ವೆಬ್‌ ಪೋರ್ಟಲ್‌ಗೆ 9.45 ಕೋಟಿ ಖರ್ಚು ಮಾಡಿದ ಕಟ್ಟಡ ಕಾರ್ಮಿಕರ ಮಂಡಳಿ, ಸಾಫ್ಟ್‌ವೇರ್‌ ಕಂಪನಿಗೆ ಭರ್ಜರಿ ಲಾಭ!

scam at Karnataka Building & Other Construction Workers Welfare Board

ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ʻಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿʼ ಯು ʻಸಾಮಾನ್ಯ ದತ್ತಾಂಶ ನಿರ್ವಹಣಾ ವ್ಯವಸ್ಥೆಯʼ (ಸಿಡಿಎಂಎಸ್‌) ಅಭಿವೃದ್ಧಿಗೆ 9.45 ಕೋಟಿ ರು.ಗಳನ್ನು ಅನಗತ್ಯವಾಗಿ ಖರ್ಚು ಮಾಡಿ, ಖಾಸಗಿ ಸಾಫ್ಟ್‌ವೇರ್‌ ಕಂಪನಿಯೊಂದಕ್ಕೆ ಲಾಭ ಮಾಡಿಕೊಟ್ಟಿರುವುದು ಬೆಳಕಿಗೆ ಬಂದಿದೆ.

 

ಮೆಸರ್ಸ್‌ ಗ್ಲೋಬಲ್‌ ಐಟಿಇಎಸ್‌ ಪ್ರೈವೇಟ್‌ ಲಿಮಿಟೆಡ್‌ ಈ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಅಮೃತ್‌ ಅನಿಲ್‌ ದೇಸಾಯಿ, ಎಂ. ರಾಘವೇಂದ್ರ ರಾವ್‌ ಗೋಪಿನಾಥ್‌ ಮತ್ತು ಸುಹಾಸ್‌ ಗೋಪಿನಾಥ್‌ ಎಂಬುವರು ಈ ಕಂಪನಿಯ ನಿರ್ದೇಶಕರಾಗಿದ್ದಾರೆ.

 

ಈ ಕಂಪನಿಯು 8.21 ಕೋಟಿ ವೆಚ್ಚದ ಯೋಜನಾ ಪ್ರಸ್ತಾಪವನ್ನು ಸಲ್ಲಿಸಿದ ಮೂರೇ ದಿನಗಳಲ್ಲಿ ಮಂಡಳಿಯು ಅದನ್ನು ಅನುಮೋದಿಸಿತ್ತು. ಮುಕ್ತ ಬಿಡ್ಡಿಂಗ್‌ಗಾಗಿ ಕೆಟಿಪಿಪಿ ಕಾಯ್ದೆಯ 4(ಜಿ) ಅಡಿಯಲ್ಲಿ ವಿನಾಯಿತಿಯನ್ನು ಕೋರಿ, ಮಂಡಳಿಯು 8.01 ಕೋಟಿ ರು.ಗಳ ಕೆಲಸವನ್ನು ಈ ಸಂಸ್ಥೆಗೆ ವಹಿಸಿತ್ತು.

 

scam at Karnataka Building & Other Construction Workers Welfare Board

 

ಮಹಾಲೇಖಪಾಲರು (ಸಿಎಜಿ) ʻಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿʼಯ ಲೆಕ್ಕಪರಿಶೋಧನೆ ನಡೆಸಿದ ವೇಳೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಸಿಎಜಿ ವರದಿಯನ್ನು ಇತ್ತೀಚೆಗೆ ನಡೆದ ವಿಧಾನಸಭೆಯ ಅಧಿವೇಶನದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.

 

ʻಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿʼಯು ಕಾರ್ಮಿಕ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. ಬಿಜೆಪಿ ಸರ್ಕಾರದಲ್ಲಿ ಶಿವರಾಮ್‌ ಹೆಬ್ಬಾರ್‌ ಕಾರ್ಮಿಕ ಸಚಿವರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈ ಕಂಪನಿಗೆ ಹಣವನ್ನು ಪಾವತಿಸಲಾಗಿದ್ದು, ಈಗಿನ ಸರ್ಕಾರದಲ್ಲಿ ಸಂತೋಷ್‌ ಲಾಡ್‌ ಕಾರ್ಮಿಕ ಸಚಿವರಾಗಿದ್ದಾರೆ.

 

ಏನಿದು ಪ್ರಕರಣ?

 

ಖಾಸಗಿ ಲಿಮಿಟೆಡ್ ಕಂಪನಿಯಾದ ಮೆಸರ್ಸ್ ಗ್ಲೋಬಲ್ ಐಟಿಇಎಸ್ ಪ್ರೈವೇಟ್ ಲಿಮಿಟೆಡ್, ಕಾರ್ಮಿಕರಿಗಾಗಿ ʻʻಸಾಮಾನ್ಯ ದತ್ತಸಂಚಯ ನಿರ್ವಹಣಾ ವ್ಯವಸ್ಥೆʼʼ ಎಂದು ಕರೆಯಲ್ಪಡುವ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ದತ್ತಸಂಚಯವನ್ನು ನಿರ್ಮಿಸಲು ಮಂಡಳಿಗೆ ಪ್ರಸ್ತಾವನೆಯನ್ನು  2020ರ ನವೆಂಬರ್‌ನಲ್ಲಿ ಸಲ್ಲಿಸಿತ್ತು. ಇದರಲ್ಲಿ ವೆಬ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿ, ನೋಂದಣಿಯಿಂದ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುವ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ಮಾಸಿಕ ವರದಿಗಳನ್ನು ತಯಾರಿಸುವುದು ಮುಂತಾದವು ಸೇರಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ.

 

ಈ ಯೋಜನೆಯು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಬರುವ ಮೂರು ಮಂಡಳಿಗಳ ಯೋಜನೆಗಳು ಮತ್ತು ಕಾರ್ಯಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿತ್ತು. 8.21 ಕೋಟಿ ರು. ವೆಚ್ಚದ ಯೋಜನಾ ಪ್ರಸ್ತಾಪವನ್ನು ಸಲ್ಲಿಸಿದ ಮೂರೇ ದಿನಗಳಲ್ಲಿ ಮಂಡಳಿಯು ಅನುಮೋದಿಸಿತ್ತು. ಮುಕ್ತ ಬಿಡ್ಡಿಂಗ್ ಗಾಗಿ ಕೆಟಿಪಿಪಿ ಕಾಯ್ದೆಯ 4 (ಜಿ) ಅಡಿಯಲ್ಲಿ ವಿನಾಯಿತಿ ಕೋರಿ ಮಂಡಳಿಯು 2021ರ ಜನವರಿಯಲ್ಲಿ 8.01 ಕೋಟಿ ರು.ಗಳ ಕೆಲಸವನ್ನು ಏಜೆನ್ಸಿಗೆ ವಹಿಸಿದೆ ಎಂದು ವರದಿಯು ವಿವರಿಸಿದೆ.

 

ಈ ಯೋಜನೆಯನ್ನು ಒಂಬತ್ತು ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು ಮತ್ತು 12 ತಿಂಗಳ ವಾರಂಟಿ ಅವಧಿಯನ್ನು ಕೂಡ ಪೂರೈಸಬೇಕಾಗಿತ್ತು. ಆದರೆ ಸುಮಾರು 26 ತಿಂಗಳ ವಿಳಂಬದ ನಂತರ ಮಂಡಳಿಗೆ ಈ ಕಂಪನಿಯು ಪೋರ್ಟಲ್ ಅನ್ನು ಒದಗಿಸಿತು. 2023ರ ಅಕ್ಟೋಬರ್‌ನಲ್ಲಿ  ಈ ಪೋರ್ಟಲ್‌ ಆರಂಭಗೊಂಡಿತು. ಆರಂಭಗೊಂಡ ಎರಡೇ ತಿಂಗಳಿನಲ್ಲಿ ಅಂದರೆ 2023ರ ಡಿಸೆಂಬರ್‌ನಲ್ಲಿ ಮಂಡಳಿಯು ಜಿಎಸ್‌ಟಿ ಹೊರತುಪಡಿಸಿ 6.41 ಕೋಟಿ ರು. ಗಳನ್ನು ಈ ಕಂಪನಿಗೆ ಪಾವತಿಸಿತು ಎಂದು ಸಿಎಜಿ ವರದಿಯು ಹೇಳಿದೆ.

 

scam at Karnataka Building & Other Construction Workers Welfare Board

 

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿಐ) ಸಾಫ್ಟ್‌ ವೇರ್ ಅಳವಡಿಸಿಕೊಳ್ಳಲು ಅನುಷ್ಠಾನ ಏಜೆನ್ಸಿಗಳನ್ನು ಆಯ್ಕೆ ಮಾಡಲು ಮಾರ್ಗದರ್ಶನ ಟಿಪ್ಪಣಿಗಳನ್ನು ಹೊರಡಿಸಿದೆ. ʻಸ್ವಿಸ್ ಚಾಲೆಂಜ್ ವ್ಯವಸ್ಥೆʼ ಮೂಲಕ ಸರ್ಕಾರಿ ಸಂಸ್ಥೆ ಅನಪೇಕ್ಷಿತ ಪ್ರಸ್ತಾಪವನ್ನು ಸ್ವೀಕರಿಸಿದಾಗ ಅನುಸರಿಸಬೇಕಾದ ಷರತ್ತುಗಳನ್ನು ಮಾರ್ಗಸೂಚಿಗಳನ್ನು ಕೂಡ ಸೂಚಿಸಿದೆ.

 

ಆದರೆ ʻಗ್ಲೋಬಲ್ ಐಟಿಇಎಸ್ ಪ್ರೈವೇಟ್ ಲಿಮಿಟೆಡ್ʼ ಸಲ್ಲಿಸಿದ ಪ್ರಸ್ತಾವನೆಯನ್ನು ಎಂಇಐಟಿಐ ಮಾರ್ಗಸೂಚಿಗಳಿಗೆ ಅನುಗುಣವಾಗಿ ಮಂಡಳಿಯು ಮೌಲ್ಯಮಾಪನ ಮಾಡಿಲ್ಲ. ಪರಿಣಾಮವಾಗಿ, ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಲೆಗಳನ್ನು ನಿರ್ಣಯಿಸದೆ ಏಜೆನ್ಸಿಯ ಏಕೈಕ ಪ್ರಸ್ತಾಪವನ್ನು ಮಾತುಕತೆಗಳ ಮೂಲಕ ಅಂಗೀಕರಿಸಲಾಗಿದೆ ಎಂದು ಸಿಎಜಿಯು ಬೊಟ್ಟು ಮಾಡಿದೆ.

 

ಅಕ್ಟೋಬರ್ 2020ರಲ್ಲಿ, ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಭಾರತದ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳ ನೋಂದಣಿ ಮತ್ತು ವಿತರಣೆಗಾಗಿ ರಾಷ್ಟ್ರೀಯ ಸಾಮಾನ್ಯ ದತ್ತಾಂಶದ ಅನುಷ್ಠಾನದ ಬಗ್ಗೆ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡಿತು. ರಾಷ್ಟ್ರೀಯ ಸಾಮಾನ್ಯ ದತ್ತಸಂಚಯವನ್ನು 2021ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾಗಿತ್ತು. ಇದರ ಹೊರತಾಗಿಯೂ, ಮಂಡಳಿಯು ಗ್ಲೋಬಲ್ ಕಂಪನಿಯ ಪ್ರಸ್ತಾವನೆಯನ್ನು ಪರಿಗಣಿಸುವ ಮುನ್ನ ರಾಷ್ಟ್ರೀಯ ಸಾಮಾನ್ಯ ದತ್ತಸಂಚಯದ ಕಾರ್ಯಗಳ ಮೌಲ್ಯಮಾಪನ ಮಾಡಲಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ಒತ್ತಿ ಹೇಳಿದೆ.

 

ಕೈಪಿಡಿಯ ಮೇಲೆ ಕಂಪನಿಯ ಹಕ್ಕು!

