15.59 ಲಕ್ಷ ಫಲಾನುಭವಿಗಳ 12.68 ಲಕ್ಷ ಪಡಿತರ ಚೀಟಿಗಳ ಮೇಲೆ ತೂಗುಗತ್ತಿ

ಪಡಿತರ ಚೀಟಿ

ಬೆಂಗಳೂರು: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿಗಳಲ್ಲಿ12.68 ಲಕ್ಷ ಪಡಿತರ ಚೀಟಿಗಳನ್ನು ಶಂಕಾಸ್ಪದ (suspect RC) ಪಡಿತರ ಚೀಟಿಗಳು ಎಂದು ಗುರುತಿಸಲಾಗಿದೆ. ಈ ಪಡಿತರ ಚೀಟಿಗಳ ಒಟ್ಟು ಫಲಾನುಭವಿಗಳ ಸಂಖ್ಯೆ 15.59 ಲಕ್ಷ ದಾಟಿದೆ.

 

ಈ ಪಡಿತರ ಚೀಟಿಗಳನ್ನು ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಮತ್ತು ಆಹಾರ ನಿರೀಕ್ಷಕರ ಹಂತದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

 

ವಿಧಾನ ಸಭೆಯಲ್ಲಿ ಶಾಸಕ ಎಂ ನಾಗರಾಜು ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಶಂಕಾಸ್ಪದ ಪಡಿತರ ಚೀಟಿಗಳಲ್ಲಿ 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರ ಪಡಿತರ ಚೀಟಿಗಳ ಸಂಖ್ಯೆ 5,13,613 ಎಂದು ತಿಳಿಸಿದ್ದಾರೆ.

 

12,68,097 ಶಂಕಾಸ್ಪದ ಪಡಿತರ ಚೀಟಿಗಳಲ್ಲಿ ಇ-ಕೆವೈಸಿ ಮಾಡಿಸದೇ ಇರುವ ಪಡಿತರ ಚೀಟಿಗಳ ಸಂಖ್ಯೆ 6,16,196 ಎಂದು ತಿಳಿಸಲಾಗಿದೆ. ಈ ಪಡಿತರ ಚೀಟಿಗಳು ರದ್ದಾದಲ್ಲಿ 7,83,706 ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಇನ್ನು ಕಂಪನಿಗಳಲ್ಲಿ ಡೈರೆಕ್ಟರ್‌ ಆಗಿರುವವರ 19,690 ಪಡಿತರ ಚೀಟಿಗಳನ್ನು ಗುರುತಿಸಲಾಗಿದ್ದು, ಇವುಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

 

 

ration card karnataka status

 

ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ 2,040 ಮಂದಿ ನೂರು ವರ್ಷ ಮೀರಿದವರಾಗಿ, ಇವರ ಪಡಿತರ ಚೀಟಿಯನ್ನೂ ಪರಿಶೀಲಿಸಲು ಸೂಚಿಸಲಾಗಿದೆ. 1,446 ಮೃತ ಸದಸ್ಯರ ಹೆಸರಿನಲ್ಲಿಯೂ ಪಡಿತರ ಚೀಟಿಗಳಿದ್ದು ಇದನ್ನೂ ಪರಿಶೀಲಿಸಲು ತೀರ್ಮಾನಿಸಲಾಗಿದೆ ಎಂಬುದು ಸಚಿವರು ನೀಡಿದ ಈ ಉತ್ತರದಿಂದ ಗೊತ್ತಾಗಿದೆ.

 

ಪಿಎಂ ಕಿಸಾನ್‌ ಲ್ಯಾಂಡ್‌ ಹೋಲ್ಡಿಂಗ್‌ (7.5 ಎಕರೆ) ಹೊಂದಿರುವ 33,456 ಮಂದಿ ಪಡಿತರ ಚೀಟಿ ಹೊಂದಿದ್ದು, ಇದನ್ನೂ ಶಂಕಾಸ್ಪದ ಪಡಿತರ ಚೀಟಿ ಎಂದು ತೀರ್ಮಾನಿಸಲಾಗಿದೆ. ಸ್ವಂತ ಉಪಯೋಗಕ್ಕಾಗಿ ಸ್ವಂತ ವಾಹನ ಹೊಂದಿರುವ 119 ಮಂದಿಯ ಪಡಿತರ ಚೀಟಿಯನ್ನೂ ರದ್ದುಪಡಿಸುವ ಕುರಿತು ಪರಿಶೀಲನೆ ನಡೆದಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

 

19,893 ಪಡಿತರ ಚೀಟಿಗಳ ಒಟ್ಟು 58,247 ಫಲಾನುಭವಿಗಳು ಕಳೆದ ಆರು ತಿಂಗಳಿನಿಂದ ಪಡಿತರ ಸಾಮಗ್ರಿಗಳನ್ನೇ ಪಡೆದುಕೊಂಡಿಲ್ಲ. ಈ ಪಡಿತರ ಚೀಟಿಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ. ಅಲ್ಲದೆ, ಜಿಎಸ್‌ಟಿಯ ಒಟ್ಟು 25 ಲಕ್ಷ ವಹಿವಾಟು ಮೀರಿದ 2,684 ಮಂದಿ ಪಡಿತರ ಚೀಟಿ ಪಡೆದಿದ್ದು, ಅವರುಗಳ ಪಡಿತರ ಚೀಟಿಯನ್ನೂ ಪರಿಶೀಲನೆಗೊಳಪಡಿಸಲಾಗಿದೆ ಎಂದು ಸಚಿವರು ಉತ್ತರ ನೀಡಿರುವುದು ಗೊತ್ತಾಗಿದೆ.

 

ರಾಜ್ಯದಲ್ಲಿ ಒಟ್ಟು 1,53,65,869 ಪಡಿತರ ಚೀಟಿ ವಿತರಿಸಲಾಗಿದ್ದು, ಒಟ್ಟು ಫಲಾನುಭವಿಗಳ ಸಂಖ್ಯೆ 5,41,13,915 ಆಗಿದೆ. ಇದರಲ್ಲಿ 10,76,942 ಮಂದಿಗೆ ಅಂತ್ಯೋದಯ ಅನ್ನ ಪಡಿತರ ಚೀಟಿ ವಿತರಿಸಲಾಗಿದ್ದು, 43,96,248 ಫಲಾನುಭವಿಗಳಿದ್ದಾರೆ. 1,17,31,508 ಮಂದಿಗೆ ಆದ್ಯತಾ ಪಡಿತರ ಚೀಟಿ ವಿತರಿಸಲಾಗಿದ್ದು, 4,09,75,963 ಫಲಾನುಭವಿಗಳಿದ್ದಾರೆ. 25,67,419 ಮಂದಿಗೆ ಆದ್ಯತೇತರ ಪಡಿತರ ಚೀಟಿ ವಿತರಿಸಲಾಗಿದ್ದು, 87,41,704 ಮಂದಿ ಈ ಫಲಾನುಭವಿಗಳಿದ್ದಾರೆ ಎಂದು ಸಚಿವರು ಉತ್ತರದಲ್ಲಿ ವಿವರಿಸಿದ್ದಾರೆ.

 

ration card karnataka status

 

ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚವ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು, 2024 ರ ಜುಲೈ ತಿಂಗಳಿನಲ್ಲಿ ಆದ್ಯತಾ ಪಡಿತರ ಚೀಟಿ ಪಡೆಯಲು ನಿಗದಿಪಡಿಸಿರುವ ಮಾನದಂಡಗಳ ವಿರುದ್ಧವಾಗಿ ಪಡಿತರ ಚೀಟಿ ಪಡೆದ ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು, 1.20 ಲಕ್ಷಕ್ಕಿಂತ ಹೆಚ್ಚು ಆದಾಯ ಇರುವ ಕುಟುಂಬಗಳು ಹಾಗೂ 6 ತಿಂಗಳಿಗಿಂತ ಹೆಚ್ಚು ಅವಧಿಗೆ ಪಡಿತರ ಪಡೆಯದೇ ಇರುವ ಒಟ್ಟು 3,62,254 ಪಡಿತರ ಚೀಟಿದಾರರ ವಿವರಗಳನ್ನು ಕುಟುಂಬ ತಂತ್ರಾಂಶದಿಂದ ರದ್ದು ಪಡಿಸಲಾಗಿದೆ.  ಇಲ್ಲವೇ ಆದ್ಯತೇತರ ಪಡಿತರ ಚೀಟಿ ಎಂದು ಪರಿಗಣಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

 

ತೆರಿಗೆ ಪಾವತಿದಾರರು ಹಾಗೂ ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದ ಎಲ್ಲಾ ಪಡಿತರ ಚೀಟಿಗಳನ್ನು ಆದ್ಯತಾ ಪಡಿತರ ಪಡಿತರಚೀಟಿಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಸಚಿವರು ವಿವರವಾಗಿ ಈ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

 

ಐದು ಕೋಟಿ ಮೌಲ್ಯದ ಅಕ್ಕಿ ವಶ

 

2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ ಅಂತ್ಯದವರೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ, 3.97ಕೋಟಿ ಮೌಲ್ಯದ 12,035 ಕ್ವಿಂಟಾಲ್‌ ಅಕ್ಕಿಯನ್ನು ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದೇ ಅವಧಿಯಲ್ಲಿ 12 ಲಕ್ಷ ಮೌಲ್ಯದ 340 ಕ್ವಿಂಟಾಲ್‌ ಗೋದಿ, 3.54ಲಕ್ಷ ಮೌಲ್ಯದ ರಾಗಿ, 17.30 ಲಕ್ಷ ಮೌಲ್ಯದ ಜೋಳ ಹಾಗೂ 17.68 ಲಕ್ಷ ಮೌಲ್ಯದ ಬೆಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

 

ಕಳೆದ ಏಪ್ರಿಲ್‌ನಿಂದ ಜೂನ್‌ 30ರವರೆಗೆ 1.74 ಕೋಟಿ ಮೌಲ್ಯದ 7.92 ಕ್ವಿಂಟಾಲ್‌ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಈ ಅವಧಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.83 ಕೋಟಿ ಮೌಲ್ಯದ ಅಗತ್ಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ಉತ್ತರದಲ್ಲಿ ಹೇಳಿದ್ದಾರೆ.

 

ಇಲಾಖೆಯ e-PoS ತಂತ್ರಾಂಶದಲ್ಲಿ ಯಾವುದೇ ದೋಷ ಇರುವುದಿಲ್ಲ. ಪ್ರತಿ ತಿಂಗಳು ಆಹಾದರ ಧಾನ್ಯಗಳನ್ನು ಪಡಿತರ ಚೀಟಿದಾರರಿಗೆ ಯಾವುದೇ ತಾಂತ್ರಿಕ ಸಮಸ್ಯೆಗಳಿಲ್ಲದೆ ವಿತರಣೆ ಮಾಡಲಾಗುತ್ತಿದೆ ಎಂದು ಈ ಸಂಬಂಧ ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.

SUPPORT THE FILE

Latest News

Related Posts