ಬೆಂಗಳೂರು; ಹರಿಯಾಣ ರಾಜ್ಯದ ಮಾದರಿಯಡಿಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಡಿಸೆಂಬರ್ 2025 ರೊಳಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನಾಗಿ ಪರಿವರ್ತಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಪಾವತಿಸಬೇಕಾದ ಆಸ್ತಿ ತೆರಿಗೆ ಮೇಲೆ ಶೇ.2ರಷ್ಟು ತೆರಿಗೆ ವಿಧಿಸಲು ಸರ್ಕಾರವು ಮುಂದಾಗಿದೆ.
ವಿದ್ಯುತ್ ವಿತರಣಾ ಕಂಪನಿಗಳ ಬಂಡವಾಳ ವೆಚ್ಚದ ಮೇಲಿನ ಹೊರೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಷ್ಕೃತ ವಿತರಣಾ ವಲಯ (ಆರ್‍ಡಿಎಸ್‌ಎಸ್) ಯೋಜನೆಗೆ ಅನುಮೋದನೆ ಪಡೆಯಲು ಮುಂದಾಗಿದೆ. ಈ ಸಂಬಂಧ ಇಂಧನ ಇಲಾಖೆಯು 11,586.34 ಕೋಟಿ ರು ವೆಚ್ಚದ ಪ್ರಸ್ತಾವವನ್ನೂ ಸಲ್ಲಿಸಿದೆ.
ಈ ಕುರಿತು ಇಂಧನ ಇಲಾಖೆಯಲ್ಲಿ ಅಧಿಕಾರಿಗಳು ಡಿಸ್ಕಾಂಗಳ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಕಡತದಲ್ಲಿರುವ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಹಾಗೆಯೇ ಪರಿಷ್ಕೃತ ವಿತರಣಾ ವಲಯ ಯೋಜನೆಯಡಿ (ಆರ್‍ಡಿಎಸ್‌ಎಸ್) ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‍ಗಳನ್ನಾಗಿ ಪರಿವರ್ತಿಸಲು 2025ರ ಡಿಸೆಂಬರ್ ಅಂತ್ಯದವರೆಗೆ ಕಾಲಾವಕಾಶ ನೀಡಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರವು ಕೇಂದ್ರವನ್ನು ಕೋರಿದೆ.
ಸ್ಮಾರ್ಟ್ ಮೀಟರ್ ಅಳವಡಿಕೆ ಮತ್ತು ಇದರ ದುಬಾರಿ ದರದ ಕುರಿತು ಪ್ರಕರಣವೊಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವ ಹೊತ್ತಿನಲ್ಲೇ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಪರಿಷ್ಕೃತ ವಿತರಣಾ ವಲಯ ಯೋಜನೆಯಡಿ (ಆರ್‌ಡಿಎಸ್‌ಎಸ್) ಅಡಿ ಸ್ಮಾರ್ಟ್ ಮೀಟರ್ ಅಳವಡಿಕೆ ಪ್ರಸ್ತಾವವು ಮುನ್ನೆಲೆಗೆ ಬಂದಿದೆ.
ಆರ್‍ಡಿಎಸ್‌ಎಸ್ ಪ್ರಸ್ತಾವವನ್ನು ಪರಿಗಣಿಸುವ ಸಂಬಂಧ ಆಗಸ್ಟ್ 2025 ರೊಳಗೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿರುವ ಪ್ರಿಪೇಯ್ಡ್‌ಗಳನ್ನು ಸ್ಮಾರ್ಟ್ ಮೀಟರ್‌ಗಳನ್ನಾಗಿ ಪರಿವರ್ತಿಸಬೇಕು. ಮತ್ತು ಈ ಸಂಬಂಧ ಹರಿಯಾಣ ರಾಜ್ಯದಲ್ಲಿರುವಂತೆ ಗ್ರಾಮೀಣ ಪ್ರದೇಶಗಳಲ್ಲಿ ಪಾವತಿಸಬೇಕಾದ ಆಸ್ತಿ ತೆರಿಗೆಯ ಮೇಲೆ ಸರ್ಕಾರವು ಶೇ. 2ರಷ್ಟು ತೆರಿಗೆ ವಿಧಿಸಲು ಮಾರ್ಗಗಳನ್ನು ಶೋಧಿಸಬೇಕು. ಹರಿಯಾಣ ರಾಜ್ಯದ ಅಧಿಕೃತ ಗೆಜೆಟ್ ಮತ್ತು ಉತ್ತರ ಹರಿಯಾಣ ಬಿಜ್ಲಿ ವಿತರಣ್ ನಿಗಮ್ ಹೊರಡಿಸಿರುವ ಸುತ್ತೋಲೆಯನ್ನು ಪರಿಶೀಲನೆ ಮಾಡಬೇಕು ಎಂದು ಅಧಿಕಾರಿಗಳು ಸಲಹೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಹರ್ಯಾಣ ಮಾದರಿಯಲ್ಲೇನಿದೆ?
ಹರಿಯಾಣ ಪಂಚಾಯತ್ ರಾಜ್ ಕಾಯ್ದೆ, 1994 (1994 ರ 11) ಸೆಕ್ಷನ್ 41 ರ ಉಪವಿಭಾಗ (1) ರ ಷರತ್ತು (ಸಿ) ಪ್ರಕಾರ ಗ್ರಾಮ ಪಂಚಾಯತ್ ಮಿತಿಯೊಳಗೆ ಯಾವುದೇ ಗ್ರಾಹಕರು ವಿದ್ಯುತ್ ಬಿಲ್‌ನ ಶೇಕಡಾ ಎರಡರ ದರದಲ್ಲಿ ವಿದ್ಯುತ್ ಬಳಕೆಯ ಮೇಲೆ ಪಂಚಾಯತ್ ತೆರಿಗೆಯನ್ನು ವಿಧಿಸಲಾಗಿದೆ. ಈ ತೆರಿಗೆಯನ್ನು ಉತ್ತರ ಹರಿಯಾಣ ಬಿಜ್ಲಿ ವಿತರಣ್ ನಿಗಮ್ ಲಿಮಿಟೆಡ್ ಮತ್ತು ದಕ್ಷಿಣ ಹರಿಯಾಣ ಬಿಜ್ಲಿ ವಿತರಣ್ ನಿಗಮ್ ಲಿಮಿಟೆಡ್ ಸಂಗ್ರಹಿಸುತ್ತವೆ.
ವಿದ್ಯುತ್ ಸುಂಕದ ರೀತಿಯಲ್ಲಿ ಹರಿಯಾಣ ಸರ್ಕಾರಕ್ಕೆ ಪಾವತಿಸುತ್ತವೆ. ನಂತರ ಅದನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್‌ಗೆ ರವಾನಿಸಲಾಗುತ್ತದೆ. ಇದಲ್ಲದೆ ಭಾರತ ಸರ್ಕಾರವು ವಿದ್ಯುತ್ ಬಳಕೆಯ ಮೇಲೆ ಅಥವಾ ಭಾರತ ಸರ್ಕಾರವು ಯಾವುದೇ ರೈಲ್ವೆಯ ನಿರ್ಮಾಣ, ನಿರ್ವಹಣೆ ಅಥವಾ ಕಾರ್ಯಾಚರಣೆಯಲ್ಲಿ ಅಥವಾ ಕೃಷಿ ಗ್ರಾಹಕರು ಬಳಸುವಾಗ ವಿಧಿಸಬಹುದಾದ ತೆರಿಗೆಗೆ ಮೂಲಕ ವಿನಾಯಿತಿ ನೀಡಲಾಗಿದೆ.
ಹಣಕಾಸಿನ ಮಾದರಿಯೇನು?
ಸಂದರ್ಭಾನುಸಾರ ಪ್ರಿಪೇಯ್ಡ್ ಸ್ಮಾರ್ಟ್ ಮೀಟರಿಂಗ್ ಪರಿಹಾರವು 900 ರು ವರೆಗೆ ಸೀಮಿತವಾಗಿರಲಿದೆ. ಅಥವಾ ಗ್ರಾಹಕ, ಡಿಟಿ ಮತ್ತು ಫೀಡರ್‌ನಲ್ಲಿ ಕ್ರಮವಾಗಿ 1,350 ರು. ಸೇರಿದಂತೆ ಗ್ರಾಹಕರಿಗೆ ಅಸ್ತಿತ್ವದಲ್ಲಿರುವ ಮೀಟರ್‌ನ ಏಕೀಕರಣ ಸೇರಿದಂತೆ ಮೂಲಸೌಕರ್ಯ ಶುಲ್ಕ ಹೇರಬಹುದು.
ಇದಲ್ಲದೇ ಎಲ್ಲಾ ರಾಜ್ಯಗಳಲ್ಲಿರುವಂತೆ ಉಚಿತವಾಗಿ ಪ್ರಮಾಣೀಕೃತ ಬಿಲ್ಲಿಂಗ್ ಮಾಡ್ಯೂಲ್‌ಗಳು, ದತ್ತಾಂಶಗಳ ನಿರ್ವಹಣೆ, ವಿಶ್ಲೇಷಣೆ ಮಾಡಬಹುದು. ಹಾಗೆಯೇ ಇತರೆ ಪ್ರಕರಣದಂತೆ ಶೇ. 60 ಅಥವಾ ಶೇ. 90ರಷ್ಟು ವಿತರಣಾ ಮೂಲಸೌಕರ್ಯ ಕಾರ್ಯಗಳು SCADA, DMS, AB ಕೇಬಲ್‌ಗಳು ಸೇರಿದಂತೆ ಫೀಡರ್ ವಿಭಜನೆ ಆಗಬಹುದು ಎಂದು ವಿವರಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಆರ್‍ಡಿಎಸ್‌ಎಸ್ ಪ್ರಸ್ತಾವನೆಯನ್ನು 2021ರ ಡಿಸೆಂಬರ್ 18ರಂದು ಇಂಧನ ಇಲಾಖೆಯು ನಡೆಸಿದ್ದ ಎಸ್‌ಎಲ್‌ಡಿಆರ್‍ಸಿ ಸಭೆಗೆ ಮಂಡಿಸಲಾಗಿತ್ತು. ಡಿಸೆಂಬರ್ 23ರಂದು ಈ ಸಮಿತಿಯು ಪ್ರಸ್ತಾವವನ್ನು ಅಂಗೀಕರಿಸಿತ್ತು. ಕ್ರಿಯಾ ಯೋಜನೆ ಮತ್ತು ಡಿಪಿಎಆರ್‍ನ್ನು ಸಚಿವ ಸಂಪುಟಕ್ಕೆ ಸಲ್ಲಿಸಲು ಶಿಫಾರಸ್ಸು ಕೂಡ ಮಾಡಿತ್ತು. ಇದಾದ ನಂತರ ಎಸ್ ಅರ್‍ನ್ನು 9,131 ಕೋಟಿ ರು ವೆಚ್ಚಕ್ಕೆ ಪರಿಷ್ಕರಣೆ ಮಾಡಲಾಗಿತ್ತು. ಪರಿಷ್ಕೃತ ವೆಚ್ಚದ ಪ್ರಸ್ತಾವವನ್ನು 2022ರ ಸೆ.13ರಂದು ಇಂಧನ ಇಲಾಖೆಗೆ ಸಲ್ಲಿಕೆಯಾಗಿರುವುದು ತಿಳಿದು ಬಂದಿದೆ.
ಈ ಕುರಿತು ಇಂಧನ ಇಲಾಖೆಯು 2024ರ ಫೆ.19ರಂದು ಬರೆದಿದ್ದ ಪತ್ರದ ಪ್ರಕಾರ ಈಗಾಗಲೇ ಸಲ್ಲಿಸಲಾದ ಡಿಪಿಆರ್‍ಗೆ ಅನುಗುಣವಾಗಿ ಅಗತ್ಯವಿರುವ ಕೆಲಸಗಳನ್ನು ಪರಿಗಣಿಸಬೇಕು. ಅರ್‍ಡಿಎಸ್‌ಎಸ್ ಪ್ರಸ್ತಾವನೆಗಾಗಿ ಪರಿಷ್ಕೃತ ಡಿಪಿಆರ್‍ಗಳನ್ನು ಸಲ್ಲಿಸಲು ನಿರ್ದೇಶಿಸಿತ್ತು.
ಪರಿಷ್ಕೃತ ಡಿಪಿಆರ್‍ನಲ್ಲೇನಿದೆ?
ಘಟಕ 1ರ ಪ್ರಕಾರ ಶೇ. 15ರಷ್ಟು ಅನುದಾನದ ಮೂಲಕ ಸ್ಮಾರ್ಟ್ ಮೀಟರಿಂಗ್ ಗೆ .3,490.88 ಕೋಟಿ ರು., ಘಟಕ 2ರ ಪ್ರಕಾರ ಶೇ.60ರಷ್ಟು ಅನುದಾನ ಪಡೆಯಬೇಕು. 4,848.93 ಕೋಟಿ ರು ನಷ್ಟ ಕಡಿತ, ಆಧುನೀಕರಣಕ್ಕಾಗಿ 791.41 ಕೋಟಿ ರು., ಸೇರಿ 5,640.34 ಕೋಟಿ ರು ಆಗಲಿದೆ. ಒಟ್ಟಾರೆಯಾಗಿ 9, 131.22 ಕೋಟಿ ರುಗೆ ವೆಚ್ಚವನ್ನು ಪರಿಷ್ಕರಣೆ ಮಾಡಿರುವುದು ಗೊತ್ತಾಗಿದೆ.
ಈ ಪರಿಷ್ಕೃತ ಡಿಪಿಆರ್ ಪ್ರಸ್ತಾವನೆ ಕುರಿತು 2025ರ ಮೇ 23ರಂದು ಬೆಂಗಳೂರಿನಲ್ಲಿ ನಡೆದಿದ್ದ 7ನೇ ದಕ್ಷಿಣ ಪ್ರಾದೇಶಿಕ ವಿದ್ಯುತ್ ಸಚಿವರ ಸಮ್ಮೇಳನದಲ್ಲಿಯೂ ಚರ್ಚೆಯಾಗಿತ್ತು. ಮತ್ತು ಇದಕ್ಕೆ ಅನುಮೋದನೆ ನೀಡಬೇಕು ಎಂದು ಕೋರಲಾಗಿತ್ತು.
OH ನಿಂದ UG ಕೇಬಲ್‌ಗೆ ಪರಿವರ್ತಿಸುವ ಕೆಲಸವನ್ನು ಸೇರಿಸುವ ಮೂಲಕ ಪರಿಷ್ಕರಿಸಲಾಗಿದೆ. ಇದರ ಘಟಕವಾರು ಪ್ರಸ್ತಾವನೆ ಕುರಿತೂ ಇಲಾಖೆಯಲ್ಲಿ ಚರ್ಚೆಯಾಗಿದೆ.
ಘಟಕವಾರು ಪ್ರಸ್ತಾವನೆಯಲ್ಲೇನಿದೆ?
ಸ್ಮಾರ್ಟ್ ಮೀಟರಿಂಗ್‌ಗೆ ಘಟಕ 1 ರಂತೆ ಶೇ.15ರಷ್ಟು ಅನುದಾನ 6436.00 ಕೋಟಿ ರು., ಘಟಕ 2ರ ಪ್ರಕಾರ ಶೇ. 60ರಷ್ಟು ಅನುದಾನ ಪಡೆಯುವುದು. ನಷ್ಟ ಕಡಿತ ರೂ. 4058.93 ಕೋಟಿ ರು ಆಗಲಿದ್ದರೇ, ಆಧುನೀಕರಣಕ್ಕಾಗಿ 1,091.41 ಕೋಟಿ ರು ಸೇರಿದಂತೆ ಒಟ್ಟು 5,150.34 ಕೋರಿ ರು ಆಗಲಿದೆ. ಒಟ್ಟಾರೆ 11,586.34 ಕೋಟಿ ರು ವೆಚ್ಚವಾಗಲಿದೆ.
ಆರ್‌ಡಿಎಸ್‌ಎಸ್ ಯೋಜನೆಯು ಭಾರತ ಸರ್ಕಾರದ ಅನುದಾನ ಆಧಾರಿತ ಕಾರ್ಯಕ್ರಮವಾಗಿದೆ. ಯೋಜನಾ ವೆಚ್ಚದ ಶೇ 60ರಷ್ಟು ಅನುದಾನ ಮತ್ತು ಸ್ಮಾರ್ಟ್ ಮೀಟರಿಂಗ್‌ಗೆ ಶೇ. 15ರಷ್ಟು ಅನುದಾನ ಬಿಡುಗಡೆಯಾಗಲಿದೆ.
ಕರ್ನಾಟಕ ರಾಜ್ಯದಲ್ಲಿ ಈ ಯೋಜನೆಯನ್ನು ಜಾರಿಗೆ ತಂದರೆ ವಿದ್ಯುತ್ ವಿತರಣಾ ಕಂಪನಿಗಳ ಬಂಡವಾಳ ವೆಚ್ಚದ ಮೇಲಿನ ಹೊರೆಯನ್ನು ಕಡಿಮೆ ಮಾಡಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್‌ಡಿಎಸ್‌ಎಸ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಪ್ರಸ್ತಾವಕ್ಕೆ ಅನುಮೋದನೆ ಪಡೆಯಲು ಮುಂದಾಗಿರುವುದು ಗೊತ್ತಾಗಿದೆ.