 

ಸಾಪ್ಟವೇರ್ ಪರವಾನಗಿ ಒಪ್ಪಂದವು, ಮಂಡಳಿಗೆ ತನಗೆ ಬೇಕಾದಂತೆ ಸಾಫ್ಟ್‌ವೇರ್‌ ಅನ್ನು ಇತರ ಪ್ರೋಗ್ರಾಂಗಳೊಂದಿಗೆ ಮಾರ್ಪಡಿಸಲು, ಅಳವಡಿಸಿಕೊಳ್ಳಲು ಅಥವಾ ಸಂಯೋಜಿಸಲು ಅನುಮತಿ ನೀಡಿಲ್ಲ. ಇದರಿಂದಾಗಿ ಸಾಫ್ಟ್‌ವೇರ್‌ ನ ನಿರಂತರ ಬಳಕೆಗಾಗಿ ಮಂಡಳಿಯು ಸಂಪೂರ್ಣವಾಗಿ ಮಾರಾಟಗಾರರ ಮೇಲೆ ಅವಲಂಬಿಸಬೇಕಾಗಿ ಬಂದಿದೆ ಎಂದು ಸಿಎಜಿಯು ತನ್ನ ವರದಿಯಲ್ಲಿ ಬೊಟ್ಟು ಮಾಡಿದೆ.

 

ʻದಿ ಫೈಲ್‌ʼ ಈ ವೆಬ್‌ ಪೋರ್ಟಲ್‌ ಅನ್ನು ಪರಿಶೀಲಿಸಿತು.   ಮೇಲ್ನೋಟಕ್ಕೇ ಈ ಪೋರ್ಟಲ್‌ ಮೇಲೆ ಗ್ಲೋಬಲ್‌ ಕಂಪನಿಯು ಹಿಡಿತ ಹೊಂದಿರುವುದು ಕಂಡುಬಂದಿತು. ಪೋರ್ಟಲ್‌ ನಲ್ಲಿ ಪ್ರಕಟಿಸಲಾಗಿರುವ ʻಕಾರ್ಮಿಕ ಬಳಕೆದಾರರ ಕೈಪಿಡಿʼ ಕೂಡ ಗ್ಲೋಬಲ್‌ ಕಂಪನಿಯ ಹೆಸರಿನಲ್ಲಿ ಪ್ರಕಟವಾಗಿತ್ತು. ಮಾತ್ರವಲ್ಲ, ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಬಳಕೆಯಾಗಬೇಕಾಗಿದ್ದ ಈ ಕೈಪಿಡಿಯ ವಿಷಯಗಳ ಮೇಲೂ ಕಂಪನಿ ತಾನು ʻಹಕ್ಕುʼ ಹೊಂದಿರುವುದಾಗಿ ಪ್ರಕಟಿಸಿತ್ತು.

 

scam at Karnataka Building & Other Construction Workers Welfare Board

 

ಯೋಜನೆ ಪೂರ್ಣಗೊಳ್ಳುವ ಮೊದಲೇ 1.42 ಕೋಟಿ ರು. ಪರವಾನಗಿ ಶುಲ್ಕವನ್ನು ಪಾವತಿಸಲಾಗಿದೆ. ಅಲ್ಲದೇ ಒಪ್ಪಂದದ ಹಣವಾದ 8.01 ಕೋಟಿ ರು. ಗಳಲ್ಲಿ, 2023ರ ಡಿಸೆಂಬರ್ ವರೆಗೆ 6.41 ಕೋಟಿ ರು. ಗಳನ್ನು ಕಂಪನಿಗೆ ಪಾವತಿ ಮಾಡಲಾಗಿದೆ.

 

ಇ-ಆಡಳಿತ ಇಲಾಖೆಯಿಂದ ಆಯೋಜಿಸಲಾದ ಸೇವಾ ಸಿಂಧು ಪೋರ್ಟಲ್ ಮತ್ತು ಭಾರತ ಸರ್ಕಾರವು 2021ರ ಆಗಸ್ಟ್‌ನಲ್ಲಿ ಪ್ರಾರಂಭಿಸಿದ ಇ-ಶ್ರಮ್ ಪೋರ್ಟಲ್‌ನಲ್ಲಿ ಈ ಉಚಿತ ಪೋರ್ಟಲ್ ಸೇವೆಗಳ ಲಭ್ಯತೆಯ ಹೊರತಾಗಿಯೂ, ಮಂಡಳಿಯು ವಾರ್ಷಿಕ ನಿರ್ವಹಣಾ ಶುಲ್ಕದೊಂದಿಗೆ 9.45 ಕೋಟಿ ರು. ಗಳ ವೆಚ್ಚದಲ್ಲಿ (8.01 ಕೋಟಿಗಳು ಮತ್ತು 18 ಪ್ರತಿಶತ ಜಿಎಸ್‌ಟಿ) ತನ್ನದೇ ಆದ ಸಾಪ್ಟವೇರ್ ನಲ್ಲಿ ಹೂಡಿಕೆ ಮಾಡಲು ಅವಸರದ ಮತ್ತು ಅನಗತ್ಯ ನಿರ್ಧಾರವನ್ನು ತೆಗೆದುಕೊಂಡಿತು ಎಂದು ಸಿಎಜಿ ವರದಿಯು ಹೇಳಿದೆ.

 

ಬಳಕೆದಾರರ ಅವಶ್ಯಕತೆಯ ವಿಶ್ಲೇಷಣೆಯನ್ನು ನಡೆಸದೆ ಹಾಗೂ ಸ್ಪರ್ಧಾತ್ಮಕ ಬೆಲೆಗಳನ್ನು ಪಡೆಯದೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಿಎಜಿಯು ಹೇಳಿದೆ. ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡಳಿಯು ತೆಗೆದುಕೊಂಡ ಈ ಕ್ರಮವನ್ನು ಕಾಂಗ್ರೆಸ್‌ ಸರ್ಕಾರ ಸಮರ್ಥಿಸಿಕೊಂಡಿದ್ದು, ಪೋರ್ಟಲ್‌ ಅನ್ನು ತ್ವರಿತವಾಗಿ ಪ್ರಾರಂಭಿಸಲು ಈ ಕ್ರಮ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದೆ.

 

ಸೇವಾ ಸಿಂಧುನಲ್ಲಿರುವ ಸಮಸ್ಯೆಗಳಿಂದಾಗಿ ಹೊಸ ಸಾಫ್ಟ್‌ವೇರ್‌ ಅಗತ್ಯವಾಗಿದೆ ಎಂದು ಸರ್ಕಾರ ಸಿಎಜಿಗೆ ತಿಳಿಸಿದೆ. ಸರ್ಕಾರದ ಯೋಜನೆಗಳಿಗೆ ವ್ಯಾಪಕವಾಗಿ ಬಳಕೆಯಾಗುತ್ತಿರುವ ʻಸೇವಾ ಸಿಂಧುʼವಿನಲ್ಲಿ ಸಮಸ್ಯೆಗಳಿದೆ ಎಂದು ಸರ್ಕಾರವೇ ಹೇಳಿರುವುದು ಆರ್ಶರ್ಯಕ್ಕೆ ಕಾರಣವಾಗಿದೆ.

 

ಕೇಂದ್ರ ಸರ್ಕಾರ ಉಚಿತವಾಗಿ ಈ ಸೇವೆ ಒದಗಿಸಲು ಮುಂದೆ ಬಂದಿದ್ದರೂ ಸರ್ಕಾರ ಈ ಪ್ರಸ್ತಾಪವನ್ನು ಏಕೆ ಪರಿಗಣಿಸಿಲ್ಲ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ಸರ್ಕಾರ ನೀಡಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಲಾಗಿದೆ.

 

ಕಾರ್ಮಿಕರ ಮಂಡಳಿಯಲ್ಲಿ ಕೋಟ್ಯಂತರ ಅವ್ಯವಹಾರ; ಬಿಜೆಪಿ ಅವಧಿಯ ಅಕ್ರಮ, ಕಾಂಗ್ರೆಸ್‌ನಿಂದ ಸಕ್ರಮ!

 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ  ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮುಂಜಾಗೃತಾ ಆರೋಗ್ಯ ರಕ್ಷಣಾ ತರಬೇತಿ ಮತ್ತು ತಪಾಸಣೆ (ಪಿಎಚ್‌ಸಿ) ನಡೆಸುವ ಯೋಜನೆಯಲ್ಲಿ  ಕೋಟ್ಯಂತರ ರು. ಅವ್ಯವಹಾರ ನಡೆದಿರುವ ಬಗ್ಗೆ ಕೂಡ ಸಿಎಜಿ ವರದಿ ಗಮನ ಸೆಳೆದಿತ್ತು.

 

ಈ ಕುರಿತು ʻದಿ ಫೈಲ್‌ʼ ವಿವರವಾದ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts