ಬಾರ್‌ ಅಸೋಸಿಯೇಷನ್‌ ಕಟ್ಟಡಗಳಿಗೆ ಕೇಂದ್ರದ ಹಣವಿಲ್ಲ; ಕೇಂದ್ರ ಪುರಸ್ಕೃತ ಯೋಜನೆಗಳಿಗೆ 872.71 ಕೋಟಿ ಕೊಟ್ಟಿಲ್ಲ

centrally sponsored schemes at judicial department karnataka

ಬೆಂಗಳೂರು : ರಾಜ್ಯದಲ್ಲಿನ ಎಲ್ಲ ಬಾರ್‌ ಅಸೋಸಿಯೇಷನ್‌ಗಳಿಗೆ (ವಕೀಲರ ಸಂಘ) ಸ್ವಂತ ಕಟ್ಟಡ ಒದಗಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರದಿಂದ ಅಸಹಕಾರ ವ್ಯಕ್ತವಾಗಿದೆ. ಈ ಕಟ್ಟಡಗಳ ನಿರ್ಮಾಣಕ್ಕೆ ಕೇಂದ್ರ  ಹಣ ನೀಡಲು ಒಪ್ಪಿಲ್ಲ. ಅಲ್ಲದೆ, ಕೇಂದ್ರ ಪುರಸ್ಕೃತ ಯೋಜನೆಯಡಿ ಕಟ್ಟಡಗಳ ನಿರ್ಮಾಣಕ್ಕೆ ಬಿಡುಗಡೆ ಮಾಡಬೇಕಾಗಿದ್ದ  872.71 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿದೆ.

 

ಸದ್ಯ 27.99 ಕೋಟಿ ರು. ವೆಚ್ಚದಲ್ಲಿ ರಾಜ್ಯದಲ್ಲಿ ಬಾರ್‌ ಅಸೋಸಿಯೇಷನ್‌ನ ಏಳು ಕಟ್ಟಡಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅಲ್ಲದೆ, ಇನ್ನೂ 2 ಕಟ್ಟಡಗಳ ನಿರ್ಮಿಸಲು ಒಪ್ಪಿಗೆ ನೀಡಲಾಗಿದ್ದು, ಇದಕ್ಕೆ 2.65 ಕೋಟಿ ರು. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

 

ಈ ಎಲ್ಲ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡಲು ಒಪ್ಪದೇ ಇರುವುದರಿಂದ ರಾಜ್ಯ ಸರ್ಕಾರವೇ ಹಣವನ್ನು ಹೊಂದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 2014-2015 ನೇ ಸಾಲಿನಿಂದ 2024-25ನೇ ಸಾಲಿನ ವರೆಗೆ 41 ಬಾರ್‌ ಅಸೋಸಿಯೇಷನ್‌ನ ಕಟ್ಟಡಗಳನ್ನು ಪೂರ್ಣಗೊಳಿಸಲಾಗಿದ್ದು, ಇದಕ್ಕೆ ರಾಜ್ಯ ಸರ್ಕಾರವು 103.87 ವಿನಿಯೋಗಿಸಿದೆ.

 

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆ) ವಿಭು ಬಖ್ರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಗುರುವಾರದಂದು (ಸೆ.4) ನ್ಯಾಯಾಂಗ ವ್ಯವಸ್ಥೆಗೆ ಸಂಬಂಧಿಸಿದಂತೆ  ಉನ್ನತ ಮಟ್ಟದ ಸಭೆ ನಡೆದಿದ್ದು, ಈ ಸಭೆಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಹೈಕೋರ್ಟ್‌ನ ರಿಜಿಸ್ಟ್ರಾರ್  ಜನರಲ್‌ಗೆ ಪತ್ರ ಬರೆದಿದ್ದರು. ಈ ಪತ್ರದಲ್ಲಿ ಈ ಮಾಹಿತಿಯನ್ನು ಒದಗಿಸಲಾಗಿದೆ.

 

ಮುಖ್ಯ ಕಾರ್ಯದರ್ಶಿಗಳು ಬರೆದ ಪತ್ರದ ಪ್ರತಿ ʻದಿ ಫೈಲ್‌ʼಗೆ ಲಭ್ಯವಾಗಿದೆ.

 

centrally sponsored schemes at judicial department karnataka

 

ಹೊಸದಾಗಿ ನಿರ್ಮಾಣಗೊಂಡಿರುವ ನ್ಯಾಯಾಲಯಗಳ ಕಟ್ಟಡಗಳಿಗೆ  ಮತ್ತು ನ್ಯಾಯಾಲಯಗಳಿಗೆ ಅಗತ್ಯವಾಗಿರುವ ಲಿಫ್ಟ್‌ ಅಳವಡಿಕೆಗೆ ಹಾಗೂ ಪೀಠೋಪಕರಣಗಳನ್ನು ಒದಗಿಸಲು ಕೂಡ ಕೇಂದ್ರ ಸರ್ಕಾರ ಹಣ ನೀಡುವುದಿಲ್ಲ ಎಂದು ತಿಳಿಸಿದೆ. ಈ ಖರ್ಚನ್ನೂ ರಾಜ್ಯ ಸರ್ಕಾರವೇ ಏಕಾಂಗಿಯಾಗಿ  ಭರಿಸಬೇಕಾಗಿದೆ.

 

ಕೇಂದ್ರದಿಂದ ಬರಬೇಕಿದೆ 872.71 ಕೋಟಿ

 

ರಾಜ್ಯದಲ್ಲಿನ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯವಾಗಿರುವ ಕಟ್ಟಡಗಳ ನಿರ್ಮಾಣ ಮತ್ತು ನ್ಯಾಯಾಲಯಗಳಿಗೆ ಸೌಕರ್ಯ ಒದಗಿಸಲು ಸದ್ಯ ಒಂದು ಸಾವಿರ ಕೋಟಿಗೂ ಹೆಚ್ಚು ಹಣ ಬೇಕಾಗಿದೆ. ಈ ನಡುವೆ ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಯಡಿ  ನೀಡಬೇಕಾಗಿದ್ದ ತನ್ನ ಪಾಲಿನ 872.71 ಕೋಟಿ ರು.ಗಳನ್ನು ಬಾಕಿ ಇರಿಸಿಕೊಂಡಿರುವುದು ಈ ಪತ್ರದ ಜತೆಯಲ್ಲಿ ಲಗತ್ತಿಸಿರುವ ದಾಖಲೆಗಳಿಂದ ಸ್ಪಷ್ಟವಾಗಿದೆ.

 

ಹೈಕೋರ್ಟ್‌ನ  ಕಟ್ಟಡ ಸಮಿತಿಯ ನೇತೃತ್ವದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯವಾಗಿರುವ ಕಟ್ಟಡಗಳ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿದ್ದು, ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ. ಈ ಹಿಂದೆ ಕೇಂದ್ರ ಮತ್ತು ರಾಜ್ಯದ ಪಾಲು 75:25 ಅನುಪಾತದಲ್ಲಿರುತ್ತಿತ್ತು. 2015-2016 ನೇ ಸಾಲಿನಿಂದ ಈ ಅನುಪಾತದಲ್ಲಿ ಬದಲಾವಣೆ ಮಾಡಲಾಗಿದ್ದು, ಈಗ ಕೇಂದ್ರ ಮತ್ತು ರಾಜ್ಯದ ಪಾಲು 60:40 ಆಗಿದೆ.

 

ಕಳೆದ ಹತ್ತು ವರ್ಷಗಳಲ್ಲಿ ಅಂದರೆ 2012-13 ರಿಂದ 2024-25ನೇ ಸಾಲಿನ ವರೆಗೆ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯ ಕಟ್ಟಡ ಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರವು 2,831.24 ಕೋಟಿ ರು. ವಿನಿಯೋಗಿಸಿದೆ. ಇದರಲ್ಲಿ ರಾಜ್ಯದ ಪಾಲು 1,011.73 ಕೋಟಿ ರು. ಮಾತ್ರವಾಗಿತ್ತು. ಅದರೂ ರಾಜ್ಯ ಸರ್ಕಾರ 1,884.43 ಕೋಟಿಯನ್ನು ರು.ಗಳನ್ನು ಬಿಡುಗಡೆ ಮಾಡಿತ್ತು.

 

centrally sponsored schemes at judicial department karnataka

 

ಇದರಲ್ಲಿ ಕೇಂದ್ರ ಸರ್ಕಾರದ ಪಾಲು 1,819.52 ಕೋಟಿ ರು.ಗಳಾಗಿದೆ. ಆದರೆ ಇದುವರೆಗೂ ಕೇಂದ್ರ ಸರ್ಕಾರ 946 ಕೋಟಿ ರು.ಗಳನ್ನಷ್ಟೇ ಬಿಡುಗಡೆ ಮಾಡಿದ್ದು, ಉಳಿದ 872.71 ಕೋಟಿ ರು.ಗಳನ್ನು ಬಾಕಿ ಉಳಿಸಿಕೊಂಡಿಡದೆ ಎಂದು ಈ ದಾಖಲೆಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

 

ಕೇಂದ್ರ ಸರ್ಕಾರವು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಸಂಬಂಧಿಸಿದಂತೆ 22 ಸಾವಿರ  ಕೋಟಿ ರು. ಬಿಡುಗಡೆ ಮಾಡದೆ ಬಾಕಿ ಉಳಿಸಿಕೊಂಡಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ಆಗಾಗ ಟೀಕೆ ಮಾಡುತ್ತಲೇ ಇರುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಅಭಿವೃದ್ಧಿಗೆ ಕೇಂದ್ರ ಅನುದಾನ ನೀಡುತ್ತಿದ್ದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗುತ್ತಿದೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ.

 

ಇನ್ನೂ ಬೇಕು 1,413.90 ಕೋಟಿ

 

ರಾಜ್ಯದಲ್ಲಿನ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯವಾಗಿರುವ ಹೊಸ ಕಟ್ಟಡಗಳ  ನಿರ್ಮಾಣಕ್ಕೆ 1,413.90 ಕೋಟಿ ರು.ಗಳನ್ನು ಒದಗಿಸುವಂತೆ ರಾಜ್ಯ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಮನವಿ ಮಾಡಿರುವುದು ಸರ್ಕಾರದ ಮುಖ್ಯ ಕಾರ್ಯದರ್ಶಿ ಬರೆದ ಪತ್ರದ ಜತೆಗೆ ಲಗತ್ತಿಸಿರುವ ದಾಖಲೆಗಳಿಂದ ಗೊತ್ತಾಗಿದೆ.

 

ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಿರುವ ಯೋಜನೆಗಳಿಗೆ ಚಾಲನೆ ನೀಡಲು ಮತ್ತು ಈಗಾಗಲೇ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಲು 491.00 ಕೋಟಿ ರು.ಗಳ ಅಗತ್ಯವಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಕೇವಲ 175.00 ಕೋಟಿ ರು.ಗಳನ್ನು ತೆಗೆದಿರಿಸಲಾಗಿದ್ದು, ಉಳಿದ ಹಣವನ್ನು ಹೊಂದಿಸಬೇಕಾಗಿದೆ ಎಂದು ಈ ದಾಖಲೆಗಳಲ್ಲಿ ಹೇಳಲಾಗಿದೆ.

 

ಹೀಗಾಗಿ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್  ಸರ್ಕಾರಕ್ಕೆ ಸಲ್ಲಿಸಿರುವ ಹೊಸ ಕಟ್ಟಡಗಳ ನಿರ್ಮಾಣದ ಪ್ರಸ್ತಾಪವನ್ನು ಆರ್ಥಿಕ ಇಲಾಖೆಗೆ ಕಳಿಸಿಕೊಡಲಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಈ ಪತ್ರದಲ್ಲಿ ತಿಳಿಸಿದ್ದಾರೆ.

 

centrally sponsored schemes at judicial department karnataka

 

 

ಈಗಾಗಲೇ ಒಪ್ಪಿಗೆ ನೀಡಿರುವ ಪ್ರಮುಖ ಯೋಜನೆಗಳಲ್ಲಿ ಮಂಗಳೂರಿನಲ್ಲಿ ನ್ಯಾಯಾಂಗ ಸಂಕೀರ್ಣ ನಿರ್ಮಾಣವು ಸೇರಿದೆ. ಇದಕ್ಕೆ 60.20 ಕೋಟಿ ರು. ಖರ್ಚಾಗಬಹುದೆಂದು ಅಂದಾಜಿಸಲಾಗಿದ್ದು, ಈ ಯೋಜನೆ ತಾಂತ್ರಿಕೆ ಒಪ್ಪಿಗೆ ಪಡೆಯುವ ಹಂತದಲ್ಲಿದೆ.

 

ಇದಲ್ಲದೆ, ಗೌರಿಬಿದನೂರಿನಲ್ಲಿ ನ್ಯಾಯಾಲಯಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.  ಇದರ ಅಂದಾಜು ವೆಚ್ಚ 12.02 ಕೋಟಿ ರು. ವಿವಾದದ ಕಾರಣದಿಂದಾಗಿ ಈ ಯೋಜನೆ ಆರಂಭವಾಗಿಲ್ಲ. ವಿರಾಜಪೇಟೆಯಲ್ಲಿ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣ ಮಾಡುವ ಯೋಜನೆಗೂ ಒಪ್ಪಿಗೆ ನೀಡಲಾಗಿದೆ. ನ್ಯಾಯಾಲಯದ ಅಧಿಕಾರಿಗಳು ಪರ್ಯಾಯ ಭೂಮಿಯನ್ನು ಒದಗಿಸುವಂತೆ ಕೋರಿರುವುದರಿಂದ ಇದರ ನಿರ್ಮಾಣ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ. ಈ ಕಟ್ಟಡದ ನಿರ್ಮಾಣಕ್ಕೆ 18.50 ಕೋಟಿ ರು. ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.

 

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿಯೂ ಹೊಸ ನ್ಯಾಯಾಲಯದ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದರ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ 12 ಕೋಟಿ ರು. ಖರ್ಚಾಗಬಹುದೆಂದು ಅಂದಾಜಿಸಲಾಗಿದೆ.

 

ನಡೆಯುತ್ತಿದೆ  264 ಕೋಟಿಗಳ ಕಾಮಗಾರಿ

 

ಸದ್ಯ  ರಾಜ್ಯದ ವಿವಿಧ ಭಾಗಗಳಲ್ಲಿ  264.89 ಕೋಟಿ ರು. ಅಂದಾಜು ಮೊತ್ತದ 34 ನಿರ್ಮಾಣ ಕಾಮಗಾರಿಗಳು ನಡೆಯುತ್ತಿವೆ. ಇದರಲ್ಲಿ 20 ನ್ಯಾಯಾಲಯದ ಕಟ್ಟಡಗಳು (ಅಂದಾಜು ಮೊತ್ತ 217.30 ಕೋಟಿ), 7 ಬಾರ್‌ ಅಸೋಸಿಯೇಷನ್‌ನ ಕಟ್ಟಡಗಳು (ಅಂದಾಜು ಮೊತ್ತ 27.99 ಕೋಟಿ) ಮತ್ತು 7 ವಸತಿ ಗೃಹಗಳು (ಅಂದಾಜು ಮೊತ್ತ 19.60 ಕೋಟಿ) ಸೇರಿವೆ.

 

ಮುಖ್ಯವಾಗಿ 80 ಕೋಟಿ ರು. ಅಂದಾಜು ವೆಚ್ಚದಲ್ಲಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲದಲ್ಲಿ, ʻನ್ಯಾಯ ದೇಗುಲʼ ಕಟ್ಟಡ (ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ) ನಿರ್ಮಾಣ ಮಾಡಲಾಗುತ್ತಿದೆ. ಕೊಪ್ಪಳದಲ್ಲಿ ನ್ಯಾಯಾಲಯದ  ಹೊಸ ಕಟ್ಟಡ ( ಅಂದಾಜು ಮೊತ್ತ 50 ಕೋಟಿ), ದಾವಣಗೆರೆ ನ್ಯಾಯಾಲಯದಲ್ಲಿನ ಹೊಸ ಕಟ್ಟಡ ( ಅಂದಾಜು ಮೊತ್ತ 25 ಕೋಟಿ) ನಿರ್ಮಾಣವಾಗುತ್ತಿವೆ.

 

centrally sponsored schemes at judicial department karnataka

 

ತಲಾ 25 ಕೋಟಿ ರು. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೋಲಾರ ಮತ್ತು ರಾಯಚೂರಿನ ನ್ಯಾಯಾಲಯದ ಹೊಸ ಕಟ್ಟಡಗಳ ಕಾಮಗಾರಿ, ಬಾಗಲಕೋಟೆಯ ನವನಗರದಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಲಯದ ಹೊಸ ಕಟ್ಟಡ ( ಅಂದಾಜು ಮೊತ್ತ 17.60 ಕೋಟಿ) ಮತ್ತು ಏಳು ತಾಲೂಕುಗಳಲ್ಲಿನ ನ್ಯಾಯಾಲಯದ ಹೊಸ ಕಟ್ಟಡಗಳ ಕಾಮಗಾರಿಗಳು ಮುಂದುವರಿದಿವೆ  ಎಂದು ಮುಖ್ಯ ಕಾರ್ಯದರ್ಶಿಗಳ ಪತ್ರದೊಂದಿಗೆ ಲಗತ್ತಿಸಿರುವ ದಾಖಲೆಗಳಿಂದ ತಿಳಿದು ಬಂದಿದೆ.

 

10 ಹೊಸ ಯೋಜನೆಗಳಿಗೆ ಒಪ್ಪಿಗೆ

 

ಈಗಾಗಲೇ ರಾಜ್ಯದಲ್ಲಿನ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯವಾಗಿರುವ  10 ನಿರ್ಮಾಣ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇವುಗಳ ಒಟ್ಟ ಅಂದಾಜು ವೆಚ್ಚ 126. 18 ಕೋಟಿ ರು.ಗಳಾಗಿವೆ.

 

ಇದರಲ್ಲಿ 111.72 ಕೋಟಿ ರು. ಅಂದಾಜು ವೆಚ್ಚದ 5 ನ್ಯಾಯಾಲಯದ ಕಟ್ಟಡಗಳ ನಿರ್ಮಾಣ, 2.65 ಕೋಟಿ ರು. ವೆಚ್ಚದಲ್ಲಿನ 2 ಬಾರ್‌ ಅಸೋಸಿಯೇಷನ್‌ ಕಟ್ಟಡಗಳ  ನಿರ್ಮಾಣ ಮತ್ತು 11.81 ಕೋಟಿ ರು. ವೆಚ್ಚದ 3 ವಸತಿ ಗೃಹಗಳ ನಿರ್ಮಾಣ ಸೇರಿದೆ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.

 

centrally sponsored schemes at judicial department karnataka

 

ಹತ್ತು ವರ್ಷಗಳಲ್ಲಿ 218 ಕಟ್ಟಡ ನಿರ್ಮಾಣ

 

ಕಳೆದ ಹತ್ತು ವರ್ಷಗಳಲ್ಲಿ ಅಂದರೆ 2014-15 ರಿಂದ 2024-25ರ ವರೆಗೆ ರಾಜ್ಯದ ನ್ಯಾಯಾಂಗ ವ್ಯವಸ್ಥೆಗೆ ಅಗತ್ಯವಾಗಿರುವ 218 ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ಒಟ್ಟು 1,232.07 ಕೋಟಿ ರು. ಖರ್ಚು ಮಾಡಲಾಗಿದೆ.

 

ಇದರಲ್ಲಿ 360.87 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 24 ಜಿಲ್ಲಾ ನ್ಯಾಯಾಲಯಗಳ ಕಟ್ಟಡ, 602.91 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ 66 ತಾಲೂಕು ನ್ಯಾಯಾಲಯಗಳ ಕಟ್ಟಡ, 80.65 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 31 ಜಿಲ್ಲಾ ವಸತಿ ಗೃಹಗಳು ಮತ್ತು 164.42 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 56 ತಾಲೂಕು ವಸತಿ ಗೃಹಗಳು ಸೇರಿವೆ.

 

ಮುಖ್ಯವಾಗಿ ಬಳ್ಳಾರಿಯಲ್ಲಿ 121 .90 ಕೋಟಿ ರು. ವೆಚ್ಚದಲ್ಲಿ ನ್ಯಾಯಾಲಯ ಸಂಕೀರ್ಣ  ನಿರ್ಮಿಸಲಾಗಿದೆ. ಹಾಸನದಲ್ಲಿ 72 ಕೋಟಿ ರು. ವೆಚ್ಚದಲ್ಲಿ,  ಮಡಿಕೇರಿಯಲ್ಲಿ 36.70 ಕೋಟಿ ರು. ವೆಚ್ಚದಲ್ಲಿ ಹಾಗೂ ಕನಕಪುರದಲ್ಲಿ  32.50 ಕೋಟಿ ವೆಚ್ಚದಲ್ಲಿ  ನ್ಯಾಯಾಲಯದ ಕಟ್ಟಡಗಳನ್ನು ನಿರ್ಮಿಸಲಾಗಿದೆ.

 

ಕೇಂದ್ರ ಪುರಸ್ಕೃತ ಯೋಜನೆ; 22,472.25 ಕೋಟಿ ರು ಬಾಕಿ ಉಳಿಸಿಕೊಂಡ ಕೇಂದ್ರ, ರಾಜ್ಯ ಸರ್ಕಾರ

 

2024-25ನೇ ಸಾಲಿಗೆ ಸಂಬಂಧಿಸಿದಂತೆ ಕೇಂದ್ರ ಪುರಸ್ಕೃತ ಯೋಜನೆಗಳಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಒದಗಿಸಿಕೊಂಡಿದ್ದ ಒಟ್ಟಾರೆ 56,545.97 ಕೋಟಿ ರು ಪೈಕಿ ಜನವರಿ ಅಂತ್ಯದವರೆಗೆ 34,073.72 ಕೋಟಿ ರು. ಗಳನ್ನು ಮಾತ್ರ ಕೇಂದ್ರ ಸರ್ಕಾರ  ಬಿಡುಗಡೆ ಮಾಡಿತ್ತು. ಕೇಂದ್ರವು ಬಿಡುಗಡೆಗೆ ಇನ್ನು 22,472.25 ಕೋಟಿ ರು ಬಾಕಿ ಇರಿಸಿಕೊಂಡಿದೆ. ಈ ಕುರಿತು ʻದಿ ಫೈಲ್‌ʼ ವಿಶೇಷ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts