ಕೊರೊನಾ; ಮುಖ್ಯ ಕಾರ್ಯದರ್ಶಿ ಚೆಲ್ಲಾಟ, ಸರ್ಕಾರಿ ನೌಕರರಿಗೆ ಪ್ರಾಣ ಸಂಕಟ

ಬೆಂಗಳೂರು; ಕೊರೊನಾ ವೈರಸ್‌ನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್‌ ವಿಸ್ತರಣೆ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಬದಿಗೊತ್ತಿ ಆದೇಶ, ಸುತ್ತೋಲೆಗಳನ್ನು ಹೊರಡಿಸುತ್ತಿದ್ದಾರೆ ಎಂಬ ಆರೋಪಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯಭಾಸ್ಕರ್‌ ಅವರು ಗುರಿಯಾಗಿದ್ದಾರೆ. 

ಅಲ್ಲದೆ, ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗುವುದಕ್ಕೆ ಸಂಬಂಧಿಸಿದಂತೆ ಕಳೆದ  ಕೆಲ ದಿನಗಳಿಂದ ಸರ್ಕಾರದಿಂದ ಹೊರಬೀಳುತ್ತಿರುವ ಆದೇಶ, ಸುತ್ತೋಲೆಗಳು ಸ್ಪಷ್ಟವಾಗಿರದೇ ಹಲವು ಗೊಂದಲದಿಂದ ಕೂಡಿವೆ. ಕಚೇರಿಗಳಿಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂದು ಹೊರಡಿಸುತ್ತಿರುವ ಮುಖ್ಯ ಕಾರ್ಯದರ್ಶಿಗಳು, ಚಿಕ್ಕ ಚಿಕ್ಕ ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಇದರಿಂದ ರೋಗ ಹರಡುವಿಕೆಗೆ ಇನ್ನಷ್ಟು ಕಾರಣವಾಗಲಿದೆ ಎಂಬ ಆತಂಕ ನೌಕರರನ್ನು ಕಾಡತೊಡಗಿದೆ. 

ರಾಜ್ಯ ಪೊಲೀಸ್‌ ಮಹಾನಿರ್ದೇಶಕರು, ಬೆಂಗಳೂರು ಪೊಲೀಸ್‌ ಕಮಿಷನರ್‌ ಹೊರಡಿಸುತ್ತಿರುವ ಸುತ್ತೋಲೆ, ಆದೇಶಗಳಿಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹೊರಡಿಸುತ್ತಿರುವ ಸುತ್ತೋಲೆ, ಆದೇಶಗಳ ಮಧ್ಯೆ ತಾಳಮೇಳವೇ ಇಲ್ಲ. ಕರ್ತವ್ಯಕ್ಕೆ ಹಾಜರಾಗುವ ಸಂಬಂಧ ಯಾವ ಆದೇಶಗಳನ್ನು ಪಾಲಿಸಬೇಕು ಎಂಬ ಬಗ್ಗೆ ಸಚಿವಾಲಯ ಸೇರಿದಂತೆ ಅಗತ್ಯ ಸೇವೆ ಕಾಯ್ದೆಗೊಳಪಟ್ಟಿರುವ ಇಲಾಖೆಗಳ ನೌಕರರು ಇದೀಗ ಪೇಚಾಟಕ್ಕೆ ಸಿಲುಕಿದ್ದಾರೆ. ಆದೇಶ ಮತ್ತು ಸುತ್ತೋಲೆ ಹೊರಡಿಸುವ ಸಂಬಂಧ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಸುತ್ತೋಲೆ, ಆದೇಶಗಳು, ಆಡಳಿತ ಇಲಾಖೆಗಳ  ನಡುವೆಯೇ ಸಮನ್ವಯತೆ ಇಲ್ಲ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಾಂಕ್ರಾಮಿಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ (ಕೋವಿಡ್-19)‌ ರೋಗವನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ 2020ರ ಮೇ 3ರವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸಿ ಆದೇಶಿಸಿದೆ.  ಅದರಂತೆ ಭಾರತ ಸರ್ಕಾರದ ಗೃಹ ಮಂತ್ರಾಲಯವು 20204 ಏಪ್ರಿಲ್‌ 15ರಂದು ಆದೇಶದಲ್ಲಿಯೂ ಹಲವು ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ನಿಬಂಧನೆಗಳನ್ನು ವಿಧಿಸಿದೆ. ಅಲ್ಲದೆ, ಈ ಆದೇಶಗಳ ಮಾರ್ಗಸೂಚಿ ಪ್ರಕಾರ (ಕ್ರ ಸಂ 18 ಮತ್ತು 19ರಲ್ಲಿ) ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ನಿಯಮಾವಳಿಗಳ ಬಗ್ಗೆಯೂ ಸ್ಪಷ್ಟವಾಗಿ ಉಲ್ಲೇಖಿಸಿದೆ. ಅದರಂತೆ ಮಾರ್ಗಸೂಚಿ ಕ್ರಮ ಸಂಖ್ಯೆ 19ರಲ್ಲಿ ಪ್ರಮುಖವಾಗಿ ಪೊಲೀಸ್‌, ಗೃಹರಕ್ಷಕ ದಳ, ಸಿವಿಲ್‌ ಡಿಫೆನ್ಸ್‌,  ಅಗ್ನಿಶಾಮಕ,  ವಿಪತ್ತು ನಿರ್ವಹಣೆ, ಕಾರಾಗೃಹ, ಮಹಾನಗರಪಾಲಿಕೆ ಸೇವೆಗಳಿಗೆ  ಯಾವುದೇ ನಿರ್ಬಂಧ ವಿಧಿಸಿಲ್ಲ.  

ಉಳಿದ ಇಲಾಖೆಗಳಲ್ಲಿ ಅವಶ್ಯಕತೆಗನುಣವಾಗಿ ಗ್ರೂಪ್‌ ಎ, ಬಿ ವೃಂದದ ಅಧಿಕಾರಿಗಳನ್ನು ಹಾಗೂ ಸಿ ಮತ್ತು ಡಿ, ಕೆಳಹಂತದ ವೃಂದಗಳ ಸಿಬ್ಬಂದಿಯನ್ನು ಶೇ. 33ರವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಷರತ್ತಿನೊಂದಿಗೆ ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ ಮುಖ್ಯ ಕಾರ್ಯದರ್ಶಿಗಳು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಆದೇಶ ಹೊರಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಲಾಕ್‌ಡೌನ್‌ ಜಾರಿಯಲ್ಲಿರುವ  ದಿನದಿಂದಲೂ  ಸಚಿವಾಲಯ ಮತ್ತು ರಾಜ್ಯ ಮಟ್ಟದ ಕಚೇರಿಗಳು ಸೇರಿದಂತೆ ಸುಮಾರು 18 ಇಲಾಖೆಗಳಲ್ಲಿ ಅಧಿಕಾರಿ ಮತ್ತು ನೌಕರರು ಪೂರ್ಣ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕು. ಉಳಿದ ಇಲಾಖೆಗಳಲ್ಲಿ ಗ್ರೂಪ್‌ ʼಎʼ & ʼಬಿʼ ವೃಂದದ ಎಲ್ಲಾ ಅಧಿಕಾರಿಗಳು ಹಾಗೂ ಗ್ರೂಪ್‌ ʼಸಿʼ & ʼಡಿʼ  ವೃಂದದ ಶೇಕಡಾ 33 ರಷ್ಟು ನೌಕರರು ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿ ಹೊರಡಿಸಿರುವ ಆದೇಶಗಳು ನೌಕರರಲ್ಲಿ ಗೊಂದಲ ಮೂಡಿಸಿವೆ.  

2020ರ ಏಪ್ರಿಲ್15, 16 ಮತ್ತು 18ರಂದು ಹೊರಡಿಸಿರುವ ಆದೇಶ, ಸುತ್ತೋಲೆಗಳು ಸ್ಪಷ್ಟವಾಗಿಲ್ಲ. ಹಾಗೆಯೇ ಪೊಲೀಸ್‌ ಆಯುಕ್ತರು ಹೊರಡಿಸುತ್ತಿರುವ ಆದೇಶಗಳು ಮತ್ತು ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಹೊರಬೀಳುವ ಆದೇಶಗಳ ಮಧ್ಯೆ ಸಮನ್ವಯತೆ ಇಲ್ಲ.  ಇಡೀ ದೇಶವೇ ಕಟ್ಟುನಿಟ್ಟಿನ ಲಾಕ್‌ಡೌನ್‌ನಲ್ಲಿದೆ. ಸಾರ್ವಜನಿಕ ಸಾರಿಗೆ ಹಾಗೂ ಖಾಸಗಿ ವಾಹನಗಳ ಓಡಾಟಕ್ಕೆ ಅನುಮತಿ ಇಲ್ಲ. ಹಾಗೆಯೇ ಕಾರಿನಲ್ಲಿ ಇಬ್ಬರು ಮಾತ್ರ ಹಾಗೂ ದ್ವಿಚಕ್ರ ವಾಹನಗಳಲ್ಲಿ ಸವಾರರು ಒಬ್ಬರು ಮಾತ್ರ ಸಂಚರಿಸಬೇಕೆಂಬ ಷರತ್ತು ವಿಧಿಸಿಲಾಗಿದೆ. ಇನ್ನು ಯಾವುದೇ ಇಲಾಖಾವಾರು ಅಧಿಕೃತ ಸಭೆಗಳಾಗಲಿ, ವಿಧಾನ ಮಂಡಲ ಅಧಿವೇಶನವಾಗಲಿ, ಸಮಿತಿಗಳ ಸಭೆಗಳಾಲಿ, ಸಾರ್ವಜನಿಕರ ಓಡಾಟವಾಗಲಿ ಇಲ್ಲ. 

ಹೀಗಿರುವಾಗ ಮುಖ್ಯ ಕಾರ್ಯದರ್ಶಿಗಳು, ಈ ಪ್ರಮಾಣದಲ್ಲಿ ಸರ್ಕಾರಿ ಇಲಾಖೆಗಳನ್ನು ತೆರೆಯುವಂತೆ ಆದೇಶಿಸಿರುವುದು ಯಾವ ಕಾರ್ಯಸಾಧನೆಗೆಂಬುದು ಅರ್ಥವಾಗುತ್ತಿಲ್ಲ ಎಂಬ  ಅಭಿಪ್ರಾಯಗಳು ಸರ್ಕಾರಿ  ನೌಕರರ  ವಲಯದಲ್ಲಿ ಕೇಳಿ ಬಂದಿವೆ.  

‘ದಿ ಫೈಲ್‌’ ಜತೆ ಮಾತನಾಡಿದ ಸರ್ಕಾರಿ ನೌಕರರೊಬ್ಬರು ‘ಸಾರ್ವಜನಿಕ ಸಾರಿಗೆ  ಹಾಗೂ ಖಾಸಗಿ ವಾಹನಗಳ  ಓಡಾಟಕ್ಕೆ ಅನುಮತಿ ಇಲ್ಲದ ಕಾರಣ  ಸರ್ಕಾರಿ ನೌಕರರು ಕಚೇರಿಗೆ ಬಂದು ಹೋಗಲು ಸಾಕಷ್ಟು  ತೊಂದರೆಗಳಿಗೀಡಾಗಿದ್ದಾರೆ. ವಿಶೇಷವಾಗಿ ಮಹಿಳಾ  ಸಿಬ್ಬಂದಿ ಸೇರಿದಂತೆ ಬಹುತೇಕ ಸಿಬ್ಬಂದಿ ಸ್ವಂತ  ವಾಹನವನ್ನು ಹೊಂದಿಲ್ಲ. ಕಾರಿನಲ್ಲಿ ಇಬ್ಬರು ಮತ್ತು  ದ್ವಿಚಕ್ರ ವಾಹನದಲ್ಲಿ ಒಬ್ಬರು  ಮಾತ್ರ ಸಂಚರಿಸಬೇಕು ಎಂಬ ಷರತ್ತು ಇರುವುದು ಕುಟುಂಬದ  ಸದಸ್ಯರು ಕಚೇರಿಗೆ ಕರೆತರಲು ತೊಂದರೆಯಾಗಿದೆ,’ ಎಂದು ಅಳಲು ತೋಡಿಕೊಂಡರು. 

ಆರೋಗ್ಯ ಇಲಾಖೆ  ಸಿಬ್ಬಂದಿ ಹೊರತುಪಡಿಸಿ ಇತರೆ ಯಾವುದೇ  ಸಿಬ್ಬಂದಿಗೆ  ಯಾವುದೇ ವಿಶೇಷ ವಾಹನಗಳ ಸೌಲಭ್ಯ ಒದಗಿಸಿಲ್ಲ. ಈಗಾಗಲೇ ಹಲವು ಕಾಯಿಲೆಗಳಿಂದ ಬಳಲುತ್ತಿರುವ ಅಧಿಕಾರಿ, ನೌಕರರು ಮಾತ್ರವಲ್ಲದೆ, ಹಾಲುಣಿಸುವ ಮಕ್ಕಳನ್ನು ಹೊಂದಿರುವ ಮಹಿಳಾ ನೌಕರರಿಗೂ ಯಾವುದೇ ವಿನಾಯಿತಿ ನೀಡಿಲ್ಲ.  ಇನ್ನು, ಲಾಕ್‌ಡೌನ್‌ ವಿಸ್ತರಣೆ  ಜತೆಜತೆಯಲ್ಲೇ ಅಂತರಜಿಲ್ಲಾ ಸಾರಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಲಾಕ್‌ಡೌನ್‌ ಘೋಷಣೆ ಪೂರ್ವದಲ್ಲಿ ಹೊರ ಜಿಲ್ಲೆಯ ತಮ್ಮ ಸ್ವಂತ ಸ್ಥಳಗಳಿಗೆ ತೆರಳಿದ್ದ  ಸರ್ಕಾರಿ ನೌಕರರು ಕಚೇರಿಗಳಿಗೆ  ಹಾಜರಾಗುವುದು ಅಸಾಧ್ಯ. ಈ ಬಗ್ಗೆ ಈವರೆವಿಗೂ ಸ್ಪಷ್ಟ ನಿರ್ದೇಶನಗಳು ಹೊರಬಿದ್ದಿಲ್ಲ.  

ನೌಕರರ ಹಾಜರಾತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡ್ಡಾಯಗೊಳಿಸಿರುವುದರಿಂದ ಒಂದೇ ಕಟ್ಟಡದಲ್ಲಿ ಸಾವಿರಾರು ಸಿಬ್ಬಂದಿಯು ಕೆಲಸ ನಿರ್ವಹಿಸಬೇಕಾಗಿದೆ. ಇದರಿಂದ  ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು  ಅಸಾಧ್ಯದ ಮಾತು. ಕೆಲವು ಕಚೇರಿಗಳಲ್ಲಿ ಒಂದು ಅಡಿಗೂ ಕಡಿಮೆ ಅಂತರದಲ್ಲಿ ಕುಳಿತು ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ  ಇದೆ.  ಕಚೇರಿಗೆ  ಹಾಜರಾಗಿರುವ ನೌಕರರೀಗ ಆತಂಕದಲ್ಲಿಯೇ ಕಾರ್ಯನಿರ್ವಹಿಸುವಂತಾಗಿದೆ.  ಇನ್ನು, ಬೆಂಗಳೂರು  ನಗರದಲ್ಲಿ ಕೋವಿಡ್‌ ಪ್ರಕರಣಗಳು ದಿನೇ ದಿನೇ ಉಲ್ಬಣಗೊಳ್ಳುತ್ತಿವೆ. ನಗರದ ಕೆಲ ಪ್ರದೇಶಗಳನ್ನು ಕಂಟೇನ್‌ಮೆಂಟ್‌ ಮತ್ತು ಸೀಲ್‌ ಡೌನ್‌  ಮಾಡಲಾಗಿದೆ. ಇಂತಹ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸರ್ಕಾರಿ  ನೌಕರರು ಕಚೇರಿಗೆ ಹಾಜರಾಗುವುದರಿಂದ ಯಾವ ವಿನಾಯಿತಿಯನ್ನೂ ನೀಡಿಲ್ಲ.  ಒಂದು ವೇಳೆ  ಈ ಪ್ರದೇಶಗಳ  ನೌಕರರು ಕಚೇರಿಗೆ ಬಂದರೂ ಸಹ ಇತರೆ  ಸಹದ್ಯೋಗಿಗಳಗಳೊಂದಿಗೆ  ಪ್ರತ್ಯೇಕಿಸಿ ಕಾರ್ಯನಿರ್ವಹಿಸುವುದು ಕೂಡ  ಸಾಧ್ಯವಾಗದ ಮಾತು. 

‘ಈ ಕೋವಿಡ್‌ ರೋಗ ಲಕ್ಷಣಗಳು ತತ್‌ಕ್ಷಣ ಕಾಣಿಸಿಕೊಳ್ಳದಿರುವುದರಿಂದ ಸರ್ಕಾರಿ  ನೌಕರರು ದಿನದಿತ್ಯ ತಮ್ಮ ಕುಟುಂಬ ಸದಸ್ಯರೊಂದಿಗೆ ವಾಸಿಸುವುದರಿಂದ ರೋಗ ಹರಡುವಿಕೆಗೆ  ಆಸ್ಪದ ನೀಡಿದಂತಾಗುತ್ತದೆ,’ ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ನೌಕರರು ಆತಂಕ ವ್ಯಕ್ತಪಡಿಸುತ್ತಾರೆ. ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗುತ್ತಿರುವ ಕಾರಣ,  ಕೆಲ  ಸಾರ್ವಜನಿಕರು  ಪ್ರಭಾವ ಬಳಸಿ  ಪದೇ ಪದೇ ಕಚೇರಿಗಳಿಗೂ ಭೇಟಿ ನೀಡುತ್ತಿದ್ದಾರೆ. ಇದು  ಕೂಡ ರೋಗ ಹರಡುವಿಕೆಯನ್ನು ಹೆಚ್ಚು ಮಾಡಲು ಅನುವು  ಮಾಡಿಕೊಟ್ಟಂತಾಗುತ್ತದೆ. 

ಹಾಗೆಯೇ ವಿಪರ್ಯಾಸದ ಸಂಗತಿ ಎಂದರೆ ದೃಷ್ಟಿಹೀನ ಸಿಬ್ಬಂದಿ,  ವಿಕಲಚೇತನ ನೌಕರರಿಗೆ ಲಾಕ್‌ಡೌನ್‌ ಅವಧಿ  ಮುಕ್ತಾಯವಾಗುವವರೆಗೂ ಕಚೇರಿ ಹಾಜರಾತಿಯಿಂದ  ವಿನಾಯಿತಿ ನೀಡಿಲ್ಲ.  ಕೋವಿಡ್‌ 19ರಿಂದ ವಯಸ್ಸಾದವರನ್ನು ದೂರವಿಡುವ ಉದ್ದೇಶದಿಂದ  ಹೆಚ್ಚು ಜಾಗರೂಕರಾಗಿರಬೇಕು ಎಂದು ಪದೇ ಪದೇ ಹೇಳಲಾಗುತ್ತಿದೆ. ಆದರೆ ಸರ್ಕಾರಿ ನೌಕರರ ವಿಚಾರದಲ್ಲಿ  ಗ್ರೂಪ್‌ ಎ ಮತ್ತು  ಬಿ ವೃಂದದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಯಸ್ಸಾದ  ಅಧಿಕಾರಿಗಳೇ ಇದ್ದಾರೆ. ಕಚೇರಿಗಳಲ್ಲಿ ಅಗತ್ಯ ಸಂಖ್ಯೆಗೆ  ಮಿತಿಗೊಳಿಸದೇ  ಎಲ್ಲರೂ ಕಡ್ಡಾಯವಾಗಿ ಹಾಜರಾಗಬೇಕು  ಎಂದು ಸೂಚಿಸಿರುವುದೇ ಅಸಮಂಜಸ  ಎಂಬ ಅಭಿಪ್ರಾಯ ವ್ಯಕ್ತವಾಗಿದೆ. 

ಸರ್ಕಾರಿ ಕಚೇರಿಗಳಲ್ಲೀಗ ಸುರಕ್ಷತಾ ಮಾನದಂಡಗಳ ಪಾಲನೆಯಾಗುತ್ತಿಲ್ಲ. ಅತ್ಯಗತ್ಯ ಸೇವೆಯ ಇಲಾಖೆಯ ಕಚೇರಿಗಳಿಗೆ ಹಾಜರಾಗುವ ಸಿಬ್ಬಂದಿ ಸಂಚಾರಕ್ಕೆ ಒದಗಿಸುವ ವಾಹನಗಳ ಪ್ರವೇಶ ದ್ವಾರದಲ್ಲಿ ಹಾಗೂ ಕಚೇರಿಯ ಕಟ್ಟಡಗಳ ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸಿಂಗ್‌ ಟನಲ್‌, ಥರ್ಮಲ್‌ ಸ್ಕ್ಯಾನಿಂಗ್ ವ್ಯವಸ್ಥೆ ಸೂಕ್ತ ರೀತಿಯಲ್ಲಿ ಮಾಡಿಲ್ಲ.  ಕೇಂದ್ರ ಸರ್ಕಾರದ ನಿಯಮಾವಳಿಯಂತೆ ಲಾಕ್‌ಡೌನ್‌ ಸಂದರ್ಭದಲ್ಲಿ ಅತ್ಯಗತ್ಯ ಸೇವೆಗಳ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವಿಶೇಷ ವೈದ್ಯಕೀಯ ವಿಮೆ ಸೌಲಭ್ಯವನ್ನು ಒದಗಿಸುವ ಬಗ್ಗೆ ಈವರೆವಿಗೂ ಯಾವುದೇ ಸೂಕ್ತ ಆದೇಶ ಹೊರಡಿಸಿಲ್ಲ. 

ಈ ಕುರಿತು ನೌಕರರ ಹಲವು ಸಂಘಟನೆಗಳು ಈ ಬಗ್ಗೆ ಅನೇಕ ಬಾರಿ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದರೂ ಯಾವುದೇ ಕ್ರಮ ವಹಿಸಿಲ್ಲ ಎಂದು ನೌಕರ ಸಂಘಟನೆ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ ಕೆಲವು ಅಧಿಕಾರಿಗಳು ಅನಿವಾರ್ಯ ಕಾರಣಗಳಿಂದ ಕಚೇರಿಗೆ ಹಾಜರಾಗದ ನೌಕರರ ವಿರುದ್ಧ ಶಿಸ್ತುಕ್ರಮಗಳಿಗೆ ಮುಂದಾಗಿರುವ ನಿದರ್ಶನಗಳೂ ಇವೆ.  

SUPPORT THE FILE

Latest News

Related Posts