ಚಪಾತಿ ತಯಾರಿಕೆ ಯಂತ್ರ ಖರೀದಿಯಲ್ಲಿ ಅಕ್ರಮ; 14.04 ಕೋಟಿ ಅನಗತ್ಯ ಲಾಭ, ಸಿಎಜಿಗೂ ಉತ್ತರಿಸದ ಸರ್ಕಾರ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯು ನಡೆಸುತ್ತಿರುವ ಹಾಸ್ಟೆಲ್‌ಗಳಿಗೆ ಅರೆ ಸ್ವಯಂಚಾಲಿತ ಚಪಾತಿ ತಯಾರಿಸುವ ಯಂತ್ರಗಳ ಪೂರೈಕೆಗೆ ಆದೇಶ ನೀಡುವಾಗ ಮಾರುಕಟ್ಟೆ ಬೆಲೆಯನ್ನು ಖಚಿತಪಡಿಸಿಕೊಳ್ಳದ ಕಾರಣ ಕಿಯೋನಿಕ್ಸ್‌ಗೆ 14.04 ಕೋಟಿ ರು. ಗಳ ಅನಗತ್ಯ ಲಾಭ ಮಾಡಿಕೊಟ್ಟಿರುವುದನ್ನು ಸಿಎಜಿಯು ಪತ್ತೆ ಹಚ್ಚಿದೆ.

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ 270 ವಿದ್ಯಾರ್ಥಿ ನಿಲಯಗಳಿಗೆ ವಾಷಿಂಗ್‌ ಮೆಷಿನ್‌ ಮತ್ತು ಚಪಾತಿ ತಯಾರಿಸುವ ಯಂತ್ರಗಳ ಖರೀದಿಯಲ್ಲಿಯೂ ಹೀಗೆಯೇ ಕಿಯೋನಿಕ್ಸ್‌ಗೆ 11.13 ಕೋಟಿ ರು  ಅನಗತ್ಯ ಲಾಭ ಮಾಡಿಕೊಟ್ಟಿದ್ದನ್ನು ಸಿಎಜಿಯು ಬಹಿರಂಗಪಡಿಸಿತ್ತು.

 

ಈ ವರದಿ ಸಲ್ಲಿಕೆಯಾದ ಒಂದು ವರ್ಷದ ಅವಧಿಯ ಅಂತರದೊಳಗೇ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ಗಳಿಗೆ ಚಪಾತಿ ತಯಾರಿಸುವ ಯಂತ್ರಗಳ ಖರೀದಿಯಲ್ಲಿ ನಡೆದಿರುವ ಅಕ್ರಮವನ್ನು ಸಿಎಜಿ ಹೊರಗೆಳೆದಿದೆ. ʻದುಪ್ಪಟ್ಟು ದರದಲ್ಲಿ ಯಂತ್ರಗಳನ್ನು ಖರೀದಿಸಿರುವುದೇಕೆ?ʼ ಎಂದು ಸಿಎಜಿಯ ಪ್ರಶ್ನೆಗೆ ಈಗಿನ ಕಾಂಗ್ರೆಸ್‌ ಸರ್ಕಾರವೂ ಸಹ ಯಾವುದೇ ಉತ್ತರವನ್ನೂ ನೀಡಿಲ್ಲ. ಅಧಿಕಾರಿಗಳು ಸಹ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರೊಂದಿಗೆ ಚರ್ಚಿಸಿದ್ದರು. ಆದರೂ ಯಾವುದೇ ಉತ್ತರ ನೀಡದ  ಸರ್ಕಾರದ ಮೌನವು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳಲ್ಲಿ 2025ರ ಆಗಸ್ಟ್‌ 21ರಂದು ಮಂಡನೆಯಾಗಿರು ಸಿಎಜಿ ವರದಿಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಕಿಯೋನಿಕ್ಸ್‌ ಸಂಸ್ಥೆಯು ಹೇಗೆಲ್ಲಾ ಅನಗತ್ಯ ಲಾಭ ಮಾಡಿಕೊಳ್ಳಲು ದಾರಿ ಮಾಡಿಕೊಟ್ಟಿದೆ ಎಂದು ವಿವರಿಸಿದೆ.

 

ವಿದ್ಯಾರ್ಥಿ ನಿಲಯಗಳಲ್ಲಿ ನೈರ್ಮಲ್ಯ ಕಾಪಾಡಲು ಮತ್ತು ಅಡುಗೆಯವರ ಕೊರತೆಯನ್ನು ನೀಗಿಸಲು ಸಮಾಜ ಕಲ್ಯಾಣ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಿಗೆ ಅರೆ ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳನ್ನು ಖರೀದಿಸಲು ಪ್ರಸ್ತಾವಿಸಿತ್ತು. 2019 ಮತ್ತು 2021ರ ನಡುವೆ ಕಿಯೋನಿಕ್ಸ್‌ಗೆ ಇದರ ಗುತ್ತಿಗೆ ನೀಡಲಾಗಿತ್ತು.

 

 

ಅರೆ ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳನ್ನು ಖರೀದಿಸಲು ಸಮಾಜ ಕಲ್ಯಾಣ ಇಲಾಖೆಯು  ಟೆಂಡರ್‍‌ ಪ್ರಕ್ರಿಯೆಯನ್ನೇ ನಡೆಸಲಿಲ್ಲ. ಮತ್ತು ಕೆಟಿಪಿಪಿ ಕಾಯ್ದೆಯ 4 ಜಿ ಅಡಿಯಲ್ಲಿನ ವಿನಾಯಿತಿಯನ್ನೂ ಖಚಿತಪಡಿಸಿಕೊಳ್ಳಲಿಲ್ಲ. ನೇರವಾಗಿ ಕಿಯೋನಿಕ್ಸ್‌ಗೆ ಆದೇಶ ನೀಡಿತು. ಇದರ ಪರಿಣಾಮ, ಮುಕ್ತ ಟೆಂಡರ್‍‌ ಮೂಲಕ ಸ್ಪರ್ಧಾತ್ಮಕ ದರಗಳನ್ನು ಪಡೆಯುವ ಅವಕಾಶವನ್ನು ಇಲಾಖೆಯು ಕಳೆದುಕೊಂಡಿತು ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಮಾರುಕಟ್ಟೆ ದರ ಖಚಿತಪಡಿಸಿಕೊಳ್ಳಲಿಲ್ಲವೇಕೆ?

 

ಚಪಾತಿ ತಯಾರಿಸುವ ಯಂತ್ರಗಳು ವಿವಿಧ ನಿರ್ದಿಷ್ಟತೆಗಳೊಂದಿಗೆ ಮುಕ್ತ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ಲಭ್ಯವಿರುತ್ತವೆ. ಖರೀದಿದಾರರು ಮತ್ತು ತಯಾರಕರ ಜಾಲತಾಣಗಳಿಂದ ವಿವಿಧ ಮಾದರಿಗಳನ್ನು ಸುಲಭವಾಗಿ ನೋಡಬಹುದು. ಮತ್ತು ಮಧ್ಯವರ್ತಿಗಳ ಪಾತ್ರವಿಲ್ಲದೆಯೇ ನೇರವಾಗಿ ವಸ್ತುಗಳನ್ನು ಖರೀದಿಸಬಹುದು.

 

ಅಷ್ಟೇ ಅಲ್ಲ, ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಇ-ಕಾಮರ್ಸ್‌ ಪೋರ್ಟಲ್‌ ಮತ್ತು ಸರ್ಕಾರಿ ಇ-ಮಾರುಕಟ್ಟೆ (ಜೆಮ್‌) ಯನ್ನು ಆರಂಭಿಸಿತ್ತು. ಅದರಲ್ಲಿ ವಿವಿಧ ಮಾರಾಟಗಾರರಿಂದ 2000ಕ್ಕೂ ಹೆಚ್ಚು ಚಪಾತಿ ತಯಾರಿಸುವ ಯಂತ್ರಗಳು ಲಭ್ಯವಿದ್ದವು.

 

ಇಷ್ಟೆಲ್ಲಾ ಆಯ್ಕೆಗಳನ್ನು ಹೊಂದಿದ್ದರೂ ಸಹ  ಸಮಾಜ ಕಲ್ಯಾಣ ಇಲಾಖೆಯು ಮೂಲ ಉಪಕರಣ ತಯಾರಕರಿಂದಾಗಲೀ ಅಥವಾ  ಚಪಾತಿ ತಯಾರಿಸುವ ಯಂತ್ರಗಳಿಗೆ ಚಾಲ್ತಿಯಲ್ಲಿರುವ ಮಾರುಕಟ್ಟೆ ದರಗಳನ್ನು ನಿರ್ಧರಿಸಲಿಲ್ಲ. ಜೆಮ್‌ ಪೋರ್ಟಲ್‌ನಲ್ಲಿಯೂ ಪರಿಶೀಲನೆ ಮಾಡುವ ಯಾವುದೇ ಪ್ರಯತ್ನವನ್ನೂ ಮಾಡಲಿಲ್ಲ. ಬದಲಿಗೆ ನೇರವಾಗಿ ಕಿಯೋನಿಕ್ಸ್‌ಗೆ 4 ಜಿ ವಿನಾಯಿತಿ ನೀಡಿ ಚಪಾತಿ ತಯಾರಿಸುವ ಯಂತ್ರಗಳನ್ನು  ಏಕಪಕ್ಷೀಯವಾಗಿ ಖರೀದಿಸಿತು  ಎಂದು ಸಿಎಜಿಯು ವರದಿಯಲ್ಲಿ ವಿವರಿಸಿದೆ.

 

ಈ ಖರೀದಿ ಅವಧಿಯಲ್ಲಿನ ಆಂತರಿಕ ಪತ್ರವ್ಯವಹಾರಗಳನ್ನೂ ಸಿಎಜಿಯು ಪರಿಶೀಲಿಸಿದೆ. ಸಮಾಜ ಕಲ್ಯಾಣ ಇಲಾಖೆಯ ಗೌರಿಬಿದನೂರಿನ ಸಹಾಯಕ ನಿರ್ದೇಶಕರು, ಚಿಕ್ಕಬಳ್ಳಾಪುರ ಜಿಲ್ಲೆಯ ಉಪ ನಿರ್ದೇಶಕರಿಗೆ ಕಿಯೋನಿಕ್ಸ್‌ಗೆ ಪೂರೈಸಿದ್ದ ಚಪಾತಿ ತಯಾರಿಸುವ ಯಂತ್ರಗಳ ದರಗಳ ಕುರಿತು ಮಾಹಿತಿ ನೀಡಿದ್ದರು. ಇದರ ಪ್ರಕಾರ ಪತ್ರಿ ಯೂನಿಟ್‌ಗೆ ಕೇವಲ 66,200 ರು.ಗಳಷ್ಟಿದೆ ಎಂದು ತಿಳಿಸಿದ್ದರು.

 

ಮಾರುಕಟ್ಟೆ ದರ ಮತ್ತು ಕಿಯೋನಿಕ್ಸ್‌ ಉಲ್ಲೇಖಿಸಿದ್ದ ದರದ ನಡುವೆ ಭಾರೀ ಅಂತರವಿದ್ದರೂ ಸಹ ಸಮಾಜ ಕಲ್ಯಾಣ ಇಲಾಖೆಯಿಂದ ಏಜೆನ್ಸಿಯೊಂದಿಗೆ ಯಾವುದೇ ಪತ್ರ ವ್ಯವಹಾರವನ್ನು ನಡೆಸಿರಲಿಲ್ಲ. ಇದಲ್ಲದೇ ಖರೀದಿ ಆದೇಶ ಮತ್ತು ಇದಕ್ಕೆ ಸಂಬಂಧಿಸಿದ ಕಡತ ಮತ್ತು ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನೂ  ಸಹ ಸಿಎಜಿಯು ಪರಿಶೀಲಿಸಿದೆ. ಇದರ ಪ್ರಕಾರ ಉಪಕರಣಗಳ ನಿಜವಾದ ಬೆಎಲಯು ಕಿಯೋನಿಕ್ಸ್‌ ನೀಡಿದ 3,83,500 ರು. ಬದಲಾಗಿ ಕೇವಲ 1,29,800 ರು ಗಳಾಗಿತ್ತು ಎಂದು ಸಿಎಜಿಯು ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.

 

‘ಇಲಾಖೆಯು ಯಾವುದೇ ಪರೀಕ್ಷೆ, ಮಾರುಕಟ್ಟೆ ಸಮೀಕ್ಷೆಯಿಲ್ಲದೇ ಪ್ರಸ್ತಾವಿಸಿದ ಮಾದರಿಗಳಿಗೆ ಕಿಯೋನಿಕ್ಸ್‌ ಉಲ್ಲೇಖಿಸಿದ ದರಗಳನ್ನು ಅವಲಂಬಿಸಿತ್ತು. 550 ಯಂತ್ರಗಳನ್ನು ಪೂರೈಸಲು 20.92 ಕೋಟಿ ರು.ಗಳ ಗುತ್ತಿಗೆಯನ್ನು ನೀಡಿತು. ಇದರ ಪರಿಣಾಮವಾಗಿ ಚಪಾತಿ ತಯಾರಿಸುವ ಯಂತ್ರಗಳನ್ನು ಹೆಚ್ಚಿನ ದರದಲ್ಲಿ ಖರೀದಿಸುವ ಮೂಲಕ ಕಿಯೋನಿಕ್ಸ್‌ಗೆ 14.04 ಕೋಟಿ  ಅನಗತ್ಯ ಲಾಭವನ್ನು ನೀಡಿದಂತಾಗಿದೆ. ಹೀಗಾಗಿ ಸರ್ಕಾರವು ತಕ್ಷಣ ತನಿಖೆಯನ್ನು ಪ್ರಾರಂಭಿಸಬೇಕು,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

 

ಬೆಂಗಳೂರು ಜಿಲ್ಲೆಯ ಜಂಟಿ ನಿರ್ದೇಶಕರು 26 ಯಂತ್ರಗಳ ಪೂರೈಕೆಗೆ ಆದೇಶ ನೀಡಿದ್ದರು. ಪ್ರತಿ ಯಂತ್ರಕ್ಕೆ 3,83,500 ರು. ಪಾವತಿಸಲಾಗಿತ್ತು. ಆದರೆ ಮಾರುಕಟ್ಟೆಯಲ್ಲಿ ಪ್ರತಿ ಯಂತ್ರಕ್ಕೆ 1,29,800 ರು ಗಳಿತ್ತು. ಹೀಗಾಗಿ ಪ್ರತಿ ಯಂತ್ರದ ದರದ ಮಧ್ಯೆ 2,53,700 ರು ವ್ಯತ್ಯಾಸವಿತ್ತು. ಇದರಿಂದ ಕಿಯೋನಿಕ್ಸ್‌ಗೆ 65,96,200 ರು ಅನಗತ್ಯ ಲಾಭವಾಗಿತ್ತು.

 

ಅದೇ ರೀತಿ ಕ್ರೈಸ್‌ನ ಕಾರ್ಯನಿರ್ವಾಹಕ ನಿರ್ದೇಶಕರು 252 ಯಂತ್ರಗಳನ್ನು ಪೂರೈಕೆ ಮಾಡಲು ಕಾರ್ಯಾದೇಶ ನೀಡಿದ್ದರು. ಪ್ರತಿ ಯಂತ್ರಕ್ಕೆ 3,95,300 ರು ಪಾವತಿಸಲಾಗಿತ್ತು. ಮಾರುಕಟ್ಟೆಯಲ್ಲಿ 1,29,800 ರು.ಗಳೆಂದು ಈ ಯಂತ್ರಗಳಿಗೆ ದರ ನಿಗದಿಯಾಗಿತ್ತು. ಇಲ್ಲಿಯೂ ಸಹ ಪ್ರತಿ ಯಂತ್ರದ ದರದ ಮಧ್ಯೆ 2,65,500 ರು. ವ್ಯತ್ಯಾಸವಿತ್ತು. ಇದರಿಂದ ಕಿಯೋನಿಕ್ಸ್‌ಗೆ 6,69,06,00 ರು. ಅನಗತ್ಯ ಲಾಭ ಮಾಡಿಕೊಟ್ಟಿತ್ತು.

ಹಾಗೆಯೇ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು 252 ಯಂಂತ್ರ ಖರೀದಿಸಲು ಕಾರ್ಯಾದೇಶ ನೀಡಿದ್ದರು. ಪ್ರತಿ ಯಂತ್ರಕ್ಕೆ 3,95,300 ರು ಪಾವತಿಸಲಾಗಿತ್ತು. ಮಾರುಕಟ್ಟೆಯಲ್ಲಿ ಪ್ರತಿ ಯಂತ್ರಕ್ಕೆ 1,29,800 ರು.  ಇತ್ತು. ಇಲ್ಲಿಯೂ 2,65,500 ರು ವ್ಯತ್ಯಾಸವಿತ್ತು. 6,69,06,00 ರು ಗಳನ್ನು ಕಿಯೋನಿಕ್ಸ್‌ಗೆ ಅನಗತ್ಯ ಲಾಭ ಮಾಡಿಕೊಟ್ಟಿತ್ತು.

 

‘ಕಿಯೋನಿಕ್ಸ್‌ಗೆ ಸರಿಸುಮಾರು 14.04 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಕರ್ನಾಟಕ ಆರ್ಥಿಕ ಸಂಹಿತೆ ಅಡಿಯಲ್ಲಿ ನಿಗದಿಪಡಿಸಿದ ಹಣಕಾಸಿನ ಔಚಿತ್ಯವನ್ನು ಅಕ್ಷರಶಃ ಪಾಲಿಸಿದ್ದರೆ ಇದನ್ನು ತಪ್ಪಿಸಬಹುದಿತ್ತು,’ ಎಂದು ಸಿಎಜಿ ವರದಿಯು ಅಭಿಪ್ರಾಯಿಸಿದೆ.

 

ಇನ್ನು ಅರೆ ಸ್ವಯಂ ಚಾಲಿತ ಚಪಾತಿ ತಯಾರಿಸುವ ಯಂತ್ರಗಳಿಗೆ ಆದೇಶಗಳನ್ನು ನೀಡುವ ಮೊದಲು ಸರಿಯಾದ ಮೌಲ್ಯಮಾಪನವನ್ನೇ ಮಾಡಿರಲಿಲ್ಲ. ಯಂತ್ರಗಳನ್ನು ಖರೀದಿಸಲು ಹಾಸ್ಟೆಲ್‌ಗಳಿಂದ  ಬೇಡಿಕೆ ಪತ್ರ ಪಡೆದಿರಲಿಲ್ಲ. ಮತ್ತು ಖರೀದಿ ಆದೇಶಗಳನ್ನು ನೀಡುವ ಮೊದಲು ನಡೆಸಿದ್ದ ಮೌಲ್ಯಮಾಪನಕ್ಕೆ ಬೆಂಬಲವಾಗಿ ದಾಖಲೆಗಳನ್ನು ಇಲಾಖೆಗಳು ಸಿಎಜಿಗೆ ಒದಗಿಸಿಲ್ಲ.

 

ಈ ಯಂತ್ರಗಳನ್ನು ಹಾಸ್ಟೆಲ್‌ಗಳು ಬಳಸುತ್ತಿವೆಯೇ ಎಂದು ಸಿಎಜಿಯು ಖುದ್ದು ಪರಿಶೀಲಿಸಿದೆ. ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‌ಗಳನ್ನು ತಪಾಸಣೆ ನಡೆಸಿತು. ಈ ಎರಡು ಜಿಲ್ಲೆಗಳ 37 ಹಾಸ್ಟೆಲ್‌ಗಳಲ್ಲಿ ಇಲಾಖೆ ಅಧಿಕಾರಿಗಳನ್ನೂ ಒಳಗೊಂಡ ಜಂಟಿ ಭೌತಿಕ ಪರಿಶೀಲನೆಯನ್ನು ನಡೆಸಿತ್ತು.

 

ತಪಾಸಣೆಯಲ್ಲಿ ಕಂಡಿದ್ದೇನು?

 

ಕೇವಲ ಮೂರು ಹಾಸ್ಟೆಲ್‌ಗಳು (ಶೇ.8) ಮಾತ್ರ ಚಪಾತಿ ತಯಾರಿಸುವ ಯಂತ್ರಗಳನ್ನು ಬಳಸುತ್ತಿದ್ದವು. 18  ಹಾಸ್ಟೆಲ್‌ಗಳು (ಶೇ.49) ಯಂತ್ರಗಳನ್ನು ಬಳಸುತ್ತಲೇ ಇರಲಿಲ್ಲ. ಮತ್ತು ಅವುಗಳನ್ನು ಸ್ಟೋರ್‍‌ ರೂಂ, ಅಡುಗೆ ಮನೆಗಳಲ್ಲಿ ಎಲ್ಲೆಂದರಲ್ಲಿ ಎಸೆಯಲಾಗಿತ್ತು. ಇದರಿಂದಾಗಿ 0.71 ಕೋಟಿಯಷ್ಟು ವೆಚ್ಚವು ನಿಷ್ಫಲವಾಗಿದೆ. ಉಳಿದ 16 ಹಾಸ್ಟೆಲ್‌ಗಳಲ್ಲಿ (ಶೇ.43) ಚಪಾತಿ ಮಾಡಲು ನಿಯಮಿತವಾಗಿ ತವಾ ಬಳಸುತ್ತಿದ್ದವು. ಚಪಾತಿ ಯಂತ್ರದ ಚಪಾತಿ ಬೇಯಿಸುವ ಘಟಕವು ನಿಷ್ಕ್ರೀಯವಾಗಿತ್ತು.

 

‘ಆದ್ದರಿಂದ ಖರೀದಿಗಾಗಿ ಗಮನಾರ್ಹ ಮೊತ್ತವನ್ನು ಖರ್ಚು ಮಾಡಿದರೂ ಆಧುನೀಕರಣದ ಮತ್ತು ಹಾಸ್ಟೆಲ್‌ ಅಡುಗೆ ಮನೆಗಳಲ್ಲಿ ಸಿಬ್ಬಂದಿ ಕೊರತೆಯನ್ನು ನಿವಾರಿಸುವ ಮುಖ್ಯ ಉದ್ದೇಶವೇ ಈಡೇರಲಿಲ್ಲ,’ ಎಂದು ಸಿಎಜಿ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

 

ಆಡಳಿತ ಸುಧಾರಣೆ ಆಯೋಗವು ಸಹ ಹಾಸ್ಟೆಲ್‌ಗಳ ಅಡುಗೆ ಮನೆಗಳನ್ನು ಸ್ವಯಂ ಚಾಲಿತಗೊಳಿಸಲು ಮಾತ್ರ ಶಿಫಾರಸ್ಸು ಮಾಡಿತ್ತು. ಆದ್ದರಿಂದ ಪ್ರತಿ ಜಿಲ್ಲೆಗೆ 1 ಕೋಟಿ ಯನ್ನು ಹಂಚಿಕೆಯನ್ನು  ಸೀಮಿತಗೊಳಿಸಿ ಖರೀದಿ ಮಾಡಲಾಗಿದೆ ಎಂದು 2024ರ ಆಗಸ್ಟ್‌ನಲ್ಲಿ ಸರ್ಕಾರವು ಉತ್ತರಿಸಿತ್ತು.

 

‘ಇದು ಕೆಎಫ್‌ಸಿಯ ನಿಬಂಧನೆಗಳನ್ನು ಉಲ್ಲಂಘಿಸಿ ಗಮನಾರ್ಹ ಆರ್ಥಿಕ ನಷ್ಟ ಮತ್ತು ಇಲಾಖೆಗೆ ಸ್ಪರ್ಧಾತ್ಮಕ ದರದ ಅನುಕೂಲದ ಕೊರತೆಗೆ ಕಾರಣವಾದ ಯಂತ್ರಗಳ ಖರೀದಿಗೆ ಅತಿಯಾದ ವೆಚ್ಚದ ಹಿಂದಿನ ಕಾರಣದ ಬಗ್ಗೆ ಉತ್ತರವು ಮೌನವಾಗಿದೆ,’ ಎಂದು ಸಿಎಜಿಯು ತನ್ನ ವರದಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಅತಿಯಾದ ಬೆಲೆಗೆ ಯಂತ್ರಗಳನ್ನು ಖರೀದಿಸುವ ಬಗ್ಗೆ ಸರ್ಕಾರವು ಸಮಗ್ರ ತನಿಖೆ ನಡೆಸಬೇಕು. ಹಾಗೆಯೇ ಅವಶ್ಯಕತೆಗಳ ಮರು ಮೌಲ್ಯಮಾಪನ ನಡೆಸಬೇಕುಕ. ಯಂತ್ರಗಳನ್ನು ಅರ್ಹ ಹಾಸ್ಟೆಲ್‌ಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸಿಎಜಿ ವರದಿಯು ಶಿಫಾರಸ್ಸು ಮಾಡಿದೆ.

 

ವಾಷಿಂಗ್‌ ಮೆಷಿನ್‌, ಚಪಾತಿ ಯಂತ್ರ ಖರೀದಿಯಲ್ಲಿ ಅಕ್ರಮ; ಅನಧಿಕೃತ ಏಜೆನ್ಸಿಗೆ 10.59 ಕೋಟಿ ಹೆಚ್ಚುವರಿ ಪಾವತಿ

 

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿನ ವಿದ್ಯಾರ್ಥಿ ನಿಲಯಗಳಲ್ಲಿಯೂ ವಾಷಿಂಗ್‌ ಮೆಷೀನ್‌ ಮತ್ತು ಚಪಾತಿ ತಯಾರಿಸುವ ಯಂತ್ರ ಖರೀದಿಯಲ್ಲಿಯೂ ಅಕ್ರಮ ನಡೆದಿದ್ದನ್ನು ಸಿಎಜಿಯು ಬಹಿರಂಗಗೊಳಿಸಿತ್ತು. ಆದರೂ ಈಗಿನ ಕಾಂಗ್ರೆಸ್‌ ಸರ್ಕಾರವು ಯಾವುದೇ ಕ್ರಮವನ್ನು ವಹಿಸಿಲ್ಲ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts