ಸೌಜನ್ಯ ಕೊಲೆ; ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರ ಲೋಪ, ಸಿಬಿಐ ‘ಗೌಪ್ಯ’ ಪತ್ರ ಬಯಲು

ಬೆಂಗಳೂರು:  ಉಜಿರೆಯ ಸೌಜನ್ಯ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಡಾ ಆದಂ ಮತ್ತು ಡಾ ರಶ್ಮಿ ಅವರು ಒಳಾಂಗಗಳನ್ನು ಸಂಗ್ರಹಿಸಿ ಸಂರಕ್ಷಿಸಿಡುವಲ್ಲಿ ವಿಫಲರಾಗಿರುವುದೂ ಸೇರಿದಂತೆ ಹಲವು ಲೋಪಗಳ ಕುರಿತು ಸಿಬಿಐ ತನಿಖಾ ಸಂಸ್ಥೆಯು ಸರ್ಕಾರಕ್ಕೆ  9 ವರ್ಷಗಳ ಹಿಂದೆಯೇ ಬರೆದಿದ್ದ ಗೌಪ್ಯ ಪತ್ರವನ್ನು ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ಡಾ ಆದಂ ಮತ್ತು ಡಾ ರಶ್ಮಿ ಅವರ ವಿರುದ್ಧ ಕಠಿಣ ದಂಡನೆಗೆ ಶಿಫಾರಸ್ಸು ಮಾಡಿ ಸಿಬಿಐ ಬರೆದಿದ್ದ ಪತ್ರವನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಒದಗಿಸಬೇಕೆ ಬೇಡವೇ ಎಂಬ ಕುರಿತು ಆರೋಗ್ಯ ಇಲಾಖೆಯು ಸಿಬಿಐಗೆ 2 ಬಾರಿ ಪತ್ರ ಬರೆದಿತ್ತು. ಆದರೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯು ಆರ್‍‌ಟಿಐ ಅಡಿಯಲ್ಲಿ ನೀಡಿರುವ ಕಡತದಲ್ಲಿ ಸಿಬಿಐ ಬರೆದಿದ್ದ ಗೌಪ್ಯ ಪತ್ರವೂ ಇದೆ.

 

ಡಾ ಆದಂ ಮತ್ತು ಡಾ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ಮತ್ತು ಇಲಾಖೆ ವಿಚಾರಣೆ ನಡೆಸುವ ಸಂಬಂಧ ಸಿಬಿಐ ಸಂಸ್ಥೆಯು 2016ರ ಮಾರ್ಚ್‌ 7ರಂದು ಗೃಹ ಇಲಾಖೆಗೆ ಗೌಪ್ಯ ಪತ್ರ ಬರೆದಿತ್ತು.  184 ಪುಟಗಳನ್ನು ಒಳಗೊಂಡಿರುವ ಕಡತವನ್ನು ‘ದಿ ಫೈಲ್‌’, ಆರ್‍‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

 

ಸೌಜನ್ಯಾಳ ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ಸಾವಿಗೆ ಕಾರಣವನ್ನು ತಿಳಿಸುತ್ತದೆ ಮತ್ತು ಅತ್ಯಾಚಾರ ಮತ್ತು ಕೊಲೆಯಂತಹ ಆರೋಪಗಳನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ. ಮರಣೋತ್ತರ ಪರೀಕ್ಷೆ ವರದಿಯು, ತನಿಖೆಯ ಪ್ರಮುಖ ಭಾಗವಾಗಿದೆ. ಅತ್ಯಾಚಾರ ಮತ್ತು ಕೊಲೆಯ ಆರೋಪಗಳನ್ನು ಪರಿಶೀಲಿಸಲು ಮರಣೋತ್ತರ ಪರೀಕ್ಷೆಯು ಸಹಾಯ ಮಾಡಲಿದೆ.

 

ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿಯ ಪರವಾಗಿ ವಕೀಲರುಗಳು ಪೊಲೀಸರಿಗೆ ಕಳೇಬರದ ಫೊಟೋಗಳನ್ನು ನೀಡಿರುವ ಬೆನ್ನಲ್ಲೇ ಸೌಜನ್ಯಾ ಮರಣೋತ್ತರ ಪರೀಕ್ಷೆಯಲ್ಲಿನ ಲೋಪಗಳ ಕುರಿತು ಸಿಬಿಐ ಸಂಸ್ಥೆಯು ಸರ್ಕಾರಕ್ಕೆ ಬರೆದಿದ್ದ ಗೌಪ್ಯ ಪತ್ರವು ಮುನ್ನೆಲೆಗೆ ಬಂದಿದೆ.

 

ಸಿಬಿಐ ಗೌಪ್ಯ ಪತ್ರದಲ್ಲೇನಿದೆ?

 

ಮೃತ ಸೌಜನ್ಯ ಮರಣೋತ್ತರ ಪರೀಕ್ಷೆಯನ್ನು ಡಾ ಆಡಂ ಮತ್ತು ಡಾ ರಶ್ಮಿ ಅವರು 2012ರ ಅಕ್ಟೋಬರ್‍‌ 10ರಂದು ಸಂಜೆ 6ರಿಂದ 7-30ರವರೆಗೆ ನಡೆಸಿದರು. ಮರಣೋತ್ತರ ಪರೀಕ್ಷೆ ನಡೆಸಿದ ಡಾ. ಆಡಮ್ ಮತ್ತು ಡಾ. ರಶ್ಮಿ ಅವರು ವಜಿನಲ್ ಸ್ವಾಬ್‌ನ್ನು ಸರಿಯಾಗಿ ಸಂಗ್ರಹಿಸಲು ವಿಫಲರಾದರು. ಇದರಿಂದಾಗಿ ಬೆಂಗಳೂರಿನಲ್ಲಿರುವ ಡಿಎನ್‌ಎ ಕೇಂದ್ರಕ್ಕೆ ಮಹಿಳೆಯ ವಜಿನಲ್ ಸ್ವಾಬ್‌ ಸಿಗಲಿಲ್ಲ ಎಂಬುದನ್ನು ತನಿಖೆ ವೇಳೆ ಗೊತ್ತಾಗಿದೆ ಎಂದು ಪತ್ರದಲ್ಲಿ ಸಿಬಿಐ ಹೇಳಿದೆ.

 

2012 ಅಕ್ಟೋಬರ್ 9ರಂದು ಮೃತಳು ತನ್ನ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗಿರಲಿಲ್ಲ. ಮತ್ತು ಊಟದ ವಿರಾಮದ ಸಮಯದಲ್ಲಿ ತನ್ನ ಸಹಪಾಠಿಗಳು ನೀಡಿದ್ದ ಆಹಾರವನ್ನೂ ಸ್ವೀಕರಿಸಲಿಲ್ಲ. ತನ್ನ ಮನೆಗೆ ಹಿಂತಿರುಗಿದ್ದಳು. ಹಾಗೂ ಅಜ್ಜನ ಮನೆಯಲ್ಲಿನ ನಿಗದಿಯಾಗಿದ್ದ ಸಮಾರಂಭದಲ್ಲಿ ಊಟ ಮಾಡುವ ಉದ್ದೇಶದಿಂದ ಸಹಪಾಠಿಗಳು ನೀಡಿದ್ದ ಊಟ ಮಾಡಿರಲಿಲ್ಲ.

 

 

ಆದರೆ ಡಾ ಆದಂ ಮತ್ತು ಡಾ ರಶ್ಮಿ ಅವರು ಮರಣೋತ್ತರ ಪರೀಕ್ಷೆ ವೇಳೆಯಲ್ಲಿ ಸೌಜನ್ಯಾಳ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಕಣಗಳು ಮತ್ತು ಸಣ್ಣ ಕರುಳಿನಲ್ಲಿ ಅರೆ-ಜೀರ್ಣವಾದ ಆಹಾರ ಕಣಗಳು ಕಂಡುಬಂದಿವೆ ಎಂದು ಅಭಿಪ್ರಾಯಿಸಿದ್ದರು. ಆದರೆ ಅದು ಅಸಂಭವ. ಏಕೆಂದರೆ ಅರೆ-ಜೀರ್ಣವಾದ ಆಹಾರ ಕಣಗಳನ್ನು ಹೊಂದಿರುವ ಸಣ್ಣ ಕರುಳು ವೈದ್ಯಕೀಯವಾಗಿ ನಿರ್ಣಾಯಕವಲ್ಲ. ಏಕೆಂದರೆ ಸಣ್ಣ ಕರುಳಿನಲ್ಲಿ ಹೀರಿಕೊಳ್ಳುವಿಕೆ ನಡೆದ ನಂತರ ಆಹಾರ ಕಣಗಳನ್ನು ಗುರುತಿಸಲು ಸಾಧ್ಯವಿಲ್ಲ. ಮತ್ತು ಪಿತ್ತರಸದ ಮಿಶ್ರಣದಿಂದಾಗಿ (ರಸದಿಂದ) ಅರೆ-ಲೋಳೆ ರಸ ವಸ್ತುವಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಸಿಬಿಐ ಸಂಸ್ಥೆಯು ತನ್ನ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

ಅಲ್ಲದೇ ಡಾ ಆದಂ ಮತ್ತು ಡಾ ರಶ್ಮಿ ಅವರು ಸೌಜನ್ಯಾಳ ಒಳಾಂಗಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸಲು ವಿಫಲರಾದರು. ಮತ್ತು ಮರಣೋತ್ತರ ಪ್ರಕ್ರಿಯೆಗಳನ್ನು ವೀಡಿಯೊ-ಚಿತ್ರೀಕರಿಸಲಿಲ್ಲ. ಸಂತ್ರಸ್ತೆಯ  ಬಲ ಮಣಿಕಟ್ಟಿನ ಮೇಲಿನ ವೃತ್ತಾಕಾರದ ಒತ್ತಡದ ಸವೆತವನ್ನು ಮರಣೋತ್ತರ ವರದಿಯಲ್ಲಿ ದಾಖಲಿಸಲು ಅವರು ವಿಫಲರಾಗಿದ್ದಾರೆ. ಇದು ಸಂತ್ರಸ್ತೆಯ  ಛಾಯಾಚಿತ್ರಗಳಿಂದ ಬರಿಗಣ್ಣಿಗೆ ಗೋಚರಿಸುತ್ತದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

 

ಕತ್ತು ಹಿಸುಕಿದ ಗುರುತು ಹೊಂದಿರುವ ಚರ್ಮವನ್ನು ಸಂರಕ್ಷಿಸಲು ಮತ್ತು ಸಂತ್ರಸ್ತೆಯ ಕುತ್ತಿಗೆ ಅಂಗಾಂಶದೊಂದಿಗೆ ಹಿಸ್ಟೋಪಥಾಲಾಜಿಕಲ್‌ ಪರೀಕ್ಷೆಗೆ ಕಳಿಸುವಲ್ಲಿಯೂ ವಿಫಲರಾದರು ಎಂದು ಸಿಬಿಐ ತನ್ನ ಪತ್ರದಲ್ಲಿ ದಾಖಲಿಸಿರುವುದು ಗೊತ್ತಾಗಿದೆ.

 

ಮರಣೋತ್ತರ ಪರೀಕ್ಷೆ ನಡೆಸಿರುವ ಕುರಿತಾದ ಎಲ್ಲಾ ದಾಖಲೆ, ವರದಿಗಳ ತನಿಖೆ ಪೂರ್ಣಗೊಂಡ ನಂತರ ಸಿಬಿಐ ಸಂಸ್ಥೆಯು ಡಾ ಆದಂ ಮತ್ತು ಡಾ ರಶ್ಮಿ ಅವರ ವೃತ್ತಿಪರ ಲೋಪಗಳನ್ನು ಸಾಬೀತುಪಡಿಸಿತ್ತು. ಇದನ್ನಾಧರಿಸಿಯೇ ಕಠಿಣ ದಂಡ ವಿಧಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು ಎಂಬುದು ಪತ್ರದಿಂದ ತಿಳಿದು ಬಂದಿದೆ.

 

ಆರೋಪಿ ಸಂತೋಷ್ ರಾವ್ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 302 ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಡಾ. ಆದಂ ಮತ್ತು ಡಾ. ರಶ್ಮಿ ಅವರು ಮಾಡಿರುವ ಲೋಪಗಳಿಗಾಗಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಶಿಫಾರಸ್ಸು ಮಾಡಿರುವ ಸಿಬಿಐ ಸಂಸ್ಥೆಯು, ಸರ್ಕಾರವು 1972ರ ಇಲಾಖೆ ವಿಚಾರಣೆ (ಸಾಕ್ಷಿಗಳ ಹಾಜರಾತಿ ಮತ್ತು ದಾಖಲೆಗಳ ಸಲ್ಲಿಕೆ ) ಕಾಯ್ದೆ ಅಡಿಯಲ್ಲಿ ನೀಡಿರುವ ಅಧಿಕಾರ ಬಳಸಬಹುದು. ಈ ಮೂಲಕ ಸಾಕ್ಷಿಗಳಿಗೆ ಸಮನ್ಸ್‌ ಮಾಡಬಹುದು ಎಂದೂ ಸಿಬಿಐ ಪತ್ರದಲ್ಲಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.

 

 

ಸಿಬಿಐ ಸಂಸ್ಥೆಯು ನೀಡಿರುವ ಈ ವರದಿಯನ್ನು ಗೌಪ್ಯ ಎಂದು ಪರಿಗಣಿಸಬೇಕು. ಆರ್‍‌ಟಿಐ ಅಡಿಯಲ್ಲಿ ಮಾಹಿತಿ ಕೋರಿದರೆ, ಸಿಬಿಐಗೆ ಮಾಹಿತಿ ತಿಳಿಸಬೇಕು ಎಂದು ಹೇಳಿರುವುದು ತಿಳಿದು ಬಂದಿದೆ.

 

ಕುಮಾರಿ  ಸೌಜನ್ಯ  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ ಆದಂ ಉಸ್ಮಾನ್‌ ಮತ್ತು ಡಾ ಎನ್‌ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು  ಸಿಬಿಐ ಸಂಸ್ಥೆಯು ಮಾಡಿದ್ದ ಶಿಫಾರಸ್ಸಿನ ಕುರಿತು ಕೈಗೊಂಡಿರುವ ಕ್ರಮಗಳ ಕುರಿತಾದ ಮಾಹಿತಿಯನ್ನು ಸಾರ್ವಜನಿಕಗೊಳಿಸಬಹುದೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿಬಿಐ ಸಂಸ್ಥೆಗೆ ಪತ್ರ ಬರೆದಿದೆ.

 

ಸೌಜನ್ಯ ಕೊಲೆ; ಕಡತ ಸಾರ್ವಜನಿಕಗೊಳಿಸಬಹುದೇ, ಸಿಬಿಐ ಅಭಿಪ್ರಾಯ ಕೋರಿದ ಸರ್ಕಾರ

ಡಾ ಆದಂ ಉಸ್ಮಾನ್‌ ಮತ್ತು ಡಾ ಎನ್‌ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಸಿಬಿಐ ಶಿಫಾರಸ್ಸು ಮಾಡಿತ್ತು. ಈ ಕುರಿತು ಕ್ರಮಕೈಗೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಮುಂದಾಗಿತ್ತು. ಈ ಸಂಬಂಧ ಒಳಾಡಳಿತ ಇಲಾಖೆಯೂ ಆರೋಗ್ಯ ಇಲಾಖೆಗೆ ಪತ್ರ ವ್ಯವಹಾರ ನಡೆಸಿತ್ತು. ಆದರೀಗ ಈ ಮಾಹಿತಿಯನ್ನು ಆರ್‍‌ಟಿಐ ಅಡಿಯಲ್ಲಿ ಸಾರ್ವಜನಿಕಗೊಳಿಸಬಹುದೇ ಎಂದು ಸಿಬಿಐ ಸಂಸ್ಥೆಯನ್ನೇ ಸರ್ಕಾರವು ಕೋರಿರುವುದು ಚರ್ಚೆಗೆ ಗ್ರಾಸವಾಗಿತ್ತು.

 

 

 

ಆದರೆ ತಿಂಗಳಾದರೂ ಮಾಹಿತಿ ನೀಡದ ಕಾರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು  ಜೂನ್‌ 25ರಂದು ಮತ್ತೊಂದು ನೆನಪೋಲೆಯನ್ನು ಬರೆದಿತ್ತು.

 

ಡಾ ಆದಂ ಉಸ್ಮಾನ್‌ ಮತ್ತು ಡಾ ಎನ್‌ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಸಿಬಿಐ  ಪ್ರಸ್ತಾವಿಸಿತ್ತು.

 

ಇಲಾಖೆಯ ಟಿಪ್ಪಣಿ ಹಾಳೆಯಲ್ಲೇನಿತ್ತು?

 

ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕುಮಾರಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯಿಂದ ಸ್ವೀಕೃತಗೊಂಡ ಪತ್ರದಲ್ಲಿ ಪ್ರಸ್ತಾವಿಸಿರುವಂತೆ ಡಾ ಆದಂ ಉಸ್ಮಾನ್‌ ಮತ್ತು ಡಾ ಎನ್‌ ರಶ್ಮಿ  ಅವರ ವಿರುದ್ಧ ಕಠಿಣ ದಂಡನೆ ವಿಧಿಸಲು ಪ್ರಸ್ತಾಪಿಸಿತ್ತು.   ಈ ಬಗ್ಗೆ ಕೈಗೊಂಡ ಕ್ರಮದ ಮಾಹಿತಿಯನ್ನು ಒದಗಿಸಬೇಕು ಎಂದು (ಕಡತ ಸಂಖ್ಯೆ; HD 06 CID 2013 ದಿ. 21.02.2017) ಅಧಿಕೃತ ಜ್ಞಾಪನದಲ್ಲಿ ತಿಳಿಸಿತ್ತು.

 

ಸೌಜನ್ಯ ಕೊಲೆ; ಆದಂ ಉಸ್ಮಾನ್‌, ಡಾ ಎನ್‌ ರಶ್ಮಿ ವಿರುದ್ಧ ಕಠಿಣ ದಂಡನೆ, ಸಿಬಿಐ ಶಿಫಾರಸ್ಸು ಪತ್ರ ಮುಚ್ಚಿಟ್ಟಿದೆಯೇ?

 

 

ಒಳಾಡಳಿತ ಇಲಾಖೆಯು   ಸಿಬಿಐ ಸಂಸ್ಥೆಯು ಸಲ್ಲಿಸಿರುವ ಮೂಲ ತನಿಖಾ ವರದಿಯನ್ನು ಒದಗಿಸಿರುವುದಿಲ್ಲ. ಇದರಿಂದಾಗಿ ಸಿಬಿಐ ಸಂಸ್ಥೆಯ ಶಿಫಾರಸ್ಸಿನ್ವಯ ಕ್ರಮವಹಿಸಲು ವಿಳಂಬವಾಗುತ್ತಿರುತ್ತದೆ. ಈ ಬಗ್ಗೆ ಪರಿಶೀಲಿಸಲು ಸಿಬಿಐ ವರದಿಯು ಹಾಗೂ ಎಫ್‌ಎಸ್ಎಲ್‌ ರಿಪೋರ್ಟ್‌ನ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಂಸ್ಥೆಯು ಸಲ್ಲಿಸಿರುವ ತನಿಖಾ ವರದಿ ಮತ್ತು ಎಫ್‌ಎಸ್‌ಎಲ್‌ ರಿಪೋರ್ಟ್‌ನ್ನು ಈ ದಿನವೇ ಒದಗಿಸುವಂತೆ, ಇದನ್ನು ಅತ್ಯಂತ ಜರೂರು ಎಂದು ಪರಿಗಣಿಸುವಂತೆ ಕೋರಿರುತ್ತಾರೆ ಎಂದು ಟಿಪ್ಪಣಿ ಹಾಳೆಯಲ್ಲಿ ವಿವರಿಸಿತ್ತು.

 

 

 

 

ಒಳಾಡಳಿತ ಇಲಾಖೆಯು ಈ ಅಂಶವನ್ನು ಪರಿಶೀಲಿಸಿದೆ. ಈ ಕೋರಿಕೆಯನ್ನೂ ಸಹ ಒಳಾಡಳಿತ ಇಲಾಖೆಯು ತೆರೆದಿದ್ದ HD 06 CID 2013 ರಲ್ಲಿ ಇರಿಸಿತ್ತು. ಈ ದಾಖಲೆಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒದಗಿಸಲು ಮೇಲಾಧಿಕಾರಿಗಳಿಗೆ ಮಂಡಿಸಿತ್ತು.

 

 

 

ಇದನ್ನು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದ ಐಪಿಎಸ್‌  ಶರತ್‌ ಚಂದ್ರ  ಅವರು ಸಹ ಅನುಮೋದಿಸಿದ್ದರು.

 

 

 

ಈ ಕುರಿತು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರೊಂದಿಗೆ ಒಳಾಡಳಿತ ಇಲಾಖೆಯ ಅಧಿಕಾರಿಗಳು ಚರ್ಚಿಸಿದ್ದರು.

 

ಸೌಜನ್ಯ ಕೊಲೆ ಮರು ತನಿಖೆ; ಸಿಐಡಿ ಡಿಜಿಪಿ ಸಲೀಂ ಅವರ ಅಭಿಪ್ರಾಯ ವರದಿ ಬಹಿರಂಗ

ಡಾ ಆದಂ ಉಸ್ಮಾನ್ ಮತ್ತು ಡಾ ಎನ್‌ ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು ಸಿಬಿಐ ಪತ್ರ ಬರೆದಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು ಎಂಬುದನ್ನು ಸ್ಮರಿಸಬಹುದು.

 

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್‌ಸಿಂಹ್‌ ನಾಯಕ್‌, ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ  ರವಿಕೃಷ್ಣಾರೆಡ್ಡಿ ಸೇರಿದಂತೆ  ಹಲವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದನ್ನು ಸ್ಮರಿಸಬಹುದು.

 

ಸೌಜನ್ಯ ಹತ್ಯೆ ಮರು ತನಿಖೆ; ಅಡ್ವೋಕೇಟ್ ಜನರಲ್ ಕಚೇರಿಯಿಂದ ಬಾರದ ಕಾನೂನು ಅಭಿಪ್ರಾಯ!

 

ಶಾಸಕರಿಬ್ಬರ ಕೋರಿಕೆ ಸಂಬಂಧ ಒಳಾಡಳಿತ ಇಲಾಖೆಯಲ್ಲಿ ತೆರೆದಿದ್ದ ಕಡತವು ಕಳೆದ 18 ತಿಂಗಳಿನಿಂದಲೂ  ತೆವಳಿತ್ತು.   2023ರಲ್ಲಿ ತೆರೆದಿದ್ದ ಕಡತವನ್ನು 2025ರ ಜನವರಿಯಲ್ಲಿ ಮುಕ್ತಾಯಗೊಳಿಸಿತ್ತು.

 

ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ; 18 ತಿಂಗಳಿನಿಂದಲೂ ತೆವಳಿದ ಕಡತ, ಹೊರಬೀಳದ ತೀರ್ಮಾನ

 

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ, ವಿಧಾನ ಪರಿಷತ್ ಸದಸ್ಯ ಕೆ ಪ್ರತಾಪ್‌ಸಿಂಹ್‌ ನಾಯಕ್‌ ಅವರು ಈ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಮರು ತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಲು ಹೈಕೋರ್ಟ್‌ ಕೂಡ  ನಿರಾಕರಿಸಿತ್ತು.

 

ಹೀಗಾಗಿ ಪ್ರಕರಣದ ಕುರಿತು ಮರು ತನಿಖೆ ನಡೆಸಬೇಕು ಎಂದು ಸರ್ಕಾರದ ಮೇಲೆ ಸಾರ್ವಜನಿಕ  ಒತ್ತಡ ಹೆಚ್ಚಿದ್ದ ಸಂದರ್ಭದಲ್ಲೇ  ಈ ಕುರಿತು ತೀರ್ಮಾನ ಕೈಗೊಳ್ಳಲು  ಗೃಹ ಇಲಾಖೆಯು ಕಾನೂನು ಇಲಾಖೆಯ ಮೊರೆ ಹೊಕ್ಕಿತ್ತು.

 

ಸೌಜನ್ಯ ಪ್ರಕರಣ ಮರು ತನಿಖೆಗೆ ಹೆಚ್ಚಿದ ಒತ್ತಡ; ಕಾನೂನು ಅಭಿಪ್ರಾಯ ಪಡೆಯಲು ಮುಂದಾದ ಗೃಹ ಇಲಾಖೆ

 

‘ ನಾಗರಿಕರ ಭಾವನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರವು ಕು.ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸೌಜನ್ಯಗಳಿಗೆ ಮತ್ತು ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಕೋರಿರುವುದರಿಂದ ಆಡಳಿತ ಇಲಾಖೆಯವರು ಈ ಕುರಿತ ಸಿಬಿಐನಲ್ಲಿ ಮುಕ್ತಾಯಗೊಂಡಿರುವ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ವಹಿಸಲು ಅವಕಾಶವಿದೆಯೇ ಎಂಬ ಬಗ್ಗೆ ಅಭಿಪ್ರಾಯ ಕೋರಿ ಕಡತವನ್ನು ಸಲ್ಲಿಸಲಾಗಿದೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿತ್ತು.

 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ನೀಡುವ ಸಲುವಾಗಿ ಪ್ರಕರಣದಲ್ಲಿ ಸಾಕ್ಷಿಗಳು ನೀಡಿರುವ ಹೇಳಿಕೆಯ ಪ್ರತಿ ಮತ್ತು ಬೆಂಗಳೂರಿನಲ್ಲಿರುವ ಹೆಚ್ಚುವರಿ ಸಿಟಿ ಸಿವಿಲ್‌ ಸೆಷನ್ಸ್‌ ನ್ಯಾಯಾಲಯ (children’s court (special bengaluru (cch-51)ದಲ್ಲಿ ದಾಖಲಾಗಿರುವ ಪ್ರಕರಣ (Spl. CC NO 203/2016)ದಲ್ಲಿ 2021ರ ಅಕ್ಟೊಬರ್‍‌ 4ರಂದು ನೀಡಿರುವ ಆದೇಶದ ಪ್ರತಿಗಳನ್ನು ಪರಿಶೀಲಿಸುವುದು ಅವಶ್ಯಕವಾಗಿದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯಿಸಿತ್ತು.

 

ಈ ಪ್ರಕರಣದ ಕುರಿತು ಅಭಿಪ್ರಾಯ ನೀಡಲು ದಾಖಲೆಗಳನ್ನು ಒದಗಿಸಬೇಕು ಎಂದು ಗೃಹ ಇಲಾಖೆಗೆ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಪತ್ರ ಬರೆದಿದೆ. ಪ್ರಕರಣದಲ್ಲಿ ಕಾನೂನು ಇಲಾಖೆ ಅಭಿಪ್ರಾಯ ಕೋರುವ ಸಂಬಂಧ ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಮತ್ತು ಕಾನೂನು ಸಚಿವ ಹೆಚ್‌ ಕೆ ಪಾಟೀಲ್‌ ಚರ್ಚಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts