ಖಾಸಗಿ ಕಟ್ಟಡದಲ್ಲಿ ಸರ್ಕಾರಿ ಕಡತಗಳ ಅಕ್ರಮ ಸಂಗ್ರಹ; ಬಹುಕೋಟಿ ಮೊತ್ತದ ಕಾಮಗಾರಿ ದಾಖಲೆಗಳು ಪತ್ತೆ

ಬೆಂಗಳೂರು; ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪಂಚಾಯ್ತಿಗಳ ಕಾಮಗಾರಿಗಳಿಗೆ ಸಂಬಂಧಿಸಿದ ಕಡತ, ದಾಖಲೆಗಳನ್ನು ಖಾಸಗಿ ವ್ಯಕ್ತಿಗಳ ಮತ್ತು ಖಾಸಗಿ ಕಟ್ಟಡಗಳಲ್ಲಿ ಅಕ್ರಮವಾಗಿ ಸಂಗ್ರಹಣೆ ಮಾಡಿದ್ದ ಪ್ರಕರಣಗಳು ಬಹಿರಂಗವಾಗಿವೆ.

 

ಪಂಚಾಯ್ತಿಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕಡತಗಳು ಆಯಾ ಪಂಚಾಯ್ತಿಗಳ ದಾಖಲೆಗಳ ಕೊಠಡಿಗಳಲ್ಲೇ ಸುರಕ್ಷಿತವಾಗಿಡಬೇಕು. ಆದರೆ ರಾಜ್ಯದ ಹಲವೆಡೆ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆ ಮತ್ತು ಕಡತಗಳನ್ನು ಖಾಸಗಿ ವ್ಯಕ್ತಿಗಳು ಮತ್ತು ಖಾಸಗಿ ಕಟ್ಟಡಗಳಲ್ಲಿ ಸಂಗ್ರಹಿಸಿಡುತ್ತಿದ್ದರೂ ಸಹ ಸಂಬಂಧಪಟ್ಟ ಇಲಾಖೆ ಸಚಿವರುಗಳು ಮತ್ತು ಅಧಿಕಾರಿವರ್ಗವು ಮೌನ ವಹಿಸಿದೆ.

 

ಅಲ್ಲದೇ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪತ್ತೆ ಹಚ್ಚುವವರೆಗೂ ಇಲಾಖೆಗಳ ಮೇಲಾಧಿಕಾರಿಗಳು ಮೌನ ವಹಿಸುತ್ತಿದ್ದಾರೆ. ಬೆರಳಣಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಕ್ರಮ ಜರುಗಿಸುತ್ತಿದೆ.

 

ಇಂತಹದೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ತಡವಾಗಿ ಶಿಸ್ತು ಕ್ರಮ ಜರುಗಿಸಿದೆ. ಹಾಗೆಯೇ ಈ ಪ್ರಕರಣದಲ್ಲಿ ಆಪಾದಿತ ಅಧಿಕಾರಿಯನ್ನು ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಪೂರ್ವಾನುಮತಿ ನೀಡಿ ಆದೇಶ ಹೊರಡಿಸಿದೆ.

 

2025ರ ಜೂನ್‌ 13ರಂದು ಹೊರಡಿಸಿರುವ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ವಿಠಲ ಶಿವಪ್ಪ ಚಂದರಗಿ ಅವರನ್ನು  ವಿಚಾರಣೆ ನಡೆಸಲು ಸಮಾಜ ಕಲ್ಯಾಣ ಇಲಾಖೆಯು ಲೋಕಾಯುಕ್ತ ಪೊಲೀಸರಿಗೆ ಪೂರ್ವಾನುಮತಿ ನೀಡಿದೆ. ಈ ಸಂಬಂಧ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರು ಅನುಮೋದನೆ ನೀಡಿದ್ದಾರೆ ಎಂದು ಗೊತ್ತಾಗಿದೆ.

 

ಪ್ರಕರಣದ ವಿವರ

 

ರಾಯಭಾಗ ಪಟ್ಟಣದಲ್ಲಿರುವ ಕಿತ್ತೂರೆ ಕುಟುಂಬಕ್ಕೆ ಸಂಬಂಧಿಸಿದ ರಾಯಭಾಗ ಅಂಕಲಿ ರಸ್ತೆ ಪಕ್ಕದಲ್ಲಿರುವ ನಂದಿ ಎಂಟರ್‍‌ಪ್ರೈಸೆಸ್‌, ನಿಕಿಲ್‌ ಎಲೆಕ್ಟ್ರಾನಿಕ್ಸ್‌ ಹೆಸರಿನ ಖಾಸಗಿ ಕಟ್ಟಡವಿದೆ. ಈ ಕಟ್ಟಡದ ನೆಲ ಮಹಡಿಯಲ್ಲಿ ಅಕ್ರಮವಾಗಿ 8.55 ಕೋಟಿ ರು ಮೊತ್ತದ ಕಾಮಗಾರಿ ಕಡತಗಳನ್ನು ಸಂಗ್ರಹಿಸಿಡಲಾಗಿತ್ತು. ಈ ಕುರಿತು ಅಪ್ಪಾಸಾಬ ಎಂಬವರು 2024ರ ಫೆ.1ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರನ್ನಾಧರಿಸಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.

 

 

ರಾಯಭಾಗ ತಾಲೂಕಿನ ನಿಡಗುಂದಿ ಗ್ರಾಮಪಂಚಾಯ್ತಿ ಶಿರಗೂರ ಗ್ರಾಮ ಪಂಚಾಯ್ತಿ, ಬಿರಡಿ ಗ್ರಾಮ ಪಂಚಾಯ್ತಿ, ನಿಲಜಿ ಗ್ರಾಮ ಪಂಚಾಯ್ತಿ, ನಸಲಾಪೂರ ಗ್ರಾಮ ಪಂಚಾಯ್ತಿಗಳ ಪಿಡಿಒಗಳು ಕಾಮಗಾರಿಗಳ ಕಡತಗಳನ್ನು ನಿಕಿಲ್‌ ಎಲೆಕ್ಟ್ರಾನಿಕ್ಸ್‌ ಹತ್ತಿರ ಇರುವ ಸತ್ಯಗೌಡ ಕಿತ್ತೂರೆ ಎಂಬುವರಿಗೆ ಸೇರಿದ ಕಟ್ಟಡದ ಮೊದಲನೇ ಮಹಡಿ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು. ಇದರಲ್ಲಿ ಎಂ ಬಿ ಪುಸ್ತಕಗಳು, ಕಾಮಗಾರಿ ಕಡತಗಳೂ ಇದ್ದವು. ಲೋಕಾಯುಕ್ತ ಪೊಲೀಸರು ದಾಳಿ ವೇಳೆಯಲ್ಲಿ ಪತ್ತೆ ಹಚ್ಚಿದ್ದರು.

 

8.55 ಕೋಟಿ ರು ಮೊತ್ತದ ಕಾಮಗಾರಿ ಕಡತಗಳು ಸರ್ಕಾರಿ ಕಚೇರಿಯಲಿಲ್ಲ

 

ನಿಡುಗುಂದಿ ಪಂಚಾಯ್ತಿಗೆ ಸೇರಿದ 2 ಎಂ ಬಿ ಪುಸ್ತಕಗಳು ಮತ್ತು 54.27 ಲಕ್ಷ ರು ಮೊತ್ತದ ಕಾಮಗಾರಿಗೆ ಸಂಬಂಧಿಸಿದ 8 ಕಡತಗಳಿದ್ದವು. ಶಿರಗೂರ ಪಂಚಾಯ್ತಿಗೆ ಸೇರಿದ 2 ಎಂ ಬಿ ಪುಸ್ತಕ, 3.34 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ 40 ಕಡತಗಳು, ಬಿರಡಿ ಪಂಚಾಯ್ತಿಗೆ ಸೇರಿದ 5 ಎಂ ಬಿ ಪುಸ್ತಕಗಳು, 2.35 ಕೋಟಿ ರು ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ 21 ಕಡತಗಳು, ರಾಯಭಾಗ ಗ್ರಾಮೀಣ ಪಂಚಾಯ್ತಿಗೆ ಸೇರಿದ 1 ಎಂ ಬಿ ಪುಸ್ತಕ, 35 ಲಕ್ಷ ರು ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ 7 ಕಡತಗಳಿದ್ದವು.

 

 

ನಿಲಜಿ ಪಂಚಾಯ್ತಿಗೆ ಸೇರಿದ 2 ಎಂ ಬಿ ಪುಸ್ತಕಗಳು, 8 ಲಕ್ಷ ರು ಮೊತ್ತದ ಕಾಮಗಾರಿಗೆ ಸಂಬಂಧಿಸಿದ 1 ಕಡತ, ನಸಲಾಪೂರ ಪಂಚಾಯ್ತಿಗೆ ಸಂಬಂಧಿಸಿದ 5 ಎಂ ಬಿ ಪುಸ್ತಕಗಳು, 1.89 ಕೋಟಿ ರು ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳಿದ್ದವು ಎಂದು ಆದೇಶದಿಂದ ಗೊತ್ತಾಗಿದೆ.

 

ವಿಠಲ ಶಿವಪ್ಪ ಚಂದರಗಿ ಅವರು ರಾಯಭಾಗ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ ಈ ಪ್ರಕರಣ ನಡೆದಿತ್ತು. ಸದ್ಯ ವಿಠಲ ಶಿವಪ್ಪ ಚಂದರಗಿ ಅವರು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Your generous support will help us remain independent and work without fear.

Latest News

Related Posts