ಕುರುಬ ಸಮುದಾಯದ ವಿರುದ್ಧ ಜಾತಿ ನಿಂದನೆ ಆರೋಪ; ಛಲವಾದಿ ನಾರಾಯಣಸ್ವಾಮಿ ವಿರುದ್ಧ ಎಫ್‌ಐಆರ್

ಬೆಂಗಳೂರು; ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರ್ಪಡೆ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಮುಗಿಬಿದ್ದಿದ್ದ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಇದೀಗ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‍‌ ದಾಖಲಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿರೋಧಿಸುವ ಭರದಲ್ಲಿ ಕುರುಬ ಸಮಾಜಕ್ಕೆ ಅವಮಾನ ಮಾಡಿದ್ದಾರೆ ಮತ್ತು ಈ ಮೂಲಕ ದೌರ್ಜನ್ಯ ಎಸಗಿದ್ದಾರೆ ಎಂದು ಸಿದ್ದಣ್ಣ ತೇಜಿ ಎಂಬುವರು ದೂರು ನೀಡಿದ್ದರು. ಈ ದೂರನ್ನಾಧರಿಸಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಇದೀಗ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

 

ಈ ಎಫ್‌ಐಆರ್‍‌ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕರಾಗಿದ್ದ ಅವಧಿಯಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಛಲವಾದಿ ನಾರಾಯಣ ಸ್ವಾಮಿ ಅವರು ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರು ನೀಡಿ 2 ವರ್ಷದೊಳಗೇ ಜಾತಿ ನಿಂದನೆ ಅಡಿಯಲ್ಲಿಯೇ ಛಲವಾದಿ ನಾರಾಯಣಸ್ವಾಮಿ ಅವರ ವಿರುದ್ಧವೂ ಎಫ್‌ಐಆರ್‍‌ ದಾಖಲಾಗಿರುವುದು ಮುನ್ನೆಲೆಗೆ ಬಂದಿದೆ.

 

 

 

ಎಫ್‌ಐಆರ್‍‌ನಲ್ಲೇನಿದೆ?

 

2025ರ ಸೆ.15 ಮತ್ತು 16ರಂದು ಛಲವಾದಿ ನಾರಾಯಣಸ್ವಾಮಿ ಅವರು ವಿಧಾನಸೌಧದ ಕಚೇರಿಯಲ್ಲಿ ಹಾಗೂ ಮೈಸೂರು ಶಾಸಕ ಶ್ರೀ ವತ್ಸ ಅವರು ಮೈಸೂರು ಹಾಗೂ ಬೆಂಗಳೂರಿನಲ್ಲಿ ತಮ್ಮ ಹೇಳಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕುರುಬರ ಎಸ್‌ ಟಿ ಮೀಸಲಾತಿ ವಿಚಾರದಲ್ಲಿ ವಿರೋಧಿಸುತ್ತಿದ್ದಾರೆ.

 

 

ಅಲ್ಲದೇ ರಾಜ್ಯದ ಮುಖ್ಯಮಂತ್ರಿಯನ್ನು ವಿರೋಧಿಸುವ ಭರದಲ್ಲಿ ಇಡೀ ರಾಜ್ಯದಲ್ಲಿ ಇರುವ ಕುರುಬ ಸಮಾಜಕ್ಕೆ ಅವಮಾನ ಹಾಗೂ ದೌರ್ಜನ್ಯ ಮಾಡಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳ ಮೂಲಕ ಪರಿಶಿಷ್ಟ ಪಂಗಡದವರು ಹಾಘೂ ವಾಲ್ಮೀಕಿ ಸಮಾಜದವರು ಕುರುಬ ಸಮಾಜದ ಮೇಲೆ ದಂಗೆ ಏಳಬೇಕು ಎನ್ನುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.

 

 

ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡಲಿದೆ. ಒಂದು ಸಮಾಜದಿಂದ ಮತ್ತೊಂದು ಸಮಾಜವನ್ನು ಪ್ರಚೋದಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡಿದ್ದಾರೆ. ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಅಶಾಂತಿ, ಜೀವಹಾನಿ ಸಾರ್ವಜನಿಕ ಕಟ್ಟಡ ಆಸ್ತಿಪಾಸ್ತಿ ಆಸ್ತಿ ಪಾಸ್ತಿ ಹಾನಿಯಾಗಿ ಜನಜೀವನ ಅಸ್ತವ್ಯಸ್ಥವಾಗಲಿದೆ ಎಂದು ಎಫ್‌ಐಆರ್‍‌ ನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಸುದ್ದಿಗೋಷ್ಠಿಯಲ್ಲಿ ಛಲವಾದಿ ಹೇಳಿದ್ದೇನು?

 

ಜಾತ್ಯತೀತ ಎನ್ನುವ ಸಿದ್ದರಾಮಯ್ಯನವರಿಂದ ತನ್ನ ಜಾತಿಗಾಗಿ ಹೋರಾಟ ನಡೆಯುತ್ತಿದೆ. ಪರಿಶಿಷ್ಟ ಜಾತಿ- ವರ್ಗಗಳ ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಬಿಜೆಪಿ ಪಕ್ಷವೂ ಪತ್ರಿಕಾ ಹೇಳಿಕೆಯನ್ನೂ ಬಿಡುಗಡೆ ಮಾಡಿತ್ತು.

 

ದಿವಂಗತ ಶ್ರೀನಿವಾಸ ಪ್ರಸಾದ್ ಅವರು ಇದ್ದಾಗ ಈ ರೀತಿ ಕೆಲವು ಜಾತಿಗಳನ್ನು ಮೀಸಲಾತಿ ಪಡೆಯುವ ಜಾತಿಗೆ ಸೇರಿಸಲಾಗಿತ್ತು. ಆಗ ಅವರು, ಯಾರು ಹೆಲಿಕಾಪ್ಟರ್ ಕೊಳ್ಳಲು ಸಾಧ್ಯವೋ, ಯಾರು ಬೆಂಝ್ ಗಾಡಿ ಕೊಳ್ಳಲು ಸಾಧ್ಯವೋ, ಅಂಥ ಸಮುದಾಯಗಳನ್ನು ನೀವು ಮತಬ್ಯಾಂಕ್ ಕಾರಣಕ್ಕಾಗಿ ಮೀಸಲಾತಿಗೆ ಸೇರಿಸುವುದು ಎಷ್ಟು ಸರಿ ಇದೆ? ಈಗಲೂ ಕೂಡ ಪರಿಶಿಷ್ಟ ಜಾತಿ- ವರ್ಗಗಳ ಅನೇಕ ಸಮುದಾಯಗಳು ಮೀಸಲಾತಿ ಎಂಥದ್ದು ಎಂಬುದನ್ನು ಕಂಡಿಲ್ಲ. ಅಂಥವರಿಗೆ ಮೀಸಲಾತಿ ಕೊಡುವ ಪರಿಸ್ಥಿತಿಯಲ್ಲಿ ಈ ಕಾಂಗ್ರೆಸ್ ಸರಕಾರ ಇಲ್ಲ ಎಂದಿದ್ದರು ಎಂದು ನೆನಪಿಸಿದ್ದರು.

 

ಪರಿಶಿಷ್ಟ ಜಾತಿಗಳನ್ನು ಈಗ 3 ಗುಂಪುಗಳಾಗಿ ವಿಂಗಡಿಸಿದ್ದಾರೆ. ಇದಕ್ಕೆ ಕೋರ್ಟಿನ ಆದೇಶವೂ ಇತ್ತು. ಸಮಾನರನ್ನು ಗುಂಪುಗಳನ್ನಾಗಿ ಮಾಡಿ, ಅಸಮಾನರಿಗೆ ವಿಶೇಷ ಆದ್ಯತೆ, ಗಮನ ಕೊಟ್ಟು ಮೀಸಲಾತಿ ಕೊಡಲು ಸುಪ್ರೀಂ ಕೋರ್ಟ್ ಹೇಳಿದೆ. ಇವರು, ಯಾರು ಅತ್ಯಂತ ದುರ್ಬಲರಿದ್ದಾರೋ, ನಾಯಕತ್ವ ಇಲ್ಲದ, ಕೇಳುವವರೇ ಇಲ್ಲದ 59 ಅಲೆಮಾರಿ ಸಮುದಾಯಗಳನ್ನು ನಿರ್ಲಕ್ಷಿಸಿ ಅವರಿಗೆ ಕೊಟ್ಟಿದ್ದ ಮೀಸಲಾತಿಯನ್ನು ಕಿತ್ತುಕೊಂಡು ಬೇರೆಯವರಿಗೆ ಕೊಡುವ ಕೆಲಸ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದರು.

 

ಪರಿಶಿಷ್ಟ ಜಾತಿಗಳಿಗೆ ನ್ಯಾಯ ನೀಡಲು ಕಾಂಗ್ರೆಸ್ ಸರಕಾರದಿಂದ ಸಾಧ್ಯವಾಗಿಲ್ಲ; ಅವರನ್ನು ಒಕ್ಕಲೆಬ್ಬಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದ 101 ಸಮುದಾಯಗಳೂ ಸಂತುಷ್ಟವಾಗಿಲ್ಲ. ಎಲ್ಲರನ್ನೂ ಬೀದಿಯಲ್ಲಿ ನಿಲ್ಲಿಸಿದ್ದಾರೆ ಎಂದು ಟೀಕಿಸಿದರು. ಇಂಥ ದುರಾಡಳಿತ ಮಾಡುವ ಕಾಂಗ್ರೆಸ್ ಪಕ್ಷದ ಸರಕಾರವು ಈಗ ಮತ್ತೊಂದು ಅವಾಂತರಕ್ಕೆ ಕೈ ಹಾಕಿದೆ ಎಂದಿದ್ದರು.

 

ಎಸ್‍ಟಿ ಮೀಸಲಾತಿ ಕೇವಲ ಶೇ 3 ಇತ್ತು. ಎಸ್‍ಸಿ ಮೀಸಲಾತಿ 15 ಇತ್ತು. 15 ಅನ್ನು 17, 3 ಅನ್ನು 7 ಮಾಡಿದ್ದು ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರಕಾರ. ಇದನ್ನು ವಿರೋಧಿಸಿದ್ದ ಕಾಂಗ್ರೆಸ್ ಪಕ್ಷ ಈಗ ಆ 7 ಶೇಕಡಾಕ್ಕೆ ಪರಿಶಿಷ್ಟ ವರ್ಗಗಳಿಗೆ ಕುರುಬ ಸಮುದಾಯದ ಅನೇಕ ಜಾತಿಗಳನ್ನು ತಂದು ಸೇರಿಸುವ ಕೆಲಸ ಮಾಡಲು ಸಿದ್ದರಾಮಯ್ಯನವರು ಹೊರಟಿದ್ದಾರೆ ಎಂದು ಆರೋಪಿಸಿದ್ದರು.

 

ಮೌನವಾಗಿ ಯಾರ್ಯಾರನ್ನು ಎಲ್ಲಿ ಸೇರಿಸಬೇಕೆಂದು ಹೊರಟಿದ್ದಾರೆ. ಆ ಜಾತಿಯಲ್ಲಿ ಬಡವರಿದ್ದರೆ ಅವರಿಗೆ ಅನುಕೂಲ ಮಾಡಿಕೊಟ್ಟರೆ ತಪ್ಪಿಲ್ಲ; ಇವರು ಪರಿಶಿಷ್ಟ ಜಾತಿಗಳಿಗೆ ಅವರನ್ನು ತಂದು ಕೂರಿಸಿದರೆ, ಮತ್ತೆ ಪರಿಶಿಷ್ಟರಿಗೆ ಅನ್ಯಾಯ ಆಗಲಿದೆ ಎಂದು ತಿಳಿಸಿದರು. ಇದರಿಂದ ರಂಪ, ಬೀದಿ ಹೋರಾಟ ಆರಂಭವಾಗುತ್ತದೆ ಎಂದು ಎಚ್ಚರಿಸಿದರು. ನೀವು ಸೇರಿಸುವುದಿದ್ದರೆ ಆ ಪ್ರವರ್ಗಕ್ಕೆ ಸಿಗುವ ಮೀಸಲಾತಿ ಜೊತೆ ಸೇರಿಸಬೇಕು; ಪರಿಶಿಷ್ಟರ ಮೀಸಲಾತಿ ಕಬಳಿಸುವ ಕೆಲಸ ಮಾಡಬಾರದು ಎಂದು ಹೇಳಿದ್ದರು.

 

ಸಿದ್ದರಾಮಯ್ಯ ವಿರುದ್ಧವೂ ಜಾತಿ ನಿಂದನೆ ದೂರು ನೀಡಿದ್ದ ಛಲವಾದಿ

 

ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯ ಅವರ ವಿರುದ್ಧವೂ ವಿಧಾನಪರಿಷತ್‌ ಬಿಜೆಪಿ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ದೂರು ನೀಡಿದ್ದರು. ಬೆಂಗಳೂರು ನಗರದ ಹೈಗ್ರೌಂಡ್ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ‘ಸದಾ ನೀವು ಅಸ್ಪೃಶ್ಯರು ,ಗುಲಾಮರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು,’ ಎಂದು ದೂರಿನಲ್ಲಿ ಆಗ್ರಹಿಸಿದ್ದರು.

 

ಸಿದ್ದರಾಮಯ್ಯ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದ ಚಿತ್ರ

‘ನನ್ನ ವಿರುದ್ಧ ಸಿದ್ದರಾಮಯ್ಯನವರು ಜಾತಿ ನಿಂದನೆ ಮಾಡಿದ್ದಾರೆ. ಸದಾ ನೀವು ಅಸ್ಪೃಶ್ಯರು,ಗುಲಾಮರು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು. ಹೀಗಾಗಿ ಎಸ್ ಸಿ ಎಸ್ ಟಿ ಕಾಯ್ದೆ ಅನ್ವಯ ಜಾತಿನಿಂದನೆ ದೂರು ಸಲ್ಲಿಸಿದ್ದೇನೆ. ಕೂಡಲೇ ಎಫ್ ಐ ಆರ್ ಮಾಡಬೇಕು,’ ಎಂದು ಒತ್ತಾಯಿಸಿದ್ದರು.

 

ಸಿದ್ದರಾಮಯ್ಯ ಅವರನ್ನು ಕೂಡಲೇ ಬಂಧಿಸಬೇಕು. ಸಿದ್ದರಾಮಯ್ಯ ಅವರನ್ನು ಬಂಧಿಸದಿದ್ರೆ ನಾನು ಪ್ರತಿಭಟನೆ ಮಾಡ್ತೀನಿ. ಕೂಡಲೇ ಅಟ್ರಾಸಿಟಿ ಕೇಸ್ ಅಡಿ ದೂರು ಹಾಕಬೇಕು ಎಂದು ಆಗ್ರಹಿಸಿದ್ದರು.

 

‘ನಾನು ಆದಿ ಕರ್ನಾಟಕ ಜಾತಿಗೆ ಸೇರಿದವನಾಗಿದ್ದು, ಕೆಲವು ದಶಕಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುತ್ತೇನೆ ಹಾಗೂ ನಮ್ಮ ಜನಾಂಗದ ಎಳಿಗೆಗಾಗಿ ಶ್ರಮಿಸುತ್ತಿರುತ್ತೇನೆ. ಸದ್ಯ ವಿಧಾನ ಪರಿಷತ್‌ ಸದಸ್ಯನಾಗಿ ಜವಾಬ್ದಾರಿ ನಿರ್ವಹಿಸುತ್ತಿರುತ್ತೇನೆ. ನನ್ನ ರಾಜಕೀಯ ಒಡನಾಟದಿಂದಾಗಿ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರು ನನ್ನ ಜಾತಿ ಮತ್ತು ನನ್ನ ಹಿನ್ನೆಲೆಯ ಬಗ್ಗೆ ಸಂಪೂರ್ಣವಾದ ಅರಿವಿರುತ್ತದೆ.,’ ಎಂದು ವಿವರಿಸಿದ್ದರು.

 

ಸಿದ್ದರಾಮಯ್ಯನವರು ಅವರ ಟ್ವಿಟ್ಟರ್‌ ಖಾತೆಯಲ್ಲಿ (ದಿನಾಂಕ 07.06.2022) ಕೆಲವು ಸರಣಿ ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು. ಕೆಲವು ಪೋಸ್ಟ್‌ಗಳಲ್ಲಿ ಅಪರಾಧಿಕ ಪದಗಳನ್ನು ಉಪಯೋಗಿಸಿ ನನ್ನನ್ನು ಉದ್ದೇಶಿಸಿ ನನ್ನ ಜಾತಿ ನಿಂದನೆ ಮಾಡಿ ಹೀಯಾಳಿಸಿದ್ದಾರೆ. ಈ ಟ್ವೀಟ್‌ನಲ್ಲಿ ನೀವು ಸದಾ ಅಸ್ಪೃಶ್ಯ ಎಂದು ಹಾಗೂ ನಿಮ್ಮ ಗುಲಾಮ ಮನಸ್ಥಿತಿಗೆ ನನ್ನ ಧಿಕ್ಕಾರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕವಾಗಿ ಪೋಸ್ಟ್ ಮಾಡುವ ಮೂಲಕ ನನ್ನನ್ನು ಜಾತಿ ನಿಂದನೆ ಮಾಡಿ ಹೀಯಾಳಿಸಿದ್ದಾರೆ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.

 

ಅದೇ ರೀತಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ವಿರುದ್ಧವೂ ಛಲವಾದಿ ನಾರಾಯಣಸ್ವಾಮಿ ಅವರು ಅಸಾಂವಿಧಾನಿಕ ಪದ ಬಳಕೆ ಮಾಡಿದ್ದರು ಎಂಬ ಆಪಾದನೆ ಕೇಳಿ ಬಂದಿತ್ತು. ಇದರ ವಿರುದ್ಧವೂ ದಸಂಸ ಪ್ರತಿಭಟನೆ ನಡೆಸಿತ್ತು.

Your generous support will help us remain independent and work without fear.

Latest News

Related Posts