ಬೆಂಗಳೂರು; ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ವ್ಯಾಪ್ತಿಯಲ್ಲಿರುವ ಮಳಿಗೆಗಳು ಮತ್ತು ಅಂಗಡಿಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆಯುತ್ತಿವೆ. ಮಳಿಗೆ ಮತ್ತು ಅಂಗಡಿಗಳನ್ನು ಹರಾಜು ಪ್ರಕ್ರಿಯೆಯೇ ಪೂರ್ವ ನಿರ್ಧರಿತವಾಗಿರುತ್ತವೆ. ವ್ಯಾಪಾರಿಗಳ ಗಮನಕ್ಕೂ ತಾರದೆಯೇ ಮಳಿಗೆ ಮತ್ತು ಅಂಗಡಿಗಳನ್ನು ತಮಗೆ ಬೇಕಾದವರಿಗೆ ಹರಾಜು ಹಾಕಲಾಗುತ್ತಿದೆ. ಇಡೀ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಲಂಚಗುಳಿತನ ನಡೆಯುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ.
ಎಪಿಎಂಸಿಗಳ ಸುಧಾರಣೆ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರವು ಈಚೆಗಷ್ಟೇ ಜಾಹೀರಾತು ನೀಡಿ ಪ್ರಚಾರ ಪಡೆದುಕೊಂಡಿತ್ತು. ಆದರೀಗ ಎಪಿಎಂಸಿ ಮಳಿಗೆ ಮತ್ತು ಅಂಗಡಿಗಳ ಹರಾಜಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವರ್ತಕರೇ ಸರ್ಕಾರಕ್ಕೆ ದೂರು ಸಲ್ಲಿಸುತ್ತಿದ್ದಾರೆ. ಈ ದೂರಿನ ಪ್ರತಿಯೊಂದು ‘ದಿ ಫೈಲ್’ಗೆ ಲಭ್ಯವಾಗಿದೆ.
ಸಿಂಗೇನ ಅಗ್ರಹಾರದಲ್ಲಿರುವ ಎಪಿಎಂಸಿ ವ್ಯಾಪ್ತಿಯಲ್ಲಿನ ಅಂಗಡಿಗಳ ಹಂಚಿಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಲಿಖಿತ ದೂರು ಸಲ್ಲಿಕೆಯಾಗಿದೆ. ಈ ದೂರಿನ ಕುರಿತು ಸಚಿವ ಶಿವಾನಂದ ಪಾಟೀಲ್ ಅವರ ಜತೆ ಅಧಿಕಾರಿಗಳು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಸಿಂಗೇನಅಗ್ರಹಾರದಲ್ಲಿರುವ ಹಣ್ಣಿನ ಮಾರುಕಟ್ಟೆಯಲ್ಲಿನ ಇ-32, ಎಫ್ 52 ಮತ್ತು ಎಫ್ 56 ಅಂಗಡಿ ಹಂಚಿಕೆಯಲ್ಲಿ ಗಂಭೀರ ಅಕ್ರಮಗಳು ಮತ್ತು ಉದ್ದೇಶಪೂರ್ವಕವಾಗಿ ದುಷ್ಕೃತ್ಯಗಳು ನಡೆದಿವೆ ಎಂದು ದೂರಿನಲ್ಲಿ ಪ್ರಸ್ತಾವಿಸಿರುವುದು ತಿಳಿದು ಬಂದಿದೆ.
ಈ ಮಳಿಗೆಗಳನ್ನು ಹಂಚಿಕೆ ಮಾಡಲು ಹೊರಡಿಸಿರುವ ಅಧಿಸೂಚನೆಯೇ ಅನುಚಿತವಾಗಿದೆ. ಮತ್ತು ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. 2025ರ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿರುವ ಎಪಿಎಂಸಿ ಅಧಿಕಾರಿಗಳು, ಅರ್ಜಿ ಸಲ್ಲಿಸಲು ಕೇವಲ ಮೂರೇ ಮೂರು ದಿನಗಳ ಕಾಲಾವಕಾಶ ನೀಡಿರುವುದು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ ಎಂದು ದೂರುದಾರರು ವಿವರಿಸಿರುವುದು ಗೊತ್ತಾಗಿದೆ.
ಮಳಿಗೆಗಳ ಹಂಚಿಕೆಗಾಗಿ ಬೆರಳಣಿಕೆಯ ಪತ್ರಿಕೆಗಳಲ್ಲಿ ಮಾತ್ರ ಜಾಹೀರಾತು ನೀಡಲಾಗಿದೆ. ಈ ಪತ್ರಿಕೆಗಳು ಸಹ ಎಪಿಎಂಸಿ ಮಾರುಕಟ್ಟೆ ಆವರಣದ ಒಳಗೆ ಮತ್ತು ಸುತ್ತಮುತ್ತ ವ್ಯಾಪಕವಾಗಿ ಪ್ರಸಾರವಾಗುವುದಿಲ್ಲ. ಇದರಿಂದಾಗಿ ಹೆಚ್ಚಿನ ವ್ಯಾಪಾರಿಗಳಿಗೆ ಮಳಿಗೆಗಳ ಹಂಚಿಕೆಯ ಪ್ರಮುಖ ಸೂಚನೆಯೇ ತಿಳಿದಿಲ್ಲ. ಈ ಸಂಬಂಧ ಅಧಿಕೃತವಾಗಿ ವ್ಯಾಪಾರಿಗಳ ಸಭೆಯನ್ನೂ ನಡೆಸಿಲ್ಲ. ಹಾಗೆಯೇ ಹಂಚಿಕೆ ಪ್ರಕ್ರಿಯೆ ಕುರಿತು ವ್ಯಾಪಾರಿಗಳೊಂದಿಗೆ ಸಮಾಲೋಚನೆಯನ್ನೂ ನಡೆಸಿಲ್ಲ ಎಂದು ದೂರಲಾಗಿದೆ.
‘ಮಳಿಗೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕೊರತೆ ಎದ್ದು ಕಾಣುತ್ತಿದೆ. ಮೊದಲೇ ಪೂರ್ವ ನಿರ್ಧರಿತ ಪಟ್ಟಿಯಲ್ಲಿನ ವ್ಯಾಪಾರಸ್ಥರಿಗೆ ಹಂಚಿಕೆ ಮಾಡುವ ಸಂಚೂ ಕೂಡ ಇದೆ. ಇದರಲ್ಲಿಯೂ ಹಿತಾಸಕ್ತಿ ಸಂಘರ್ಷವೂ ಎದ್ದು ಕಾಣುತ್ತಿದೆ. ಮೂರು ನಿರ್ದಿಷ್ಟ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಹಂಚಿಕೆ ಪ್ರಕ್ರಿಯೆ ನಡೆಸಲಾಗಿದೆ. ಉಳಿದ ವ್ಯಾಪಾರಿಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ,’ ಎಂದು ದೂರುದಾರರು ಆರೋಪಿಸಿರುವುದು ತಿಳಿದು ಬಂದಿದೆ.
ಬನಶಂಕರಿ ಫ್ರೂಟ್ಸ್, ಮಂಜುನಾಥ ಫ್ರೂಟ್ಸ್, ಸಿಂಗ್ ಇಂಟರ್‍ನ್ಯಾಷನಲ್ ವ್ಯಾಪಾರಿಗಳಿಗೆ ವಾಮಮಾರ್ಗದಲ್ಲಿ ಅನುಕೂಲ ಮಾಡಿಕೊಡಲಾಗಿದೆ. ಮಳಿಗೆಯನ್ನು ಹಂಚಿಕೆ ಮಾಡುವ ಮುನ್ನವೇ ಬಳಕೆದಾರರ ಶುಲ್ಕವನ್ನು ಮೊದಲೇ ಪಾವತಿಸಲಾಗಿದೆ. ಇದು ಪೂರ್ವನಿರ್ಧರಿತ ವ್ಯವಹಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ದೂರುದಾರರು ಆಪಾದಿಸಿರುವುದು ಗೊತ್ತಾಗಿದೆ.
‘ಈ ಇಡೀ ಪ್ರಕ್ರಿಯೆಯಲ್ಲಿ ಎಪಿಎಂಸಿ ಬಿನ್ನಿಪೇಟೆ ಕಾರ್ಯದರ್ಶಿ ಸುಮಾ, ಆಡಳಿತಾಧಿಕಾರಿ ರಾಜಣ್ಣ ಮತ್ತು ಅಂಗಡಿ ಮಾಲೀಕರು ಶಾಮೀಲಾಗಿದ್ದಾರೆ. ಅರ್ಜಿದಾರರ ಸಂಖ್ಯೆಯನ್ನು ಮಿತಿಗೊಳಿಸಲು ಕುತಂತ್ರ ನಡೆಸಿದ್ದಾರೆ. 1,000ಕ್ಕೂ ಹೆಚ್ಚು ಪರವಾನಿಗೆದಾರರು ಅಂಗಡಿ ಹಂಚಿಕೆಗಾಗಿ ಕಾಯುತ್ತಿದ್ದರೂ ಸಹ ಕೇವಲ 17 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ,’ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಮಾರುಕಟ್ಟೆ ಸಮಿತಿಯ ಸಹಾಯಕ ಕಾರ್ಯದರ್ಶಿ ಚಿತ್ರಾ ಮತ್ತು ಮಾರುಕಟ್ಟೆ ಮೇಲ್ವಿಚಾರಕಿ ರೇಣುಕಾ ಎಂಬವರು ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಬ್ಬರೂ ಕೆಲವು ವ್ಯಾಪಾರಿಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಮತ್ತು ಪೂರ್ವ ನಿರ್ಧರಿತ ಅಂಗಡಿಗಳಿಗೆ ಹಂಚಿಕೆ ಮಾಡುತ್ತಿದ್ದಾರೆ. ಎಪಿಎಂಸಿ ನಿಯಮಗಳಿಗೆ ವಿರುದ್ಧವಾಗಿ ಮತ್ತು ಕಾನುನುಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಬೀದರ್ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಕರಣವೊಂದರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಇತ್ಯರ್ಥವಾಗದೇ ಇದ್ದರೂ ಸಹ ಲಕ್ಷಾಂತರ ರುಪಾಯಿ ಲಂಚ ಪಡೆದು ಎಪಿಎಂಸಿ ಮಳಿಗೆ ನೋಂದಣಿ ಮಾಡಿಕೊಡಲಾಗಿತ್ತು. ಸಮಿತಿಯ ಕಾರ್ಯದರ್ಶಿ ಮಳಿಗೆದಾರರಿಂದ ಲಂಚ ಪಡೆದು ಅನಧಿಕೃತವಾಗಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ಸಹಕಾರ ಇಲಾಖೆಗೆ ಕನ್ನಡ ಸಮರ ಸೇನೆಯ ಅಧ್ಯಕ್ಷ ಅವಿನಾಶ ದೀನೇ ಎಂಬುವರು ದೂರು ಸಲ್ಲಿಸಿದ್ದರು.
‘ಉಚ್ಛ ನ್ಯಾಯಾಲಯದ ಕಲ್ಬುರ್ಗಿ ಪೀಠದಲ್ಲಿ ಪ್ರಕರಣಗಳು ಬಾಕಿ ಇರುವಾಗಲೇ ಏಕಾಏಕೀ 2024 ಮೇ ಮತ್ತು ಜೂನ್‌ನಲ್ಲಿ ಎಲ್ಲಾ ವ್ಯಾಪಾರಸ್ಥರಿಂದ ಸುಮಾರು 2ರಿಂದ 3 ಲಕ್ಷ ರು ಲಂಚವನ್ನು ಪಡೆದು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಎಲ್ಲರಿಗೂ ನೋಂದಣಿ ಮಾಡಿಕೊಟ್ಟಿರುತ್ತಾರೆ,’ ಎಂದು ದೂರಿನಲ್ಲಿ ವಿವರಿಸಿದ್ದರು.
ಲಕ್ಷಾಂತರ ರುಪಾಯಿ ಲಂಚ; ಹಣ್ಣು, ತರಕಾರಿ ಮಾರುಕಟ್ಟೆ ಮಳಿಗೆಗಳಿಗೆ ಅನಧಿಕೃತ ನೋಂದಣಿ, 4.74 ಕೋಟಿ ನಷ್ಟ
ಮದೀನಾ ಪ್ರೂಟ್ ಕಂಪನಿ, ಕೆ ಜಿ ಎನ್ ಫ್ರೂಟ್ ಕಮಿಷನ್ fಏಜೆಂಟ್, ಮಹ್ಮದ ಮುಜಮಿಲ್ ಅಹ್ಮದ್, ನ್ಯೂ ರಾಯಲ್ ಫ್ರೂಟ್, ಮಹ್ಮದ ಜಮೀಲ್ ಅಹ್ಮದ್, ನ್ಯೂ ಸ್ಟಾರ್ ಮದೀನಾ ಟ್ರೇಡರ್ಸ್, ಎಚ್ ಎಂ ಅಂಡ್ ಕಂಪನಿ, ಶ್ರೀ ಸಾಯಿ ಟ್ರೇಡಿಂಗ್ ಕಂಪನಿ, ಅಲ್ ಹಜ್ ಶೇಖ ಅಹ್ಮದ್ ಫ್ರೂಟ್ ಕಂಪನಿಗೆ ಅನಧಿಕೃತವಾಗಿ ನೋಂದಣಿ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಪಟ್ಟಿಯನ್ನು ಒದಗಿಸಿದ್ದರು.
‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪರಮೇಶ್ವರಿ ಫುಲೇಕರ್ ಅವರು ಪ್ರತಿ ಒಂದು ಅಂಗಡಿಗೆ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಒಟ್ಟು ಮೌಲ್ಯ 13,00,000 ರು. ಮೇಲೆ ಶೇ.12ರಂತೆ ದಂಡ ವಸೂಲಿ ಮಾಡಬೇಕಾಗಿತ್ತು. ಈ ದಂಡವು ಒಂದು ವರ್ಷಕ್ಕೆ 1,56,000 ರು. ರ ಪ್ರಕಾರ ಇಲ್ಲಿಯವರೆಗೆ 8 ವರ್ಷಕ್ಕೆ 4,74,24,000 ರು. ಆಗಲಿದೆ. ಆದರೆ 4.74 ಕೋಟಿ ರು.ಗಳನ್ನು ವಸೂಲಿ ಮಾಡದೇ ಸರ್ಕಾರಕ್ಕೆ ನಷ್ಟವುಂಟಾಗಿದೆ. ಪ್ರತಿ ಅಂಗಡಿಯವರಿಂದ ಸುಮಾರು 5 ಲಕ್ಷ ರು. ಲಂಚ ಪಡೆದು ನೋಂದಣಿ ಮಾಡಿಸಿಕೊಡಲಾಗಿದೆ,’ ಎಂದು ಅವಿನಾಶ ದೀನೇ ಅವರು ದೂರಿನಲ್ಲಿ ವಿವರಿಸಿದ್ದನ್ನು ಸ್ಮರಿಸಬಹುದು.