ಬೆಂಗಳೂರು; ಗಣಿಗಾರಿಕೆ ಮಂಜೂರು ಮಾಡಿದ ಉದ್ದೇಶಕ್ಕಾಗಿ ಎಂಎಸ್‌ಪಿಎಲ್‌ಗೆ ನೀಡಿದ್ದ ಅರಣ್ಯ ತೀರುವಳಿಗೆ ನೀಡಿದ್ದ ಅನುಮೋದನೆಯನ್ನು ಮುಂದಿಟ್ಟುಕೊಂಡು ಮತ್ತೊಂದು ಕಂಪನಿ ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್‌ಗೆ 3.44 ಲಕ್ಷ ಮೆಟ್ರಿಕ್ ಟನ್ ಅದಿರು ಸಾಗಾಣಿಕೆಗೆ ಅನುಮತಿ ನೀಡಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ.
ಗಣಿಗಾರಿಕೆ ನಡೆಸುತ್ತಿರುವ ಉಪಯೋಗಿ ಸಂಸ್ಥೆಯ ಪ್ರದೇಶದಲ್ಲಿ ಇ-ಹರಾಜು ಮೂಲಕ ಡಂಪಿಂಗ್ ಮಾಡಿ ಅದಿರನ್ನು ವಶಪಡಿಸಿಕೊಂಡಿತ್ತು. ಆದರೆ ಮತ್ತೊಂದು ಸಂಸ್ಥೆಯು ಅದೇ ಪ್ರದೇಶದಲ್ಲಿನ ಅದಿರನ್ನು ಸಾಗಿಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಅನುಮತಿ ನೀಡಿರುವುದು ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೇ ಸರ್ಕಾರವು ಅನುಮತಿ ನೀಡಿರುವ ಕಂಪನಿಯು ಎಫ್‌ಸಿ ಅನುಮೋದನೆಯನ್ನು ಪಡೆದ ಘಟಕವಾಗಿಲ್ಲ. ಇಂತಹ ಪ್ರಕರಣಗಳಲ್ಲಿ ಕಾನೂನಿನ ನಿಲುವು ಸ್ಪಷ್ಟವಾಗಿಲ್ಲ. ಮತ್ತು ಸಾಗಣಿಕೆಗೆ ಅನುಮತಿ ನೀಡುವುದು ಸಮಂಜಸವಲ್ಲ. ಆದರೂ ಸಚಿವ ಈಶ್ವರ್ ಖಂಡ್ರೆ ಅವರು ಅನುಮೋದನೆ ನೀಡಿರುವುದು ಸಹ ಚರ್ಚೆಗೆ ಗ್ರಾಸವಾಗಿದೆ.
ಅಕ್ರಮವಾಗಿ ಅದಿರು ಸಾಗಾಣಿಕೆ ಪ್ರಕರಣಗಳು ಮತ್ತು ಬೊಕ್ಕಸಕ್ಕೆ ಆಗಿರುವ ಅಪಾರ ಪ್ರಮಾಣದ ನಷ್ಟವನ್ನು ವಸೂಲಿ ಮಾಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿರುವ ಹೊತ್ತಿನಲ್ಲೇ ಅಕೋರ್ ಇಂಡಸ್ಟ್ರೀಸ್ ಪ್ರಕರಣವು ಮುನ್ನೆಲೆಗೆ ಬಂದಿದೆ.
ಎಂಎಸ್‌ಪಿಎಲ್ ಪ್ರೈವೈಟ್ ಲಿಮಿಟೆಡ್ ಗಣಿ ಗುತ್ತಿಗೆ (ಸಂಖ್ಯೆ 2148- six month fc approved 60.66 ha for mining + 4.20 h a for approach road) 4.20 ಹೆಕ್ಟೇರ್ ಕೂಡ ರಸ್ತೆಯನ್ನು ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್‌ಗೆ 6 ತಿಂಗಳ ಅವಧಿಗೆ ಅದಿರು ಸಾಗಿಸಲು ತಾತ್ಕಾಲಿಕ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಇದಕ್ಕೆ ಸಂಬಂಧಿಸಿದಂತೆ ಟಿಪ್ಪಣಿ ಹಾಳೆಗಳು ‘ದಿ ಫೈಲ್’ಗೆ ಲಭ್ಯವಾಗಿವೆ.
ಗುತ್ತಿಗೆ ಅವಧಿ ಮುಗಿದು ಹೋಗಿರುವ ಗಣಿ ಪ್ರದೇಶದಲ್ಲಿರುವ ಅದಿರನ್ನು ಸಾಗಿಸಲು ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್‌ಗೆ ಅನುಮತಿ ನೀಡಿರುವ ಪ್ರಕ್ರಿಯೆಯಲ್ಲಿ ಹಲವು ಲೋಪಗಳಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಅಲ್ಲದೇ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್‌ಗೆ ನೀಡಿರುವ ಅನುಮತಿಯು ಸಮಂಜಸವಾಗಿಲ್ಲ ಎಂದು ಟಿಪ್ಪಣಿ ಹಾಳೆಯಲ್ಲಿ ದಾಖಲಿಸಿರುವುದು ಗೊತ್ತಾಗಿದೆ.
‘ಅರಣ್ಯ ತೀರುವಳಿ ಅನುಮೋದನೆ ಪಡದು ಗಣಿಗಾರಿಕೆ ನಡೆಸುತ್ತಿರುವ ಉಪಯೋಗಿ ಸಂಸ್ಥೆಯ ಪ್ರದೇಶದಲ್ಲಿ ಇ-ಹರಾಜು ಮೂಲಕ ಡಂಪಿಂಗ್ ಮಾಡಲಾದ ವಶಪಡಿಸಿಕೊಂಡ ಅದಿರನ್ನು ಮತ್ತೊಂದು ಸಂಸ್ಥೆಯು ಸದರಿ ಪ್ರದೇಶದಲ್ಲಿ ಅದಿರನ್ನು ಸಾಗಿಸಲು ಅನುಮತಿ ನೀಡುವುದು ಸಮಂಜಸವಾಗಿರುವುದಿಲ್ಲ,’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಆಕ್ಷೇಪ ಎತ್ತಿರುವುದು ತಿಳಿದು ಬಂದಿದೆ.
ಪ್ರಕರಣದ ವಿವರ
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಧರ್ಮಾಪುರ ಗ್ರಾಮದ ಎಚ್ ಜಿ ರಂಗನಗೌಡ ಅವರ ಗಣಿಗಾರಿಕೆ ಗುತ್ತಿಗೆ ಅವಧಿ ಮುಗಿದಾಗ ಸಿಐಸಿ ಅದಿರನ್ನು ವಶಪಡಿಸಿಕೊಂಡಿತ್ತು. ನಂತರ ಗಣಿಯನ್ನು ಹರಾಜು ಮಾಡಿ ಹೊಸ ಗುತ್ತಿಗೆದಾರರಾದ ಎಂಎಸ್‌ಪಿಎಲ್‌ಗೆ ವಹಿಸಲಾಯಿತು. ಕಾರ್ಯವಿಧಾನದ ಪ್ರಕಾರ ಹೊಸ ಗುತ್ತಿಗೆದಾರರು ಎಫ್‌ಸಿ ಅನುಮೋದನೆಗಾಗಿ ಅರ್ಜಿ ಸಲ್ಲಿಸಿದರು. ಅಂತಿಮ ಎಫ್‌ಸಿ ಅನುಮೋದನೆಯು ಬಾಕಿ ಉಳಿದಿತ್ತು.
ಹೊಸ ಗುತ್ತಿಗೆದಾರರು ಎಫ್‌ಸಿ ಕಾಯ್ದೆ ಮತ್ತು ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಅನುಮತಿಯನ್ನೂ ಪಡೆದಿದ್ದರು. ಆದರೂ ಸಹ ಸಿಇಸಿ ವಶಪಡಿಸಿಕೊಂಡ ಅದಿರನ್ನು ಗಣಿಯಲ್ಲಿಯೇ ಡಂಪಿಂಗ್ ಮಾಡಲಾಗಿತ್ತು. ಈ ಅದಿರು ರಾಜ್ಯಕ್ಕೆ ಸೇರಿತ್ತು. ಹೀಗಾಗಿ ಗಣಿ ಇಲಾಖೆಯು ನಂತರದ ದಿನಗಳಲ್ಲಿ ಇ-ಹರಾಜು ಹಾಕಿತ್ತು. ಇದರಲ್ಲಿ ಯಶಸ್ವಿ ಬಿಡ್ಡರ್ ಆಗಿದ್ದ ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್, ಈಗಾಗಲೇ ಹೊರತೆಗೆದು ಡಂಪಿಂಗ್ ಮಾಡಲಾದ ಅದಿರನ್ನು ಸಾಗಿಸಲು ಅನುಮತಿಗಾಗಿ ಅರಣ್ಯ ಇಲಾಖೆಯನ್ನು ಕೋರಿತ್ತು.
ಈ ಅದಿರನ್ನು ಸಾಗಿಸಲು ಅಸ್ತಿತ್ವದಲ್ಲಿರುವ ಕೂಡು ರಸ್ತೆ (ಅಪ್ರೋಚ್ ರಸ್ತೆ)ಯನ್ನು ಬಳಸುವುದು ಮತ್ತು ತೂಕದ ಸೇತುವೆಯನ್ನು ಸ್ಥಾಪಿಸಲು ಅನುಮತಿ ನೀಡಬೇಕು ಎಂದು ಯಶಸ್ವಿ ಬಿಡ್‌ದಾರ ಕಂಪನಿಯಾದ ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರನ್ನು ಕೋರಿತ್ತು.
ಈ ಕುರಿತು 2024ರ ಡಿಸೆಂಬರ್ 5ರಂದು ಏಕ ಗವಾಕ್ಷಿ ಸಭೆಯಲ್ಲಿ ಚರ್ಚಿಸಲಾಗಿತ್ತು ಅಲ್ಲದೆ 2023ರ ಜನವರಿ 23 ಮತ್ತು 2025ರ ಮಾರ್ಚ್ 20ರಂದು ಕೇಂದ್ರ ಸರ್ಕಾರವು ಸಹ ಉಪಯೋಗಿ ಸಂಸ್ಥೆಯಾದ ಎಂಎಸ್‌ಪಿಎಲ್ ಪ್ರೈವೈಟ್ ಲಿಮಿಟೆಡ್‌ಗೆ 6 ತಿಂಗಳ ಅವಧಿಗೆ ಅದಿರು ಸಾಗಾಣಿಕೆಗೆ ಅನುಮತಿ ನೀಡಿತ್ತು.
ಗಣಿ ಪ್ರದೇಶದಿಂದ 3,44,963 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಹೊರತೆಗೆಯುವುದು ಮತ್ತು ತಾತ್ಕಾಲಿಕ ತೂಕ ಸೇತುವೆ ಸ್ಥಾಪಿಸುವುದು ಹಾಗೂ ಈಗಾಗಲೇ ಅಸ್ತಿತ್ವದಲ್ಲಿರುವ ತೂಕದ ಸೇತುವೆಯನ್ನು ಬಳಸಲು ಮಂಜೂರು ಮಾಡಬೇಕು ಎಂದು ಅರಣ್ಯ ಇಲಾಖೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೂ ಸಹ (DMG-17012/23/2024/30082) ಪತ್ರ ಬರೆದಿತ್ತು. ಇದನ್ನು ಪರಿಶೀಲಿಸಿದ್ದ ರಾಜ್ಯ ಸರ್ಕಾರವು 2025ರ ಏಪ್ರಿಲ್ 5ರಂದು ಅನುಮತಿ ನೀಡಿತ್ತು.
‘ಎಂಎಸ್‌ಪಿಎಲ್ ಪ್ರೈವೈಟ್ ಲಿಮಿಟೆಡ್ ಗಣಿ ಗುತ್ತಿಗೆ (ಸಂಖ್ಯೆ 2148- six month fc appoved 60.66 ha for mining + 4.20 h a for approach road) 4.20 ಹೆಕ್ಟೇರ್ ಕೂಡ ರಸ್ತೆಯನ್ನು ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್‌ಗೆ 6 ತಿಂಗಳ ಅವಧಿಗೆ ತಾತ್ಕಾಲಿಕ ಅನುಮತಿ ನೀಡಿದೆ. ಪ್ರತಿ ಮೆಟ್ರಿಕ್ ಟನ್‌ಗೆ 5 ರು ದರದಲ್ಲಿ ಬಳಕೆ ಶುಲ್ಕ ವಿಧಿಸುವ ಷರತ್ತನ್ನು ವಿಧಿಸಿತ್ತು,’ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
4.20 ಹೆಕ್ಟೇರ್ ಕೂಡು ರಸ್ತೆಯ ಬಳಕೆಗೆ ಮಾತ್ರ ಅನುಮತಿ ನೀಡಲಾಗಿತ್ತು. ಆದರೂ ಈ ಅನುಮತಿಯಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ತಿಳಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸ್ಪಷ್ಟನೆಯಲ್ಲಿ ಏನಿದೆ?
‘ಈಗಾಗಲೇ ನೀಡಲಾದ ಅನುಮತಿಯು ಅರಣ್ಯ ಪ್ರದೇಶದಿಂದ ಕಾನೂನುಬದ್ಧವಾಗಿ ಉತ್ಖನನ ಮಾಡಿದ ಮತ್ತು ಕಾನೂನುಬದ್ಧವಾದ ಒಡೆತನದ ಹಳೆಯ ಕಬ್ಬಿಣದ ಅದಿರಿನ ದಾಸ್ತಾನನ್ನು ಎತ್ತುವಳಿ ಮಾಡುವುದನ್ನು ಒಳಗೊಳ್ಳುತ್ತದೆ. ಮತ್ತು ಅದೇ ಉದ್ದೇಶಕ್ಕಾಗಿ, ಅದು ಅಸ್ತಿತ್ವದಲ್ಲಿರುವ ತೂಕದ ಸೇತುವೆಯನ್ನು ಬಳಸಿಕೊಳ್ಳಬಹುದು,’ ಎಂದು ಪ್ರಭಾಷ್ ಚಂದ್ರ ರೇ ಅವರು ಸ್ಪಷ್ಟೀಕರಣ ನೀಡಿದ್ದರು. ಇದನ್ನು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೆಜ್ ಅವರೂ ಸಹ ಅನುಮೋದಿಸಿದ್ದರು.
ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್ ಎಫ್ ಸಿ ಅನುಮೋದನೆಯನ್ನು ಪಡೆದ ಘಟಕವಾಗಿರುವುದಿಲ್ಲ. ಎಂಎಸ್‌ಪಿಎಲ್ ಗೆ ಎಫ್ ಸಿ ಅನುಮೋದನೆಯಾಗಿರುವುದು ಗಣಿಗಾರಿಕೆ ಮಂಜೂರು ಮಾಡಿದ ಉದ್ದೇಶಕ್ಕೆ ಸಂಬಂಧಿಸಿದೆ. ಆದ್ದರಿಂದ ಈ ಎಫ್‌ಸಿ ಅನುಮೋದನೆಯನ್ನು ಅಕೋರ್ ಇಂಡಸ್ಟ್ರೀಸ್ ಪ್ರೈವೈಟ್ ಲಿಮಿಟೆಡ್‌ಗೆ ಸಾಗಾಣೆಗೆ ಅನುಮತಿ ನೀಡುವ ಕುರಿತು ಕಾನೂನಿನ ನಿಲುವು ಸ್ಪಷ್ಟವಾಗಿಲ್ಲ. ಈ ಸಂದರ್ಭಗಳಲ್ಲಿ, ಸೂಕ್ತ ಕ್ರಮವನ್ನು ರೂಪಿಸಲು ಸ್ಪಷ್ಟತೆಯನ್ನು ಕೋರುವ ಅವಶ್ಯಕತೆಯಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಕೋರಿದ್ದರು.
ಅಲ್ಲದೇ ಈ ಹಿಂದೆ ಅರಣ್ಯ ಪ್ರದೇಶದಲ್ಲಿರುವ ಗಣಿಗಳಲ್ಲಿ ಅದಿರನ್ನು ಹೊರತೆಗೆದು ಅರಣ್ಯ ಪ್ರದೇಶದಲ್ಲೇ ಶೇಖರಣೆ ಮಾಡಿರುವ ಅದಿರನ್ನು ಸಾಗಿಸಲು ಅನುಮತಿ ನೀಡುವುದಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಕೈಗಾರಿಕೆ ಇಲಾಖೆಯು ಅನುಮತಿ ಕೋರಿತ್ತು. ಆದರೆ ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂಬುದು ಕಡತದಿಂದ ತಿಳಿದು ಬಂದಿದೆ.
ರಾಜ್ಯದ ಚಿತ್ರದುರ್ಗ ಜಿಲ್ಲೆಯಲ್ಲಿನ ದಿಂಡದಹಳ್ಳಿ ಸೇರಿದಂತೆ ಇನ್ನಿತರೆ ಕಡೆಗಳಲ್ಲಿ ಅದಿರು ಗಣಿಗಾರಿಕೆ ನಡೆಸುತ್ತಿರುವ ಉದ್ಯಮಿಗಳು, ಕಂಪನಿಗಳು ಅರಣ್ಯ ಪ್ರದೇಶದಿಂದ ಕಬ್ಬಿಣದ ಅದಿರು ಮತ್ತು ಮಣ್ಣನ್ನು ಖಾಸಗಿ ಜಮೀನುಗಳ ಮಾಲೀಕರ ಪೂರ್ವಾನುಮತಿಯಿಲ್ಲದೇ ಅನಧಿಕೃತವಾಗಿ ಲಕ್ಷಾಂತರ ಮೆಟ್ರಿಕ್ ಟನ್ ಪ್ರಮಾಣದ ಅದಿರು ದಾಸ್ತಾನು ಮಾಡುತ್ತಿರುವ ಪ್ರಕರಣವು ಬೆಳಕಿಗೆ ಬಂದಿತ್ತು.
ಅಕ್ರಮವಾಗಿ 2.5 ಲಕ್ಷ ಮೆ.ಟನ್ ಅದಿರು ಸಾಗಾಟ; ಶ್ರೀಗಂಧ ಮರಗಳ ನಾಶ, ಅನಧಿಕೃತ ಸಾಗಾಣಿಕೆಗೆ ಬೀಳದ ಕಡಿವಾಣ
ರೈಲ್ವೆ ವ್ಯಾಗನ್‌ಗಳಲ್ಲಿ 35 ಕೋಟಿ ಟನ್ ಅದಿರು ರಫ್ತು ಮಾಡಲಾಗಿತ್ತು. ಇದರಿಂದ 1.43 ಲಕ್ಷ ಕೋಟಿಯಷ್ಟು ನಷ್ಟವಾಗಿತ್ತು.
ರೈಲ್ವೆ ವ್ಯಾಗನ್‌ಗಳಲ್ಲಿ 35 ಕೋಟಿ ಟನ್ ಅದಿರು ರಫ್ತು, 1.43 ಲಕ್ಷ ಕೋಟಿ ನಷ್ಟ!; ಹೆಚ್‌ಕೆಪಿ ವರದಿ ಮೂಲೆಗುಂಪು
ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಹೋಬಳಿಯ ದಿಂಡದಹಳ್ಳಿ ಸರ್ವೆನಂಬರ್ 18ರಲ್ಲಿ ಜೆಎಸ್‌ಡಬ್ಲ್ಯೂ ಬೊಮ್ಮನಹಳ್ಳಿ ಮೈನ್ಸ್ ಅಕ್ರಮವಾಗಿ ಅದಿರು ಸಾಗಾಣಿಕೆ ಮಾಡಿತ್ತು.
ಅರಣ್ಯ ಕಾಯ್ದೆ ಉಲ್ಲಂಘನೆ, ಅಕ್ರಮ ಅದಿರು ಸಾಗಾಣಿಕೆ; ಜಿಂದಾಲ್ ವಿರುದ್ಧ ಕಾಂಗ್ರೆಸ್ ಶಾಸಕ ಆರೋಪ
ಈ ಸಂಬಂಧ ಅರಣ್ಯ ಪಡೆಯ ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2023ರ ಜುಲೈ 11ರಂದು ವರದಿ ಸಲ್ಲಿಸಿರುವುದನ್ನು ಸ್ಮರಿಸಬಹುದು.