ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಲೋಪ; ಗುತ್ತಿಗೆದಾರರಿಂದಲೇ ಸಾಕ್ಷ್ಯ, ಕ್ರಮವಹಿಸದೇ ಕೈಕಟ್ಟಿ ಕುಳಿತ ಸರ್ಕಾರ

ಬೆಂಗಳೂರು; ನಗರಾಭಿವೃದ್ಧಿ, ಪೌರಾಡಳಿತ, ಲೋಕೋಪಯೋಗಿ ಇಲಾಖೆಯು ಸರ್ಕಾರದ ಆದೇಶಗಳಿಗೆ ವಿರುದ್ಧವಾಗಿ ಟೆಂಡರ್‍‌ ಪ್ರಕ್ರಿಯೆಗಳನ್ನು ನಡೆಸುತ್ತಿವೆ. 2008ರಲ್ಲಿ ಸರ್ಕಾರವು ಜಾರಿಗೆ ತಂದಿರುವ ಮಾರ್ಪಾಡುಗಳನ್ನು ಅಳವಡಿಸಿಕೊಳ್ಳದೇ ಭ್ರಷ್ಟಾಚಾರಕ್ಕೆ ದಾರಿಮಾಡಿಕೊಡುತ್ತಿರುವ ಹಲವು ಪ್ರಕರಣಗಳು ಇದೀಗ ಬಹಿರಂಗವಾಗಿವೆ.

 

ಟೆಂಡರ್‍‌ಗಳಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ ಗುತ್ತಿಗೆದಾರರನ್ನೂ ಅನರ್ಹಗೊಳಿಸಲಾಗುತ್ತಿದೆ. ಅಲ್ಲದೇ ಅನೇಕ ಗುತ್ತಿಗೆದಾರರನ್ನು ತಾಂತ್ರಿಕವಾಗಿಯೂ ಅರ್ಹತೆ ಪಡೆದುಕೊಳ್ಳದಂತೆ ಭ್ರಷ್ಟರ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯಾಚರಿಸುತ್ತಿದೆ.

 

ಕೆಡಬ್ಲ್ಯೂ 1, 2 ಮತ್ತು 3ಯಲ್ಲಿನ ಟೆಂಡರ್‍‌ ದಾಖಲಾತಿಗಳನ್ನು ಮಾರ್ಪಾಡುಗೊಳಿಸಬೇಕು. 2008 ರಲ್ಲಿ ಹೊರಡಿಸಿರುವ ಸರ್ಕಾರದ ಆದೇಶದಲ್ಲೂ ಕೆಲವು ಮಾರ್ಪಾಡು ಅಳವಡಿಸಿ ಟೆಂಡರ್‍‌ ಆಹ್ವಾನಿಸಬೇಕು. ಆದರೆ ಈ ಯಾವುದನ್ನೂ ಇಲಾಖೆಗಳು ಅಳವಡಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.

 

ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಪೌರಾಡಳಿತ ಸಚಿವ ರಹೀಂ ಖಾನ್‌ ಮತ್ತು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಹಲವು ಗುತ್ತಿಗೆದಾರರು ಈ ಕುರಿತು ಪತ್ರ ಮತ್ತು ದೂರನ್ನೂ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

 

ಗುತ್ತಿಗೆದಾರರಾದ ರಾಧಾಮಣಿ ಎಂಬುವರು 2024ರ ಡಿಸೆಂಬರ್‍‌ 12, 2025ರ ಜನವರಿ ಮತ್ತು ಏಪ್ರಿಲ್‌ನಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಹಲವು ದೂರು, ಪತ್ರಗಳನ್ನು ಬರೆದಿದ್ದಾರೆ. ಸರ್ಕಾರದ ಆದೇಶಗಳಿಗೆ ವಿರುದ್ಧವಾಗಿ ನಗರಸಭೆ ಮತ್ತು ಪುರಸಭೆಗಳು ನಡೆಸುತ್ತಿರುವ ಟೆಂಡರ್ ಪ್ರಕ್ರಿಯೆಗಳಲ್ಲಿ ಲೋಪ, ನಿಯಮ ಉಲ್ಲಂಘನೆ, ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಾಕ್ಷ್ಯಗಳನ್ನು ಒದಗಿಸಿದ್ದಾರೆ.  ಆದರೂ ಸರ್ಕಾರವು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ.

 

ರಾಧಾಮಣಿ ಎಂಬುವರು ಸರ್ಕಾರಕ್ಕೆ ಬರೆದಿರುವ ಪತ್ರಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಟೆಂಡರ್‍‌ ಪ್ರಕ್ರಿಯೆಗಳಲ್ಲಿಯೇ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಸಾಕ್ಷ್ಯ, ಪುರಾವೆ ಸಮೇತ ಅನೇಕ ಗುತ್ತಿಗೆದಾರರು, ನಗರಾಭಿವೃದ್ದಿ ಇಲಾಖೆ, ಪೌರಾಡಳಿತ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ. ಆದರೆ ಈ ಯಾವ ದೂರುಗಳನ್ನು ಲೆಕ್ಕಿಸುತ್ತಿಲ್ಲ. ಹೀಗಾಗಿ ಪುರಸಭೆ, ನಗರಸಭೆಗಳಲ್ಲಿ ಭ್ರಷ್ಟಾಡಳಿತವು ಎಗ್ಗಿಲ್ಲದೇ ಮುಂದುವರೆದಿದೆ.

 

ಕೆ ಡಬ್ಲ್ಯೂ 01, 02 ಮತ್ತು 03 ಟೆಂಡರ್‍‌ ದಾಖಲಾತಿಗಳನ್ನು ಮಾರ್ಪಾಡುಗೊಳಿಸಿ 2008ರಲ್ಲೇ ಸರ್ಕಾರವು ಆದೇಶ ಹೊರಡಿಸಿದೆ. ಆರ್ಥಿಕ ಇಲಾಖೆಯೂ ಸಹ ಎಲ್ಲಾ ಇಲಾಖೆಗಳಿಗೆ (FD 4 PCL 2008, 14.10.2008) ಸುತ್ತೋಲೆಯನ್ನೂ ಕಳಿಸಿದೆ.

 

ಸುತ್ತೋಲೆಯಲ್ಲೇನಿದೆ?

 

1 ಕೋಟಿವರೆಗಿನ ಕಾಮಗಾರಿಗಳಿಗೆ ಕೆಡಬ್ಲ್ಯೂ 1, 2 ಮತ್ತು 3 ರ ಬಿಡ್‌ಗಳಿಗೂ ಸಹ ಲೆಟರ್‍‌ ಆಫ್‌ ಕ್ರೆಡಿಟ್‌ನ ಅಂಶವನ್ನು ಪೂರ್ವಾಹತೆಗಾಗಿ ಅಳವಡಿಸಬೇಕು.

 

 

1 ಕೋಟಿವರೆಗಿನ ಕಾಮಗಾರಿಗಳಲ್ಲಿ ಟೆಂಡರ್‍‌ಗಿಟ್ಟ ಕಾಮಗಾರಿಯಲ್ಲಿ ಅಳವಡಿಸಿರುವ ಪ್ರಮಾಣ ಕಾಮಗಾರಿ ಅಂಶಗಳ ಶೇ.80ರಷ್ಟು ಪರಿಮಾಣಗಳನ್ನು  ಟೆಂಡರ್‍‌ ಅರ್ಹತೆಯನ್ನಾಗಿ ನಿಗದಿಪಡಿಸಬೇಕು.

 

 

ಆ ಪ್ರಕಾರ ಕೆಡಬ್ಲ್ಯೂ 1 (20 ಲಕ್ಷದವರೆಗೆ ), ಕೆ ಡಬ್ಲ್ಯೂ 2 (20 ಲಕ್ಷಕ್ಕಿಂತ ಮೇಲ್ಪಟ್ಟು 50 ಲಕ್ಷದವರೆಗೆ), ಕೆಡಬ್ಲ್ಯೂ 3 50 ಲಕ್ಷಕ್ಕಿಂತ ಮೇಲ್ಪಟ್ಟು 1 ಕೋಟಿವರೆಗೆ) ಸ್ಟ್ಯಾಂಡರ್ಡ್‌ ಟೆಂಡರ್ ಡಾಕ್ಯುಮೆಂಟ್‌ಗಳಲ್ಲಿ ಟೆಂಡರ್‍‌ ಅರ್ಹತೆಯನ್ನು ನಿಗದಿಪಡಿಸಿದೆ.

 

 

ಈ ಸುತ್ತೋಲೆಯಂತೆ ಮಾರ್ಪಾಡುಗಳನ್ನು ಮಾಡಿಕೊಳ್ಳಬೇಕು ಎಂದು ಗುತ್ತಿಗೆದಾರರೂ ಇಲಾಖೆಗಳಿಗೆ ಪತ್ರ ಬರೆಯುತ್ತಿದ್ದಾರೆ. ಆದರೆ ಇದುವರೆಗೂ ಈ ಸಂಬಂಧ ಯಾವುದೇ ಕ್ರಮವಹಿಸಿಲ್ಲ. ಮೊದಲ ರೀತಿಯಲ್ಲಿಯೇ ಟೆಂಡರ್‍‌ ಪ್ರಕ್ರಿಯೆ ನಡೆಸುತ್ತಿವೆ ಎಂದು ದೂರಿನಲ್ಲಿ ಆರೋಪಿಸಿರುವುದು ಗೊತ್ತಾಗಿದೆ.

 

ಈ ಸಂಬಂಧ ಗುತ್ತಿಗೆದಾರರಾದ ರಾಧಾಮಣಿ ಎಂಬುವರು ಲೋಕೋಪಯೋಗಿ ಮುಖ್ಯ ಅಭಿಯಂತರರಿಗೆ 2025ರ ಏಪ್ರಿಲ್‌14ರಂದು ದೂರು ಸಲ್ಲಿಸಿದ್ದಾರೆ. ಆದರೆ ಈ ದೂರುಗಳಲ್ಲಿ ಮಾಡಿರುವ ಯಾವುದೇ ಅಪಾದನೆಗಳಿಗೆ ಎರಡೂ ಇಲಾಖೆಗಳು ಯಾವುದೇ ವಿವರಣೆ ನೀಡಿಲ್ಲ ಎಂದು ತಿಳಿದು ಬಂದಿದೆ.

 

 

ಕೆ ಡಬ್ಲ್ಯೂ 1 ಗೆ ಪರವಾನಿಗೆ, ಬಿಡ್‌ ಕೆಪಾಸಿಟಿ ಮಾತ್ರ ಬೇಕಾಗಿದೆ. ಆದರೆ ವರ್ಕ್‌ ಡನ್‌ ಸರ್ಟಿಫಿಕೇಟ್, ಟರ್ನ್‌ ಓವರ್‍‌, ಬಿಡ್‌ ಕೆಪಾಸಿಟಿ, ಶೇ.80 ರಷ್ಟು ಕ್ವಾಂಟಿಟಿ ಎಕ್ಸೂಕ್ಯೂಟಿಟೆಡ್‌ ನೀಡುತ್ತಿವೆ. ಪೌರಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯು ಕೆ ಡಬ್ಲ್ಯೂ 2 ಗೆ ಪರವಾನಿಗೆ, ವರ್ಕ್ ಡನ್‌ ಸರ್ಟಿಫಿಕೇಟ್, ಟರ್ನ್ ಓವರ್‍‌, ಲೈನ್‌ ಆಫ್‌ ಕ್ರೆಡಿಟ್‌ ಮತ್ತು ಬಿಡ್‌ ಕೆಪಾಸಿಟಿ ಮಾತ್ರ ಕೇಳಬೇಕು. ಆದರೆ ಈ ಎರಡೂ ಇಲಾಖೆಯು ವರ್ಕ್‌ ಡನ್‌ ಸರ್ಟಿಫಿಕೇಟ್, ಟರ್ನ್‌ ಓವರ್‍‌, ಬಿಡ್‌ ಕೆಪಾಸಿಟಿ, ಶೇ.80 ರಷ್ಟು ಕ್ವಾಂಟಿಟಿ ಎಕ್ಸೂಕ್ಯೂಟಿಟೆಡ್‌ ಮಾತ್ರ ಕೇಳುತ್ತಿದೆ.

 

ಕೆಡಬ್ಲ್ಯೂ 3 ಗೆ ಪರವಾನಿಗೆ, ವರ್ಕ್ ಡನ್‌ ಸರ್ಟಿಫಿಕೇಟ್, ಶೇ.80 ರಷ್ಟು ಕ್ವಾಂಟಿಟಿ ಎಕ್ಸೂಕ್ಯೂಟಿಟೆಡ್‌, ಟರ್ನ್ ಓವರ್‍‌, ಲೈನ್‌ ಆಫ್‌ ಕ್ರೆಡಿಟ್‌, ಬಿಡ್‌ ಕೆಪಾಸಿಟಿ, ಕಾನ್‌ಸ್ಟಾಂಟ್‌ 1.5 ಮಾತ್ರ ಕೇಳಬೇಕು. ಆದರೆ ಪೌರಾಡಳಿತ, ಲೋಕೋಪಯೋಗಿ ಇಲಾಖೆಯು ಬಿಡ್‌ ಕೆಪಾಸಿಟಿ ಕಾನ್‌ಸ್ಟಾಂಟ್‌ 2.5 ಕೇಳುತ್ತಿದೆ. ಇದು 2008ರಲ್ಲಿ ಸರ್ಕಾರವು ಹೊರಡಿಸಿದ್ದ ಆದೇಶಕ್ಕೆ ವಿರುದ್ಧವಾಗಿದೆ ಎಂದು ಗುತ್ತಿಗೆದಾರರಾದ ರಾಧಾಮಣಿ ಎಂಬುವರು ಪತ್ರದಲ್ಲಿ ದೂರಿರುವುದು ಗೊತ್ತಾಗಿದೆ.

 

 

ಇದಕ್ಕೆ ಚಿಕ್ಕಬಾಣಾವರ ಪುರಸಭೆಯ ಟೆಂಡರ್ ಪ್ರಕ್ರಿಯೆಯನ್ನು ನಿದರ್ಶನವನ್ನು ಒದಗಿಸಿದ್ದಾರೆ. ಚಿಕ್ಕಬಾಣವಾರ ಪುರಸಭೆಯು ಕೆಟಿಪಿಪಿ ಪೋರ್ಟಲ್‌ನಲ್ಲಿ ಟೆಂಡರ್‍‌ (DMA/2024-25/WORK_INDENT 37811) ಆಹ್ವಾನಿಸಿತ್ತು. ಈ ಟೆಂಡರ್‍‌ನಲ್ಲಿನ ಷರತ್ತುಗಳನ್ನು ಮಾರ್ಪಾಡಿಸಬೇಕು ಎಂದು ರಾಧಾಮಣಿ ಅವರು ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆದು ಪ್ರಶ್ನಿಸಿದ್ದರು.

 

 

ಇದಕ್ಕೆ ಉತ್ತರಿಸಿದ್ದ ಮುಖ್ಯಾಧಿಕಾರಿ ‘ 2008ರ ಆಕ್ಟೋಬರ್‍‌14ರಂದು ಹೊರಡಿಸಿದ್ದ ಸುತ್ತೋಲೆಗೆ ಅನುಗುಣವಾಗಿ ಟೆಂಡರ್ ಪ್ರಕಟಿಸಿದೆ. ತಾವು ಪ್ರಶ್ನಿಸಿರುವ ಪೌರಾಡಳಿತ ನಿರ್ದೇಶನಾಲಯದ ಪತ್ರಕ್ಕೂ ಸಹ standard bid documents ಗಳ ತಿದ್ದುಪಡಿ ಆದೇಶಗಳಲ್ಲಿ ಸ್ಪಷ್ಟೀಕರಣ, ಮಾರ್ಪಾಡು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ,’ ಎಂದು 2025ರ ಜನವರಿ 1ರಂದು ವಿವರಿಸಿರುವುದು ತಿಳಿದು ಬಂದಿದೆ.

 

ಮುಖ್ಯಾಧಿಕಾರಿ ಹಿಂಬರಹ ನೀಡಿದ ನಂತರವೂ ರಾಧಾಮಣಿ ಅವರು ಪೌರಾಡಳಿತ ಇಲಾಖೆಯ ನಿರ್ದೇಶಕರಿಗೆ 2025ರ ಜನವರಿ 21ರಂದು ದೂರು ನೀಡಿದ್ದರು.

 

ದೂರಿನಲ್ಲೇನಿದೆ?

 

ಕೆಡಬ್ಲ್ಯೂ 01, 02 ಮತ್ತು 03 ರಲ್ಲಿ ಟೆಂಡರ್‍‌ ದಾಖಲಾತಿಗಳನ್ನು ಮಾರ್ಪಾಡುಗೊಳಿಸಿ ಸರ್ಕಾರವು 2008ರಲ್ಲಿ ಆದೇಶ ಹೊರಡಿಸಿದೆ. ಇದರ ಪ್ರಕಾರವೇ ಮಾರ್ಪಾಡುಗಳನ್ನು ಅಳವಡಿಸಿಕೊಂಡು ಟೆಂಡರ್‍‌ಗಳನ್ನು ಆಹ್ವಾನಿಸಲು ಎಲ್ಲಾ ಇಲಾಖೆಗಳಿಗೂ ನಿರ್ದೇಶಿಸಿದೆ. ಆದರೂ ಸಹ ಇದುವರೆಗೂ ಯಾವುದೇಕ್ರಮ ವಹಿಸದೇ ಮೊದಲ ರೀತಿಯಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಪೌರಾಡಳಿತ ಇಲಾಖೆಯಲ್ಲಿಯೂ ಆದೇಶಕ್ಕೆ ವಿರುದ್ಧವಾಗಿ ಕೆಲವೊಂದು ಮಾರ್ಪಾಡುಗಳನ್ನು ಮಾರ್ಪಾಡಿಸಿ ಟೆಂಡರ್‍‌ ಆಹ್ವಾನಿಸಲಾಗುತ್ತಿದೆ,’ ಎಂದು ದೂರಿನಲ್ಲಿ ವಿವರಿಸಿದ್ದರು.

 

 

‘ಆರ್ಥಿಕ ಇಲಾಖೆಯು 2008ರಲ್ಲಿ ಹೊರಡಿಸಿರುವ ಆದೇಶವನ್ನು ಪೌರಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಟೆಂಡರ್‍‌ ಕರೆಯುತ್ತಿವೆ. ಅದನ್ನು ಸರಿಪಡಿಸಲು ಇಲಾಖೆಯ ವಿಭಾಗಗಳಿಗೆ ಆದೇಶಿಸಬೇಕು. ಟೆಂಡರ್‍‌ನಲ್ಲಿ ಭಾಗವಹಿಸಲು ಅರ್ಹರಿದ್ದರೂ ಸಹ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಮಾರ್ಪಾಡು ಮಾಡಿಕೊಂಡು ನಮ್ಮನ್ನು ಅನರ್ಹಗೊಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಮಗೆ ಯಾವುದೇ ಟೆಂಡರ್‍‌ನಲ್ಲಲಿ ಭಾಗವಹಿಸಿದರೂ ತಾಂತ್ರಿಕವಾಗಿ ಅರ್ಹತೆ ಪಡೆದುಕೊಳ್ಳುವಲ್ಲಿ ವಿಫಲರಾಗುತ್ತಿದ್ದೇವೆ,’ ಎಂದು ದೂರಿನಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts