಕಾಲೇಜುಗಳ ಪ್ರಾಂಶುಪಾಲರನ್ನು ಸಂಪರ್ಕಿಸಿತು. ಇದಕ್ಕೆ ಪ್ರತಿಕ್ರಿಯಿಸಿರುವ ಬಹುತೇಕ ಪ್ರಾಂಶುಪಾಲರು, ಪಿಯು ಮಂಡಳಿ ಉಪ ನಿರ್ದೇಶಕರು ಹೊರಡಿಸಿರುವ ಸೂಚನೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೇ ತಮ್ಮ ಶಿಕ್ಷಣ ಸಂಸ್ಥೆಯು ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಳಿಗೆ ಸೇರಿದೆ. ಬಡ ವಿದ್ಯಾರ್ಥಿಗಳಿಂದ 500 ರು ಸಂಗ್ರಹಿಸುವುದು ಕಷ್ಟಕರ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಬೆರಳಣಿಕೆಯಷ್ಟು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಈಗಾಗಲೇ ಸಂಗ್ರಹಿಸಿವೆ. ಇನ್ನು ಹಲವು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ತಮ್ಮ ಬೊಕ್ಕಸದಿಂದಲೇ ಈ ಹಣವನ್ನು ಫೌಂಡೇಷನ್‌ಗೆ ಜಮೆ ಮಾಡಲು ನಿರ್ಧರಿಸಿವೆ ಎಂದು ತಿಳಿಸಿದರು.
ವಿಜಯಪುರದ ಸರ್ಕಾರಿ ಕಾಲೇಜುಗಳಲ್ಲಿ ಅಂದಾಜು 1,387 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಲ್ಲಿನ ಬಹುತೇಕ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲರಾಗಿರುವ ಕಾರಣ ಈ ವಿದ್ಯಾರ್ಥಿಗಳಿಂದ 500 ರು ಸಂಗ್ರಹಿಸದಿರಲು ನಿರ್ಧರಿಸಲಾಗಿದೆ ಎಂದು ಅಲ್ಲಿನ ಪ್ರಾಂಶುಪಾಲರು ‘ದಿ ಫೈಲ್’ಗೆ ತಿಳಿಸಿದರು.
ಎಷ್ಟು ಕೊಡುತ್ತಾರೋ ಅಷ್ಟು ಸಂಗ್ರಹ
ವಿಜಯಪುರದ ಅಂಜುಮನ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಖಾಜಿ ಅವರು ‘ ನಮ್ಮದು ಅಲ್ಪಸಂಖ್ಯಾತರ ಕಾಲೇಜು. ನಮ್ಮಲ್ಲಿ 200 ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಮಧ್ಯಮ ವರ್ಗ ವಿದ್ಯಾರ್ಥಿಗಳೇ ಹೆಚ್ಚಿದ್ದಾರೆ. ನಾವು ಡೊನೇಷನ್ ತೆಗೆದುಕೊಳ್ಳುವುದಿಲ್ಲ. 500 ರು ಸಂಗ್ರಹ ಮಾಡುವುದು ಕಷ್ಟಕರ. ಅವರು ಎಷ್ಟು ಕೊಡುತ್ತಾರೋ ಅಷ್ಟು ತೆಗೆದುಕೊಳ್ಳುತ್ತೇವೆ ಎಂದು ‘ದಿ ಫೈಲ್’ ಪ್ರತಿನಿಧಿಗೆ ಮಾಹಿತಿ ನೀಡಿದರು.
ಪೋಷಕರ ಸಮ್ಮತಿ ಇಲ್ಲ, ಹುಡುಗರು ಬಡವರಿದ್ದಾರೆ
ವಿಜಯಪುರದ ಎಸ್‌ಬಿಜೆ ಕಾಲೇಜಿನ ಪ್ರಾಂಶುಪಾಲರಾದ ಜಾಲವಾದಿ ಅವರು ‘ವಿದ್ಯಾರ್ಥಿಗಳ ಪೋಷಕರು 500 ರು ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರನ್ನು ಮನವೊಲಿಸಬೇಕು,’ ಎಂದು ಪ್ರತಿಕ್ರಿಯಿಸಿದರು. ಅದೇ ರೀತಿ ವಿಜಯಪುರ ರಾಜಾಜಿನಗರದ ಬಸವೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಶಾಂಕ್ ಕುಲಕರ್ಣಿ ಅವರು ‘ ನಾವೇನು ಕಲೆಕ್ಟ್ ಮಾಡಿಲ್ಲ. ಹುಡುಗರು ಪೂರ್ ಇದ್ದಾರೆ. 500 ರು ಹೆವಿ ಇದೆ. ವಿದ್ಯಾರ್ಥಿಗಳು ತಮ್ಮ ಶುಲ್ಕ ಕಟ್ಟಲು ಕಷ್ಟವಿದೆ. ನಾವು ಮ್ಯಾರಥಾನ್‌ದಲ್ಲಿ ಭಾಗವಹಿಸ್ತೀವಿ,’ ಎಂದು ಹೇಳಿದರು.
ಶುಲ್ಕ ಕೊಡ್ತಾ ಇಲ್ಲ, 500 ರು ಎಲ್ಲಿಂದ ತರಬೇಕು?
ವಿಜಯಪುರದ ತುಂಗಳ ವಿಜ್ಞಾನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಯತೀರ್ಥ ಕುಲಕರ್ಣಿ ಅವರು ‘ 500 ರು ಸಂಗ್ರಹ ಮಾಡ್ತಾ ಇದ್ದೀವಿ. ಬುಧವಾರದ ಒಳಗೆ ಕೊಡಬೇಕು. ಬಹುತೇಕ ವಿದ್ಯಾರ್ಥಿಗಳು ಹಣ ಕೊಡ್ತಿಲ್ಲ. ಮಧ್ಯವಾರ್ಷಿಕ ಪರೀಕ್ಷೆ ಬೇರೆ ಇದೆ. 500 ರು ಕೊಡಲು ಕಷ್ಟವಾಗ್ತಿದೆ,’ ಎಂದು ಪ್ರತಿಕ್ರಿಯಿಸಿದರು. ಹಾಗೆಯೇ ವಿಜಯಪುರದ ರೂಪಾದೇವಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಗನ್ನಾಥಸ್ವಾಮಿ ಅವರು’ ನಮ್ಮಲ್ಲಿ ಅವಕಾಶವಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಹೇಳಿದ್ದೇವೆ. 500 ರು ಎಲ್ಲಿಂದ ತರಬೇಕು? ಎಂದು ಪ್ರಶ್ನಿಸಿದರು.
2024ರಲ್ಲಿಯೂ ವೃಕ್ಷಥಾನ್ ಹೆರಿಟೇಜ್ ರನ್ ಆರಂಭವಾಗಿತ್ತು. ಸಚಿವ ಎಂ ಬಿ ಪಾಟೀಲ ಅರು 10 ಲಕ್ಷ ದೇಣಿಗೆ ನೀಡಿದ್ದರು. ಕೂಡಗಿ ಎನ್‌ಟಿಪಿಸಿ 15 ಲಕ್ಷ ದೇಣಿಗೆ ನೀಡಿ ಮುಖ್ಯ ಪ್ರಾಯೋಜಕ ಸಂಸ್ಥೆಯಾಗಿತ್ತು. ಶಾಸನ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಸ್ಥೆ 10 ಲಕ್ಷ, ಮಂಗಲಂ ಪೈಪ್ಸ್ 1.50 ಲಕ್ಷ, ಜಿಓಸಿಸಿ ಬ್ಯಾಂಕ್ 1 ಲಕ್ಷ, ಶ್ರಿ ಸಾಯಿ ಬಸವ ಶುಗರ್ಸ್ 1 ಲಕ್ಷ, ರೋಟರಿ ಕ್ಲಬ್ ವಿಜಯಪುರ ಉತ್ತರ 50 ಸಾವಿರ ದೇಣಿಗೆ ನೀಡಿತ್ತು.
ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ವಿಜಯಪುರದಲ್ಲಿ ವಾರ್ಷಿಕ ವೃಕ್ಷಥಾನ್ ಹೆರಿಟೇಜ್ ರನ್ ಮ್ಯಾರಥಾನ್ ನಡೆಯುತ್ತಿದೆ. ಪರಿಸರದ ಬಗ್ಗೆ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯಾದ ವೃಕ್ಷಭ್ಯಾನ್ ಫೌಂಡೇಶನ್ ಈ ಕಾರ್ಯಕ್ರಮನ್ನು ಆಯೋಜಿಸುತ್ತದೆ. ಈ ಪ್ರತಿಷ್ಠಾನದ ನೇತೃತ್ವವನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ವಹಿಸಿದ್ದಾರಲ್ಲದೇ ಬಿ.ಆರ್. ಪಾಟೀಲ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಸದಸ್ಯರಾಗಿದ್ದಾರೆ.