ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆಪಾದನೆ ಕೇಳಿ ಬಂದಿದೆ.
2021-22 ಮತ್ತು 2022-23ನೇ ಸಾಲಿನ ಒಟ್ಟು 19 ತಿಂಗಳ ಅವಧಿಯಲ್ಲಿ 26.99 ಲಕ್ಷ ರು.ಗಳಿಗೂ ಹೆಚ್ಚು ಹಣವನ್ನು ಗ್ರಾಮ ಪಂಚಾಯಿತಿ ಆಡಳಿತ ದುರುಪಯೋಗಪಡಿಸಿಕೊಂಡಿದೆ ಎಂದು ಗಣೇಶ್ಕ ಸಿಂಗ್ ಎಂಬುವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಲೋಕಾಯುಕ್ತವು ಆಗಸ್ಟ್ 11 ರಂದು ದೂರನ್ನು (COMPT/LOK/BD/4749/2025) ದಾಖಲಿಸಿಕೊಂಡಿದೆ. ಇನ್ನಷ್ಟೇ ತನಿಖೆ ನಡೆಸಬೇಕಿದೆ.
ಈ ದೂರಿನ ಪ್ರತಿಯು ʻದಿ ಫೈಲ್ʼಗೆ ಲಭ್ಯವಾಗಿದೆ.
ಗ್ರಾಮ ಪಂಚಾಯಿತಿಯ ಹಣವನ್ನು, ಸಿಬ್ಬಂದಿ ತಮ್ಮ ಹೆಸರಿನಲ್ಲಿ, ಹಾಲಿ ಸದಸ್ಯರ ಹೆಸರಿನಲ್ಲಿ ಹಾಗೂ ಸದಸ್ಯರ ಕುಟುಂಬಸ್ಥರ ಹೆಸರಿನಲ್ಲಿ ಚೆಕ್ ಬರೆದು ನಗದೀಕರಣಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವುದು ದೂರಿನಿಂದ ತಿಳಿದು ಬಂದಿದೆ.
ಇದೇ ರೀತಿಯಾಗಿ, ಗ್ರಾಮ ಪಂಚಾಯಿತಿಗಳಲ್ಲಿ ಅವ್ಯವಹಾರ ನಡೆದ ಅನೇಕ ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕ್ಕೆಯಾಗಿವೆ. ಮುಖ್ಯವಾಗಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ಮೇಲೆ ಹೆಚ್ಚಾಗಿ ಆರೋಪ ಕೇಳಿಬಂದಿವೆ. ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯೂ ಸಹ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಕೆಯಾಗಿವೆ.
ಆದರೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇತ್ತ ಗಮನ ನೀಡಿಲ್ಲ. ಪಂಚಾಯತ್‌ಗಳಲ್ಲಿನ ಅವ್ಯವಹಾರ ತಡೆಯುವ ನಿಟ್ಟಿನಲ್ಲಿ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಯಾವುದೇ ಬಿಗಿಯಾದ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿಯ ಪಿಡಿಒ ಡಿ.ಆರ್. ಮಂಜುನಾಥ್ ವಿರುದ್ಧ ಮುಖ್ಯವಾಗಿ ಆರೋಪ ಕೇಳಿ ಬಂದಿದೆ. ಇವರ ಜೊತೆಗೆ ಹಾಲಿ ಹಾಗೂ ಸದಸ್ಯರುಗಳಾದ ಮೊಹಿದ್ದೀನ್, ಕೆ. ಮಾರೇಗೌಡ, ಲಕ್ಷ್ಮೀದೇವಮ್ಮ, ರಾಜಮ್ಮ, ಸುಮ, ಕಾರ್ಯದರ್ಶಿ ಹನುಮಂತರಾಯಪ್ಪ , ಜಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶ್ರೀನಿವಾಸ್‌ಮೂರ್ತಿ ಸಿ.ಪಿ., ಕರವಸೂಲಿಗಾರ ಶಶಿಕುಮಾರ್, ಕಂಪ್ಯೂಟರ್ ಆಪರೇಟರ್ ಹೇಮಂತ್ ಕುಮಾರ್ ಆರ್. ವಾಟರ್ ಮ್ಯಾನ್ ಚಂದ್ರಶೇಖರ್ ಎಂ., ಕಚೇರಿ ಸಹಾಯಕ ಮಹೇಂದ್ರ ಜಿ., ಪಂಪ್ ಆಪರೇಟರ್ ಜಿ.ನಾಗರಾಜು, ವಾಟರ್‌ಮ್ಯಾನ್ ನಾಗರಾಜು ಎಂ. ಹಾಗೂ ಸ್ವೀಪರ್ ದರ್ಶನ್ ಎಸ್. ಮತ್ತು ಇತರರು ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.
