ಬೆಂಗಳೂರು; ರಾಜ್ಯದ ಸಂಚಿತ ನಿಧಿಯನ್ನು ಕಡೆಗಣಿಸಿ 8,873.10 ಕೋಟಿಯನ್ನು ನೇರವಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ವರ್ಗಾಯಿಸಿದ್ದನ್ನು ಪ್ರಧಾನ ಮಹಾಲೇಖಪಾಲರು ಮತ್ತು ಲೆಕ್ಕ ಪರಿಶೋಧಕರು ಪತ್ತೆ ಹಚ್ಚಿದ್ದಾರೆ.
ಅಲ್ಲದೇ 2017-18ರಿಂದ 2023024ರವರೆಗೆ 118.64 ಕೋಟಿ ರು.ಗಳಿಗೆ ಬಳಕೆ ಪ್ರಮಾಣ ಪತ್ರಗಳನ್ನು ಇಲಾಖೆಗಳು ಸಲ್ಲಿಸಿಲ್ಲ. ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಇರುವುದು ಹಣ ದುರುಪಯೋಗಕ್ಕೆ ದಾರಿ ಮಾಡಿಕೊಟ್ಟಿರುವ ಸಾಧ್ಯತೆಗಳಿವೆ. 2023-24ರ ಅವಧಿಯಲ್ಲೇ ಅತೀ ಹೆಚ್ಚು ಎಂದರೇ 95.29 ಕೋಟಿ ರು ವೆಚ್ಚಕ್ಕೆ ಬಳಕೆ ಪ್ರಮಾಣ ಪತ್ರಗಳು ಸಲ್ಲಿಕೆಯಾಗಿಲ್ಲ. ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಇರುವ ಅಧಿಕಾರಿಗಳನ್ನು ಇದುವರೆಗೂ ಹೊಣೆಗಾರರನ್ನಾಗಿ ಮಾಡಿಲ್ಲ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ, ರಾಷ್ಟ್ರೀಯ ಜಾನುವಾರು ಮಿಷನ್, ರಾಷ್ಟ್ರೀಯ ಸೇವಾ ಯೋಜನೆ, ತೃತೀಯ ಆರೈಕೆ ಕಾರ್ಯಕ್ರಮ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಗಳಲ್ಲಿ ನೇರವಾಗಿ 8,873.09 ಕೋಟಿ ರು.ಗಳನ್ನು ವರ್ಗಾಯಿಸಿದೆ ಎಂದು ಸಿಎಜಿ ಲೆಕ್ಕ ಪರಿಶೋಧನೆಯಲ್ಲಿ ಬೆಳಕಿಗೆ ತಂದಿದೆ.
2025ರ ಆಗಸ್ಟ್‌ನಲ್ಲಿ ರಾಜ್ಯ ವಿಧಾನಮಂಡಲಕ್ಕೆ ಮಂಡನೆಯಾಗಿರುವ ರಾಜ್ಯ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನಾ ವರದಿಯು, ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ನೇರವಾಗಿ ಹಣ ವರ್ಗಾವಣೆ ಆಗಿರುವುದನ್ನು ವಿವರಿಸಿದೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮಕ್ಕೆ 4,968.24 ಕೋಟಿ, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ 3,830.58 ಕೋಟಿ ರು., ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆ 6.81 ಕೋಟಿ, ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನಕ್ಕೆ 0.14 ಕೋಟಿ, ರಾಷ್ಟ್ರೀಯ ಜಾನುವಾರು ಮಿಷನ್‌ಗೆ 0.93 ಕೋಟಿ, ರಾಷ್ಟ್ರೀಯ ಸೇವಾ ಯೋಜನೆಗೆ 15.47 ಕೋಟಿ, ತೃತೀಯ ಆರೈಕೆ ಕಾರ್ಯಕ್ರಮಗಳಿಗೆ 19.92 ಕೋಟಿ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ಗೆ 31.00 ಕೋಟಿ ರು. ಸೇರಿ ಒಟ್ಟಾರೆ 8,873.09 ಕೋಟಿ ರು.ಗಳನ್ನು ರಾಜ್ಯ ಸಂಚಿತ ನಿಧಿಯನ್ನು ಕಡೆಗಣಿಸಿ ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ನೇರವಾಗಿ ವರ್ಗಾಯಿಸಿತ್ತು ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಈ ಕಾರ್ಯಕ್ರಮಗಳಿಗೆ ರಾಜ್ಯ ಆಯವ್ಯಯದ ಮೂಲಕ 2,162.59 ಕೋಟಿ ರು ಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಎಲ್ಲಾ ಕಾರ್ಯಕ್ರಮಗಳಿಗೆ ಒಟ್ಟಾರೆಯಾಗಿ 11,035.68 ಕೋಟಿ ರು ಗಳಾಗಿತ್ತು.
ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ಗಣನೀಯ ಪ್ರಮಾಣದ ಹಣವನ್ನು ನೇರವಾಗಿ ರಾಜ್ಯ ಅನುಷ್ಠಾನ ಸಂಸ್ಥೆಗಳಿಗೆ ವರ್ಗಾಯಿಸುತ್ತಿದೆ. ಕೇಂದ್ರ ಸರ್ಕಾರವು 2014-15ರಿಂದ ರಾಜ್ಯ ಆಯವ್ಯಯದ ಮೂಲಕ ಈ ಹಣವನ್ನು ವರ್ಗಾವಣೆ ಮಾಡಲು ನಿರ್ಧರಿಸಿತ್ತು. ಆದರೂ ಸಹ 2023-24ರ ಅವಧಿಯಲ್ಲಿ ಕೇಂದ್ರ ಸರ್ಕಾರವು 22,308.76 ಕೋಟಿಗಳನ್ನು ಅನುಷ್ಠಾನ ಸಂಸ್ಥೆಗಳಿಗೆ ನೇರವಾಗಿ ವರ್ಗಾಯಿಸಿತು. ಈ ಪೈಕಿ ರಾಜ್ಯ ಸಂಚಿತ ನಿಧಿಯನ್ನು ಕಡೆಗಣಿಸಿ 8,873.10 ಕೋಟಿಯನ್ನು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ವರ್ಗಾಯಿಸಿದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಕರ್ನಾಟಕ ಆರ್ಥಿಕ ಸಂಹಿತೆ 1958ರ ನಿಯಮ 161(5)ರ ಪ್ರಕಾರ ನಿರ್ದಿಷ್ಟ ಉದ್ದೇಶಗಳಿಗಾಗಿ ಒದಗಿಸಿದ್ದ ಅನುದಾನಗಳಿಗೆ ಸಂಬಂಧಿಸಿದಂತೆ ಮಂಜೂರಾತಿ ದಿನಾಂಕದಿಂದ 18 ತಿಂಗಳ ಒಳಗಾಗಿ ಇಲಾಖೆ ಅಧಿಕಾರಿಗಳು ಬಳಕೆ ಪ್ರಮಾಣ ಪತ್ರಗಳನ್ನು ಪಡೆಯಬೇಕು. ಮತ್ತು ಇವುಗಳನ್ನು ಪರಿಶೀಲನೆ ನಡೆಸಿದ ನಂತರ ಮಹಾಲೇಖಪಾಲರಿಗೆ ಕಳಿಸಬೇಕು.
ನಿಗದಿತ ಅವಧಿಗಳನ್ನು ಮೀರಿದ ಬಳಕೆ ಪ್ರಮಾಣ ಪತ್ರಗಳು ಉದ್ದೇಶಿತ ಕಾರ್ಯಕ್ಕಾಗಿ ಅನುದಾನದ ಬಳಕೆ ಕುರಿತು ಹೆಚ್ಚು ಅನುಮಾನಗಳಿಗೆ ದಾರಿ ಮಾಡಿಕೊಡುತ್ತದೆ.
118.64 ಕೋಟಿ ವೆಚ್ಚದ ಬಳಕೆ ಪ್ರಮಾಣ ಪತ್ರಗಳೆಲ್ಲಿ?
2017-18ರಿಂದ 2023-24ರವರೆಗೆ ಒಟ್ಟಾರೆ 118.64 ಕೋಟಿ ರು ವೆಚ್ಚದ ಬಳಕೆ ಪ್ರಮಾಣ ಪತ್ರಗಳನ್ನು ಸಕ್ಷಮ ಪ್ರಾಧಿಕಾರಗಳಿಂದ ಇಲಾಖೆಗಳು ಪಡೆದುಕೊಂಡಿಲ್ಲ. 2017-18ರಲ್ಲಿ 0.76 ಕೋಟಿ, 2020-21ರಲ್ಲಿ 9.22 ಕೋಟಿ, 2021-22ರಲ್ಲಿ 8.12 ಕೋಟಿ, 2022-23ರಲ್ಲಿ 5.25 ಕೋಟಿ, 2023-24ರಲ್ಲಿ 95.29 ಕೋಟಿ ರು ವೆಚ್ಚಕ್ಕೆ ಸಂಬಂಧಿಸಿದಂತೆ ಬಳಕೆ ಪ್ರಮಾಣ ಪತ್ರಗಳು ಸಲ್ಲಿಕೆಯಾಗಿಲ್ಲ ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ಬಳಕೆಯಾಗದ ಅನುದಾನವನ್ನು ಸರ್ಕಾರಕ್ಕೆ ವಾಪಸ್ ಮಾಡಬೇಕು ಅಥವಾ ನಂತರದ ವರ್ಷದಲ್ಲಿ ಪಡೆಯಬೇಕಾದ ಅನುದಾನಕ್ಕೆ ಸರಿ ಹೊಂದಿಸಬೇಕು ಎಂದು ನಿಯಮದಲ್ಲಿ ಸ್ಪಷ್ಟವಾಗಿದೆ. 2022-23ರ ಅವಧಿಯಲ್ಲಿ 48 ಬಳಕೆ ಪ್ರಮಾಣ ಪತ್ರಗಳು ಬಾಕಿ ಇದ್ದವು. ಇದರ ಮೊತ್ತ 41.67 ಕೋಟಿ ರು ಮೊತ್ತದ್ದಾಗಿತ್ತು. ನಂತರ ಈ ಸಂಖ್ಯೆಯು 92ಕ್ಕೇರಿತು. ಇದರ ಮೊತ್ತ 118.64 ಕೋಟಿ ಗಳಾಗಿದೆ. ಅನುದಾನ ಬಳಕೆ ಮೇಲೆ ಇಲಾಖೆಗಳ ಮೇಲ್ವಿಚಾರಣೆಯ ಕೊರತೆ ಹೇಗಿತ್ತು ಎಂಬುದನ್ನು ಸಿಎಜಿಯು ವಿಶ್ಲೇಷಿಸಿರುವುದು ಗೊತ್ತಾಗಿದೆ.
2023-24ರ ಅವಧಿಯಲ್ಲಿ ಎರಡು ಇಲಾಖೆಗಳಿಗೆ ಸಂಬಂಧಿಸಿದಂತೆ 118.64 ಕೋಟಿ ರು ಮೊತ್ತಕ್ಕೆ ಬಳಕೆ ಪ್ರಮಾಣ ಪತ್ರಗಗಳು ಬಾಕಿ ಉಳಿದಿದ್ದವು. 2021-22ರ ಅವಧಿಯಲ್ಲಿ ಕ್ರೀಡೆ ಮತ್ತು ಯುವಜನ ಸೇವೆಗಳು, ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ, ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿಯೂ ಬಳಕೆ ಪ್ರಮಾಣ ಪತ್ರಗಳು ಬಾಕಿ ಇದ್ದವು.
‘ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದಿರುವುದು ಹಣ ದುರುಪಯೋಗದ ಅಪಾಯದಿಂದ ಕೂಡಿದೆ. ರಾಜ್ಯ ಸರ್ಕಾರವು ಈ ಅಂಶವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ತನ್ನ ಪ್ರಯತ್ನವನ್ನು ಮುಂದುವರೆಸಬೇಕು. ಮತ್ತು ಬಳಕೆ ಪ್ರಮಾಣ ಪತ್ರಗಳನ್ನು ಸಕಾಲಿಕವಾಗಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದೆ.
ಪ್ರತೀ ವರ್ಷ ರಾಜ್ಯವು ಸ್ಥಳೀಯ ಸಂಸ್ಥೆಗಳು, ಪಂಚಾಯತ್‌ರಾಜ್ ಸಂಸ್ಥೆಗಳು, ಸಾರ್ವಜನಿಕ ಉದ್ಯಮಗಳು, ಎನ್‌ಜಿಒಗಳು, ಸ್ವಾಯತ್ತೆ ಸಂಸ್ಥೆಗಳು ಇತ್ಯಾದಿಗಳಿಗೆ ಸಹಾಯಾನುದಾನವನ್ನು ಬಿಡುಗಡೆ ಮಾಡುತ್ತಿದೆ. ಕೆಲವು ಮಂಡಳಿಗಳು, ಕಾಲೇಜುಗಳು ಇತ್ಯಾದಿ ಸಂಸ್ಥೆಗಳು ಮಹಾಲೇಖಪಾಲರ ಕಚೇರಿಗೆ ಬಳಕೆ ಪ್ರಮಾಣ ಪತ್ರಗಳನ್ನು ಒದಗಿಸುತ್ತಿವೆ. ಶೇ.90ರಷ್ಟು ಸಹಾಯಾನುದಾನ ಪಡೆದ ಸಂಸ್ಥೆಗಳು ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸುತ್ತಿಲ್ಲ. ಇವೆಲ್ಲವೂ ಮೇಲ್ವಿಚಾರಣೆಯ ವ್ಯಾಪ್ತಿಯಿಂದ ಹೊರಗಿವೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
‘ರಾಜ್ಯ ಸರ್ಕಾರವು ಇಲಾಖೆಗಳು ಸ್ವೀಕರಿಸಿದ ಅನುದಾನಗಳಿಗೆ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಎಲ್ಲಾ ಆಡಳಿತ ಇಲಾಖೆಗಳಿಗೆ ಸೂಚನೆಗಳನ್ನು ನೀಡಿದೆ ಎಂದು ಸಿಎಜಿಗೆ ಉತ್ತರಿಸಿತ್ತು. ಆದರೆ ಬಳಕೆ ಪ್ರಮಾಣ ಪತ್ರಗಳನ್ನು ಸಲ್ಲಿಸದೇ ಬಾಕಿ ಉಳಿಸಿಕೊಂಡಿರುವ ಪ್ರಮಾಣವು ಶೇ. 92ರಷ್ಟು ಹೆಚ್ಚಾಗಿದೆ,’ ಎಂದು ಸಿಎಜಿ ವರದಿಯು ಬಹಿರಂಗಗೊಳಿಸಿದೆ.
ಅಲ್ಲದೇ ಚುನಾವಣೆಗಳು, ಪೊಲೀಸ್ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ, ನಗರಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದಂತೆ 2024ರ ಮಾರ್ಚ್ ಅಂತ್ಯಕ್ಕೆ ಒಟ್ಟು 45.58 ಕೋಟಿ ಗಳಿಗೆ ಸಾದಿಲ್ವಾರು ಬಿಲ್‌ಗಳು ಸಲ್ಲಿಕೆಯಾಗಿರಲಿಲ್ಲ. 2021-22ರವರೆಗೆ 803 ಸಾದಿಲ್ವಾರು ಬಿಲ್‌ಗಳಿದ್ದವು. ಇದರ ಮೊತ್ತ 40.13 ಕೋಟಿಯದ್ದಾಗಿತ್ತು. 2022-23ರಲ್ಲಿ 2.89 ಕೋಟಿ ರು ಮೊತ್ತದ 52 ಬಿಲ್‌ಗಳು, 2023-24ರಲ್ಲಿ 2.56 ಕೋಟಿ ರು ಮೊತ್ತದ ಸಾದಿಲ್ವಾರು ಬಿಲ್‌ಗಳು ಸಲ್ಲಿಕೆಗೆ ಬಾಕಿ ಇದ್ದವು.
‘ಸಂಕ್ಷಿಪ್ತ ಸಾದಿಲ್ವಾರು ಬಿಲ್‌ಗಳ ಮೂಲಕ ಪಡೆದ ಹಣವನ್ನು ಸಂಚಿತ ನಿಧಿಯ ಸೇವಾ ಪ್ರಧಾನ ಶೀರ್ಷಿಕೆಯಡಿ ಲೆಕ್ಕ ಹಾಕಲಾಗುತ್ತದೆ. ನಿಗದಿಪಡಿಸಿದ ಸಮಯದೊಳಗೆ ಲೆಕ್ಕಗಳನ್ನು ಇತ್ಯರ್ಥಪಡಿಸದಿದ್ದರೇ ವೆಚ್ಚವನ್ನು ಅಧಿಕವಾಗಿ ತೋರಿಸಿದಂತಾಗುತ್ತದೆ. ಅಲ್ಲದೇ ದೀರ್ಘಾವಧಿಯವರೆಗೆ ಮುಂಗಡಗಳನ್ನು ಹೊಂದಾಣಿಕೆ ಮಾಡದಿರುವುದು ದುರುಪಯೋಗದ ಅಪಾಯದಿಂದ ಕೂಡಿರುತ್ತದೆ,’ ಎಂದು ಸಿಎಜಿಯು ಅಭಿಪ್ರಾಯಿಸಿದೆ.