ಬೆಂಗಳೂರು; ವಿವಿಧ ಆರ್ಥಿಕ ವರ್ಷದಲ್ಲಿ ಬಿಡುಗಡೆ ಮಾಡಿದ್ದ ಅನುದಾನದದಲ್ಲಿ ಖರ್ಚು ಮಾಡದೇ ಉಳಿಕೆಯಾಗಿದ್ದ 101.63 ಕೋಟಿ ರು.ಗಳನ್ನು ಸರ್ಕಾರಕ್ಕೆ ವಾಪಸ್ ಮಾಡಿರುವ ಪ್ರಕರಣದ ಮತ್ತೊಂದು ಮುಖವು ಬಯಲಾಗಿದೆ.
ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕಿ ಪುಷ್ಪಲತಾ ಅವರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯು ದೋಷಾರೋಪಣೆ ಪಟ್ಟಿ ಜಾರಿಗೊಳಿಸಿತ್ತು. ಇಲಾಖೆಯು ಹೂಡಿದ್ದ ದೋಷಾರೋಪಣೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತಳ್ಳಿ ಹಾಕಿದೆ.
ಪುಷ್ಪಲತಾ ಅವರ ವಿರುದ್ಧ ದೋಷಾರೋಪಣೆ ಪಟ್ಟಿ ಜಾರಿ ಮಾಡಲು ಸ್ವತಃ ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಅವರು ಅನುಮೋದನೆ ನೀಡಿದ್ದರು. ಆದರೀಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇಲಾಖೆಯು ಮಾಡಿದ್ದ ದೋಷಾರೋಪಣೆ ಪಟ್ಟಿಯನ್ನು ತಿರಸ್ಕರಿಸಿದೆ. ಆಪಾದಿತ ಅಧಿಕಾರಿ ಪುಷ್ಪಲತಾ ಅವರು ಕರ್ತವ್ಯ ಲೋಪವೆಸಗಿಲ್ಲ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2025ರ ಸೆ.8ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊರಡಿಸಿರುವ ಈ ಅನಧಿಕೃತ ಟಿಪ್ಪಣಿಯು, ಸಚಿವರಾದ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಮುಖಭಂಗಕ್ಕೀಡು ಮಾಡಿದೆ. ಅಲ್ಲದೇ ಪುಷ್ಪಲತಾ ಅವರು ಸರ್ಕಾರಕ್ಕೆ ನಿಯಮಗಳ ಪ್ರಕಾರ 101.63 ಕೋಟಿ ರು.ಗಳನ್ನು ವಾಪಸ್ ಮಾಡಿದ್ದರೂ ಸಹ ಅವರ ವಿರುದ್ಧ ಹೊರಡಿಸಿದ್ದ ದೋಷಾರೋಪಣೆ ಪಟ್ಟಿಯ ಹಿಂದೆ ಷಡ್ಯಂತ್ರವಿತ್ತೇ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಪುಷ್ಪಲತಾ ಅವರ ವಿರುದ್ಧದ ದೋಷಾರೋಪಣೆ ಏನು?
ಸರ್ಕಾರದ ವಿವಿಧ ಯೋಜನೆಗಳಿಗೆ ವಿವಿಧ ಆರ್ಥಿಕ ವರ್ಷದಲ್ಲಿ ಅನುದಾನ ಬಿಡುಗಡೆ ಮಾಡಿತ್ತು. ಈ ರೀತಿ ಬಿಡುಗಡೆಯಾದ ಅನುದಾನ ಒಟ್ಟು ರೂ.101,63,79,064 ರು ಗಳನ್ನು ಯೋಜನೆಗಳ ಅನುಷ್ಟಾನದ ಸಂಬಂಧ ಸಮರ್ಪಕವಾಗಿ ಬಳಸದೇ ಬ್ಯಾಂಕ್ ಖಾತೆಗಳಲ್ಲಿಯೇ ಮುಂದುವರೆಸಿರುತ್ತೀರಿ. ಬ್ಯಾಂಕ್ ಖಾತೆಗಳಲ್ಲಿರುವ ಬಡ್ಡಿ ಹಣ ಹಾಗೂ ಬಳಕೆಯಾಗದ ಹಣವನ್ನು ಆಗಿಂದಾಗೆ ಸರ್ಕಾರಕ್ಕೆ ಆದ್ಯಾರ್ಪಣೆ ಮಾಡುವಂತೆ ಸರ್ಕಾರವು ನಿರ್ದೇಶನವನ್ನು ನೀಡಿರುತ್ತದೆ. ಈ ರೀತಿ ಬ್ಯಾಂಕ್ ಗಳಲ್ಲಿ ಮುಂದುವರೆಸಿರುವ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರದೇ ಬ್ಯಾಂಕ್ ಖಾತೆಗಳಲ್ಲಿಯೇ ಮುಂದುವರೆಸಿರುತ್ತೀರಿ ಎಂದು ಇಲಾಖೆಯು ದೋಷಾರೋಪಣೆ ಹೊರಿಸಿತ್ತು.

ಈ ರೀತಿ ಬ್ಯಾಂಕ್ ಖಾತೆಗಳಲ್ಲಿನ ಬಡ್ಡಿ ಮೊತ್ತ, ನಿಶ್ಚಿತ ಠೇವಣಿ ಮೊತ್ತ, ನಿಶ್ಚಿತ ಠೇವಣಿ ಬಡ್ಡಿ ಮೊತ್ತ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಂದ ಸ್ವೀಕೃತವಾದ ಮರುಪಾವತಿ ಮೊತ್ತವನ್ನು ಆಡಳಿತ ಇಲಾಖೆಯ ಪೂರ್ವಾನುಮತಿ ಪಡೆದಿಲ್ಲ. ಹಾಗೂ ಸ್ಪಷ್ಟ ಅಭಿಪ್ರಾಯ ಪಡೆಯದೆ ಮತ್ತು ಮಾರ್ಗದರ್ಶನ ಪಡೆಯದೆ ನೇರವಾಗಿ ಕ್ರಮ ಕೈಗೊಂಡು ಆರ್ಥಿಕ ಇಲಾಖೆಗೆ ಅದ್ಯಾಪರ್ಣೆ ಮಾಡಿರುತ್ತೀರಿ. ನಿಮ್ಮ ಈ ರೀತಿ ವರ್ತನೆಯಿಂದ ನಿಗಮದ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾಗಿದೆ. ಅರ್ಹ ಫಲಾನುಭವಿಗಳು ನಿಗಮದ ಯೋಜನೆಗಳಿಂದ ವಂಚಿತರಾಗಲು ಕಾರಣರಾಗಿದ್ದೀರಿ. ಆ ಮೂಲಕ ನಿಗಮದ ಮೂಲ ಉದ್ದೇಶದಂತೆ ಯೋಜನೆಗಳ ಅನುಷ್ಠಾನದಲ್ಲಿ ಕರ್ತವ್ಯ ಲೋಪವೆಸಗಿರುತ್ತೀರಿ ಎಂದು ಆಪಾದಿಸಲಾಗಿತ್ತು.
‘ನೀವು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಲ್ಲಿ ಆಡಳಿತಾಧಿಕಾರಿಗಳ ಜವಾಬ್ದಾರಿಯುತ ಹುದ್ದೆಯಲ್ಲಿ ಕರ್ತ್ಯವ್ಯ ನಿರ್ವಾಹಿಸುತಿದ್ದು, ನಿಗಮದ ಆರ್ಥಿಕ ವ್ಯವಹಾರಗಳ ಕಡತಗಳನ್ನು ನಿರ್ವಹಿಸುತ್ತಿದ್ದೀರಿ. ಈ ರೀತಿ ಆರ್ಥಿಕ ವ್ಯವಹಾರಗಳಲ್ಲಿ ಕರ್ನಾಟಕ ಆರ್ಥಿಕ ಸಂಹಿತೆ 1958ರ ನಿಯಮ-15 ರಲ್ಲಿ ವಿವರಿಸಿದ ಆರ್ಥಿಕ ಔಚಿತ್ಯ (Cannon Of Finance) ಸೂತ್ರಗಳನ್ನು ಅನುಸರಿಸುವಲ್ಲಿ ವಿಫಲರಾಗಿರುತ್ತೀರಿ. ಈ ನಿಮ್ಮ ವರ್ತನೆಯು ಕರ್ನಾಟಕ ನಾಗರಿಕ ಸೇವಾ (ನಡೆತೆ) ನಿಯಮಾವಳಿಗಳು 2021ರ ನಿಯಮ 3.1 (i) (ii) & (iii)ಗಳಿಗೆ ವಿರುದ್ದವಾಗಿರುತ್ತದೆ,’ ಎಂದು ಇಲಾಖೆಯು ದೋಷಾರೋಪಣೆ ಹೊರಿಸಿತ್ತು.
ಅಲ್ಲದೇ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಜಯನಗರ ವಾಣಿಜ್ಯ ಸಂಕೀರ್ಣದಿಂದ ಕೃಷಿ ಭವನದ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ಈ ಪ್ರಕ್ರಿಯೆ ಸಂಬಂಧ ಕೃಷಿಕ ಸಮಾಜದ ಕಟ್ಟಡದ ಬಾಡಿಗೆ ಹಾಗೂ ನವೀಕರಣದ ಕಡತವನ್ನು ನೀವು ನಿರ್ವಹಿಸಿರುತ್ತೀರಿ. ಇಲಾಖೆ ಮುಖ್ಯಸ್ಥರಿಗೆ ಬೆಂಗಳೂರು ನಗರ ವ್ಯಾಪ್ತಿಯ ಕಟ್ಟಡದ ಬಾಡಿಗೆ ಪಾವತಿಸಲು (ಸಾದಿಲ್ವಾರು ವೆಚ್ಚ ಕೈಪಿಡಿ- 1958 ನಿಯಮ 55 (46)ರಂತೆ) ಸರ್ಕಾರದ ಸಾಮಾನ್ಯ ವಿತ್ತಾಧಿಕಾರದಂತೆ ಮಾಸಿಕ ರೂ.5.0ಲಕ್ಷಗಳು ಮೀರದಂತೆ ಪಾವತಿಸಲು ಅವಕಾಶವಿರುತ್ತದೆ.

ಆದರೆ, ನೀವು ಬಾಡಿಗೆ ಪಾವತಿಸುವ ಸಂಬಂಧ ಮೇಲಧಿಕಾರಿಗಳಿಗೆ ನಿಯಮಗಳ ಬಗ್ಗೆ ಸೂಕ್ತವಾಗಿ ಪರಿಶೀಲಿಸದೇ ಹಾಗೂ ನಿಮಗೆ ವಹಿಸಲಾದ ಜವಾಬ್ದಾರಿ ಕರ್ತವ್ಯವನ್ನು ನಿರ್ವಹಿಸದೇ ಹೆಚ್ಚುವರಿ ಬಾಡಿಗೆ ಮೊತ್ತವನ್ನು ಪಾವತಿಸಲು ಕಾರಣರಾಗಿರುತ್ತೀರಿ. ನಿಮ್ಮ ಈ ವರ್ತನೆಯಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟಾಗಿರುತ್ತದೆ ಎಂದು ಆಪಾದಿಸಿತ್ತು.
ಸರ್ಕಾರಿ ನೌಕರನು ಸರ್ಕಾರದ ಹಣವನ್ನು ವೆಚ್ಚ ಭರಿಸುವ ಸಂದರ್ಭದಲ್ಲಿ ತನ್ನ ಸ್ವಂತ ಹಣದಂತೆ ವೆಚ್ಚ ಭರಿಸಬೇಕಾಗಿರುತ್ತದೆ. ಅದರೆ, ನೀವು ಬಾಡಿಗೆ ನಿಗದಿ ಪ್ರಕರಣದ ಕಡತವನ್ನು ಸಮರ್ಪಕವಾಗಿ ನಿರ್ವಹಿಸದೇ ಹೆಚ್ಚುವರಿ ಬಾಡಿಗೆ ಪಾವತಿ ಮಾಡಲು ಕಾರಣರಾಗಿದ್ದೀರಿ. ಈ ಮೂಲಕ ಕರ್ನಾಟಕ ಆರ್ಥಿಕ ಸಂಹಿತೆ-1958ರ ನಿಯಮ 15 ನ್ನು ಉಲ್ಲೇಂಘಿಸಿ, ಕರ್ತ್ಯಲೋಪವೆಸಗಿರುತ್ತೀರಿ. ಈ ನಿಮ್ಮ ವರ್ತನೆಯು ಕರ್ನಾಟಕ ನಾಗರಿಕ ಸೇವಾ (ನಡೆತೆ) ನಿಯಮಾವಳಿಗಳು 2021ರ ನಿಯಮ 3.1 (i) (ii) & (iii) ಗಳಿಗೆ ವಿರುದ್ದವಾಗಿರುತ್ತದೆ ಎಂದು ಆರೋಪಿಸಿತ್ತು.
ಬ್ಯಾಂಕ್ ಖಾತೆಗಳಲ್ಲಿನ ಬಡ್ಡಿ ಮೊತ್ತ, ನಿಶ್ಚಿತ ಠೇವಣಿ ಮೊತ್ತ, ನಿಶ್ಚಿತ ಠೇವಣಿ ಬಡ್ಡಿ ಮೊತ್ತ ಹಾಗೂ ವಿವಿಧ ಯೋಜನೆಗಳಡಿ ಫಲಾನುಭವಿಗಳಿಂದ ಸ್ವೀಕೃತವಾದ ಮರುಪಾವತಿ ಮೊತ್ತವನ್ನು ಆಡಳಿತ ಇಲಾಖೆಯ ಪೂರ್ವಾನುಮತಿ ಪಡೆಯದೆ ಹಾಗೂ ಸ್ವಪ್ಟ ಅಭಿಪ್ರಾಯ ಪಡೆಯದೆ ಮತ್ತು ಮಾರ್ಗದರ್ಶನ ಪಡೆಯದೆ ಪುಷ್ಪಲತಾ ಮತ್ತು ಇಂದಿರಾ ಅವರು ನೇರವಾಗಿ ಕ್ರಮ ಕೈಗೊಂಡು ಆರ್ಥಿಕ ಇಲಾಖೆಗೆ ವಾಪಸ್ ಮಾಡಿದ್ದರು ಎಂದು ಇಲಾಖೆಯು ಆರೋಪಿಸಿತ್ತು. ಅಲ್ಲದೇ ಇದರ ವಿವರಗಳನ್ನು ದೋಷಾರೋಪಣೆ ಪಟ್ಟಿಯಲ್ಲಿ ನೀಡಲಾಗಿತ್ತು.

ಆರ್ಥಿಕ ಇಲಾಖೆಯ ಪತ್ರ (ದಿನಾಂಕ: 28.07.2022) ದ ಪ್ರಕಾರ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಬ್ಯಾಂಕ್‌ಖಾತೆಗಳಲ್ಲಿ ಒಟ್ಟಾರೆ ರೂ. 63.08.ಕೋಟಿಯಷ್ಟಿತ್ತು. ಹಲವು ವರ್ಷಗಳಿಂದ ಬಳಕೆಯಾಗದ ಹಣವನ್ನು ಕೂಡಲೇ ಸರ್ಕಾರಕ್ಕೆ ವಾಪಸ್ ಮಾಡಿ ಬಳಕೆಯಾಗುವ ಮೊತ್ತದ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಬೇಕಾಗಿತ್ತು. ಹಲವು ವರ್ಷಗಳಿಂದ ಬಳಕೆಯಾಗದ ಮೊತ್ತವನ್ನು ಅನಧಿಕೃತವಾಗಿ ಬ್ಯಾಂಕ್‌ಖಾತೆಯಲ್ಲಿಟ್ಟಿರುವುದು ಕರ್ನಾಟಕ ಆರ್ಥಿಕ ಸಂಹಿತೆ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಇಲಾಖೆಯು ಆಪಾದಿಸಿತ್ತು.
ವಾಪಸ್ ಮಾಡದೇ ಇದ್ದಲ್ಲಿ ಇನ್ನು ಮುಂದೆ ನಿಗಮಕ್ಕೆ ಯಾವುದೇ ಅನುದಾನವನ್ನು (ವೇತನವನ್ನು ಒಳಗೊಂಡಂತೆ) ಬಿಡುಗಡೆ ಮಾಡಲಾಗುವುದಿಲ್ಲ. ಆದ್ದರಿಂದ ಬ್ಯಾಂಕ್‌ಖಾತೆಯಲ್ಲಿರುವ ಹಣವನ್ನು ಈ ಕೂಡಲೇ ಸರ್ಕಾರಕ್ಕೆ ವಾಪಸ್ ಮಾಡಲು ಕ್ರಮವಹಿಸಬೇಕು (ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು. ಇವರ ಅದೇಶ ಸಂಖ್ಯೆ: ಮಅನಿ/ಲೆಶಾ/10 /ಎಫ್‌ಡಿ/ಅದ್ಯಾರ್ಪಣೆ/2022-23. ದಿನಾಂಕ: 10.02.2023) ಎಂದು ತಿಳಿಸಿತ್ತು.
ಅಲ್ಲದೇ ನಿಗಮದ ವಿವಿಧ ಯೋಜನೆಗಳಡಿ ನಿಶ್ಚಿತ ಠೇವಣಿಗಳಡಿ ತೊಡಗಿಸಲಾಗಿದ್ದ 29,17,00,000/ ಮೊತ್ತವನ್ನು ಸರ್ಕಾರಕ್ಕೆ ಜಮಾ ಮಾಡಲು ಆದೇಶಿಸಿತ್ತು. ಸರ್ಕಾರದ ಆರ್ಥಿಕ ಇಲಾಖೆಯ (ಪತ್ರ ಸಂಖ್ಯೆ: WCDSEC-WDC/09/2022 ದಿನಾಂಕ: 03.12.2022) ಸೂಚನೆಯ ಮೇರೆಗೆ ನಿಗಮದ ವಿವಿಧ ಬ್ಯಾಂಕ್‌ಖಾತೆಗಳಲ್ಲಿ ಹಲವು ವರ್ಷಗಳಿಂದ ಬಳಕೆಯಾಗದ ಮೊತ್ತದ ಪೈಕಿ ಒಟ್ಟು ರೂ. 88.09 ಕೋಟಿ ರು ಮೊತ್ತವನ್ನು ನಿಯಮಾನುಸಾರ ಸಂಬಂಧಿಸಿದ ಸರ್ಕಾರದ ಲೆಕ್ಕಶೀರ್ಷಿಕೆಗಳಿಗೆ ಕೂಡಲೇ ವಾಪಸ್ ಮಾಡಿರುವ ಕುರಿತು ಸರ್ಕಾರಕ್ಕೆ ಅನುಸರಣೆ ವರದಿ ಸಲ್ಲಿಸಬೇಕು ಎಂದು (ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು. ಇವರ ಅದೇಶ ಸಂಖ್ಯೆ: ಮಅನಿ/ಲೆಶಾ/ಬ್ಯಾಂಕ್‌ಶಿಲ್ಕು/ ಅದ್ಯಾರ್ಪಣೆ /2022-23. ದಿನಾಂಕ: 09.12.2022) ಸೂಚಿಸಿತ್ತು.
ವಿವಿಧ ಯೋಜನೆಗಳ ಬ್ಯಾಂಕ್‌ಖಾತೆಗಳಲ್ಲಿ ಅರ್ಜಿತವಾದ ಬಡ್ಡಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲು ಆದೇಶಿಸಿತ್ತು. ಇದರ ಪ್ರಕಾರ 23,70,67,445 ರು ಇತ್ತು. ಸರ್ಕಾರದ ಆರ್ಥಿಕ ಇಲಾಖೆಯ ಸುತ್ತೋಲೆ (ಸಂಖ್ಯೆ: ಆಇ/24/ಟಿಎಆರ್/2019 ದಿನಾಂಕ: 27.08.2019 ) ಪ್ರಕಾರ ಆರ್ಥಿಕ ಇಲಾಖೆಯ ಸಹಮತಿ ಪಡೆದು ಯಾವುದೇ ಯೋಜನೆಗೆ ಸಂಬಂಧಿಸಿದಂತೆ ಅನುದಾನವನ್ನು ಬ್ಯಾಂಕ್‌ಖಾತೆಯಲ್ಲಿಟ್ಟು ನಿರ್ವಹಿಸುತ್ತಿದ್ದಲ್ಲಿ ಇಲಾಖೆಗಳು ತಮ್ಮ ಬ್ಯಾಂಕ್ ಖಾತೆಗಳಲ್ಲಿ ಬಾಕಿ ಉಳಿದಿರುವ ಮೊತ್ತದ ಮೇಲೆ ಅರ್ಜಿತವಾದ ಬಡ್ಡಿ ಮೊತ್ತವನ್ನು ʼ0049ʼ ರಡಿ ಜಮೆ ಮಾಡಲು ತಿಳಿಸಿತ್ತು.
ಅದರೆ ಮಂಡಳಿಗಳು, ನಿಗಮಗಳು, ಸಹಕಾರ ಸಂಘಗಳು, ಸಾರ್ವಜನಿಕ ವಲಯ ಉದ್ಯಮಗಳು ಹಾಗೂ ಇನ್ನಿತರ ಸ್ವಾಯತ್ತ ಸಂಸ್ಥೆಗಳು ಖಜಾನೆಯಿಂದ ಸೆಳೆದು ಬ್ಯಾಂಕ್ ಖಾತೆಯಲ್ಲಿಟ್ಟು ಬ್ಯಾಂಕ್‌ಖಾತೆಯಲ್ಲಿ ಆಕರಿಸಿದ ಬಡ್ಡಿಯ ಮೊತ್ತವನ್ನು ನಿಯಮಾನುಸಾರ ಸಂಚಿತ ನಿಧಿಗೆ ಜಮೆ ಮಾಡದೆ ಬೇರೆ ಉದ್ಧೇಶಗಳಿಗೆ ಅಥವಾ ಬೇರೆ ಯೋಜನೆಗಳಿಗೆ ಮಾರ್ಗಪಲ್ಲಟ ಮಾಡುತ್ತಿರುವುದು ಆರ್ಥಿಕ ಇಲಾಖೆಯ ಗಮನಕ್ಕೆ ಬಂದಿತ್ತು. ಹೀಗಾಗಿ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಮೇಲೆ ಬ್ಯಾಂಕ್ ಖಾತೆಯಲ್ಲಿ ಗಳಿಸಿದ ಬಡ್ಡಿಯ ಮೊತ್ತವನ್ನು ಆಯಾ ಆರ್ಥಿಕ ವರ್ಷದ ಅಂತ್ಯಕ್ಕೆ ಕಡ್ಡಾಯವಾಗಿ ಬಡ್ಡಿಯ ಲೆಕ್ಕಶೀರ್ಷಿಕೆಗೆ ಜಮೆ ಮಾಡಲು ತಿಳಿಸಿತ್ತು.
ಇದರ ಪ್ರಕಾರ 17,04,37,861 ರು., 5,64,35,090 ರು., 6,82,81,339 ರು ಇತ್ತು. ಸರ್ಕಾರದ ಪತ್ರ (ಸಂಖ್ಯೆ: ಮಮಇ/13/ಮಅನಿ/2018 ದಿನಾಂಕ: 07.06.2018) ದ ಪ್ರಕಾರ ಕಿರುಸಾಲ ಯೋಜನೆಯಡಿ ಮರು ಪಾವತಿಯಾದ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಬೇಕಿತ್ತು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಆದೇಶದ ಪ್ರಕಾರ (ಬೆಂಗಳೂರು. ಇವರ ಅದೇಶ ಸಂಖ್ಯೆ: ಮಅನಿ/ಕಿಸಾ/ಮಮೊಹಿಂ/06/2017-18. ದಿನಾಂಕ: 22.04.2019) ಸರ್ಕಾರಕ್ಕೆ ಹಿಂದಿರುಗಿಸಲು ಕ್ರಮವಹಿಸಬೇಕು ಎಂದು ಜಂಟಿ ನಿಯಂತ್ರಕರು (ಮಮಅಇ ಚೆಕ್ ಸಂಖ್ಯೆ: 515452) ಸೂಚಿಸಿದ್ದರು.

ಇದರ ಪ್ರಕಾರ 9,41,67,000 ರೂ.ಗಳಿತ್ತು. ಹಾಗೆಯೇ ಸರ್ಕಾರದ ಪತ್ರ ( ಸಂಖ್ಯೆ: WCDSEC-WDC/4/2021 ದಿನಾಂಕ: 21.08.2021) ದ ಪ್ರಕಾರ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳುತ್ತಿರುವ ವಿವಿಧ ಯೋಜನೆಗಳ ಮರು ಪಾವತಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲು ತಿಳಿಸಿತ್ತು. ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಬೆಂಗಳೂರು (ಇವರ ಅದೇಶ ಸಂಖ್ಯೆ: ಮಅನಿ/ಲೆಶಾ/ ಬ್ಯಾಂಕ್‌ಶಿಲ್ಕು /ಅದ್ಯಾರ್ಪಣೆ/2021-22. ದಿನಾಂಕ: 30.11.2021) ಆದೇಶದ ಪ್ಕರಾರ ನಿಗಮದಿಂದ ಅನುಷ್ಠಾನಗೊಳುತ್ತಿರುವ ವಿವಿಧ ಯೋಜನೆಗಳ ಮರು ಪಾವತಿ ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡಲು ಆದೇಶಿಸಿತ್ತು. ಇದರ ಪ್ರಕಾರ 9,82,90,329 ರು ಸೇರಿ ಒಟ್ಟಾರೆ ಒಟ್ಟು ಮೊತ್ತ ರೂ. 101,63,79,064 ರು ಇತ್ತು ಎಂದು ಲೆಕ್ಕಾಚಾರ ಒದಗಿಸಿತ್ತು.

ಈ ಆರೋಪಕ್ಕೆ ಪೂರಕವಾಗಿ ಇಲಾಖೆಯು ಆರ್ಥಿಕ ಇಲಾಖೆಯ ಪತ್ರ (ದಿನಾಂಕ:28.07.2022) ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪತ್ರ (ಮಮ ಇ : WDCSEC-WDC/09/2022 ದಿನಾಂಕ:03.12.2022),
ಸರ್ಕಾರದ ಆರ್ಥಿಕ ಇಲಾಖೆಯ ಸುತ್ತೋಲೆ (ಸಂಖ್ಯೆ: ಆಇ:24:ಟಿಎಆರ್:2019 ದಿ:27.08.2019), ಸರ್ಕಾರದ ಪತ್ರ (ಸಂಖ್ಯೆ: ಮಮ ಇ :13:ಮಅನಿ:2018:ದಿ:07.06.2018), ಬ್ಯಾಂಕ್ ಖಾತೆಗೆ ಜಮೆ ಮಾಡಲಾದ ಚೆಕ್ (ಸಂಖ್ಯೆ: 515452), ಪಾಸ್‌ಪುಸ್ತಕಗಳು, ಸರ್ಕಾರದ ಪತ್ರ (ಸಂಖ್ಯೆ: WDCSEC-WDC/04/2021 ದಿನಾಂಕ:21.08.2021), ಕಛೇರಿ ನವೀಕರಣದ ಕಡತ (ಸಂಖ್ಯೆ: ಮಅನಿ : ಆಡಳಿತ: ಕಟ್ಟಡ : 2021-22ರ ಟಿಪ್ಪಣಿಗಳ ಹಾಳೆಗಳು) ವನ್ನು ಸಾಕ್ಷ್ಯ ರೂಪದಲ್ಲಿ ಒದಗಿಸಿತ್ತು.
ಅಲ್ಲದೇ ಪುಷ್ಪಲತಾ ಕೆ.ಎಸ್., ಆಡಳಿತಾಧಿಕಾರಿ, ಕ.ರಾ.ಮ.ಅ.ನಿಗಮ, ಬೆಂಗಳೂರು ಇವರ ವಿರುದ್ದ ಹೂಡಲಾದ ಆರೋಪಗಳನ್ನು ಸಮರ್ಥಿಸಲು ಸಾಕ್ಷಿಗಳನ್ನು ಒದಗಿಸಿತ್ತು. ಈ ಪೈಕಿ ನಿಗಮದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ದೀಪ್ತಿ ಪ್ರಕಾಶ್, ಅಧೀಕ್ಷಕರಾದ ಉಷಾ,ಕೆ.ಎಸ್., ಪ್ರಥಮ ದರ್ಜೆ ಸಹಾಯಕರಾದ
ಕೆ. ಪರಿಮಳನ್ ಅವರ ಹೇಳಿಕೆಯನ್ನೂ ದಾಖಲಿಸಿತ್ತು ಎಂಬುದು ಗೊತ್ತಾಗಿದೆ.
ಅದೇ ರೀತಿ ನಿಗಮದಲ್ಲಿ ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಇಂದಿರಾ ಎಂಬುವರ ವಿರುದ್ಧವೂ ಇದೇ ಪ್ರಕರಣದಲ್ಲಿ ದೋಷಾರೋಪಣೆ ಹೊರಿಸಿತ್ತು.
ರಾಜ್ಯದಲ್ಲಿ ಆರ್ಥಿವಾಗಿ ಹಿಂದುಳಿದ ಮಹಿಳೆಯರಿಗೆ ಸಮಾಜದ ದುರ್ಬಲ ಹಾಗೂ ಶೋಷಿತ ಮತ್ತು ಅಸಹಾಯಕ ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಧೃಡಗೊಳಿಸುವುದು ನಿಗಮದ ಮೂಲ ಉದ್ದೇಶವಾಗಿದೆ. ನಿಗಮದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆಯು ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಈ ಅನುದಾನವನ್ನು ನಿಗದಿತ ಕಾಲಮಿತಿಯೊಳಗೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಅದನ್ನು ಸಮರ್ಪಕ ಬಳಕೆ ಮಾಡುವ ಸಂಬಂಧ ಅಗತ್ಯ ಕ್ರಮ ವಹಿಸಬೇಕು. ಆದರೆ ಈ ಇಬ್ಬರು ಅಧಿಕಾರಿಗಳು ಕ್ರಮ ವಹಿಸಿರಲಿಲ್ಲ ಎಂದು ಇಲಾಖೆಯು ಆರೋಪಿಸಿತ್ತು.
ಕರ್ತವ್ಯಲೋಪ ಎಸಗಿಲ್ಲವೆಂದ ಡಿಪಿಎಆರ್
ಈ ದೋಷಾರೋಪಣೆ ಪಟ್ಟಿ ಜಾರಿಗೊಂಡಿದ್ದರ ಬೆನ್ನಲ್ಲೇ ಆಪಾದಿತ ಕೆಎಎಸ್ ಮಹಿಳಾ ಅಧಿಕಾರಿ ಪುಷ್ಪಲತಾ ಅವರು ತಮಗೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿದ್ದರು. ಈ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದರು.
ಮಹಿಳಾ ಕೆಎಎಸ್ ಅಧಿಕಾರಿಯಿಂದ ಸಚಿವರ ಒಎಸ್‌ಡಿ, ಮಹೇಶ್‌ಬಾಬು ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಈ ಸಂಬಂಧ ವರದಿಯನ್ನೂ ಆಯೋಗವು ಸರ್ಕಾರವನ್ನು ಕೇಳಿತ್ತು. ಈ ಕುರಿತು ಆಯೋಗವು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2025ರ ಆಗಸ್ಟ್ 18ರಂದು ಪತ್ರ ಬರೆದಿತ್ತು.

ಇದರ ಬೆನ್ನಲ್ಲೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ‘ಯಾವುದೇ ಕರ್ತವ್ಯಲೋಪ’ ಎಸಗಿಲ್ಲ ಎಂದು ಕ್ಲೀನ್ ಚಿಟ್ ನೀಡಿದೆ.
ಪುಷ್ಪಲತಾ ಅವರ ವಿರುದ್ಧ ಇಲಾಖೆಯು ಹೊರಡಿಸಿದ್ದ ದೋಷಾರೋಪಣೆ ಪಟ್ಟಿ (1ರಿಂದ 4 ಅನುಬಂಧ) ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಹೊರಡಿಸಿರುವ ಅನಧಿಕೃತ ಟಿಪ್ಪಣಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಡಿಪಿಎಆರ್ ಟಿಪ್ಪಣಿಯಲ್ಲೇನಿದೆ?
ಪುಷ್ಪಲತಾ ಅವರು ಕರ್ನಾಟಕ ಆಡಳಿತ ಸೇವಾ ಅಧಿಕಾರಿಗಳಾಗಿರುವುದರಿಂದ ಶಿಸ್ತು, ಸಕ್ರಮ ಪ್ರಾಧಿಕಾರವಾದ ತಮ್ಮ ಹಂತದಲ್ಲಿ ಶಿಸ್ತುಕ್ರಮ ಕೈಗೊಳ್ಳುವಂತೆ ಇಲಾಖೆ ಸಚಿವರ ಅನುಮೋದನೆಯೊಂದಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳಿಸಲಾಗಿರುತ್ತದೆ.

ಈ ಕುರಿತಂತೆ ಆರ್ಥಿಕ ಇಲಾಖೆಯ ನಿರ್ದೇಶನಗಳ ಅನ್ವಯ ಮಹಿಳಾ ಅಭಿವೃದ್ಧಿ ನಿಗಮವು ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಿರುವ ಒಟ್ಟು 101,63,79,064 ರು ಗಳನ್ನು ರಾಜ್ಯ ಸರ್ಕಾರಕ್ಕೆ ಹಿಂತಿರುಗಿಸಲು ಕ್ರಮ ವಹಿಸಿದ್ದಾರೆ. ಇದರಲ್ಲಿ ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿಗಳ ಯಾವುದೇ ಕರ್ತವ್ಯ ಲೋಪವು ಕಂಡು ಬರುತ್ತಿಲ್ಲ ಎಂದು ಆರ್ಥಿಕ ಇಲಾಖೆಯು 2025ರ ಆಗಸ್ಟ್ 20ರಂದು ಅಭಿಪ್ರಾಯ ನೀಡಿರುತ್ತದೆ.

ಆರ್ಥಿಕ ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ ಸದರಿ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಅವಶ್ಯಕತೆ ಕಂಡುಬರುತ್ತಿಲ್ಲ ಎಂಬ ಮಾಹಿತಿಯನ್ನು ತಿಳಿಸಲಾಗಿದೆ ಎಂದು ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಅನಧಿಕೃತ ಟಿಪ್ಪಣಿ ಮೂಲಕ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.





