ಬೆಂಗಳೂರು; ಬಗರ್ ಹುಕುಂ ಜಮೀನು ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನು ದೋಷಮುಕ್ತಗೊಳಿಸಲು ಲೋಕಾಯುಕ್ತವೇ ಸುಪ್ರೀಂ ಕೋರ್ಟ್‌ನಲ್ಲಿ ಅಫಡೆವಿಟ್ ಸಲ್ಲಿಸಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರವು ವಿರೋಧಿಸಿಲ್ಲ!
ʻಮುಡಾʼ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯು ಬೆಂಗಳೂರಿನಿಂದ ಮೈಸೂರಿನವರೆಗೆ ಪಾದಯಾತ್ರೆ ನಡೆಸಿದ್ದ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಇಡೀ ಸರ್ಕಾರವೇ ಆರ್ ಆಶೋಕ್ ವಿರುದ್ಧದ ಭೂ ಮಂಜೂರಾತಿ ಪ್ರಕರಣವನ್ನು ಮುಂದಿಟ್ಟುಕೊಂಡು ಆರೋಪಗಳ ಸುರಿಮಳೆಗೈದಿತ್ತು.
ಆದರೀಗ ಅದೇ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯು ಆರ್ ಅಶೋಕ್ ಅವರನ್ನು ದೋಷಮುಕ್ತಗೊಳಿಸುವ ಅಂಶವನ್ನು ಸೇರಿಸಿರುವ ವಿಚಾರವು ಮುನ್ನೆಲೆಗೆ ಬಂದಿದೆ. ಆದರೆ ಸರ್ಕಾರ ಮಾತ್ರ ಮೌನವಾಗಿದೆ.
ಜಮೀನು ಅಕ್ರಮ ಮಂಜೂರಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸುವಂತೆ ಲೋಕಾಯುಕ್ತಕ್ಕೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ನೀಡಿತ್ತು. ಅದರಂತೆ ಲೋಕಾಯುಕ್ತ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿತ್ತು. ಆದರೆ ಇದರಲ್ಲಿ ರಾಜ್ಯ ಸರ್ಕಾರದ ಪರವಾಗಿ ಆರ್ ಅಶೋಕ್ ಅವರನ್ನು ದೋಷಮುಕ್ತಗೊಳಿಸುವ ಅಂಶವನ್ನು ಸೇರಿಸಿದೆ ಎಂಬ ಸಂಗತಿಯನ್ನು ಹೆಚ್ಚುವರಿ ಅಡ್ವೋಕೇಟ್ ಜನರಲ್ ಅವರು ಸರ್ಕಾರದ ಗಮನಸೆಳೆದಿದ್ದಾರೆ.
ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕದ ಪರವಾಗಿ ನೇಮಕವಾಗಿರುವ ಹೆಚ್ಚುವರಿ ಅಡ್ವೋಕೇಟ್ ಜನರಲ್ ಅಮನ್ ಪನ್ವಾರ್ ಅವರು 2025ರ ಆಗಸ್ಟ್ 19ರಂದು ರಾಜ್ಯ ಸರ್ಕಾರಕ್ಕೆ ಇ- ಮೇಲ್ ಕಳಿಸಿದ್ದಾರೆ ಎಂದು ಗೊತ್ತಾಗಿದೆ.
ಇ -ಮೇಲ್ ನಲ್ಲೇನಿದೆ?
ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ಎಸ್‌ಎಲ್‌ಪಿ (ಕ್ರಿ) ಸಂಖ್ಯೆ 9070/2018, ಆರ್ ಅಶೋಕ್ ವಿರುದ್ಧ ಕರ್ನಾಟಕ ಸರ್ಕಾರ ಮತ್ತು ಇತರರು ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯು 2024ರ ಏಪ್ರಿಲ್ ರಂದು ಸಲ್ಲಿಸಿದ್ದ ಅಫಿಡೆವಿಟ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಪಕ್ಷಕಾರರಿಗೆ 2025ರ ಜುಲೈ 14ರ ಆದೇಶದಲ್ಲಿ ಅವಕಾಶ ನೀಡಿದೆ.
ಲೋಕಾಯುಕ್ತ ಸಂಸ್ಥೆಯು ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ತಪ್ಪಾಗಿ ರಾಜ್ಯ ಸರ್ಕಾರದ ಪರವಾಗಿ ಆರ್. ಅಶೋಕ್ ಅವರನ್ನು ದೋಷಮುಕ್ತಗೊಳಿಸುವ ಅಂಶವನ್ನು ಸೇರಿಸಿರುವುದರಿಂದ ರಾಜ್ಯ ಸರ್ಕಾರವು ವಿರೋಧಿಸಬೇಕಾಗಿರುತ್ತದೆ. ಅದರಂತೆ ಕರಡು ಅಫಿಡೆವಿಟ್‌ನ್ನು ಕಳಿಸಿರುವುದಾಗಿ ಅಡ್ವೋಕೇಟ್ ಜನರಲ್ ಅಮನ್ ಪನ್ವಾರ್ ಅವರು ಇ-ಮೇಲ್‌ನಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಅಫಿಡೆವಿಟ್‌ನ್ನು ಪ್ರಮಾಣೀಕರಿಸಿ ನ್ಯಾಯಾಲಯದಲ್ಲಿ ಸಲ್ಲಿಸಲುಇ ಕ್ರಮ ವಹಿಸುವ ಸಂಬಂಧ ಗೃಹ ಇಲಾಖೆಯ ಅಪರಾಧ ಅಭಿಯೋಗ ಶಾಖೆಯ ಅಧೀನ ಕಾರ್ಯದರ್ಶಿಗೆ ಕಡತ ಕಳಿಸಲಾಗಿದೆ ಎಂದು ಗೊತ್ತಾಗಿದೆ.
ಈ ಪ್ರಕರಣ ಮುಂದಿನ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ 2025ರ ಆಗಸ್ಟ್ 20ಕ್ಕೆ ನಿಗದಿಯಾಗಿತ್ತು. ನಂತರ ಇದು 2025ರ ಸೆಪ್ಟಂಬರ್ 15ಕ್ಕೆ ಮುಂದೂಡಲ್ಪಟ್ಟಿದ್ದು, ಈಗಾಗಲೇ ವಿಚಾರಣೆಗೆ ಪಟ್ಟಿ ಮಾಡಿರುವುದು ಗೊತ್ತಾಗಿದೆ.
ಏನಿದು ಪ್ರಕರಣ?
ಆರ್.ಅಶೋಕ್ 1998 ರಿಂದ 2006ರ ಅವಧಿಯವರೆಗೆ ಬೆಂಗಳೂರು ದಕ್ಷಿಣ ತಾಲೂಕು ಬಗರ್ ಹುಕುಂ ಭೂ-ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದಾಗ ಕಾನೂನು ಬಾಹಿರವಾಗಿ ಅನರ್ಹ ಫಲಾನುಭವಿಗಳಿಗೆ ಭೂ-ಮಂಜೂರಾತಿ ಮಾಡಿದ್ದಾರೆ ಎಂದು ಆರೋಪಿಸಿ ಎ.ಆನಂದ ಎಂಬವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಈ ದೂರು ಆಧರಿಸಿ ಎಸಿಬಿ ಪೊಲೀಸರು ಅಶೋಕ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ ಆರ್ ಅಶೋಕ್, ತಾನು ಯಾವುದೇ ಅಕ್ರಮ ನಡೆಸಿಲ್ಲ. ಕೇವಲ ರಾಜಕೀಯ ದುರುದ್ದೇಶದಿಂದ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ, ತನ್ನ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿದ್ದರು. ಜತೆಗೆ ಅರ್ಜಿ ಇತ್ಯರ್ಥವಾಗುವವರೆಗೆ ಎಫ್ಐಆರ್ ಆಧರಿಸಿ ತಮ್ಮ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗದಂತೆ ಎಸಿಬಿಗೆ ನಿರ್ದೇಶಿಸುವಂತೆ ಮಧ್ಯಂತರ ಮನವಿ ಮಾಡಿದ್ದರು.
ಆದರೆ, ಹೈಕೋರ್ಟ್, ಅಶೋಕ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಪ್ರಕರಣದ ತನಿಖೆ ನಡೆಸಲು 2018ರಲ್ಲಿ ಆದೇಶ ನೀಡಿತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ತನಿಖೆ ನಡೆಸಬಹುದು ಎಂದು ಅಭಿಪ್ರಾಯಪಟ್ಟಿದ್ದ ಕೋರ್ಟ್, ಬಗರ್ ಹುಕುಂ ಭೂಮಿ ಅಕ್ರಮ ಮಂಜೂರಾತಿ ಪ್ರಕರಣ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ದಳ (ಎಸಿಬಿ) ತನಿಖೆ ನಡೆಸಲು ಅನುಮತಿ ನೀಡಿತ್ತು. ಇದನ್ನು ಪ್ರಶ್ನಿಸಿ ಅಶೋಕ್ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಪ್ರಮಾಣಪತ್ರ ಸಲ್ಲಿಸುವಂತೆ ಲೋಕಾಯುಕ್ತಕ್ಕೆ ಸೂಚಿಸಿ ಮುಂದಿನ ವಿಚಾರಣೆಯನ್ನು ಮುಂದೂಡಿತ್ತು. ಈ ಪ್ರಕರಣದ ವಿಚಾರಣೆಯನ್ನು ಏಪ್ರಿಲ್ 22, 2025ಕ್ಕೆ ಮುಂದೂಡಲಾಗಿತ್ತು. ರಾಜ್ಯ ಸರ್ಕಾರದ ಪರವಾಗಿ ವಕೀಲ ಡಿ.ಎಲ್. ಚಿದಾನಂದ ವಾದ ಮಂಡಿಸಿದ್ದರು.
10,000 ಕೋಟಿ ರು ಭೂ ಹಗರಣ?
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗಲೇ ಆರ್. ಅಶೋಕ್ ಅವರು 10,000 ಕೋಟಿ ರು.ಗಳ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಬಿಜೆಪಿ ಆಡಳಿತದಲ್ಲಿ ಬಗರ್ ಹುಕುಂ ಸಕ್ರಮ ಸಮಿತಿಯ ಅಧ್ಯಕ್ಷರಾಗಿದ್ದಾಗ ಬೆಂಗಳೂರು ದಕ್ಷಿಣ ತಾಲ್ಲೂಕಿನ 75 ಹಳ್ಳಿಗಳಲ್ಲಿ 2,500 ಎಕರೆ ಅನಧಿಕೃತ ಭೂಮಿಯನ್ನು ಅಶೋಕ ಮಂಜೂರು ಮಾಡಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿತ್ತು. ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಬೆಂಬಲವಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದ ವಿ ಎಸ್ ಉಗ್ರಪ್ಪ, ಮೋಹನ್ ಕೊಂಡಜ್ಜಿ, ಪ್ರೊ ಕೆ ಇ ರಾಧಾಕೃಷ್ಣ, ಪಿ ಆರ್ ರಮೇಶ್ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.
ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕೆಂದು ಅವರು ಆಗ್ರಹಿಸಿದ್ದರು.
ಭೂ ಹಂಚಿಕೆಯಲ್ಲಿನ ಅಕ್ರಮಗಳ ಕುರಿತು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಹಾಯಕ ಆಯುಕ್ತರು ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ ಎಂದು ಉಗ್ರಪ್ಪ ಹೇಳಿದ್ದರು. ಸರ್ಕಾರಿ ಭರವಸೆಗಳ ಕುರಿತಾದ ಶಾಸಕಾಂಗ ಸಮಿತಿಯು ಸಹ ಅಕ್ರಮಗಳನ್ನು ಪತ್ತೆ ಹಚ್ಚಿತ್ತು. ಮತ್ತು ಕ್ರಮ ಕೈಗೊಳ್ಳಲು ಶಿಫಾರಸು ಮಾಡಿತ್ತು ಎಂದು ಉಗ್ರಪ್ಪ ಅವರು ಹೇಳಿಕೆ ನೀಡಿದ್ದರು.
ಸಮಿತಿಯ ಅಧ್ಯಕ್ಷರಾಗಿದ್ದ ಅಶೋಕ ಅವರು ಮಾಜಿ ಕಾರ್ಪೊರೇಟರ್‌ಗಳು, ಅವರ ಕುಟುಂಬ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರಿಗೆ ಬಗರ್ ಹುಕುಂ ಭೂಮಿಯನ್ನು ಹಂಚಿಕೆ ಮಾಡಿದ್ದಾರೆ. ಇದರಿಂದಾಗಿ ರಾಜ್ಯ ಖಜಾನೆಗೆ 10,000 ಕೋಟಿ ರೂ. ನಷ್ಟವಾಗಿದೆ ಎಂದು ರಮೇಶ್ ಆರೋಪಿಸಿದ್ದರು. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ ವಿವಿಧ ಷರತ್ತುಗಳ ಅಡಿಯಲ್ಲಿ 16 ಹಳ್ಳಿಗಳಲ್ಲಿ ಅನರ್ಹ ಫಲಾನುಭವಿಗಳಿಗೆ ಭೂಮಿ ಹಂಚಿಕೆ ಮಾಡಲಾಗಿದೆ ಎಂದು ಅವರು ಆಪಾದಿಸಿದ್ದರು.
ಆದರೆ ಆರ್. ಅಶೋಕ್ ಈ ಆರೋಪಗಳನ್ನು ತಳ್ಳಿಹಾಕಿದ್ದರು. “ಈ ಪ್ರಕರಣವನ್ನು ಲೋಕಾಯುಕ್ತ ಮತ್ತು ಹೈಕೋರ್ಟ್ ಎರಡೂ ಎರಡು ವರ್ಷಗಳ ಹಿಂದೆ ರದ್ದುಗೊಳಿಸಿದ್ದವು. ಅವರು ಪ್ರಕರಣವನ್ನು ಮುಂದುವರಿಸಲು ಬಯಸಿದರೆ, ಅವರು ಪತ್ರಿಕಾಗೋಷ್ಠಿ ನಡೆಸುವ ಬದಲು ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಬೇಕಾಗಿತ್ತು” ಎಂದು ಹೇಳಿದ್ದರು.
2000-2004 ರ ನಡುವೆ ಬಗರ್ ಹುಕುಂ ಭೂ ಹಂಚಿಕೆ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾಗಿ ಅವರು ಒಪ್ಪಿಕೊಂಡಿದ್ದರು. ಆದರೆ ಆ ಸಮಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು ಎಂದು ಹೇಳಿದ್ದರು. ಇದು ಐದು ಜನರ ಸಮಿತಿಯಾಗಿದೆ. ಸಮಿತಿಯಲ್ಲಿ ನಾಲ್ವರು ಕಾಂಗ್ರೆಸ್ ಸರ್ಕಾರ ನೇಮಿಸಿದ್ದ ನಾಮನಿರ್ದೇಶಿತ ಸದಸ್ಯರಿದ್ದರು ಎಂದು ಅವರು ಹೇಳಿದ್ದರು. “ನಾನು ಒಬ್ಬಂಟಿಯಾಗಿ ಭೂಮಿ ಹಂಚಿಕೆ ಮಾಡುವುದಾದರು ಹೇಗೆ?ʼʼ ಎಂದೂ ಅಶೋಕ್ ಅವರು ಪ್ರಶ್ನಿಸಿದ್ದನ್ನು ಸ್ಮರಿಸಬಹುದು.
‘ಸಿದ್ರಾಮುಲ್ಲಾಖಾನ್’ ಎಂದು ನಿಂದಿಸಿದ್ದ ಪ್ರಕರಣ; ಅಶೋಕ್ ಸೇರಿ 43 ಮಂದಿ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ನಿರ್ಧಾರ
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ʻಸಿದ್ರಾಮುಲ್ಲಾ ಖಾನ್ʼ ಎಂದು ನಿಂದಿಸಿದ್ದ ಪ್ರಕರಣದಲ್ಲಿಯೂ ಆರ್ ಅಶೋಕ್ ಸೇರಿ ಒಟ್ಟು 43 ಮಂದಿ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದ್ದನ್ನು ಸ್ಮರಿಸಬಹುದು.
ಆರ್. ಅಶೋಕ್ ಅವರನ್ನು ದೋಷಮುಕ್ತಗೊಳಿಸುವ ಅಂಶವನ್ನು ಅಫಿಡೆವಿಟ್‌ನಲ್ಲಿ ಸೇರಿಸಿರುವ ಕುರಿತು ‘ದಿ ಫೈಲ್’, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ರಿಜಿಸ್ಟ್ರಾರ್ ಅವರಿಗೆ ಇ-ಮೇಲ್ ಮೂಲಕ ಸ್ಪಷ್ಟೀಕರಣ ಕೋರಿದೆ. ಇದುವರೆಗೂ ಅವರು ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ಸಂಸ್ಥೆಯು ಸ್ಪಷ್ಟೀಕರಣ ನೀಡಿದ ನಂತರ ಈ ವರದಿಯನ್ನು ನವೀಕರಿಸಲಾಗುವುದು.