ಕೇಬಲ್ ಅಳವಡಿಸಲು ಬೇಕಾಬಿಟ್ಟಿ ದರ; ಕಂಪನಿಗಳಿಗೆ 7.32 ಕೋಟಿ ಲಾಭ ಮಾಡಿಕೊಟ್ಟ ಲೋಕೋಪಯೋಗಿ ಇಲಾಖೆ

cag report karnataka tabled in assembly

ಬೆಂಗಳೂರು: ಲೋಕೋಪಯೋಗಿ ಇಲಾಖೆಯು  ಆಪ್ಟಿಕಲ್ ಫೈಬ‌ರ್ ಕೇಬಲ್ ನೆಟ್‌ವರ್ಕ್‌ಗಳನ್ನು ಹಾಕಲು  ವಿವಿಧ ಸೇವಾ ಪೂರೈಕೆದಾರರಿಗೆ  ಅನುಮತಿ ನೀಡುವಾಗ, ರಾಜ್ಯ ಸರ್ಕಾರವು  ಸೂಚಿಸಿದ ದರದ ಬದಲಾಗಿ, ತನ್ನದೇ ದರವನ್ನು ನಿಗದಿಪಡಿಸಿ, ಸೇವಾ ಪೂರೈಕೆದಾರರಿಗೆ, ಕೇವಲ ಮೂರು ತಿಂಗಳ ಅವಧಿಯಲ್ಲಿ 7.32 ಕೋಟಿ ರುಪಾಯಿ ಲಾಭ ಮಾಡಿಕೊಟ್ಟಿದೆ.

 

ಲೋಕೋಪಯೋಗಿ ಇಲಾಖೆಯ ನಾಲ್ಕು ವಿಭಾಗಗಳಲ್ಲಿ ಈ ರೀತಿ ಬೇಕಾಬಿಟ್ಟಿಯಾಗಿ ದರ ನಿಗದಿಪಡಿಸಲಾಗಿದ್ದು, ರಸ್ತೆ ಕಡಿತ ಮತ್ತು ಮರುಸ್ಥಾಪನೆಗೆ  ರಾಜ್ಯ ಸರ್ಕಾರವು ನಿಗದಿಪಡಿಸಿದ ದರವನ್ನು ಅನ್ವಯಿಸದೇ ಇರುವುದನ್ನು  ಮಹಾಲೇಖಪಾಲರು (ಸಿಎಜಿ) ಲೆಕ್ಕ ಪರಿಶೋಧನೆ ಸಂದರ್ಭದಲ್ಲಿ ಪತ್ತೆ ಹಚ್ಚಿದ್ದಾರೆ.  ಈ ಸಿಎಜಿ ವರದಿಯನ್ನು ಆಗಸ್ಟ್‌ 19 ರಂದು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

 

cag report karnataka tabled in assembly

 

ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳು (ESCOM ಗಳು) ಮತ್ತು ವಿವಿಧ ಇಂಟರ್ನೆಟ್ ನೆಟ್‌ವರ್ಕ್ ಸೇವಾ ಪೂರೈಕೆದಾರರು (NSPs) ನೇರವಾಗಿ ಇದರಿಂದ ಲಾಭ ಮಾಡಿಕೊಂಡಿವೆ ಎಂದು ವರದಿಯಲ್ಲಿ ಬೊಟ್ಟು ಮಾಡಲಾಗಿದೆ. ರಾಜ್ಯದಲ್ಲಿ  ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಕೂಡಲೇ ಈ ಲೋಪ ನಡೆದಿದ್ದು, ಸತೀಶ್ ಜಾರಕಿಹೊಳಿ ಲೋಕೋಪಯೋಗಿ ಸಚಿವರಾಗಿದ್ದಾರೆ.

 

ವಿದ್ಯುತ್ ಸರಬರಾಜು ಕಂಪನಿಗಳು ವಿತರಣಾ ಮಾರ್ಗಗಳನ್ನು ಅಳವಡಿಸಲು ಮತ್ತು ವಿವಿಧ ಇಂಟರ್ನೆಟ್ ನೆಟ್‌ವರ್ಕ್ ಸೇವಾ ಪೂರೈಕೆದಾರರು ಆಪ್ಟಿಕ್ ಫೈಬ‌ರ್ ಕೇಬಲ್‌ಗಳನ್ನು ರಸ್ತೆಗಳ ಪಕ್ಕದಲ್ಲಿ ರೈಟ್ ಆಫ್ ವೇ (RoW) ಒಳಗೆ ಅಳವಡಿಸುವ ಉದ್ದೇಶಕ್ಕಾಗಿ ಆಯಾ ರಸ್ತೆ ನಿರ್ವಹಣಾ ಪ್ರಾಧಿಕಾರಗಳಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ರಸ್ತೆ ಕೊರೆಯುವ ಪ್ರಕ್ರಿಯೆಯಲ್ಲಿ ಸಂಭವಿಸುವ ಯಾವುದೇ ಹಾನಿಯನ್ನು ಸರಿದೂಗಿಸಲು ರಸ್ತೆ ಕೊರೆಯುವುದು ಮತ್ತು ಮರುಸ್ಥಾಪನೆ ಶುಲ್ಕವನ್ನು ಪಾವತಿಸಿಕೊಂಡು, ಬಳಕೆದಾರರ ಏಜೆನ್ಸಿಗಳಿಗೆ ಲೋಕೋಪಯೋಗಿ ವಿಭಾಗವು ಅನುಮತಿ ನೀಡುತ್ತದೆ. ಈ ಅನುಮತಿ ನೀಡುವಾಗ ಲೋಪವೆಸಗಲಾಗಿದೆ ಎಂದು ವರದಿಯು ಹೇಳಿದೆ.

 

ಕರ್ನಾಟಕ ಸರ್ಕಾರವು, ವಿಶ್ವಬ್ಯಾಂಕ್‌ನ ‘ಡೂಯಿಂಗ್ ಬ್ಯುಸಿನೆಸ್ʼ ವರದಿ ಅನುಸರಿಸಿ, 2020ರ ಜೂನ್‌ನಲ್ಲಿ ರಾಜ್ಯ ಹೆದ್ದಾರಿಗಳು ಮತ್ತು ಪ್ರಮುಖ ಜಿಲ್ಲಾ ರಸ್ತೆಗಳನ್ನು ಕೊರೆಯುವಾಗ ಪಡೆಯಬೇಕಾದ ದರವನ್ನು ನಿಗದಿಪಡಿಸಿ, ಅದೇಶ ಹೊರಡಿಸಿತ್ತು.

 

ಇದಲ್ಲದೆ, ಲೋಕೋಪಯೋಗಿ ಇಲಾಖೆ, ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಎಲ್ಲಾ ಮುಖ್ಯ ಇಂಜಿನಿಯರ್‌ಗಳಿಗೆ 2021ರ ಏಪ್ರಿಲ್ 19 ರಂದು ಆದೇಶ ಹೊರಡಿಸಿತ್ತು.  ತಾನು ನಿಗದಿಪಡಿಸಿದ ದರಗಳನ್ನು ರಾಜ್ಯದಲ್ಲಿ ಕೇಬಲ್‌ಗಳನ್ನು ಹಾಕುವುದು ಮತ್ತು ಇತರ ಸಂಬಂಧಿತ ಕೆಲಸಗಳು ಸೇರಿದಂತೆ ಎಲ್ಲಾ ರಸ್ತೆ ಕತ್ತರಿಸುವ ಚಟುವಟಿಕೆಗಳಿಗೆ ಅನ್ವಯಿಸಬೇಕು ಎಂದು ನಿರ್ದೇಶಿಸಿತ್ತು  ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

cag report karnataka tabled in assembly

 

2023 ಜೂನ್‌ ನಿಂದ 2023ರ ಆಗಸ್ಟ್‌ ಕೇವಲ ಮೂರು ತಿಂಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ ನಾಲ್ಕು ವಿಭಾಗಗಳಲ್ಲಿ, 153.73 ಕಿಮೀ ಉದ್ದಕ್ಕೆ ರೋಡ್‌ ಕಟ್ಟಿಂಗ್‌ ಮಾಡಿದ 22 ಪ್ರಕರಣಗಳನ್ನು ಪರಿಶೀಲಿಸಿದಾಗ, ಸರ್ಕಾರವು ನಿಗದಿಪಡಿಸಿದ ದರಗಳನ್ನು ಅಳವಡಿಸಿಕೊಳ್ಳುವ ಬದಲು ತಮ್ಮದೇ ಆದ ದರಗಳನ್ನು ಅಳವಡಿಸಿಕೊಂಡಿರುವುದು ಪತ್ತೆಯಾಗಿದೆ. ಇದರಿಂದಾಗಿ ಈ ನಾಲ್ಕು ವಿಭಾಗಗಳಲ್ಲಿ 7.69 ಕೋಟಿ ರು. ಸಂಗ್ರಹವಾಗಬೇಕಿದ್ದ ರಸ್ತೆ ಕೊರೆಯುವ ಶುಲ್ಕಕ್ಕೆ ಬದಲಾಗಿ 0.37 ಕೋಟಿ ರು ಮಾತ್ರ ಸಂಗ್ರಹಿಸಲಾಗಿತ್ತು ಎಂದು  ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಹೇಳಲಾಗಿದೆ.

 

ಲೋಕೋಪಯೋಗಿ ಇಲಾಖೆಯ ಮೈಸೂರು ವಿಭಾಗದಲ್ಲಿ 2.40 ಕೋಟಿ ರು., ದಾವಣಗೆರೆ ವಿಭಾಗದಲ್ಲಿ 2.37 ಕೋಟಿ ರು., ಮಡಿಕೇರಿ ವಿಭಾಗದಲ್ಲಿ 1.68 ಕೋಟಿ ರು. ಮತ್ತು ಶಿವಮೊಗ್ಗ ವಿಭಾಗದಲ್ಲಿ 84.51 ಲಕ್ಷ ರು. ಕಡಿಮೆ ಹಣವನ್ನು ವಸೂಲಿ ಮಾಡಲಾಗಿದೆ ಎಂದು ವರದಿಯಲ್ಲಿ ಲೆಕ್ಕಾಚಾರ ನೀಡಲಾಗಿದೆ.

 

cag report karnataka tabled in assembly

 

ಕೇವಲ ಮೂರು ತಿಂಗಳ ಅವಧಿಯಲ್ಲಿಯೇ ಇಷ್ಟೊಂದು ನಷ್ಟವಾಗಿರುವಾಗ, ಲೋಕೋಪಯೋಗಿ ಇಲಾಖೆಯು ಅಧಿಕಾರಿಗಳು ಮಾಡಿರುವ ಈ ಲೋಪದಿಂದ ಒಟ್ಟು ಎಷ್ಟು ಕೋಟಿಗಳು ಸರ್ಕಾರಕ್ಕೆ ನಷ್ಟವಾಗಿರಬಹುದು ಎಂಬ ಕುರಿತು ಈಗ ಚರ್ಚೆ  ನಡೆಯುತ್ತಿದೆ.

 

ನೆಟ್‌ವರ್ಕ್ ಸೇವಾ ಪೂರೈಕೆದಾರರಿಗೆ 7.32 ಕೋಟಿ ರು. ಅನಗತ್ಯ ಲಾಭವನ್ನು ಮಾಡಿಕೊಟ್ಟಿರುವ ಈ ಪ್ರಕರಣದ ಕುರಿತು ಸಿಎಜಿಯು ಇಲಾಖೆಯ ಗಮನ ಸೆಳೆದಾಗ, ಮೈಸೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಸಂಬಂಧಪಟ್ಟ ಬಳಕೆದಾರರ ಏಜೆನ್ಸಿಗಳಿಂದ ಮೊತ್ತವನ್ನು ವಸೂಲಿ ಮಾಡಲು ಒಪ್ಪಿಕೊಂಡಿದ್ದರು ಎಂದು ವರದಿಯಲ್ಲಿ ದಾಖಲಿಸಲಾಗಿದೆ.

 

ಈ ಪ್ರಕರಣದ ಕುರಿತು ಸಿಎಜಿ 2023 ರ ಅಕ್ಟೋಬರ್ ನಲ್ಲಿ ಸರ್ಕಾರಕ್ಕೆ ವರದಿ ಮಾಡಿತ್ತು. ಸರ್ಕಾರವು ಡಿಸೆಂಬ‌ರ್‌ನಲ್ಲಿ ಇದಕ್ಕೆ ಉತ್ತರಿಸಿದ ಸರ್ಕಾರ, 2020ರ ಜೂನ್‌ನಲ್ಲಿ ತಾನು ಹೊರಡಿಸಿದ ಆದೇಶ, ವಿದ್ಯುತ್‌
ಕೇಬಲ್‌ಗಳು ಮತ್ತು ಗ್ಯಾಸ್ ಪೈಪ್‌ಗಳನ್ನು ಹಾಕಲು ಮಾತ್ರ ಅನ್ವಯಿಸುತ್ತದೆ. ನೆಟ್‌ವರ್ಕ್ ಸೇವಾ ಪೂರೈಕೆದಾರರಿಂದ ರಸ್ತೆ ಕಡಿತ ಮತ್ತು ರಸ್ತೆಗಳ ಪಕ್ಕದಲ್ಲಿ ರೈಟ್ ಆಫ್ ವೇ ಬಳಕೆಗಾಗಿ ಮಾರ್ಗಸೂಚಿಗಳು ಮತ್ತು ದರ ಪಟ್ಟಿಯನ್ನು ಇನ್ನೂ ತಾನು  ನಿಗದಿಪಡಿಸಿಲ್ಲ ಎಂದು ವಿವರಣೆ ನೀಡಿತ್ತು.

 

ಆಪ್ಟಿಕಲ್ ಫೈಬ‌ರ್ ಕೇಬಲ್ ನೆಟ್‌ವರ್ಕ್‌ಗಳನ್ನು ಹಾಕಲು ಮಾರ್ಗಸೂಚಿಯನ್ನು ಮತ್ತು ದರಪಟ್ಟಿಯನ್ನು ರೂಪಿಸಲಾಗುತ್ತಿದ್ದು, ಸೂಕ್ತ ಸಮಯದಲ್ಲಿ ನೀಡಲಾಗುವುದು ಎಂದು ಸರ್ಕಾರವು ಸಿಎಜಿಗೆ ತಿಳಿಸಿತ್ತು. ಇದಕ್ಕೆ ಸಿಎಜಿಯು ವರದಿಯಲ್ಲಿ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಈಗಾಗಲೇ ದರ ಪಟ್ಟಿಯನ್ನು ಸಿದ್ಧಪಡಿಸಿ, ಆದೇಶ ನೀಡಿರುವಾಗ, ಅದರ ಪ್ರಕಾರವೇ ಶುಲ್ಕ ವಸೂಲಿ ಮಾಡಬೇಕು. ಈ ಕುರಿತ ಸರ್ಕಾರದ ಉತ್ತರವು ಸಮರ್ಥನೀಯವಾಗಿಲ್ಲ ಎಂದಿದೆ. ಸರ್ಕಾರದ ಈ ಹಿಂದಿನ ನಿರ್ದೇಶನಗಳ ಪ್ರಕಾರವೇ ಶುಲ್ಕವನ್ನು ಸಂಗ್ರಹಿಸುವ ಅಗತ್ಯವಿದೆ ಎಂದು ಸಿಎಜಿಯ ವರದಿಯಲ್ಲಿ ತಿಳಿಸಿದೆ.

 

ಪಿಡಬ್ಲ್ಯುಡಿಯಲ್ಲಿ ಜಿಂಕೆ ವೇಗದ ಕೆಲಸ; ಬಿಜೆಪಿ ಅವಧಿಯಲ್ಲಿ ನಿಯಮ ಬಾಹಿರವಾಗಿ 21.23 ಕೋಟಿ ಪಾವತಿ

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯ ಬಳ್ಳಾರಿ ಮತ್ತು ಕೊಪ್ಪಳ ವಿಭಾಗದಲ್ಲಿ ಕೇವಲ 21 ದಿನಗಳ ಅಲ್ಪ ಅವಧಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಿದ್ದ ಗುತ್ತಿಗೆದಾರಿಗೆ ನಿಯಮಬಾಹಿರವಾಗಿ  21.23 ಕೋಟಿ ಹಣವನ್ನೂ ಪಾವತಿಸಿರುವ ಪ್ರಕರಣವನ್ನು ಸಿಎಜಿ  ಪತ್ತೆ ಹಚ್ಚಿತ್ತು. ಈ  ಕುರಿತು ʻದಿ ಫೈಲ್‌ʼ ಈಗಾಗಲೇ ವಿವರವಾದ ವರದಿ ಪ್ರಕಟಿಸಿದೆ.

SUPPORT THE FILE

Latest News

Related Posts