ಬೆಂಗಳೂರು; ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಇನ್ನೂ 1,700 ಕೋಟಿ ರು ಮೊತ್ತದ ಬಿಲ್‌ಗಳು ಬಾಕಿ ಇವೆ. ಕೇಂದ್ರದಿಂದ ಈ ಯೋಜನೆಗೆ ಯಾವುದೇ ಬಿಡುಗಡೆಯಾಗಿಲ್ಲ. ಹೀಗಾಗಿ ಗ್ರಾಮೀಣ ರಸ್ತೆ ಮತ್ತು ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪ್ರಗತಿಯು ನಿರೀಕ್ಷಿತ ಪ್ರಮಾಣದಲ್ಲಿಲ್ಲ.
ಅಲ್ಲದೇ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಉಪ ಯೋಜನೆಯಡಿಯಲ್ಲಿಯೂ ಪ್ರಗತಿಯು ಕುಂಠಿತವಾಗಿದೆ. ಅದೇ ರೀತಿ ಲೋಕೋಪಯೋಗಿ ಇಲಾಖೆಯಲ್ಲಿ ಜುಲೈ ಅಂತ್ಯಕ್ಕೆ ವೇತನೇತರ ವೆಚ್ಚದಲ್ಲಿ 1,297 ಕೋಟಿ ವೆಚ್ಚವಾಗದೇ ಬಾಕಿ ಉಳಿಸಿಕೊಂಡಿದೆ. ಹಾಗೆಯೇ 21 ಇಲಾಖೆಗಳಲ್ಲಿ ಶೇ.20ಕ್ಕಿಂತಲೂ ಕಡಿಮೆ ಪ್ರಗತಿಯಾಗಿದೆ.
ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ 2025ರ ಆಗಸ್ಟ್ 6ರಂದು ನಡೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಪ್ರಗತಿ ಕುರಿತು ಚರ್ಚೆ ನಡೆದಿತ್ತು. ಈ ಸಭೆಯಲ್ಲಿ ವಿವಿಧ ಇಲಾಖೆಗಳ ಕಾರ್ಯವೈಖರಿಯನ್ನು ಒರೆಗೆ ಹಚ್ಚಲಾಗಿದೆ. ಈ ಸಭೆಯ ನಡವಳಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
2025-26ನೇ ಸಾಲಿನಲ್ಲಿ ಒಟ್ಟು 3,59,881 ಕೋಟಿ ಅನುದಾನ ಲಭ್ಯವಾಗಿಸಿಕೊಂಡಿದೆ. ಜುಲೈ ಅಂತ್ಯಕ್ಕೆ 1,02,065 ಕೋಟಿ ಬಿಡುಗಡೆಯಾಗಿದೆ. ಈ ಪೈಕಿ 71,456 ಕೋಟಿ ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ. 20ರಷ್ಟು ಮತ್ತು ಲಭ್ಯ ಅನುದಾನಕ್ಕೆ ಶೇ.64ರಷ್ಟು ಪ್ರಗತಿಯಾಗಿದೆ. ಹಾಗೂ ಕಳೆದ ಸಾಲಿನಲ್ಲಿಲ ಇದೇ ಸಮಯಕ್ಕೆ ಶೇ.25ರಷ್ಟು ಪ್ರಗತಿಯಾಗಿತ್ತು.
ಪ್ರಸಕ್ತ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಡಿಯಲ್ಲಿ ಗ್ರಾಮೀಣ ರಸ್ತೆಗಳಲ್ಲಿ 1,000 ಕೋಟಿ ಮತ್ತು ಮುಖ್ಯಮಂತ್ರಿಗಳ ಮೂಲಸೌಲಭ್ಯ ಅಭಿವೃದ್ಧಿ ಕಾರ್ಯಕ್ರಮಕ್ಕೆ 900 ಕೋಟಿ ಮತ್ತು ಸಣ್ಣ ನೀರಾವರಿ ಇಲಾಖೆ ಪಿಎಂಎಸ್‌ಕೆವೈ ಅಡಿಯಲ್ಲಿ 1,145 ಕೋಟಿ ರು ಮೊತ್ತದ ಕ್ರಿಯಾ ಯೋಜನೆಗಳ ಅನುಮೋದನೆಯು ವಿಳಂಬವಾಗಿದೆ. ಶೀಘ್ರವಾಗಿ ಕ್ರಿಯಾ ಯೋಜನೆಗಳ ಮೂಲಕ ಅನುಮೋದನೆ ಪಡೆಯುವಲ್ಲಿ ಇಲಾಖೆ ಮುಖ್ಯಸ್ಥರು ಹಿಂದೆ ಬಿದ್ದಿರುವುದು ನಡವಳಿಯಿಂದ ತಿಳಿದು ಬಂದಿದೆ.
21 ಇಲಾಖೆಗಳಲ್ಲಿ ಶೇ. 20ಕ್ಕಿಂತಲೂ ಕಡಿಮೆ ಪ್ರಗತಿ
ಜಲಸಂಪನ್ಮೂಲ, ಸಮಾಜ ಕಲ್ಯಾಣ, ಅರಣ್ಯ, ಸಣ್ಣ ನೀರಾವರಿ, ಹಿಂದುಳಿದ ವರ್ಗಗಳು, ಕಾರ್ಮಿಕ, ಅಲ್ಪಸಂಖ್ಯಾತರ ಕಲ್ಯಾಣ, ವಾಣಿಜ್ಯ ಕೈಗಾರಿಕೆ, ಮೂಲಭೂತ ಸೌಕರ್ಯ, ಯುವ ಸಬಲೀಕರಣ, ಪರಿಶಿಷ್ಟ ಪಂಗಡಗಳ ಕಲ್ಯಾಣ, ಕನ್ನಡ ಸಂಸ್ಕೃತಿ, ವಾರ್ತಾ, ಮೀನುಗಾರಿಕೆ, ಮಾಹಿತಿ ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪ್ರವಾಸೋದ್ಯಮ, ಯೋಜನಾ ಇಲಾಖೆಗಳಲ್ಲಿ ಒಟ್ಟು ಅನುದಾನಕ್ಕೆ ಶೇ. 20ಕ್ಕಿಂತಲೂ ಕಡಿಮೆ ಪ್ರಗತಿ ಸಾಧಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 1,700 ಕೋಟಿ ರು ಬಿಲ್‌ಗಳು ಪಾವತಿ ಬಾಕಿ ಇರುವುದು ಕುರಿತು ಪ್ರಗತಿ ಸಭೆಯಲ್ಲಿ ಚರ್ಚೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಕೇಂದ್ರದಿಂದ ಯಾವುದೇ ಹಣ ಬಿಡುಗಡೆಯಾಗಿಲ್ಲ. ಮುಂದಿನ ತಿಂಗಳು ಕೇಂದ್ರದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ ನಂತರ ಹಣ ಬಿಡುಗಡೆಯಾಗಬಹುದು ಎಂದು ಇಲಾಖೆ ಮುಖ್ಯಸ್ಥರು ಸಭೆಗೆ ತಿಳಿಸಿರುವುದು ನಡವಳಿಯಿಂದ ಗೊತ್ತಾಗಿದೆ.
‘ಗ್ರಾಮೀಣ ರಸ್ತೆ ಮತ್ತು ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮುಂದಿನ ವಾರದಲ್ಲಿ ಪ್ರಗತಿಯಾಗಲಿದೆ,’ ಎಂದು ಇಲಾಖೆ ಮುಖ್ಯಸ್ಥರು ಸಭೆಗೆ ಮಾಹಿತಿ ನೀಡಿರುವುದು ತಿಳಿದು ಬಂದಿದೆ.
ಪಿಡಬ್ಲ್ಯೂಡಿಯಲ್ಲಿ 1,297 ಕೋಟಿ ಉಳಿಕೆ
ಲೋಕೋಪಯೋಗಿ ಇಲಾಖೆಯಲ್ಲಿ ಜುಲೈ ಅಂತ್ಯಕ್ಕೆ 3,202 ಕೋಟಿ ರು ಬಿಡುಗಡೆಯಾಗಿತ್ತು. ಈ ಪೈಕಿ 1,790 ಕೋಟಿ ವೆಚ್ಚವಾಗಿದೆ. ವೇತನೇತರ ಕಾರ್ಯಕ್ರಮಗಳಲ್ಲಿ ಒಟ್ಟು 1,297 ಕೊಟಿ ವೆಚ್ಚವಾಗದೇ ಬಾಕಿ ಉಳಿದಿದೆ. ಹೀಗಾಗಿ ಬಾಕಿ ಇರುವ ಬಿಲ್‌ಗಳ ಪಾವತಿಸಲು ಕ್ರಮ ವಹಿಸಬೇಕು ಎಂದು ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಅವರು ಸೂಚಿಸಿರುವುದು ನಡವಳಿಯಿಂದ ಗೊತ್ತಾಗಿದೆ.
ಎಸ್‌ಸಿಎಸ್‌ಪಿ ಟಿಎಸ್‌ಪಿ ಪ್ರಗತಿ ಕುಂಠಿತ
2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಅಡಿಯಲ್ಲಿ 30,001 ಕೋಟಿ ರು ಅನುದಾನ ಹಂಚಿಕೆಯಾಗಿದೆ. ಜುಲೈ ಅಂತ್ಯಕ್ಕೆ 5,504 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 4,696 ಕೋಟಿ (ಆರಂಭಿಕ ಶಿಲ್ಕು ಸೇರಿ) ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ.15ರಷ್ಟು ಪ್ರಗತಿಯಾಗಿದೆ. ಅದೇ ರೀತಿ ಟಿಎಸ್‌ಪಿ ಅಡಿಯಲ್ಲಿ 12,029 ಕೋಟಿ ರು ಅನುದಾನ ಹಂಚಿಕೆಯಾಗಿದೆ. ಜುಲೈ ಅಂತ್ಯಕ್ಕೆ 1,744 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 1,659 ಕೋಟಿ ವೆಚ್ಚವಾಗಿದೆ. ಒಟ್ಟು ಅನುದಾನಕ್ಕೆ ಶೇ. 13ರಷ್ಟು ಪ್ರಗತಿಯಾಗಿದೆ.
ಆದರೂ ಬಹುತೇಕ ಕ್ರಿಯಾ ಯೋಜನೆಗಳು ಇನ್ನೂ ಅನುಮೋದನೆ ಹಂತದಲ್ಲೇ ಇವೆ. ಹೀಗಾಗಿ ಪ್ರಗತಿಯು ಕುಂಠಿತವಾಗಿದೆ ಎಂದು ಸಭೆಯಲ್ಲಿ ಇಲಾಖೆ ಮುಖ್ಯಸ್ಥರು ಸಭೆಗೆ ಮಾಹಿತಿ ನೀಡಿದ್ದಾರೆ.
ಮಹತ್ವಾಕಾಂಕ್ಷೆ ತಾಲೂಕುಗಳಿಗೆ ಬಿಡುಗಡೆಯಾಗದ ಅನುದಾನ
2025-26ನೇ ಸಾಲಿನಲ್ಲಿ ಮಹತ್ವಾಕಾಂಕ್ಷೆ ತಾಲೂಕುಗಳ ಕಾರ್ಯಕ್ರಮಗಳ ಅಡಿಯಲ್ಲಿ ವಿವಿಧ ಇಲಾಖೆಗಳ ಕಾರ್ಯಕ್ರಮಗಳಿಗೆ ಒಟ್ಟು 3,438.66 ಕೋಟಿ ರು ಅನುದಾನ ಹಂಚಿಕೆಯಾಗಿದೆ. ಆದರೆ ಇದುವರೆಗೂ ಹಲವು ಇಲಾಖೆ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಆಗಿಲ್ಲ. ಹೀಗಾಗಿ ಶೂನ್ಯ ವೆಚ್ಚವಾಗಿದೆ. ಈ ತಾಲೂಕುಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಇಲಾಖೆಗಳು ನಿರೀಕ್ಷಿತ ಪ್ರಮಾಣದಲ್ಲಿ ಕ್ರಿಯಾ ಯೋಜನೆ ರೂಪಿಸಿಲ್ಲ ಎಂಬುದು ನಡವಳಿಯಿಂದ ತಿಳಿದು ಬಂದಿದೆ.
ಕೇಂದ್ರದಿಂದ ಬಿಡುಗಡೆಯಾಗಿದ್ದು ಕೇವಲ 4,903 ಕೋಟಿ
ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಡಿಯಲ್ಲಿ 2025-26ನೇ ಸಾಲಿನಲ್ಲಿ ಜುಲೈ ಅಂತ್ಯಕ್ಕೆ ಕೇಂದ್ರದ ಅನದುಅನ 24,872 ಕೋಟಿಗಳಲ್ಲಿ 4,903 ಕೋಟಿ ರು ಮಾತ್ರ ಬಿಡುಗಡೆಯಾಗಿದೆ. ಒಟ್ಟು ಅನುದಾನಕ್ಕೆ ಶೇ.20ರಷ್ಟು ಮಾತ್ರ ಬಿಡುಗಡೆಯಾಗಿದೆ. ರಾಜ್ಯದ ಪಾಲು ಸೇರಿ ಒಟ್ಟು 8,357 ಕೊಟಿ ವೆಚ್ಚವಾಗಿದೆ. ಒಟ್ಟಾರೆ ಲಭ್ಯ ಅನುದಾನಕ್ಕೆ ಶೇ.67ರಷ್ಟು ಪ್ರಗತಿಯಾಗಿದೆ. ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ ಕೇಂದ್ರದ ಅನುದಾನ 24,502 ಕೋಟಿಗಳಲ್ಲಿ 8,174 ಕೋಟಿ ಕೇಂದ್ರದಿಂದ ಬಿಡುಗಡೆಯಾಗಿತ್ತು. ಒಟ್ಟು ಅನುದಾನಕ್ಕೆ ಶೇ. 33ರಷ್ಟಿತ್ತು. ಒಟ್ಟಾರೆ ರಾಜ್ಯದ ಪಾಲು ಸೇರಿ 13,468 ಕೊಟಿ ರು ವೆಚ್ಚವಾಗಿತ್ತು. ಒಟ್ಟಾರೆ ಲಭ್ಯ ಅನುದಾನಕ್ಕೆ ಶೇ. 60ರಷ್ಟು ಪ್ರಗತಿಯಾಗಿರುವುದರ ಕುರಿತು ಸಭೆಯಲ್ಲಿ ಚರ್ಚೆಯಾಗಿರುವುದು ನಡವಳಿಯಿಂದ ತಿಳಿದು ಬಂದಿದೆ.
ಸರಿಯಾಗಿ ಬಿಡುಗಡೆಯಾಗದ ಕೇಂದ್ರದ ಅನುದಾನ
ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳಿಗೆ ಕೇಂದ್ರದಿಂದ ಸರಿಯಾಗಿ ಹಣ ಬಿಡುಗಡೆಯಾಗುತ್ತಿಲ್ಲ. ರಾಜ್ಯದ ಪಾಲಿನ ಅನುದಾನ ಮಾತ್ರ ಬಿಡುಗಡೆ ಮಾಡಿ ಅನುಮೋದಿತ ಕ್ರಿಯಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದನ್ನು ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರತ್ಯೇಕವಾಗಿ ಪರಿಶೀಲನಾ ಸಭೆಯನ್ನು ನಡೆಸಬೇಕು. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆಯಲು ತಿಳಿಸಲು ಸಭೆಯು ಸೂಚಿಸಿರುವುದು ಗೊತ್ತಾಗಿದೆ.
113 ಕೋಟಿಗೆ ಸ್ಪಷ್ಟೀಕರಣ ಕೇಳಿದ ಕೇಂದ್ರ
ಶಾಲಾ ಶಿಕ್ಷಣ ಇಲಾಖೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಪುರಸ್ಕೃತ ಕಾರ್ಯಕ್ರಮವಾಗಿರುವ ಪಿಎಂ ಶ್ರೀ ಯೋಜನೆಯಡಿ 113 ಕೋಟಿ ರು ಬಿಡುಗಡೆಯಾಗಿತ್ತು. ಸಮಗ್ರ ಶಿಕ್ಷಣ ಯೋಜನೆಯಡಿ ಹಣ ಬಳಕೆ ಪ್ರಮಾಣ ಪತ್ರ ಮತ್ತು ಕೇಂದ್ರ ಸಚಿವಾಲಯವು ಸ್ಪಷ್ಟೀಕರಣವನ್ನು ಕೇಳಿತ್ತು. ಪ್ರಸ್ತುತ ತಿಂಗಳಿನಿಂದ ಕೇಂದ್ರದಿಂದ ಹಣ ಬಿಡುಗಡೆಯಾಗಲಿದೆ ಎಂದು ಇಲಾಖೆ ಮುಖ್ಯಸ್ಥರು ಸಭೆಗೆ ಮಾಹಿತಿ ನೀಡಿರುವುದು ಗೊತ್ತಾಗಿದೆ.
ಹಲವು ಕಾರ್ಯಕ್ರಮಗಳಿಗೆ ಕೇಂದ್ರದಿಂದ ಬಿಡಿಗಾಸಿಲ್ಲ
ಜಲಸಂಪನ್ಮೂಲ ಇಲಾಖೆಯ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆ, ಎಐಬಿಪಿ ಕಾರ್ಯಕ್ರಮಗಳು, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಮಂತ್ರಿ ಮಾತೃ ವಂದನೆ ಯೋಜನೆ, ಅಂಗನವಾಡಿ ಕಟ್ಟಡಗಳ ಉನ್ನತೀಕರಣ, ಪೋಷಣ ಅಭಿಯಾನ, ವಸತಿ ಇಲಾಖೆಯ ಪ್ರಧಾನ ಮಂತ್ರಿಯ ಆವಾಸ್ ಯೋಜನೆ, ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಇಲಾಖೆಯ ಪರಿಶಿಷ್ಟ ವಿದ್ಯಾರ್ಥಿಗಳೀಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ, ಒಳಾಡಳಿತ ಇಲಾಖೆಯ ಸೇಫ್ ಸಿಟಿ ಯೋಜನೆ, ಭಾರತೀಯ ಮೀಸಲು ಪಡೆ ಕಾರ್ಯಕ್ರಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಕಾರ್ಯಕ್ರಮಗಳಲ್ಲಿ ಕೇಂದ್ರದಿಂದ ಬಿಡಿಗಾಸೂ ಸಹ ಬಂದಿಲ್ಲ.
ಸರಕು ಮತ್ತು ಸೇವೆಗಳ ಖರೀದಿಯಡಿ ಒಟ್ಟಾರೆಯಾಗಿ ಪ್ರಸಕ್ತ ಸಾಲಿನಲ್ಲಿ 1,326.49 ಕೋಟಿ ಹಂಚಿಕೆಯಾಗಿದೆ. ಈ ಪೈಕಿ ಜುಲೈ ಅಂತ್ಯಕ್ಕೆ 188.54 ಕೋಟಿ ವೆಚ್ಚವಾಗಿದೆ. ಬಾಕಿ ಇರುವ ಅನುದಾನವನ್ನು ವೆಚ್ಚ ಮಾಡಲು ಸಂಬಂಧಪಟ್ಟ ಇಲಾಖೆಗಳು ಟೆಂಡರ್ ಪ್ರಕ್ರಿಯೆಯು ವಿಳಂಬವಾಗಿರುವುದೇ ಇದಕ್ಕೆ ಕಾರಣ ಎಂದು ನಡವಳಿಯಿಂದ ತಿಳಿದು ಬಂದಿದೆ.
ಪಿಡಬ್ಲ್ಯೂಡಿಯಲ್ಲಿ 1,297 ಕೋಟಿ ರು ವೆಚ್ಚವಾಗದಿರುವುದು ಮತ್ತು ಜಲಜೀವನ್ ಮಿಷನ್ ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ 1,700 ಕೋಟಿ ರು ಬಾಕಿ ಪಾವತಿಯಾಗದಿರುವುದರ ಕುರಿತು ‘ದಿ ಫೈಲ್’, ಈ ಎರಡೂ ಇಲಾಖೆಗಳ ಮುಖ್ಯಸ್ಥರನ್ನು ಭೇಟಿ ಮಾಡಿತ್ತು. ‘ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಉಭಯ ಇಲಾಖೆಗಳ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಪ್ರತಿಕ್ರಿಯೆ ನೀಡಿದರು.