ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಕಾಲೋನಿ/ತಾಂಡಗಳನ್ನು ಹಂತ – ಹಂತವಾಗಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ರೂಪಿಸಿರುವ ʻಪ್ರಗತಿ ಕಾಲೋನಿ ಯೋಜನೆʼಗೆ ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಮಂಜೂರು ಮಾಡಿದ ಹಣದ ಶೇ. 50 ರಷ್ಟನ್ನೂ ಬಿಡುಗಡೆ ಮಾಡದಿರುವುದು ಬೆಳಕಿಗೆ ಬಂದಿದೆ.
2023-24 ಮತ್ತು 2024-25 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೆ ಒಟ್ಟು 873.57 ಕೋಟಿ ರೂ. ಮಂಜೂರು ಮಾಡಿತ್ತು. ಆದರೆ ಕೇವಲ 393.86 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಸಮಾಜ ಕಲ್ಯಾಣ ಇಲಾಖೆಯು ಆಗಸ್ಟ್ 11 ರಿಂದ ಆರಂಭಗೊಳ್ಳಲಿರುವ ವಿಧಾನಸಭಾ ಅಧಿವೇಶನಕ್ಕೆ ಸಿದ್ಧಪಡಿಸಿದ ಉತ್ತರದಲ್ಲಿ ತಿಳಿಸಿದೆ.
ವಿಶೇಷವೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸಿರುವ ವರುಣ ವಿಧಾನಸಭೆ ಕ್ಷೇತ್ರಕ್ಕೆ ಮಂಜೂರು ಮಾಡಿದ್ದ ಅನುದಾನಕ್ಕಿಂತಲೂ ಅತ್ಯಲ್ಪ ಅನುದಾನವನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿ ಒದಗಿಸಿದೆ.
ಈ ಉತ್ತರದ ಪ್ರತಿಯು ʻದಿ ಫೈಲ್ʼಗೆ ಲಭ್ಯವಾಗಿದೆ.
2023-24 ನೇ ಸಾಲಿನಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಈ ಯೋಜನೆ ಅನುಷ್ಠಾನಕ್ಕಾಗಿ ಒಟ್ಟು 288.02 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ ಕೇವಲ 160.84 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 2024-25 ನೇ ಸಾಲಿನಲ್ಲಿಯೂ 585.54 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ 233.01 ಕೋಟಿ ರೂ.ಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಆದರೆ ಯಾವ ಕಾರಣದಿಂದ ಮಂಜೂರಾದ ಹಣದಲ್ಲಿ ಶೇ.50 ರಷ್ಟು ಹಣವನ್ನೂ ಬಿಡುಗಡೆ ಮಾಡಲಾಗಿಲ್ಲ ಎಂಬುದನ್ನು ಉತ್ತರದಲ್ಲಿ ವಿವರಿಸಿಲ್ಲ. 2025-26 ನೇ ಸಾಲಿನಲ್ಲಿ ಈ ಯೋಜನೆಗೆ ಕೇವಲ 222 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ತೆಗೆದಿರಿಸಲಾಗಿದೆ ಎಂಬ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
2023-24 ನೇ ಸಾಲಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರಕ್ಕೆ ಈ ಯೋಜನೆಯಡಿ ರಾಜ್ಯದಲ್ಲಿಯೇ ಅತಿ ಹೆಚ್ಚು ಎಂದರೆ 9.25 ಕೋಟಿ ರೂ.ಗಳನ್ನು ʻಪ್ರಗತಿ ಕಾಲೋನಿ ಯೋಜನೆʼಯಡಿ ಮಂಜೂರು ಮಾಡಲಾಗಿತ್ತು. ಆದರೆ ಈ ಸಾಲಿನಲ್ಲಿ ಈ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದು 3.05 ಕೋಟಿ ರೂ. ಮಾತ್ರ. 2024-25 ನೇ ಸಾಲಿನಲ್ಲಿಯೂ ಐದು ಕೋಟಿ ರೂ.ಗೆ ಮಂಜೂರಾತಿ ನೀಡಲಾಗಿತ್ತು. ಆದರೆ 1.65 ಕೋಟಿ ಮಾತ್ರ ಬಿಡುಗಡೆಯಾಗಿದೆ ಎಂಬುದು ಈ ಉತ್ತರದಿಂದ ತಿಳಿದು ಬಂದಿದೆ.
2024-25 ನೇ ಸಾಲಿನಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಎಂದರೆ ಹತ್ತು ಕೋಟಿ ರೂ.ಗಳನ್ನು ಈ ಯೋಜನೆಯಡಿ, ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿರುವ ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮಂಜೂರು ಮಾಡಲಾಗಿತ್ತು. ಆದರೆ ಬಿಡುಗಡೆಯಾಗಿದ್ದು ಮಾತ್ರ 3.10 ಕೋಟಿ ರೂ. ಎಂದು ಈ ದಾಖಲೆಯಿಂದ ಗೊತ್ತಾಗಿದೆ.
2023-24 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾದ ವಿಧಾನಸಭಾ ಕ್ಷೇತ್ರಗಳಾದ ದೇವನಹಳ್ಳಿ, ಹೊಳಲ್ಕೆರೆ, ಜಗಳೂರು, ಟಿ.ನರಸೀಪುರ, ಶಿರಹಟ್ಟಿ, ಚಿತ್ತಾಪುರ, ಹಗರಿಬೊಮ್ಮನಹಳ್ಳಿ ಹಾಗೂ ಪರಿಶಿಷ್ಟ ವರ್ಗಕ್ಕೆ ಮೀಸಲಾದ ಮಾನ್ವಿ ವಿಧಾನಸಭಾ ಕ್ಷೇತ್ರಕ್ಕೆ ಒಂದೇ ಒಂದು ರೂ.ಗಳನ್ನು ಮಂಜೂರು ಮಾಡಿರಲಿಲ್ಲ ಎಂಬುದು ಈ ದಾಖಲೆಯಿಂದ ಗೊತ್ತಾಗಿದೆ.
2024-25 ನೇ ಸಾಲಿನಲ್ಲಿ ಈ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹಣ ಮಂಜೂರಾಗಿತ್ತು. ಆದರೆ ಶೇ. 50 ರಷ್ಟು ಹಣವನ್ನೂ ಬಿಡುಗಡೆ ಮಾಡಲಾಗಿಲ್ಲ. ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರವಾದ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಎಚ್.ಸಿ. ಮಹದೇವಪ್ಪ ಪ್ರತಿನಿಧಿಸುವ ಟಿ. ನರಸೀಪುರ ಕ್ಷೇತ್ರಕ್ಕೆ 8.85 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ ಬಿಡುಗಡೆಯಾಗಿದ್ದು 2.92 ಕೋಟಿ ರೂ. ಮಾತ್ರ. 2023-24 ನೇ ಸಾಲಿನಲ್ಲಿ ಸಚಿವರ ಕ್ಷೇತ್ರಕ್ಕೇ ಒಂದು ರೂಪಾಯಿಯನ್ನೂ ಮಂಜೂರು ಮಾಡಿರಲಿಲ್ಲ ಎಂಬುದು ಈ ದಾಖಲೆಯಿಂದ ಬಹಿರಂಗಗೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರತಿನಿಧಿಸುವ ಶಿಕಾರಪುರ ವಿಧಾನಸಭಾ ಕ್ಷೇತ್ರಕ್ಕೆ ಈ ಯೋಜನೆಯಡಿ 2023-24 ನೇ ಸಾಲಿನಲ್ಲಿ ಒಂದು ರೂಪಾಯಿಯನ್ನೂ ನೀಡಲಾಗಿರಲಿಲ್ಲ. ಆದರೆ 2024-25 ನೇ ಸಾಲಿನಲ್ಲಿ 2 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಆದರೆ ಬಿಡುಗಡೆಯಾಗಿದ್ದು ಮಾತ್ರ ಕೇವಲ 66 ಲಕ್ಷ ರೂ. ಮಾತ್ರ. ಇದೇ ರೀತಿಯಾಗಿ ಬಿಜೆಪಿಯ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿನಿಧಿಸುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ 2023-24 ನೇ ಸಾಲಿನಲ್ಲಿ ಈ ಯೋಜನೆಯಡಿ ಹಣ ನೀಡರಲಿಲ್ಲ. 2024-25 ನೇ ಸಾಲಿನಲ್ಲಿ ಒಂದು ಕೋಟಿ ರೂ. ಮಂಜೂರು ಮಾಡಿದ್ದರೂ, ಕೇವಲ 33 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂಬುದು ಈ ದಾಖಲೆಯಿಂದ ಗೊತ್ತಾಗಿದೆ.
2018-19 ನೇ ಸಾಲಿನ ಬಜೆಟ್‌ನಲ್ಲಿ ಈ ʻಪ್ರಗತಿ ಕಾಲೋನಿ ಯೋಜನೆʼ ಘೋಷಣೆ ಮಾಡಲಾಗಿತ್ತು. ಈ ಯೋಜನೆಯಡಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಒಂದು ಕೋಟಿರೂ.ಗಳಿಂದ ಐದು ಕೋಟಿ ರೂ.ಗಳವರಗೆ ಅನುದಾನ ಒದಗಿಸಲು ಅವಕಾಶವಿದೆ.
2011 ರ ಜನಗಣತಿಯಂತೆ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಎಸ್.ಸಿ/ಎಸ್.ಟಿ. ಜನಸಂಖ್ಯೆಯ ವಿವರಗಳು ಲಭ್ಯವಿರುತ್ತವೆ. ಅಲ್ಲದೇ ತಾಂಡಗಳ ಪಟ್ಟಿ ಸಹ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಲಭ್ಯವಿರುತ್ತದೆ. ತಾಂಡಗಳಲ್ಲಿರುವ ಎಲ್ಲಾ ಜನರು ಬಂಜಾರ/ಲಮಾಣಿ/ಲಂಬಾಣಿ ಪರಿಶಿಷ್ಟ ಜಾತಿಗೆ ಸೇರಿರುತ್ತಾರೆ. 2011ರ ಜನಗಣತಿ ಪ್ರಕಾರ ಗ್ರಾಮದ ಒಟ್ಟು ಜನಸಂಖ್ಯೆಯಲ್ಲಿ ಶೇ.50 ಕ್ಕಿಂತ ಹೆಚ್ಚಿಗೆ ಎಸ್.ಸಿ/ಎಸ್.ಟಿ. ಜನರು ಇರುವ ಕಾಲೋನಿ/ತಾಂಡಗಳನ್ನು ಆಯ್ಕೆ ಮಾಡಿ, ʻಪ್ರಗತಿ ಕಾಲೋನಿ ಯೋಜನೆʼ ಅಡಿಯಲ್ಲಿ, ಈ ಕಾಲೋನಿ/ತಾಂಡಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಒಳಚರಂಡಿ, ಸಂಪರ್ಕ ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಮಗ್ರ ಅಭಿವೃದ್ಧಿಪಡಿಸಲಾಗುತ್ತದೆ.
ಯೋಜನೆ ಉದ್ದೇಶವೇನು?
ಆಯ್ಕೆಯಾದ ಕಾಲೋನಿ/ತಾಂಡಗಳಲ್ಲಿ ಈಗಾಗಲೇ ಕಲ್ಪಿಸಿರುವ ಮೂಲಭೂತ ಸೌಕರ್ಯಗಳನ್ನು ಹೊರತುಪಡಿಸಿ, ಕೊರತೆ ಇರುವ ಮೂಲಭೂತ ಸೌಕರ್ಯಗಳನ್ನು ಮಾತ್ರ ಗುರ್ತಿಸಿ ಅಂದಾಜು ಪಟ್ಟಿಗಳನ್ನು ತಯಾರಿಸಿ ಅದರ ಮೊತ್ತಕ್ಕೆ ಮಾತ್ರ ಸೀಮಿತಗೊಳಿಸಿ ಕೆ.ಟಿ.ಪಿ.ಪಿ. ಕಾಯ್ದೆಯಂತೆ ಟೆಂಡರ್ ಕರೆದು ಕಾಮಗಾರಿಗಳನ್ನು ಪೂರ್ಣಗೊಳಿಸಲೂ ಅವಕಾಶವಿದೆ. ಒಮ್ಮೆ ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಅವಶ್ಯ ಮೂಲಭೂತ ಸೌಕರ್ಯಗಳನ್ನು ಈ ಕಾಲೋನಿಗಳಿಗೆ ಒದಗಿಸುವುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಮಾರ್ಗಸೂಚಿಯಲ್ಲೇನಿದೆ?
(1) 2011 ರ ಜನಗಣತಿಯಂತೆ ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಎಸ್.ಸಿ/ಎಸ್.ಟಿ. ಜನಸಂಖ್ಯೆಯ ವಿವರಗಳು ಲಭ್ಯವಿರುತ್ತವೆ. ಅಲ್ಲದೇ ತಾಂಡಗಳ ಪಟ್ಟಿ ಸಹ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಲಭ್ಯವಿರುತ್ತದೆ. ಕಾರಣ 2011ರ ಜನಗಣತಿ ಪ್ರಕಾರ ಗ್ರಾಮದ ಒಟ್ಟು ಜನಸಂಖ್ಯೆಯಲ್ಲಿ ಶೇ.50%ಕ್ಕಿಂತ ಹೆಚ್ಚಿಗೆ ಎಸ್.ಸಿ/ಎಸ್.ಟಿ. ಜನರು ಇರುವ ಕಾಲೋನಿ/ತಾಂಡಗಳನ್ನು ಸರ್ಕಾರದ ಮಟ್ಟದಲ್ಲಿ ಆಯ್ಕೆ ಮಾಡಲಾಗುವುದು.
(2) ಆಯ್ಕೆಯಾದ ಕಾಲೋನಿ/ತಾಂಡಗಳಲ್ಲಿ ಕುಡಿಯುವ ನೀರು, ರಸ್ತೆ, ವಿದ್ಯುತ್, ಒಳಚರಂಡಿ, ಸಂಪರ್ಕ ರಸ್ತೆ, ಸಮುದಾಯ ಭವನ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಕನಿಷ್ಟ ರೂ.1.00 ಕೋಟಿ, ಗರಿಷ್ಟ ರೂ.5.00 ಕೋಟಿ ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸುವುದು. ಆದರೆ, ಸದರಿ ಕಾಲೋನಿ / ತಾಂಡಗಳಲ್ಲಿ ಅಗತ್ಯವಿರುವ ಕಾಮಗಾರಿಗಳನ್ನು ಮಾತ್ರ ಕೈಗೊಳ್ಳುವುದು.
(3) ಆಯ್ಕೆಯಾದ ಕಾಲೋನಿ/ತಾಂಡಗಳಲ್ಲಿ ಈಗಾಗಲೇ ಕಲ್ಪಿಸಿರುವ ಮೂಲಭೂತ ಸೌಕರ್ಯಗಳನ್ನು ಹೊರತುಪಡಿಸಿ, ಕೊರತೆ ಇರುವ ಮೂಲಭೂತ ಸೌಕರ್ಯಗಳನ್ನು ಮಾತ್ರ ಗುರ್ತಿಸಿ ಅಂದಾಜು ಪಟ್ಟಿಗಳನ್ನು ತಯಾರಿಸಿ ಅದರ ಮೊತ್ತಕ್ಕೆ ಮಾತ್ರ ಸೀಮಿತಗೊಳಿಸಿ ಕೆ.ಟಿ.ಪಿ.ಪಿ. ಕಾಯ್ದೆಯಂತೆ ಟೆಂಡರ್ ಕರೆದು ಕಾಮಗಾರಿಗಳನ್ನು ಪೂರ್ಣಗೊಳಿಸುವುದು.
(4) ಈ ಯೋಜನೆ ಅಡಿಯಲ್ಲಿ ಸಮಗ್ರ ಅಭಿವೃದ್ಧಿಪಡಿಸಿದ ಕಾಲೋನಿ/ತಾಂಡಗಳಿಗೆ ಮತ್ತೊಮ್ಮೆ ಯಾವುದೇ ಅನುದಾನ ನೀಡುವ ಅವಶ್ಯಕತೆ ಇರುವುದಿಲ್ಲ.
(5) ಎಸ್.ಸಿ.ಎಸ್.ಪಿ/ಟಿ.ಎಸ್.ಪಿ. ಅಡಿಯಲ್ಲಿ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಇತರ ಇಲಾಖೆಗಳಿಗೆ ನೀಡಿದ ಅನುದಾನದಿಂದ ಅವಶ್ಯಕವಿರುವ ಕೆಲವು ಸೌಕರ್ಯಗಳನ್ನು ಒದಗಿಸಲು ಅವಕಾಶವಿರುತ್ತದೆ.
(6) ಸಮಾಜ ಕಲ್ಯಾಣ ಇಲಾಖೆಗೆ ನೀಡಿದ ಅನುದಾನದಿಂದ ಈ ಯೋಜನೆಗೆ ತಗಲುವ ವೆಚ್ಚವನ್ನು ಭರಿಸುವುದು.
(7) ಆಯ್ಕೆಯಾದ ಕಾಲೋನಿ/ತಾಂಡಗಳಲ್ಲಿ ಅವಶ್ಯಕತೆ ಇರುವ ಮೂಲಭೂತ ಸೌಲಭ್ಯಗಳನ್ನು ಗುರ್ತಿಸಿ ರೇಖಾ ಅಂದಾಜು ಪಟ್ಟಿಯೊಂದಿಗೆ ಪ್ರಸ್ತಾವನೆಗಳನ್ನು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ. ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಇವರುಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದು.
(8) ಪ್ರಗತಿ ಕಾಲೋನಿ ಯೋಜನೆ ಅಡಿ ಆಯ್ಕೆಯಾದ ಕಾಲೋನಿ/ತಾಂಡಗಳನ್ನು ಹೊರತುಪಡಿಸಿ, ಉಳಿದ ಕಾಲೋನಿ/ತಾಂಡಗಳಲ್ಲಿ ಮೂಲಭೂತ ಸೌಕರ್ಯಗಳನ್ನು: ಕಲ್ಪಿಸುವ ಜಾರಿಯಲ್ಲಿರುವ ಯೋಜನೆ ಮುಂದುವರಿಯುತ್ತದೆ.