ಗ್ರಾಮ ಪಂಚಾಯಿತಿಯು ನಿಧಿ-1ರ ಬ್ಯಾಂಕ್ ಖಾತೆಯನ್ನು ನೆಲಮಂಗಲದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹೊಂದಿದ್ದು (ಅಕೌಂಟ್ ನಂಬರ್: 04902250009710) ಈ ಖಾತೆಯಿಂದ ಒಟ್ಟು, 26,99,901 ರು.ಗಳನ್ನು ಹೀಗೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಸಿಬ್ಬಂದಿ ಮತ್ತು ಸದಸ್ಯರು ತಮ್ಮ ಹೆಸರಿನಲ್ಲಿ ಮಾತ್ರವಲ್ಲದೆ, ಹಣ್ಣು, ಸಿಹಿತಿಂಡಿ ಹಾಗೂ ಬಟ್ಟೆಯಂಗಡಿ ವ್ಯಾಪಾರಿಗಳಿಗೂ ಚೆಕ್ ಮೂಲಕ ಹಣ ಪಾವತಿಸಲಾಗಿದೆ.
2021ರ ಅಕ್ಟೋಬರ್‌ನಿಂದ 2023ರ ಫೆಬ್ರವರಿಯ ನಡುವೆ ಕಂಪ್ಯೂಟರ್ ಆಪರೇಟರ್ (ಕಚೇರಿ ಸಹಾಯಕ) ಹೇಮಂತ್‌ಕುಮಾರ್ ಆರ್. ಎಂಬುವರ ಹೆಸರಿಗೆ ಚೆಕ್ ಮೂಲಕ 2,70,673 ರು. ಪಾವತಿಸಲಾಗಿದೆ ಎಂದು ಈ ದೂರಿನಲ್ಲಿ ತಿಳಿಸಲಾಗಿದೆ. ಹೇಮಂತ್‌ಕುಮಾರ್ ಆರ್. ಅವರಿಗೆ ನೀಡಲಾಗಿರುವ ಚೆಕ್ ನಂಬರ್‌ಗಳನ್ನೂ ಈ ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಆಗಿರುವ ಎಂ. ಚಂದ್ರಶೇಖರ್ ಅವರಿಗೆ 2021ರ ಸೆಪ್ಟೆಂಬರ್ 1 ರಿಂದ 2022 ಜುಲೈ 26 ರವರೆಗೆ 3,00,370 ರು.ಗಳನ್ನು 16 ಚೆಕ್ ಮೂಲಕ ಹಣ ಪಾವತಿಸಲಾಗಿದೆ.
ಇನ್ನು ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್/ ಪಂಪ್ ಆಪರೇಟರ್ ಆಗಿರುವ ನಾಗರಾಜು ಎಂ. ಅವರಿಗೆ 40 ಚೆಕ್‌ಗಳ ಮೂಲಕ 2021ರ ಸೆಪ್ಟೆಂಬರ್ 1ರಿಂದ 2022ರ ಡಿಸೆಂಬರ್ 13ರ ವರೆಗೆ ಒಟ್ಟು 5, 34,114 ರು. ಪಾವತಿಸಲಾಗಿದೆ. ಕೆಲ ಚೆಕ್‌ಗಳಲ್ಲಿ ನಾಗರಾಜು ಎಂ. ಎಂದು ಬರೆದಿದ್ದರೆ, ಇನ್ನು ಕೆಲವು ಚೆಕ್‌ಗಳಿಗೆ ಕೇವಲ ನಾಗರಾಜು ಎಂದಷ್ಟೇ ಬರೆಯಲಾಗಿದೆ ಎಂದು ದೂರಿನಿಂದ ತಿಳಿದು ಬಂದಿದೆ.
ಇದೇ ರೀತಿಯಾಗಿ ಗ್ರಾಮ ಪಂಚಾಯಿತಿಯ ಸ್ವೀಪರ್ ದರ್ಶನ್ ಎಸ್. ಮತ್ತು ಕಚೇರಿ ಸಹಾಯಕ ಮಹೇಂದ್ರ ಜಿ. ಅವರಿಗೂ ಚೆಕ್‌ಗಳ ಮೂಲಕ ಸಾವಿರಾರು ರು. ಪಾವತಿಸಲಾಗಿದೆ. ಗ್ರಾಮ ಪಂಚಾಯಿತಿಯ ಸಿಬ್ಬಂದಿ ಹೆಸರಿನಲ್ಲಿಯೇ ಒಟ್ಟು 16.59 ಲಕ್ಷ ಚೆಕ್‌ಗಳ ಮೂಲಕ ಪಾವತಿಯಾಗಿದೆ ಎಂದು ಈ ದೂರಿನಲ್ಲಿ ಹೇಳಲಾಗಿದೆ.
ಹಾಲಿ ಗ್ರಾಮ ಪಂಚಾಯಿತಿಯ ಸದಸ್ಯರಾದ ಲಕ್ಷ್ಮೀದೇವಮ್ಮ ಅವರ ಪತಿ ಕೃಷ್ಣಪ್ಟ ಎಂಬುವರಿಗೆ ಏಳು ಚೆಕ್‌ಗಳ ಮೂಲಕ 1.10 ಲಕ್ಷ ರು. ಪಾವತಿಸಲಾಗಿದೆ. ಇನ್ನೋರ್ವ ಸದಸ್ಯೆ ರಾಜಮ್ಮ ಅವರ ಮಗ ಅನಿಲ್ ಅವರಿಗೆ ಆರು ಚೆಕ್‌ಗಳ ಮೂಲಕ 85 ಸಾವಿರ ರು. ಪಾವತಿಸಲಾಗಿದೆ. ಸದಸ್ಯ ಇಪಾಯತ್ ಉಲ್ಲ ಅವರ ತಾಯಿ ಶಕೀಲಾ ಹೆಸರಿನ ಚೆಕ್ ಮೂಲಕ 24,000 ಪಾವತಿಸಲಾಗಿದೆ.
ಸದಸ್ಯೆ ಸುಮ ಅವರ ಪತಿ ರಾಜಣ್ಣ ಅವರ ಹೆಸರಿನ ಎಂಟು ಚೆಕ್ ಮೂಲಕ 2.59 ಲಕ್ಷ ರು. ಪಾವತಿಸಲಾಗಿದೆ. ಒಟ್ಟಾರೆ ಗ್ರಾಮ ಪಂಚಾಯಿತಿ ಸದಸ್ಯರ ಕುಟುಂಬದವರ ಹೆಸರಿನಲ್ಲಿ 4.78 ಲಕ್ಷ ರು.ಗಳನ್ನು ಚೆಕ್‌ಗಳ ಮೂಲಕ ಪಾವತಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಗ್ರಾಮ ಪಂಚಾಯಿತಿಯ ಇದೇ ಅಕೌಂಟ್‌ನಿಂದ 2021-22ನೇ ಸಾಲಿನಲ್ಲಿ ಟೆಕ್ಸ್ ಟೈಲ್ ವ್ಯಾಪಾರಿ ಭದ್ರಯ್ಯ ಅವರಿಗೆ ಏಳು ಚೆಕ್‌ಗಳ ಮೂಲಕ ಒಟ್ಟು 3.57 ಲಕ್ಷ ರು. ಪಾವತಿಯಾಗಿದೆ.
ಹಣ್ಣಿನ ಅಂಗಡಿ ವ್ಯಾಪಾರಿಗಳ ಹೆಸರಿನಲ್ಲಿ 2022-23ನೇ ಸಾಲಿನಲ್ಲಿ ನಾಲ್ಕು ಚೆಕ್‌ಗಳ ಮೂಲಕ 87,140 ರು. ಪಾವತಿಯಾಗಿದೆ. ಕಾಂತಿ ಸ್ವೀಟ್ಸ್ ವ್ಯಾಪಾರಿಗಳ ಹೆಸರಿಗೆ 2022-23ನೇ ಸಾಲಿನಲ್ಲಿ ಎರಡು ಚೆಕ್‌ಗಳ ಮೂಲಕ ಒಟ್ಟು 1.17 ಲಕ್ಷ ರು. ಪಾವತಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿಯ ವ್ಯವಹಾರಗಳಲ್ಲಿ ಹಣಕಾಸಿನ ವೈಯುಕ್ತಿಕ ಹಿತಾಸಕ್ತಿಯನ್ನು ಹೊಂದಿ ಆರ್ಥಿಕ ಅಪರಾಧ ಕಾರ್ಯಗಳನ್ನು ಮಾಡಿ ಅಕ್ರಮ ಎಸಗಲಾಗಿದೆ. ಹೀಗಾಗಿ ಗ್ರಾಮ ಪಂಚಾಯಿತಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಅಮಾನತ್ತಿನಲ್ಲಿಟ್ಟು ಸೂಕ್ತ ತನಿಖೆ ನಡೆಸಿ, ತಪಿಸ್ಥರ ವಿರುದ್ಧ ಕಾನೂನು ರೀತ್ಯಾ ಕಠಿಣ ಶಿಕ್ಷೆ ನೀಡಬೇಕೆಂದು ದೂರಿನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ಈ ಗ್ರಾಮ ಪಂಚಾಯಿತಿಯಲ್ಲಿ ಇದೇ ರೀತಿ ಜನಪ್ರತಿನಿಧಿಗಳು, ಪ್ರಭಾವಿ ಪ್ರಭಾವಿ ವ್ಯಕ್ತಿಗಳು, ಅಧಿಕಾರಿಗಳೊಂದಿಗೆ, ಸಿಬ್ಬಂದಿಗಳೊಂದಿಗೆ, ಗುತ್ತಿಗೆದಾರರೊಂದಿಗೆ, ಶಾಮಿಲಾಗಿ ಇನ್ನೂ ಲಕ್ಷಾಂತರ ರೂಪಾಯಿ ಹಣ ದುರುಪಯೋಗ ಪಡಿಸಿಕೊಂಡು ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿ ಅಕ್ರಮ ಎಸಗಿರುತ್ತಾರೆ ಎಂದು ದೂರಿನಲ್ಲಿ ಶಂಕೆ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.
2021 ರಿಂದ 2025 ಇಲ್ಲಿಯವರೆಗೆ ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿಯಿಂದ ಅನುಷ್ಠಾನಗೊಳಿಸಿ, ಕಣೇಗೌಡನಹಳ್ಳಿ ಗ್ರಾಮ ಪಂಚಾಯಿತಿಯ ಎಲ್ಲಾ ವಾರ್ಡ್‌ಗಳ ವ್ಯಾಪ್ತಿಯಲ್ಲಿ ನಿರ್ವಹಿಸಲಾಗಿರುವ ಎಲ್ಲಾ ಯೋಜನೆಗಳ ಕುರಿತಾದ ಕ್ರಮಗಳನ್ನು, ಕಾಮಗಾರಿಗಳನ್ನು, ಡಿ.ಸಿ.ಬಿ. ವಹಿಗಳನ್ನು ಪರಿಶೀಲಿಸಿ, ಪರಿವೀಕ್ಷಣೆ ನಡೆಸಬೇಕು ಎಂದು ದೂರಿನಲ್ಲಿ ಕೋರಿರುವುದು ತಿಳಿದು ಬಂದಿದೆ.
‘ನಿಧಿ 1ರ ಕೆನರಾ ಬ್ಯಾಂಕ್ (Account No. 04902250009710) ಖಾತೆಯಲ್ಲಿನ ಹಣಕಾಸು ವಹಿವಾಟವು ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲಾ ಯೋಜನೆಗಳ ವಿವಿಧ ಬ್ಯಾಂಕ್ ಖಾತೆಯಿಂದ ಹಣ ಬಿಡುಗಡೆ ಮಾಡಿ ವಹಿವಾಟು ನಡೆದಿರುವ ಬಗ್ಗೆ ಮತ್ತು ಗ್ರಾಮ ಪಂಚಾಯಿತಿಯಿಂದ ಚೆಕ್ ನೀಡಿಕೆ ರಿಜಿಸ್ಟರ್ ಬಗ್ಗೆ ಸಮಗ್ರ ತನಿಖೆ ನಡೆಸಬೇಕು,’ ಎಂದು ಕೋರಿರುವುದು ದೂರಿನಿಂದ ಗೊತ್ತಾಗಿದೆ.