ಕಾರ್ಮಿಕರ ಮಂಡಳಿಯಲ್ಲಿ ಕೋಟ್ಯಂತರ ಅವ್ಯವಹಾರ; ಬಿಜೆಪಿ ಅವಧಿಯ ಅಕ್ರಮ, ಕಾಂಗ್ರೆಸ್‌ನಿಂದ ಸಕ್ರಮ!

scam in medical test for construction workers in karnataka

ಬೆಂಗಳೂರು : ಹಿಂದಿನ  ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ   ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮುಂಜಾಗೃತಾ ಆರೋಗ್ಯ ರಕ್ಷಣಾ ತರಬೇತಿ ಮತ್ತು ತಪಾಸಣೆ (ಪಿಎಚ್‌ಸಿ) ನಡೆಸುವ ಯೋಜನೆಯಲ್ಲಿ  ಕೋಟ್ಯಂತರ ರು. ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

 

ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ (ಕೆಬಿಒಸಿಡಬ್ಲ್ಯುಡಬ್ಲ್ಯುಬಿ) ಮೂಲಕ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿತ್ತು.   ದಾಖಲೆಗಳ ಪ್ರಕಾರ 2023ರ ಡಿಸೆಂಬರ್‌ವರೆಗೆ 8,49,084 ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಇದಕ್ಕೆ 258.79 ಕೋಟಿ ರು. ಖರ್ಚು ಮಾಡಲಾಗಿದೆ. ಇದರಲ್ಲಿ 37.65 ಕೋಟಿ ರು. ವಂಚನೆಯಾಗಿರುವುದನ್ನು ಮಹಾಲೇಖಪಾಲರು (ಸಿಎಜಿ) ಪತ್ತೆ ಹಚ್ಚಿದ್ದಾರೆ.

 

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಎಲ್ಲ ಲೋಪಗಳು ನಡೆದಿವೆ. ತಾನು ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರದ ಹಗರಣಗಳ ಕುರಿತು ತನಿಖೆ ನಡೆಸುವುದಾಗಿ ಘೋಷಿಸಿದ್ದ ಕಾಂಗ್ರೆಸ್‌ ಸರ್ಕಾರ, ಈಗ ಸಿಎಜಿ ಮುಂದೆ ಬಿಜೆಪಿ ಸರ್ಕಾರದ ಲೋಪಗಳನ್ನೆಲ್ಲಾ ಸಮರ್ಥಿಸಿಕೊಂಡಿದೆ. ಅಲ್ಲದೆ, ʻಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದʼ ಈ ರೀತಿ ಲೋಪವೆಸಗಲಾಗಿದೆ ಎಂಬ ಸಾಮಾಜಿಕ ಹಿತದ ಲೇಬಲ್ಲನ್ನೂ ನೀಡಿದೆ.

 

ʻಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿʼಯ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.  ಈ ಸಿಎಜಿ ವರದಿಯನ್ನು ಇತ್ತೀಚೆಗೆ ನಡೆದ ವಿಧಾನ ಸಭೆಯ ಅಧಿವೇಶನದ ಸಂದರ್ಭದಲ್ಲಿ ಉಭಯ ಸದನಗಳಲ್ಲಿಯೂ ಮಂಡಿಸಲಾಗಿದೆ.

 

ಈ ಮಂಡಳಿಯು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. 2020-21ನೇ ಸಾಲಿನಲ್ಲಿ ಆಗಿನ ಬಿಜೆಪಿ ಸರ್ಕಾರವು ಈ ಯೋಜನೆಗೆ ಬಜೆಟ್‌ನಲ್ಲಿ 150 ಕೋಟಿ  ಮೀಸಲಿಟ್ಟಿತ್ತು. ಶಿವರಾಮ್ ಹೆಬ್ಬಾರ್ ಆಗ ಕಾರ್ಮಿಕ ಸಚಿವರಾಗಿದ್ದರು.

 

scam in medical test for construction workers in karnataka

 

ಈ ಆರೋಗ್ಯ ತಪಾಸಣೆ ಯೋಜನೆಗೆ ಸಂಬಂಧಿಸಿದಂತೆ 25 ಕಾರ್ಮಿಕರ ಕಚೇರಿಗಳ ಫಲಾನುಭವಿಗಳ ವಿವರಗಳನ್ನು ಲೆಕ್ಕಪರಿಶೀಲನೆಗೆ ಒಳಪಡಿಸಿದಾಗ ಈ ವಂಚನೆ ಹೊರಬಿದ್ದಿದೆ. ಕೊಪ್ಪಳ, ಯಾದಗಿರಿ, ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಕಾರ್ಮಿಕ ಕಚೇರಿಗಳ ವಿವರಗಳನ್ನು ಪದೇ ಪದೇ ಕೇಳಿದರೂ ಲೆಕ್ಕಪರಿಶೋಧನೆಗೆ ಒದಗಿಸಿಲ್ಲ ಎಂದು ಸಿಎಜಿಯು ತನ್ನ ವರದಿಯಲ್ಲಿ ಹೇಳಿದೆ.

 

ಒಂದೇ ವ್ಯಕ್ತಿಗೆ 29 ಬಾರಿ ಪರೀಕ್ಷೆ!

 

ಒಂದೇ ಹೆಸರು ಮತ್ತು ಕಾರ್ಮಿಕ ಗುರುತಿನ ಚೀಟಿಯನ್ನು ಬಳಸಿಕೊಂಡು ಒಬ್ಬನೇ ವ್ಯಕ್ತಿಗೆ ಅನೇಕ ಬಾರಿ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತೋರಿಸುವ ಮೂಲಕ ಏಜೆನ್ಸಿಗಳು ಬಿಲ್ಲುಗಳನ್ನು ನೀಡಿ,  ಹಣ ಪಡೆದಿವೆ. ಇದರಲ್ಲಿ ಒಬ್ಬ ವ್ಯಕ್ತಿಯನ್ನು 29 ಬಾರಿ ಪರೀಕ್ಷಿಸಲಾಗಿದೆ ಎಂದು ತೋರಿಸಿರುವುದು   ಫಲಾನುಭವಿಗಳ ಪಟ್ಟಿಯಲ್ಲಿ ಪತ್ತೆಯಾಗಿದೆ ಎಂದು ಸಿಎಜಿ ವರದಿಯು ಹೇಳಿದೆ.

 

‘8,49,084 ಫಲಾನುಭವಿಗಳಲ್ಲಿ ಪತ್ತೆಯಾದ ಒಟ್ಟು ನಕಲಿ ನಮೂದುಗಳ ಸಂಖ್ಯೆ 1,27,635 ಆಗಿತ್ತು. ಕಾರ್ಮಿಕ ಅಧಿಕಾರಿಗಳು ವಿವರಗಳನ್ನು ಪರಿಶೀಲಿಸದೆ ಬಿಲ್ಲುಗಳಿಗೆ ಪಾವತಿ ಮಾಡಿದ್ದಾರೆ. ಈ ನಕಲಿ ನಮೂದುಗಳಿಗೆ ಪಾವತಿಸಿದ ಮೊತ್ತವು 37.65 ಕೋಟಿ (1,27,635 x 2,950) ಆಗಿದೆ. ಸರಿಯಾದ ಪರಿಶೀಲನಾ ಪ್ರಕ್ರಿಯೆಯ ಕೊರತೆ ಮತ್ತು ಹೆಚ್ಚಿನ ಸಂಖ್ಯೆಯ ನಕಲಿ ನಮೂದುಗಳು ಪರೀಕ್ಷಾ ಫಲಿತಾಂಶಗಳ ವಂಚನೆಗಳನ್ನು ಎತ್ತಿ ತೋರಿಸುತ್ತದೆ,’  ಎಂದು ಸಿಎಜಿ ವರದಿಯು ಬೊಟ್ಟು ಮಾಡಿದೆ.

 

scam in medical test for construction workers in karnataka

 

ಈ ಕುರಿತು ಸಿಎಜಿಗೆ ಸರ್ಕಾರವು ವಿವರಣೆ ನೀಡಿದೆ.  ಒಂದೇ ವ್ಯಕ್ತಿಯನ್ನು ಅನೇಕ ಬಾರಿ ಪರೀಕ್ಷಿಸುವ ಸಾಧ್ಯತೆಯು ದತ್ತಾಂಶ ನಮೂದು ಮಾಡುವಾಗಿನ ದೋಷಗಳಿಂದಾಗಿ ಆಗಿದೆ ಎಂದು ಹೇಳಿದೆ. ನಕಲಿ ನಮೂದುಗಳಿಗೆ ಸಂಬಂಧಿಸಿದಂತೆ ಮಂಡಳಿಯು ಸರಿಯಾದ ಪರಿಶೀಲನೆ ನಡೆಸದೇ, ಅವುಗಳನ್ನು ಕೈಬಿಡದೇ ಹಣ ಪಾವತಿ ಮಾಡಿರುವುದರಿಂದ ಈ ಉತ್ತರವನ್ನು ಒಪ್ಪಿಕೊಳ್ಳಲಾಗದು ಎಂದು ಸಿಎಜಿಯು ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

 

ಕಾರ್ಮಿಕರಿಗಲ್ಲ, ಅಪ್ರಾಪ್ತರಿಗೂ ಪರೀಕ್ಷೆ!

 

ಈ ಯೋಜನೆಯಡಿ  ಬರೀ ಕಾರ್ಮಿಕರನ್ನಲ್ಲ, ವೈದ್ಯಕೀಯ ಸಲಹೆಯಿಲ್ಲದೆ ಅಪ್ರಾಪ್ತ ವಯಸ್ಕರ ಪರೀಕ್ಷೆ ನಡೆಸಿರುವುದನ್ನೂ ಸಿಎಜಿಯು ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ ಪತ್ತೆ ಹಚ್ಚಿದೆ.

 

ಒಪ್ಪಂದದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ನೋಂದಾಯಿತ ಕಾರ್ಮಿಕರು ಮತ್ತು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅವರ ಅವಲಂಬಿತರಿಗೆ ಪರೀಕ್ಷೆಗಳನ್ನು ನಡೆಸಬೇಕು. ಆದರೂ 79,280 ಅಪ್ರಾಪ್ತ ವಯಸ್ಕರಿಗೆ ಪರೀಕ್ಷೆಗಳನ್ನು ನಡೆಸಲಾಗಿರುವುದನ್ನು ಗಮನಿಸಲಾಗಿದೆ. ಹೀಗೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅವಲಂಬಿತರಿಗೆ ಪಾವತಿಸಿದ ಮೊತ್ತವು 23.38 ಕೋಟಿಗಳಷ್ಟಾಗುತ್ತದೆ (79,280 ವ್ಯಕ್ತಿಗಳು X ಪ್ರತಿ ಪರೀಕ್ಷೆಗೆ 2,950) ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.

 

ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಅನರ್ಹ ಅವಲಂಬಿತರಿಗೆ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಿದೆ. ಏಜೆನ್ಸಿಯ ಜೊತೆಗಿನ ಒಪ್ಪಂದದ ನಿಯಮಗಳು ಮತ್ತು ಬಿಒಸಿಡಬ್ಲ್ಯು ಕಾಯ್ದೆ ಪ್ರಕಾರ ಈ ಎರಡೂ ಮಂಡಳಿಯ ಹಣವನ್ನು ನೋಂದಾಯಿತ ಫಲಾನುಭವಿಗಳು ಮತ್ತು ಅವರ ಅವಲಂಬಿತರ ಅನುಕೂಲಕ್ಕಾಗಿ ಪ್ರತ್ಯೇಕವಾಗಿ ಬಳಸಬೇಕು ಎಂದು ಸ್ಪಷ್ಟವಾಗಿರುವುದರಿಂದ ಸರ್ಕಾರದ ಈ ಉತ್ತರವನ್ನು ಒಪ್ಪಿಕೊಳ್ಳಲಾಗುವುದಿಲ್ಲ ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.

 

ಅನರ್ಹ ಫಲಾನುಭವಿಗಳಿಗೆ 12.71 ಲಕ್ಷ ಪಾವತಿ

 

25 ಕಾರ್ಮಿಕ ಕಚೇರಿಗಳಿಂದ ಫಲಾನುಭವಿಗಳು ಮತ್ತು ಅವರ ಅವಲಂಬಿತರಿಗೆ ಸಂಬಂಧಿಸಿದ ಮಾಹಿತಿಯಲ್ಲಿ, 8,770 ಪ್ರಕರಣಗಳ (ಶೇಕಡಾ 1) ಮಾದರಿಯನ್ನು ಸಿಎಜಿಯು ಅವಲೋಕಿಸಿದೆ.  ಗುರುತಿನ ಚೀಟಿ ಹೊಂದಿಲ್ಲದವರ ಮತ್ತು ಗುರುತಿನ ಚೀಟಿ ಹೊಂದಿದವರ ಅವಲಂಬಿತರಲ್ಲದ ವ್ಯಕ್ತಿಗಳನ್ನು ಕೂಡಾ ಪರೀಕ್ಷೆಗೊಳಪಡಿಸಿರುವುದು ಸಿಎಜಿ ವರದಿಯಿಂದ ಪತ್ತೆಯಾಗಿದೆ.

 

ಕಾರ್ಮಿಕ ಅಧಿಕಾರಿಗಳು ಈ ಮೂಲಭೂತ ವಿವರಗಳನ್ನು ಪರಿಶೀಲಿಸದೇ ಏಜೆನ್ಸಿಗಳಿಗೆ ಹಣ ಪಾವತಿ ಮಾಡಿದ್ದಾರೆ. ಇದರಿಂದ ಮಂಡಳಿಗೆ 12.71 ಲಕ್ಷದವರೆಗೆ (431 ಪ್ರಕರಣಗಳು X ಪ್ರತಿ ಪರೀಕ್ಷೆಗೆ 2950) ನಷ್ಟವಾಗಿದೆ ಎಂದು ಸಿಎಜಿ ವರದಿಯು ಹೇಳಿದೆ.

 

scam in medical test for construction workers in karnataka

 

ಕಾರ್ಮಿಕರು ಮಂಡಿಸಿದ ದಾಖಲೆಗಳನ್ನು ಕೋವಿಡ್‌ ಸಂದರ್ಭದಲ್ಲಿ ಪರಿಶೀಲಿಸಲು ಸಾಧ್ಯವಾಗಿರಲಿಲ್ಲ ಎಂದು ಸರ್ಕಾರ ಹೇಳಿತ್ತು.  ಈ ಲೋಪವನ್ನು ಸರಿದೂಗಿಸಲು ಇನ್ನೂ 300 ಕಾರ್ಮಿಕರನ್ನು ಪರೀಕ್ಷಿಸಲು ಏಜೆನ್ಸಿಗಳಿಗೆ ತಿಳಿಸಸಿತ್ತು. ಅನರ್ಹ ಫಲಾನುಭವಿಗಳಿಗೆ ಪರೀಕ್ಷೆಗಳನ್ನು ನಡೆಸಿ ಒದಗಿಸಿದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ಹಣ ಪಾವತಿ ಮಾಡಲಾಗಿರುವುದರಿಂದ ಸರ್ಕಾರದ ಈ ಉತ್ತರವನ್ನು ಒಪ್ಪಿಕೊಳ್ಳಲಾಗದು ಎಂದು ಸಿಎಜಿಯು ವರದಿಯಲ್ಲಿ ಹೇಳಿದೆ.

 

ಗುತ್ತಿಗೆ ನೀಡುವಲ್ಲಿಯೂ ಪಾರದರ್ಶಕತೆಯ ಕೊರತೆ

 

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಮುಂಜಾಗೃತಾ ಆರೋಗ್ಯ ರಕ್ಷಣಾ ತರಬೇತಿ ಮತ್ತು ತಪಾಸಣೆ (ಪಿಎಚ್‌ಸಿ) ನಡೆಸುವ ಯೋಜನೆಯ ಕೆಲಸವನ್ನು ಗುತ್ತಿಗೆ ನೀಡಲು ಏಜೆನ್ಸಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿಯೂ ಹಲವಾರು ಲೋಪಗಳನ್ನು ಲೆಕ್ಕಪರಿಶೋಧನೆಯ ವೇಳೆ ಸಿಎಜಿಯು ಗಮನಿಸಿದೆ.

 

ಬಹಳ ಮುಖ್ಯವಾಗಿ ಏಜೆನ್ಸಿಗಳನ್ನು ಆಯ್ಕೆ ಮಾಡುವ ವಿಷಯವನ್ನು ಕಾರ್ಮಿಕ ಇಲಾಖೆಯಡಿ ಬರುವ ಕಚೇರಿಗಳ ಫಲಕಗಳಲ್ಲಿ ಮಾತ್ರ ಪ್ರಕಟಿಸಲಾಗಿತ್ತು. ಉತ್ತರಿಸಲು ಕೇವಲ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು. ಈ ಪ್ರಕಟಣೆಯನ್ನು ಯಾವುದೇ ಪತ್ರಿಕೆಯಲ್ಲಿ ಅಥವಾ ಇ-ಸಂಗ್ರಹಣಾ ಪೋರ್ಟಲ್‌ ಮೂಲಕ ಪ್ರಕಟಿಸಲಾಗಿರಲಿಲ್ಲ. ಇದರಿಂದಾಗಿ ಸ್ಪರ್ಧಾತ್ಮಕ ದರಗಳನ್ನು ಆಕರ್ಷಿಸುವಲ್ಲಿ ಮಂಡಳಿಯು ವಿಫಲವಾಗಿದೆ ಎಂದು ಸಿಎಜಿ ಹೇಳಿದೆ.

 

ಅರ್ಹವಾದ ಏಜೆನ್ಸಿಗಳಿಗೆ ಅರ್ಹತಾ ಮಾನದಂಡಗಳನ್ನು (ಎನ್‌ಎಬಿಎಲ್‌ ಮಾನ್ಯತೆ, ಅನುಭವ ಇತ್ಯಾದಿ) ದರಪಟ್ಟಿಗಳನ್ನು ಕರೆಯುವ ಅಧಿಸೂಚನೆಯಲ್ಲಿ ಸೂಚಿಸಲಾಗಿರಲಿಲ್ಲ.

 

ಪ್ರತಿ ಜಿಲ್ಲೆಯಿಂದಲೂ ನಿಖರವಾಗಿ ಮೂರು ದರಪಟ್ಟಿಗಳನ್ನು ಸ್ವೀಕರಿಸಲಾಗಿತ್ತು. ಸೂಚನೆಯ ಸೀಮಿತ ಪ್ರಚಾರದ ಹೊರತಾಗಿಯೂ, ನವದೆಹಲಿ ಮತ್ತು ಮುಂಬೈ ಮೂಲದ ಏಜೆನ್ಸಿಗಳಿಂದ ಮೂರು ದಿನಗಳೊಳಗೆ ದರಪಟ್ಟಿಗಳನ್ನು ಸ್ವೀಕರಿಸಲಾಗಿತ್ತು. ತಮ್ಮ ಸಲ್ಲಿಕೆಗಳಲ್ಲಿ ಉಲ್ಲೇಖಿಸಲಾದ ಯಾವುದೇ ವಿಳಾಸ ಅಥವಾ ಸಂಪರ್ಕ ವಿವರಗಳಿಲ್ಲದಿರುವ ಉಪಕರಣ ಪೂರೈಕೆದಾರರು ಮತ್ತು ಏಜೆನ್ಸಿಗಳಿಂದ ದರಪಟ್ಟಿಗಳನ್ನು ಸ್ವೀಕರಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಿದೆ.

 

scam in medical test for construction workers in karnataka

 

‘ಮೌಲ್ಯಮಾಪನ ಉದ್ದೇಶಗಳಿಗಾಗಿ ಸಹಿ ಮಾಡದ ಎರಡು ದರಪಟ್ಟಿಗಳನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗಿದೆ ಮತ್ತು ಅಧಿಸೂಚನೆಯ ದಿನಾಂಕಕ್ಕಿಂತ ಮೊದಲೇ ಎರಡು ದರಪಟ್ಟಿಗಳನ್ನು ಸ್ವೀಕರಿಸಲಾಗಿದೆ. ಮಂಡಳಿಯು ಈ ಅಮಾನ್ಯ ದರಪಟ್ಟಿಗಳನ್ನು ತಿರಸ್ಕರಿಸುವ ಬದಲು, ಅವುಗಳನ್ನು ಹೋಲಿಕೆಗಾಗಿ ಸ್ವೀಕರಿಸಿತು ಮತ್ತು ಕೆಲಸವನ್ನು ವಹಿಸಿದೆ,’ ಎಂದು ಸಿಎಜಿಯು ವರದಿಯಲ್ಲಿ ಬೊಟು ಮಾಡಿದೆ.

 

ಸಂಪುಟದ ಅನುಮೋದನೆಯನ್ನು ತಪ್ಪಿಸಲು ಕೆಲಸದ ಒಟ್ಟು ವೆಚ್ಚವು 10 ಕೋಟಿಗಿಂತ ಕಡಿಮೆ ಇರುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಕಾರ್ಮಿಕ ಕಚೇರಿಯ ಅಡಿಯಲ್ಲಿ ಪರೀಕ್ಷಿಸಬೇಕಾದ ವ್ಯಕ್ತಿಗಳ ಸಂಖ್ಯೆಯನ್ನು 26,500 ಅಥವಾ 33,500 ಎಂದು ನಿಗದಿಪಡಿಸಲಾಗಿತ್ತು ಎಂದಿರುವ ಸಿಎಜಿಯು,  ಹಣಕಾಸು ಇಲಾಖೆ ಈ ಯೋಜನೆಯ ಪ್ರಸ್ತಾಪವನ್ನು ಹಿಂದಿರುಗಿಸಿದ್ದರೂ ಕಾರ್ಮಿಕ ಇಲಾಖೆಯ ಮೂಲಕ ಇದನ್ನು ಜಾರಿಗೆ ತರಲಾಗಿತ್ತು. ಈ ಕುರಿತು ಸರ್ಕಾರ ನೀಡಿರುವ ವಿವರಣೆ ಒಪ್ಪಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ.

 

ನಿಯೋಜನೆಯ ನಂತರ ಕೆಲಸವನ್ನು ಪ್ರಾರಂಭಿಸಲು ವಿಫಲವಾದರೆ ಮುಟ್ಟುಗೋಲು ಹಾಕಿಕೊಳ್ಳಬಹುದಾದ ಭದ್ರತಾ ಠೇವಣಿ ಅಥವಾ ಮುಂಗಡ ಹಣದ ಠೇವಣಿಯನ್ನು ಯಾವುದೇ ಏಜೆನ್ಸಿಗಳಿಂದ ಪಡೆಯಲಾಗಿಲ್ಲ. ಮುಂಗಡ ಪಾವತಿಗೆ ಯಾವುದೇ ಅವಕಾಶವಿಲ್ಲದಿದ್ದರೂ  ಏಜೆನ್ಸಿಗಳ ಕೋರಿಕೆಯ ಮೇರೆಗೆ  ಟೆಂಡರ್ ಮೊತ್ತದ 50 ಪ್ರತಿಶತವನ್ನು ಬ್ಯಾಂಕ್ ಗ್ಯಾರಂಟಿ / ಭದ್ರತೆಯನ್ನು ಪಡೆಯದೆ ಹಣವನ್ನು ಮುಂಗಡವಾಗಿ 2021ರ ಡಿಸೆಂಬರ್‌ನಲ್ಲಿ ಪಾವತಿಸಲಾಗಿದೆ ಎಂದು ಸಿಎಜಿ ಹೇಳಿದೆ.

 

ಎಂಟು ಪ್ರಕರಣಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ ಮುಂಗಡ ಮೊತ್ತವನ್ನು ವಿತರಿಸಲಾಗಿದೆ. ಇದಲ್ಲದೆ, ಮುಂಗಡ ಹಣವನ್ನು ಉಪಕರಣ ಬಳಸಲಾಗಿದೆಯೇ ಎಂಬ ಪೂರಕ ದಾಖಲೆಗಳನ್ನು ಕೂಡ ಖರೀದಿಗೆ ಪಡೆಯಲಾಗಿಲ್ಲ ಎಂದು ಸಿಎಜಿಯು ವರದಿಯಲ್ಲಿ ವಿವರಿಸಿದೆ. ಆದರೆ ಏಜೆನ್ಸಿಗಳ ಕೋರಿಕೆಯ ಪ್ರಕಾರ ಮಂಡಳಿಯ ಅಧ್ಯಕ್ಷರ ಅನುಮೋದನೆಯೊಂದಿಗೆ ಮುಂಗಡ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳಿರುವುದು ಈ ವರದಿಯಿಂದ ಗೊತ್ತಾಗಿದೆ.

 

ಕಾಂಗ್ರೆಸ್‌ ಸರ್ಕಾರದ ಮೇಲೂ ಆರೋಪ

 

ಕಳೆದ ಎರಡು ವರ್ಷಗಳಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆಯ ನೆಪದಲ್ಲಿ ಕರ್ನಾಟಕ ಕಾರ್ಮಿಕ ಸಚಿವ ಸಂತೋಷ್ ಲಾಡ್ 300 ಕೋಟಿಗೂ ಹೆಚ್ಚು ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ ಎಂದು ಬಿಜೆಪಿ ಎಂಎಲ್‌ಸಿ ಕೆ.ಎಸ್. ನವೀನ್ ಇತ್ತೀಚೆಗೆ (ಆ.7ರಂದು ಬೆಂಗಳೂರಿನಲ್ಲಿ) ಆರೋಪಿಸಿದ್ದರಲ್ಲದೆ, ಸಚಿವರ ರಾಜೀನಾಮೆಗೆ ಮತ್ತು ಈ ಘಟನೆಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದರು.

 

ಚಿತ್ರದುರ್ಗ ಒಂದರಲ್ಲೇ ಕಾರ್ಮಿಕ ಇಲಾಖೆ ಒಟ್ಟು 33,500 ಕಾರ್ಮಿಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಹೇಳಿಕೊಂಡಿದೆ.  ಆದರೆ ದಾಖಲೆಗಳು ಜಿಲ್ಲೆಯಲ್ಲಿ ಸುಮಾರು 6,000 ಕಾರ್ಮಿಕರು ಮಾತ್ರ ನೋಂದಾಯಿಸಿಕೊಂಡಿದ್ದಾರೆ ಎಂದು ತೋರಿಸಿವೆ ಎಂದು ನವೀನ್ ಹೇಳಿದ್ದರು.

 

 

ಕಾರ್ಮಿಕರ ಮಂಡಳಿಯಲ್ಲಿ ಅವ್ಯವಹಾರ; ಸಂಗ್ರಹವಾಗಿದ್ದ 12.09 ಕೋಟಿ ರು. ಉಪಕರ ನಾಪತ್ತೆ!

 

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ (ಕೆಎಸ್‌ಡಿಬಿ) ಜಮೆಯಾದ ಕಾರ್ಮಿಕ ಉಪಕರ 11.91 ಕೋಟಿ ಮತ್ತು ಆರ್ ಟಿಜಿಎಸ್‌ ಮೂಲಕ ಪಾವತಿಯಾದ 21 ಪ್ರಕರಣಗಳಲ್ಲಿನ ಹಣ 0.18 ಕೋಟಿ ಸೇರಿ ಒಟ್ಟು 12.09  ಕೋಟಿ ರು. ಮಂಡಳಿಯ ಬ್ಯಾಂಕ್‌ ಖಾತೆಯಲ್ಲಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ʻದಿ ಫೈಲ್‌ʼ ವಿವರವಾದ ವರದಿ ಪ್ರಕಟಿಸಿತ್ತು.

Your generous support will help us remain independent and work without fear.

Latest News

Related Posts