ಬೆಂಗಳೂರು : ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ ಟೆಂಡರ್ ಷರತ್ತುಗಳಿಗೆ ವ್ಯತಿರಿಕ್ತವಾಗಿ ಬೆಲೆ ಹೊಂದಾಣಿಕೆ ಮಾಡಿ, ಗುತ್ತಿಗೆದಾರರಿಗೆ ಒಟ್ಟು 23.74 ಕೋಟಿ ರು. ಗಳನ್ನು ಹೆಚ್ಚುವರಿಯಾಗಿ ಪಾವತಿಸಿ, ಅವರಿಗೆ ಆರ್ಥಿಕ ಲಾಭ ಮಾಡಿಕೊಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಮುಖ್ಯವಾಗಿ 2020 ಮತ್ತು 2021ರಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ಮೂರು ಕಾಮಗಾರಿಗಳಿಗೆ ಸಂಬಂಧಿಸಿದಂತೆ 18.83 ಕೋಟಿ ರು.ಗಳನ್ನು ಗುತ್ತಿಗೆದಾರರಿಗೆ ಹೆಚ್ಚುವರಿಯಾಗಿ ಆಗಿನ ಸರ್ಕಾರ ಪಾವತಿಸಿತ್ತು. 2021ರಲ್ಲಿ ಮತ್ತೊಂದು ಕಾಮಗಾರಿಗೆ ಸಂಬಂಧಿಸಿದಂತೆ ಬೆಲೆ ಹೊಂದಾಣಿಕೆಯನ್ನು ನಿಯಂತ್ರಿಸಲು ಮೂಲ ಸೂಚ್ಯಂಕ ಮೌಲ್ಯಗಳನ್ನು ನಿರ್ಧರಿಸಲು ತಪ್ಪು ವಿಧಾನಗಳನ್ನು ಅಳವಡಿಸಿಕೊಂಡಿತ್ತಲ್ಲದೇ , 4.91 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿತ್ತು.
ಮಹಾಲೇಖಪಾಲರು (ಸಿಎಜಿ) ಸಣ್ಣ ನೀರಾವರಿ ಇಲಾಖೆಯ ಲೆಕ್ಕಪರಿಶೋಧನೆ ನಡೆಸಿದ ಸಂದರ್ಭದಲ್ಲಿ ಈ ಹಗರಣ ಬೆಳಕಿಗೆ ಬಂದಿದೆ. ಗುತ್ತಿಗೆ ದಾರರಿಗೆ ಹೆಚ್ಚುವರಿಯಾಗಿ ಪಾವತಿಯಾಗಿರುವ ಹಣವನ್ನು ವಸೂಲಿ ಮಾಡಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಜಿಯು ಈಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಬಿಜೆಪಿ ಸರ್ಕಾರದ ಅಧಿಕಾರಾವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದ ಮೇಲೆ ಈ ಕುರಿತು ತನಿಖೆ ನಡೆಸುವುದಾಗಿ ಪ್ರಕಟಿಸಿತ್ತು. ಆದರೆ ಈ ಹಗರಣಗಳನ್ನು ಸಿಎಜಿಯು ಗುರುತಿಸಿ, ಸರ್ಕಾರದ ಗಮನ ಸೆಳೆದಾಗಲೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವುದು ಸಿಎಜಿಯ ವರದಿಯಿಂದ ಬಹಿರಂಗಗೊಂಡಿದೆ.
ಈ ಹಗರಣ ನಡೆದ ಸಂದರ್ಭದಲ್ಲಿ ಜೆ.ಸಿ. ಮಾಧುಸ್ವಾಮಿ ಸಣ್ಣ ನೀರಾವರಿ ಸಚಿವರಾಗಿದ್ದರು. ಈಗ ಎನ್ ಎಸ್ ಬೋಸರಾಜು ಸಣ್ಣ ನೀರಾವರಿ ಖಾತೆಯ ಸಚಿವರಾಗಿದ್ದಾರೆ.
ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಂಹಿತೆಯ (ಕೆಪಿಡಬ್ಲ್ಯೂಡಿ ಕೋಡ್ ) ಕಂಡಿಕೆ 180(2), ಗುತ್ತಿಗೆದಾರರಿಗೆ ಒಪ್ಪಂದದಲ್ಲಿ ಒದಗಿಸಿದ ದರಕ್ಕಿಂತ ಹೆಚ್ಚಿನ ದರಗಳನ್ನು ಪಾವತಿಸುವುದನ್ನು ನಿಷೇಧಿಸುತ್ತದೆ. ಕೆಪಿಡಬ್ಲ್ಯೂಡಿ ಕೋಡ್ ಕಂಡಿಕೆ 186 ಸಹ ಗುತ್ತಿಗೆ ಒಪ್ಪಂದಕ್ಕೆ ಒಳಪಡದ ಯಾವುದೇ ರಿಯಾಯಿತಿಯನ್ನು ಗುತ್ತಿಗೆದಾರರಿಗೆ ವಿಸ್ತರಿಸುವುದನ್ನು ನಿಷೇಧಿಸುತ್ತದೆ.
ಆದರೂ ಟೆಂಡರ್ ಷರತ್ತುಗಳಿಗೆ ವ್ಯತಿರಿಕ್ತವಾಗಿ ಬೆಲೆ ಹೊಂದಾಣಿಕೆಯನ್ನು ಅನಿಯಮಿತವಾಗಿ ಪಾವತಿಸಿದ ಪರಿಣಾಮ ಗುತ್ತಿಗೆದಾರರಿಗೆ 18.83 ಕೋಟಿ ರು. ಲಾಭ ಮಾಡಿಕೊಡಲಾಗಿದೆ. ಈ ಮೂರು ಕಾಮಗಾರಿಗಳನ್ನು ಹಾಸನ, ಬೆಳಗಾವಿ ಮತ್ತು ಹಳಿಯಾಳ ವಿಭಾಗದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.
ಲೆಕ್ಕ ಪರಿಶೋಧನೆ ಬೆಳಕಿಗೆ ತಂದಿದ್ದೇನು?
ಚಿಕ್ಕಮಗಳೂರು ಜಿಲ್ಲೆಯ ಮದರಾಸನ ಕೆರೆಗೆ ಹಿರೇಮಗಳೂರು ಬೈರಾಪುರ ಪಿಕ್‌ಅಪ್ ನಿಂದ ಮತ್ತು ದಾಸರಹಳ್ಳಿ ಕೆರೆಗೆ ಹಿರೇಮಗಳೂರು ಕೆರೆಯಿಂದ ಏತ ನೀರವಾರಿ ಯೋಜನೆಗಳ ಮೂಲಕ ನೀರು ತುಂಬುವ 31.50 ಕೋಟಿ ರು.ಗಳ ಕಾಮಗಾರಿಯಲ್ಲಿ, ಕೌಜಲಗಿ, ಗೋಸಬಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಎಲ್‌ಐಎಸ್‌ನ ಸಮೀಕ್ಷೆ, ತನಿಖೆ, ವಿನ್ಯಾಸ, ಪೂರೈಕೆ, ಸ್ಥಾಪನೆ ಪರೀಕ್ಷೆ ಮತ್ತು ಕಾರ್ಯಾರಂಭ ಎಲ್ಲ ಸೇರಿ ಒಟ್ಟು 140.34 ಕೋಟಿ ರು.ಗಳ ಕಾಮಗಾರಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಣಿಕಟ್ಟಾ ಬಳಿ 3 ಕಿ.ಮೀ. ವರೆಗೆ ಮತ್ತು ಅಗನಾಶಿನಿ ಬಳಿ 3 ರಿಂದ 7.78 ಕಿ.ಮೀ. ವರೆಗೆ ಸುರಕ್ಷಣ ಕಾರ್ಯದ 33.74 ಕೋಟಿ ರು. ವೆಚ್ಚದ ಗಾಮಗಾರಿಗಳಲ್ಲಿ ಹೀಗೆ ಹೆಚ್ಚುವರಿ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಿಎಜಿಯು 2023ರ ಆಗಸ್ಟ್ ನಿಂದ ಡಿಸೆಂಬರ್ ವರೆಗೆ ನಡೆಸಿದ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿ ಮತ್ತು ಹಾಸನ ವಿಭಾಗದ ಕಾಮಗಾರಿಗಳ ಒಪ್ಪಂದದ ಸಂದರ್ಭದಲ್ಲಿ ಬೆಲೆ ಹೊಂದಾಣಿಕೆ ಷರತ್ತನ್ನು ತೆಗೆದು ಹಾಕಲಾಗಿತ್ತು ಮತ್ತು ಟೆಂಡರ್ ದಾಖಲೆಗಳಲ್ಲಿ ಇದನ್ನು ಅಳವಡಿಸಲಾಗಿರಲಿಲ್ಲ. ಆದರೂ, ಕಾಮಗಾರಿ ಮುಗಿದ ನಂತರ, ಗುತ್ತಿಗೆದಾರರು ಬೆಲೆ ಹೊಂದಾಣಿಕೆ ಪಾವತಿಗೆ ವಿನಂತಿಸಿದ್ದರು. ಬೆಳಗಾವಿ ವಿಭಾಗದ ಗುತ್ತಿಗೆದಾರರು 11.10 ಕೋಟಿಗೆ ಮನವಿ ಮಾಡಿಕೊಂಡಿದ್ದರೆ, ಹಾಸನ ವಿಭಾಗದಲ್ಲಿ ಕಾಮಗಾರಿ ನಡೆಸಿದ ಗುತ್ತಿಗೆದಾರರು 5.45 ಕೋಟಿ ರು. ಮನವಿ ಮಾಡಿಕೊಂಡಿದ್ದರು.
ಆಗ ಇಲಾಖೆಯ ಮುಖ್ಯ ಅಭ್ಯಾಂತರರು ಸರ್ಕಾರದ ಕಾರ್ಯದರ್ಶಿಯವರಿಗೆ ಪತ್ರ ಬರೆದು, ಈ ಎರಡು ಕಾಮಗಾರಿಗಳ ಬೆಲೆ ಹೊಂದಾಣಿಕೆ ಪಾವತಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಕೋರಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಸರ್ಕಾರದ ಕಾರ್ಯದರ್ಶಿಗಳು 2023ರಲ್ಲಿ ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬೆಲೆ ಹೊಂದಾಣಿಕೆಗೆ ಅನುಮತಿಸಿ, ಯಾವುದೇ ನಂತರದ ಆದೇಶಗಳ ಸಂದರ್ಭದಲ್ಲಿ ಮರುಪಾವತಿಸಬೇಕಾಗುತ್ತದೆ ಎಂಬ ನಿಭಂದನೆಯನ್ನೊಳಗೊಂಡ ಆದೇಶಗಳನ್ನು ಹೊರಡಿಸಿದ್ದರು. ಈ ಆದೇಶಗಳ ಆಧಾರದ ಮೇಲೆ ಗುತ್ತಿಗೆದಾರರಿಗೆ 16.55 ಕೋಟಿ ರು.ಗಳನ್ನು ಹೊಂದಾಣಿಕೆಯ ಮೊತ್ತವೆಂದು ಪಾವತಿಸಲಾಗಿತ್ತು.
ಇದೇ ರೀತಿಯಾಗಿ, ಹಳಿಯಾಳ ವಿಭಾಗದಲ್ಲಿನ ಕಾಮಗಾರಿಗೆ ಸಂಬಂಧಿಸಿದಂತೆ ಒಪ್ಪಂದದ ಸಾಮಾನ್ಯ ಷರತ್ತುಗಳ ಪ್ರಕಾರ ಬೆಲೆ ಹೊಂದಾಣಿಕೆಗೆ ಒಳಪಟ್ಟಿರಲಿಲ್ಲ. 2022 ರ ಡಿಸೆಂಬರ್‌ನಲ್ಲಿ ಈ ಕಾಮಗಾರಿ ಪೂರ್ಣಗೊಂಡಿತ್ತು. ಆದರೂ, ಲೆಕ್ಕಪರಿಶೋಧನೆಯು ಹಳಿಯಾಳದ ವಿಭಾಗವು 12 ತಿಂಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುವ ಕಾಮಗಾರಿಗಳಿಗೆ ಬೆಲೆ ಹೊಂದಾಣಿಕೆ ಅನ್ವಯಿಸುತ್ತದೆ ಎಂಬ ನೆಪದಲ್ಲಿ ಮೇಲಿನ ಕಾಮಗಾರಿಗೆ ಬೆಲೆ ಹೊಂದಾಣಿಕೆಯ ಭಾಗವಾಗಿ 2.28 ಕೋಟಿ ಪಾವತಿಸಿದೆ ಎಂದು ಗಮನಿಸಿದೆ. ಅದಲ್ಲದೆ, ವಿಭಾಗದಿಂದ ಬಾಕಿ ಇರುವ ಹೆಚ್ಚುವರಿ ಬೆಲೆ ಹೊಂದಾಣಿಕೆ ಮೊತ್ತ 1.99 ಕೋಟಿಯನ್ನು ಸಹ ಅನುಮೋದಿಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ.
ಕಾಂಗ್ರೆಸ್ ಸರ್ಕಾರದಿಂದ ಸಮರ್ಥನೆ
ಕೋವಿಡ್ -19 ಕಾರಣದಿಂದ ಏಕಾಏಕಿ ನಿರ್ಮಾಣ ಸಾಮಗ್ರಿಗಳು ಮತ್ತು ಕಾರ್ಮಿಕರ ದರಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಯಿತು ಮತ್ತು ಆದ್ದರಿಂದ, ಗುತ್ತಿಗೆದಾರರ ಕೋರಿಕೆ ಆಧರಿಸಿ, ಬೆಲೆ ಹೊಂದಾಣಿಕೆಯನ್ನು ಒದಗಿಸಲಾಗಿದೆ ಎಂದು ರಾಜ್ಯ ಸರ್ಕಾರವು 2024ರ ಮಾರ್ಚ್‌ನಲ್ಲಿ ಸಿಎಜಿಗೆ ಈ ಕುರಿತು ಮಾಹಿತಿ ನೀಡಿ, ಗುತ್ತಿಗೆ ದಾರರಿಗೆ ಹೆಚ್ಚುವರಿಯಾಗಿ ಹಣ ಪಾವತಿಯಾಗಿದ್ದನ್ನು ಸಮರ್ಥಿಸಿಕೊಂಡಿರುವುದು ವರದಿಯಿಂದ ಗೊತ್ತಾಗಿದೆ.
ಆದರೆ ಆರ್ಥಿಕ ಇಲಾಖೆಯು 2020ರ ಜುಲೈ 13ರಂದು ಆದೇಶ ಹೊರಡಿಸಿ, ಕೋವಿಡ್ 19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಸಿವಿಲ್ ವರ್ಕ್ಸ್ ಒಪ್ಪಂದಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಡಿಲಿಕೆಗಳನ್ನು ನೀಡಿತ್ತು. ಅದರಲ್ಲಿ ಬೆಲೆ ಹೊಂದಾಣಿಕೆಯ ವಿಷಯವೇ ಇರಲಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.
ಸೆಪ್ಟೆಂಬರ್ 2020 ರಲ್ಲಿ ಅಂದರೆ ಕೋವಿಡ್ 19 ಸಾಂಕ್ರಾಮಿಕ ಘೋಷಣೆಯಾದ ನಂತರ ಬೆಲೆ ಹೊಂದಾಣಿಕೆಯ ನಿಬಂಧನೆಯನ್ನು ಒದಗಿಸದೆಯೇ ಟೆಂಡರ್‌ಗಳನ್ನು ಕರೆಯಲಾಗಿದೆ ಮತ್ತು ಅದನ್ನು ಈ ಎಲ್ಲ ಗುತ್ತಿಗೆದಾರು ಒಪ್ಪಿ, ಸಹಿ ಮಾಡಿದ್ದರು. ಹೀಗಾಗಿ, ಗುತ್ತಿಗೆದಾರರು ತಮ್ಮ ದರಗಳನ್ನು ಉಲ್ಲೇಖಿಸುವಾಗ ಮತ್ತು ಕೆಲಸಕ್ಕೆ ಒಪ್ಪಂದಕ್ಕೆ ಸಹಿ ಹಾಕುವಾಗ ಕೋವಿಡ್ -19 ಸನ್ನಿವೇಶವಿದ್ದರೂ ಬೆಲೆ ಹೊಂದಾಣಿಕೆಗೆ ಅವಕಾಶವಿಲ್ಲ ಎಂಬುದನ್ನು ಅರಿತಿದ್ದರು. ಆದರೂ ಅವರು ಮನವಿ ಮಾಡಿಕೊಂಡರೆಂದು ಸರ್ಕಾರವು ಹಣ ನೀಡಿದ್ದನ್ನು ಒಪ್ಪಿಕೊಳ್ಳಲಾಗದು ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿದೆ.
ಈ ಕ್ರಮ ಕೆಪಿಡಬ್ಲ್ಯುಡಿ ಕೋಡ್‌ಗೆ ವಿರುದ್ಧವಾದದು, ಇಡೀ ಟೆಂಡರ್ ಪ್ರಕ್ರಿಯೆಯನ್ನೇ ದುರ್ಬಲಗೊಳಿಸುವಂತಹದ್ದು ಎಂದು ಸಿಎಜಿಯು ಸ್ಪಷ್ಟವಾಗಿ ತಿಳಿಸಿದ್ದು, ಹಳಿಯಾಳ ವಿಭಾಗದಲ್ಲಿನ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆ ಒಪ್ಪಂದದಲ್ಲಿಯೇ ಬೆಲೆ ಹೊಂದಾಣಿಕೆಗೆ ಅವಕಾಶವಿತ್ತು ಎಂಬ ಕಾಂಗ್ರೆಸ್ ಸರ್ಕಾರದ ವಿವರಣೆಯನ್ನೂ ಒಪ್ಪಿಲ್ಲ.
ಹೀಗಾಗಿ, ಒಪ್ಪಿದ ಟೆಂಡರ್ ಷರತ್ತುಗಳಿಗೆ ವ್ಯತಿರಿಕ್ತವಾಗಿ 18.83 ಕೋಟಿ ಮೊತ್ತದ ಬೆಲೆ ಹೊಂದಾಣಿಕೆಯ ಪಾವತಿಯು ಗುತ್ತಿಗೆದಾರರಿಗೆ ಅನಿಯಮಿತ ಅನಪೇಕ್ಷಿತ ಲಾಭವನ್ನು ಮಾಡಿಕೊಟ್ಟಿದೆ. ಅಲ್ಲದೆ, ಈ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಇತರ ಬಿಡ್ ದಾರರಿಗೆ ಅನ್ಯಾಯವನ್ನುಂಟು ಮಾಡಿದೆ ಎಂದು ಸಿಎಜಿ ವರದಿ ಹೇಳಿದೆ.
ಗುತ್ತಿಗೆ ಒಪ್ಪಂದಗಳಿಗೆ ವಿರುದ್ಧವಾದ ಗುತ್ತಿಗೆದಾರರಿಗೆ ಮಾಡಿದ ಬೆಲೆ ಹೊಂದಾಣಿಕೆ ಪಾವತಿಗಳನ್ನು ಹಿಂಪಡೆಯಲು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಲು ಕ್ರಮ ತೆಗೆದುಕೊಳ್ಳಬಹುದು ಎಂದು ಸಿಎಜಿಯು ಸರ್ಕಾರಕ್ಕೆ ಶಿಫಾರಸು ಕೂಡ ಮಾಡಿದೆ.
ಗುತ್ತಿಗೆದಾರರಿಗೆ ಹೆಚ್ಚುವರಿ ಪಾವತಿ
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು ಸರ್ವೆ, ತನಿಖೆ, ವಿನ್ಯಾಸ, ಪೂರೈಕೆ, ಸ್ಥಾಪನೆ, ಪರೀಕ್ಷೆ ಇತ್ಯಾದಿ ಕಾರ್ಯಗಳನ್ನು ನಡೆಸಿದ್ದ ಬೆಂಗಳೂರಿನ ಮೇ. ಎಸ್.ಎಸ್.ಇ.ಎಂ-ಎ.ಸ್.ಆರ್ (ಜಂಟಿ ವೆಂಚರ್) ಕಂಪನಿಗೆ, ಬೆಲೆ ಹೊಂದಾಣಿಕೆಯನ್ನು ನಿಯಂತ್ರಿಸಲು ಮೂಲ ಸೂಚ್ಯಂಕ ಮೌಲ್ಯಗಳನ್ನು ನಿರ್ಧರಿಸಲು ತಪ್ಪು ವಿಧಾನವನ್ನು ಅಳವಡಿಸಿಕೊಂಡ ಕಾರಣ 14.91 ಕೋಟಿ ಹೆಚ್ಚುವರಿ ಪಾವತಿಯಾಗಿರುವುದನ್ನು ಕೂಡ ಸಿಎಜಿಯ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಪತ್ತೆ ಹಚ್ಚಿದೆ.
209.80 ಕೋಟಿ ರು.ಗಳ ಈ ಕಾಮಗಾರಿಗೆ 2021ರಲ್ಲಿ ಟೆಂಡರ್ ಕರೆಯಲಾಗಿತ್ತು. ಈ ಗುತ್ತಿಗೆದಾರರಿಗೆ 276.64 ಕೋಟಿಗೆ (ಜಿಎಸ್‌ಟಿ ಹೊರತುಪಡಿಸಿ) ಕಾಮಗಾರಿ ನೀಡಲಾಗಿತ್ತು. 2021 ಜೂನ್ ಒಪ್ಪಂದ ಮಾಡಿಕೊಂಡು 30 ತಿಂಗಳ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅಂದರೆ 2023ರ ಡಿಸೆಂಬರ್ 16ಕ್ಕೆ ಪೊರ್ಣಗೊಳಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. 2023ರ ಮಾರ್ಚ್ ನಲ್ಲಿ ಕಾಮಗಾರಿ ನಡೆಯುತ್ತಿರುವಾಗಲೇ ಇಲಾಖೆಯು 194.59 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ (ಜಿಎಸ್‌ಟಿ ಸೇರಿದಂತೆ ಮತ್ತು ಬೆಲೆ ಹೊಂದಾಣಿಕೆಯನ್ನು ಹೊರತುಪಡಿಸಿ) ಪಾವತಿಸಿತ್ತು.
ಸಿಎಜಿಯ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಟೆಂಡರ್ ಒಪ್ಪಂದದಲ್ಲಿ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚದಲ್ಲಿನ ಬದಲಾವಣೆಯಾದಲ್ಲಿ ಅಳವಡಿಸಬೇಕಾದ ತತ್ವಗಳು/ಸೂತ್ರಗಳನ್ನು ಒಪ್ಪಂದದ ದತ್ತಾಂಶದಲ್ಲಿ ಅಳವಡಿಸಲಾಗಿಲರಲಿಲ್ಲ ಎಂಬುದನ್ನು ಗಮನಿಸಿದೆ.
ಹೀಗಾಗಿ ಕಾಮಗಾರಿಯ ಟೆಂಡರ್ ತೆರೆಯುವ ತಿಂಗಳ ಹಿಂದಿನ ಮೂರು ಕ್ಯಾಲೆಂಡರ್ ತಿಂಗಳುಗಳಿಗೆ ಸಗಟು ಬೆಲೆ ಸೂಚ್ಯಂಕದ ಸರಾಸರಿ ಮೌಲ್ಯವನ್ನು ಅಳವಡಿಸಿಕೊಂಡು ಗುತ್ತಿಗೆದಾರರಿಗೆ ಪಾವತಿಸಬೇಕಾದ ಬೆಲೆ ಹೊಂದಾಣಿಕೆಯನ್ನು ಲೆಕ್ಕಪರಿಶೋಧನೆಯು ಮರು ಲೆಕ್ಕಾಚಾರ ಮಾಡಿದೆ. ಈ ಸಂದರ್ಭದಲ್ಲಿ ಹೆಚ್ಚುವರಿ ಹಣ ಪಾವತಿಯಾಗಿರುವುದು ಗೊತ್ತಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಸಿಎಜಿಯು ಲೆಕ್ಕಾಚಾರ ಹಾಕಿದಾಗ, 16.52 ಕೋಟಿ ರು. ಪಾವತಿಸಬೇಕಾಗಿರುವಲ್ಲಿ ಇಲಾಖೆಯು 21.43 ಕೋಟಿ ರು. ಪಾವತಿಸಿದೆ. ಇದರಿಂದಾಗಿ ಒಟ್ಟಾರೆಯಾಗಿ ಗುತ್ತಿಗೆ ದಾರರಿಗೆ 4.91 ಕೋಟಿ ಹೆಚ್ಚುವರಿ ಪಾವತಿಯಾಗಿದೆ.
ಸಿಎಜಿಯು ಈ ಕುರಿತು ಸರ್ಕಾರಕ್ಕೆ 2024ರಲ್ಲಿ ವರದಿ ನೀಡಿತ್ತು. ಸರ್ಕಾರವು ಲೆಕ್ಕಪರಿಶೋಧನೆಯ ಅವಲೋಕನವನ್ನು ಒಪ್ಪಿಕೊಂಡಿದೆ ಮತ್ತು ಗುತ್ತಿಗೆದಾರರ ಭವಿಷ್ಯದ ಬಿಲ್‌ಗಳಿಂದ ಹೆಚ್ಚುವರಿ ಪಾವತಿಯನ್ನು ಮರುಪಡೆಯಲು ಒಪ್ಪಿಕೊಂಡಿದೆ ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಬೆಲೆ ಹೊಂದಾಣಿಕೆ ಪಾವತಿಗಳನ್ನು ಕ್ರಮಬದ್ಧಪಡಿಸುವ ಸರ್ಕಾರದ ಸೂಚನೆಗಳನ್ನು ಸೂಕ್ಷ್ಮವಾಗಿ ಪಾಲಿಸುವಂತೆ ಎಲ್ಲ ವಿಭಾಗಗಳಿಗೆ ನಿರ್ದೇಶನ ನೀಡಬೇಕು. ಬೆಲೆ ಹೊಂದಾಣಿಕೆ ಲೆಕ್ಕಾಚಾರದಲ್ಲಿ ಮೂಲ ಸಚ್ಯಂಕವನ್ನು ಅರಿಯಲು ಹಿಂದಿನ ಮೂರು ತಿಂಗಳ ಲೆಕ್ಕಾಚಾರಕ್ಕಾಗಿ ತಾಂತ್ರಿಕ ಬಿಡ್ ತೆರೆಯುವ ದಿನಾಂಕವನ್ನುಅಳವಡಿಸಿಕೊಳ್ಳುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಸಿಎಜಿಯು ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕೆರೆ ನಿರ್ಮಾಣಕ್ಕೆ 2.50 ಕೋಟಿ ರುಪಾಯಿಯೂ ಇಲ್ಲ; ಸಣ್ಣ ನೀರಾವರಿ ಇಲಾಖೆ ಬೊಕ್ಕಸ ಖಾಲಿಯಾಗಿದೆಯೇ?
ಜನ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ಸೌಲಭ್ಯಕ್ಕಾಗಿ ಕೇವಲ 2.50 ಕೋಟಿ ರು ಮೊತ್ತದಲ್ಲಿ ಕೆರೆ ನಿರ್ಮಾಣ ಮಾಡಲು ಕೂಡ ರಾಜ್ಯ ಸರ್ಕಾರದ ಬೊಕ್ಕಸದಲ್ಲಿ ಈಗ ಹಣವಿಲ್ಲ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಂಬಿಕಲ್ಲು ಗ್ರಾಮದಲ್ಲಿ ಹೊಸ ಕೆರೆ/ಇಂಗು ಕೆರೆ ನಿರ್ಮಾಣ ಕಾಮಗಾರಿ ನಡೆಸಲು ಇಲಾಖೆ ಮುಂದಾದಾಗ ಇದು ಬೆಳಕಿಗೆ ಬಂದಿತ್ತು. ಈ ಕುರಿತು ʻದಿ ಫೈಲ್ʼ ವಿಶೇಷ ವರದಿ ಪ್ರಕಟಿಸಿತ್ತು.
ಕಾರ್ಮಿಕರ ಮಂಡಳಿಯಲ್ಲಿ ಕೋಟ್ಯಂತರ ಅವ್ಯವಹಾರ; ಬಿಜೆಪಿ ಅವಧಿಯ ಅಕ್ರಮ, ಕಾಂಗ್ರೆಸ್‌ನಿಂದ ಸಕ್ರಮ!
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮುಂಜಾಗೃತಾ ಆರೋಗ್ಯ ರಕ್ಷಣಾ ತರಬೇತಿ ಮತ್ತು ತಪಾಸಣೆ (ಪಿಎಚ್‌ಸಿ) ನಡೆಸುವ ಯೋಜನೆಯಲ್ಲಿ ಕೋಟ್ಯಂತರ ರು. ಅವ್ಯವಹಾರ ನಡೆದಿತ್ತು. ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಹಗರಣ ನಡೆದಿತ್ತು. ತಾನು ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರದ ಹಗರಣಗಳ ಕುರಿತು ತನಿಖೆ ನಡೆಸುವುದಾಗಿ ಘೋಷಿಸಿದ್ದ ಕಾಂಗ್ರೆಸ್ ಸರ್ಕಾರ ಕೊನೆಗೆ ಸಿಎಜಿ ಮುಂದೆ ಇದನ್ನು ಸಮರ್ಥಿಸಿಕೊಂಡಿತ್ತು. ಈ ಕುರಿತೂ ʻದಿ ಫೈಲ್ʼ ವರದಿ ಮಾಡಿತ್ತು.