ಬೆಂಗಳೂರು : ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದಾಗಿ ಪ್ರಕಟಿಸಿದ್ದ ರಾಜ್ಯ ಸರ್ಕಾರವು ಇದುವರೆಗೂ ಈ ಸಂಬಂಧ ಅಧಿಸೂಚನೆ ಹೊರಡಿಸಿಲ್ಲ ಎಂಬ ಅಧಿಕೃತ ಮಾಹಿತಿಯನ್ನು ʻದಿ ಫೈಲ್ʼ ಹೊರಗೆಡುವುತ್ತಿದ್ದಂತೆಯೇ ರೈತರು ಮತ್ತು ಹೋರಾಟಗಾರರು ಆಘಾತ ವ್ಯಕ್ತಪಡಿಸಿದ್ದಾರೆ.
ಭೂಸ್ವಾಧೀನವನ್ನು ಕೈಬಿಡಲು ಅಧಿಸೂಚನೆ ಹೊರಡಿಸಬೇಕಾಗಿದ್ದ ಸರ್ಕಾರ, ಬದಲಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳಿಗೆ ಅವಕಾಶ ನೀಡಿರುವುದು ಹೋರಾಟಗಾರರನ್ನು ಇನ್ನಷ್ಟು ಕೆರಳಿಸಿದೆ.
ದೇವನಹಳ್ಳಿ ತಾಲೂಕಿನ 13 ಹಳ್ಳಿಗಳ 1,777 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತದ ಭೂಸ್ವಾದೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ಒತ್ತಾಯಿಸಿ, ರೈತರು 1,198 ದಿನಗಳ ಸುದೀರ್ಘ ಹೋರಾಟ ನಡೆಸಿದ್ದರು. ಈ ಹೋರಾಟಕ್ಕೆ ನಾಡಿನ ರೈತ, ದಲಿತ, ಪ್ರಗತಿಪರ, ಜನಪರ ಸಂಘಟನೆಗಳು ಬೆಂಬಲ ನೀಡಿದ್ದವು. ಈ ಐಕ್ಯ ಹೋರಾಟಕ್ಕೆ ಮಣಿದಿದ್ದ ರಾಜ್ಯ ಸರ್ಕಾರ, ಕೊನೆಗೂ ಕಳೆದ ಜುಲೈ 15 ರಂದು ಈ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈ ಬಿಡುವುದಾಗಿ ಪ್ರಕಟಿಸಿತ್ತು.
ಅಂದು ವಿಧಾನಸೌಧದ ಸಭಾಂಗಣದಲ್ಲಿ ಅಧಿಕಾರಿಗಳ ಹಾಗೂ ರೈತ ಮುಖಂಡರ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ, ʻʻರೈತರ ಹಿತದೃಷ್ಟಿಯಿಂದ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆʼʼ ಎಂದು ಪ್ರಕಟಿಸಿದ್ದರು.
ಈ ಪ್ರಕಟಣೆ ಹೊರಬಿದ್ದು ಒಂದೂವರೆ ತಿಂಗಳಾದರೂ ರಾಜ್ಯ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟು ಅಧಿಸೂಚನೆ ಹೊರಡಿಸಿಲ್ಲ. ಆರ್‌ಟಿಐ ಮೂಲಕ ʻದಿ ಫೈಲ್ʼ ಮಾಹಿತಿ ಕೇಳಿದಾಗ ಸರ್ಕಾರ ಈ ವಿಷಯ ಬಹಿರಂಗಪಡಿಸಿದೆ. ಈ ಸಂಬಂಧದ ಆರ್‌ಟಿಐ ಅರ್ಜಿಗೆ, ಉತ್ತರಿಸಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ʻʻಅಂತಿಮ ಅಧಿಸೂಚನೆಯಿಂದ ಕೈಬಿಡುವ ಬಗ್ಗೆ ಅಧಿಸೂಚನೆಯನ್ನು ಹೊರಡಿಸಿರುವುದಿಲ್ಲʼʼ ಎಂದು ಉತ್ತರಿಸಿದೆ. ಈ ಕುರಿತು ʻದಿ ಫೈಲ್ʼ ವರದಿ ಪ್ರಕಟಿಸಿತ್ತು.
ದೇವನಹಳ್ಳಿ; ಇನ್ನೂ ರದ್ದಾಗಿಲ್ಲ ಭೂ ಸ್ವಾಧೀನ ಅಂತಿಮ ಅಧಿಸೂಚನೆ, ತಿಂಗಳಾದರೂ ಹೊರಬಿದ್ದಿಲ್ಲ ಪರಿಷ್ಕೃತ ಆದೇಶ
ಈಗಾಗಲೇ ರಾಜ್ಯ ಸರ್ಕಾರವು ಈ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದನ್ನು ಕೈ ಬಿಟ್ಟು ಅಧಿಸೂಚನೆ ಹೊರಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಿರುತ್ತದೆ. ಇಲಾಖೆಯ ಉನ್ನತ ಅಧಿಕಾರಿಯೊಬ್ಬರ ಪ್ರಕಾರ ಮುಖ್ಯಮಂತ್ರಿ ನೀಡಿರುವ ಭರವಸೆಯನ್ನು ಅನುಷ್ಠಾನಗೊಳಿಸಲು ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಮುಂದಾಗಿಲ್ಲ. ಪರಿಷ್ಕೃತ ಅಧಿಸೂಚನೆ ಹೊರಡಿಸುವ ಸಂಬಂಧ ಅಧಿಕಾರಿಗಳ ಮಟ್ಟದಲ್ಲಿ ತಿಂಗಳಾದರೂ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ಹೀಗಾಗಿ ಸಚಿವ ಸಂಪುಟಕ್ಕೆ ಮಂಡಿಸಲು ಕಡತವೂ ಸಿದ್ಧಗೊಂಡಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಮೇಲೆ ಅಪಾರ ಭರವಸೆ ಇಟ್ಟಿದ್ದ ಹೋರಾಟಗಾರರಿಗೆ, ಸರ್ಕಾರದ ಈ ನಡೆಯ ಕುರಿತು ʻದಿ ಫೈಲ್ʼ ಮಾಡಿದ ವರದಿ ಎಚ್ಚರ ಮೂಡಿಸಿದೆ. ಈ ಕುರಿತು ʻದಿ ಫೈಲ್ʼ ನೊಂದಿಗೆ ಮಾತನಾಡಿದ ಭೂಸ್ವಾಧೀನ ಹೋರಾಟ ಸಮಿತಿಯ ಸಂಚಾಲಕ, ದಲಿತ ನಾಯಕ ಕಾರಳ್ಳಿ ಶ್ರೀನಿವಾಸ್, ʻʻನುಡಿದಂತೆ ನಡೆಯುತ್ತೇವೆ ಎಂದು ಹೇಳಿ, ಎಷ್ಟೆಲ್ಲಾ ಬೇಕೋ ಅಷ್ಟು ಪ್ರಚಾರ ಪಡೆದುಕೊಂಡ ಸರ್ಕಾರ, ನಾವು ರೈತರ ಪರ, ರೈತರ ಹಿತಾಸಕ್ತಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಭರವಸೆ ನೀಡಿತ್ತು. ಮುಖ್ಯಮಂತ್ರಿಗಳ ಮಾತಿಗೇ ಇವತ್ತು ಆಡಳಿತ ವರ್ಗ ಕಿಂಚಿತ್ತೂ ಬೆಲೆ ನೀಡುತ್ತಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತಿದೆ. ಇದು ಖಂಡನೀಯʼʼ ಎಂದು ಹೇಳಿದ್ದಾರೆ.
ಈ ಕುರಿತು ʻದಿ ಫೈಲ್ʼ ವರದಿ ಮಾಡಿರುವುದಕ್ಕೆ ಮೆಚ್ಚುಗೆ ಸೂಚಿಸಿದ ಅವರು, ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳನ್ನೂ ಕೈ ಬಿಡಬೇಕು. ಈ ಕೂಡಲೇ ಅಂತಿಮ ಅಧಿಸೂಚನೆಯನ್ನು ಹಿಂದಕ್ಕೆ ಪಡೆದು, ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿರುವ ಕುರಿತು ಅಧಿಸೂಚನೆ ಹೊರಡಿಸಬೇಕು. ಇಲ್ಲದಿದ್ದರೆ ಹೋರಾಟ ನಮಗೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಟ್ಟಿರುವ ಕುರಿತು ಅಧಿಸೂಚನೆ ಹೊರಡಿಸುವಂತೆ ನಾವು ಮುಖ್ಯಮಂತ್ರಿಗಳ ಕಚೇರಿಯ ಮೇಲೆ ಒತ್ತಡ ಹೇರುತ್ತಲೇ ಇದ್ದೇವೆ. ಆದರೂ ಕೆಐಡಿಬಿಯು ಭೂ ಸ್ವಾಧೀನ ಮುಂದುವರಿಸಲು ಕ್ರಮತೆಗೆದುಕೊಂಡಿರುವುದು ಖಂಡನೀಯ ಎಂದು ಹೇಳಿರುವ ರೈತ ನಾಯಕ , ʻಸಂಯುಕ್ತ ಹೋರಾಟ ಕರ್ನಾಟಕʼದ ಕೋರ್ ಕಮಿಟಿ ಸದಸ್ಯ ಎಚ್. ಆರ್. ಬಸವರಾಜಪ್ಪ, ಮುಖ್ಯ ಮಂತ್ರಿಗಳು ಮಾತಿಗೆ ತಪ್ಪಿದರೆ ದೊಡ್ಡ ಆಪಾದನೆ ಹೋರಾಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ವಿಷಯದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮೀನ-ಮೇಷ ಎಣಿಸುತ್ತಿದ್ದಾರೆ ಎಂಬ ಮಾಹಿತಿ ನಮಗೂ ಇದೆ. ಭೂ ಸ್ವಾಧೀನ ಅಧಿಸೂಚನೆಯನ್ನು ಕೈ ಬಿಡದೇ ಹೋದಲ್ಲಿ ಮತ್ತೆ ಐಕ್ಯ ಹೋರಾಟವನ್ನು ಆರಂಭಿಸುತ್ತೇವೆ. ಸೆಪ್ಟೆಂಬರ್ 11 ರಂದು ʻಸಂಯುಕ್ತ ಹೋರಾಟ ಕರ್ನಾಟಕʼದ (ವಿವಿಧ ಸಂಘಟನೆಗಳ ಒಕ್ಕೂಟ) ಕೋರ್ ಕಮಿಟಿಯ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಈ ಕುರಿತು ಚರ್ಚಿಸಿ ಮುಂದಿನ ಹೋರಾದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದು ʻದಿ ಫೈಲ್ʼ ನೊಂದಿಗೆ ಮಾತನಾಡುತ್ತ ಹೇಳಿದ್ದಾರೆ.
ಮುಖ್ಯಮಂತ್ರಿಗಳೇ, ಎಂಬಿ ಪಾಟೀಲರೇ, ದೇವನಹಳ್ಳಿ ಭೂ ಹೋರಾಟಕ್ಕೆ ಭರವಸೆ ನೀಡಿ ತಿಂಗಳು ಕಳೆದರೂ… De-notification ಮಾಡದೆ… ಮತ್ತೆ… ಭೂಸ್ವಾಧೀನ, ದರ ನಿಗದಿ ಸಭೆಗಳ ಸೂಚನೆಯನ್ನು ಜಾರಿ ಮಾಡುತ್ತಿರುವುದು ದ್ರೋಹವಲ್ಲವೇ? ಎಂದು ಪ್ರಗತಿಪರ ಚಿಂತಕ, ಹೋರಾಟಗಾರ ಶಿವಸುಂದರ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ದೇವನಹಳ್ಳಿಯಲ್ಲಿ ಮತ್ತೆ ಹೋರಾಟ
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿನ ಭೂ ಸ್ವಾಧೀನವನ್ನು ಕೈ ಬಿಟ್ಟಿರುವುದಾಗಿ ಸರ್ಕಾರ ಪ್ರಕಟಿಸಿದ್ದರೂ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ.
ಭೂ ಸ್ವಾದೀನಕ್ಕೆ ಒಳಪಟ್ಟಿದ್ದ 13 ಹಳ್ಳಿಗಳ ಪೈಕಿ ಹ್ಯಾಡಾಳ, ಗೋಕರೆಬಚ್ಚೇನಹಳ್ಳಿ ಗ್ರಾಮಗಳ 439 ಎಕರೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 6 ರಂದು ದರ ನಿಗದಿ ಸಭೆಯನ್ನು ಬೆಂಗಳೂರಿನಲ್ಲಿ ನಿಗದಿಪಡಿಸಿದ್ದಾರೆ. ಈ ಸಂಬಂಧ ರೈತರಿಗೂ ನೋಟಿಸ್ ನೀಡಲಾಗಿದೆ.
ಕೆಐಎಡಿಬಿ ಕಾಯದೆ ಕಲಂ 29 (2) ರಂತೆ ವಿಶೇಷ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಮಹರ್ಷಿ ಅರವಿಂದ ಭವನದದಲ್ಲಿ ಬೆಳಗ್ಗೆ 11 ಗಂಟೆಗೆ ಈ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ಭೂ ಮಾಲೀಕರೊಂದಿಗೆ ಚರ್ಚಿಸಿ, ಬೆಲೆ ನಿಗದಿ ಮಾಡಲು ಕೆಐಎಡಿಬಿಯ ವಿಶೇಷ ಭೂಸ್ವಾಧೀನಾಧಿಕಾರಿಗಳು ಮುಂದಾಗಿದ್ದಾರೆ.
ಸರ್ಕಾರದ ಈ ಕ್ರಮವನ್ನು ಖಂಡಿಸಿ ಈಗಾಗಲೇ ಹೋರಾಟ ಆರಂಭಿಸಿರುವ ರೈತರು ದೇವನಹಳ್ಳಿಯಲ್ಲಿ ಮಂಗಳವಾರವೂ (ಸೆ.2) ಪ್ರತಿಭಟನೆ ನಡೆಸಿದ್ದಾರೆ.