ಆಯವ್ಯಯದ ಹೊರಗಿನ ಸಾಲ; ಅಸಲನ್ನೂ ಮೀರಿಸಲಿದೆ ಬಡ್ಡಿ ಪಾವತಿ, ಹಣಕಾಸಿನ ಸುಸ್ಥಿರತೆಗೂ ಹಾನಿಕಾರಕ

ಬೆಂಗಳೂರು; ರಾಜ್ಯ ಸರ್ಕಾರವು ಕಳೆದ ಹಲವು ವರ್ಷಗಳಿಂದ ಆಯವ್ಯಯದ ಹೊರಗೆ ಪಡೆಯುತ್ತಿರುವ ಸಾಲವು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಹಣಕಾಸು ಆಯೋಗವು ಇದನ್ನು ಗಂಭೀರವಾಗಿ ಪರಿಗಣಿಸಿದೆಯಲ್ಲದೇ ಇದರಿಂದ ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳಬಹುದು ಎಂದಿದೆ. ಆಯವ್ಯಯದ ಹೊರಗೆ ಮಾಡುತ್ತಿರುವ ಸಾಲವು ಹಣಕಾಸಿನ ಸುಸ್ಥಿರತೆಗೆ ಹಾನಿಕಾರಕವಾಗಿದೆ ಎಂದು ಸಿಎಜಿಯೂ ಅಭಿಪ್ರಾಯಿಸಿದೆ.

 

ಅಲ್ಲದೇ ಯಾವುದೇ ಆದಾಯದ ಮೂಲವನ್ನು ಹೊಂದಿಲ್ಲದೇ ಇರುವುದು ಮತ್ತು ಗಣನೀಯವಾಗ ನಷ್ಟವನ್ನು ಅನುಭವಿಸುತ್ತಿದ್ದರೂ ಸಹ ನೀರಾವರಿ, ರಸ್ತೆ, ವಸತಿ ನಿಗಮಗಳು 17,306 ಕೋಟಿ ಮೊತ್ತದ ಸಾಲವನ್ನು ಆಯವ್ಯಯದ ಹೊರಗೆ ಪಡೆದಿದೆ.

 

ಮುಂದಿನ ಎರಡು ವರ್ಷಗಳಲ್ಲಿ ಅಂದರೇ 2024-25 ಮತ್ತು 2025-26ರಲ್ಲಿ ಬಡ್ಡಿ ಮರುಪಾವತಿಯು ಅಸಲನ್ನು ಮೀರುತ್ತದೆ ಎಂದು ಸಿಎಜಿಯು ಎಚ್ಚರಿಸಿದೆ.

 

2024ರ ಮಾರ್ಚ್‌ 31ರ ಅಂತ್ಯಕ್ಕೆ ರಾಜ್ಯ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನೆ ವರದಿಯು ಆಯವ್ಯಯದ ಹೊರಗಿನ ಸಾಲಗಳ ಕುರಿತು ವಿಸ್ತೃತವಾಗಿ ಚರ್ಚಿಸಿದೆ. ಈ ವರದಿಯನ್ನು 2025ರ ಆಗಸ್ಟ್‌ನಲ್ಲಿ ವಿಧಾನಮಂಡಲದಲ್ಲಿ ಮಂಡಿಸಲಾಗಿದೆ.

 

ಬಂಡವಾಳ ಲೆಕ್ಕದ ಅಡಿಯಲ್ಲಿ ಆಯವ್ಯಯ ಅವಕಾಶಗಳ ಮೂಲಕ ಬಡ್ಡಿ ಸೇರಿದಂತೆ ಸಾರ್ವಜನಿಕ ಮತ್ತು ನೀರಾವರಿ ನಿಗಮಗಳು ಪಡೆದಿರುವ 17,306 ಕೋಟಿ ಮೊತ್ತದ ಸಾಲವನ್ನು ರಾಜ್ಯ ಸರ್ಕಾರವು ಮರು ಪಾವತಿ ಮಾಡುತ್ತಿದೆ. 2023-24ರಲ್ಲಿ 52,120 ಕೋಟಿ ಬಂಡವಾಳ ವೆಚ್ಚ 3,827 ಕೋಟಿಗಳ ಆಯವ್ಯಯ ಹೊರಗಿನ ಸಾಲಗಳ ಅಸಲು ಮೊತ್ತವನ್ನೂ ಒಳಗೊಂಡಿದೆ. ಪ್ರಸಕ್ತ ವರ್ಷದಲ್ಲಿ 1,046 ಕೋಟಿ ಬಡ್ಡಿ ಪಾವತಿಯಾಗಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

ಕೃಷ್ಣ ಭಾಗ್ಯ ಜಲನಿಗಮವು ಆಯವ್ಯಯದ ಹೊರಗೆ ಪಡೆದಿದ್ದ ಸಾಲದ ಮೊತ್ತವು 5,651 ಕೋಟಿ ಇದೆ. 2023-24ರಲ್ಲಿ ಆಯವ್ಯಯದ ಹೊರಗೆ ಸಾಲ ಪಡೆಯದಿದ್ದರೂ ಸಹ 1,599 ಕೋಟಿ ಅಸಲು ಮತ್ತು 348 ಕೋಟಿಯಷ್ಟು ಬಡ್ಡಿಯನ್ನು ಪಾವತಿಸಿದೆ. ಅದೇ ರೀತಿ ಕರ್ನಾಟಕ ನೀರಾವರಿ ನಿಗಮವು 4,405 ಕೋಟಿಯಷ್ಟು ಆಯವ್ಯಯ ಹೊರಗೆ ಸಾಲ ಪಡೆದಿದೆ. 821 ಕೋಟಿ ಅಸಲು ಮತ್ತು 278 ಕೋಟಿ ಬಡ್ಡಿ ಪಾವತಿಸಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು 743 ಕೋಟಿಯನ್ನು ಆಯವ್ಯಯದ ಹೊರಗೆ ಸಾಲ ಪಡೆದಿತ್ತು. ಈ ಪೈಕಿ 35 ಕೋಟಿ ಅಸಲು ಮತ್ತು 55 ಕೋಟಿ ಬಡ್ಡಿ ಪಾವತಿಸಿದೆ.

 

 

ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮವು 2,800 ಕೋಟಿಯನ್ನು ಆಯವ್ಯಯದ ಹೊರಗೆ ಸಾಲ ಪಡೆದಿದೆ. ಇದರಲ್ಲಿ 550 ಕೋಟಿ ಅಸಲು ಮತ್ತು  166 ಕೋಟಿ ಬಡ್ಡಿ ಪರು ಪಾವತಿಸಿದೆ. ಕಾವೇರಿ ನೀರಾವರಿ ನಿಗಮವು ಸಹ 965 ಕೋಟಿಯನ್ನು ಆಯವ್ಯಯದ ಹೊರಗೆ ಸಾಲ ಪಡೆದಿದ್ದರೇ 263 ಕೋಟಿ ಅಸಲು ಮತ್ತು 73 ಕೋಟಿ ಬಡ್ಡಿಯನ್ನು ಮರು ಪಾವತಿ ಮಾಡಿತ್ತು. ವಿಶ್ವೇಶ್ವರಯ್ಯ ಜಲ ನಿಗಮವು 2,274 ಕೋಟಿಯನ್ನು ಆಯವ್ಯಯದ ಹೊರಗೆ ಸಾಲ ಪಡೆದಿತ್ತು. ಇದರಲ್ಲಿ 466 ಕೋಟಿ ಅಸಲು ಮತ್ತು 118 ಕೋಟಿ ಬಡ್ಡಿಯನ್ನು ಮರು ಪಾವತಿಸಿದೆ.

 

ಕೌಶಲ್ಯ ಅಭಿವೃದ್ಧಿ ನಿಗಮವು 468 ಕೋಟಿ ಸಾಲ ಪಡೆದಿದ್ದರೇ ಈ ಪೈಕಿ 94 ಕೋಟಿ ಅಸಲು ಮತ್ತು 8 ಕೋಟಿ ಬಡ್ಡಿಯನ್ನು ಮರು ಪಾವತಿ ಮಾಡಿದೆ. ಒಟ್ಟಾರೆ 3,828 ಕೋಟಿ ಅಸಲು ಮತ್ತು 1,046 ಕೋಟಿ ಬಡ್ಡಿಯನ್ನು ಮರುಪಾವತಿಸಲಾಗಿದೆ ಎಂದು ಸಿಎಜಿ ವರದಿಯು ವಿವರಿಸಿರುವುದು ತಿಳಿದು ಬಂದಿದೆ.

 

‘ರಾಜ್ಯದ ಆಯವ್ಯಯದ ಹೊರಗಿನ ಸಾಲಗಳನ್ನು ಗಣನೆಗೆ ತೆಗೆದುಕೊಂಡರೇ 2024ರ ಮಾರ್ಚ್‌ ಅಂತ್ಯದ ವೇಳೆಗೆ ಒಟ್ಟು ಹೊಣೆಗಾರಿಕೆಗಳು 6,33,531 ಕೋಟಿಯಷ್ಟಾಗುತ್ತದೆ. ಭಾರತ ಸರ್ಕಾರದಿಂದ ಪಡೆದ ಸರಕು ಸೇವಾ ತೆರಿಗೆ ಪರಿಹಾರದ ಬದಲಾಗಿ 30,516 ಕೋಟಿಗಳ ಬ್ಯಾಕ್‌-ಟು-ಬ್ಯಾಕ್‌ ಸಾಲವನ್ನು ಹೊರತುಪಡಿಸಿ  6,03,015 ಕೋಟಿ ನಿವ್ವಳ ಬಾಕಿ ಇರುವ ಹೊಣೆಗಾರಿಕೆಗಳ ದರವು ವರ್ಷಾಂತ್ಯದಲ್ಲಿ ಜಿಎಸ್‌ಡಿಪಿ ಶೇ.23.49ರಷ್ಟಿದೆ,’ ಎಂದು ಸಿಎಜಿ ವರದಿಯಲ್ಲಿ ವಿಶ್ಲೇಷಿಸಿರುವುದು ಗೊತ್ತಾಗಿದೆ.

 

 

2019-20ರಲ್ಲಿ 4,435.49 ಕೋಟಿ ಸಾಲವನ್ನು ಆಯವ್ಯಯದ ಹೊರಗೆ ಪಡೆಯಲಾಗಿತ್ತು. 2020-21ರಲ್ಲಿ 3,045.10 ಕೋಟಿ, 2021-22ರಲ್ಲಿ 2,350 ಕೋಟಿ, 2022-23ರಲ್ಲಿ 4,029 ಕೋಟಿಯನ್ನು ಆಯವ್ಯಯದ ಹೊರಗೆ ಸಾಲವನ್ನು ಪಡೆದಿತ್ತು.

 

‘ಆಯವ್ಯಯದ ಹೊರಗಿನ ಸಾಲದ ಹೊರೆಗೆ ಮತ್ತಷ್ಟು ಸೇರ್ಪಡಗಳನ್ನು ಮಾಡಲಾಗಿದೆ. ಇದನ್ನು ವಿರೋಧಿಸುವ ಮೂಲಕ ಕಟ್ಟುನಿಟ್ಟಾದ ಶಿಸ್ತನ್ನು ಪಾಲಿಸಲು ಶಿಫಾರಸ್ಸು ಮಾಡಿದೆ. ಏಕೆಂದರೇ ಇದು ಹಣಕಾಸಿನ ಪಾರದರ್ಶಕತೆಯ ಮಾನದಂಡಕ್ಕೆ ವಿರುದ್ಧವಾಗಿದೆ ಮತ್ತು ಹಣಕಾಸಿನ ಸುಸ್ಥಿರತೆಗೆ ಹಾನಿಕಾರಕವಾಗಿದೆ. ಇದಲ್ಲದೇ ಈ ಬಾಧ್ಯತೆಗಳನ್ನು ಕಾಲಮಿತಿಯೊಳಗೆ ತೆರವುಗೊಳಿಸಬೇಕಾಗಿದೆ. ಸರ್ಕಾರವು ಹೆಚ್ಚುವರಿ ಸಂಪನ್ಮೂಲಗಳನ್ನು ಸಜ್ಜುಗೊಳಿಸಬೇಕು,’ ಎಂದು ಸಿಎಜಿ ವರದಿಯು ಶಿಫಾರಸ್ಸು ಮಾಡಿದೆ.

 

ರಾಜ್ಯವು 2004-25ರಿಂದ ರಾಜಸ್ವ ಹೆಚ್ಚಳವನ್ನು ಸಾಧಿಸಿತ್ತು. ಇದರೊಂದಿಗೆ ಮಾರುಕಟ್ಟೆ ಸಾಲಗಳು, ಭಾರತ ಸರ್ಕಾರದ ಸಾಲಗಳನ್ನು  ಬಂಡವಾಳ ವೆಚ್ಚಕ್ಕೆ ಒದಗಿಸಲು ಬಳಕೆ ಮಾಡಿಕೊಳ್ಳಲಾಗಿತ್ತು. 2020-21 ಮತ್ತು 2021-22ರಲ್ಲಿ ರಾಜ್ಯವು ಕೋವಿಡ್‌ 19ರ ಕಾರಣದಿಂದಾಗಿ ರಾಜಸ್ವ ವೆಚ್ಚ ಕೊರತೆ ಎದುರಿಸಿತ್ತು. ಹೀಗಾಗಿ ಸಾಲದ ಮೊತ್ತಗಳನ್ನು ರಾಜಸ್ವ ವೆಚ್ಚವನ್ನು ಭರಿಸಲು ಉಪಯೋಗಿಸಿತ್ತು. 2022-23ರಲ್ಲಿ ರಾಜಸ್ವ ಹೆಚ್ಚಳವನ್ನು ಸಾಧಿಸಿತ್ತು. ಆದರಡೆ 2023-24ರಲ್ಲಿ ರಾಜ್ಯವು 9,271 ಕೋಟಿಗಳ ರಾಜಸ್ವ ಕೊರತೆ ಎದುರಿಸಿತು. 2023-24ರ ವಿತ್ತೀಯ ಕೊರತೆಯನ್ನು ಸರಿದೂಗಿಸಲು 65,522 ಕೋಟಿಯಷ್ಟು ಸಾಲ ಪಡೆಯಿತು ಎಂದು ಸಿಎಜಿ ವರದಿಯು ವಿವರಿಸಿದೆ.

 

 

ಸಾಲದ ವಿವರಗಳು

 

ಮಾರುಕಟ್ಟೆ ಸಾಲ 63,003 ಕೋಟಿಯಷ್ಟಿತ್ತು. ಭಾರತ ಸರ್ಕಾರದಿಂದ 4,267 ಕೋಟಿ, ಹಣಕಾಸು ಸಂಸ್ಥೆಗಳಿಂದ 2,186 ಕೋಟಿ, ಸಣ್ಣ ಉಳಿತಾಯ, ಭವಿಷ್ಯ ನಿಧಿ ಇತ್ಯಾದಿಗಳಿಂದ 3,554 ಕೋಟಿ , ಠೇವಣಿಗಳು ಮತ್ತು ಮುಂಗಡಗಳಿಂದ 7,474 ಕೋಟಿ, ಇರು ಸಾಲಗಳು 56 ಕೋಟಿ, ಮೀಸಲು ನಿಧಿಗಳಿಂದ 7,328 ಕೋಟಿಯಷ್ಟು ಸಾಲವನ್ನು ಪಡೆದಿತ್ತು.

 

 

ಸಾರ್ವಜನಿಕ ಋಣದ ಚಿತ್ರಣ

 

2024-25ರಲ್ಲಿ ಸಾರ್ವಜನಿಕ ಋಣವು 23,300.83 ಕೋಟಿ, ಬಡ್ಡಿ 30,701.93 ಕೋಟಿ ಸೇರಿ 54,002.76 ಕೋಟಿಯಷ್ಟಿದೆ. 2025-26ರಲ್ಲಿ ಒಟ್ಟಾರೆ 53,112.79 ಕೋಟಿ, 2026-27ರಲ್ಲಿ 58,947.48 ಕೋಟಿ, 2027-28ರಲ್ಲಿ 56,974.52 ಕೋಟಿ, 2028-29ರಲ್ಲಿ 54,183.07 ಕೋಟಿ, 2029-30ರಲ್ಲಿ 52,293.52 ಕೋಟಿ, 2030-31ರಲ್ಲಿ 48,662.32 ಕೋಟಿ, 2031-32ರಲ್ಲಿ 44,690.33 ಕೋಟಿ, 2032-33ರಲ್ಲಿ 39,940.11 ಕೋಟಿ, 2033-34ರಲ್ಲಿ 37,940.68 ಕೋಟಿ, 2034-35ರಲ್ಲಿ 37,075.88 ಕೋಟಿ, 2035-36ರಲ್ಲಿ 26,011.86 ಕೋಟಿ, 2036-37ರಲ್ಲಿ 26,567.21 ಕೋಟಿ, 2037-38ರಲ್ಲಿ  28,572.88 ಕೋಟಿ,  2038-39ರಲ್ಲಿ 18,662 ಕೋಟಿ  2039-40ಕ್ಕೆ  82,368.65 ಕೋಟಿ ಇರಲಿದೆ ಎಂದು ಸಿಎಜಿಯು ಸಾರ್ವಜನಿಕ ಋಣದ ಚಿತ್ರಣವನ್ನು ಒದಗಿಸಿದೆ.

 

 

ಸಿಎಜಿಯು ನೀಡಿರುವ ಸಾರ್ವಜನಿಕ ಋಣ ಮತ್ತು ಬಡ್ಡಿ ಪಾವತಿಸುವ ಅಂಕಿ ಅಂಶಗಳನ್ನು ಗಮನಿಸಿದರೇ ಮುಂದಿನ 2 ವರ್ಷಗಳಲ್ಲೇ ಅಂದರೇ 2024-25 ಮತ್ತು 2025-26ರಲ್ಲಿ ಬಡ್ಡಿ ಮರು ಪಾವತಿಯು ಅಸಲನ್ನೂ ಮೀರುತ್ತದೆ. ಮುಂದಿನ 7 ವರ್ಷಗಳಲ್ಲಿ ಇದು ಕಡಿಮೆಯಾಗುತ್ತಿದ್ದರೂ ಅಸಲಿನ 50 ಪ್ರತಿಶತ ಹೆಚ್ಚಾಗುತ್ತದೆ ಎಂದು ಅಂದಾಜಿಸಬಹುದು.

 

ರಾಜ್ಯದ ಒಟ್ಟು ಹಣಕಾಸಿನ ಹೊಣೆಗಾರಿಕೆಗಳಲ್ಲಿ ಮುಕ್ತ ಮಾರುಕಟ್ಟೆ ಸಾಲಗಳು ಪ್ರಮುಖ ಪಾಲು ಹೊಂದಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ.6ರಷ್ಟು ಹೆಚ್ಚಾಗಿದೆ. 2023-24ರಲ್ಲಿ ರಾಜ್ಯ ಸರ್ಕಾರವು ತನ್ನ ಮಾರುಕಟ್ಟೆ ಸಾಲವನ್ನು ಹಿಂದಿನ ವರ್ಷದ 36,000 ಕೋಟಿಯಿಂದ 81,000 ಕೋಟಿಗೆ ಹೆಚ್ಚಿಸಿದೆ ಎಂದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts