ಬೆಂಗಳೂರು; ರಾಜ್ಯದಲ್ಲಿರುವ ಒಟ್ಟು ಮೈಕ್ರೋ ಬ್ರೂವೆರಿಗಳ ಪೈಕಿ 25 ಮೈಕ್ರೋ ಬ್ರೂವೆರಿಗಳಲ್ಲಿ ಗ್ರಾಹಕರಿಗೆ ತಾಜಾ ಬಿಯರ್ ಸಿಗುತ್ತಿಲ್ಲ. ಬದಲಿಗೆ 15 ದಿನಗಳಿಂದ 2 ತಿಂಗಳವರೆಗೆ ಹೆಚ್ಚು ಹಳೆಯದಾದ ಬಿಯರ್‍ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ ಎಂದು ಪ್ರಧಾನ ಮಹಾಲೇಖಪಾಲರು ಪತ್ತೆ ಹಚ್ಚಿದ್ದಾರೆ.
ವಿಸ್ಕಿ ಮತ್ತು ಬ್ರಾಂಡಿಯಲ್ಲಿ ನಿಗದಿತ ಅನುಪಾತದ ಪ್ರಕಾರ ಮಾಲ್ಟ್ ಮದ್ಯಸಾರವನ್ನು ಮಿಶ್ರಣ ಮಾಡುತ್ತಿಲ್ಲ ಎಂದು ಸಿಎಜಿಯು ಬೆಳಕಿಗೆ ತಂದಿದ್ದರ ಬೆನ್ನಲ್ಲೇ ಮೈಕ್ರೋ ಬ್ರೂವೆರಿಗಳಲ್ಲಿಯೂ ಸಹ 2 ತಿಂಗಳವರೆಗೆ ಹೆಚ್ಚು ಹಳೆಯದಾದ ಬಿಯರ್‍ಗಳನ್ನು ನೀಡಲಾಗುತ್ತಿದೆ ಎಂದು ಬಹಿರಂಗಪಡಿಸಿರುವುದು ಮುನ್ನೆಲೆಗೆ ಬಂದಿದೆ.
2025ರ ಆಗಸ್ಟ್‌ನಲ್ಲಿ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಿಗೆ ಮಂಡನೆಯಾಗಿರುವ ಸಿಎಜಿ ವರದಿಯು, ಕರ್ನಾಟಕ ಅಬಕಾರಿ ಇಲಾಖೆಯ ಕಾರ್ಯವೈಖರಿಯ ಮತ್ತೊಂದು ಮುಖವನ್ನು ತೆರೆದಿಟ್ಟಿದೆ.
ಮೈಕ್ರೋ ಬ್ರೂವೆರಿಗಳಲ್ಲಿ ಉತ್ಪಾದಿಸುವ ಬಿಯರ್‍ಗೆ ಮುಕ್ತಾಯ ದಿನಾಂಕದ ಬಗ್ಗೆ ರಾಜ್ಯದಲ್ಲಿ ಯಾವುದೇ ನಿಯಮಾವಳಿಗಳೇ ಇಲ್ಲ. ಕರ್ನಾಟಕ ಅಬಕಾರಿ (ಬ್ರೂವೆರಿ) ನಿಯಮಗಳು 1967 ಅಥವಾ ಅಬಕಾರಿ ಆಯುಕ್ತರು 2015ರ ಮೇ 22ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿಯೂ ಮೈಕ್ರೋ ಬ್ರೂವೆರಿಗಳಲ್ಲಿ ಉತ್ಪಾದಿಸುವ ಬಿಯರ್‍ಗೆ ಮುಕ್ತಾಯ ದಿನಾಂಕವನ್ನು ನಿರ್ದೇಶಿಸಿಲ್ಲ.
ಈ ಕುರಿತು ಸಿಎಜಿಯು ರಾಜ್ಯದ 25 ಮೈಕ್ರೋ ಬ್ರೂವೆರಿಗಳ ಪೈಕಿ 23 ಮೈಕ್ರೋ ಬ್ರೂವೆರಿಗಳನ್ನು ಪರಿಶೀಲಿಸಿದೆಯಲ್ಲದೇ ತಪಾಸಣೆ ನಡೆಸಿದೆ. ಇದರ ಪ್ರಕಾರ 23 ಮೈಕ್ರೋ ಬ್ರೂವೆರಿಗಳಲ್ಲಿ 15 ದಿನಗಳಿಂದ 2 ತಿಂಗಳವರೆಗೆ ಹೆಚ್ಚು ಹಳೆಯದಾದ ಬಿಯರ್‍ಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಈ ಸಂಗತಿಯನ್ನು ಲೆಕ್ಕ ಪರಿಶೋಧಕರು ಗಂಭೀರವಾಗಿ ಪರಿಗಣಿಸಿರುವುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
‘ಪರವಾನಗಿದಾರರ ಯೋಜನಾ ವರದಿಯ ಪ್ರಕಾರ ತಾಜಾ ಬಿಯರ್ ಅವಧಿಯನ್ನು ನಾಲ್ಕು ದಿನಗಳವರೆಗೆ ನಿಗದಿಪಡಿಸಿದೆ. ನಾಲ್ಕು ದಿನಗಳನ್ನು ಮೀರುವ ಬಿಯರ್ ಸೇವನೆಯು ಗ್ರಾಹಕರ ಆರೋಗ್ಯಕ್ಕೆ ಹಾನಿಕಾರಕವಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು,’ ಎಂದು ಸಿಎಜಿ ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಆಂಧ್ರ ಪ್ರದೇಶದಲ್ಲಿ ಜಾರಿಯಲ್ಲಿರುವ ಬ್ರೂವೆರಿ ನಿಯಮಗಳ ಪ್ರಕಾರ ತಾಜಾ ಬಿಯರ್ ಅವಧಿಯು 36 ಗಂಟೆಗಳಾಗಿರುತ್ತವೆ. ಕಮ್ಯುನಿಟಿ ಇಂಡಿಯಾ ಹಾಸ್ಪಿಟಾಲಿಟಿ ಮತ್ತು ರೆಸಾರ್ಟ್ ಪ್ರೈವೈಟ್ ಲಿಮಿಟೆಡ್‌ನ ಮೈಕ್ರೋ ಬ್ರೂವೆರಿಯ ಯೋಜನಾ ವರದಿ ಪ್ರಕಾರ ಮೈಕ್ರೋ ಬ್ರೂವೆರಿಯಲ್ಲಿ ತಯಾರಿಸಿದ ಬಿಯರ್ ಅವಧಿ ನಾಲ್ಕು ದಿನಗಳವರೆಗೆ ಮಾತ್ರ ಸೀಮಿತಗೊಳಿಸಿರುವುದನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ಮೈಕ್ರೊ ಬ್ರೂವೆರಿಗಳು ಕರ್ನಾಟಕ ಅಬಕಾರಿ ಅಧಿನಿಯಮ 1965ಕ್ಕೆ ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಿಎಜಿಯು ಬೆಳಕಿಗೆ ತಂದಿದೆ. ಈ ಸಂಬಂಧ ಸಿಎಜಿಯು ಮೈಕ್ರೋ ಬ್ರೂವೆರಿಗಳನ್ನು ಪರೀಕ್ಷೆಗೆ ಒಳಪಡಿಸಿ ಪರಿಶೀಲನೆ ನಡೆಸಿದೆ. 25 ಮೈಕ್ರೋ ಬ್ರೂವೆರಿಗಳಲ್ಲಿ 21 ಮೈಕ್ರೋ ಬ್ರೂವೆರಿಗಳು ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇ.50ಕ್ಕಿಂತ ಕಡಿಮೆ ಉತ್ಪಾದಿಸುತ್ತಿದೆ. ಹಾಗೆಯೇ ಈ 21 ಮೈಕ್ರೋ ಬ್ರೂವೆರಿಗಳು ತಾವು ಉತ್ಪಾದಿಸದ ವಸ್ತುಗಳ ಮೇಲೆ ಸುಂಕವನ್ನು ಪಾವತಿಸುತ್ತಿದ್ದವು ಎಂಬುದನ್ನು ಲೆಕ್ಕ ಪರಿಶೋಧನೆಯು ಗಮನಿಸಿರುವುದು ಗೊತ್ತಾಗಿದೆ.
ಅಬಕಾರಿ ಅಧಿನಿಯಮದ ಪ್ರಕಾರ ಉತ್ಪಾದಿಸಿದ ಮೇಲಷ್ಟೇ ಸುಂಕ ವಿಧಿಸಲು ನಿಗದಿಪಡಿಸಿದೆ. ಹೀಗಾಗಿ ಉತ್ಪಾದಿಸದ ವಸ್ತುಗಳ ಮೇಲೆ ಸುಂಕ ವಿಧಿಸುತ್ತಿರುವುದು ಅಬಕಾರಿ ನಿಯಮಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿದೆ.
ಹಾಗೆಯೇ ನಾಲ್ಕು ಮೈಕ್ರೋ ಬ್ರೂವೆರಿಗಳು ವಾರ್ಷಿಕ ಸ್ಥಾಪಿತ ಶೇ.50ಕ್ಕಿಂತ ಹೆಚ್ಚು ಉತ್ಪಾದಿಸುತ್ತಿದೆ. ಮೈಕ್ರೋ ಬ್ರೂವೆರಿಗಳ ನೈಜ ಉತ್ಪಾದನೆ ಮೇಲೆ ಅಬಕಾರಿ ಇಲಾಖೆಯು ಮೇಲ್ವಿಚಾರಣೆ ನಡೆಸಲು ಸಾಧ್ಯವಾಗದಿರುವುದನ್ನು ಲೆಕ್ಕ ಪರಿಶೋಧನೆಯು ಬೆಳಕಿಗೆ ತಂದಿದೆ.
ಈ ಸಂಬಂದ ಸಿಎಜಿಯು ಬಲವಾಗಿ ಆಕ್ಷೇಪಿಸಿತ್ತು. ಇದಕ್ಕೆ ಅಬಕಾರಿ ಆಯುಕ್ತರು ಉತ್ತರವನ್ನೂ ನೀಡಿದ್ದಾರೆ.
ಅಬಕಾರಿ ಆಯುಕ್ತರ ಉತ್ತರವೇನು?
ರಾಸಾಯನಿಕ ವಿಶ್ಲೇಷಣೆಯನ್ನು ಮೇಲ್ವಿಚಾರಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಕ್ರೋ ಬ್ರೂವೆರಿಗಳ ಪರಿಕಲ್ಪನೆಯನ್ನು ಕಾರ್ಯಕರ್ತಗೊಳಿಸುವಿಕೆಯ ಪ್ರಾರಂಭಿಕ ಹಂತದಲ್ಲಿ, ಮೈಕ್ರೋ ಬ್ರೂವೆರಿಗಳ ಸಂಖ್ಯೆ ಅತೀ ಕಡಿಮೆಯಾಗಿದ್ದಾಗ ಇದನ್ನು ರೂಪಿಸಲಾಗಿತ್ತು. ಈ ನಿಟ್ಟಿನಲ್ಲಿ ಇಲಾಖೆಯು ಮುಂದಿನ ದಿನಗಳಲ್ಲಿ ಸುತ್ತೋಲೆ ಹೊರಡಿಸಲಿದೆ. ಲೆಕ್ಕ ಪರಿಶೋಧನೆಯು ಮಾಡಿರುವ ಸಲಹೆಗಳನ್ನು ತಾಂತ್ರಿಕ ಸಮಿತಿಯ ಮುಂದಿರಿಸಿ ಪರಿಗಣಿಸಲಾಗುವುದು ಎಂದು ಅಬಕಾರಿ ಆಯುಕ್ತರು 2024ರ ನವೆಂಬರ್‍ನಲ್ಲಿ ಉತ್ತರಿಸಿರುವುದು ತಿಳಿದು ಬಂದಿದೆ.
ಪೂರ್ವಾನುಮತಿ ಇಲ್ಲದೆಯೇ ಸಿಎಲ್ 9 ಪರವಾನಿಗಿ
ಸಿಎಲ್ 9 ಪರವಾನಿಗೆಯನ್ನು ಪ್ರಾಧಿಕಾರದ ಪೂರ್ವಾನುಮತಿಯಿಲ್ಲದೇ ವರ್ಗಾಯಿಸುವುದನ್ನು ನಿರ್ಬಂಧಿಸಲಾಗಿತ್ತು. ಆಧರೂ ಸಹ ಮೈಕ್ರೋ ಬ್ರೂವೆರಿಗಳು ಸಿಎಲ್ 9 ಪರವಾನಿಗೆ ಮೇಲೆ ನಿಯಂತ್ರಣ ಹೊಂದಿದ್ದವು. ಮತ್ತು ಅದರ ಕಾರ್ಯಚಾರಣೆ ಮತ್ತು ನಿರ್ವಹಣೆಯನ್ನೂ ಮಾಡುತ್ತಿತ್ತು. ಇದು ಪರವಾನಿಗೆಯ ಷರತ್ತುಗಳ ಉಲ್ಲಂಘನೆಯಾಗಿದೆ. ಮುಂದಿನ ದಿನಗಳಲ್ಲಿ ಸಿ ಎಲ್ 9 ಪರವಾನಿಗೆಗಳನ್ನು ರದ್ದುಪಡಿಸಲು ಕಾರಣವಾಗಬಹುದು ಎಂದು ಸಿಎಜಿ ವರದಿಯು ಅಭಿಪ್ರಾಯಪಟ್ಟಿದೆ.
ಸಿಎಲ್ 9 ಗಾಗಿ ಸಿಂಡಿಕೇಟ್ ರಚಿಸಿದ್ದ ಮೈಕ್ರೋ ಬ್ರೂವೆರಿಗಳು
ಸಿಎಲ್ 9ಗಾಗಿ ಮೈಕ್ರೋ ಬ್ರೂವೆರಿಗಳು ತನ್ನ ಆವರಣದ ಬಳಿ ಪರವಾನಿಗೆ ಹೊಂದಿರುವವರೊಂದಿಗೆ ಒಕ್ಕೂಟ ಮಾಡಿಕೊಂಡಿತ್ತು. ಮತ್ತು ಸಿಎಲ್ 9 ಪರವಾನಿಗೆ ಹೊಂದಿದವರ ಐಎಂಎಲ್ ಮಾರಾಟವನ್ನೂ ಸಹ ಮೈಕ್ರೋ ಬ್ರೂವೆರಿಗಳು ತಮ್ಮ ಆವರಣದಲ್ಲಿಯೇ ಆರಂಭಿಸಿತು. ಇದು ಪರವಾನಿಗೆ ಇಲ್ಲದ ಆವರಣದಲ್ಲಿ ಐಎಂಎಲ್ ಮಾರಾಟಕ್ಕೆ ದಾರಿಮಾಡಿಕೊಟ್ಟಿತು ಎಂದು ಸಿಎಜಿಯು ಬೆಳಕಿಗೆ ತಂದಿದೆ.
‘ಯಾವುದೇ ವ್ಯಾಪ್ತಿ ನಿರ್ಧರಿಸದೇ ಪರವಾನಗಿಗಳನ್ನು ಒಕ್ಕೂಟದ ರೂಪದಲ್ಲಿ ನಡೆಸಲಾಗುತ್ತಿತ್ತು. ಎರಡೂ ಆವರಣಗಳಲ್ಲಿ ಅಡ್ಡ ಬಳಕೆ ಮಾಡಲಾಗುತ್ತಿತ್ತು. ಸಿಎಲ್-9 ಆವರಣದಲ್ಲಿ ಬಿಯರ್ ನೀಡಲಾಗುತ್ತಿತ್ತು. ಒಂದು ಪ್ರಕರಣದಲ್ಲಿ ಮೈಕ್ರೋ ಬ್ರೂವೆರಿಯ ಸಿಎಲ್-9 ಆವರಣದಲ್ಲಿ ಬಿಯರ್ ವಿತರಣಾ ಟ್ಯಾಪ್‌ನ್ನು ಅಳವಡಿಸಿತ್ತು,’ ಎಂದು ಸಿಎಜಿಯು ತನ್ನ ವರದಿಯಲ್ಲಿ ವಿವರಿಸಿದೆ.
ಇಂತಹ ಮೈಕ್ರೋ ಬ್ರೂವೆರಿಗಳ ಮೇಲೆ ಅಬಕಾರಿ ಇಲಾಖೆಯ ಉಪ ಆಯುಕ್ತರು ಮತ್ತು ಜಂಟಿ ಆಯುಕ್ತರು ನಿರಂತರವಾಗಿ ಜಂಟಿ ತಪಾಸಣೆ ನಡೆಸಬೇಕು. ಆದರೆ ಇಂತಹ ಯಾವುದೇ ಜಂಟಿ ತಪಾಸಣೆ ನಡೆಸಿಲ್ಲ. ಹೀಗಾಗಿ ಯಾವುದೇ ಅಕ್ರಮಗಳು ಗಮನಕ್ಕೆ ಬಂದಿಲ್ಲ ಎಂದು ಸಿಎಜಿಯು ವರದಿಯಲ್ಲಿ ಅಭಿಪ್ರಾಯಿಸಿದೆ.
ರಾಸಾಯನಿಕ ಪ್ರಯೋಗಶಾಲೆಗಳೇ ಇರಲಿಲ್ಲ
ಮೈಕ್ರೋ ಬ್ರೂ ವೆರಿಗಳಲ್ಲಿ ಉತ್ಪಾದನೆಯಾಗುವ ಮದ್ಯದ ಗುಣಮಟ್ಟವನ್ನು ಪರಿಶೀಲಿಸಲು ಸುಸಜ್ಜಿತವಾದ ಪ್ರಯೋಗಶಾಲೆ ಹೊಂದಿರಬೇಕಿತ್ತು. ಆದರೆ ರಾಜ್ಯದ 25 ಮೈಕ್ರೋ ಬ್ರೂವೆರಿಗಳ ಪೈಕಿ 15 ಮೈಕ್ರೋ ಬ್ರೂವೆರಿಗಳಲ್ಲಿ ಸುಸಜ್ಜಿತ ಪ್ರಯೋಗಶಾಲೆಗಳೇ ಇರಲಿಲ್ಲ ಎಂದು ಸಿಎಜಿಯ ತಪಾಸಣೆಯು ಪತ್ತೆ ಹಚ್ಚಿದೆ.
ಕರ್ನಾಟಕ ಅಬಕಾರಿ (ಬ್ರೂವೆರಿ) ನಿಯಮಗಳು 1967ರ ನಿಯಮ 8-3 ಪ್ರಕಾರ ಪರವಾನಿಗೆದಾರರು ಬ್ರೂವೆರಿಯ ಆವರಣದಲ್ಲಿ ಕಚ್ಛಾ ಸಾಮಗ್ರಿಗಳ ಗುಣಮಟ್ಟ ಮತ್ತು ಉತ್ಪಾದಿಸಿದ ಮದ್ಯದ ಗುಣಮಟ್ಟವನ್ನು ಪರಿಶೀಲಿಸಲು ಸಂಪೂರ್ಣವಾಗಿ ಸುಸಜ್ಜಿತ ಪ್ರಯೋಗಶಾಲೆಯನ್ನು ಸ್ಥಾಪಿಸಿರಬೇಕು. ಮತ್ತು ಉತ್ಪಾದಿಸಿದ ಬಿಯರ್‍ನ್ನು ರಾಸಾಯನಿಕ ತಜ್ಞರಿಂದ ಪ್ರಮಾಣೀಕೃತವಾದ ನಂತರ ಮಾತ್ರ ಮಾರಾಟಕ್ಕಾಗಿ ಬಿಡುಗಡೆ ಮಾಡಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಆದರೂ ಸಹ ರಾಜ್ಯದ 15 ಮೈಕ್ರೋ ಬ್ರೂವೆರಿಗಳಲ್ಲಿ ಸಂಪೂರ್ಣವಾಗಿ ಸುಸಜ್ಜಿತವಾದ ಪ್ರಯೋಗಶಾಲೆಗಳನ್ನೇ ಸ್ಥಾಪಿಸಿರಲಿಲ್ಲ. ಹಾಗೂ 23 ಮೈಕ್ರೋ ಬ್ರೂವೆರಿಗಳಲ್ಲಿ ಬಿಯರ್ ತಯಾರಿಸುವ ಸಮಯದಲ್ಲಿ ಮ್ಯಾಶಿಂಗ್ ಪ್ರಕ್ರಿಯೆಯಿಂದ ಹೊರತೆಗೆಯಲಾದ ದ್ರವದ ಮಾದರಿಗಳನ್ನು ವಿಶ್ಲೇಷಣೆಗಾಗಿ ಇಲಾಖೆಯ ರಾಸಾಯನಿಕ ಪ್ರಯೋಗಾಲಯಕ್ಕೆ ಕಳಿಸಿರಲಿಲ್ಲ. ಹೈಡ್ರೋ ಮೀಟರ್ ಮತ್ತು ತಾಜಾ ಬಿಯರ್‍ಗಳೂ ಸಹ ಆವರಣದಲ್ಲಿ ಲಭ್ಯವಿರಲಿಲ್ಲ.
ಬಿಯರ್‍ಗಳಲ್ಲಿ ಮದ್ಯದ ಅಂಶವನ್ನು ಪರಿಣಾಮ ಶೇ.8ರವರೆಗೆ ಮೀರಬಾರದು. 18 ಮೈಕ್ರೋ ಬ್ರೂವೆರಿಗಳ್ಲಲಿ ಮದ್ಯದ ಅಂಶದ ಶಕ್ತಿಯನ್ನು ಅಳೆಯಲು ಯಾವುದೇ ಉಪಕರಣಗಳೂ ಇರಲಿಲ್ಲ. ಆದರೂ ಅಬಕಾರಿ ಇಲಾಖೆಯ ಅಧಿಕಾರಿ ವರ್ಗವು ಮೈ ಮರೆತಿತ್ತು.
‘ಮೈಕ್ರೋ ಬ್ರೂವೆರಿಗಳಲ್ಲಿ ಗುಣಮಟ್ಟಕ್ಕೆ ಸಂಬಂಧಿಸಿದ ನಿರ್ಣಾಯಕ ನಿಯತಾಂಕಗಳನ್ನು ದಾಖಲಿಸದ ಕಾರಣ, ಮೈಕ್ರೋ ಬ್ರೂವೆರಿಗಳಲ್ಲಿ ತಯಾರಿಸಿದ ಬಿಯರ್ ಉತ್ಪಾದನೆ ಮತ್ತು ಗುಣಮಟ್ಟದ ಮೇಲೆ ಇಲಾಖೆಗೆ ಯಾವುದೇ ನಿಯಂತ್ರಣವಿರಲಿಲ್ಲ. ಅಂತಹ ಸನ್ನಿವೇಶದಲ್ಲಿ ದಾಖಲಿಸದ ಉತ್ಪಾದನೆ ಮತ್ತು ಗುಣಮಟ್ಟದ ಮೇಲೆ ರಾಜಿ ಸಂಭವಿಸಬಹುದು. ಇದು ಆದಾಯ ಮತ್ತು ಸಾಮಾಜಿಕ ಪರಿಣಾಮಗಳಿಗೆ ಕಾರಣವಾಗಬಹುದು,’ ಎಂದು ಸಿಎಜಿಯು ಆತಂಕ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
ಮೈಕ್ರೋ ಬ್ರೂವೆರಿಗಳಲ್ಲಿ ಮಾಲ್ಟ್ ಕೊರತೆ
ರಾಜ್ಯದ ಒಟ್ಟು 25 ಮೈಕ್ರೋ ಬ್ರೂವೆರಿಗಳ ಪೈಕಿ 2 ಮೈಕ್ರೋ ಬ್ರೂವೆರಿಗಳಲ್ಲಿ ಒಟ್ಟು 6,596 ಕಿಲೋ ಗ್ರಾಂ ಮಾಲ್ಟ್ ಕೊರತೆ ಇರುವುದನ್ನು ಲೆಕ್ಕ ಪರಿಶೋಧನೆಯು ಗಮನಿಸಿದೆ.
ಮೈಕ್ರೋ ಬ್ರೂವೆರಿಗಳಲ್ಲಿ ಬಿಯರ್ ಉತ್ಪಾದನೆಗಾಗಿ ಮಾಲ್ಟ್‌ನ ನಿಜವಾದ ಬಳಕೆಯನ್ನು ದಾಖಲಿಸಲು ಯಾವುದೇ ನಿಯಮಿತವಾದ ಕ್ರಮಗಳೇ ಇರಲಿಲ್ಲ. ಹೀಗಾಗಿ ಈ ಮೈಕ್ರೋ ಬ್ರೂವೆರಿಗಳಲ್ಲಿ ಎಷ್ಟು ಪ್ರಮಾಣದ ಬಿಯರ್ ಉತ್ಪಾದನೆಯಾಗಿದೆ ಮತ್ತು ಎಷ್ಟು ಮಾರಾಟವಾಗಿದೆ ಎಂಬ ವಹಿವಾಟನ್ನು ತಪಾಸಣೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಉತ್ಪಾದನೆಯು ಕಡಿಮೆಯಾಗಿ ಘೋಷಣೆ ಮಾಡುವ ಸಾಧ್ಯತೆ ಇತ್ತು. ಮತ್ತು ಸರ್ಕಾರದ ಖಜಾನೆಗೆ ನಷ್ಟವಾಗುವ ಸಾಧ್ಯತೆಯೂ ಇದೆ ಎಂದು ಸಿಎಜಿಯು ಹೇಳಿದೆ.
ಈ ಕುರಿತು ಸಿಎಜಿ ವ್ಯಕ್ತಪಡಿಸಿದ್ದ ಆಕ್ಷೇಪಣೆಗಳ ಕುರಿತು ಆರ್ಥಿಕ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ಅವರೊಂದಿಗೆ ಚರ್ಚಿಸಿದ್ದರು. ಚರ್ಚಿಸಿದ ನಂತರ ಸಿಎಜಿಗೆ ಸಮಜಾಯಿಷಿಯನ್ನೂ ನೀಡಿದ್ದರು. ಆದರೆ ಇಲಾಖೆಯು ನೀಡಿರುವ ಸಮಜಾಯಿಷಿಯನ್ನು ಸಿಎಜಿಯು ಒಪ್ಪಿಲ್ಲದಿರುವುದು ವರದಿಯಿಂದ ತಿಳಿದು ಬಂದಿದೆ.