ಬೆಂಗಳೂರು; ಪರಿಶಿಷ್ಟ ಸಮುದಾಯದವರು ಮತ್ತು ಹಮಾಲಿ ಕೆಲಸ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಚಿತ್ರದುರ್ಗದ ಕವಾಡಿಗರ ಹಟ್ಟಿಗೆ ಸರಬರಾಜಾಗಿದ್ದ ಕುಡಿಯುವ ನೀರಿನ ಸ್ಯಾಂಪಲ್‌ಗಳನ್ನೇ ಪರೀಕ್ಷಿಸಿರಲಿಲ್ಲ. ನೀರು ಪೂರೈಕೆಯಾಗಿರುವ ಕೊಳವೆ ಮಾರ್ಗದಲ್ಲಿ ಸೋರಿಕೆ ಆಗಿದನ್ನೂ ಪತ್ತೆ ಹಚ್ಚಿರಲಿಲ್ಲ. ಪಿಡಬ್ಲ್ಯೂಡಿ ಕಾಮಗಾರಿಯಲ್ಲಿನ ಲೋಪಗಳನ್ನೂ ಗಮನಿಸಿರಲಿಲ್ಲ. ಹೀಗಾಗಿ ಕವಾಡಿಗರ ಹಟ್ಟಿಯಲ್ಲಿ ಐವರು ಜೀವ ಕಳೆದುಕೊಂಡರು ಎಂದು ತನಿಖಾ ತಂಡವು ವರದಿ ನೀಡಿದೆ.
ಅಲ್ಲದೇ ಕುಡಿಯುವ ನೀರು ಪೂರೈಕೆ ಸಂಬಂಧ ಸರ್ಕಾರ ಮತ್ತು ನಿರ್ದೇಶನಾಲಯ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನವನ್ನೂ ಅಧಿಕಾರಿಗಳು ಪಾಲಿಸಿರಲಿಲ್ಲ ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿದೆ. ಈ ಕುರಿತು ನಗರಾಭಿವೃದ್ಧಿ ಇಲಾಖೆಯು ಕರ್ನಾಟಕ ಲೋಕಾಯುಕ್ತಕ್ಕೆ 2025ರ ಮೇ ತಿಂಗಳಿನಲ್ಲೇ ವರದಿಯನ್ನು ಸಲ್ಲಿಸಿದೆ.
ಈ ವರದಿ ಆಧರಿಸಿ ಕೈಗೊಂಡಿರುವ ಕ್ರಮಗಳ ಕುರಿತು ಸರ್ಕಾರವೂ ಲೋಕಾಯುಕ್ತರಿಗೆ ನಿಯಮಿತವಾಗಿ ಅನುಪಾಲನೆ ವರದಿಯನ್ನು ಸಲ್ಲಿಸಿಲ್ಲ.
ಕಾವಾಡಿಗರ ಹಟ್ಟಿಯಲ್ಲಿ ಉಂಟಾದ ಸಾವು ನೋವುಗಳಿಗೆ ಕಾಲರಾ ಬ್ಯಾಕ್ಟೀರಿಯಾವೇ ಕಾರಣ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಹೇಳಿಕೆ ನೀಡಿದ್ದರು. ಆದರೀಗ ಈ ಘಟನೆಗೆ ಕಾರಣವಾಗಿರುವ ಇನ್ನಿತರೆ ಅಂಶಗಳು ಬಯಲಾಗಿವೆ. ಈ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಲೋಕಾಯುಕ್ತವು 2 ವರ್ಷವಾದರೂ ಇನ್ನು ವಿಚಾರಣೆ ಪೂರ್ಣಗೊಳಿಸಿಲ್ಲ.
ಈ ವರದಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಚಿತ್ರದುರ್ಗದ ಕವಾಡಿಗರ ಹಟ್ಟಿಯಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಲಾಗಿದೆ ಎಂಬ ಬಹುದೊಡ್ಡ ಆರೋಪ ಕೇಳಿ ಬಂದಿತ್ತು. ಈ ಕುರಿತು ಲೋಕಾಯುಕ್ತರೂ ಸ್ವಯಂ ಪ್ರೇರಿತ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣದ ವಿಚಾರಣೆಯು ಇದೇ 2025ರ ಅಕ್ಟೋಬರ್ 10ಕ್ಕೆ ನಡೆಯಲಿದೆ. ಈ ಮಧ್ಯೆ ಈ ದುರಂತದ ಹಿಂದಿನ ಲೋಪಗಳು ಬಯಲಾಗಿವೆ.
30 ವರ್ಷ ಹಳೆಯ ಓವರ್ ಹೆಡ್ ಟ್ಯಾಂಕ್, ಶಾಂತಿಸಾಗರದಿಂದ ನೀರು
ಕವಾಡಿಗರ ಹಟ್ಟಿ ಪ್ರದೇಶವು ಚಿತ್ರದುರ್ಗ ನಗರದ ಹೊರವಲಯದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದಲ್ಲಿರುವ ಈ ಪ್ರದೇಶವು ಈ ಹಿಂದೆ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಒಳಪಟ್ಟಿತ್ತು. ನಂತರ ನಗರಸಭೆಗೆ ಸೇರ್ಪಡೆಯಾಗಿದೆ. ಈ ಕವಾಡಿಗರ ಹಟ್ಟಿಗೆ ಅಂದಾಜು 25ರಿಂದ 30 ವರ್ಷಗಳ ಹಳೆಯ 50,000 ಲೀಟರ್ ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಇದೆ. ಇದಕ್ಕೆ ಶಾಂತಿಸಾಗರದಿಂದ ನೀರು ಒದಗಿಸುತ್ತಿದೆ. ಈ ನೀರನ್ನು ಹಿರೇಕಂದವಾಡಿಯಲ್ಲಿರುವ ಕುಡಿಯುವ ನೀರಿನ ಶುದ್ದೀಕರಣ ಘಟಕದಲ್ಲಿ ಶುದ್ಧೀಕರಿಸಲಾಗುತ್ತದೆ. ಮತ್ತು ಕ್ಲೋರಿನೇಷನ್ ನಂತರ ಕವಾಡಿಗರ ಹಟ್ಟಿ ಪ್ರದೇಶಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ.

ಈ ಪ್ರದೇಶದಲ್ಲಿ ಒಟ್ಟು 5 ಬೋರ್‍ವೆಲ್‌ಗಳು, 1 ಓವರ್ ಹೆಡ್ ಟ್ಯಾಂಕ್, 1 ಮಿನಿ ವಾಟರ್ ಟ್ಯಾಂಕ್ ಮತ್ತು ಒಂದು ಶುದ್ಧ ಕುಡಿಯುವ ನೀರಿನ ಆರ್ ಓ ಘಟಕವಿದೆ.
ಕವಾಡಿಗರ ಹಟ್ಟಿ ಪ್ರದೇಶದಲ್ಲಿ ಒಟ್ಟು 3,206 ಜನಸಂಖ್ಯೆ ಇದೆ. ಅಂದಾಜು 735 ಮನೆಗಳಿವೆ. ಪ್ರಮುಖವಾಗಿ ಕಲುಷಿತ ಕುಡಿಯುವ ನೀರಿನಿಂದ ಸಮಸ್ಯೆ ಉಂಟಾಗಿದ್ದ ಪ್ರದೇಶದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಜನರು ವಾಸಿಸಸುವ 3 ಬೀದಿಗಳು ಮತ್ತು ಇತರೆ ಜನರು ವಾಸಿಸುವ 4 ಬೀದಿಗಳು ಇವೆ.
2023ರ ಆಗಸ್ಟ್ 1ರಂದು ಬೆಳಿಗ್ಗೆ ಅಲ್ಲಿನ ಜನರು ಕಲುಷಿತ ನೀರಿನ ಸೇವಿಸಿದ್ದರು. ಇದರಿಂದಾಗಿ ಐವರು ಮರಣ ಹೊಂದಿದ್ದರು. ಆದರೆ ಓವರ್ ಹೆಡ್ ಟ್ಯಾಂಕ್ ಗೆ ವಿಷ ಬೆರೆಸಿದ್ದಾರೆ ಎಂಬ ಮಾತು ಕಾಡ್ಗಿಚ್ಚಿನಂತೆ ಹಬ್ಬಿತ್ತು. ನಂತರ ರೋಗ ಪೀಡಿತರಿಂದ 11 ಕ್ಲಿನಿಕಲ್ ಸ್ಯಾಂಪಲ್‌ಗಳನ್ನು ಪಡೆದಿತ್ತು. ಆ ಪೈಕಿ 4 ಪ್ರಕರಣಗಳಲ್ಲಿ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ‘ (ಕಾಲರಾ ರೋಗ ಉಂಟು ಮಾಡುವ ಬ್ಯಾಕ್ಟೀರಿಯಾ) ಕಾರಣ ಎಂಬುದು ದೃಢಪಟ್ಟಿತ್ತು. ಅಲ್ಲದೇ ಕಲುಷಿತ ನೀರು ಕಾರಣವಾಗಿರಬಹುದು ಎಂದೂ ಹೇಳಲಾಗಿತ್ತು.

ಅಲ್ಲದೇ ಚಿತ್ರದುರ್ಗ ನಗರಸಭೆಯ ಪೌರಾಯುಕ್ತರೂ ಸಹ ವರದಿಯನ್ನು ನೀಡಿದ್ದರು. ಕವಾಡಿಗರ ಹಟ್ಟಿ ಪ್ರದೇಶದಲ್ಲಿ ನೀರು ಕಲುಷಿತವಾಗಲು ಕಾರಣಗಳನ್ನು ಪಟ್ಟಿ ಮಾಡಿ ವರದಿಯಲ್ಲಿ ವಿವರಿಸಿದ್ದರು. ಹಾಗೂ ಕಾಮಗಾರಿಗಳನ್ನು ಮಾಡಲು ಅಂದಾಜು ಪಟ್ಟಿಯನ್ನೂ ಸಲ್ಲಿಸಿದ್ದರು.
ನಗರಸಭೆ ನೀಡಿರುವ ವರದಿಯಲ್ಲೇನಿತ್ತು?
ಹಾಲಿ ಪಿ ವಿ ಸಿ ಕೊಳವೆ ಮಾರ್ಗವಿದೆ. ಪ್ರತಿ 6 ಮೀಟರ್ ಗೆ 1 ಜೋಡಣೆಯಿದೆ. ಹೀಗಾಗಿ ಈ ಜೋಡಣೆಗಳಲ್ಲಿ ನೀರು ಕಲುಷಿತಗೊಳ್ಳುವ ಸಂಭವವಿದೆ. ಕೆಲವು ಗೃಹ ಸಂಪರ್ಕಗಳು ನೆಲಮಟ್ಟದಿಂದ ಕೆಳಗಿನ ಗುಂಡಿಗಳಲ್ಲಿವೆ. ಪಕ್ಕದಲ್ಲಿಯೇ ತೆರೆದ ಚರಂಡಿಗಳೂ ಎತ್ತರದ ಮಟ್ಟದಲ್ಲಿವೆ. ಹೀಗಾಗಿ ಮಲಿನ ನೀರು ಗುಂಡಿಗಳಲ್ಲಿ ಸಂಗ್ರಹವಾಗಿ ನಂತರ ಕೊಳವೆ ಮಾರ್ಗದೊಳಗೆ ನೀರು ಕಲುಷಿತಗೊಳ್ಳುವ ಸಂಭವವಿದೆ ಎಂದು ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಸೆಪ್ಟಿಕ್ ಟ್ಯಾಂಕ್ ನಿಂದಲೂ ಕಲುಷಿತ
ಪಿವಿಸಿ ವಿತರಣಾ ಜಾಲದ ಕೊಳವೆ ಮಾರ್ಗದಿಂದ ಕೆಲವು ಗೃಹ ಸಂಪರ್ಕಗಳನ್ನು ತೆರೆದ ಚರಂಡಿಯ ಮುಖಾಂತರ ಪಡೆದುಕೊಳ್ಳಲಾಗಿದೆ. ಅವುಗಳಿಗೆ ಎಂಡ್ ಕ್ಯಾಪ್‌ಗಳನ್ನು ಸಹಾ ಅಳವಡಿಸಿರುವುದಿಲ್ಲ. ಇದರಿಂದ ನೀರು ಕಲುಷಿತಗೊಳ್ಳುವ ಸಂಭವವಿದೆ. ಪಿವಿಸಿ ವಿತರಣಾ ಮಾರ್ಗದಲ್ಲಿ ಕೆಲವು ಕಡೆಗಳಲ್ಲಿ ವಾಲ್‌ಗಳು ನೆಲಮಟ್ಟದ ಕೆಳಗಿವೆ. ಇಂತಗಹ ಸ್ಥಳಗಳಲ್ಲಿ ಮಲಿನ ನೀರು ಪ್ರವೇಶಿಸಿ ನೀರು ಕಲುಷಿತಗೊಳ್ಳುವ ಸಂಭವವಿದೆ.
ಅಲ್ಲದೇ ಈ ಪ್ರದೇಶದ ರಸ್ತೆಗಳಲ್ಲಿ ಅನೇಕ ಸೆಪ್ಟಿಕ್ ಟ್ಯಾಂಕ್‌ಗಳಿವೆ. ಇದರಿಂದಲೂ ಸಹ ಪಿವಿಸಿ ವಿತರಣಾ ಜಾಲಕ್ಕೆ ಕಲುಷಿತ ನೀರು ಸೇರ್ಪಡೆಯಾಗುವ ಸಂಭವವಿದೆ. ಮಾಳಪ್ಪನ ಹಟ್ಟಿ ವೃತ್ತದಿಂದ ಜಲಸಂಗ್ರಹಗಾರದವರೆಗೂ ಇರುವ ಪಿ ವಿ ಸಿ ಕೊಳವೆ ಮಾರ್ಗದಲ್ಲಿ ಸುಮಾರು 3 ಕಡೆ ಸೋರಿಕೆ ಇರುವುದು ಕಂಡು ಬಂದಿದೆ ಎಂದು ವರದಿಯಲ್ಲಿ ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಕೊಳವೆಗಳ ಮೇಲೆ ಕಾಂಕ್ರಿಟ್‌ರಸ್ತೆ
ಈ ಪಿ ವಿ ಸಿ ಕೊಳವೆಗಳ ಮೇಲೆ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಒಳಗಡೆ ಆಗಿರಬಹುದಾದ ಸೋರಿಕೆಗಳನ್ನು ಗುರುತಿಸುವುದು ಮತ್ತು ಅವುಗಳನ್ನು ದುರಸ್ತಿಗೊಳಿಸುವುದು ಕಷ್ಟಕರವಾಗಿದೆ. ಆದ್ದರಿಂದ ಈಗಿರುವ ಪಿವಿಸಿ ಸಂಪರ್ಕ ಜಾಲವನ್ನು ಕೈಬಿಡಬೇಕು. ಇನ್ನು ಮುಂದೆ ಕಲುಷಿತ ನೀರಿನ ಗಂಭೀರ ಪ್ರಕರಣಗಳು ಮರುಕಳಿಸದಂತೆ ತಡೆಗಟ್ಟಲು ಬದಲಿ ಕೊಳವೆ ಮಾರ್ಗ ಅಳವಡಿಸಿ ವ್ಯವಸ್ಥಿತವಾಗಿ ಗೃಹ ಸಂಪರ್ಕಗಳನ್ನು ನೀಡುವುದು ಅತೀ ಅವಶ್ಯಕವಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಶಿಥಿಲಗೊಂಡಿರುವ ಟ್ಯಾಂಕ್
ಈ ಓವರ್ ಹೆಡ್ ಟ್ಯಾಂಕ್, 50,000 ಲೀಟರ್ ಸಾಮರ್ಥ್ಯವಿದೆ. ಆದರೆ ಇದು ತುಂಬಾ ಹಳೆಯದಾಗಿದೆ. ಅಲ್ಲದೇ ಶಿಥಿಲಗೊಂಡಿದೆ.

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಲ್ಲಿ ತೆರವುಗೊಳಿಸಬೇಕಾಗಿದೆ. ಹೀಗಾಗಿ ಹೊಸದಾಗಿ ಅಳವಡಿಸಬೇಕಾಗಿರುವ ಕೊಳವೆ ಮಾರ್ಗಕ್ಕೆ ಪೂರಕವಾಗಿ 2.5 ಲಕ್ಷ ಲೀಟರ್ ಸಾಮರ್ಥ್ಯದ ಓ ಹೆಚ್ ಟಿ ನಿರ್ಮಿಸುವುದು ಸೂಕ್ತ ಎಂದು ವರದಿಯಲ್ಲಿ ಅಭಿಪ್ರಾಯಿಸಿರುವುದು ಗೊತ್ತಾಗಿದೆ.
25 ಲೀಟರ್ ಕ್ಯಾನ್‌ಗಳಲ್ಲಿ ನೀರು
ಕವಾಡಿಗರ ಹಟ್ಟಿ ಪ್ರದೇಶದಲ್ಲಿ ಈ ಹಿಂದೆ ಓವರ್ ಹೆಡ್ ಟ್ಯಾಂಕ್‌ನಿಂದ ಹಾಲಲಿಲ ಇರುವ ಪಿ ವಿ ಸಿ ಪೈಪ್ ಮೂಲಕ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. 25 ಲೀಟರ್ ಕ್ಯಾನ್‌ಗಳಲ್ಲಿ ಕುಡಿಯುವ ನೀರನ್ನು ಆರ್ ಓ ಮೂಲಕ ಶುದ್ಧೀಕರಿಸಿ ನೀಡಲಾಗುತ್ತಿದೆ. ಖಾಯಂ ಆಗಿ ಉತ್ತಮವಾದ ಹಾಗೂ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವುದು ಅತೀ ಅವಶ್ಯಕವಾಗಿದೆ. ಈ ಸಂಬಂಧ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಅಂದಾಜು ಪಟ್ಟಿಯನ್ನೂ ಸಲ್ಲಿಸಿರುವುದು ತಿಳಿದು ಬಂದಿದೆ.
2.50 ಲಕ್ಷ ಲೀಟರ್ ಸಾಮರ್ಥ್ಯದ ಓವರ್ ಟ್ಯಾಂಕ್, ಓಟಿಹೆಚ್, ಪೈಪ್‌ಲೈನ್, ಜಿ ಐ ಪೈಪ್‌ಲೈನ್ ಸೇರಿದಂತೆ ಇನ್ನಿತರೆ ಕಾಮಗಾರಿಗಳಿಗೆ 1.89 ಕೋಟಿ ಮತ್ತು ಕವಾಡಿಗರ ಹಟ್ಟಿ ಸೇರಿದಂತೆ ಇನ್ನಿತರೆ ಕಾಲೋನಿಗಳಿಗೆ ನೀರಿನ ಪ್ರಯೋಗಾಲಯ ಮತ್ತಿತರೆ ಪೈಪ್‌ಲೈನ್, ಹಿರೇಕಂದವಾಡಿಯಲ್ಲಿ ದುರಸ್ತಿ ಕಾಮಗಾರಿಗಳೀಗೆ 1.17 ಕೊಟಿ ಸೇರಿ ಒಟ್ಟಾರೆ 3.07 ಕೋಟಿ ರು ಅನುದಾನ ಬಿಡುಗಡೆ ಮಾಡಬೇಕು ಎಂದು ಅಂದಾಜು ಪಟ್ಟಿಯಲ್ಲಿ ಕೋರಿದ್ದರು.
ಆಗ ವೈದ್ಯರು ಹೇಳಿದ್ದೇನು
ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರಿನಿಂದ ಸಂಭವಿಸಿದ ದುರಂತಕ್ಕೆ ‘ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ‘ (ಕಾಲರಾ ರೋಗ ಉಂಟು ಮಾಡುವ ಬ್ಯಾಕ್ಟೀರಿಯಾ) ಕಾರಣ ಎಂಬುದು ಮತ್ತೊಮ್ಮೆ ದೃಢಪಟ್ಟಿದೆ. ಕಲುಷಿತ ನೀರಿನಿಂದ ಅನಾರೋಗ್ಯಕ್ಕೀಡಾದವರ ವಾಂತಿ ಹಾಗೂ ಭೇದಿಯ ಸ್ಯಾಂಪಲ್ ಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಕಲುಷಿತ ನೀರಿನಲ್ಲಿ ಕಾಲರಾ ಉಂಟು ಮಾಡುವ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ಇತ್ತೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್ಒ) ಡಾ. ರಂಗನಾಥ್ ಹೇಳಿದ್ದರು.
ಜಿಲ್ಲಾಮಟ್ಟದ ಪ್ರಯೋಗಾಲಯ ಬಿಡುಗಡೆ ಮಾಡಿದ್ದ ವರದಿಯಲ್ಲೂ ಇದೇ ಅಂಶವಿತ್ತು. ಜಿಲ್ಲಾ ಸರ್ವೇಕ್ಷಣಾ ಸಮಿತಿಯು, ಕಲುಷಿತ ನೀರಿನಿಂದ ಅನಾರೋಗ್ಯಕ್ಕೆ ಈಡಾದವರ ವಾಂತಿ ಹಾಗೂ ಭೇದಿಯ ಸ್ಯಾಂಪರ್ ಸಂಗ್ರಹಿಸಿ ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ಪ್ರಯೋಗದಲ್ಲಿಯೂ ಕಾಲರಾ ಉಂಟು ಮಾಡಬಹುದಾದ ಬ್ಯಾಕ್ಟೀರಿಯಾ ಕಂಡುಬಂದಿರುವುದಾಗಿ ಹೇಳಲಾಗಿತ್ತು.
ಪ್ರಕರಣ ನಡೆದ ನಂತರ ಅಸ್ವಸ್ಥರಾಗಿದ್ದವರಲ್ಲಿ ಮೂವರ ಭೇದಿಯ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಎರಡು ಮಾದರಿಗಳಲ್ಲಿ ವಿಬ್ರಿಯೋ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿತ್ತು.
ಕೆಲವು ದಿನಗಳ ಹಿಂದೆ ಜಿಲ್ಲಾ ಸರ್ವೇಕ್ಷಣಾ ಕಾರ್ಯಪಡೆಯು ಇದೇ ರೀತಿ ಕಾವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರಿನಿಂದ ಅಸ್ವಸ್ಥರಾದವರ ವಾಂತಿ ಹಾಗೂ ಭೇದಿಯ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಅದನ್ನು ಜಿಲ್ಲಾ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದ್ದರು. ಅದರಲ್ಲಿಯ ವಿಬ್ರಿಯೊ ಕಾಲರಾ ಬ್ಯಾಕ್ಟೀರಿಯಾ ಮಾದರಿಯ ಬ್ಯಾಕ್ಟೀರಿಯಾಗಳೇ ಪತ್ತೆಯಾಗಿದ್ದವು ಎಂದು ಹೇಳಲಾಗಿತ್ತು. ಅಲ್ಲಿಗೆ, ಈ ಎರಡೂ ವರದಿಗಳು, ಕಾವಾಡಿಗರ ಹಟ್ಟಿಯಲ್ಲಿ ಉಂಟಾದ ಸಾವು ನೋವುಗಳಿಗೆ ಕಾಲರಾ ಬ್ಯಾಕ್ಟೀರಿಯಾವೇ ಕಾರಣ ಎಂದು ಹೇಳಿತ್ತು.
ಇದೇ ರೀತಿ, ವಾಂತಿ- ಭೇದಿಗೆ ಒಳಗಾಗಿರುವವರ ವಾಂತಿ- ಭೇದಿಯ ಸ್ಯಾಂಪಲ್ ಗಳನ್ನು ಪಡೆದು ಅವುಗಳನ್ನು ಹೈದರಾಬಾದ್ ನಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಈಗಾಗಲೇ ಜಿಲ್ಲಾ ಮಟ್ಟದ ಪ್ರಯೋಗಾಲಯ ಮತ್ತು ಬೆಂಗಳೂರು ಮೆಡಿಕಲ್ ಕಾಲೇಜಿನ ಪ್ರಯೋಗಾಲಯದಲ್ಲಿ ನಡೆಸಿದ್ದ ಪರೀಕ್ಷೆಗಳಲ್ಲಿ ಕಲುಷಿತ ನೀರಿನಲ್ಲಿದ್ದ ಕಾಲರಾ ವೈರಾಣುಗಳೇ ಈ ದುರಂತಕ್ಕೆ ಕಾರಣ ಎಂಬುದನ್ನು ಹೇಳಿದ್ದವು.
2 ವರ್ಷವಾದರೂ ಪೂರ್ಣಗೊಳ್ಳದ ವಿಚಾರಣೆ
ಈ ಪ್ರಕರಣವನ್ನು ಲೋಕಾಯುಕ್ತ ಬಿ ಎಸ್ ಪಾಟೀಲರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

ಪರಿಶೀಲನೆ ನಂತರ 2023ರ ಆಗಸ್ಟ್ 23ರಂದು ಲೋಕಾಯುಕ್ತರು ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಆದರೆ 2 ವರ್ಷವಾದರೂ ಈ ವಿಚಾರಣೆಯು ಪೂರ್ಣಗೊಂಡಿಲ್ಲ. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಸೇರಿದಂತೆ 7 ಅಧಿಕಾರಿಗಳನ್ನು ಪ್ರತಿವಾದಿಯನ್ನಾಗಿಸಿತ್ತು. ಸಂಬಂಧಿತ ಅಧಿಕಾರಿಗಳಿಂದ ಅಭಿಪ್ರಾಯಕ್ಕೆ ಪತ್ರ ಬರೆದಿರುವ ಲೋಕಾಯುಕ್ತವು ಈ ವಿಚಾರಣೆಯನ್ನು ಇದೇ 2025ರ ಅಕ್ಟೋಬರ್ 10ರಂದು ನಡೆಸಲಿದೆ.
ಸಕಾಲಕ್ಕೆ ಮಾಹಿತಿ ಒದಗಿಸದ ಪೌರಾಡಳಿತ ಇಲಾಖೆ
ಈ ದುರ್ಘಟನೆ ಕುರಿತು ಲೋಕಾಯುಕ್ತ ಸಂಸ್ಥೆಯು ಪ್ರಕರಣದ ವಿಚಾರಣೆ ನಡೆಸುತ್ತಿದೆಯಾದರೂ ಪೌರಾಡಳಿತ ಇಲಾಖೆಯು ಸಕಾಲಕ್ಕೆ ಮಾಹಿತಿಯನ್ನೇ ಒದಗಿಸಿರಲಿಲ್ಲ. ಈ ಕುರಿತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳು ಹಲವಾರು ಬಾರಿ ಪತ್ರ, ನೆನಪೋಲೆಗಳನ್ನು ಬರೆದಿದ್ದರೂ ಸಹ ಸೂಕ್ತವಾಗಿ ಸ್ಪಂದಿಸಿರಲಿಲ್ಲ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತಪ್ಪ ತುರಕನೂರ ಅವರು ಲೋಕಾಯುಕ್ತ ಸಂಸ್ಥೆಯ ಸಹಾಯಕ ನಿಬಂಧಕರಿಗೆ 2025ರ ಮೇ ತಿಂಗಳಿನಲ್ಲಿ ವರದಿಯನ್ನೂ ಸಲ್ಲಿಸಿದ್ದರು.
ಲೋಕಾಯುಕ್ತರ ಶಿಫಾರಸ್ಸಿನ ಅನ್ವಯ ಸಲ್ಲಿಕೆಯಾಗಿದ್ದ ವಿಶೇಷ ವರದಿ ಅಧರಿಸಿ ಕೈಗೊಂಡ ಕ್ರಮಗಳನ್ನೂ ಈ ವರದಿಯಲ್ಲಿ ವಿವರಿಸಿದ್ದರು. 41 ಜನರಿಗೆ ಸೂಕ್ತ ಚಿಕಿತ್ಸೆ ನೀಡಲು ನೀಡಿರುವ ಸೂಚನೆ ಮತ್ತು ಈ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳ ಕುರಿತೂ ಈ ವರದಿಯಲ್ಲಿ ವಿವರಿಸಿದ್ದರು.
ಜಿಲ್ಲಾಡಳಿತ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಕೈಗೊಂಡ ಕ್ರಮದ ಕುರಿತು ಪರಾಮರ್ಶಿಸಿ ಸೂಕ್ತ ಮತ್ತು ವಿವರವಾದ ವರದಿಯನ್ನು ಮುಂದಿನ ದಿನಗಳಲ್ಲಿ ಸಲ್ಲಿಸಲಾಗುವುದು ಎಂದು ಲೋಕಾಯುಕ್ತರ ಗಮನಕ್ಕೆ ತಂದಿದ್ದರು.
ಕಾವಾಡಿಗರ ಹಟ್ಟಿಗೆ ಭೇಟಿ ನೀಡಿದ್ದ ಹಲವಾರು ನಾಯಕರು, ತಮ್ಮದೇ ಧಾಟಿಯಲ್ಲಿ ಒಂದೊಂದು ರೀತಿ ಆರೋಪಗಳನ್ನು ಮಾಡಿದ್ದಾರೆ. ಕಾವಾಡಿಗರ ಹಟ್ಟಿಗೆ ನೀರು ಸರಬರಾಜಾಗುವ ನೀರಿನ ಟ್ಯಾಂಕಿಗೆ ವಿಷ ಬೆರೆಸಲಾಗಿತ್ತು, ನಗರಸಭೆಯ ಕೌನ್ಸಿಲರ್ ಹಾಗೂ ಸ್ಥಳೀಯ ನೀರುಗಂಟಿಯ ದ್ವೇಷದಿಂದ ಕಾವಾಡಿಗರ ಹಟ್ಟಿಯ ನೀರಿಗೆ ವಿಷ ಹಾಕಲಾಗಿತ್ತು ಎಂದು ಕೆಲವರು ಆರೋಪ ಮಾಡಿದ್ದನ್ನು ಸ್ಮರಿಸಬಹುದು.