ಬೆಂಗಳೂರು; ರಾಜ್ಯದ ಒಟ್ಟು ಹಣಕಾಸಿನ ಹೊಣೆಗಾರಿಕೆಗಳು 2019-20ರಲ್ಲಿ 3,37,520 ಕೋಟಿ ಗಳಿಂದ 2023-24ರಲ್ಲಿ 6,33,531 ಕೋಟಿಗಳಿಗೆ ಏರಿಕೆಯಾಗಿದೆ. ಶೇ. 88ರಷ್ಟು ಮತ್ತು ಹಿಂದಿನ ವರ್ಷಕ್ಕಿಂತ ಶೇ. 14ರಷ್ಟು ಏರಿಕೆಯಾಗಿದೆ. 2023-24ರಲ್ಲಿ ರಾಜ್ಯದ ಆಂತರಿಕ ಸಾಲವು ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷದಲ್ಲಿ ಶೇ. 115ರಷ್ಟು ಹೆಚ್ಚಳವಾಗಿದೆ. ಇದು ಮತ್ತೊಮ್ಮೆ ಶೇ. 23.49ಕ್ಕೆ ಏರಿಕೆಯಾಗಿದೆ.
2023-24ರ ಅವಧಿಯಲ್ಲಿ ಮಾರುಕಟ್ಟೆ ಸಾಲವನ್ನು ಒಳಗೊಂಡಿರುವ ಆಂತರಿಕ ಋಣವು ಶೇ.65.89ರಷ್ಟಿದೆ. ಮತ್ತು ಸಾರ್ವಜನಿಕ ಲೆಕ್ಕದ ಒಟ್ಟು ಹಣಕಾಸಿನ ಹೊಣೆಗಾರಿಕೆಗಳು ಶೇ.23.55ರಷ್ಟಿದೆ.
ಕರ್ನಾಟಕ ವಿಧಾನಮಂಡಲದ ಉಭಯ ಸದನಗಳಲ್ಲಿ ಸಿಎಜಿಯು ಮಂಡಿಸಿರುವ ರಾಜ್ಯದ ಹಣಕಾಸಿನ ವ್ಯವಹಾರಗಳ ಲೆಕ್ಕ ಪರಿಶೋಧನೆ ವರದಿಯಲ್ಲಿ ಆಂತರಿಕ ಸಾಲ ಮತ್ತು ಹೊಣೆಗಾರಿಕೆಗಳ ವಿವರಣೆಗಳಿವೆ.
ರಾಜ್ಯ ಸರ್ಕಾರವು 2004-05ರಿಂದ 2019-20ರವರೆಗೆ ರಾಜಸ್ವ ಹೆಚ್ಚಳವನ್ನು ದಾಖಲಿಸಿತು. ಮತ್ತು 2020-21, 2021-22ರ ಅವಧಿಯಲ್ಲಿ ರಾಜ್ಯವು ರಾಜಸ್ವ ಕೊರತೆಯನ್ನು ಅನುಭವಿಸಿತು. ಮತ್ತು ರಾಜಸ್ವ ಕೊರತೆಯನ್ನು ಸಾಲದ ನಿಧಿಗಳಿಂದ ಪೂರೈಸಲಾಯಿತು. 2022-23ರ ಅವಧಿಯಲ್ಲಿ ರಾಜ್ಯವು ರಾಜಸ್ವ ಹೆಚ್ಚಳವನ್ನು ಅನುಭವಿಸಿತು. ಆದರೂ 2023-24ರಲ್ಲಿ ರಾಜ್ಯವು ಮತ್ತೊಮ್ಮೆ ರಾಜಸ್ವ ಕೊರತೆಯನ್ನು ಕಂಡಿತು ಎಂದು ವಿವರಿಸಿದೆ.
ರಾಜಸ್ವ ವೆಚ್ಚ ಎಂದು ಪರಿಗಣಿಸಬೇಕಾಗಿದ್ದ 374.64 ಕೋಟಿ ವೆಚ್ಚವನ್ನು ಬಂಡವಾಳ ವೆಚ್ಚ ಎಂದು ಪರಿಗಣಿಸಲಾಗಿತ್ತು. ಬಂಡವಾಳ ಶೀರ್ಷಿಕೆಯಲ್ಲಿನ 129.65 ಕೋಟಿ ರು ವೆಚ್ಚವನ್ನು ರಾಜಸ್ವ ಸ್ವರೂಪದ ವೆಚ್ಚಕ್ಕಾಗಿ ಬಳಕೆಯಾಗಿತ್ತು. ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಗೆ ಸಂಬಂಧಿಸಿದಂತೆ ಮೀಸಲು ನಿಧಿಗಳು ಮತ್ತು ಬಡ್ಡಿಯನ್ನು ಹೊಂದಿರುವ ಠೇವಣಿಗಳಡಿಯಿಲ್ಲಿ ವೆಚ್ಚ ಮಾಢದ ಬಾಕಿ ಮೇಲೆ 27.73 ಕೋಟಿ ಬಡ್ಡಿಯನ್ನು ಪಾವತಿಸಬೇಕಾಗಿತ್ತು.
ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯಿಂದ ಭರಿಸಬೇಕಾಗಿದ್ದ 492.12 ಕೋಟಿ ಬಂಡವಾಳ ವೆಚ್ಚವನ್ನು ಈ ನಿಧಿ ಖಾತೆಗೆ ವರ್ಗಾಯಿಸಿಲ್ಲ. ಹೀಗಾಗಿ ರಾಜಸ್ವ ಕೊರತೆ ಮತ್ತು ವಿತ್ತೀಯ ಕೊರತೆ ಮೇಲೆ ಪರಿಣಾಮ ಬೀರುತ್ತದೆ. ರಾಜಸ್ವ ಕೊರತೆಯು 532.01 ಕೋಟಿಯಷ್ಟು ಹೆಚ್ಚಾಗಿ 9,803.01 ಕೋಟಿಗಳಷ್ಟಾಗಿದೆ. ಮತ್ತು ಪರಿಣಾಮಕಾರಿ ವಿತ್ತೀಯ ಕೊರತೆಯು 464.39 ಕೋಟಿಯಷ್ಟು ಕಡಿಮೆಯಾಗಿ 65,057.61 ಕೋಟಿಗಳಷ್ಟಾಗುತ್ತದೆ ಎಂದು ಸಿಎಜಿ ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
2023-24ರಲ್ಲಿ ರಾಜ್ಯ ಸರಕು ಮತ್ತು ಸೇವಾ ತೆರಿಗೆ ಸಂಗ್ರಹಣೆಗಳು 71,041 ಕೋಟಿಗಳಾಗಿದೆ. 2022-23ಕ್ಕಿಂತ 9,638 ಕೋಟಿಗಳಷ್ಟು ಹೆಚ್ಚಳವಾಗಿದೆ. ಆದರೆ 76, 150 ಕೋಟಿಯು ಆಯವ್ಯಯದ ಅಂದಾಜಿಗೆ ಹೋಲಿಸಿದರೆ ಶೇ. 7.19ರಷ್ಟು ಕಡಿಮೆಯಾಗಿದೆ. ಇದು 798 ಕೋಟಿ ಮೊತ್ತದ ಸಮಗ್ರ ಸರಕು ಮತ್ತು ಸೇವಾ ತೆರಿಗೆಯಿಂದ ಮುಂಗಡ ಹಂಚಿಕೆಯನ್ನೂ ಒಳಗೊಂಡಿತ್ತು.
ತೆರಿಗೆಯೇತರ ರಾಜಸ್ವದಲ್ಲಿಯೂ ಕಡಿಮೆಯಾಗಿದೆ. 2022-23ರಲ್ಲಿದ್ದ 13,914 ಕೋಟಿಯಿಂದ 2023-24ರಲ್ಲಿ 13,117 ಕೋಟಿಗಳಾಗಿತ್ತು. ಇದು 797 ಕೋಟಿಗಳಷ್ಟು ಕಡಿಮೆಯಾಗಿದೆ. ಇದು ಮುಖ್ಯವಾಗಿ ಇತರೆ ತೆರಿಗೆಯೇತರ ಸ್ವೀಕೃತಿಗಳಾದ ಇತರೆ ಆಡಳಿತ ಸೇವೆಗಳು (586 ಕೋಟಿ) ಮತ್ತು ಇತರೆ (1,475 ಕೋಟಿ) ವಲಯಗಳಲ್ಲಿದೆ.
ಕಬ್ಬಿಣೇತರ ಗಣಿ ಮತ್ತು ಲೋಹದ ಉದ್ದಮದ ಅಡಿಯಲ್ಲಿ 2021-22ರ ಅವಧಿಯಲ್ಲಿ ಗಣನೀಯವಾಗಿ ಹೆಚ್ಚಿದ್ದ ರಾಯಧನವು 2022-23ರ ಅವಧಿಯಲ್ಲಿ ಕಡಿಮೆಯಾಗಿತ್ತು. ಇದು 2023-24ರರಲ್ಲಿ ಮತ್ತೊಮ್ಮೆ 1,376 ಕೋಟಿಗಳಷ್ಟು ಹೆಚ್ಚಾಗಿದೆ. ಹಿಂದಿನ ವರ್ಷಕ್ಕಿಂತ ಲಾಭಾಂಶ ಮತ್ತು ಲಾಭದ ಅಡಿಯಲ್ಲಿ 126 ಕೋಟಿ ಇಳಿಕೆಯಾಗಿದೆ ಎಂದು ವರದಿಯಲ್ಲಿ ವಿಶ್ಲೇಷಿಸಿದೆ.
ಹದಿನೈದನೇ ಹಣಕಾಸು ಆಯೋಗದ ಶಿಫಾರಸ್ಸಿಗೆ ಸಂಬಂಧಿಸಿದಂತೆಯೂ ಸಿಎಜಿಯು ವಿಶ್ಲೇಷಣೆ ಮಾಡಿದೆ. 2023-24ರಲ್ಲಿ ಈ ಶಿಫಾರಸ್ಸುಗಳಿಗೆ ಪ್ರತಿಯಾಗಿ ಅನುದಾನಗಳ ಸ್ವೀಕೃತಿಯಲ್ಲಿ ಕೊರತೆ ಕಂಡು ಬಂದಿದೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಿದ ಅನುದಾನಕ್ಕಾಗಿ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಂಸ್ಥೆಗಳು ಸರಿಯಾಗಿ ರಚಿತವಾಗಿದ್ದರೇ ಮಾತ್ರ ಅರ್ಹವಾಗಿರುತ್ತದೆ. ಆದರೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪರಿಷತ್ ಮತ್ತು ತಾಲೂಕು ಪಂಚಾಯತ್‌ಗಳನ್ನು ರಚಿಸಲಾಗಿಲ್ಲ. ಆದ್ದರಿಂದ ಅನುಪಾತದ ಆಧಾರದ ಮೇಲೆ ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಸಿಎಜಿಯು ವಿವರಿಸಿದೆ.
60 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ವರ್ಧನೆಯನ್ನು ಪರಿಗಣಿಸಿದೆ. ಸಂಸ್ಥೆಗಳ ಸಂಖ್ಯೆಗೆ ಅನುಪಾತದ ಆಧಾರದ ಮೇಲೆ ರಾಜ್ಯಕ್ಕೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ವಿಶ್ಲೇಷಿಸಿದೆ.
2023-24ರಲ್ಲಿ ರಾಜ್ಯ ವಿಪತ್ತು ಅಪಾಯ ನಿರ್ವಹಣಾ ನಿಧಿ ಅಡಿಯಲ್ಲಿ ಭಾರತ ಸರ್ಕಾರದಿಂದ ರಾಜ್ಯ ವಿಪತ್ತು ನಿರ್ವಹಣಾ ನಿಧಿಗೆ 697.60 ಕೋಟಿ ಮತ್ತು ರಾಜ್ಯ ವಿಪತ್ತು ಉಪ ಶಮನ ನಿಧಿ ಅಡಿಯಲ್ಲಿ 173.90 ಕೋಟಿ ಸೇರಿ ಒಟ್ಟಾರೆ 871.50 ಕೋಟಿ ಹಂಚಿಕೆಯಾಗಿದೆ. 2023-24ರ ಅವಧಿಯಲ್ಲಿ ಎಸ್‌ಡಿಎಆರ್‍ಎಫ್ ಅಡಿಯಲ್ಲಿ ರಾಜ್ಯವು 697.60 ಕೋಟಿಯನ್ನುಕೇಂದ್ರದ ಭಾಗವಾಗಿ ವರ್ಗಾಯಿಸಿದೆ. ಆದರೂ ಎಸ್‌ಡಿಎಂಎಫ್ ಅಡಿಯಲ್ಲಿ ಯಾವುದೇ ಮೊತ್ತವನ್ನು ನಿಗದಿಪಡಿಸಿಲ್ಲ.
2019-20 ಮತ್ತು 2020-21ರಲ್ಲಿ ಬಂಡವಾಳ ಸ್ವೀಕೃತಿಗಳು ಹೆಚ್ಚುತ್ತಿರುವ ಪ್ರವೃತ್ತಿಯಲ್ಲಿದೆ. 2021-22 ಮತ್ತು 2022-23ರಲ್ಲಿ 90,622 ಕೋಟಿ ಅಂದರೆ ಶೇ. 101ರಷ್ಟು ಗಣನೀಯವಾಗಿ ಏರಿಕೆಯಾಗಿದೆ. ಸಾರ್ವಜನಿಕ ಋಣವು ಬಂಡವಾಳ ಸ್ವೀಕೃತಿಗಳಲ್ಲಿ ಪ್ರಧಾನ ಪಾಲನ್ನು ಹೊಂದಿದೆ. ಇದು ಬಂಡವಾಳ ಸ್ವೀಕೃತಿಗಳ ಹೆಚ್ಚಳ ಮತ್ತು ಕಡಿಮೆ ಮೇಲೆ ಪ್ರಭಾವ ಬೀರಿದೆ. ಇದು 2019-20ರಿಂದ 2023-24ರ ಅವಧಿಯಲ್ಲಿ ಸರಾಸರಿ 99.51ರಷ್ಟು ಪ್ರತಿಶತ ಹೊಂದಿದೆ.
ಸಾರ್ವಜನಿಕ ಋಣದ ಸ್ವೀಕೃತಿಗಳು ಸಹ 2019-20ರಲ್ಲಿದ್ದ 50,459 ಕೋಟಿಯಿಂದ 2023-24ರಲ್ಲಿ 90,280 ಕೋಟಿಗೆ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಾರ್ವಜನಿಕ ಋಣದ ಸ್ವೀಕೃತಿಯಲ್ಲಿ ಹೆಚ್ಚಳ ಕಂಡು ಬಂದಿದೆ. ಇದು ಮುಖ್ಯವಾಗಿ ರಾಜ್ಯದಿಂದ ಮಾರುಕಟ್ಟೆ ಎರವಲುಗಳ ಹೆಚ್ಚಳದಿಂದಾಗಿದೆ. ಈ ಅವಧಿಯಲ್ಲಿ ಸಾಲಗಳು ಮತ್ತು ಮುಂಗಡಗಳ ವಸೂಲಾತಿಯು ತೀರಾ ಕಡಿಮೆಯಾಗಿತ್ತು. 2023-24ರಲ್ಲಿ ಚೇತರಿಕೆಯು ಹಿಂದಿನ ವರ್ಷಕ್ಕಿಂತ 172 ಕೋಟಿಗಳಷ್ಟು ಕಡಿಮೆಯಾಗಿದೆ ಎಂದು ವಿವರಿಸಿರುವುದು ತಿಳಿದು ಬಂದಿದೆ.