ಅನುದಾನರಹಿತ ಅವಧಿ ಅನುದಾನಕ್ಕೆ ಒಳಪಡಿಸಿದರೆ 1,762.90 ಕೋಟಿ ವೆಚ್ಚ; ಪರಿಗಣನೆಗೆ ಅವಕಾಶವಿಲ್ಲ?

ಬೆಂಗಳೂರು; ಅನುದಾನಿತ ಶಿಕ್ಷಣ ಸಂಸ್ಥೆಗಳ ಪಿಂಚಣಿ ನೌಕರರಿಗೆ ಅನುದಾನ ರಹಿತ ಅವಧಿಯ ಸೇವೆಯನ್ನು ಅನುದಾನಕ್ಕೆ ಒಳಪಡುವವರೆಗೂ ಕಾಲ್ಪನಿಕವಾಗಿ ಪರಿಗಣಿಸಿದಲ್ಲಿ ಸರ್ಕಾರಕ್ಕೆ ಒಟ್ಟಾರೆ 1,762.90 ಕೋಟಿ ರು ವೆಚ್ಚವಾಗಲಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಲೆಕ್ಕಚಾರವನ್ನು ಮುಂದಿಟ್ಟಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯ ಸರ್ಕಾರದ ಅನುದಾನ ಸಂಹಿತೆಯಡಿ ಅನುದಾನಕ್ಕೆ ಒಳಪಟ್ಟ ಮತ್ತು ಅನುದಾನ ಪಡೆಯುತ್ತಿರುವ ಒಟ್ಟು ಶಿಕ್ಷಣ ಸಂಸ್ಥೆಗಳ ಮತ್ತು ಅನುದಾನಕ್ಕೆ ಒಳಪಟ್ಟ ಒಟ್ಟು ನೌಕರರ ಹುದ್ದೆಗಳು, ಸಂಖ್ಯೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ವಿವರಗಳನ್ನು ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು  ಈಗಾಗಲೇ ಸರ್ಕಾರಕ್ಕೆ ಒದಗಿಸಿದ್ದಾರೆ.

 

ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬರುವ ಮುನ್ನ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ನೀಡಿದ್ದ  ಹಳೆಯ ನಿಶ್ಚಿತ ಪಿಂಚಣಿ ನೀಡುವ ಭರವಸೆ ಈಡೇರಿಲ್ಲ. ಈ ಮಧ್ಯೆ ಪದವಿಪೂರ್ವ ಶಿಕ್ಷಣ ಇಲಾಖೆಯು ಸರ್ಕಾರಕ್ಕೆ ಒದಗಿಸಿರುವ ಮಾಹಿತಿಯು ಮುನ್ನೆಲೆಗೆ ಬಂದಿದೆ.

 

ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಸಲ್ಲಿಸಿರುವ ವೆಚ್ಚದ ಪಟ್ಟಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಜಿಲ್ಲಾ ಉಪ ನಿರ್ದೇಶಕರು ನೀಡಿದ್ದ ವರದಿ ಆಧರಿಸಿ  ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.  ಇದರ  ಪ್ರಕಾರ ರಾಜ್ಯದಲ್ಲಿ ಒಟ್ಟು 819 ಪದವಿ ಪೂರ್ವ ಕಾಲೇಜುಗಳಿವೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟಾರೆ 11,070 ಮಂದಿ ನೌಕರರಿದ್ದಾರೆ.

 

 

 

ಇದರಲ್ಲಿ 5,708 ನೌಕರರು ನಿವೃತ್ತರಾಗಿದ್ದಾರೆ.  ಇವೇ ಖಾಸಗಿ ಶಿಕ್ಷಣ ಸಂಸ್ಥೆಗಳ ಪದವಿಪೂರ್ವ ಕಾಲೇಜುಗಳಲ್ಲಿ ಅನುದಾನಕ್ಕೆ ಒಳಪಟ್ಟ ನೌಕರರ ಸಂಖ್ಯೆಯು 5,362 ಇದೆ. ಈ ಪೈಕಿ 1,076  ಮಂದಿ ನಿವೃತ್ತಿಯಾಗಿದ್ದಾರೆ.

 

 

ಈ ಕರ್ತವ್ಯ ನಿರತ ನೌಕರರಿಗೆ ಅನುದಾನರಹಿತ ಅವಧಿ ಪರಿಗಣಿಸಿ ವೇತನ ಭತ್ಯೆ ನೀಡಿದಲ್ಲಿ 325,73,73,454 ರು ವಚ್ಚವಾಗಲಿದೆ. ಅಲ್ಲದೇ ಇವರಿಗೆ ಪ್ರಸ್ತುತ ಅವಧಿಯವರೆಗೂ ವೇತನ ಭತ್ಯೆ ನೀಡಿದಲ್ಲಿ 1,604.80 ಕೋಟಿ ರು ವೆಚ್ಚವಾಗಲಿದೆ. ಒಟ್ಟಾರೆ 1,930.54 ಕೋಟಿ ರು ವೆಚ್ಚವಾಗಲಿದೆ ಎಂದು ಅಂದಾಜು ವೆಚ್ಚದ ಪಟ್ಟಿಯನ್ನು ಒದಗಿಸಿರುವುದು ತಿಳಿದು ಬಂದಿದೆ.

 

 

ನಿವೃತ್ತ ನೌಕರರಿಗೆ ಅನುದಾನರಹಿತ ಅವಧಿ ಸೇವೆಯನ್ನು ಅನುದಾನಕ್ಕೆ ಒಳಪಡುವವರೆಗೂ ಕಾಲ್ಪನಿಕವಾಗಿ ಪರಿಗಣಿಸಿ ವೇತನ ಭತ್ಯೆ ನೀಡಿದಲ್ಲಿ ಅಂದಾಜು 158,09,58,428 ರು ವೆಚ್ಚವಾಗಲಿದೆ. ಪಿಂಚಣಿ ನೌಕರರಿಗೆ ಅನುದಾನರಹಿತ ಅವಧಿ ಸೇವೆಯನ್ನು ಅನುದಾನಕ್ಕೆ ಒಳಪಡುವವರೆಗೂ ಕಾಲ್ಪನಿವಾಗಿ ಪರಿಗಣಿಸಿ ಪಿಂಚಣಿ ಸೌಲಭ್ಯ ನೀಡಿದ್ದಲ್ಲಿ 1,604,80,77,578 ರು ವೆಚ್ಚವಾಗಲಿದೆ. ಒಟ್ಟಾರೆ 1,762.90 ಕೋಟಿ ರು ವೆಚ್ಚವಾಗಲಿದೆ ಎಂದು ಇಲಾಖೆ ನಿರ್ದೇಶಕರು ವಿವರ ಒದಗಿಸಿರುವುದು ತಿಳಿದು ಬಂದಿದೆ.

 

 

2006ರ ಏಪ್ರಿಲ್ 1ರ ನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಮತ್ತು ಈ ದಿನಾಂಕದ ನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡಿಸಿದೆ. ಅಲ್ಲದೇ  ಈ ಯೋಜನೆ ಅನ್ವಯ 2006ರ ಏಪ್ರಿಲ್‌ 1ರ ಪೂರ್ವದಲ್ಲಿ ನೇಮಕಾತಿಗಾಗಿ ಅಧಿಸೂಚನೆ ಮೂಲಕ ಆಯ್ಕೆಯಾಗಿ ನಂತರದಲ್ಲಿ ಸೇವೆಗೆ ಸೇರಿದ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ವ್ಯಾಪ್ತಿಗೊಳಪಡಿಸಲು ಆದೇಶಿಸಲಾಗಿತ್ತು. ಆದರೆ ಈ ಆದೇಶವನ್ನು ಅನುದಾನಿತ ಸಿಬ್ಬಂದಿಗೆ ವಿಸ್ತರಿಸಿಲ್ಲ.

 

2006ರ ಮಾರ್ಚ್‌ 31ರಂದು ಹೊರಡಿಸಿದ್ದ ಆದೇಶದ ಕ್ರಮಸಂಖ್ಯೆಯ 8ರ ಪ್ರಕಾರ ಖಾಸಗಿ ಅನುದಾನಿತ ಸಿಬ್ಬಂದಿಗೂ ನೂತನ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಆದೇಶದ ಅನ್ವಯ 2006ರ ಏಪ್ರಿಲ್‌ 1ರ ನಂತರ ಅನುದಾನಕಕೆ ಒಳಪಟ್ಟ ನೌಕರರಿಗೆ ನೂತನ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು. ಹೀಆಗಿ 2006ರ ಏಪ್ರಿಲ್‌ 1ರ ನಂತರ ಅನುದಾನ ರಹಿತ ಅವಧಿಯನ್ನು ಪರಿಗಣಿಸಿ ಹಳೇ ಪಿಂಚಣಿಗೆ ಪರಿಗಣಿಸಲು ಅವಕಾಶವಿರುವುದಿಲ್ಲ ಎಂದು ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಸ್ಪಷ್ಟಪಡಿಸಿರುವುದು ತಿಳಿದು ಬಂದಿದೆ.

 

 

 

ಹಳೆಯ ನಿಶ್ಚಿತ ಪಿಂಚಣಿ ನೀಡಲಾಗುವುದು ಎಂದು ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ  ಭರವಸೆ ನೀಡಿತ್ತು.   ಮುಂದೊಂದು ದಿನ 15 ವರ್ಷಗಳಿಗೂ ಹೆಚ್ಚಿನ ಅನುದಾನಿತ ಸೇವೆ ಸಲ್ಲಿಸಿದ ನೌಕರರಿಗೆ ಒಪಿಎಸ್‌ ಸೌಲಭ್ಯ ಜಾರಿಯಾಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

 

‘ಅನುದಾನ ರಹಿತ ಅವಧಿಯ ಸೇವೆಯನ್ನು ಯಾವುದೇ ಕಾರಣಕ್ಕೂ ಪಿಂಚಣಿ ಸೌಲಭ್ಯಕ್ಕೆ ಪರಿಗಣಿಸುವುದಿಲ್ಲ.  ಈ ಸಮಸ್ಯೆ ಸರಿಪಡಿಸಲು ಹೋದರೆ ಸರ್ಕಾರಕ್ಕೆ ಸಾವಿರಾರು ಕೋಟಿಗಳ ಆರ್ಥಿಕ ಹೊರೆ ಆಗುತ್ತದೆ.  ಹಾಗಾಗಿ ಪರಿಗಣಿಸಲು ಆಗುವುದಿಲ್ಲ. ಮತ್ತು ಇದನ್ನು  ಪರಿಗಣಿಸಬಾರದೆಂದು ಸರ್ಕಾರ ನಿಯಂತ್ರಣ ವಿಧೇಯಕ ಮಾಡಿಕೊಂಡಿದೆ. ಸರ್ಕಾರ ರಚಿಸಿರುವ ವಿಧೇಯಕಕ್ಕೆ ಸರ್ಕಾರ ಮತ್ತು ಇಲಾಖೆಯೂ  ಬದ್ಧವಾಗಿದೆ,’ ಎನ್ನುತ್ತಾರೆ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ರಾಜ್ಯದ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ (01-04-2006ರ ನಂತರ) ನೇಮಕ ಹೊಂದಿ ವೇತನ ಪಡೆಯುತ್ತಿರುವ ಮತ್ತು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮತ್ತು 2006ರ ಏಪ್ರಿಲ್‌ 1ಕ್ಕೂ ಮೊದಲೇ ನೇಮಕಾತಿ ಹೊಂದಿರುವವರಿಗೂ ಸಮಸ್ಯೆಯುಂಟಾಗಿತ್ತು.
ಅಲ್ಲದೇ ಅನುದಾನಕ್ಕೆ ಒಳಪಟ್ಟು ವೇತನ ಪಡೆಯುತ್ತಿರುವ ಸಂದರ್ಭದಲ್ಲಿ ಅಕಾಲಿಕವಾಗಿ ನಿಧನರಾದ ಮತ್ತು ಸೇವಾ ನಿವೃತ್ತಿ ಹೊಂದಿದ ನೌಕರರಿಗೂ ಯಾವುದೇ ವಿಧದ ಪಿಂಚಣಿ ಸೌಲಭ್ಯ (ಎನ್‌ಪಿಎಸ್‌ ಅಥವಾ ಒಪಿಎಸ್‌) ಇರಲಿಲ್ಲ.
ಪಿಂಚಣಿ ಸೌಲಭ್ಯ ದೊರೆಯದೇ ಈಗಾಗಲೇ ಸುಮಾರು 3,000ಕ್ಕೂ ಹೆಚ್ಚು ನೌಕರರು ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿ ನಿವೃತ್ತಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಇಲಾಖೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆದಿದೆ. ಆದರೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ತೀರ್ಮಾನ ಕೈಗೊಳ್ಳುವ ಅಧಿಕಾರವನ್ನು ಸರ್ಕಾರದ ವಿವೇಚನೆಗೆ ಬಿಡಲಾಗಿದೆ ಎಂದು ಗೊತ್ತಾಗಿದೆ.

Your generous support will help us remain independent and work without fear.

Latest News

Related Posts